ಪ್ರಿಯ ಶ್ರೀ ಸಿದ್ದರಾಮಯ್ಯ ಜೀ,

ಸಂಪುಟ: 
11
ಸಂಚಿಕೆ: 
11
Sunday, 5 March 2017

ಫೆಬ್ರವರಿ 25 ರಂದು ಮಂಗಳೂರಿನಲ್ಲಿ ನಡೆದ 'ಸೌಹಾರ್ದ ಸಮಾವೇಶ' ಯಶಸ್ವಿಯಾಗುವಂತೆ ಕಾನೂನು ಸುವ್ಯವಸ್ಥ ಕ್ರಮ ಕೈಗೊಂಡ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕೇರಳ ಮುಖ್ಯಮಂತ್ರಿ ಕಾಮ್ರೇಡ್ ಪಿಣರಾಯಿ ವಿಜಯನ್ ಅವರು ಧನ್ಯವಾದವನ್ನು ಅರ್ಪಿಸಿ ಪತ್ರ ಬರೆದಿದ್ದಾರೆ:

ನಿಮಗೆ ತಿಳಿದಿರುವಂತೆ 25.02.2017ರಂದು ಮಂಗಳೂರಿನಲ್ಲಿ ನನ್ನ ಕಾರ್ಯಕ್ರಮಗಳು ನಿಗದಿಯಾಗಿದ್ದವು. ಆರೆಸ್ಸೆಸ್ ಮತ್ತು ಅದರ ಸಹ ಸಂಘಟನೆಗಳು ವಿವಾದ ಎಬ್ಬಿಸಿ, ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ನನಗೆ ಅವಕಾಶ ಕೊಡುವುದಿಲ್ಲ ಎಂದು ಸಾರ್ವಜನಿಕ ಹೇಳಿಕೆ ನೀಡಿದ್ದವು. ನಾವೆಲ್ಲರೂ ಇಷ್ಟು ವರ್ಷಗಳ ಕಾಲ ಪೋಷಿಸಿಕೊಂಡು ಬಂದ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಸಂಪೂರ್ಣ ವಿರುದ್ಧವಾದ ಈ ಸಂಘಟನೆಗಳ ಫ್ಯಾಸಿಸ್ಟ್ ಧೋರಣೆ ಆಘಾತ ತರಿಸಿತ್ತು.

ವೈಯಕ್ತಿಕವಾಗಿ ನಾನು ಮತ್ತು ನಾನು ಪ್ರತಿನಿಧಿಸುವ ರಾಜಕೀಯ ಪಕ್ಷ ಇಂಥ ಬೆದರಿಕೆಗಳನ್ನು ಬಹಳ ಬಾರಿ ಎದುರಿಸಿದ್ದೇವೆ. ಪ್ರಸ್ತುತ ನಾನು ಸಾಂವಿಧಾನಾತ್ಮಕವಾಗಿ ಪಡೆದಿರುವ ಹುದ್ದೆಯು ಅವರ ಸವಾಲುಗಳಿಗೆ ಅವರದೇ ಧಾಟಿಯಲ್ಲಿ ಉತ್ತರ ಕೊಡದಂತೆ ಮಿತಿ ಹೇರಿವೆ. ನಿಮ್ಮ ನೇತೃತ್ವದ ಕರ್ನಾಟಕ ಸರ್ಕಾರವು ಈ ಸಂದರ್ಭವನ್ನು ನಿಭಾಯಿಸಿ, ಕಾರ್ಯಕ್ರಮ ಶಾಂತಿಯಿಂದ ನೆರವೇರುವಂತೆ ದೃಢತೆಯಿಂದ ಕಾರ್ಯ ನಿರ್ವಹಿಸಿದ್ದು ನನಗೆ ಸಂತಸ ತಂದಿದೆ.

ನನ್ನ ಭೇಟಿಯ ಸಂದರ್ಭದಲ್ಲಿ ಸೂಕ್ತ ಭದ್ರತೆ ನೀಡಿ ಕಾರ್ಯಕ್ರಮಗಳು ಸುಸೂತ್ರವಾಗಿ ನಡೆಯುವಂತೆ ಸಹಕರಿಸಿದ ತಮಗೆ ನಾನು ವಿಧ್ಯುಕ್ತವಾಗಿ ಧನ್ಯವಾದವನ್ನು ಸಮರ್ಪಿಸುತ್ತಿದ್ದೇನೆ.

ವಂದನೆಗಳೊಂದಿಗೆ,

ತಮ್ಮ ವಿಶ್ವಾಸಿ
ಪಿಣರಾಯಿ ವಿಜಯನ್