ವಿಶ್ವ ಮಹಿಳಾ ದಿನಾಚರಣೆಗಳು

ಸಂಪುಟ: 
11
ಸಂಚಿಕೆ: 
12
Sunday, 12 March 2017

ಬೆಳ್ತಂಗಡಿ : ಮಹಿಳಾ ಐಕ್ಯ ಶಕ್ತಿಯಿಂದ ಸಮಾನತಾ ಸಮಾಜ ಕಟ್ಟಲು ಸಾದ್ಯ. ಮಹಿಳಾ ದೌರ್ಜನ್ಯ, ಅಸಮಾನತೆ, ಶೋಷಣೆಯ ವಿರುದ್ದ ಮಹಿಳೆಯರ ಒಕ್ಕೊರಲ ಸ್ವರ ಮೊಳಗಲು ವಿಶ್ವಮಹಿಳಾ ದಿನಾಚರಣೆ ಪ್ರೇರಣೆ ನೀಡಲಿ ಎಂದು ಸರಕಾರಿ ಪದವಿ ಪೂರ್ವಕಾಲೇಜು ನಡದ ಪ್ರಭಾರ ಪ್ರಾಂಶುಪಾಲರಾದ ಶ್ರೀಮತಿ ಲಿಲ್ಲಿ ಅವರು ಹೇಳಿದರು.

ಅವರು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಜನವಾದಿ ಮಹಿಳಾ ಸಂಘಟನೆ ಬೆಳ್ತಂಗಡಿ ತಾಲೂಕು ಸಮಿತಿ ನೇತೃತ್ವದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ನಡೆದ ಸಭೆಯನ್ನು ಉದ್ಘಾಟಿಸಿ ಮಾತಾಡುತ್ತಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತಾಡಿದ ಜೆ.ಎಂ.ಎಸ್ ದ.ಕ.ಜಿಲ್ಲಾ ಸಮಿತಿ ಅದ್ಯಕ್ಷೆ ಶ್ರೀಮತಿ ಜಯಂತಿ ಬಿ.ಶೆಟ್ಟಿ ಅವರು ಮಾತಾಡುತ್ತಾ ಮಹಿಳಾ ದೌರ್ಜನ್ಯ, ಶೋಷಣೆ ವಿರುದ್ದ ಹೋರಾಡುತ್ತಾ ಬಂದ ಜೆ.ಎಂ.ಎಸ್. ಇಂದು ಮಹಿಳೆಯರ ಪಾಲಿನ ಆಶಾ ಕಿರಣವಾಗಿದೆ. ಮಹಿಳೆಯಾಗಿ ಅನುಭವಿಸುವ ಶೋಷಣೆ ಅನ್ಯಾಯದ ವಿರುದ್ದ ನಮ್ಮ ಐಕ್ಯ ಸ್ವರ ಮೊಳಗಿಸಿ ಸಮತಾ ಸಮಾಜದ ನಿರ್ಮಾಣಕ್ಕೆ ಮುಂದಾಗೋಣ ಎಂದರು. ಮಾಜಿ ಪಂಚಾಯತು ಸದಸ್ಯೆ, ಬೆಳ್ತಂಗಡಿ ತಾಲೂಕು ಬೀಡಿ ಕೆಲಸಗಾರರ ಸಂಘದ ಕಾರ್ಯದರ್ಶಿ ಶ್ರೀಮತಿ ದೇವಕಿ ಮಾತಾಡಿದರು.

ಅದ್ಯಕ್ಷತೆ ವಹಿಸಿ ಮಾತಾಡಿದ ಶ್ರೀಮತಿ ಕಿರಣಪ್ರಭಾ ಅವರು ಮಹಿಳೆಯ ಸಮಾನತಾ ಹೋರಾಟ ನಡೆಸಿದ ವಿಶ್ವ ನಾಯಕಿ ಕ್ಲಾರಾ, ಮಹಿಳಾ ವಿಮೋಚನೆಗಾಗಿ ಹೋರಾಡಿದ ಗೋದಾವರಿ ಪರುಳೇಕರ್, ಅಹಲ್ಯಾ ರಂಗ್ಣೇಕರ್, ಲಕ್ಷ್ಮೀ ಸಹಗಲ್, ವಿಮಲಾ ರಣದೀವೆ, ಮದರ್ ತೆರೆಸಾ, ಮೊದಲಾದವರು ನಮಗೆ ಮುನ್ನಡೆಯುವ ದಾರಿ ತೋರಿಸಿದ್ದಾರೆ. ಈ ಅಸಮಾನತಾ ಸಮಾಜವನ್ನು ಬದಲಾಯಿಸಿ ನವ ಸಮಾಜದ ನಿರ್ಮಾಣಕ್ಕಾಗಿ ಹೊರಾಡಲು ಮಹಿಳಾ ಶಕ್ತಿಯನ್ನು ಬಲಪಡಿಸೋಣ ಎಂದರು.

ಹಾವೇರಿ : ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‍ಎಫ್‍ಐ) ಹಾವೇರಿ ಜಿಲ್ಲಾ ಸಮಿತಿ ಹಾಗೂ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಸಂಯುಕ್ತಾಶ್ರದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ನಡೆಸಿದ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಬಾಗವಹಿಸಿದ್ದ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿರ್ದೇಶಕರಾದ ಶಶಿಕಲಾ ಹುಡೇದರವರು ಮಾತನಾಡಿ, ಮಹಿಳಾ ದಿನಾಚರಣೆ ಎಂದರೆ ಎಲ್ಲ ಹಬ್ಬಗಳಂತೆ ಮಾಡಿ ಮುಗಿಸುವುದಲ್ಲ ಇದು ಮಹಿಳೆಯ ಹಕ್ಕಿಗಾಗಿ, ಬೇಡಿಕೆಗಳ ಈಡೇರಿಕೆಗಾಗಿ ಹೋರಾಡಿದ ದಿನ. ಇದು ಕೇವಲ ಒಂದು ದಿನದ ಕಾರ್ಯಕ್ರಮವಾಗಿರದೆ ಸಮಾಜದಲ್ಲಿ ಮಹಿಳಾ ಮೀಸಲಾತಿಗೆ, ಸಮಾನತೆಗಾಗಿ ಪ್ರತಿ ಮನೆಯಿಂದ ಬದಲಾವಣೆಯ ಕ್ರಾಂತಿ ಆಗಬೇಕು ಎಂದರು. ಸ್ತ್ರೀವಾದ ಎಂದರೆ ಪುರುಷ ವಿರೋಧಿಯಲ್ಲ ಮಹಿಳೆಯರ ಹಕ್ಕುಗಳಿಗಾಗಿ, ಬೇಡಿಕೆಗಳ ಈಡೇರಿಕೆಗಾಗಿ ನಡೆಸುವ ಹೋರಾಟವೇ ಸ್ತ್ರೀವಾದ, ಎಲ್ಲ ಪುರುಷರು ಮಹಿಳೆಯ ಮೇಲೆ ದೌರ್ಜನ್ಯ ನಡೆಸುವುದಿಲ್ಲ, ಮಹಿಳೆಯ ಮೇಲೆ ದೌರ್ಜನ್ಯ ಎಸಗುತ್ತಿರುವ ಪುರುಷ ಪ್ರಧಾನ ಮೌಲ್ಯಗಳನ್ನು ಕಿತ್ತೆಸೆಯಬೇಕಿದೆ. ಎಲ್ಲರಂತೆ ಬದುಕುವ ಸಮಸಮಾಜ ಹಕ್ಕುಗಳು ಸಿಗಲಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ|| ವನೀತಾ ಗಡ ಮಾತನಾಡಿ ಮಹಿಳಾ ದಿನಾಚರಣೆಯ ಇತಿಹಾಸವನ್ನು ಮತ್ತೊಮ್ಮೆ ನಾವೆಲ್ಲರು ನೊಡಬೇಕು, ಸಮಾಜವಾದಿ ಕ್ರಾಂತಿಯಲ್ಲಿ ಭಾಗವಹಿಸಿದ್ದ ಮಹಿಳಾ ಕಾರ್ಮಿಕರು ಮಾರ್ಚ 8ನ್ನು ದುಡಿಯುವ ವರ್ಗದ ಮಹಿಳಾ ದಿನಾಚರಣೆಯನ್ನಾಗಿ ಆಚರಿಸುವ ನಿರ್ಣಯವನ್ನು ಕೈಗೊಂಡರು. ಇಂದು ವಿಶ್ವದಾದ್ಯಂತ ವಿಶ್ವ ಮಹಿಳಾ ದಿನಾಚರಣೆ ನ ಡೆಯುತ್ತಿದೆ. ಅಂದು ಮಹಿಳಾ ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ನಡೆಸಿದ ಹೋರಾಟವನ್ನು ನೆನೆದರು.

ಕಾರ್ಯಕ್ರಮದಲ್ಲಿ ಎಸ್‍ಎಪ್‍ಐ ಜಿಲ್ಲಾ ಅಧ್ಯಕ್ಷರಾದ ಸುಬಾಸ ಎಂ, ಕಾಲೇಜು ವಿದ್ಯಾರ್ಥಿನಿಯರಾದ ಸ್ನೇಹಾ ಶೇಠ್, ಸವಿತಾ ಶಿರೂರ, ಉಪನ್ಯಾಸಕ ಕಾಂತೇಶ ಮಾತನಾಡಿದರು.