ಸಾಮಾಜಿಕ ಭದ್ರತೆ ನೀಡಿ ಹೋರಾಟಕ್ಕೆ ಅಸಂಘಟಿತ ಕಾರ್ಮಿಕರ ನಿರ್ಧಾರ

ಸಂಪುಟ: 
11
ಸಂಚಿಕೆ: 
11
Sunday, 5 March 2017

ನಗರದಲ್ಲಿ ದಿನದ ಕೂಲಿ ನಂಬಿ ಬದುಕು ಸಾಗಿಸುವ ಅಸಂಘಟಿತ ಕಾರ್ಮಿಕರ ಕುರಿತು ಇತ್ತೀಚಿಗೆ ಬೆಂಗಳೂರಿನಲ್ಲಿ “ಅಸಂಘಟಿತ ಕಾರ್ಮಿಕರು ಮತ್ತು ಸಾಮಾಜಿಕ ಭದ್ರತೆ” ಎಂಬ ವಿಚಾರಸಂಕಿರಣ ಏರ್ಪಡಿಸಲಾಗಿತ್ತು. ಸಮಾಜವಾದಿ ಕ್ರಾಂತಿ ಶತಮಾನೋತ್ಸವ ಸಮಿತಿ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್, ಮನೆಕೆಲಸಗಾರರ ಸಂಘ, ಬೀದಿಬದಿ ವ್ಯಾಪಾರಿಗಳ ಸಂಘ ಹಾಗು ಆಟೋರಿಕ್ಷಾ ಚಾಲಕರ ಸಂಘಗಳು ಜಂಟಿಯಾಗಿ ‘ಸಮಾಜವಾದಿ ಕ್ರಾಂತಿ ಶತಮಾನೋತ್ಸವ’ದ ಅಂಗವಾಗಿ ವಿಚಾರಸಂಕಿರಣ ಹಮ್ಮಿಕೊಂಡಿದ್ದವು. ಈ ವಿಚಾರ ಸಂಕಿರಣದಲ್ಲಿ ವ್ಯಕ್ತವಾದ ಅಭಿಪ್ರಾಯಗಳು ಅಸಂಘಟಿತ ಕಾರ್ಮಿಕರ ದಯನೀಯ ಬದುಕಿನ ಬವಣೆಯನ್ನು ತೆರೆದಿಟ್ಟಿತು.

ಅಸಂಘಟಿತ ಕಾರ್ಮಿಕರು ಎಂದರೆ ಯಾರು?

ಇಂದು ದೇಶದಲ್ಲಿ 93 ಶೇಕಡ ಇದ್ದಾರೆ. ಬಿಡಿ ಬಿಡಿಯಾಗಿ ದುಡಿಯುವ, ಯಾವುದೇ ಸಾಮಾಜಿಕ ಭದ್ರತೆ - ಕೆಲಸದ ಭದ್ರತೆ ಮತ್ತು ಕಾರ್ಮಿಕ ಕಾನೂನುಗಳು ಯಾವುದೂ ಅನ್ವಯಿಸುವುದಿಲ್ಲವೋ ಅಂಥವರನ್ನು ಅಸಂಘಟಿತ ಕಾರ್ಮಿಕರು ಎಂದು ಕರೆಯಲಾಗುತ್ತದೆ. ಕಾರ್ಮಿಕ ಇಲಾಖೆ ವ್ಯಾಖ್ಯಾನದಂತೆ ‘ಗ್ರ್ಯಾಚುಯಿಟಿ ಇಲ್ಲದ, ಪಿಎಫ್ ಇಲ್ಲದ ಮತ್ತು ಇಎಸ್‍ಐ ಸೌಲಭ್ಯಗಳಿಲ್ಲದೇ ದುಡಿಯುವವರನ್ನು ಅಸಂಘಟಿತ ಕಾರ್ಮಿಕರು’ ಎಂದು ಪರಿಗಣಿಸಲಾಗುತ್ತದೆ. ಇವರಲ್ಲಿ ವಿದ್ಯಾಭ್ಯಾಸ ಇಲ್ಲದವರು ಅಥವಾ ಕಡಿಮೆ ವಿದ್ಯಾಭ್ಯಾಸ ಇರುವವರು ಮಾತ್ರವೇ ಇದ್ದಾರೆ. ಇವರಿಗೆ ಸುಲಭದಲ್ಲಿ ಉದ್ಯೋಗ ಸಿಗುವುದಿಲ್ಲ. ಹಾಗು ಕೈಗಾರಿಕಾ ವಲಯದಲ್ಲಿ ಉದ್ಯೋಗ ಸಿಗುವುದು ಸಾಧ್ಯವೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಣವಾಗಿದೆ. ಹೀಗಾಗಿ ಅವರು ಅಸಂಘಟಿತ ವಲಯದ ಕೆಲಸಗಳಲ್ಲಿ ತೊಡಗುವುದು ಸಾಮಾನ್ಯವಾಗಿದೆ. 

ಇಂಥ ಅಸಂಘಟಿತ ಕಾರ್ಮಿಕರ ಸಂಖ್ಯೆ ನಮ್ಮ ದೇಶದಲ್ಲಿ ದಿನೇ ದಿನೇ ಬೆಳೆಯುತ್ತಲೇ ಇದೆ. ಸರ್ಕಾರದ ಕೈಗಾರಿಕಾ ನೀತಿ, ಶಿಕ್ಷಣ ನೀತಿ, ಆರೋಗ್ಯ ನೀತಿ, ಕೃಷಿ ನೀತಿಯಿಂದಾಗಿ ಬಹಳ ದೊಡ್ಡ ಸಂಖ್ಯೆಯಲ್ಲಿ ಅಸಂಘಟಿತ ಕಾರ್ಮಿಕರು ಸೃಷ್ಟಿಯಾಗುತ್ತಿದ್ದಾರೆ. ಕೃಷಿ ಕೂಲಿಕಾರರಾಗಿ ಹಾಗು ಸಣ್ಣ ಹಿಡುವಳಿದಾರರಾಗಿ ಹಳ್ಳಿಗಳಲ್ಲಿ ದುಡಿಯುತ್ತಿದ್ದವರು ಕೃಷಿ ಇಳಿಮುಖವಾಗುತ್ತಿರುವುದರಿಂದ ಹಾಗು ನಿರಂತರ ದುಡಿಮೆ ಇಲ್ಲದಿರುವುದು ಹಾಗು ಸಿಗುವ ಕೂಲಿ ಜೀವನ ನಿರ್ವಹಿಸಲು ಸಾಕಾಗದಿರುವುದು ವಲಸೆಗೆ ಕಾರಣವಾಗುತ್ತಿದೆ. ಬಹುತೇಕ ಇಂತಹ ಜನ ದೊಡ್ಡ ನಗರಗಳಿಗೆ ವಲಸೆ ಬರುತ್ತಿರುವ ಪರಿಣಾಮ ಅವರೆಲ್ಲರೂ ಕಟ್ಟಡ ನಿರ್ಮಾಣ, ಆಟೋ ಓಡಿಸುವುದು, ಮನೆಕೆಲಸ ಮಾಡುವುದು, ಹಮಾಲಿ, ಬೀಡಿ ಕಟ್ಟುವುದು, ಟೈಲರ್, ದೋಬಿ, ಇತ್ಯಾದಿ ಕೆಲಸಗಳಲ್ಲಿ ತೊಡಗಿ ದುಡಿಯುತ್ತಿದ್ದಾರೆ.

ರಾಜ್ಯ ಸರ್ಕಾರ ರಾಜ್ಯದಲ್ಲಿ 122 ತರಹದ ಕೆಲಸ ಮಾಡುವ ಕಾರ್ಮಿಕರನ್ನು ಅಸಂಘಟಿತರೆಂದು ಪರಿಗಣಿಸಿದೆ. ಇಂದು ರಾಜ್ಯ ಸರ್ಕಾರಿ ಅಂಕಿಅಂಶಗಳ ಪ್ರಕಾರ ಸುಮಾರು 2 ಕೋಟಿ ಅಸಂಘಟಿತ ಕಾರ್ಮಿಕರಿದ್ದಾರೆಂದು ಗುರ್ತಿಸಿದೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿರುವ ಈ ಕಾರ್ಮಿಕರಿಗೆ ಸರ್ಕಾರದಿಂದ ಈವರೆಗೆ ಯಾವ ಸೌಲಭ್ಯಗಳೂ ದಕ್ಕಿಲ್ಲ. ಬಹಳ ವರ್ಷಗಳಿಂದಲೂ ಅಸಂಘಟಿತ ಕಾರ್ಮಿಕರ ಕಾನೂನು ತರಲು ಪ್ರಯತ್ನ ನಡೆದಿತ್ತಾದರೂ ಇತ್ತೀಚಿಗೆ 2008 ರಲ್ಲಿ ‘ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಕಾನೂನು ಜಾರಿಗೆ ಬಂದಿದೆ. ಹಾಗೆಯೇ ಇದೇ ಸಮಯದಲ್ಲಿ ರಾಜ್ಯದಲ್ಲಿ ಅಸಂಘಟಿತ ಕಾರ್ಮಿಕರ ಕಲ್ಯಾಣ ಮಂಡಳಿಯನ್ನೂ ರಚಿಸಲಾಗಿದೆ. ಅದರ ಕೇಂದ್ರ ಕಛೇರಿ ಬೆಂಗಳೂರಿನ ಕಾರ್ಮಿಕ ಭವನದಲ್ಲಿ ತನ್ನ ಕಾರ್ಯ ನಿರ್ವಹಿಸುತ್ತಿದೆ.

ಅಸಂಘಟಿತ ಕಾರ್ಮಿಕರ ಬದುಕು - ಬವಣೆ

ಅಸಂಘಟಿತ ಕಾರ್ಮಿಕರೆಂದರೆ ಬೆಂಗಳೂರಿನ ಕಟ್ಟಕಡೆಯ ಶ್ರಮಜೀವಿಗಳು. ಇವರಿಗೆ ಕೆಲಸದ ಅವಧಿಯೆಂಬುದಿಲ್ಲ. ನಿಗದಿತ ಆದಾಯವೆಂಬುದಿಲ್ಲ. ಸ್ಲಂಗಳಲ್ಲಿ, ಸಣ್ಣಪುಟ್ಟ ಕಾಲೋನಿಗಳಲ್ಲಿ, ಶೆಡ್‍ಗಳಲ್ಲಿ, ಹೆಚ್ಚೆಂದರೆ ಸಾಧಾರಣ ಸಿಂಗಲ್ ಬೆಡ್‍ರೂಂ ಮನೆಗಳೇ ಇವರ ಅರಮನೆಗಳು. ಕೆಲ ಬೀದಿಬದಿ ವ್ಯಾಪಾರಿಗಳ ವಾಸಸ್ಥಾನ ಬೀದಿಯೇ ಆಗಿರುತ್ತದೆ. ಬಹುತೇಕರು ಸಿಟಿಯಿಂದ ಆಚೆ ವಾಸವಿದ್ದು ಬೆಳಿಗ್ಗೆ ಕೆಲಸಕ್ಕೆ ಬಂದರೆ ಮನೆಗೆ ಹಿಂತಿರುಗುವುದು ರಾತ್ರಿ 9ರ ನಂತರವೇ. ಸರ್ಕಾರಿ ಅಥವಾ ಕಾರ್ಪೋರೇಷನ್ ಶಾಲೆಗಳ ವಿದ್ಯಾರ್ಥಿಗಳಲ್ಲಿ ಬಹುತೇಕರು ಇವರ ಮಕ್ಕಳೇ ಆಗಿರುತ್ತಾರೆ.  ಆರೋಗ್ಯ ಕೆಟ್ಟಲ್ಲಿ, ಮಳೆ ಬಂದಲ್ಲಿ, ಸ್ಟ್ರೈಕ್ ಅಥವಾ ಬಂದ್ ಆದಲ್ಲಿ ಇವರ ಅಂದಿನ ಆದಾಯವೂ ಬಂದ್ ಆಗುತ್ತದೆ. ಹೆಚ್ಚು ತೆರಿಗೆ ಕಟ್ಟುವವರೂ ಇವರೇ, ಪೊಲೀಸರ ಜೇಬು ತುಂಬಿಸುವವರೂ ಇವರೇ, ಚುನಾವಣೆಯಲ್ಲಿ ಕ್ಯೂನಲ್ಲಿ ಮತ ಹಾಕುವವರೂ ಇವರೇ. ಎಷ್ಟು ದುಡಿದರೂ ನೆಮ್ಮದಿ ಜೀವನ ಇವರ ಪಾಲಿಗಿಲ್ಲ. ಈ ಜನ ಸರ್ಕಾರಗಳ, ಮಾಲೀಕರ ಅವಕೃಪೆಗೆ ಸದಾ ಒಳಗಾಗುತ್ತಲೇ ಬಂದಿದ್ದಾರೆ. ಕನಿಷ್ಟಕೂಲಿ, ಪೌಷ್ಟಿಕ ಆಹಾರ, ವಿದ್ಯಾಭ್ಯಾಸ, ಆರೋಗ್ಯದೆಲ್ಲದರಿಂದಲೂ ವಂಚಿತರಾದವರೂ ಇವರೇ ಆಗಿದ್ದಾರೆ.

ಅಸಂಘಟಿತ ಕಾರ್ಮಿಕರ ಹೋರಾಟ

ರಾಜ್ಯ ಸರ್ಕಾರ ಕಾರ್ಮಿಕ ಸಂಘಟನೆಗಳ ಅನೇಕ ವರ್ಷಗಳ ಹೋರಾಟದ ಒತ್ತಾಯದ ಪರಿಣಾಮವಾಗಿ ಕಲ್ಯಾಣ ಮಂಡಳಿಯನ್ನೇನೋ ರಚಿಸಿತು. ಆದರೆ ಅದಕ್ಕೆ ಬೇಕಾದ ಹಣಕಾಸು ಒದಗಿಸಲಿಲ್ಲ. ಹೀಗಾಗಿ ಕಲ್ಯಾಣ ಮಂಡಳಿ ಇದ್ದೂ ಇಲ್ಲದಂತಾಗಿದೆ. ಸಿಐಟಿಯು ಸೇರಿದಂತೆ ಇತರೆ ಕಾರ್ಮಿಕ ಸಂಘಟನೆಗಳು ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಸೌಲಭ್ಯಗಳಾದ ಆರೋಗ್ಯ ವಿಮೆ, ಭವಿಷ್ಯ ನಿಧಿ, ವಸತಿ ಯೋಜನೆ, ಆರೋಗ್ಯ ಸೌಲಭ್ಯ, ಶೈಕ್ಷಣಿಕ ನೆರವು, ಕೆಲಸದ ಭದ್ರತೆ, ಸಾಲ ಸೌಲಭ್ಯ, ಕನಿಷ್ಟ ಕೂಲಿ ಇತ್ಯಾದಿ ಬೇಡಿಕೆಗಳನ್ನಿಟ್ಟು ಅನೇಕ ವರ್ಷಗಳಿಂದ ಹೋರಾಟಗಳನ್ನು ನಡೆಸುತ್ತಿವೆ. ಇದರ ಫಲವಾಗಿಯೇ ‘ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ’ಯನ್ನು ರಚಿಸಲಾಯಿತು. ಸಾಕಷ್ಟು ಇತಿಮಿತಿಗಳಿದ್ದಾಗಿಯೂ ಇದರಿಂದ ಒಂದಷ್ಟು ಸೌಲಭ್ಯಗಳು ಕಟ್ಟಡ ಕಾರ್ಮಿಕರಿಗೆ ಸಿಗುತ್ತಿವೆ. ಆದರೆ ಇನ್ನುಳಿದ ಅಸಂಘಟಿತರಿಗೆ ಯಾವ ರೀತಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಇದುವರೆವಿಗೂ ಸಾಧ್ಯವಾಗಿಲ್ಲ. ಒಂದಿಷ್ಟು ಆರೋಗ್ಯ ವಿಮೆ ಸೌಲಭ್ಯಗಳನ್ನು ಪ್ರಕಟಿಸಿವೆಯಾದರೂ ಅವು ಪ್ರಯೋಜನಕ್ಕೆ ಬರುತ್ತಿಲ್ಲ. ಕಾರಣ ಬಹುತೇಕ ಆರೋಗ್ಯ ವಿಮೆಗಳು ಸಾವು ಬಂದರೆ ಮಾತ್ರವೇ ಅನ್ವಯವಾಗುವಂತಹ ರೀತಿಯಲ್ಲಿ ಅವುಗಳ ನಿಯಮಾವಳಿಗಳಿವೆ ಎಂಬುದು ವಾಸ್ತವ.

ವಿಶ್ವಬ್ಯಾಂಕ್ ವಿಧಿಸಿದ ಷರತ್ತುಗಳ ಕಾರಣದಿಂದ ಸರ್ಕಾರಗಳು ಸಾಮಾಜಿಕ ಸುರಕ್ಷತಾ ಯೋಜನೆಗಳಿಗೆ ಹಣ ಒದಗಿಸುತ್ತಿಲ್ಲ. ಎಲ್ಲದಕ್ಕೂ ಹಣಕಾಸು ಇಲಾಖೆ ‘ವಿಶ್ವಬ್ಯಾಂಕ್ ಷರತ್ತಿ’ನ ನೆಪವೊಡ್ಡಿ ಕೊಕ್ಕೆ ಹಾಕುತ್ತದೆ. ಇಂಥ ಪರಿಸ್ಥಿತಿಯಲ್ಲಿ ಸೌಲಭ್ಯಗಳಿಗೆ ಸಂಪನ್ಮೂಲ ಒದಗಿಸುವುದಾದರೂ ಎಲ್ಲಿಂದ ಎಂಬ ಯಕ್ಷ ಪ್ರಶ್ನೆ ಕಾಡುವುದು ಸಹಜವೇ ಆದರೂ ದಾರಿಗಳೂ ಇವೆ ಎಂಬುದೂ ಸತ್ಯ. ಈಗಾಗಲೇ ಪಶ್ಚಿಮ ಬಂಗಾಳ, ತ್ರಿಪುರಾ ಮತ್ತು ಕೃಳಾ ರಾಜ್ಯಗಳಲ್ಲಿ ಸಾಮಾಜಿಕ ಸುರಕ್ಷತಾ ಸೌಲಭ್ಯಗಳನ್ನು ತಮ್ಮ ಇತಿಮಿತಿಯಲ್ಲಿ ನೀಡುತ್ತಿವೆ. ಉದಾಹರಣೆಗೆ ಪಶ್ಚಿಮ ಬಂಗಾಳದಲ್ಲಿ ಅಸಂಘಟಿತ ಕಾರ್ಮಿಕರಿಗೆ ಭವಿಷ್ಯ ನಿಧಿ ಜಾರಿಯಲ್ಲಿದೆ. ಕಾರ್ಮಿಕ ಒಂದು ಷೇರು ನೀಡಿದ್ದಲ್ಲಿ ಸರ್ಕಾರವೂ ಒಂದು ಷೇರು ನೀಡುತ್ತಿದೆ. ಇದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಜಾರಿ ಮಾಡಬೇಕೆಂದು ಸಿಐಟಿಯು ಸರ್ಕಾರವನ್ನು ಒತ್ತಾಯಿಸುತ್ತಿದೆ. ಕಾರ್ಮಿಕ ಇಲಾಖೆಯ ಅಧಿಕಾರಿಗಳು ಪಶ್ಚಿಮ ಬಂಗಾಳದ ಭವಿಷ್ಯ ನಿಧಿ ಮಾದರಿಯಂತೆ ಸಕಾರಕ್ಕೆ ಪ್ರಸ್ತಾಪ ಸಲ್ಲಿಸಿದ್ದಾರೆ. ಆದರೆ ಇದಕ್ಕೆ ಹಣಕಾಸು ಇಲಾಖೆ ಒಪ್ಪಿಗೆ ನೀಡುತ್ತಿಲ್ಲ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ನಿಧಿಗೆ ಕಟ್ಟಡದ ಮಾಲೀಕರಿಂದ ಸೆಸ್ ಸಂಗ್ರಹಿಸುವ ಮಾದರಿಯಲ್ಲಿಯೇ ಅಸಂಘಟಿತ ಕಾರ್ಮಿಕರ ಕಲ್ಯಾಣ ಮಂಡಳಿಗೂ ನಿಧಿ ಸಂಗ್ರಹಿಸಲು ಹಲವು ಮಾರ್ಗಗಳಿವೆ. ಕೈಗಾರಿಕೆಗಳಿಂದ, ಎಪಿಎಂಸಿ, ಕಂದಾಯ ಇಲಾಖೆ, ಬಿಬಿಎಂಪಿ ಮುಂತಾದ ವಿಭಾಗಗಳಿಂದ ನಿಧಿ ಸಂಗ್ರಹಿಸಲು ಸಾಧ್ಯವಿದೆಯಾದರೂ ಸರ್ಕಾರ ತನ್ನ ಇಚ್ಛಾಸಕ್ತಿ ತೋರುತ್ತಿಲ್ಲ. ಕೈಗಾರಿಕಾ ಉದ್ದಿಮೆದಾರರು ಇಲ್ಲಿನ ಭೂಮಿ, ನೀರು, ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಂಡು ತಮ್ಮ ಲಾಭ ಹೆಚ್ಚಿಸಿಕೊಳ್ಳುವಾಗ ತಮ್ಮ ಲಾಭದ ಶೇಕಡ 1ರಷ್ಟನ್ನು ಸೆಸ್ ರೂಪದಲ್ಲಿ ನೀಡಿದರೂ ಅಸಂಘಟಿತ ಕಾರ್ಮಿಕರಿಗೆ ಅನೇಕ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಿದೆ.  ಹೀಗೆ ಅನೇಕ ಮಾರ್ಗಗಳಿವೆ ಹಾಗು ಇವೆಲ್ಲವು ಅಧಿಕಾರಿಗಳಿಗೆ ತಿಳಿದಿಲ್ಲವೆಂದೇನಲ್ಲ, ಆದರೆ ಮಾಡುವ ಪ್ರಯತ್ನಕ್ಕೆ ಮುಂದಾಗುತ್ತಿಲ್ಲ. ಹಾಗೆಂದು ಹೋರಾಟಗಳು ನಿಂತಿಲ್ಲ, ಮುಂದುವರಿಯುತ್ತಿವೆ. ಅಸಂಘಟಿತರನ್ನು ಸಂಘಟಿಸುವ, ಅವರಲ್ಲಿ ಅರಿವು ಮೂಡಿಸುವ ಆ ಮೂಲಕ ಹೋರಾಟಗಳಲ್ಲಿ ಅಣಿನೆರಸುವ ಪ್ರಯತ್ನ ಮುಂದುವರಿಯಬೇಕಿದೆ.

ನಿರ್ಣಯ

ಅಸಂಘಟಿತ ಕಾರ್ಮಿಕರಿಗೆ ವಸತಿ-ನಿವೇಶನಕ್ಕಾಗಿ ಏಪ್ರಿಲ್ 4 ರಂದು ಬೃಹತ್ ಹೋರಾಟ

ಸರ್ಕಾರದ ಕಾರ್ಮಿಕ ಇಲಾಖೆ ಗುರ್ತು ಮಾಡಿರುವ 122 ತರಹದ ಕೆಲಸ ನಿರ್ವಹಿಸುವ ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ರಾಜ್ಯ ಸರ್ಕಾರವು ಸರ್ಕಾರಿ ಭೂಮಿಯಲ್ಲಿ ಅಥವಾ ಭೂಮಿಯನ್ನು ಖರೀದಿಸಿ ಮನೆ -ನಿವೇಶನ ನೀಡಬೇಕೆಂದು ಒತ್ತಾಯಿಸಿ ಏಪ್ರಿಲ್ 4, 2017 ರಂದು ಬೃಹತ್ ಪ್ರತಿಭಟನೆ ಮಾಡಲು ವಿಚಾರಸಂಕಿರಣದಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಪ್ರೊ.ಚಂದ್ರಪೂಜಾರಿ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು. ಸಿಐಟಿಯು ರಾಜ್ಯಾಧ್ಯಕ್ಷರಾದ ವರಲಕ್ಷ್ಮಿ, ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಮಾತನಾಡಿದರು. ಕಾರ್ಮಿಕ ಇಲಾಖೆಯ ಜಂಟಿ ಆಯುಕ್ತ ಶ್ರೀಪಾದ್, ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್‍ನ ರಾಜ್ಯಾಧ್ಯಕ್ಷ ಕೆ.ಮಹಾಂತೇಶ್ ಹಾಗು ಬೀದಿಬದಿ ವ್ಯಾಪಾರಿಗಳ ಸಂಘದ ರಾಜ್ಯಾಧ್ಯಕ್ಷ ಕೆ.ಎನ್.ಉಮೇಶ್ ಅಸಂಘಟಿತ ಕಾರ್ಮಿಕರ ವಿವಿಧ ವಿಷಯಗಳ ಕುರಿತು ವಿಷಯ ಮಂಡನೆ ಮಾಡಿ ಮಾತನಾಡಿದರು. ಉದ್ಘಾಟನಾ ಸಭೆಯ ಅಧ್ಯಕ್ಷತೆಯನ್ನು ಸಿಐಟಿಯು ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ ಅಧ್ಯಕ್ಷ ಕೆ.ಪ್ರಕಾಶ್ ಅ ಧ್ಯಕ್ಷತೆ ವಹಿಸಿದ್ದರು. ವಿಚಾರ ಗೋಷ್ಠಿ ಅಧ್ಯಕ್ಷತೆಯನ್ನು ಆಟೋರಿಕ್ಷಾ ಚಾಲಕರ ಸಂಘದ ಕಾರ್ಯಾ ಧ್ಯಕ್ಷ ಬಿ.ರಾಜಶೇಖರ ಮೂರ್ತಿ ವಹಿಸಿದ್ದರು. ಸಿಐಟಿಯು ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ.ಎನ್.ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸಮ್ಮ ಮತ್ತು ಬಿ.ವಿ ರಾಘವೇಂದ್ರ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಬಿ.ಎನ್.ರಘು ಮತ್ತು ಡಿ.ಮಹದೇಶ್ ಸ್ವಾಗತ ಮಾಡಿದರೆ ಸೆಲ್ವಿ ಹಾಗು ರುದ್ರಮೂರ್ತಿ ವಂದನಾರ್ಪಣೆ ಮಾಡಿದರು.   

- ಲಿಂಗರಾಜು