“ಗೂಂಡಾಗಿರಿ ಸಹಿಸುವುದಿಲ್ಲ, ವಿಶ್ವವಿದ್ಯಾಲಯ ನಮ್ಮದು, ಯಾರಪ್ಪನದ್ದೂ ಅಲ್ಲ” ಎಬಿವಿಪಿ ವಿರುದ್ಧ ವಿರುದ್ಧ ದಿಲ್ಲಿ ವಿಶ್ವವಿದ್ಯಾಲಯದಲ್ಲಿ ಐತಿಹಾಸಿಕ ಪ್ರತಿಭಟನೆ

ಸಂಪುಟ: 
11
ಸಂಚಿಕೆ: 
11
Sunday, 5 March 2017

ಫೆಬ್ರುವರಿ 28 ರಂದು ದೇಶದ ರಾಜಧಾನಿ ಮತ್ತೊಂದು ಬೃಹತ್ ವಿದ್ಯಾರ್ಥಿ ಪ್ರತಿಭಟನೆಯನ್ನು ಕಂಡಿತು. ‘ಡಿಯು ಹಮಾರಾ ಆಪ್‍ಕಾ, ನಹೀ ಕಿಸೀಕೀ ಬಾಪ್‍ಕಾ’(ದಿಲ್ಲಿ ವಿವಿ ನಮ್ಮದು, ನಿಮ್ಮದು, ಯಾರಪ್ಪನದ್ದೂ ಅಲ್ಲ) ‘ಗೂಂಡಾಗರ್ದಿ ನಹೀ ಸಹೇಂಗೇ’( ಗೂಡಾಗಿರಿಯನ್ನು ಸಹಿಸುವುದಿಲ್ಲ. ಈ ಪ್ರತಿಭಟನೆ ನಿರ್ದಿಷ್ಟವಾಗಿ ಸಂಘ ಪರಿವಾರದ ವಿದ್ಯಾರ್ಥಿ ಸಂಘಟನೆ ಎಂದು ಹೇಳಿಕೊಳ್ಳುತ್ತಿರುವ ಎಬಿವಿಪಿಯ ಗೂಂಡಾಗಿರಿಗೆ ವಿರುದ್ಧವಾಗಿ ನಡೆದ ರ್ಯಾಲಿ. ದಿಲ್ಲಿ ವಿಶ್ವವಿದ್ಯಾಲಯದಲ್ಲಿ ದಶಕಗಳಲ್ಲಿ ಇಮತಹ ವಿದ್ಯಾರ್ಥಿ, ಅಧ್ಯಾಪಕರ ಪ್ರತಿಭಟನೆ ಕಂಡಿರಲಿಲ್ಲ ಎಂದು ಹೇಳಲಾಗಿದೆ.

ದಿಲ್ಲಿ ವಿವಿಗೆ ಸೇರಿದ ರಾಮ್ಜಸ್ ಕಾಲೇಜಿನಲ್ಲಿ ಒಂದು ವಿಚಾರಸಂಕಿರಣಕ್ಕೆ ಅಡ್ಡಿಪಡಿಸಿದ, ಅದರ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟಿಸಿದಾಗ ವಿದ್ಯಾರ್ಥಿಗಳ ಜತೆಗೆ ಅಧ್ಯಾಪಕರನ್ನು ಕೂಡ ಕೇಂದ್ರ ಸರಕಾರದ ಅಡಿಯಲ್ಲಿರುವ ದಿಲ್ಲಿ ಪೋಲಿಸ್ ಸಿಬ್ಬಂದಿಯ ಎದುರೇ ಥಳಿಸಿದ ಘಟನೆಯಿಂದ ರೊಚ್ಚಿಗೆದ್ದು  ನಡೆದ ಪ್ರತಿಭಟನೆ ಇದಾಗಿತ್ತು.

ಇದರಲ್ಲಿ ಸಾಮಾನ್ಯವಾಗಿ ವಿದ್ಯಾರ್ಥಿ ಪ್ರತಿಭಟನೆಗಳಲ್ಲಿ ಭಾಗವಹಿಸದ ದಿಲ್ಲಿ ವಿವಿಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ ಎಂದು ವರದಿಯಾಗಿದೆ. ದಿಲ್ಲಿಯಲ್ಲಿರುವ ಜೆಎನ್‍ಯು, ಜಾಮಿಯ ಮಿಲಿಯ ಮತ್ತು ಅಂಬೇಡ್ಕರ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೂ ಮತ್ತು ದಿಲ್ಲಿ ಮತ್ತು ಜೆಎನ್‍ಯು ವಿಶ್ವವಿದ್ಯಾಲಯಗಳ ಅಧ್ಯಾಪಕರ ಸಂಘಗಳ (ಡಿಯುಟಿಎ, ಜೆಎನ್‍ಯುಟಿಎ))ದ ಸದಸ್ಯರು ಮತ್ತು ಇತರ ಅಧ್ಯಾಪಕರುಗಳೂ ಇದರಲ್ಲಿ ಭಾಗವಹಿಸಿದರು.

ಎಡಪಕ್ಷಗಳಲ್ಲದೆ ಕಾಂಗ್ರೆಸ್, ಎಎಪಿ ಮತ್ತು ಆರ್‍ಜೆಡಿ ಮುಖಂಡರೂ ದಿಲ್ಲಿ ವಿವಿಯನ್ನು ವಿದ್ಯಾರ್ಥಿಗಳು ಎಂದು ಹೇಳಿಕೊಳ್ಳುವ ಗೂಂಡಾಗಳಿಂದ ಉಳಿಸಬೇಕೆನ್ನುವ ವಿದ್ಯಾರ್ಥಿಗಳ ಹೋರಾಟದೊಂದಿಗೆ ಸೌಹಾರ್ದ ವ್ಯಕ್ತಪಡಿಸಿದರು. ಸಿಪಿಐ(ಎಂ)ನ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿಯವರು ಮಾತಾಡುತ್ತ “ರಾಜಕೀಯ ನಮ್ಮ ಬದುಕಿನಲ್ಲಿ ಎಲ್ಲವನ್ನೂ ಅಲ್ಲದಿದ್ದರೂ ಮಹತ್ವದ ಸಂಗತಿಗಳನ್ನು ನಿರ್ಧರಿಸುತ್ತದೆ.  ಆದ್ದರಿಂದ ನಮ್ಮ ರಾಜಕೀಯವನ್ನು ಜಾಣ್ಮೆಯಿಂದ ಆರಿಸಿಕೊಳ್ಳಬೇಕು. ಈ ವಿಷಯದಲ್ಲಿ ಈಗಿನ ಪೀಳಿಗೆ ಹಿಂದಿನ ನಮ್ಮ ಪೀಳಿಗೆಗಿಂತ ಹೆಚ್ಚು ಆತ್ಮವಿಶ್ವಾಸ ಹೊಂದಿದೆ ಎಂಬುದು ಸಂತೋಷದ ಸಂಗತಿ. ಇಂದು ಸಂಘ ಪರಿವಾರದವರು ನೀವು ಏನು ಧರಿಸಬೇಕು, ಏನನ್ನು ನೋಡಬೇಕು, ಏನು ತಿನ್ನಬೇಕು, ಯಾರೊಂದಿಗೆ ಗೆಳೆತನ ಮಾಡಬೇಕು, ಯಾರನ್ನು ಮದುವೆಯಾಗಬೇಕು ಎಂಬುದೆಲ್ಲವನ್ನೂ ತಾವೇ ನಿರ್ಧರಿಸಬೇಕೆನ್ನುತ್ತಾರೆ. ಇದಕ್ಕೆ ಅವಕಾಶ ಕೊಡಲು ಸಾಧ್ಯವಿಲ್ಲ. ನೂರಾರು ಹೂವುಗಳು ಅರಳಲಿ, ಸಾವಿರ ವಿಚಾರಗಳು ಸ್ಪರ್ಧಿಸಲಿ. ಸಂಘ ಪರಿವಾರದವರಿಗೆ ತಮ್ಮ ಬೌದ್ಧಿಕ ಸಾಮಥ್ರ್ಯದಿಂದ ಗೆಲ್ಲಲು ಸಾಧ್ಯವಿಲ್ಲವಾದ್ದರಿಂದ ಲಾಠಿ, ಗೂಂಡಾಗಿರಿಯನ್ನು ಬಳಸುತ್ತಿದ್ದಾರೆ” ಎಂದು ಹೇಳಿದರು.

ಇದು ನಮ್ಮ ಸಂವಿಧಾನಿಕ ಹಕ್ಕುಗಳನ್ನು ರಕ್ಷಿಸಿಕೊಳ್ಳುವ ಸಾಮೂಹಿಕ ಹೋರಾಟ ಎಂದು ಸಿಪಿಐ ಮುಖಂಡ ಡಿ.ರಾಜ ಹೇಳಿದರು.

ವಿದ್ಯಾರ್ಥಿ ಮತ್ತು ಅಧ್ಯಾಪಕರ ಸಂಘಟನೆಗಳ ಮುಖಂಡರು ಮಾತನಾಡಿದರು.

ಮಾರ್ಚ್ 4ರಂದು ಮಂಡಿ ಹೌಸ್‍ನಿಂದ ಸಂಸದ್ ಮಾರ್ಗ್ ವರೆಗೆ ‘ನಾಗರಿಕರ ಮೆರವಣಿಗೆ' ನಡೆಸಲು ನಿರ್ಧರಿಸಲಾಯಿತು.

ಈ ಐತಿಹಾಸಿಕ ಪ್ರತಿಭಟನೆಯ ಕರೆಗೆ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ನಡುವೆ ಭಾರೀ ಸ್ಪಂದನೆಯನ್ನು ಗಮನಿಸಿದ ಎಬಿವಿಪಿ ಈ ಪ್ರತಿಭಟನೆಯ ಹಿಂದಿನ ದಿನ ಇದು ರಾಷ್ಟ್ರವಾದ ಮತ್ತು ರಾಷ್ಟ್ರ-ವಿರೋಧದ ನಡುವಿನ ಸಂಘರ್ಷ ಎಂದು ಬಿಂಬಿಸಲು ‘ತಿರಂಗಾ’ ಮೆರವಣಿಗೆ ನಡೆಸಿತ್ತು. ಇದರಲ್ಲಿ ಕೆಲವು ನೂರು ಎಬಿವಿಪಿ ಕಾರ್ಯಕರ್ತರು ಭಾಗವಹಿಸಿದ್ದರೆ, ಮರುದಿನದ ಮೆರವಣಿಗೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಭಾಗವಹಿಸಿದ್ದು ಇದು ಎರಡು ವಿದ್ಯಾರ್ಥಿ ಗುಂಪುಗಳ ನಡುವಿನ ಕಿತ್ತಾಟವಲ್ಲ ಎಂಬುದನ್ನು ಸಾಬೀತು ಮಾಡಿತು.

ಮೆರವಣಿಗೆ ಹೋಗುವ ದಾರಿಯಲ್ಲಿ ‘ಎಬಿವಿಪಿ ಕ್ಯಾಂಪಸ್ ಶಾಂತಿ ಬಯಸುತ್ತದೆ’ ಎಂದು ಕೆಲವರು ಫಲಕ ಹಿಡಿದು ನಿಂತದ್ದು ತಮಾಷೆಯಾಗಿ ಕಾಣುತ್ತಿತ್ತು ಎಂದು ಒಬ್ಬ ವೀಕ್ಷಕರು ಉದ್ಗರಿಸಿದರು.

ಮೆರವಣಿಗೆಯ ನಂತರ ಇಬ್ಬರು ಎಬಿವಿಪಿ ಮಂದಿ ತಮಗಿರುವ ಸಾಮಾನ್ಯ ನಿರ್ದೇಶನದಂತೆ ಪ್ರತಿಭಟನೆಯಲ್ಲಿ ಭಾಗವಹಿಸಿದವರನ್ನು ಪೋಲೀಸರ ಎದುರೇ ಥಳಿಸಿದಾಗ  ಈ ಐತಿಹಾಸಿಕ   ಪ್ರತಿಭಟನೆಯ ಹಿನ್ನೆಲೆಯಲ್ಲಿ ದಿಲ್ಲಿ ಪೋಲೀಸರೂ ನಿರ್ವಾಹವಿಲ್ಲದೆ ಅವರನ್ನು ಬಂಧಿಸಿ ಎಫ್‍ಐಆರ್ ದಾಖಲಿಸಿದ್ದಾರೆ, ಎಬಿವಿಪಿ ಅವರಿಬ್ಬರನ್ನೂ ‘ಅಮಾನತು’ ಮಾಡಿರುವುದಾಗಿ ಪ್ರಕಟಿಸಿದೆ!