ರೈತರ ಆತ್ಮಹತ್ಯೆ ಹಾಗೂ ದಲಿತರ ಕಗ್ಗೊಲೆ ತಡೆಯಿರಿ, ಕಪ್ಪ ಡೈರಿಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಿ : ಸಿಪಿಐ(ಎಂ)

ಸಂಪುಟ: 
11
ಸಂಚಿಕೆ: 
12
Sunday, 12 March 2017

ಸುಪ್ರಿಂಕೋರ್ಟು ಅಥವಾ ಹೈಕೋರ್ಟುಗಳ ಮುಖ್ಯ ನ್ಯಾಯಾಧೀಶರ ಸುಪರ್ಧಿಯಲ್ಲಿ ಈಗಿನ ಕಾಂಗ್ರೆಸ್ ಮತ್ತು ಹಿಂದಿನ ಬಿಜೆಪಿ ಆಡಳಿತದಲ್ಲಿ ಪಡೆದಿರುವರೆನ್ನಲಾದ ಕಿಕ್‍ಬ್ಯಾಕ್ ಹಾಗೂ ಕಪ್ಪಕಾಣಿಕೆಗಳ ಕುರಿತು ಸ್ವತಂತ್ರ ನ್ಯಾಯಾಂಗ ತನಿಖೆ ನಡೆಸಲು ಅಗತ್ಯ ಕ್ರಮವಹಿಸಬೇಕೆಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾಕ್ರ್ಸ್‍ವಾದಿ) ರಾಜ್ಯಸಮಿತಿಯ ಪರವಾಗಿ ರಾಜ್ಯ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ ಅವರು ಮಾರ್ಚ್ 3 ರಂದು ನೀಡಿದ ಹೇಳಿಕೆಯಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರಗಳನ್ನು ಒತ್ತಾಯಿಸಿದೆ.

ಕಾಂಗ್ರೆಸ್ ಹಾಗೂ ಬಿಜೆಪಿಯ ನಾಯಕರು ಈ ಕುರಿತು ಪರಸ್ಪರರ ಮೇಲೆ ಆರೋಪ ಹಾಗೂ ಪ್ರತ್ಯಾರೋಪಗಳ ಮೂಲಕ ರಾಜ್ಯದ ನಾಗರಿಕರು ಪ್ರಜಾಪ್ರಭುತ್ವದ ಮೇಲೆ ವಿಶ್ವಾಸ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣಗೊಂಡಿರುವುದನ್ನು ಸರಿಪಡಿಸಲು ಮತ್ತು ಪ್ರಜೆಗಳಿಗೆ ಸ್ಪಷ್ಟನೆಯನ್ನು ಪಡೆಯಲು ಈ ಕ್ರಮ ಅಗತ್ಯವಾಗಿದೆಯೆಂದು ಸಿಪಿಐ(ಎಂ) ಒತ್ತಾಯಿಸಿದೆ.

ಕರ್ನಾಟಕ ರಾಜ್ಯ ಕಳೆದ 6-7 ವರ್ಷಗಳಿಂದ ಸತತವಾದ ಬರಪೀಡಿತ ಪ್ರದೇಶವಾಗಿದೆ. ವಾಸ್ತವದಲ್ಲಿ ರೈತರ ಆತ್ನಹತ್ಯೆಗಳು ಮತ್ತು ಹಸಿವಿನ ಸಾವುಗಳು ದಿನೇ ದಿನೇ ಬೆಳೆಯುತ್ತಾ ಗ್ರಾಮೀಣ ಪ್ರದೇಶವನ್ನು ಮಸಣವನ್ನಾಗಿಸುತ್ತಿವೆ. ಕಳೆದ ಒಂದು ತಿಂಗಳಲ್ಲಿ 100ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರು, ಕಸುಬುದಾರರೂ ಮತ್ತು ಕೂಲಿಕಾರರು ಉದ್ಯೋಗವಿಲ್ಲದೇ, ಹಳೆಯ ಸಾಲವನ್ನು ತೀರಿಸಲಾಗದೇ, ಹೊಸ ಸಾಲ ಪಡೆಯಲಾಗದೇ ತತ್ತರಿಸಿ ಹೋಗಿದ್ದಾರೆ. ಗ್ರಾಮಗಳು ವಲಸೆಯಿಂದಾಗಿ ಖಾಲಿಯಾಗುತ್ತಿವೆ. ಬರಗಾಲವನ್ನು ಉಪಯೋಗಿಸಿಕೊಂಡು ಗ್ರಾಮೀಣ ಶ್ರೀಮಂತರು ಈ ದುಡಿಯುವ ಜನಗಳ ಆಸ್ತಿ ಪಾಸ್ತಿಗಳನ್ನು ತಮ್ಮ ದುಬಾರಿ ಬಡ್ಡಿಯ ಸಾಲಕ್ಕೆ ಪಡೆಯುವುದು ನಿರಂತರವಾಗಿದೆ. ಸಾರ್ವಜನಿಕ ಬ್ಯಾಂಕುಗಳು ಮತ್ತು ಸಹಕಾರಿ ಸಂಘಗಳು ಕೂಡಾ ರೈತರು ಹಾಗೂ ಕೂಲಿಕಾರರಿಂದ ತಮ್ಮ ಸಾಲಗಳನ್ನು ರಿನ್ಯೂವಲ್ ಮಾಡಿಸಿಕೊಳ್ಳಲು ಗ್ರಾಮೀಣ ಪ್ರದೇಶದ ಶ್ರೀಮಂತರು ಮತ್ತು ಭೂಮಾಲಕರ ಜೊತೆ ಕೈಜೋಡಿಸಿ ಅವರ ಲೂಟಿಗೆ ನೆರವಾಗುತ್ತಿವೆ. ಇದರಿಂದ ಗ್ರಾಮೀಣ ಶ್ರೀಮಂತರ ದೌರ್ಜನ್ಯಗಳು ಮಹಿಳೆಯರು ಹಾಗೂ ದಲಿತರ ಮೆಲೆ ಹೆಚ್ಚುತ್ತಿವೆ. ಕಳೆದ ಒಂದೆರಡು ತಿಂಗಳಲ್ಲಿ ಸುಮಾರು 6 ದಲಿತ ಕೂಲಿಕಾರರ ಕೊಲೆಗಳು ರಾಜ್ಯದಲ್ಲಿ ನಡೆದಿವೆ. ಅದೇ ರೀತಿ ಹಲವಾರು ಮಾರಣಾಂತಿಕ ಹಲ್ಲೆಗಳು ಸಂಭವಿಸಿವೆ.

ಇಂತಹ ಸನ್ನಿವೇಶದಲ್ಲಿ ರೈತರು, ಕಸುಬುದಾರರು ಮತ್ತು ಕೂಲಿಕಾರರ ಕಳೆದ 06-07 ವರ್ಷಗಳ ಬರಗಾಲದಿಂದ ಉಂಟಾದ ಎಲ್ಲ ರೀತಿಯ ಸಾಲಗಳನ್ನು ಕೇಂದ್ರ ಮತ್ತು ರಾಜ್ಯಗಳು ಒಟ್ಟಾಗಿ ಮನ್ನಾ ಮಾಡಿ, ಈ ಜನತೆಯನ್ನು ರಕ್ಷಿಸಲು ಮುಂದಾಗುವಂತೆ ಸಿಪಿಐ(ಎಂ) ನಿರಂತರವಾಗಿ ಒತ್ತಾಯಿಸುತ್ತಲೇ ಬಂದಿದೆ. ಅದೇ ರೀತಿ, ರೈತ ಕೂಲಿಕಾರರ ಸಂಘಗಳು ಒತ್ತಾಯಿಸುತ್ತಿವೆ. ಗ್ರಾಮೀಣ ಪ್ರದೇಶದ ಈ ಅಪರಿಮಿತವಾದ ಈ ಸಂಕಷ್ಟವನ್ನು ಪ್ರಧಾನವಾಗಿ ಗಮನಿಸಿ, ಈ ಎರಡೂ ಆಡಳಿತಾರೂಢ ಹಾಗೂ ವಿರೋಧ ಪಕ್ಷಗಳು ಒಟ್ಟಾಗಿ ಜನತೆಗೆ ನೆರವಾಗುವ ಕೆಲಸದಲ್ಲಿ ತೊಡಗುವ ಬದಲು, ಈ ವಿಚಾರಗಳನ್ನು ಗೌಣವಾಗಿಸಿ, ಚುನಾವಣಾ ರಾಜಕೀಯದಲ್ಲಿ ತೊಡಗಿರುವುದನ್ನು ರಾಜ್ಯದ ಜನತೆ ಅರಿಯಬೇಕು ಮತ್ತು ಅ ಕುರಿತು ಬಲವಾಗಿ ಒತ್ತಾಯಿಸಲು ಕರೆ ನೀಡಿದೆ.

ಆದ್ದರಿಂದ, ಈ ಎರಡೂ ಪಕ್ಷಗಳು, ಮುಖಂಡರು ಹೈಕಮಾಂಡ್‍ಗಳಿಗೆ ನೀಡಲಾದ ಕಪ್ಪಕಾಣಿಕೆಗಳನ್ನು ಅವರವರ ಅವಧಿಯಲ್ಲಿ ಪಡೆಯಲಾದ ಕಿಕ್‍ಬ್ಯಾಕ್‍ಗಳ ಕುರಿತು ತಕ್ಷಣವೇ ನ್ಯಾಯಾಂಗದ ಸುಪರ್ಧಿಯಲ್ಲಿ ತನಿಖೆ ಕೈಗೊಂಡು ರಾಜ್ಯದ ಜನತೆಗೆ ಸತ್ಯಾಸತ್ಯತೆ ತಿಳಿಸಲು ತಕ್ಷಣ ಅಗತ್ಯ ಕ್ರಮಗಳನ್ನು ಕೈಗೊಂಡು ಮುಖ್ಯ ಮಂತ್ರಿಯವರು ಇದಕ್ಕೊಂದು ಅಂತ್ಯ ಹಾಡಬೇಕು ಮತ್ತು ಬರಪೀಡಿತ  ಜನತೆಯ ಸಾಲ ಮತ್ತಿತರೇ ಸಮಸ್ಯೆಗಳ ಪರಿಹಾರಕ್ಕೆ ಕ್ರಮಕೈಗೊಂಡು ಅವರ ರಕ್ಷಣೆಗೆ ಮುಂದಾಗಲೂ ಸಿಪಿಐ(ಎಂ) ರಾಜ್ಯ ಸಮಿತಿ ಒತ್ತಾಯಿಸಿದೆ. 

ಕೆಪಿಎಸ್‍ಸಿ ನೇಮಕಾತಿ ಆದೇಶ ವಾಪಾಸ್ಸು ಪಡೆಯಲು ಒತ್ತಾಯ :

ರಾಜ್ಯ ಸರಕಾರ ನಿನ್ನೆ ಕೆ.ಪಿ.ಎಸ್.ಸಿ ನೇಮಕಾತಿಯಂತೆ 362 ಜನರಿಗೂ ಆದೇಶ ಹೊರಡಿಸಿರುವದನ್ನು ಸಿಪಿಐ(ಎಂ) ರಾಜ್ಯ ಸಮಿತಿ ಆಕ್ಷೆಪಿಸಿದೆ. ಈ ನೇಮಕಾತಿಯಲ್ಲಿ ಅಕ್ರಮ ನಡೆದಿರುವುದನ್ನು ಇದೇ ಸರಕಾರ ಸಿಐಡಿ ಮೂಲಕ ತನಿಖೆ ನಡೆಸಿ ಅವರಲ್ಲಿ ಸುಮಾರು 46 ಮಂದಿ ಕಳಂಕಿತರನ್ನು ಗುರುತಿಸಿತ್ತು. ಈಗ ಈ ಸರಕಾರ ಈ ಕಳಂಕಿತರ ಮೇಲೆ ಅಗತ್ಯ ಕಾನೂನಿನ ಕ್ರಮವಹಿಸುವುದರ ಬದಲು ಅವರನ್ನು ಸೇರಿಸಿ ನೇಮಕಾತಿ ಆದೇಶ ನೀಡಿರುವದನ್ನು ಸಿಪಿಐ(ಎಂ) ಬಲವಾಗಿ ಖಂಡಿಸುತ್ತದೆ. ಈ ರೀತಿ ಆದಲ್ಲಿ ಪ್ರಾಮಾಣಿಕ ಅರ್ಹ ಉದ್ಯೋಗಾರ್ಥಿಗಳಿಗೆ ಅನ್ಯಾಯವಾಗುತ್ತದೆ. ಆದ್ದರಿಂದ ಇಂತಹ ಅಕ್ರಮವಾಗಿ ನೇಮಕಾತಿ ಪಡೆದವರ ನೇಮಕಾತಿ ಆದೇಶವನ್ನು ರದ್ದು ಗೊಳಿಸಿ ಅವರ ಮೇಲೆ ಅಗತ್ಯ ಕಾನೂನಿನ ಕ್ರಮವಹಿಸಲು ಒತ್ತಾಯಿಸಿದೆ.

ಕಾಂ. ಪಿಣರಾಯಿ ವಿಜಯನ್ ತಲೆದಂಡದ ಆರ್‍ಎಸ್‍ಎಸ್ ಕರೆಗೆ ಸಿಪಿಐ(ಎಂ) ಖಂಡನೆ.

ಸಿಪಿಐ(ಎಂ) ಪಕ್ಷದ ಪಾಲಿಟ್ ಬ್ಯುರೋ ಸದಸ್ಯರು ಮತ್ತು ಕೇರಳದ ಜನಪರ ಮುಖ್ಯಮಂತ್ರಿಗಳು ಆಗಿರುವ ಕಾಂ. ಪಿಣರಾಯಿ ವಿಜಯನ್‍ರವರ ತಲೆದಂಡಕ್ಕೆ ಒಂದುಕೋಟಿ ರೂಪಾಯಿಗಳ ಇನಾಮು ಘೋಷಣೆ ಮಾಡಿ ಅವರ ಕೊಲೆಗೆ ಪ್ರಚೋದನೆ ಮಾಡಿದ ಆರ್‍ಎಸ್‍ಎಸ್ ಉಜ್ಜೈನಿ ಮಹಾನಗರ ಪ್ರಮುಖ ಕುಂದನ್ ಚಂದ್ರವತ್ ಅವರನ್ನು ತಕ್ಷಣವೇ ಬಂಧಿಸಿ, ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಿ ಕಾನೂನಿನ ಕ್ರಮವಹಿಸಬೇಕೆಂದು, ಕೇಂದ್ರ ಹಾಗೂ ಅಲ್ಲಿನ ರಾಜ್ಯ ಸರಕಾರವನ್ನು ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಒತ್ತಾಯಿಸಿದೆ. ಇದು ಸಿಪಿಐ(ಎಂ) ಪಕ್ಷ ದೇಶದಲ್ಲಿ ಸೌಹಾರ್ಧ ಭಾರತಕ್ಕಾಗಿ ನಡೆಸಿರುವ ಹೋರಾಟದ ಮಹತ್ವವನ್ನು ಎತ್ತಿ ತೋರಿಸಿದರೇ, ಮತಾಂಧರ ಹೇಡಿತನವನ್ನು ಬಯಲಿಗೆಳೆದಿದೆಯೆಂದು ಕುಂದನ್ ಚಂದ್ರವತ್ ಅವರ ಹೇಡಿ ಕೊಲೆಗಡುಕತನದ ನಿಲುಮೆಯನ್ನು ಬಲವಾಗಿ ಖಂಡಿಸಿದೆ. ಆರ್ ಎಸ್ ಎಸ್ ದೇಶ ಭಕ್ತ ಶಿಸ್ತಿನ ಸಿಪಾಯಿಯೆಂದು ತನ್ನನ್ನು ತಾನ ಕರೆದುಕೊಳ್ಳುವ ಭಾರತದ ಪ್ರಧಾನ ಮಂತ್ರಿ ತನ್ನದೇ ಒಬ್ಬ ಆರ್ ಎಸ್ ಎಸ್ ಸಂಘದ ಮುಖಂಡನೊಬ್ಬ ಕೇರಳ ರಾಜ್ಯದ ಮುಖ್ಯ ಮಂತ್ರಿಯನ್ನು ಕೊಲೆ ಮಾಡಲು ಪ್ರಚೋಧನೆ ಮಾಡಿರುವುದನ್ನು ಖಂಡಿಸಿ ಇದುವರೆಗೆ ಕ್ರಮವಹಿಸಿದ ಪ್ರಧಾನ ಮಂತ್ರಿಗಳ ಪ್ರಜಾಪ್ರಭುತ್ವ ವಿರೋಧಿ ನೀತಿಯನ್ನು ಸಿಪಿಐ(ಎಂ) ಖಂಡಿಸಿದೆ. ಈ ರೀತಿಯ ಪ್ರಚೋದನೆಯ ಮೂಲಕ ಜನತೆಯ ಮತ್ತು ನಾಯಕರ ಕೊಲೆಗಡುಕರಾರೆಂಬುದು ದೇಶದ ಮುಂದೆ ಬಯಲಾದಂತಾಗಿದೆಯೆಂದು ಸಿಪಿಐ(ಎಂ) ಹೇಳಿದೆ.