ನೋಟು ನಿಷೇಧದಿಂದ ಗ್ರಾಮೀಣ ಆರ್ಥಿಕತೆ ನಿರ್ನಾಮಃ ವಿ.ಶ್ರೀಧರ್

ಸಂಪುಟ: 
11
ಸಂಚಿಕೆ: 
11
Sunday, 5 March 2017

ಕೇಂದ್ರ ಸರಕಾರದ ನೋಟು ನಿಷೇಧ ಕ್ರಮವು ದೇಶವು ಗ್ರಾಮೀಣ ಭಾಗದ ಆರ್ಥಿಕತೆಯನ್ನು ನಿರ್ನಾಮ ಮಾಡುವ ಮೂಲಕ ಬಂಡವಾಳಶಾಹಿಗಳು ತಮ್ಮ ಪ್ರಾಬಲ್ಯವನ್ನು ಮತ್ತಷ್ಟು ವಿಸ್ತರಿಸಿಕೊಳ್ಳಲು ಸಾಧ್ಯಮಾಡಿ ಕೊಟ್ಟಿದೆ ಎಂದು ಫ್ರೆಂಟ್ ಲೈನ್ ಪತ್ರಿಕೆಯ ಹಿರಿಯ ಉಪ ಸಂಪಾದಕ ವಿ. ಶ್ರೀಧರ್ ಅಭಿಪ್ರಾಯಿಸಿದ್ದಾರೆ.

28 ಫೆಬ್ರವರಿ 2017 ರಂದು ನಗರದ ಎಸ್‍ಸಿಎಂ ಸಭಾಂಗಣದಲ್ಲಿ ಅಖಿಲ ಭಾರತ ಕೃಷಿ ಕೂಲಿ ಕಾರ್ಮಿಕರ ಸಂಘಟನೆ ಆಯೋಜಿಸಿದ್ದ `ಬರ ಬಾಧಿತ ಬಡವರಿಗೆ ನೋಟು ನಿಷೇಧದ ಬರೆ' ವಿಷಯ ಕುರಿತು ಮಾತನಾಡಿದ ಅವರು, ಬಡವರಲ್ಲಿದ್ದ ಚೂರು ಪಾರು ಹಣಕಾಸನ್ನು ಕಿತ್ತು ಬಂಡವಾಳಶಾಹಿಗಳ ಕೈಗಿಡುವ ದುರುದ್ದೇಶದಿಂದ ಕೇಂದ್ರ ಸರಕಾರ 500 ಹಾಗೂ 1000 ರೂ. ಮುಖ ಬೆಲೆಯ ನೋಟುಗಳನ್ನು ನಿಷೇಧಿಸಿತು ಎಂದು ಆಪಾದಿಸಿದರು.

ಸಾವಿರಾರು ವರ್ಷಗಳಿಂದಲೂ ಗ್ರಾಮೀಣ ಭಾಗದ ಜನತೆ ತಮ್ಮದೇ ರೀತಿಯಲ್ಲಿ ಆರ್ಥಿಕ ವ್ಯವಸ್ಥೆಯನ್ನು ರೂಢಿಸಿಕೊಂಡಿದ್ದರು ತಮ್ಮ ದುಡಿಮೆಯ ಸ್ವಲ್ಪ ಭಾಗವನ್ನು ಭವಿಷ್ಯದ ಕಷ್ಟಗಳಿಗಾಗಿ ಕೂಡಿಡುವ ಮೂಲಕ ಸ್ವಾಭಿಮಾನದ ಬದುಕನ್ನು ನಡೆಸುತ್ತಿದ್ದರು. ಆದರೆ, ಕೇಂದ್ರ ಸರಕಾರ ದಿಢೀರನೆ ನೋಟ ನಿಷೇಧವನ್ನು ಜಾರಿ ಮಾಡುವ ಮೂಲಕ ಗ್ರಾಮೀಣ ಜನತೆ ಕೂಡಿಟ್ಟಿದ್ದ ಹಣವನ್ನು ಕೂಡಲೇ ಬ್ಯಾಂಕ್‍ಗೆ ಹಾಕಬೇಕು. ಇಲ್ಲದಿದ್ದರೆ ಆ ಹಣವು ಅಮಾನ್ಯಗೊಳ್ಳತ್ತದೆ ಎಂದು ಆದೇಶಿಸಿತು. ಇಂತಹ ಆದೇಶದ ಮೂಲಕ ಕೇಂದ್ರ ಸರಕಾರ ತನ್ನ ಬಡವರ ವಿರೋಧಿ ನೀತಿಗಳನ್ನು ಬಹಿರಂಗವಾಗಿ ಪ್ರದರ್ಶಿಸಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ದೇಶದಲ್ಲಿ ಶೇ.85 ಕ್ಕಿಂತ ಹೆಚ್ಚು ಚಲಾವಣೆಯಲ್ಲಿದ್ದ 500 ಹಾಗೂ 1000ರೂ. ಮುಖ ಬೆಲೆಯ ನೋಟಗಳನ್ನು ಏಕಾಏಕಿ ನಿಷೇಧಿಸಿತು. ಇದರಿಂದ ದೇಶದ ಕೆಲವು ಉದ್ಯಮಿಗಳನ್ನು ಹೊರತು ಪಡಿಸಿದರೆ ಕಾರ್ಮಿಕರು, ರೈತರು, ಕೂಲಿ ಕಾರ್ಮಿಕರು ದಿನ ನಿತ್ಯದ ಬದುಕು ಯಾತನಮಯವಾಗಿದೆ. ಕೂಲಿ ಕಾರ್ಮಿಕರು ತಮ್ಮ ಕೆಲಸಗಳನ್ನು ಕಳೆದುಕೊಂಡರೆ, ರೈತರು ಲಕ್ಷಾಂತರ ರೂ.ಸಾಲ ಮಾಡಿ ಬೆಳೆದ ಬೆಳೆಗಳಿಗೆ ನಯಾಪೈಸೆಯ ಬೆಲೆ ಇಲ್ಲವಾಯಿತು. ಇಂತಹ ಸಂದರ್ಭಗಳನ್ನು ನೋಡಿಯೂ ಕೇಂದ್ರ ಸರಕಾರ ನೋಟು ನಿಷೇಧದ ತನ್ನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವ ಕೀಳುಮಟ್ಟಕ್ಕಿಳಿಯಿತು ಎಂದು ಅವರು ಆಶ್ಚರ್ಯವ್ಯಕ್ತಪಡಿಸಿದರು.

ಕೇಂದ್ರ ಸರಕಾರ ದೇಶದ ಇಡೀ ಆರ್ಥಿಕ ವ್ಯವಸ್ಥೆಯನ್ನು ಡಿಜಿಟಲೀಕರಣ ಮಾಡಲು ಹೊರಟಿದೆ. ದೇಶದ ಬಹುತೇಕ ಭಾಗಗಳಲ್ಲಿ ಬ್ಯಾಂಕ್‍ಗಳಿಲ್ಲ, ಬ್ಯಾಂಕ್ ಅಕೌಂಟ್ ಇಲ್ಲ ಹಾಗೂ ಡಿಜಿಟಲೀಕರಣಕ್ಕೆ ಹೊಂದಿಕೊಳ್ಳುವಂತ ಸಾಮಾಜಿಕ, ಆರ್ಥಿಕ ಸ್ಥಿತಿ ದೇಶದ ಜನಕ್ಕಿಲ್ಲ. ಇದ್ಯಾವುದರ ಬಗೆಗೂ ಕಿಂಚಿತ್ತೂ ಯೋಚಿಸದೆ ಏಕಾಏಕಿ ನೋಟುಗಳನ್ನು ನಿಷೇಧಿಸಲು ಹೊರಟಿರುವುದು ಮೂರ್ಖತನದ ಪರಮಾವಧಿ ಎಂದು ಅವರು ಲೇವಡಿ ಮಾಡಿದರು.

ಅಖಿಲ ಭಾರತ ಕೃಷಿ ಕೂಲಿ ಕಾರ್ಮಿಕರ ಸಂಘಟನೆಯ ಕಾರ್ಯರ್ದರ್ಶಿ ವಿಜಯ ರಾಘವನ್ ಮಾತನಾಡಿ, ರೈತರು ತಾವು ಬೆಳೆದ ಬೆಳಗಳಿಗೆ ಸೂಕ್ತ ಬೆಲೆಯಿಲ್ಲದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ದೇಶದ ಹಲವು ಪ್ರದೇಶಗಳು ಬರಗಾಲಕ್ಕೆ ತುತ್ತಾಗಿ ತುತ್ತು ಅನ್ನಕ್ಕೂ ಹಾಹಾಕಾರ ಎದ್ದಿದೆ. ಇಂತಹ ಹೊತ್ತಲ್ಲಿ ಶೇ.85 ರಷ್ಟು ಚಲಾವಣೆಯಲ್ಲಿದ್ದದ ನೋಟುಗಳನ್ನು ನಿಷೇಧಿಸುವ ಮೂಲಕ ಕೇಂದ್ರ ಸರಕಾರ ಅತ್ಯಂತ ಕ್ರೂರ ನೀತಿಯನ್ನು ಅನುಸರಿಸುತ್ತದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಅಖಿಲ ಭಾರತ ಕೃಷಿ ಕೂಲಿ ಕಾರ್ಮಿಕರ ಸಂಘಟನೆಯ ರಾಜ್ಯಾ ಧ್ಯಕ್ಷ ನಿತ್ಯಾನಂದಸ್ವಾಮಿ, ಸಿಪಿಐ(ಎಂ) ಮುಖಂಡ ಉಮೇಶ್ ಜಿ.ಎನ್.ನಾಗರಾಜ್ ಮತ್ತಿತರರಿದ್ದರು.