ಸೌಹಾರ್ದ ರಾಲಿ : ಪ್ರತಿಕ್ರಿಯೆಗಳು

ಸಂಪುಟ: 
11
ಸಂಚಿಕೆ: 
11
Sunday, 5 March 2017

ಸೌಹಾರ್ದ ರ್ಯಾಲಿಯ ಯಶಸ್ಸಿಗೆ ಭಾರೀ ಪ್ರತಿಕ್ರಿಯೆಗಳು ಬಂದಿವೆ. ಯಾವುದೇ ಎಡ ಪಕ್ಷಗಳ ರ್ಯಾಲಿಗಳನ್ನು ಸಭೆಗಳನ್ನು ಪೂರ್ಣವಾಗಿ ನಿರ್ಲಕ್ಷಿಸುವ ಅಥವಾ ಬರಿಯ `ಟ್ರಾಫಿಕ್ ಜಾಮ್' ಆಗಿ ನೋಡುವ ಮಾಧ್ಯಮಗಳು ಅದನ್ನು ವರದಿ ಮಾಡಲೇ ಬೇಕಾದ ಪರಿಸ್ಥಿತಿ ಉಂಟಾಗಿತ್ತು. ಆದರೂ ಸಂಘ ಪರಿವಾರದ `ಬಂದ್' `ಹರತಾಳ'ಗಳ ಅ-ಪ್ರಜಾಸತ್ತಾತ್ಮಕ ಸ್ವರೂಪದ ಬಗ್ಗೆ ಜಾಣ ಮೌನ ವಹಿಸುತ್ತಾ ಅವು ಯಶಸ್ವಿಯಾದವು ಎಂದೂ ವರದಿ ಮಾಡಿದವು. ಸಿಪಿಐ(ಎಂ) ಕಛೇರಿಯನ್ನು ಸುಟ್ಟ ಸುದ್ದಿಯನ್ನು ಯಾವುದೇ ಟೀಕೆ ಇಲ್ಲದೆ ತಟಸ್ಥವಾಗಿ ವರದಿ ಮಾಡಿದವು. ಪತ್ರಿಕೆಗಳು ಎಷ್ಟೋ ಮೇಲು. ಒಂದೆರಡನ್ನು ಬಿಟ್ಟರೆ ಇತರ ಟಿವಿ ಚಾನೆಲುಗಳು ಪೂರ್ಣವಾಗಿ ಅಲ್ಲದಿದ್ದರೂ ಈ ಮಹತ್ವದ ಘಟನೆಯನ್ನು ನಿರ್ಲಕ್ಷಿಸುವ ಪ್ರಯತ್ನ ಮಾಡಿದವು. ಹೆಚ್ಚಿನ ಪತ್ರಿಕೆಗಳು ಇದರ ಮಹತ್ವದ ವಿಶ್ಲೇಷಣೆಯ ಗೋಜಿಗೆ ಹೋಗಲಿಲ್ಲ. ಈ ನಡುವೆ `ಕರಾವಳಿ ಕರ್ನಾಟಕ' ಎಂಬ ವೆಬ್ ಪತ್ರಿಕೆ ಮಾತ್ರ ಸೌಹಾರ್ದ ರ್ಯಾಲಿಯ ಮಹತ್ವದ ವಿಶ್ಲೇಷಣೆಯನ್ನು ಮಾಡಿದೆ. ಆ ವಿಶ್ಲೇಷಣೆಯ ಭಾಗಗಳನ್ನು ಇಲ್ಲಿ ಕೊಡಲಾಗಿದೆ. ಜತೆಗೆ ರ್ಯಾಲಿಯಲ್ಲಿ ಭಾಗವಹಿಸಿದವರ ಕೆಲವು ಪ್ರತಿಕ್ರಿಯೆಗಳೂ ಮತ್ತು ಅದಕ್ಕೆ ಬೆಂಬಲ ನೀಡಿದ ಕೆಲವು ವ್ಯಕ್ತಿಗಳ ಸಂಘಟನೆಗಳ ಹೇಳಿಕೆಗಳೂ ಇವೆ.

ಚಳವಳಿಗಳ ಐಕ್ಯತೆ: ಈಗ ಸಿಪಿಐ(ಎಂ) ಸರದಿ

ಮಂಗಳೂರಿನಲ್ಲಿ ಸಿಪಿಐ(ಎಂ) ನೇತೃತ್ವದಲ್ಲಿ ನಡೆದ ಕರಾವಳಿ ಐಕ್ಯತಾ ಸೌಹಾರ್ದ ಸಮಾವೇಶ ಅಭೂತಪೂರ್ವ ಯಶಸ್ಸು ಕಂಡಿದೆ. ಕೋಮುವಾದಿಗಳ ಪ್ರಯೋಗಶಾಲೆ ಎಂದು ಕರೆಯಲ್ಪಡುತ್ತಿರುವ ಕರಾವಳಿಯಲ್ಲಿ ಇಂತಹದ್ದೊಂದು ಸೌಹಾರ್ದ ಸಮಾವೇಶ ಅದ್ದೂರಿಯಾಗಿ ಮತ್ತು ಪರಿಣಾಮಕಾರಿಯಾಗಿ ನಡೆಯುವುದು ಬಹಳ ಮಹತ್ವಪೂರ್ಣ ಸಂಗತಿಯೇ ಹೌದು. ಅದರಲ್ಲೂ ಸೌಹಾರ್ದಪ್ರಿಯ, ಸೆಕ್ಯೂಲರ್ ಮನಸ್ಸಿನ ಮಂದಿ ಒಟ್ಟಾಗಿ ಹಬ್ಬದ ಉತ್ಸಾಹದ ವಾತಾವರಣ ನಿರ್ಮಿಸಿ ಸಂಭ್ರಮಿಸಿದ್ದು ಕರಾವಳಿಯ ಸೌಹಾರ್ದ ಚಳವಳಿಗೆ ಇನ್ನಷ್ಟು ಬಲ ಬಂದಿದೆ. ಪಿಣರಾಯಿ ವಿಜಯನ್ ಅವರ ಆಗಮನವನ್ನು ತಮ್ಮ ಹಿಂದೂತ್ವದ ರಾಜಕೀಯಕ್ಕೆ ಬಳಸಿಕೊಳ್ಳಲು ಪ್ರಯತ್ನಿಸಿ, ಭಾಷಣ, ಮೆರವಣಿಗೆ, ಪ್ರತಿಭಟನೆ, ಪತ್ರಿಕಾಗೋಷ್ಟಿಗಳನ್ನೆಲ್ಲ ನಡೆಸಿ, ಮಂಗಳೂರಿನ ಬಂದ್ಗೂ ಕರೆಕೊಟ್ಟರೂ ಸೌಹಾರ್ದ ರ್ಯಾಲಿ ಯಶಸ್ವಿಯಾಯಿತು, ಜನರು ಬೃಹತ್ ಸಂಖ್ಯೆಯಲ್ಲಿ ಇದಕ್ಕೆ ಸಾಕ್ಷಿಯಾದರು. ಸಣ್ಣಪುಟ್ಟ ಸೈದ್ಧಾಂತಿಕ, ವೈಚಾರಿಕ ಭಿನ್ನಮತ ಇದ್ದ ಮಂಗಳೂರಿನ ಮತ್ತು ರಾಜ್ಯದ ವಿವಿಧೆಡೆಯ ವ್ಯಕ್ತಿಗಳು ಮತ್ತು ಸಂಘಟನೆಗಳು ಸಂಘಪರಿವಾರವನ್ನು ಹಿಮ್ಮೆಟಿಸುವ ಏಕಮಾತ್ರ ಅಜೆಂಡಾಕ್ಕೆ ತಮ್ಮ ನೂರು ಶೇಕಡಾ ಬದ್ದತೆ ತೋರಿಸಿ ಒಂದಾಗಿದ್ದರಿಂದ ಈ ಸೌಹಾರ್ದ ರ್ಯಾಲಿ ಚಾರಿತ್ರಿಕ ಘಟನೆಯಾಗಿ ಮಾರ್ಪಟ್ಟಿತು. ಜಾತ್ಯತೀತ ಮನಸ್ಸುಗಳನ್ನು ಒಗ್ಗೂಡಿಸಿದ ಮಂಗಳೂರಿನ ಸಂಘಪರಿವಾರಕ್ಕೆ ಎಷ್ಟು ಧನ್ಯವಾದ ಹೇಳಿದರೂ ಸಾಲದು!

...ಇದೀಗ ಸಿಪಿಐ(ಎಂ) ಮಂಗಳೂರಿನಲ್ಲಿ ಪಿಣರಾಯಿ ವಿಜಯನ್ ಅವರನ್ನು ಆಹ್ವಾನಿಸಿ ನಡೆಸಿದ ಈ ಕರಾವಳಿ ಐಕ್ಯತಾ ಸಮಾವೇಶ ಚಳವಳಿಗಳ ಸರಣಿಯಲ್ಲಿ ಹೊಸ ಸೇರ್ಪಡೆ. ಇಂತಹದ್ದೊಂದು ಸವಾಲಿನ ಸಮಾವೇಶ ನಡೆಸಲು ಮಂಗಳೂರಿನಲ್ಲಿ ಎಡ ಪಕ್ಷಗಳು ಮತ್ತು ಸಂಘಟನೆಗಳಿಗೆ ಮಾತ್ರ ಸಾಧ್ಯ ಎಂಬುದೂ ಈ ಸಮಾವೇಶ ಸಾಬೀತುಪಡಿಸಿದೆ. ಸಮಾವೇಶದ ಸಂಪೂರ್ಣ ಯಶಸ್ಸಿನ ಕೀರ್ತಿ ಎಡ ಪಕ್ಷಗಳ ಯುವ ಮತ್ತು ವಿದ್ಯಾರ್ಥಿ ಸಂಘಟನೆಗಳಿಗೆ ಸಲ್ಲಲೇಬೇಕು.

ಸಿಪಿಐ(ಎಂ) ಮುಂದಾಳತ್ವದಲ್ಲಿ ನಡೆದ ಮಂಗಳೂರಿನ ಸೌಹಾರ್ದ ರ್ಯಾಲಿಗೆ ಸಂಘಪರಿವಾರದಿಂದ ಯಾವಾಗ ಬೆದರಿಕೆ ವ್ಯಕ್ತವಾಯಿತೊ ಅಂದಿನಿಂದಲೆ ಮಂಗಳೂರಿನ ಮಾತ್ರವಲ್ಲದೆ ರಾಜ್ಯದ ವಿವಿಧ ಜನಪರ, ಪ್ರಗತಿಪರ ವ್ಯಕ್ತಿಗಳು ಮತ್ತು ಸಂಘಟನೆಗಳು ಸಮಾವೇಶದ ಬೆಂಬಲಕ್ಕೆ ನಿಂತಿದ್ದು ನಿಜಕ್ಕೂ ಚಾರಿತ್ರಿಕ. ಸಮಾವೇಶ ಕೇವಲ ಸೌಹಾರ್ದ ಸಮಾವೇಶವಾಗದೆ ಕರ್ನಾಟಕದ ವಿವಿಧ ಚಳವಳಿಗಳು ಭಿನ್ನಾಭಿಪ್ರಾಯ ಮರೆತು ಒಂದಾದ ಐಕ್ಯತಾ ಸಮಾವೇಶವೂ ಆಯಿತು. ಇಷ್ಟು ಆಗಿದ್ದು ದೊಡ್ಡದು ನಿಜ, ಆದರೆ ಇಷ್ಟೆ ಸಾಕೆ? ಈಗ ಚೆಂಡು ಸಿಪಿಐ(ಎಂ) ಅಂಗಳದಲ್ಲಿದೆ!

ರಾಜ್ಯದ ವಿವಿಧ ಜನಪರ ಸಂಘಟನೆಗಳು ಮತ್ತು ಚಳವಳಿಗಳ ನಡುವಿನ ಸೌಹಾರ್ದತೆಗೆ, ಐಕ್ಯತೆಗೆ ತನ್ನ ಪಾಲನ್ನೂ ನೀಡಬೇಕಾದ ಮಹತ್ವದ ಹೊಣೆಗಾರಿಕೆ ಈಗ ಸಿಪಿಐ(ಎಂ) ಮತ್ತು ಅದರ ಸಂಘಟನೆಗಳ ಹೆಗಲೇರಿದೆ. ಈ ಹೊಣೆಗಾರಿಕೆಯನ್ನು ಸಿಪಿಐ(ಎಂ) ಎಷ್ಟು ಸಮರ್ಥವಾಗಿ ನಿಭಾಯಿಸುತ್ತದೊ ಅಷ್ಟರ ಮಟ್ಟಿಗೆ ರಾಜ್ಯದಲ್ಲಿ ಹರಿದು ಹಂಚಿ ಹೋಗಿರುವ ಮತ್ತು ಕೆಲವೆಡೆ ಸಂಘಟಿತವಾಗಿ ಹೋರಾಟ ನಡೆಸುತ್ತಿರುವ ಚಳವಳಿಗೆ ಬಲ ಬಂದಂತಾಗುತ್ತದೆ.

ಮಂಗಳೂರನ್ನೂ ಒಳಗೊಂಡು ರಾಜ್ಯದ ಹಲವೆಡೆ ಸಿಪಿಐ(ಎಂ), ಎಸ್‍ಎಫ್‍ಐ, ಡಿವೈಎಫ್‍ಐ ಸಂಘಟನೆಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ. ವಿದ್ಯಾರ್ಥಿಗಳು,ಯುವಜನರು, ಬೀಡಿ-ಹಂಚು-ಕೂಲಿ-ನಿರ್ಮಾಣ ಕಾರ್ಮಿಕರು, ರೈತರು ಮುಂತಾದ ವಿವಿಧ ಕ್ಷೇತ್ರಗಳ ಜನಸಾಮಾನ್ಯರ ನಡುವೆ ಅತ್ಯಂತ ಸಕ್ರಿಯವಾಗಿದೆ. ಚಳವಳಿಗಳನ್ನು ಕಟ್ಟುವ ಮತ್ತು ಮುನ್ನಡೆಸುವ ಪರಿಣತಿ ಇವರಿಗೆ ಇದೆ. ಇದೆಲ್ಲವೂ ನಿಜಕ್ಕೂ ಮೆಚ್ಚುವಂತಹದ್ದು. ಮಂಗಳೂರಿನ ಎಡಸಂಘಟನೆಗಳ ಯುವಕರು ಕರಾವಳಿಯಲ್ಲಿ ಸಂಘಟಿಸಿದ ದಿಟ್ಟತನದ ಹೋರಾಟಗಳು ಬೇರೆ ಸಂಘಟನೆಗಳಿಗೆ ಮಾದರಿ.

ಇಷ್ಟೆಲ್ಲ ಮೆಚ್ಚುಗೆಯ ಮಾತುಗಳ ಬಳಿಕ ಕೆಲವೊಂದು ವಿಚಾರಗಳನ್ನು ಸ್ಪಷ್ಟವಾಗಿ ಹೇಳಬೇಕಾಗಿದೆ. ಕೇರಳ, ಪಶ್ಚಿಮ ಬಂಗಾಲ ಮುಂತಾದ ಕಡೆಗಳಲ್ಲಿ ಹೇಗೆ ಇರಲಿ, ಕರ್ನಾಟಕದಲ್ಲಂತೂ ಎಲ್ಲ ರೀತಿಯಿಂದಲೂ ಜನಪರವಾಗಿರುವ ಸಿಪಿಐ(ಎಂ) ಮತ್ತು ಅದರ ವಿದ್ಯಾರ್ಥಿ-ಕಾರ್ಮಿಕ-ಯುವಜನ ಸಂಘಟನೆಗಳು ಕರ್ನಾಟಕದ ಹಲವು ಜನಪರ ಚಳವಳಿಗಳ ಜೊತೆ ಒತ್ತಾಯಪೂರ್ವಕವಾದ ಒಂದು ಅಂತರವನ್ನು ಕಾಯ್ದುಕೊಂಡಿದೆ. ಚಳವಳಿಯ ಇತರ ಸಂಘಟನೆಗಳ ಹಾಗಿಲ್ಲದೆ ಸಿಪಿಐ(ಎಂ) ಒಂದು ರಾಜಕೀಯ ಪಕ್ಷವಾಗಿದೆ ಎಂಬ ವಾಸ್ತವವನ್ನು ಅರ್ಥಮಾಡಿಕೊಂಡೇ ಈ ಮಾತುಗಳನ್ನು ಹೇಳಬೇಕಾಗಿದೆ.
...ಇದನ್ನು ಇಂದು ಸಿಪಿಐ(ಎಂ) ಮೀರಬೇಕಿದೆ. ಮೊನ್ನೆಯ ಸೌಹಾರ್ದ ರ್ಯಾಲಿಗೆ ಬೆಂಬಲ ನೀಡಿದ ವ್ಯಕ್ತಿಗಳು, ಸಂಘಟನೆಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ, ಸಮರ್ಥನೆ, ಸಾಥ್ ನೀಡಿದವರಲ್ಲಿ ಹೆಚ್ಚಿನವರದು ಬೇಷರತ್ ಬೆಂಬಲವಂತೂ ಅಲ್ಲ. ಅಥವಾ ಸಿಪಿಐ(ಎಂ) ಅಥವಾ ಪಿಣರಾಯಿ ವಿಜಯನ್ ಅವರ ಸಂಪೂರ್ಣ ಸಮರ್ಥಕರೂ ಅಲ್ಲ, ಆದರೂ ಸಂಘಪರಿವಾರವನ್ನು ಹಿಮ್ಮೆಟ್ಟಿಸಿ ಕರಾವಳಿಯಲ್ಲಿ ಸೌಹಾರ್ದ ಸ್ಥಾಪನೆಗಾಗಿ ಎಲ್ಲ ಭಿನ್ನಾಭಿಪ್ರಾಯಗಳನ್ನು ತೊರೆದು ಸಿಪಿಐ(ಎಂ) ನಡೆಸಿದ ರ್ಯಾಲಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಬೆಂಬಲ, ಜೊತೆಗೂಡುವಿಕೆ ಏಕಮುಖವಾಗಿರಬಾರದು. ಅದು ಪರಸ್ಪರ ಕೊಡುಕೊಳ್ಳುವಿಕೆಯಿಂದ ಕೂಡಿರಬೇಕು. ಸಮಾನ ಆಶಯಗಳಿಗೆ ಜೊತೆಯಾಗಿ ದುಡಿಯುವ, ಹೋರಾಡುವ ಔದಾರ್ಯತೆಯನ್ನು ಸಿಪಿಐ(ಎಂ) ಮೈಗೂಡಿಸಿಕೊಳ್ಳಲು ಇದು ಸ್ಫೂರ್ತಿಯಾಗಬೇಕು. ತಾನು ಚಳವಳಿಗಳ 'ದೊಡ್ಡಣ್ಣ' ಎಂಬ ಮನಸ್ಥಿತಿಯಿಂದ (ಅಂತಹ ಮನಸ್ಥಿತಿ ಇದ್ದರೆ) ಅಂತಹ ಮನಸ್ಥಿತಿಯಿಂದ ಹೊರಬರಬೇಕು.

ಮಂಗಳೂರಿನ ಐಕ್ಯತಾ ಸಮಾವೇಶ ಚಳವಳಿಗಳ ಐಕ್ಯತೆಗೂ ದಾರಿಯಾಗಲಿ. ಮಂಗಳೂರು ಕೋಮುವಾದಿಗಳ ಪ್ರಯೋಗಶಾಲೆಯಲ್ಲ, ಸೌಹಾರ್ದತೆ, ಸಹಬಾಳ್ವೆ ಈ ಮಣ್ಣಿನ ಸಹಜ ಗುಣ ಎಂದು ಮತ್ತೊಮ್ಮೆ ದೇಶಕ್ಕೆ ತೋರಿಸಿದ ಮಂಗಳೂರಿನ ಸಿಪಿಐ(ಎಂ) ಮತ್ತು ಎಲ್ಲ ಸಂಘಟನೆಗಳ ಸಂಗಾತಿಗಳಿಗೆ ಅಭಿನಂದನೆ ಮತ್ತು ವಂದನೆ.

-ಶಶಿಧರ ಹೆಮ್ಮಾಡಿ

ಕೆಲವು ಪ್ರತಿಕ್ರಿಯೆಗಳು

ಸೋರುತ್ತಿವುದು ನಿಮ್ಮ ಮನೆ -ಮನಗಳು...
ಅದಕ್ಕಾಗಿ ಕದ್ದು ಕೊಂಡೊದಿರಿ ನಮ್ಮ ಫ್ಲೆಕ್ಸ್, ಬ್ಯಾನರ್ಗಳು...
ಉಪಯೋಗಿಸಿ ನಿಮ್ಮ ಸೋರುತ್ತಿರುವ ಮನೆ-ಮನಗಳನ್ನ ಅದರಲ್ಲಿ ಮುಚ್ಚಿ ಮಲಗಲು....
ಇದು ನಮ್ಮ ಕಡೆಯಿಂದ ನಿಮಗೆ ಕೊಡುವ ಉಚಿತ ಕೊಡುಗೆಗಳು.......

                                                                  - ಕೃಷ್ಣೇಗೌಡ ಟಿ.ಎಲ್.

ಅಭೂತಪೂರ್ವ ಸ್ಪಂದನ. ಕೋಮುವಾದದ ವಿರುದ್ದ, ಅದೂ ತುಳುನಾಡಿನ ಮಣ್ಣಿನಲ್ಲಿ. ಜನತೆಯನ್ನು ಬಹುಕಾಲ ದಾರಿತಪ್ಪಿಸಲಾಗದು. ಬಂದ್ ವಾಪಾಸ್ ಪಡೆಯಿರಿ. ಇಪ್ಪತ್ತೈದು ಸಾವಿರ ಜನ ಸೇರಿಸಿ ತೋರಿಸುತ್ತೇವೆ ಎಂದು ಸವಾಲು ಹಾಕಿದ್ದೆವು. ಈಗ ಬಂದ್ ನಡುವೆಯೇ ಇಪ್ಪತ್ತೈದು ಸಾವಿರ ಜನ...
ಮತಾಂಧ ಶಕ್ತಿಗಳ ಯಾವುದೇ ಬಂದ್, ಬೆದರಿಕಗಳಿಗೂ ಜಗ್ಗದೇ ಮತೀಯವಾದದ ವಿರುದ್ಧ, ಕೋಮು ಸಾಮರಸ್ಯಕ್ಕಾಗಿ ಸಾವಿರ ಸಾವಿರ ಸೌಹಾರ್ಧ ಪ್ರಿಯರ ದೃಢವಾದ ಹೆಜ್ಜೆಗಳು..

                                                                                                    - ಟಾಮ್ ಜೇಕಬ್ ಅರಕ್ಕಲ್

ಸಂಘಪರಿವಾರದವರು ಪಿಣರಾಯ್ ರವರನ್ನು ಮಂಗಳೂರಿಗೆ ಕಾಲಿಡಲು ಬಿಡುವುದಿಲ್ಲ ಎಂದರು, ಪಿಣರಾಯ್ ರೈಲಿನ ಮೂಲಕ ಮಂಗಳೂರಿಗೆ ಬಂದು ರೈಲ್ವೇ ಫ್ಲಾಟ್ ಫಾರ್ಮ್ ಮೇಲೆ ನಡೆದುಕೊಂಡು ಬಂದರು.
ಅವರು ಸೌಹಾರ್ದ ರ್ಯಾಲಿ ನಡೆಯಲು ಬಿಡುವುದಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲೆ ಬಂದ್ ಮಾಡಿದರು.
ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು ಎಂಬಂತೆ ನದಿಗಳಾಗಿ ಹರಿದು ಮಂಗಳೂರಿಗೆ ಬಂದರು.
ಅವರು ಪಿಣರಾಯ್ ರವರನ್ನು ಭಾಷಣ ಮಾಡಲು ಬಿಡುವುದಿಲ್ಲ ಎಂದರು. ಒಂದು ಗಂಟೆಗಳ ಕಾಲ 10 ಸಾವಿರಕ್ಕೂ ಹೆಚ್ಚು ಜನ ಮಂತ್ರ ಮುಗ್ದರಾಗಿ ಪಿಣರಾಯಿ ಭಾಷಣ ಕೇಳಿದರು.
ಎಲ್ಲವೂ ನಾವಂದುಕೊಂಡಂತೆ ಯಶಸ್ವಿಯಾಗಿ ಮುಗಿದಿದೆ. ಈ ಮಧ್ಯ ಬಂದ್ ಗೆ ಕರೆ ಕೊಟ್ಟು ನಾವು ಸೌಹಾರ್ದತೆಯ ವಿರೊಧಿಗಳು ಎಂದು ಮತ್ತೊಮ್ಮೆ ಸಾಬೀತು ಪಡಿಸಿದ ಸಂಘಪರಿವಾರದ ಗ್ಯಾಂಗ್ ಅಂತಿಮವಾಗಿ ಇಂಗು ತಿಂದ ಮಂಗನಂತಾಗಿದೆ. ಕರಾವಳಿಯನ್ನು ಕರ್ನಾಟಕದ ಪ್ರಯೋಗಶಾಲೆ ಎಂದು ಕೊಂಡಿದ್ದ ಸಂಘಪರಿವಾರಕ್ಕೆ ಸೋಲುಂಟಾಗಿದೆ. ಕರಾವಳಿಯನ್ನು ರಾಜ್ಯದ ಸೌಹಾರ್ದ ಬೀಡನ್ನಾಗಿ ಮಾಡುತ್ತೇವೆಂದು ಪಣತೊಟ್ಟ #CPIM ಕಾರ್ಯಕರ್ತರಾದ ನಾವು ಹುಮ್ಮಸ್ಸಿನಿಂದಿದ್ದೇವೆ. ಮಾತ್ರವಲ್ಲ ಕೋಮುವಾದದ ವಿರುದ್ದ ನಿಜವಾಗಲೂ ಹೋರಾಟ ಮಾಡುವವರು ನಾವು ಮಾತ್ರ ಎಂಬುದನ್ನು ನಾವು ನಿರೂಪಿಸಿದ್ದೇವೆ. ದೇಶದ ಐಕ್ಯತೆ, ಸೌಹಾರ್ದತೆಗಾಗಿಯೇ ದೇಶಾದ್ಯಂತ ಸಾವಿರಾರು ಕಾರ್ಯಕರ್ತರನ್ನು ಕಳೆದುಕೊಂಡ ಏಕೈಕ ಪಕ್ಷ ಇದು.

                                                                                                                                         - ನವೀನ್ ಕುಮಾರ್

ಸೌಹಾರ್ದ ರ್ಯಾಲಿಗೆ ಬೆಂಬಲ ನೀಡಿದವರು

ನಮ್ಮಗಳ ಅಭಿಪ್ರಾಯ ಬೇಧಗಳು, ಪುಡಿ ಜಗಳಗಳ ಆಚೆಗೂ ಜನ ಹೋರಾಟಗಳು ಇವತ್ತಿನ ಜರೂರು. ಇವು ನಡೆಯಬೇಕು, ನಡೆಯುತ್ತಲೇ ಇರಬೇಕು. ತುಂಬಾ ಟೈಮಿದೆ, ನಮ್ಮ ಜಗಳವನ್ನು ನಂತರ ಮುಂದುವರೆಸೋಣ. ಕೋಮುವಾದ ಎದುರಿಸಿ ಮಂಗಳೂರಿನಲ್ಲಿ ಗೆಳೆಯರು ನಡೆಸುತ್ತಿರುವ ಐಕ್ಯತಾ ರ್ಯಾಲಿ ಯಶಸ್ವಿಯಾಗಲಿ. ಹೋರಾಟಕ್ಕೆ ಮತ್ತು ಗೆಳೆಯರಿಗೆ ಆಲ್ ದಿ ಬೆಸ್ಟ್.

- ಟಿ ಕೆ ದಯಾನಂದ

ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಗೆ ವ್ಯಕ್ತವಾಗುತ್ತಿರುವ ವಿರೋಧ ಕೇವಲ ಮಂಗಳೂರು ಕೋಮುವಾದಕ್ಕೆ ಸೀಮಿತವಾಗಿ ನೋಡಬಾರದು. ಇದು ಕೇರಳ ಮತ್ತು ಕರ್ನಾಟಕದ ಸಂಬಂಧದ ಮೇಲೆ ಬೀರುವ ಪರಿಣಾಮವನ್ನು ಕರ್ನಾಟಕ ಎದುರಿಸಬೇಕಾಗುತ್ತದೆ. ಕರ್ನಾಟಕ ಎದುರಿಸುತ್ತಿರುವ ಅತಿ ದೊಡ್ಡ ಸಮಸ್ಯೆಯಾಗಿರುವ ಕಾವೇರಿ ವಿವಾದದಲ್ಲಿ ಕರ್ನಾಟಕದ ಬೆನ್ನಿಗೆ ನಿಂತಿದ್ದು ಇದೇ ಕೇರಳ. ಕಾವೇರಿಗಾಗಿ ಕಾನೂನು ಹೋರಾಟ ನಡೆಸುತ್ತಿರುವ ರಾಜ್ಯ ಸರಕಾರ ಮತ್ತು ಚಳುವಳಿ ನಡೆಸುತ್ತಿರುವ ಕರವೇ, ಕರ್ನಾಟಕ ರಣಧೀರ ಪಡೆ, ಜಯಕರ್ನಾಟಕ ಸಂಘಟನೆಗಳು ಸಂಘಪರಿವಾರದ ಕಿಡಿಗೇಡಿತನದಿಂದಾಗಿ ಕೇರಳ ಮತ್ತು ಕರ್ನಾಟಕ ಸಂಬಂಧ ಹಾಳಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಇದೆ.
ಎಲ್ಲಾ ಕನ್ನಡ ಪರ ಸಂಘಟನೆಗಳು ಐಕ್ಯತಾ ರ್ಯಾಲಿಯ ಜೊತೆಗೆ ನಿಂತು ಪಿನರಾಯಿ ವಿಜಯನ್ ಗೆ ಅದ್ದೂರಿ ಸ್ವಾಗತ ಕೋರಬೇಕಿರುವುದು ಕರ್ತವ್ಯವಾಗಿದೆ.

- ಹರೀಶ್ ಕುಮಾರ್ ಬಿ, ಕರವೇ ನಲ್ನುಡಿ ಜಯ ಕರ್ನಾಟಕ ಸಂಘಟನೆ