ಸುಟ್ಟ ಕಾಗದ ಇತಿಹಾಸ ಹೇಳುತ್ತದೆ

ಸಂಪುಟ: 
11
ಸಂಚಿಕೆ: 
11
Sunday, 5 March 2017

ಈ ನಾಡಿನ ದುಡಿಯುವ ಜನತೆಯ ಹಿರಿಯ ಸಂಗಾತಿ ವಿಜೆಕೆ ನಾಯರ್ ರವರ ಒಳಮನದಲ್ಲಿ ಹಾಗೂ ನಿಮ್ಮೆಲ್ಲರ ಮನದಲ್ಲೂ ಮೂಡಿರಬಹುದೆಂದು ನಂಬಿ ಬರೆದೆ. ಸಂಘಪರಿವಾರದ ಫ್ಯಾಸಿಸ್ಟ್ ಕ್ರಿಯೆಗೆ ನನ್ನ ಪ್ರತಿಕ್ರಿಯೆ:

ಈ ನೆಲದಲ್ಲಿ ಪುಸ್ತಕಗಳು ಮಾತಾಡುತ್ತವೆ..
ಅಕ್ಷರಗಳು ದೃಷ್ಟಿ ಕೊಡುತ್ತವೆ
ಹರಿದ ಹಾಳೆಗಳು ಇತಿಹಾಸ ಹೇಳುತ್ತವೆ
ಸುಟ್ಟು ಕರಕಲಾದ ಕಾಗದವೊಂದೇ ಅಲ್ಲ
ನೀವು ಕತ್ತಲಲ್ಲಿ ಹೂತ
ಹೆಣವೂ ಸತ್ಯ ಹೇಳುತ್ತದೆ...

ಬಗೆದು ಹೊಸೆದ ಭ್ರೂಣವೂ ಕಥೆ ಹೇಳುತ್ತದೆ
ನೀವು ಬಳಸಿ ಬಿಸಾಡಿದ ಅವಳ ಸಹಸ್ರ ಗರ್ಭಚೀಲಗಳು
ಬಾನೆತ್ತರದ ದ್ವನಿಯಲ್ಲಿ ಕೂಗಿ ಹೇಳುತ್ತಿವೆ

ಒಂದಲ್ಲ ಒಂದು ದಿನ
ನಿಮ್ಮ ಹೇಯ ಧ್ಯೇಯ ಬಯಲಾಗುತ್ತದೆ
ಅಂದು ನಿಮ್ಮೆದುರು ನಾವು ಲಗ್ಗೆ ಇಡುತ್ತೇವೆ

ನಿಮ್ಮಂತಲ್ಲ
ನೀವು ಬಿತ್ತಿದ ದ್ವೇಷದ ಮೇಲೆ ಪ್ರೀತಿಯ ಲಗ್ಗೆ
ನೀವು ಸಾಣೆ ಹಾಕಿದ ಕತ್ತಿ ಚಾಕು ಕಠಾರಿ ಮೇಲೆ
ಸೌಹಾರ್ದ ಭಾವದ ಲಗ್ಗೆ
ನಿಮ್ಮ ಅಹಮ್ಮಿನ ಕೋಟಿ ಲೂಟಿ ರೋಷದ ಮೇಲೆ
ಜನಮನದ ಮಹಾಕಾವ್ಯದ ಲಗ್ಗೆ ...
ಅಂದು ಮತ್ತೆ ಪುಸ್ತಕಗಳು ಮಾತು ಕಲಿಸುತ್ತವೆ...
ನೀವು ಸುಟ್ಟ ಹಳೆಯ ದಫ್ತಾರಗಳ ಬೂದಿ ಗೊಬ್ಬರವಾಗಿ
ನಮ್ಮೆಳೆಯರನ್ನು ಚಿಗುರಿಸುತ್ತದೆ...

                                              - ಯಮುನಾ ಗಾಂವ್ಕರ್