`ನನ್ನ ತಂದೆಯನ್ನು ಕೊಂದದ್ದು ಯುದ್ಧವೇ ಹೊರತು ಪಾಕಿಸ್ಥಾನವಲ್ಲ' ಆ ಹುಡುಗಿ ನಿಜವಾಗಿಯೂ ಹೇಳಲು ಹೊರಟಿದ್ದು ಇಷ್ಟೇ

ಸಂಪುಟ: 
11
ಸಂಚಿಕೆ: 
11
Sunday, 5 March 2017

ಈಗ ಚರ್ಚೆಗೆ ಗ್ರಾಸವಾಗಿರುವ ಆ ಒಂದು ಚಿತ್ರ ಸುಮಾರು 4.20 ನಿಮಿಷಗಳಿಷ್ಟಿರುವ ವಿಡಿಯೋ ಒಂದರ ತುಣುಕು ಮಾತ್ರ. ಯುದ್ಧದ ಕೆಡುಕನ್ನು ಸಾರುವ ಒಂದು ಸಂದೇಶವುಳ್ಳ ವಿಡಿಯೋ ಇದಾಗಿದ್ದು ತಾನು ಎರಡು ವರ್ಷ ಪ್ರಾಯದ ಹಸುಳೆಯಾಗಿದ್ದಾಗಲೇ ಯುದ್ಧದದಲ್ಲಿ ತನ್ನ ತಂದೆಯನ್ನು ಕಳೆದುಕೊಂಡ ನೋವನ್ನು ಮೌನವಾಗಿ ಪೋಸ್ಟರ್ ಬರಹಗಳ ಮೂಲಕ ಈ ವಿಡಿಯೋದುದ್ದಕ್ಕೂ ಕೌರ್ ಪ್ರದರ್ಶಿಸುತ್ತಾ ಹೋಗುತ್ತಾಳೆ.

ಈ ವಿಡಿಯೋವನ್ನು ಈ ಯೂ ಟ್ಯೂಬ್ ತಾಣದಲ್ಲಿ ನೋಡಬಹುದು.

https://www.youtube.com/watch?v=edkYYQLMC8M

ಗುರ್ ಮೆಹರ್ ಕೌರ್ ಭಾವನೆಗಳ ಕನ್ನಡಾನುವಾದ...
-    ಹಾಯ್
-    ನನ್ನ ಹೆಸರು ಗುರ್ ಮೆಹರ್ ಕೌರ್
-    ನಾನು ಭಾರತದ ಜಲಂಧರ್ ನವಳು
-    ಇವರು ನನ್ನ ತಂದೆ ಕ್ಯಾ|ಮನ್ದೀಪ್ ಸಿಂಗ್ (ತಂದೆಯ ಭಾವಚಿತ್ರವನ್ನು ತೋರಿಸುತ್ತಾಳೆ)
-    ಇವರು 1999ರ ಕಾರ್ಗಿಲ್ ಯುದ್ಧದಲ್ಲಿ ಕೊಲ್ಲಲ್ಪಟ್ಟರು (ಪೋಸ್ಟರ್ನಲ್ಲಿ ಆಕೆ Killed ಎಂಬ ಶಬ್ದವನ್ನೇ ಬಳಸಿದ್ದಾಳೆ)
-    ಅವರು ಸಾಯುವ ಸಂದರ್ಭದಲ್ಲಿ ನಾನು ಎರಡು ವರ್ಷ ಪ್ರಾಯದವಳಾಗಿದ್ದೆ. ಅವರ ಕುರಿತಾಗಿ ನನ್ನ ನೆನಪು ತುಂಬಾ ಕ್ಷೀಣವಾಗಿದೆ.
-    ಆದರೆ ತಂದೆಯೇ ಇಲ್ಲದಿರುವ ನೋವಿಗೆ ಸಂಬಂಧಿಸಿದಂತೆ ನನ್ನಲ್ಲಿ ಸಾಕಷ್ಟು ನೆನಪುಗಳಿವೆ!
-    ನನ್ನ ತಂದೆಯನ್ನು ಕೊಂದವರು ಎಂಬ ಕಾರಣಕ್ಕಾಗಿ ನಾನು ಪಾಕಿಸ್ಥಾನವನ್ನು ಹಾಗೂ ಪಾಕಿಸ್ಥಾನೀಯರನ್ನು ನಾನೆಷ್ಟು ದ್ವೇಷಿಸುತ್ತಿದ್ದೆ ಎಂಬುದೂ ಸಹ ನನಗೆ ಚೆನ್ನಾಗಿ ನೆನಪಿದೆ.
-    ಮಾತ್ರವಲ್ಲದೆ ನಾನು ಮುಸ್ಲಿಂರನ್ನೂ ಸಹದ್ವೇಷಿಸುತ್ತಿದ್ದೆ ಯಾಕೆಂದರೆ ಎಲ್ಲಾ ಮುಸ್ಲಿಂರು ಪಾಕಿಸ್ಥಾನೀಯರೆಂದೇ ನಾನು ತಿಳಿದಿದ್ದೇ.
-    ನಾನು 6 ವರ್ಷ ಪ್ರಾಯದವಳಿದ್ದಾಗ ಬುರ್ಖಾ ಧರಿಸಿ ಓಡಾಡುತ್ತಿದ್ದ ಓರ್ವ ಮಹಿಳೆಯನ್ನು ನಾನು ಇರಿಯಲು ಪ್ರಯತ್ನಿಸಿದ್ದೇ!
-    ಯಾಕೆಂದರೆ ಕೆಲವೊಂದು ವಿಚಿತ್ರ ಕಾರಣಗಳಿಗಾಗಿ ಆಕೆ ನನ್ನ ತಂದೆಯ ಸಾವಿಗೆ ಕಾರಣಳು ಎಂದು ನಾನು ಭಾವಿಸಿದ್ದೆ.
-    ಆಗ ನನ್ನ ತಾಯಿ ನನ್ನನ್ನು ತಡೆದು, ಪಾಕಿಸ್ಥಾನ ನನ್ನ ತಂದೆಯನ್ನು ಕೊಲ್ಲಲಿಲ್ಲ, ಯುದ್ಧ ಅವರನ್ನು ಕೊಂದಿತು ಎಂಬ ವಿಷಯ ನನಗೆ ಅರ್ಥವಾಗುವಂತೆ ಮಾಡಿದರು.
-    ಆದರೆ ಇದು ಅರ್ಥವಾಗಲು ನನಗೆ ಸ್ವಲ್ಪ ಸಮಯ ಹಿಡಿಯಿತು, ಆದರೆ ಇವತ್ತು ನನ್ನ ಮನಸ್ಸಿನಲ್ಲಿದ್ದ ದ್ವೇಷ ಭಾವನೆಯನ್ನು ನಾನು ಹೋಗಲಾಡಿಸಿದ್ದೇನೆ.
-    ಈ ರೀತಿ ಯೋಚಿಸುವುದು ಸುಲಭವಲ್ಲ ಆದರೆ ಇದು ಕಷ್ಟಕರವೂ ಅಲ್ಲ
-    ನಾನು ಹೀಗೆ ಮಾಡಬಹುದು ಎಂದಾದರೆ, ನೀವು ಸಹ ಹೀಗೆ ಮಾಡಬಹುದು.
-    ಇವತ್ತು, ನಾನು ನನ್ನ ತಂದೆಯ ಹಾಗೆಯೇ ಓರ್ವ ಯೋಧಳಾಗಿದ್ದೇನೆ.
-    ಭಾರತ ಮತ್ತು ಪಾಕಿಸ್ಥಾನದ ನಡುವೆ ಶಾಂತಿಗಾಗಿ ನಾನು ಹೋರಾಡುತ್ತಿದ್ದೇನೆ.
-    ಯಾಕೆಂದರೆ, ಒಂದುವೇಳೆ ನಮ್ಮ ನಡುವೆ ಯುದ್ಧ ನಡೆಯದೇ ಇರುತ್ತಿದ್ದಲ್ಲಿ ಇವತ್ತು ನನ್ನ ತಂದೆ ಬದುಕಿರುತ್ತಿದ್ದರು!
-    ನಾನು ಈ ವಿಡಿಯೋವನ್ನು ಮಾಡುತ್ತಿರುವ ಉದ್ದೇಶವೇನೆಂದರೆ ಎರಡೂ ದೇಶಗಳ ಸರಕಾರಗಳು ನಟನೆಯನ್ನು ನಿಲ್ಲಿಸಬೇಕು...
-    ಮತ್ತು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು.
-    2 ವಿಶ್ವಯುದ್ಧಗಳ ಬಳಿಕ ಫ್ರಾನ್ಸ್ ಮತ್ತು ಜರ್ಮನಿ ಮಿತ್ರರಾಷ್ಟ್ರಗಳಾಗಲು ಸಾಧ್ಯವೆಂದಾದರೆ...
-    ಜಪಾನ್ ಮತ್ತು ಅಮೆರಿಕಾ ತಮ್ಮ ನಡುವಿನ ದ್ವೇಷವನ್ನು ಮರೆತು ಪ್ರಗತಿಗಾಗಿ ಒಗ್ಗೂಡಲು ಸಾಧ್ಯವಿದೆಯೆಂದಾದರೆ...
-    ನಾವ್ಯಾಕೆ ಒಂದಾಗಲು ಸಾಧ್ಯವಿಲ್ಲ...??
-    ಭಾರತ ಮತ್ತು ಪಾಕಿಸ್ಥಾನದ ಸಾಮಾನ್ಯ ಪ್ರಜೆಗಳು ಶಾಂತಿಯನ್ನು ಬಯಸುತ್ತಾರೆ... ಯುದ್ಧವನ್ನಲ್ಲ.
-    ಎರಡೂ ರಾಷ್ಟ್ರಗಳ ರಾಜಕೀಯ ನಾಯಕತ್ವದ ಇಚ್ಛಾಶಕ್ತಿಯನ್ನು ನಾನು ಪ್ರಶ್ನಿಸುತ್ತಿದ್ದೇನೆ.
-    ತೃತೀಯ ದರ್ಜೆಯ ನಾಯಕತ್ವದಡಿಯಲ್ಲಿ ವಿಶ್ವದ ಬಲಿಷ್ಠ ರಾಷ್ಟ್ರವಾಗುವ ಕನಸನ್ನು ನಾವು ಕಾಣುವುದಕ್ಕೆ ಸಾಧ್ಯವಿಲ್ಲ.
-    ದಯವಿಟ್ಟು ಇಚ್ಛಾಶಕ್ತಿಯನ್ನು ಪ್ರದರ್ಶಿಸಿ ಪರಿಣಾಮಕಾರಿ ಮಾತುಕತೆಯಲ್ಲಿ ತೊಡಗಿಸಿಕೊಳ್ಳಿ ಮತ್ತು ಸಮಸ್ಯೆಯನ್ನು ಪರಿಹರಿಸಿ
-    ಸರಕಾರಿ ಪ್ರಾಯೋಜಿತ ಭಯೋತ್ಪಾದನೆ ಕೊನೆಗೊಳ್ಳಲಿ...
-    ಸರಕಾರಿ ಪ್ರಾಯೋಜಿತ ಗೂಢಚಾರಿಕೆ ನಿಲ್ಲಲಿ...
-    ಸರಕಾರಿ ಪ್ರಾಯೋಜಿತ ದ್ವೇಷ ಅಂತ್ಯವಾಗಲಿ...
-    ಎರಡೂ ಕಡೆಯ ಗಡಿಗಳಲ್ಲಿ ಜನರು ಸಾಯುವುದು ಇನ್ನು ಸಾಕು.
-    ಎಲ್ಲವೂ ಕೊನೆಯಾಗಲಿ...!
-    ತನ್ನ ತಂದೆಯನ್ನು ಕಳೆದುಕೊಂಡ ಇನಷ್ಟು ಗುರ್ ಮೆಹರ್ ಕೌರ್ ಇಲ್ಲದ ಜಗತ್ತಿನಲ್ಲಿ ನಾನು ವಾಸಿಸಲು ಬಯಸುತ್ತಿದ್ದೇನೆ.
-    ಇದು ನನ್ನೊಬ್ಬಳ ನೋವಿನ ಕಥೆಯಲ್ಲ ; ನನ್ನಂತೆ ಅನೇಕರು ಇದೇ ರೀತಿಯ ನೋವನ್ನು ಅನುಭವಿಸುತ್ತಿದ್ದಾರೆ.
-    ಶಾಂತಿಗಾಗಿ ಧ್ವನಿಗೂಡಿಸೋಣ ; ಒಂದಾಗೋಣ...
-    ನೀವೂ ಶಾಂತಿಯನ್ನು ಬಯಸುವವರಾಗಿದ್ದಲ್ಲಿ ಈ ವಿಡಿಯೋವನ್ನು ಶೇರ್ ಮಾಡಿ...
... ಎಂಬಲ್ಲಿಗೆ ಈ ವಿಡಿಯೋ ಮುಕ್ತಾಯ ಗೊಳ್ಳುತ್ತದೆ.

ಈ ಪ್ರಕರಣದಲ್ಲಿ ಗುರ್ ಮೆಹರ್ ಕೌರ್ ಮಾಡಿದ ತಪ್ಪಾದರೂ ಏನು ಎಂಬುದನ್ನು ನಾಡಿನ ಪ್ರಜ್ಞಾವಂತ ನಾಗರಿಕರೇ ನಿರ್ಧರಿಸಬೇಕಷ್ಟೇ...!