ಮತ್ತೊಂದು ಮಹಿಳಾ-ಪರ ಚಿತ್ರಕ್ಕೆ ಕತ್ತರಿ: ಸೆನ್ಸಾರ್ ಮಂಡಳಿ ಸಂಘ ಪರಿವಾರದ ಸಿದ್ಧಾಂತದ ಜಾರಿಯ ಸಂಸ್ಥೆಯಾಗಬಾರದು- ಎಐಡಿಡಬ್ಲ್ಯುಎ ಖಂಡನೆ

ಸಂಪುಟ: 
11
ಸಂಚಿಕೆ: 
11
Sunday, 5 March 2017

ಭಾರತದಲ್ಲಿ ಇಂದು ಮಹಿಳೆಯರು ಎದುರಿಸು ತ್ತಿರುವ ಸಮಸ್ಯೆಗಳು ಮತ್ತು ಅದರ ಅಡೆ-ತಡೆಗಳನ್ನು ಮೀರಿ ನಿಲ್ಲಲು ಮಹಿಳೆಯರು ನಡೆಸುತ್ತಿರುವ ಹೋರಾಟಗಳನ್ನು ಚಿತ್ರಿಸಿರುವ ಅಲಂಕೃತಾ ಶ್ರೀವಾಸ್ತವ ಮತ್ತು ಪ್ರಕಾಶ ಝಾ ಅವರ ಚಲನಚಿತ್ರ ‘ಲಿಪ್‍ಸ್ಟಿಕ್ ಅಂಡರ್ ಮೈ ಬುರ್ಖ’ಕ್ಕೆ ಪ್ರಮಾಣ ಪತ್ರ ನೀಡಲು ಸೆನ್ಸಾರ್ ಮಂಡಳಿ ನಿರಾಕರಿಸಿದೆ. ಇದನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘ (ಎಐಡಿಡಬ್ಲ್ಯುಎ) ಬಲವಾಗಿ ಖಂಡಿಸಿದೆ.

ಈ ಚಿತ್ರ ಮುಂಬೈ ಚಿತ್ರೋತ್ಸವದಲ್ಲಿ ಮಹಿಳಾ ಸಮಾನತೆಯ ಅತ್ಯುತ್ತಮ ಚಿತ್ರ ಎಂಬ ಪ್ರಶಸ್ತಿಯನ್ನು ಪಡೆದಿದೆ ಮತ್ತು ಟೋಕಿಯಿ ಚಿತ್ರೋತ್ಸವದಲ್ಲಿ ‘ಸ್ಪಿರಿಟ್ ಆಫ್ ಏಶ್ಯ’ ಪ್ರಶಸ್ತಿಯನ್ನು ಪಡೆದಿದೆ. ಸೆನ್ಸಾರ್ ಮಂಡಳಿಯ ಈ ನಿರ್ಧಾರಕ್ಕೆ ಭಾರತ ಸರಕಾರದ ಬೆಂಬಲವಿದೆ ಎಂಬುದು ಸ್ವಯಂವೇದ್ಯ. ಈ ಮೂಲಕ ಅಭಿಪ್ರಾಯ ಬಹುತ್ವದ ಬಗ್ಗೆ ಮತ್ತು ಸಾಮಾಜಿಕ ವಾಸ್ತವತೆಗಳ ಸೃಜನಾತ್ಮಕ ಚಿತ್ರಣಕ್ಕೆ ತನ್ನ ಅಸಹಿಷ್ಣುತೆಯನ್ನು ಅದು ಮತ್ತೊಮ್ಮೆ ಪ್ರದರ್ಶಿಸಿದೆ ಎಂದು ಎಐಡಿಡಬ್ಲ್ಯುಎ ಹೇಳಿದೆ.

ಅದು ‘ಮಹಿಳೋನ್ಮುಖ’ವಾಗಿದೆ(!) ಮತ್ತು ಅದರಲ್ಲಿ ಬೈಗುಳ ಪದಗಳಿವೆ ಎಂಬುದು ಸೆನ್ಸಾರ್ ಮಂಡಳಿಯ ಆಕ್ಷೇಪ ಎಂದು ವರದಿಯಾಗಿದೆ. ಕೇಂದ್ರೀಯ ಸೆನ್ಸಾರ್ ಮಂಡಳಿಯ ಅಧ್ಯಕ್ಷ ನಿಹಲಾನಿ ಪ್ರಮಾಣ ಪತ್ರ ನಿರಾಕರಿಸುವುದಕ್ಕೆ ಈ ಎರಡು ಮತ್ತು ಇತರ ಕಾರಣಗಳನ್ನು ಕೊಟ್ಟಿರುವುದು ಒಂದು ಪಿತೃಪ್ರಧಾನ ಮತ್ತು ಸಂಪ್ರದಾಯಶರಣ ಮನೋಭಾವವನ್ನು ಪ್ರಕಟಪಡಿಸುತ್ತದೆ. ಈ ಮನೋಭಾವ ಮಹಿಳೆಯರು ಸಿದ್ಧಮಾದರಿಗಳನ್ನು ಮುರಿಯುವುದನ್ನು ಮತ್ತು ಹಳೆಯ ವ್ಯವಸ್ಥೆಗೆ ಸವಾಲು ಹಾಕುವದನ್ನು ಸ್ವೀಕರಿಸುವದಿಲ್ಲ. ಒಂದು ಪ್ರಜಾಸತ್ತಾತ್ಮಕ ಮತ್ತು ಲಿಂಗನ್ಯಾಯದ ಸಮಾಜದಲ್ಲಿ ಸಾಮಾಜಿಕ ರೂಢಿಗಳನ್ನು ಉಲ್ಲಂಘಿಸುವ ಧೈರ್ಯವ್ವನ್ನು ತೋರುವ ಮತ್ತು ಸಮಾನತೆಯ ಹುಡುಕಾಟದಲ್ಲಿ ತಮ್ಮ ಆಯ್ಕೆಯನ್ನು ಚಲಾಯಿಸುವ ಮಹಿಳೆಯರ ಚಿತ್ರಣವನ್ನು ವಾಸ್ತವವಾಗಿ ಸ್ವಾಗತಿಸಬೇಕು. ಇದರ ಬದಲಾಗಿ ಸೆನ್ಸಾರ್ ಮಂಡಳಿ ಅದಕ್ಕೆ ಸಾರ್ವಜನಿಕ ವೀಕ್ಷಣೆಗೆ ಅರ್ಹವೆನ್ನುವ ಪ್ರಮಾಣ ಪತ್ರವನ್ನು ನಿರಾಕರಿಸಿರುವುದು ಸಂಘ ಪರಿವಾರದ ತತ್ವವನ್ನು ಬಿಂಬಿಸುತ್ತದೆ. ಏಕೆಂದರೆ ಮಹಿಳೆಯರು ಪುರುಷರಿಗೆ ಅಧೀನರಾಗಿರಬೇಕು, ಸಮಾಜದಲ್ಲಿ ಮಹಿಳೆಯರ ಪಾತ್ರ ಪೂರಕವಷ್ಟೇ ಎಂಬುದು ಅವರ ಪರಿಕಲ್ಪನೆ.

ಈ ನಿರಾಕರಣೆಯ ಮೂಲಕ ಸೆನ್ಸಾರ್ ಮಂಡಳಿ ಚಿತ್ರ ತಯಾರಕರ  ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಮಾತ್ರವಲ್ಲ, ಭಾರತೀಯ ಸಂಸ್ಕøತಿಯನ್ನು ಎತ್ತಿ ಹಿಡಿಯುವ ಮತ್ತು ರಕ್ಷಿಸುವ ಹೆಸರಿನಲ್ಲಿ ಒಂದು ಪ್ರತಿಗಾಮಿ ಮಹಿಳಾ-ವಿರೋಧಿ ಪಾತ್ರವನ್ನು ವಹಿಸಿದೆ, ಇದು ಅಸಂವಿಧಾನಿಕ ಎಂದು ಎಐಡಿಡಬ್ಲ್ಯುಎ  ಹೇಳಿದೆ.

ಸೆನ್ಸಾರ್ ಮಂಡಳಿ ತಕ್ಷಣವೇ ಈ ಚಿತ್ರಕ್ಕೆ ಸಾರ್ವಜನಿಕ ವೀಕ್ಷಣೆಯ ಪ್ರಮಾಣ ಪತ್ರವನ್ನು ನೀಡಲು ಕ್ರಮಗಳನ್ನು ಕೈಗೊಳ್ಳಬೇಕು, ಸೃಜನಾತ್ಮಕ ಚಿತ್ರ ತಯಾರಕರ ಹಕ್ಕುಗಳಿಗೆ ರಕ್ಷಣೆ ನೀಡಬೇಕು ಎಂದು ಎಐಡಿಡಬ್ಲ್ಯುಎ ಆಗ್ರಹಿಸಿದೆ. ಕೇಂದ್ರೀಯ ಸೆನ್ಸಾರ್ ಮಂಡಳಿ ಸಂಘ ಪರಿವಾರದ ಸಿದ್ಧಾಂತವನ್ನು ಜಾರಿ ಮಾಡುವ, ಆಮೂಲಕ ಒಂದು ಪ್ರಜಾಪ್ರಭುತ್ವ ಚೌಕಟ್ಟಿನಲ್ಲಿ ಮಹಿಳೆಯರ ವಿಮೋಚನೆ ಮತ್ತು ಸಮಾನತೆಯ ಹಕ್ಕನ್ನು ಬುಡಮೇಲು ಮಾಡುವ ಸಂಸ್ಥೆಯಾಗಬಾರದು ಎಂದು ಎಐಡಿಡಬ್ಲ್ಯುಎ ಹೇಳಿದೆ.