ಫ್ಯಾಸಿಸಂನ ನೈಜ ಮುಖ ಅನಾವರಣ

ಸಂಪುಟ: 
11
ಸಂಚಿಕೆ: 
11
date: 
Sunday, 5 March 2017

ಆರ್.ಎಸ್.ಎಸ್. ಹಾಗೂ ಸರ್ಕಾರದ ನೇರವಾದ ಆದೇಶದೊಂದಿಗೆ ಬಲಪಂಥೀಯ ವಿದ್ಯಾರ್ಥಿ ಸಂಘಟನೆಯು ಈಗ ಮುಕ್ತವಾದ ಹಿಂಸಾಚಾರವೂ ತೊಡಗಿದೆ. ಯಾವ ಮುಚ್ಚುಮರೆ ಇಲ್ಲದೆ ವಿದ್ಯಾರ್ಥಿಗಳನ್ನು ಮಾತ್ರವಲ್ಲ ವಿದ್ಯಾರ್ಥಿನಿಯರನ್ನು ಹಾಗೂ ಶಿಕ್ಷಕರನ್ನು ಅದು ಥಳಿಸುತ್ತದೆ. ಈ ಹಿಂಸೆ ಹಾಗೂ ಅಸಹನೆಗಳ ಮಧ್ಯೆ ಒಂದು ಬೆಳಕಿನ ಕಿರಣವೆಂದರೆ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಸೈನಿಕರೊಬ್ಬರ ಮಗಳಾದ ಗುರ್‍ಮೆಹರ್ ಕೌರ್ ಎನ್ನುವ್ ವಿದ್ಯಾರ್ಥಿನಿಯು ಮಾಡಿದ ಪ್ರತಿಭಟನೆ. ನಾಲ್ಕು ವರ್ಷಗಳಿಂದ ಸಾಹಿತ್ಯವನ್ನು ಕಲಿಸುತ್ತ ಬಂದಿರುವ ನನಗೆ ಯುದ್ಧದ ವಿರುದ್ಧ, ಶಾಂತಿಯ ಪರವಾಗಿ ಹೀಗೆ ಮನಕಲುಕುವ ಮಾತುಗಳು, ಅದೂ ಅಪ್ಪನನ್ನೂ ಕಳೆದುಕೊಂಡ ಮಗಳಿಂದ ಬಂದಿರುವ ಇನ್ನೊಂದು ಉದಾಹರಣೆ ನೆನಪಾಗುತ್ತಿಲ್ಲ. ಅವಳು ತೋರಿಸುವ ವಿಡಿಯೋವನ್ನು ದೇಶದ ಯುವ ಮನಸ್ಸುಗಳು ನೋಡಲೇಬೇಕು.

ಮತ್ತೆ ಭಾರತದ ವಿಶ್ವವಿದ್ಯಾಲಯ, ಕಾಲೇಜುಗಳು ಪ್ರಕ್ಷುಬ್ಧಗೊಂಡಿವೆ. ಅಧಿಕಾರದಲ್ಲಿರುವ ಬಲಪಂಥೀಯ ಸರ್ಕಾರವು ಮತ್ತು ಪಕ್ಷದ ಸಂಘಟನೆಗಳು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಖಂಡನೆ ಹಾಗೂ ವೈಚಾರಿಕತೆಗಳ ವಿರುದ್ಧ ತಮ್ಮ ಜಿಹಾದ್ ಅನ್ನು ಮುಂದುವರೆಸಿವೆ. ಮತ್ತೆ ಅದೇ ದೇಶದ್ರೋಹದ ನೆಪದ ಮೇಲೆ ಪ್ರಗತಿ ಪರ ಚಿಂತಕರು ಮಾತನಾಡದ ಹಾಗೆ ಕಾರ್ಯಕ್ರಮಗಳನ್ನು ನಿಲ್ಲಿಸಲಾಗುತ್ತಿದೆ. ಅವರನ್ನು ಆಹ್ವಾನಿಸುವ ಅಥವಾ ಬೆಂಬಲಿಸುವವರನ್ನು ಪೀಡಿಸಲಾಗುತ್ತಿದೆ. ಫ್ಯಾಸಿಸಂನ ನೈಜ ಮುಖವು ಅನಾವರಣಗೊಂಡಿದೆ. ಆರ್.ಎಸ್.ಎಸ್. ಹಾಗೂ ಸರ್ಕಾರದ ನೇರವಾದ ಆದೇಶದೊಂದಿಗೆ ಬಲಪಂಥೀಯ ವಿದ್ಯಾರ್ಥಿ ಸಂಘಟನೆಯು ಈಗ ಮುಕ್ತವಾದ ಹಿಂಸಾಚಾರದಲ್ಲಿ ತೊಡಗಿದೆ. ಯಾವ ಮುಚ್ಚುಮರೆ ಇಲ್ಲದೆ ವಿದ್ಯಾರ್ಥಿಗಳನ್ನು ಮಾತ್ರವಲ್ಲ ವಿದ್ಯಾರ್ಥಿನಿಯರನ್ನು ಹಾಗೂ ಶಿಕ್ಷಕರನ್ನು ಅದು ಥಳಿಸುತ್ತದೆ. ‘ದಿ ವೈರ್’ ಎನ್ನುವ ವೆಬ್ ಪತ್ರಿಕೆಯಲ್ಲಿ ಈ ಸಂಘಟನೆಯ ಬೆಂಬಲಿಗ ವಿದ್ಯಾರ್ಥಿಯೊಬ್ಬನು ತಾವು ಶಿಕ್ಷಕರನ್ನು ಹಿಡಿದು ಥಳಿಸಿದ ಬಗ್ಗೆ ಗೆಳೆಯರೊಂದಿಗೆ ಕೊಚ್ಚಿ ಕೊಂಡ ಸಂಭಾಷಣೆಯನ್ನು ಮೊಬೈಲ್ ಮೂಲಕ ಧ್ವನಿಮುದ್ರಣ ಮಾಡಿಕೊಂಡು ಅದರ ಲಿಖಿತ ವರದಿಯನ್ನು ಇಂಗ್ಲಿಷ್ ಅನುವಾದದ ಜೊತೆಗೆ ಪ್ರಕಟಿಸಲಾಗಿದೆ. ಇದನ್ನು ಕರ್ನಾಟಕದ ಪ್ರತಿಯೊಬ್ಬ ವಿದ್ಯಾರ್ಥಿ ವಿದ್ಯಾರ್ಥಿನಿಯರು ಓದಲೇಬೇಕು. ಹುಸಿ ರಾಷ್ಟ್ರಪ್ರೇಮದ ಹೆಸರಿನಲ್ಲಿ ಹಿಂಸೆಯನ್ನು ಹೇಗೆ ಬಳಸಿಕೊಳ್ಳಲಾಗುತ್ತಿದೆ ಎಂಬುದನ್ನು ಅರಿಯಬೇಕಾಗಿದೆ. ಈ ಸಂಭಾಷಣೆಯಲ್ಲಿ ತಾವುಗಳು ಹಿಂಸೆಯಲ್ಲಿ ತೊಡಗಿದಾಗ, ಮಾಧ್ಯಮದವರು ಇಲ್ಲದಿದ್ದರೆ ಪೊಲೀಸರು ತಮಗೆ ಮುಕ್ತ ಅವಕಾಶಗಳನ್ನು ಕೊಡುತ್ತಾರೆ ಎನ್ನುವುದನ್ನು ಸ್ವಷ್ಟವಾಗಿ ಹೇಳಲಾಗಿದೆ.

ಇದೆಲ್ಲ ನಡೆದದ್ದು ದೆಹಲಿ ವಿಶ್ವವಿದ್ಯಾಲಯದ ರಾಮಜಸ ಕಾಲೇಜಿನಲ್ಲಿ, ಜೆ.ಎನ್.ಯು.ನ ಇಬ್ಬರು ವಿದ್ಯಾರ್ಥಿ ಧುರೀಣರನ್ನು ಕಾಲೇಜಿನ ಇಂಗ್ಲಿಷ್ ವಿಭಾಗವು ಒಂದು ವಿಚಾರ ಸಂಕಿರಣಕ್ಕೆ ಆಹ್ವಾನಿಸುವ ಕಾರಣಕ್ಕಾಗಿ ದೊಂಬಿ, ಗಲಾಟೆ ಮಾಡಿ ಅದನ್ನು ನಿಲ್ಲಿಸಲಾಯಿತು. ಇದನ್ನು ವಿರೋಧಿಸಿದ ವಿದ್ಯಾರ್ಥಿ ಹಾಗೂ ಶಿಕ್ಷಕರನ್ನು ಥಳಿಸಲಾಯಿತು. ಬೂಟುಗಾಲಿನಲ್ಲಿ ಇಂಗ್ಲಿಷ್ ವಿಭಾಗದ ಶಿಕ್ಷಕರೊಬ್ಬರ ಹೊಟ್ಟೆಗೆ ಒದ್ದಿದ್ದರಿಂದ ಅವರು ಪಜ್ಞೆ ತಪ್ಪಿ ಬೀಳುವಂತಾಯಿತು. ಎನ್ನುವುದನ್ನು `ದಿ ಹಿಂದೂ’ ಪತ್ರಿಕೆಯು ವರದಿಮಾಡಿದೆ. ಮಹಿಳೆಯರನ್ನೂ ಥಳಿಸಿರುವ ವೀಡಿಯೋಗಳನ್ನು ಯಾರಾದರೂ ಸಾಮಾಜಿಕ ತಾಣದಲ್ಲಿ ನೋಡಬಹುದಾಗಿದೆ.

ಇವರು ಮೊದಲು ರಾಜಸ್ಥಾನದ ಜೋಧಪುರದ ಜೈ ನಾರಾಯಣ್ ವ್ಯಾಸ್ ವಿಶ್ವವಿದ್ಯಾಲಯದಲ್ಲಿ ಜೆ.ಎನ್.ಯು. ನ ಪ್ರಸಿದ್ಧ ಚಿಂತಕಿ ನಿವೇದಿತಾ ಮೆನನ್ ದೇಶದ್ರೋಹದ ಮಾತುಗಳನ್ನು ಆಡಿದರು ಎನ್ನುವ ಸುಳ್ಳು ಆರೋಪದ ಮೇಲೆ ಅವರನ್ನು ಆಹ್ವಾನಿಸಿದ ರಾಜಶ್ರೀ ರಣವತ್ ಎನ್ನುವ ಶಿಕ್ಷಕಿಯನ್ನು ಕೆಲಸದಿಂದ ಸಸ್ಪೆಂಡ್ ಮಾಡಲಾಯಿತು. ಕಾರಣವೆಂದರೆ ಇದೇ ವಿದ್ಯಾರ್ಥಿ ಸಂಘಟನೆಯು ದೂರನ್ನು ಸಲ್ಲಿಸಿತ್ತು. ಆ ಶಿಕ್ಷಕಿಯ ವಿರುದ್ಧ ಮಾನಭಂಗ ಮಾಡುವ, ಹೊಡೆಯುವ ಬೆದರಿಕೆ ಸಂದೇಶಗಳನ್ನು ಕಳುಹಿಸಿತು. ಎಂದಿನಂತೆ ನಮ್ಮ ಪುರುಷ ಕೇಸರಿಗಳು, ಮರಿಸಿಂಹಗಳು, ಹೆಂಗಸರನ್ನು ಬೆದರಿಸಿ ತಮ್ಮ ಅದ್ವೀತಿಯ ಶೌರ್ಯವನ್ನು ಸಾಮಾಜಿಕ ತಾಣದಲ್ಲಿ ಮೆರೆದಿವೆ. ವಿಶೇಷವೆಂದರೆ ಹೀಗೆ ಬೆದರಿಕೆ ಸಂದೇಶ ಕಳಿಸಿದ ಜಾಲತಾಣಗಳಲ್ಲಿ ನಂ. 2, ಟ್ವೀಟರ್‍ಗಳನ್ನು ಫಾಲೋ ಮಾಡುವವರು ದೇಶದ ಅತ್ಯುನ್ನತ ಪದವಿಯಲ್ಲಿದ್ದಾರೆಂದು ಹೇಳಲಾಗುತ್ತಿದೆ. ಇದು ಮಾಹಿತಿ ತಂತ್ರಜ್ಞಾನದ ಯುಗವಾಗಿದ್ದರಿಂದ ಈ ಮಾತನ್ನೂ ಪರಿಶೀಲಿಸಿ ಅದರ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಬಹುದಾಗಿದೆ.

ಈ ಹಿಂಸೆ ಹಾಗೂ ಅಸಹನೆಗಳ ಮಧ್ಯೆ ಒಂದು ಬೆಳಕಿನ ಕಿರಣವೆಂದರೆ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಸೈನಿಕರೊಬ್ಬರ ಮಗಳಾದ ಗುರ್‍ಮೆಹರ್ ಕೌರ್ ಎನ್ನುವ್ ವಿದ್ಯಾರ್ಥಿನಿಯು ಮಾಡಿದ ಪ್ರತಿಭಟನೆ. ಎಂದಿನಂತೆ ಅವಳ ಮನಕಲಕುವ ಅದ್ಭುತವಾದ ಮಾತುಗಳನ್ನು ರಾಜಕೀಯದ ಕೆಸರಾಟದಲ್ಲಿ ಮುಳುಗಿಸಿ ಬಿಡಲಾಗಿದೆ. ಮಾತಿಲ್ಲದೇ, ತಾನೂ ಬರೆದಿರುವ ಅದ್ಭುತವಾದ ಮಾತುಗಳನ್ನು ಅವಳು ತೋರಿಸುವ ವಿಡಿಯೋವನ್ನು ದೇಶದ ಯುವ ಮನಸ್ಸುಗಳು ನೋಡಲೇಬೇಕು. ಬಲಪಂಥೀಯ ವಿದ್ಯಾರ್ಥಿ ಸಂಘಟನೆಯ ವಿರುದ್ಧ ಪ್ರತಿಭಟನೆಯ ವಿಡಿಯೋ ಇದಲ್ಲ, ಬದಲಾಗಿ ಕಾರ್ಗಿಲ್ ಯುದ್ಧದಲ್ಲಿ ತನ್ನ ಅಪ್ಪನನ್ನು ಕಳೆದುಕೊಂಡು ಬೆಳೆದ ಮಗುವಾಗಿದ್ದಾಗ ತಾನು ಹೇಗೆ ಪಾಕಿಸ್ತಾನವನ್ನು, ಎಲ್ಲಾ ಮುಸ್ಲಿಮ್‍ರನ್ನು ದ್ವೇಷಿಸುತ್ತಿದೆ. ಅವರ ಮೇಲೆ ಹಗೆ ಸಾಧಿಸಲು ಬಯಸಿದ್ದೆ ಎನ್ನುವುದನ್ನು ಅವಳು ಹೇಳಿಕೊಂಡಿದ್ದಾಳೆ. ಆದರೆ ಅವಳ ತಾಯಿ, ಗಂಡನನ್ನು ಕಳೆದುಕೊಂಡ ಸೈನಿಕನ ಪತ್ನಿ, ಅವಳಿಗೆ ತಿಳಿಹೇಳುತ್ತಾಳೆ. ತನ್ನ ತಂದೆಯನ್ನು ಕೊಂದಿದ್ದು ಇನ್ನೊಂದು ರಾಷ್ಟ್ರವಲ್ಲ, ಯುದ್ಧ ಎನ್ನುವುದನ್ನು ತಾಯಿಯಿಂದ ಅವಳು ಕಲಿಯುತ್ತಾಳೆ. ಯುದ್ಧಗಳನ್ನು ನಿಲ್ಲಿಸಿ, ದ್ವೇಷವನ್ನು ಬಿಡಿ ಎಂದು ಕೌರ್ ಈ ವಿಡಿಯೋದಲ್ಲಿ ಪ್ರಾರ್ಥಿಸುತ್ತಾಳೆ.

ನಾಲ್ಕು ವರ್ಷಗಳಿಂದ ಸಾಹಿತ್ಯವನ್ನು ಕಲಿಸುತ್ತ ಬಂದಿರುವ ನನಗೆ ಯುದ್ಧದ ವಿರುದ್ಧ, ಶಾಂತಿಯ ಪರವಾಗಿ ಹೀಗೆ ಮನಕಲುಕುವ ಮಾತುಗಳು, ಅದೂ ಅಪ್ಪನನ್ನೂ ಕಳೆದುಕೊಂಡ ಮಗಳೆಂದ ಬಂದಿರುವ ಇನ್ನೊಂದು ಉದಾಹರಣೆ ನೆನಪಾಗುತ್ತಿಲ್ಲ. ಇಂಥ ಯುವ ಮನಸ್ಸು ನಮ್ಮೊಂದಿಗೆ ಇದೆಯನ್ನುವುದು ನಮಗೊಂದು ಆಶಾಕಿರಣ. ಆದರೆ ನಮ್ಮ ಪುರುಷ ಸಿಂಹಗಳು ಕೌರ್ ಅವರನ್ನು ಪೀಡಿಸಿ ಅವಳನ್ನು ಮಾನಭಂಗ ಮಾಡುವ ಬೆದರಿಕೆಯನ್ನು ಕಳಿಸಿದವು. `ನಾನು ಹೇಳಬೇಕಾದದನ್ನು ಹೇಳಿದ್ದೇನೆ’ ಎಂದು ಅವಳು ಈಗ ಪ್ರತಿಭಟನೆಯಿಂದ ಹಿಂದೆ ಸರಿದಿದ್ದಾಳೆ. ಅಂದ ಹಾಗೆ ಅವಳ ಅತ್ಯಂತ ಮಾನವೀಯವಾದ ಮಾತುಗಳನ್ನು ಭೂಗತ ಕೊಲೆಗಾರ ದಾವೂದ್ ಇಬ್ರಾಹಿಮ್‍ನನೊಂದಿಗೆ ಹೋಲಿಸಿ ಸಂದೇಶವನ್ನೂ ಕಳಿಸಿದವರಲ್ಲಿ ಒಬ್ಬರು ಕರ್ನಾಟಕದ ಜನಪ್ರತಿನಿಧಿ! ಆಹಾ ನಮ್ಮ ಪುರುಷ ಕೇಸರಿಗಳು! ಮಗುವಿನಂಥ ಮುಗ್ಧವಾದ ಇವರುಗಳ ಮನಸ್ಸಿನಲ್ಲಿ ವಿಷವನ್ನು ಬಿತ್ತುತ್ತಿರುವವರು ಯಾರು ಎನ್ನುವುದು ನನಗೆ ತಿಳಿಯದಾಗಿದೆ.

ನಾವು ಚರಿತ್ರೆಯಿಂದ ಕಲಿಯಬೇಕಿದೆ. ಜರ್ಮನಿಯಲ್ಲಿ ನಾಜಿ ಸಿದ್ಧಾಂತದ ಮೂಲಕ ಅಧಿಕಾರಕ್ಕೆ ಬಂದವರು ಮಾಡಿದ ಮೊದಲ ಕೆಲಸಗಳಲ್ಲಿ ಒಂದು ಪುಸ್ತಕಗಳನ್ನು, ಗ್ರಂಥಗಳನ್ನು ಸುಡುವುದು. 1930 ರ ದಶಕದಲ್ಲಿ ಜರ್ಮನ್ ವಿದ್ಯಾರ್ಥಿ ಸಂಘಟನೆಯು ಆಸ್ಟ್ರಿಯಾದಲ್ಲಿ ಸಾರ್ವಜನಿಕವಾಗಿ ಪುಸ್ತಕಗಳನ್ನು ಬೆಂಕಿಗೆ ಹಾಕುವ ಕಾರ್ಯಕ್ರಮವನ್ನು ನಡೆಸಿತು. ನಾಝಿ ಸಿದ್ಧಾಂತದ ವಿರುದ್ಧದ ವಿಚಾರಗಳು ಇವುಗಳಲ್ಲಿವೆ ಎನ್ನುವ ಕಾರಣಕ್ಕಾಗಿ ಹಾಗೆ ಮಾಡಿತು.

ಆನಂತರ ಆಲ್ಬರ್ಟ ಐನ್‍ಸ್ಟೆನ್ ಸೇರಿದಂತೆ ಜರ್ಮನಿಯ ವಿಶ್ವವಿದ್ಯಾನಿಲಯಗಳು ಹಾಗೂ ಇತರ ಸಂಶೋಧನಾ ವಿಭಾಗಗಳಿಂದ ಯಹೂದಿ ವಿಜ್ಞಾನಿಗಳು, ಚಿಂತಕರು ಅಲ್ಲದೆ ಹಿಟ್ಲರ್‍ನ ವಿರುದ್ಧ ಆಲೋಚಿಸುವ ಸಾವಿರಾರು ಪ್ರತಿಭಾವಂತರು ದೇಶವನ್ನೇ ತೊರೆಯುವಂತೆ ಮಾಡಲಾಯಿತು. ತದನಂತರ ಮನುಷ್ಯ ಚರಿತ್ರೆಯಲ್ಲಿಯೇ ಭೀಕರವಾದ ಮಹಾಯುದ್ಧವು ನಡೆಯಿತು. ಯುದ್ಧದ ಸಂದರ್ಭದಲ್ಲಿ ಜರ್ಮನ್ ರಾಷ್ಟ್ರವನ್ನು “ಶುದ್ಧೀಕರಿಸುವುದಕ್ಕಾಗಿ” 6 ಲಕ್ಷ ಯಹೂದಿಗಳನ್ನು ಯಾತನಾ ಶಿಬಿರಗಳಲ್ಲಿ ಕೊಲ್ಲಲಾಯಿತು. ಅಂದ ಹಾಗೆ ಈ ಶುದ್ಧೀಕರಣವನ್ನು ಮೆಚ್ಚಿ ನಾವು ಹಾಗೆ ಮಾಡಬಾರದೆ ಎಂದು ಬರೆದವರು ಭಾರತದ ಬಲಪಂಥೀಯ ಸಂಘಟನೆಯ ಪ್ರಮುಖ ಚಿಂತಕರಲ್ಲಿ ಒಬ್ಬರು. ಕೆಡುಕಿನ ಶಕ್ತಿಗಳು ವಿಚಾರವಂತರಿರುವ ಸಂಸ್ಥೆಗಳಿಂದಲೇ ತಮ್ಮ ಹಿಂಸಾಯಾತ್ರೆಯನ್ನು ಆರಂಭಿಸುತ್ತವೆ ಎನ್ನುವುದು ಚರಿತ್ರೆಯ ಸತ್ಯವಾಗಿದೆ.

- ಪ್ರೊ. ರಾಜೇಂದ್ರ ಚೆನ್ನಿ