ಮಗಳಿಗೆ ಕಲಿಸಿ ಎಂದವರು, ಕಲಿತ ಮಗಳ ಬಾಯಿ ಮುಚ್ಚಿಸಿದರು

ಸಂಪುಟ: 
11
ಸಂಚಿಕೆ: 
11
Sunday, 5 March 2017

ಒಬ್ಬ ಮಗಳ ಬಾಯಿ ಮುಚ್ಚಿಸಿದರು, ಬಿಜೆಪಿ ಯಾವ ರೀತಿಯ ಭಾರತವನ್ನು ಕಟ್ಟ ಬಯಸುತ್ತಿದೆ?-ಇದು ಒಬ್ಬ ಪತ್ರಕರ್ತರ ಪ್ರಶ್ನೆ(ಓಂ ಥನ್ವಿ, ನಿವೃತ್ತ ಸಂಪಾದಕರು, ಜನಸತ್ತಾ).  ಕಳೆದ ವಾರದ ನಂತರ ಇದು ಬಹಳಷ್ಟು ಭಾರತೀಯರ ಮನದಲ್ಲಿ ಎದ್ದಿರುವ ಪ್ರಶ್ನೆ. ಪ್ರಧಾನಿಗಳು ‘ಬೇಟಿ ಬಚಾವೊ, ಬೇಟಿ ಪಢಾವೊ’(ಮಗಳನ್ನು ಉಳಿಸಿ, ಮಗಳಿಗೆ ಕಲಿಸಿ) ಎಂದರು. ಆದರೆ ಅವರ ‘ಪರಿವಾರ’ ಹಾಗೆ ಕಲಿತ ಮಗಳ ಬಾಯಿ ಮುಚ್ಚಿಸಿದರು, ಅವಳು ‘ಮನದ ಮಾತು’ ಹೇಳಿದರೆ ಸಾಯಿಸುತ್ತೇವೆ, ಮಾನಭಂಗ ಮಾಡುತ್ತೇವೆ ಎಂದು ಬೆದರಿಸಿದರು. ‘ಮನ ಕೀ ಬಾತ್’ ಈ ದೇಶದಲ್ಲಿ ಕೇವಲ ಪ್ರಧಾನ ಮಂತ್ರಿಗಳಿಗೆ ಮಾತ್ರ ಮೀಸಲಾಗಿರುವ ಹಕ್ಕೇ ಎಂಬ ಪ್ರಶ್ನೆಯನ್ನೂ ಅವರು ಎತ್ತಿದ್ದಾರೆ.

ದಿಲ್ಲಿಯ ಲೇಡಿ ಶ್ರೀರಾಮ್ ಕಾಲೇಜಿನ ವಿದ್ಯಾರ್ಥಿನಿ 20 ವರ್ಷದ ಗುರ್‍ಮೆಹರ್ ಕೌರ್‍ಳ “ ನಾನು ಎಬಿವಿಪಿಗೆ ಹೆದರುವುದಿಲ್ಲ” ವೀಡಿಯೋ ಪ್ರಜಾಪ್ರಭುತ್ವ ಮನೋಭಾವದ ವಿದ್ಯಾರ್ಥಿಗಳಲ್ಲಿ ಮಾತ್ರವಲ್ಲ, ಇತರೆಲ್ಲರಲ್ಲೂ ಹೊಸ ಹುರುಪು ಮೂಡಿಸಿದ್ದರೆ, ಅದಕ್ಕೆ  ‘ಸಂಘ ಪರಿವಾರ’ದ ಪ್ರತಿಕ್ರಿಯೆಗಳು ಅವರ ನಿಜ ‘ಸಂಸ್ಕøತಿ’ಯನ್ನು  ದೇಶದ ಮುಂದೆ ಮತ್ತೊಮ್ಮೆ ಬಯಲಿಗೆ ತಂದಿವೆ. 

ಎಬಿವಿಪಿ ಮತ್ತು  ಇತರ ಕೇಸರಿ ಟ್ವೀಟ್‍ಪಡೆಗಳ ಹೊಲಸು ಪ್ರತಿಕ್ರಿಯೆಗಳು, ಬೆದರಿಕೆಗಳು ಈಗ ಎರಡೂವರೆ ವರ್ಷಗಳ ಅನುಭವಗಳ ನಂತರ  ಬಹಳ ಮಂದಿಗೆ ಅನಿರೀಕ್ಷಿತವಾಗಿರಲ್ಲಿಲ್ಲ. ಆದರೆ ಅಂತಹ ಹೊಲಸು ಪ್ರತಿಕ್ರಿಯೆಗಳಿಗೆ ಆಳುವ ಪಕ್ಷದ ಮುಖಂಡರುಗಳಿಂದ ದೊರೆತ ಪೋಷಣೆ ಇನ್ನೂ ಹಲವರಲ್ಲಿ ಉಳಿದಿದ್ದ  ಭ್ರಮೆಯನ್ನೂ ಹರಿಸಿದಂತೆ ಕಾಣುತ್ತದೆ.

ಒಬ್ಬ ಯುವತಿಗೆ ಮಾನಭಂಗದ ಬೆದೆರಿಕೆ ಒಡ್ಡಿದಾಗಲೂ ಆ ಬಗ್ಗೆ ತುಟಿಪಿಟಕ್ಕೆನ್ನದೆ ಆಕೆಯನ್ನು ಅಪಹಾಸ್ಯ ಮಾಡುವ ಮಟ್ಟಕ್ಕೆ ಕೇಂದ್ರದ ಜವಾಬ್ದಾರಿಯುತ ಮಂತ್ರಿಗಳು ಮತ್ತು ಕರ್ನಾಟಕದ ಒಬ್ಬ ಎಂಪಿ ಮಹಾಶಯ ಇಳಿದದ್ದು ಅವರೇ ಈ ‘ಸಂಸ್ಕøತಿ’ಯ ಪ್ರತಿಪಾದಕರು ಎಂಬುದನ್ನು ಸಾಬೀತು ಮಾಡಿದೆ ಎಂಬ ಭಾವನೆ ಉಂಟಾಗುವಂತೆ ಮಾಡಿದ್ದರೆ ಆಶ್ಚರ್ಯವೇನು?

ಸ್ವತಃ ಕಾರ್ಗಿಲ್ ಕಾಳಗದಲ್ಲಿ ಹುತಾತ್ಮರಾದ ಸೈನ್ಯಾಧಿಕಾರಿಯ ಮಗಳಾದ ಗುರ್‍ಮೆಹರ್ ಕೌರ್ ಒಂದು ವರ್ಷದ ಹಿಂದೆ ಭಾರತ-ಪಾಕಿಸ್ತಾನದ ನಡುವೆ ವೈಷಮ್ಯ ಬೇಡ, ಮೈತ್ರಿ ಬೆಳೆಯಲಿ ಎಂದು ಸಾಮಾಜಿಕ ಮಾಧಯಮದಲ್ಲಿ ಅಪ್‍ಲೋಡ್ ಮಾಡಿದ ವಿಡಿಯೋವನ್ನು ಈಗ ಬಳಸಿರುವುದು ಈ ಪಡೆಗಳ ನಿಜ ಚಾರಿತ್ರ್ಯವನ್ನು ಎತ್ತಿ ತೋರಿದೆ ಎಂಬದೀಗ ಸಾಮಾನ್ಯವಾಗಿ ಎಲ್ಲರೂ ಸ್ವೀಕರಿಸಿರುವ ವಿಶ್ಲೇಷಣೆ.(ಈ ವಿಡಿಯೋದ ಪೂರ್ಣ ಪಾಟವನ್ನು ಈ ಸಂಚಿಕೆಯ ಪುಟ 7ರಲ್ಲಿ ನೋಡಿ)

ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಈ ಗಂಭೀರ ವಿಡಿಯೋ ಸರಣಿಯಲ್ಲಿ ಈ ‘ಪರಿವಾರದ’ ಮಂದಿಗೆ ಕಾಣಿಸುವುದು “ನನ್ನ ತಂದೆಯನ್ನು ಕೊಂದದ್ದು  ಪಾಕಿಸ್ತಾನ ಅಲ್ಲ,, ಯುದ್ಧ ಅವರನ್ನು ಕೊಂದದ್ದು” ಎಂಬ ವಾಕ್ಯ ಮಾತ್ರ. ಇದು ಅವರ ‘ರಾಷ್ಟ್ರಪ್ರೇಮ’ದ ನಿರೂಪಣೆಯ ಪ್ರಕಾರ ಮಹಾಪರಾಧ ತಾನೇ?

ಕೇಂದ್ರ ಗೃಹ ರಾಜ್ಯಮಂತ್ರಿ ಯಾರು ಈ ಹುಡುಗಿಯ ತಲೆ ಕೆಡಿಸಿರುವವರು ಎಂದು ಪ್ರತಿಕ್ರಿಯಿಸಿದರು. ಪ್ರಖ್ಯಾತ ಕ್ರಿಕೆಟಿಗ  ವೀರೇಂದ್ರ ಸೆಹ್ವಾಗ್ “ಎರಡು ಟ್ರಿಪಲ್ ಸೆಂಚುರಿ ಹೊಡದದ್ದು ನಾನಲ್ಲ, ನನ್ನ ಬ್ಯಾಟ್” ಎಂದು ಅಪಹಾಸ್ಯ ಮಾಡಿ ತಮ್ಮ ಜಾಣ್ಮೆ ಮೆರೆದರು. ಬಾಲಿವುಡ್ ನಟನೊಬ್ಬ “ಈ ಬಡಹುಡುಗಿ ದಾಳವಾಗಿದ್ದಾಳೆ’ ಎಂದು ತನ್ನ ರಾಜಕೀಯ ಜ್ಞಾನ ಪ್ರದರ್ಶಿಸಿದರು. ನಮ್ಮ ರಾಜ್ಯದ ಎಂಪಿಯಂತೂ ಆಕೆಯನ್ನು ದಾವೂದ್ ಇಬ್ರಾಹಿಂನೊಂದಿಗೆ ಹೋಲಿಸಿ ಸಂಭ್ರಮಿಸಿದ್ದಾರೆ.

ನಮ್ಮ ದೇಶ ಇಂತಹ ಮಟ್ಟಕ್ಕೆ ಬಂದಿದೆಯೇ ಎಂದು ಎನ್‍ಡಿಟಿವಿಯ ಕಾರ್ಯಕಾರಿ ಸಂಪಾದಕಿ ಮತ್ತು ಒಂದು ಪ್ರಮುಖ ಕಾರ್ಯಕ್ರಮವನ್ನು ನಡೆಸಿ ಕೊಡುತ್ತಿರುವ ಪ್ರಖ್ಯಾತ ಪತ್ರಕರ್ತೆ ನಿಧಿ ರಜ್ದಾನ್ ಬೇಸರದಿಂದ ಹೇಳುತ್ತಾರೆ. ಒಬ್ಬ 20ವರ್ಷದ ಹುಡುಗಿಯ ಅಭಿಪ್ರಾಯ ಆಕೆಯ ಇಮ್ಮಡಿಗಿಂತಲೂ ಹೆಚ್ಚು ವಯಸ್ಸಾಗಿರುವ ಈ ಪುರುಷರನ್ನು ಇಷ್ಟೊಂದು ಅಲುಗಾಡಿಸಿದೆಯೇ, ಒಂದು ಕಾಲೇಜು ಹುಡುಗಿಯ ಅಭಿಪ್ರಾಯದ ಮೇಲೆ ದ್ವೇಷದ ಸುರಿಮಳೆ ಸುರಿಸಬೇಕಾಗಿರುವಷ್ಟು ಭಾರತ ನಾಜೂಕು ಸ್ಥಿತಿಯಲ್ಲಿದೆಯೇ ಎಂದು ಪ್ರಶ್ನಿಸಿರುವ ಅವರು ಈ ಇಡೀ ಚರ್ಚೆ ಭಾರತೀಯ ಪುರುಷನ ಮನೋಭಾವದ ಬಗ್ಗೆ ಬಹಳಷ್ಟು ಹೇಳುತ್ತದೆ ಎನ್ನುತ್ತಾರೆ.

ಕೇಂದ್ರ ಗೃಹರಾಜ್ಯಮಂತ್ರಿಯ ಅಡಿಯಲ್ಲಿ ದಿಲ್ಲಿ ಪೋಲೀಸ್ ಇದೆ, ಒಬ್ಬ ಯುವತಿಗೆ ಬಹಿರಂಗವಾಗಿ ಮಾನಭಂಗದ, ಕೊಲೆಯ ಬೆದರಿಕೆ ಬಂದಾಗ ತನ್ನ ಕೈಕೆಳಗಿನವರಿಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹೇಳುವ ಕರ್ತವ್ಯ ಮೊದಲು ನೆರವೇರಿಸಬೇಕಾದ ಈ ವ್ಯಕ್ತಿ ಇಂತಹ ಮಾತು ಹೇಳಿರುವುದು ಆಕೆಗೆ ಸ್ವಂತ ತಲೆಯೇ ಇಲ್ಲ, (ಇರಬಾರದು?) ಸ್ವಂತ ಅಭಿಪ್ರಾಯ ಹೊಂದುವಂತಿಲ್ಲ ಎಂದು ಭಾವಿಸಿದಂತಿದೆ ಎಂದು ಅವರು ಹೇಳುತ್ತಾರೆ.

ವಾಸ್ತವವಾಗಿ ಈ ಹುಡುಗಿಯ ಮೇಲೆ ಟೀಕೆಗಳ ಬಾಣಗಳನ್ನು ಎಸೆದವರಲ್ಲಿ ಹೆಚ್ಚಿನವರು ಭಾರತ-ಪಾಕಿಸ್ತಾನ ಸಂಬಂಧಗಳ ಕುರಿತಾದ ಆಕೆಯ ವೀಡಿಯೋವನ್ನು ಪೂರ್ಣವಾಗಿ ನೋಡಿಯೇ ಇರಲಿಕ್ಕಿಲ್ಲ ಎನ್ನುತ್ತಾರೆ ನಿಧಿ ರಜ್ದಾನ್. ಮಾನ್ಯ ಗೃಹರಾಜ್ಯಮಂತ್ರಿಗಳಂತೂ  ನೋಡಿಯೇ ಇಲ್ಲ ಎಂಬುದನ್ನು ಅವರೇ ಖಾತ್ರಿ ಮಾಡಿಕೊಂಡಿದ್ದಾರೆ. ನೋಡಿದ್ದರೆ ಈ ಹುಡುಗಿಯ ‘ತಲೆ ಕೆಡಿಸಿದವರು’ ಯಾರಾದರೂ ಇದ್ದರೆ ಅದು ಆಕೆಯ ತಾಯಿಯೇ ಎಂದು ಗೊತ್ತಾಗುತ್ತಿತ್ತು. ಈ ಸುದ್ದಿ ಬಂದಾಗ ‘ನಾನು ಮಣಿಪುರದಲ್ಲಿ ಚುನಾವಣಾ ಪ್ರಚಾರದಲ್ಲಿದ್ದೆ. ಆದ್ದರಿಂದ ನನಗದು ಗೊತ್ತಿಲ್ಲ. ಕೆಲವು ಪತ್ರಕರ್ತರು ಇದನ್ನು ನನ್ನ ಗಮನಕ್ಕೆ ತಂದರು, ಆಗ ನಾನು ಈಗ ಪಾಕಿಸ್ತಾನದೊಂದಿಗೆ ಯುದ್ಧ ನಡೆಯುತ್ತಿಲ್ಲವಲ್ಲ ಎಂದು ಹೇಳಿದೆ” ಎಂದು ಎನ್‍ಡಿಟಿವಿ ಸಂದರ್ಶನದಲ್ಲಿ ಹೇಳಿದರು. ‘ನಿಮಗೆ ಅರೆ ಮಾಹಿತಿ ಇರುವ ಒಂದು ವಿಷಯದ ಬಗ್ಗೆ ಹೇಗೆ ತಾನೇ ಹೀಗೆ ಟಿಪ್ಪಣಿ ಮಾಡಲು ಸಾಧ್ಯ?” ಎಂದು ಕೇಳಿದಾಗ ಅವರು ಹಾರಿಕೆಯ ಉತ್ತರ ನೀಡಿ ತಪ್ಪಿಸಿಕೊಂಡರು.

ಇದು ಎಡಪಂಥೀಯರು ಮತ್ತು ಬಲಪಂಥೀಯರ ನಡುವಿನ ಪ್ರಶ್ನೆ, ನಮ್ಮ ಸೈನಿಕರು ಸತ್ತಾಗ ಎಡಪಂಥೀಯರು ಸಂಭ್ರಮ ಪಡುತ್ತಾರೆ ಎಂದು ಮತ್ತೊಮ್ಮೆ ತಮ್ಮ ‘ಜ್ಞಾನ’ ಪ್ರದರ್ಶನ ನಡೆಸಿದರು.  ಇದು ಮತ್ತೊಂದು ಶುದ್ಧ ಸುಳ್ಳು ಎಂದು ಈಗ ಇಂತಹ ಮಂತ್ರಿಮಾನ್ಯರ, ಪುರುಷ ಸಿಂಹಗಳ ಬಾಯಿಗಳಿಂದ ಪುಂಖಾನುಪುಂಖವಾಗಿ ಬರುತ್ತಿರುವ ಮಾತುಗಳ(ಸುಳ್ಳುಗಳ) ಬಗ್ಗೆ ಬಹುಶಃ ಯಾರಿಗೂ ವಿವರಣೆ ನೀಡಬೇಕಾಗಿಲ್ಲ.

ವಾಸ್ತವವಾಗಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ ಹೇಳಿರುವಂತೆ ಇದು ಎಡ-ಬಲದ ಪ್ರಶ್ನೆಯಲ್ಲ, ಸರಿ ಮತ್ತು ತಪ್ಪುಗಳ ನಡುವಿನ ಪ್ರಶ್ನೆ, ಮಹಾತ್ಮ ಗಾಂಧಿಯನ್ನು ಕೊಂದಾಗ ಸಂಭ್ರಮ ಪಟ್ಟು ಸಿಹಿ ಹಂಚಿದವರು ಇದೇ ಆರೆಸ್ಸೆಸ್ ಮಂದಿ, ಇದನ್ನು ಈಗ ಈ ಪರಿವಾರದವರು ಹಾಡಿಹೊಗಳುತ್ತಿರುವ ಆಗಿನ ಗೃಹಮಂತ್ರಿ ಸರ್ದಾರ್ ಪಟೇಲ್ ಅವರೇ ಸ್ವತಃ ಇವರ ಗುರು ಗೋಲ್ವಲ್ಕರ್‍ಗೇ ಹೇಳಿದ್ದನ್ನು ಯೆಚುರಿ ಈ ಮಂತ್ರಿವರ್ಯರಿಗೆ ನೆನಪಿಸಿದ್ದಾರೆ.

“ಈ ಪ್ರಚಾರಾಂದೋಲನದಿಂದ ಹಿಂದೆ ಸರಿಯುತ್ತಿದ್ದೇನೆ. ಎಲ್ಲರಿಗೂ ಅಭಿನಂದನೆಗಳು. ನಾನು ಏನು ಹೇಳಬೇಕಾಗಿತ್ತೋ ಹೇಳಿದ್ದೇನೆ. ನಾನು ಬಹಳಷ್ಟು ಸಹಿಸಬೇಕಾಗಿ ಬಂದಿದೆ. 20ವರ್ಷದ ನನಗೆ ಇಷ್ಟೇ ಸಾಧ್ಯ. ಈ ಪ್ರಚಾರಾಂದೋಲನ ಎಂದೂ ನನ್ನ ಬಗ್ಗೆ ಆಗಿರಲಿಲ್ಲ, ವಿದ್ಯಾರ್ಥಿಗಳ ಬಗ್ಗೆ ಆಗಿದೆ. ದಯವಿಟ್ಟು ಮೆರವಣಿಗೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ. ಅದೃಷ್ಟ ನಿಮ್ಮೊಂದಿಗಿರಲಿ. ನನ್ನ ಧೈರ್ಯವನ್ನು ಪ್ರಶ್ನಿಸುತ್ತಿರುವವರಿಗೆ ಯಾರಿಗೇ ಆಗಲಿ ಅದನ್ನು ಸಾಕಷ್ಟು ತೋರಿಸಿದ್ದೇನೆ. ಒಂದಂತೂ ಖಂಡಿತ, ಬೆದರಿಕೆ, ಹಿಂಸಾಚಾರಕ್ಕೆ ಇಳಿಯುವ ಮೊದಲು ನಾವು ಎರಡೆರಡು ಬಾರಿ ಯೋಚಿಸ ಬೇಕಾಗುತ್ತದೆ. ಅದಕ್ಕಾಗಿಯೆ ಇದೆಲ್ಲ. ಇನ್ನು ನನ್ನನ್ನು ನನ್ನ ಪಾಡಿಗೆ ಬಿಟ್ಟು ಬಿಡಿ”

ಗುರ್‍ಮೆಹರ್ ಕೌರ್‍ಳ ಈ ಕೊನೆಯ ಟ್ವೀಟ್ ಕೇಸರಿ ಟ್ವೀಟ್‍ಗ್ಯಾಂಗ್‍ಗಳ, ಅದಕ್ಕಿಂತ ಹೆಚ್ಚಾಗಿ ಕೇಂದ್ರ ಮಂತ್ರಿ ಮಹಾಶಯರುಗಳು, ಎಂಪಿ ಮಹಾಶಯರುಗಳ ಪೌರುಷ/ಜ್ಞಾನ ಪ್ರದರ್ಶನಕ್ಕೆ, ಸವಾಲು ಹಾಕಿದೆ.  ಆದರೆ ಅದನ್ನು ಅರಿತುಕೊಳ್ಳಬಲ್ಲ ‘ಸಂಸ್ಕøತಿ’ ಈ ಮಂದಿಗಿದೆಯೇ ಎಂಬುದು ಮಾತ್ರ ಯಕ್ಷಪ್ರಶ್ನೆಯಾಗಿಯೇ ಉಳಿಯಬಹುದು. ಏಕೆಂದರೆ ನಂತರವೂ ಈ ಮಂದಿ ತಮ್ಮನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ, ಟ್ರಿಪಲ್ ಸೆಂಚುರಿಯ ಕ್ರಿಕೆಟಿಗನಿಗೆ ಮಾತ್ರ ಮಾನಭಂಗದ ಬೆದರಿಕೆ ಹಾಕಬಾರದಿತ್ತು ಎಂದು ಬಹಳ ತಡವಾಗಿ ಅನಿಸಿದೆಯಂತೆ.ಈಗ ಕೇಂದ್ರ ಕಾನೂನು ಮಂತ್ರಿಗಳು ಕೂಡ ಗುರುಮೆಹರ್‍ಕೌರ್ ವಿರುದ್ಧ ಮಾತಾಡುವವರನ್ನು ತರಾಟೆಗೆ ತಗೊಂಡಿದ್ದಾರೆ ಎಂಬ ಸುದ್ದಿಯನ್ನು ಓದುವಾಗಲೇ ಹರ್ಯಾಣದ ಹಿರಿಯ ಮಂತ್ರಿಯೊಬ್ಬರು ಗುರ್‍ಮೆಹರ್ ಕೌರ್‍ಳನ್ನು ಬೆಂಬಲಿಸುವವರನ್ನು ಪಾಕಿಸ್ತಾನಕ್ಕೆ ಕಳಿಸಿ ಎಂದು ಗುಡುಗಿರುವುದಾಗಿ ವರದಿಯಾಗಿದೆ. ಹೌದು, ‘ಬೇಟಿ ಪಡಾವೋ’ ಎಂದವರು ಎಂದಿನಂತೆ ದಿವ್ಯ ಮೌನದಲ್ಲಿದ್ದಾರೆ.