ಸಹೋದರ ಮುರುಳಿ ಕುಟುಂಬಕ್ಕೆ ನ್ಯಾಯ ಸಿಗಲೆಬೇಕು

ಸಂಪುಟ: 
11
ಸಂಚಿಕೆ: 
11
Sunday, 5 March 2017

ಗುಡಿ ಬಂಡೆಯಲ್ಲಿ ಹತ್ಯೆಯಾದ ದಲಿತ ವಿದ್ಯಾರ್ಥಿ ಮುರುಳಿ ಮನೆಗೆ ಭೇಟಿ ನೀಡಿದ ಕರ್ನಾಟಕ ರಾಜ್ಯ ದಲಿತ ಹಕ್ಕುಗಳ ಸಮಿತಿ #DHS ನಿಯೋಗ. ರಾಜ್ಯ ಸಂಚಾಲಕರಾದ ಗೋಪಾಲಕೃಷ್ಣ ಹರಳಹಳ್ಳಿ, ಕಾರ್ಮಿಕ ಮುಖಂಡರಾದ ಮುನಿವೆಂಕಟಪ್ಪ, ಜಿಲ್ಲಾ ಸಂಚಾಲಕರಾದ ನಾಗರಾಜ ಮತ್ತು ತಂಡದವರು ಭೇಟಿ ಮಾಡಿ ಪಾಲಕರಿಗೆ ಸಾಂತ್ವಾನ ಹೇಳಿದರು

ಮಸಣ ಕಾರ್ಮಿಕರ ಪ್ಯಾಕೇಜ್ ಘೋಷಿಸಲು ಒತ್ತಾಯ

2017-18ರ ರಾಜ್ಯ ಬಜೆಟ್‍ನಲ್ಲಿ, ಮಸಣ ಕಾರ್ಮಿಕರನ್ನು ಸ್ಥಳೀಯ ಸಂಸ್ಥೆಗಳ ನೌಕರರನ್ನಾಗಿಸಲು ಹಾಗೂ ಮತ್ತಿತರೇ ನೆರವಿಗಾಗಿ ಮಸಣ ಕಾರ್ಮಿಕರ ಪ್ಯಾಕೇಜ್ ಘೋಷಿಸಲು ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಸಂಘದ ಬಳ್ಳಾರಿ ಜಿಲ್ಲಾ ಘಟಕ, ಬಳ್ಳಾರಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಒತ್ತಾಯಿಸಿದೆ.

ಸಾವಿರಾರು ವರ್ಷಗಳಿಂದ ಪಾರಂಪರಿಕವಾಗಿ ಸಾರ್ವಜನಿಕ ಮಸಣಗಳಲ್ಲಿ ಕೆಲಸದಲ್ಲಿ ತೊಡಗಿಸಿಕೊಂಡ ಬಹುತೇಕ ದಲಿತ ಜನವಿಭಾಗಕ್ಕೆ ಸೇರಿದ ರಾಜ್ಯದ ಸುಮಾರು 25 ಸಾವಿರಕ್ಕೂ ಅಧಿಕ ಮಸಣಗಳಲ್ಲಿ ಕಾರ್ಯ ನಿರ್ವಹಿಸುವ ಕುಟುಂಬಗಳ ಸಂಖ್ಯೆ ಸುಮಾರು 10-15 ಲಕ್ಷ ಸಂಖ್ಯೆಯಲ್ಲಿದೆ. ಅವರ ಪ್ರತಿದಿನದ ತಲಾ ಆಧಾಯ ಬಹುತೇಕ 10ರೂಗಳಿಗಿಂತಲೂ ಕಡಿಮೆಯಾಗಿದೆ. ಎಲ್ಲರಂತೆ ಜಾತಿ ದೌರ್ಜನ್ಯಕ್ಕೆ ಮತ್ತು ಅಸ್ಪøಶ್ಯಾಚರಣೆಗೆ ತುತ್ತಾಗಿದ್ದಾರೆ.  ಅವರ ಸಂಕಷ್ಟಗಳನ್ನು ಪರಿಹರಿಸಲು ಕನಿಷ್ಠ ಊರಿಗೊಬ್ಬರಂತೆ ಗ್ರಾಮ ಪಂಚಾಯ್ತಿ ಅಥವಾ ನಗರ ಮತ್ತು ಪಟ್ಟಣಗಳ ಸ್ಥಳೀಯ ಸಂಸ್ಥೆಗಳ ನೌಕರರೆಂದು ನೇಮಿಸಿಕೊಳ್ಳಲು ಮತ್ತು ಕುಣಿ ಅಗೆಯುವ ಕೆಲಸವನ್ನು ಉದ್ಯೋಗ ಖಾತ್ರಿ ಕೆಲಸವೆಂದು ಪರಿಗಣಿಸಿ ವೇತನ ನೀಡಲು ಮತ್ತು ಇತರೇ ಹಕ್ಕೊತ್ತಾಯಗಳನ್ನು 2017-18ರ ಬಜೆಟ್‍ನಲ್ಲಿ ಪರಿಹರಿಸಬೇಕೆಂದು ಸಂಘ ಒತ್ತಾಯಿಸಿದೆ.

ಮಸಣ ಕಾರ್ಮಿಕರಿಗೆ ಮಸಣದಲ್ಲಿ ಕಾರ್ಯನಿರ್ವಹಿಸಲು ಅಗತ್ಯ ಸುರಕ್ಷತಾ ಕ್ರಮಗಳನ್ನು ಮತ್ತು ಅಗತ್ಯ ಪರಿಕರಗಳನ್ನು ಸ್ಥಳೀಯ ಸಂಸ್ಥೆಗಳ ಮೂಲಕ ಒದಗಿಸಬೇಕು. ಎಲ್ಲಾ ಮಸಣಗಳನ್ನು ಜನಸ್ನೇಹಿ ನಂದನವನಗಳನ್ನಾಗಿಸಲು ಸೂಕ್ತ ಯೋಜನೆಯನ್ನು ರೂಪಿಸಿ ಜಾರಿಗೊಳಿಸಬೇಕು. ಮಸಣ ಕಾರ್ಮಿಕರಿಗೆ ಭವಿಷ್ಯನಿಧಿ, ಜೀವವಿಮೆ, ಉಚಿತ ಆರೋಗ್ಯ ಸೇವೆಗೆ ಆರೋಗ್ಯ ಕಾರ್ಡ, ಪಿಂಚಣಿ ಮುಂತಾದ ವ್ಯವಸ್ಥೆಗಳನ್ನು ಜಾರಿಗೊಳಿಸಬೇಕೆಂದೂ ಸಂಘ ಒತ್ತಾಯಿಸಿದೆ.

ಮಾರ್ಚ್ 6 ರಂದು ಪಂಚಾಯತ್ ನೌಕರರ ಪ್ರತಿಭಟನೆ

ಗ್ರಾಮ ಪಂಚಾಯಿತಿ ನೌಕರರಿಗೆ 6 ತಿಂಗಳು, ವರ್ಷಗಟ್ಟಲೇ ಸಂಬಳ ಸಿಗದೇ ಇರುವುದರ ಬಗ್ಗೆ ಹಾಗೂ ಸರ್ಕಾರ ನಿಗದಿಪಡಿಸಿರುವ ಕನಿಷ್ಠ ವೇತನ ಜಾರಿಯಾಗದೇ ಇರುವುದರ ಬಗ್ಗೆ ಗ್ರಾಮ ಪಂಚಾಯತ ನೌಕರರ ಸಂಘ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಒತ್ತಾಯಿಸಿದೆ.

ರಾಜ್ಯದ 6022 ಗ್ರಾಮ ಪಂಚಾಯಿತಿಯಲ್ಲಿ ಸುಮಾರು 50 ಸಾವಿರ ಜನ ನೌಕರರು ದುಡಿಯುತ್ತಿದ್ದಾರೆ, 12000 ಜನ ಕಸ ಗುಡಿಸುವವರು, 26000 ಜನ ಪಂಪ್ ಆಪರೇಟರ್‍ಗಳು, 6000 ಜನ ಬಿಲ್ ಕಲೆಕ್ಟರ್‍ಗಳು, 6000 ಜನ ಜವಾನರು, 5000 ಕಂಪ್ಯೂಟರ್ ಆಪರೇಟರ್‍ಗಳು ಕೆಲಸ ನಿರ್ವಹಿಸುತ್ತಿದ್ದಾರೆ. ಗ್ರಾಮ ಪಂಚಾಯಿತಿ ಸಿಬ್ಬಂದಿಯಲ್ಲಿ ಕಳೆದ 1 ವರ್ಷದಿಂದ ಸಂಬಳ ಸಿಕ್ಕಿಲ್ಲ. ದಿನಾಂಕ: 04.08.2016ರಂದು ಕಾರ್ಮಿಕ ಇಲಾಖೆ ಕನಿಷ್ಠ ವೇತನ ನಿಗದಿಪಡಿಸಿ ಆದೇಶ ಹೊರಡಿಸಿದೆ. ಆದರೆ ಕನಿಷ್ಠ ವೇತನವನ್ನು ಜಾರಿ ಮಾಡಲು ಸಾಧ್ಯವಾಗುತ್ತಿಲ್ಲ.

3ನೇ ಹಣಕಾಸು ಆಯೋಗವು ಕನಿಷ್ಠ ವೇತನಕ್ಕೆ ಬೇಕಾಗುವ ಹಣವನ್ನು ಸರ್ಕಾರವೇ ಭರಿಸಬೇಕೆಂದು ಶಿಫಾರಸ್ಸು ಮಾಡಿದೆ. ಈಗಾಗಲೆ 2ನೇ ಹಣಕಾಸು ಆಯೋಗ ಶಿಫಾರಸ್ಸಿನಂತೆ ನಗರಾಭಿವೃದ್ಧಿ ಇಲಾಖೆಯಲ್ಲಿ ವೇತನಕ್ಕೆ ಬೇಕಾಗುವ ಅನುಧಾನವನ್ನು ಸರ್ಕಾರವೇ ಭರಿಸುತ್ತಿದೆ.

ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ವೇತನಕ್ಕೆ ಬೇಕಾಗುವ ಅನುಧಾನ ಪೂರ್ತಿಯಾಗಿ ನೀಡಲಾಗುತ್ತಿಲ್ಲ. ಇತ್ತೀಚೆಗೆ ಪುರಸಭೆ ಪಟ್ಟಣ ಪಂಚಾಯಿತಿಗಳಿರುವ, ಬಿಬಿಎಂಪಿ ಮತ್ತು ಮಹಾನಗರ ಪಾಲಿಕೆಗಳಲ್ಲಿ ಸಿಬ್ಬಂದಿಗಳಿಗೆ ಶೇಕಡಾ 75 ರಷ್ಟು ವೇತನವನ್ನು ಸರ್ಕಾರವೇ ನೀಡಲು ತಮ್ಮ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ತೀರ್ಮಾನಿಸಲಾಗಿದೆ.

ನಗರ ಸ್ಥಳೀಯ ಸಂಸ್ಥೆಗಳಿಗಿಂತಲು ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಆದಾಯ ಕಡಿಮೆ ಇದ್ದು ಹಣಕಾಸು ಬಿಕ್ಕಟ್ಟು ಎದುರಿಸುತ್ತಿರುವಾಗ, ಗ್ರಾಮೀಣ ಸ್ಥಳೀಯ ಸಂಸ್ಥೆಗಳು 3ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ಹಣ ಬಿಡುಗಡೆ ಮಾಡಬೇಕೆಂದು ಮುಖ್ಯಮಂತ್ರಿಗಳನ್ನು ಕೋರಿದೆ. ಕಸ ಗುಡಿಸುವವರು, ನೀರು ಬಿಡುವವರು, ಜವಾನರು ತುಳಿತಕ್ಕೊಳಪಟ್ಟ ಜನಸಮುದಾಯವಾಗಿದೆ. ಉತ್ತಮ ಬದುಕು ನಿರ್ವಹಿಸಲು ವೇತನ ಭದ್ರತೆ ನೀಡಬೇಕೆಂದು ಕೋರಲಾಗಿದೆ.

ಮಾರ್ಚ್ ತಿಂಗಳಲ್ಲಿ ರಾಜ್ಯದ ಬಜೆಟ್ ಮಂಡಿಸಲಾಗುತ್ತಿದೆ. ಗ್ರಾಮ ಪಂಚಾಯತ್ ನೌಕರರ ವೇತನಕ್ಕಾಗಿ ಪ್ರತ್ಯೇಕ ಅನುದಾನ ಬಿಡುಗಡೆ ಮಾಡಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಲು ಮಾರ್ಚ್ 6 ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.