ಮೋದಿ ರಾಜ್ಯದಲ್ಲಿ ಪೋಲಿಸ್ ಠಾಣೆಯಲ್ಲಿ ಮಹಿಳಾ ದಿನಾಚರಣೆ!

ಸಂಪುಟ: 
11
ಸಂಚಿಕೆ: 
12
Tuesday, 14 March 2017

ಹೌದು ಈ ವರ್ಷದ ಅಂತರ್ರಾಷ್ಟ್ರೀಯ ಮಹಿಳಾ ದಿನವನ್ನು ಗುಜರಾತಿನ ಸುಮಾರು 3000 ಅಂಗನವಾಡಿ ಕಾರ್ಯಕರ್ತೆಯರು ಅಹಮದಾಬಾದಿನ ಪೋಲಿಸ್ ಠಾಣೆಯಲ್ಲಿ ಆಚರಿಸಬೇಕಾಗಿ ಬಂತು.

ಪ್ರಧಾನ ಮಂತ್ರಿಗಳು ತಮ್ಮ ತವರು ರಾಜ್ಯಕ್ಕೆ ಭೇಟಿಗೆ ಬರುವಾಗ ಬಿಜೆಪಿಯೇತರ ಸಂಘಟನೆಗಳ ಕಾರ್ಯಕರ್ತರನ್ನು ಬಂಧಿಸುವುದು ಈಗ ಗುಜರಾತಿನಲ್ಲಿ ವಾಡಿಕೆಯಾಗಿ ಬಿಟ್ಟಿದೆ. ಮಾರ್ಚ್ 7-8 ರಂದು ಪ್ರಧಾನಿಗಳ ಗುಜರಾತ್ ಭೇಟಿಯ ವೇಳೆಗೂ ಅದೇ ಆಯಿತು. ಇದರಿಂದಾಗಿ ಬಹಳಷ್ಟು ಸಂಘಟನೆಗಳಿಗೆ ಮಹಿಳಾ ದಿನಾಚರಣೆಗೆ ‘ಅನುಮತಿ’ ಸಿಗಲಿಲ್ಲ.

ಗುಜರಾತಿನ ವಿವಿಧ ಜಿಲ್ಲೆಗಳಿಂದ ಮಾರ್ಚ್ 8ರಂದು ರಾಜ್ಯಮಟ್ಟದ ರ್ಯಾಲಿಗೆಂದು ಬರುತ್ತಿದ್ದ ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರನ್ನು ಪೋಲೀಸರು ತಡೆಯಲು ಪ್ರಯತ್ನಿಸಿದ್ದರೂ ಸುಮಾರು 3000 ಮಂದಿ ಅಹಮದಾಬಾದ್ ತಲುಪಿದ್ದರು. ಸಿಐಟಿಯು ರಾಜ್ಯ ಕಾರ್ಯದರ್ಶಿ ಅರುಣ್ ಮೆಹ್ತ, ಜನವಾದಿ ಮಹಿಳಾ ಸಂಘಟನೆಯ ನಳಿನಿ ಬೇನ್ ಮತ್ತು ಅಖಿಲ ಭಾರತ ಅಂಗನವಾಡಿ ಕಾರ್ಯಕರ್ತೆಯರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎ.ಆರ್.ಸಿಂಧುರವರೂ ಸೇರಿದಂತೆ ಎಲ್ಲರನ್ನೂ ಶಾಹಿಬಾಗ್‍ನ ಪೋಲೀಸ್ ಮುಖ್ಯಾಲಯದಲ್ಲಿ ಬಂಧಿಸಿಡಲಾಯಿತು.

“ನಾವು ಅಹಮದಾಬಾದ್ ಪೋಲೀಸ್‍ಠಾಣೆಯಲ್ಲಿ ಅಂತರ್ರಾಷ್ಟ್ರೀಯ ಮಹಿಳಾ ದಿನ ಆಚರಿಸಿದ್ದೇವೆ. ರಶ್ಯಾದ ಮಹಿಳಾ ಕಾರ್ಮಿಕರ ಮುಷ್ಕರದ ಶತಮಾನೋತ್ಸವದಂದು ಐಕ್ಯತೆ ಮತ್ತು ಹೋರಾಟದ ಶಕ್ತಿಯನ್ನು ಸವಿದಿದ್ದೇವೆ” ಎಂದು ಸಿಂಧು ಅವರು ಟ್ವೀಟ್ ಮಾಡಿದ್ದಾರೆ.