Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ಹರತಾಳದ ಮಧ್ಯೆ ಪಿಣರಾಯಿ ಆಗಮನ ಭದ್ರಕೋಟೆಯಲ್ಲೇ ಆರೆಸ್ಸೆಸ್ಸಿಗೆ ಸವಾಲು

ಸಂಪುಟ: 
11
ಸಂಚಿಕೆ: 
11
Sunday, 5 March 2017

ಕರಾವಳಿ ಸೌಹಾರ್ದ ರಾಲಿಗೆಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಫೆಬ್ರವರಿ 25 ರಂದು ಮಂಗಳೂರಿಗೆ ಭೇಟಿ ನೀಡಿ ರಾಲಿಯಲ್ಲಿ ಮಾತನಾಡಿದಾಗ ಮಂಗಳೂರಿನಲ್ಲಿ ಸಾಮಾನ್ಯ ಜನಜೀವನ ಅಸ್ಯವ್ಯಸ್ತಗೊಂಡಿತ್ತು.

ಪಿಣರಾಯಿ ವಿಜಯನ್ ತಮ್ಮ ರಾಜ್ಯದಲ್ಲಿ ತಮ್ಮ ಚಟುವಟಿಕೆಗಳಿಗೆ ತಡೆಯೊಡ್ಡುವಂತೆ ಹಿಂಸೆಯನ್ನು ಪ್ರಚೋದಿಸುತ್ತಿದ್ದಾರೆ ಎಂದು ಆರೋಪಿಸಿ, ಆರೆಸ್ಸೆಸ್ ಮತ್ತು ಅದರ ಪರಿವಾರ ಸಂಘಟನೆಗಳಾದ ವಿಶ್ವಹಿಂದೂ ಪರಿಷತ್ತು, ಹಿಂದೂ ಜಾಗರಣಾ ವೇದಿಕೆ, ಭಜರಂಗದಳ ಮತ್ತು ಭಾರತೀಯ ಜನತಾಪಕ್ಷ ಅವರು ಮಂಗಳೂರಿಗೆ ಭೇಟಿ ನೀಡುವ ಫೆಬ್ರವರಿ 25 ರಂದು ದ.ಕ.ಜಿಲ್ಲಾದ್ಯಂತ ಹರತಾಳಕ್ಕೆ ಕರೆ ನೀಡಿತ್ತು. ದ.ಕ.ಜಿಲ್ಲೆಯು ಸಂಘಪರಿವಾರದ ಭದ್ರಕೋಟೆಯಾಗಿರುವುದರಿಂದ ತಮ್ಮ ಹರತಾಳ ಕರೆಯಿಂದಾಗಿ ಸೌಹಾರ್ದ ರ್ಯಾಲಿಯು ಸಂಪೂರ್ಣ ಸೋಲಪ್ಪುವುದೆಂದು ಅವು ನಿರೀಕ್ಷಿಸಿದ್ದವು. ತಮ್ಮ ಬೆದರಿಕೆ ಮತ್ತು ನಿರ್ದೇಶನಗಳಿಗೆ ಜಿಲ್ಲೆಯ ಬಸ್ಸು ಮಾಲೀಕರು ಮತ್ತು ಅಂಗಡಿ ವ್ಯಾಪಾರಿಗಳು ಬಗ್ಗಿ ನಡೆಯುವರೆಂದು ಅವರಿಗೆ ಗೊತ್ತಿತ್ತು. ಹಾಗಿದ್ದರೂ ಕರಾವಳಿ ಜಿಲ್ಲೆಗಳ ಜನತೆ ಹಾಗೂ ಸಿಪಿಐ(ಎಂ) ಕಾರ್ಯಕರ್ತರು ಅದಕ್ಕೆ ದಿಟ್ಟ ಉತ್ತರ ನೀಡಿ, ರ್ಯಾಲಿಯನ್ನು ಯಶಸ್ವಿಗೊಳಿಸಿಯೇ ತೀರುತ್ತೇವೆ ಎಂದು ನಿರ್ಧರಿಸಿದ್ದರು. ರಾಜ್ಯದ ಗೃಹ ಇಲಾಖೆಯ ಬೆಂಬಲವನ್ನು ಖಾತ್ರಿಪಪಡಿಸಿ, ಪಕ್ಷದ ಕಾರ್ಯಕರ್ತರು 30 ಬಸ್ಸುಗಳಲ್ಲದೆ ಇನ್ನೂ ಇತರ ಸಾರಿಗೆ ವಾಹನಗಳನ್ನು ಸಜ್ಜುಗೊಳಿಸಲು ಸಾಧ್ಯವಾಯಿತು. ಮಂಗಳೂರಿನ ಸುತ್ತಮುತ್ತಲಿನ ಕಾರ್ಯಕರ್ತರು ಅಂತೆಯೇ ಜನತೆ, ನಡೆದು ಬಂದೇ ಮೆರವಣಿಗೆಯನ್ನು ಸೇರಿಕೊಳ್ಳುವುದೆಂದು ತೀರ್ಮಾನಿಸಿದ್ದರು. ಅದರಲ್ಲೂ ಫೆಬ್ರವರಿ 23ರ ಮುಂಜಾನೆ ತೊಕ್ಕೋಟ್ಟಿನಲ್ಲಿರುವ ಸಿಪಿಐ(ಎಂ) ಉಳ್ಳಾಲ ವಲಯ ಕಚೇರಿಗೆ ಸಂಘಪರಿವಾರ ಪ್ರಚೋದಿತ ದುಷ್ಕರ್ಮಿಗಳು ನುಗ್ಗಿ ಬ್ಯಾನ್ನರು, ಪೋಸ್ಟರು, ಪೀಠೋಪಕರಣಗಳಿಗೆ ಬೆಂಕಿ ಹಚ್ಚಿದ ವೃತ್ತಾಂತ ಕೇಳಿದ ಮೇಲಂತೂ, ಅವರ ನಿರ್ಧಾರ ಇನ್ನಷ್ಟು ದೃಢವಾಯಿತು. ರ್ಯಾಲಿಯ ದಿನ “ಜಿಲ್ಲಾ ಹರತಾಳ’ಕ್ಕೆ ಸಂಘ ಪರಿವಾರ ಕರೆ ನೀಡಿದುದರಿಂದ ತೊಕ್ಕೋಟಿನ ಕಿಚ್ಚು ಹಚ್ಚುವ ಘಟನೆಗಳು ಜನತೆಯಲ್ಲಿ ‘ಭೀತಿ ಮನೋಭಾವ’ ಹುಟ್ಟಿಸಲು ಅದು ಕೈಗೊಂಡ ಕೃತ್ಯ ಎಂಬುದು ಸ್ಪಷ್ಟವಾಯಿತು.

ಸಿಪಿಐ(ಎಂ) ದ.ಕ.ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಈ ದುಷ್ಕøತ್ಯವನ್ನು ಖಂಡಿಸಿದರಲ್ಲದೆ, ಈ ಕೃತ್ಯದ ಹಿಂದೆ ಸಂಘ ಪರಿವಾರ ಇದೆ ಎಂದು ಆರೋಪಿಸಿದರು. ಈ ಬಗ್ಗೆ ಪೋಲೀಸ್ ಠಾಣೆಯಲ್ಲೂ ದೂರು ನೀಡಲಾಗಿದೆ.

ಸೌಹಾರ್ದ ರ್ಯಾಲಿಗೆ ಅನಿರೀಕ್ಷಿತ ಬೆಂಬಲ:

ಈ ರ್ಯಾಲಿಯಲ್ಲಿ ಸರಿಸುಮಾರು 10 ಸಾವಿರಕ್ಕೂ ಹೆಚ್ಚು ಜನ ಒಗ್ಗೂಡಿದ್ದರು. ಇತ್ತೀಚೆಗಿನ ವರ್ಷಗಳಲ್ಲಿ ಮಂಗಳೂರಿನಲ್ಲಿ ನಡೆದ ಸಿಪಿಐ(ಎಂ) ರ್ಯಾಲಿಗಳಲ್ಲಿ ಇಷ್ಟೊಂದು ಜನ ಸೇರಿರಲಿಲ್ಲ ಮತ್ತು ಈ ಜನಭಾಗಿತ್ವ ಅನಿರೀಕ್ಷಿತವಾಗಿತ್ತು ಕೂಡಾ. ಸಾಮಾನ್ಯವಾಗಿ ಕಮ್ಯೂನಿಸ್ಟರ ಸಭೆ ರ್ಯಾಲಿಗಳಿಂದ ದೂರವಿರುವ ಜನ, ವಿಶೇಷವಾಗಿ ಮುಸ್ಲಿಮರು ಹೆಚ್ಚಿಗೆ ಒಳಗೊಂಡ ಅಲ್ಪಸಂಖ್ಯಾತ ಜನ, ತಮ್ಮ ಯುವವಯಸ್ಸಿನಲ್ಲಿ ಎಡಸಂಘಟನೆಗಳಲ್ಲಿದ್ದು, ಈಚೆಗಿನ ವರ್ಷಗಳಲ್ಲಿ ಎಡಪಂಥೀಯರ ಸಭೆಗಳೆಡೆಗೆ ಇಣುಕಿನೋಡದೆ ದೂರವಿರುವ ಮಧ್ಯಪ್ರಾಯದ ಜನ-ಹೀಗೆ ಹಲವು ಬಗೆಯ ಜನತೆ ರ್ಯಾಲಿ ಹಾಗೂ ಬಹಿರಂಗ ಸಭೆಯಲ್ಲಿ ಭಾಗವಹಿಸಿದ್ದರು. ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ, ಚಿಕ್ಕಮಗಳೂರು, ಬಳ್ಳಾರಿ, ಧಾರವಾಡ ಜಿಲ್ಲೆಗಳಿಂದಲೂ ನೂರಾರು ಪಕ್ಷದ ಕಾರ್ಯಕರ್ತರು ಬೆಳಿಗ್ಗೆಯೇ ಮಂಗಳೂರು ತಲುಪಿ ಮಂಗಳೂರಿನ ನೆಹರೂ ಮೈದಾನದಲ್ಲಿ ಸಾರ್ವಜನಿಕ ಸಭೆಗಾಗಿ ಹಾಕಲಾಗಿದ್ದ ಪೆಂಡಾಲಿನಲ್ಲಿ ಆಶ್ರಯ ಪಡೆದಿದ್ದರು. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ದ.ಕ. ಮತ್ತು ಕೇರಳದ ಕಾಸರಗೋಡು ಜಿಲ್ಲೆಗಳಿಂದ ಜನ ಹೇಗೂ ಸಾವಿರ ಸಂಖ್ಯೆಯಲ್ಲಿ ಬಂದಿದ್ದರಷ್ಟೆ. ಕಾರ್ಯಕರ್ತರೊಂದಿಗೆ ಜನತೆಯೂ ದುಷ್ಕರ್ಮಿಗಳಿಗೆ ಸವಾಲು ಒಡ್ಡಲು ಮುಂದಾಗಿದ್ದುದು ಕಂಡು ಬಂತು.

ಹಿಂದೂತ್ವ ಸಂಘಟನೆಗಳಿಗೆ ಇದು ತಕ್ಕ ಪ್ರತ್ತ್ಯುತ್ತರವಾಗಿತ್ತು. ಸಂಘಪರಿವಾರವು ದ.ಕ.ಜಿಲ್ಲೆಯಲ್ಲಿ ಖಾಸಗಿ ಬಸ್ಸು ಸಂಚಾರವನ್ನು ನಿಲ್ಲಿಸಲು ಸಮರ್ಥವಾಯಿತು. ಜಿಲ್ಲೆಯ ಪಟ್ಟಣಗಳಲ್ಲೂ ಹೆಚ್ಚಿನ ಅಂಗಡಿ ಮುಗ್ಗಟ್ಟುಗಳು ಮುಚ್ಚಲ್ಪಟ್ಟಿದ್ದುವು. ಸರಕಾರಿ ಬಸ್ಸುಗಳು ರಸ್ತೆಯಲ್ಲಿ ಸಂಚರಿಸಲು ಜಿಲ್ಲಾಡಳಿತ ತನ್ನೆಲ್ಲಾ ಪ್ರಯತ್ನಗಳನ್ನು ಮಾಡಿತ್ತು. ರ್ಯಾಲಿಯು ನಿರಾಳವಾಗಿ ನಡೆಯಲು ಬೇಕಾದ ಭದ್ರತಾ ವ್ಯವಸ್ಥೆಗಳನ್ನು ಮಾಡುವ ಬಗ್ಗೆ ಸಿಪಿಐ(ಎಂ)  ರಾಜ್ಯ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿಯವರು ಮುಖ್ಯಮಂತ್ರಿ, ಗೃಹಮಂತ್ರಿ ಮತ್ತು ದ.ಕ.ಜಿಲ್ಲಾ ಉಸ್ತುವಾರಿ ಮಂತ್ರಿಗಳ ಮೇಲೆ ಸಂಪೂರ್ಣ ಒತ್ತಡ ಹಾಕಿದ್ದರು.

ಹರತಾಳದ ತಮ್ಮ ಅಜೆಂಡಾವನ್ನು ಜಾರಿಗೊಳಿಸುವಲ್ಲಿ ಸಂಘಪರಿವಾರವು ಯಶಸ್ವಿಯಾದರೂ, ಅವರು ಸೌಹಾರ್ದ ರ್ಯಾಲಿಯಾಗುವುದನ್ನು ತಡೆಯುವುದರಲ್ಲಿ ವಿಫಲರಾದರು. ಅಲ್ಲದೆ ಅವರ ಗುರಿಯಾಗಿದ್ದ ಪಿಣರಾಯಿ ವಿಜಯನ್ ಆಗಮನವನ್ನು ತಡೆಯುವಲ್ಲಿ ಸೋಲುಂಡರು.

ಮಂಗಳೂರಿನ ನೆಹರೂ ಮೈದಾನಿನ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಪಿಣರಾಯಿ ವಿಜಯನ್ ಒಂದು ಗಂಟೆ ಮಾತನಾಡಿದರು. ಸಿಪಿಐ(ಎಂ) ರಾಜ್ಯ ಸಮಿತಿಯ ಹಿರಿಯ ಮುಖಂಡರಾದ ವಿ.ಜೆ.ಕೆ.ನಾಯರ್ ಅವರು ವಿಜಯನ್ ಮಾತುಗಳನ್ನು ಭಾಷಾಂತರಿಸಿದರು. ಬಳಿಕ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ ಭಾಷಣ ಮಾಡಿದರು. (ಈ ಎರಡೂ ಭಾಷಣಗಳ ಪಠ್ಯ ಇದೇ ಸಂಚಿಕೆಯಲ್ಲಿ ಬೇರೆಡೆ ಇದೆ.) ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಲಿ ಸದಸ್ಯರಾದ ಜೆ.ಬಾಲಕೃಷ್ಣ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಕಾರ್ಯದರ್ಶಿ ಮಂಡಲಿ ಸದಸ್ಯರಾದ ಜಿ.ಎನ್.ನಾಗರಾಜ್, ನಿತ್ಯಾನಂದ ಸ್ವಾಮಿ, ಕೆ.ಶಂಕರ್, ಯು.ಬಸವರಾಜ್, ಎಸ್.ವರಲಕ್ಷ್ಮಿ, ಕರಾವಳಿ ಜಿಲ್ಲೆಗಳ ಸಿಪಿಐ(ಎಂ) ಜಿಲ್ಲಾ ಸಮಿತಿ ಕಾರ್ಯದರ್ಶಿಗಳು, ಕಾಸರಗೋಡು ಜಿಲ್ಲೆಯ ಸಿಪಿಐ(ಎಂ) ಮುಖಂಡರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಸಿಪಿಐ(ಎಂ) ದ.ಕ.ಜಿಲ್ಲಾ ಸಮಿತಿ ಕಾರ್ಯದರ್ಶಿ ವಸಂತ ಆಚಾರಿ ಸ್ವಾಗತಿಸಿದರು. ರಾಜ್ಯ ಸಮಿತಿ ಸದಸ್ಯ ಯಾದವ ಶೆಟ್ಟಿ ವಂದಿಸಿದರು.

ಕರಾವಳಿ ಸೌಹಾರ್ದ ರ್ಯಾಲಿಯ ಅನಿರೀಕ್ಷಿತ ಯಶಸ್ಸಿನಿಂದ ಪಕ್ಷದ ಕಾರ್ಯಕರ್ತರು ರೋಮಾಂಚಿತರಾಗಿದ್ದು, ಮುಂದೆಯೂ ಕೋಮುಶಕ್ತಿಗಳ ಅಬ್ಬರವನ್ನು ಎದುರಿಸುವ ಆತ್ಮವಿಶ್ವಾಸವನ್ನು ವ್ಯಕ್ತಪಡಿಸುತ್ತಿದ್ದಾರೆ.

- ವಾಸುದೇವ ಉಚ್ಚಿಲ

ಸೌಹಾರ್ದ ರ್ಯಾಲಿಗೆ ದುಡಿದ ಕೆಲವರ ಅನಿಸಿಕೆಗಳು

ಸೌಹಾರ್ದ ರ್ಯಾಲಿಯ ಗೆಲುವು ಕೋಮುವಾದ ವಿರೋಧಿ ಹೋರಾಟದ ಒಂದು ನಿರ್ಣಾಯಕ ತಿರುವು. ಕರಾವಳಿ ಇತಿಹಾಸದ ಹೆಗ್ಗುರುತುಗಳಲ್ಲಿ ಒಂದು. ಪರ್ಯಾಯ ಸರಕಾರ ಪೆಟ್ರೋಲ್, ಬೆಂಕಿ ಹಿಡಿದು ನಿಂತು ಅಬ್ಬರಿಸುತ್ತಿದ್ದಾಗಲೂ ನಿರ್ಜನ ಬೀದಿಗಳಿಂದ ಒಬ್ಬಬ್ಬರಾಗಿಯೇ ಎದ್ದು ಬಂದು ಜನಸಾಗರವಾದ ಅವಿಭಜಿತ ಜಿಲ್ಲೆಯ ಜನ ಅಧ್ಭುತವಾದದ್ದನ್ನು ಸಾಧಿಸಿದ್ದಾರೆ. ಇದು ಮುಂದಕ್ಕೆ ನಡೆಯಲು ಹೆಬ್ಬಾಗಿಲನ್ನು ತೆರೆದುಕೊಟ್ಟಿದೆ. ಇದು ಅಂತಿಮವಾಗಿ ಕೇವಲ ಸಿಪಿಐ(ಎಂ) ಕಾರ್ಯಕ್ರಮವಾಗಿ ಉಳಿಯಲಿಲ್ಲ. ಇಲ್ಲಿ ಪಿಣರಾಯಿ ವಿಜಯನ್ ಆಗಮನ ಒಂದು ನೆಪವಷ್ಟೆ. ಇದು ಇಲ್ಲಿನ ಜನಸಾಮಾನ್ಯರ ಎದೆಯೊಳಗೆ ಬಹುಕಾಲದಿಂದ ಮಡುಗಟ್ಟಿದ್ದ ಭಾವನೆಗಳ ಅಭಿವ್ಯಕ್ತಿ. ಸಮಾವೇಶ, ಮೆರವಣಿಗೆಯಲ್ಲಿ ಜನ ಪಕ್ಷಾತೀತವಾಗಿ ಪಾಲ್ಗೊಂಡಿದ್ದಾರೆ.

ಕಾಂಗ್ರೆಸ್, ಜೆಡಿಎಸ್ ಮುಖಂಡರು, ಸದಸ್ಯರು ಜನರ ನಡುವೆ ಕೂತು ಸಾಲಿಡಾರಿಟಿ ವ್ಯಕ್ತಪಡಿಸಿದ್ದಾರೆ. ನಮ್ಮ ಜೊತೆ ಸದಾ ಇರುವ ದಲಿತ, ಪ್ರಗತಿಪರ ಸಂಘಟನೆಯವರು ಎಂದಿನಂತೆ ಜೊತೆನಿಂತರು. ಅಲ್ಪಸಂಖ್ಯಾತ ಸಮುದಾಯದ ಲಿಬರಲ್ ಸಂಘಟನೆಗಳ ಪ್ರಮುಖರು ಜೊತೆಗೆ ಹೆಜ್ಜೆ ಹಾಕಿದರು. ಒಟ್ಟು ಭಾಗವಹಿಸುವಿಕೆಯಲ್ಲಿ ದ ಕ, ಉಡುಪಿಯವರೇ ಶೇಕಡಾ ಎಂಬತ್ತೈದರಷ್ಟು ಇದ್ದರು ಎಂಬುದು ಇದರ ಮಹತ್ವವನ್ನು ಎತ್ತಿಹಿಡಿಯುತ್ತದೆ.

ಒಟ್ಟಾರೆ ಇಂತಹಾ ಒಂದು ಮಹಾನ್ ಯಶಸ್ಸಿಗೆ ಇವರೆಲ್ಲರೂ ಕಾರಣಕರ್ತರು. ಇದು ಇವರೆಲ್ಲರ ಸಂಘಟಿತ ಯಶಸ್ಸು. ನಿಜ ಅರ್ಥದ ಐಕ್ಯತಾ ಸಮಾವೇಶ. ಇಂತಹ ಒಂದು ನಿರ್ಣಾಯಕ ಘಟ್ಟದ ಮಹತ್ವವನ್ನು ಅರ್ಥ ಮಾಡಿಕೊಂಡು ಯಾವ ಅಂಜಿಕೆ, ಮುಜುಗರ ಇಲ್ಲದೆ ಜೊತೆ ನಿಂತ ಇವರೆಲ್ಲರಿಗೂ ಅನಂತ ದನ್ಯವಾದಗಳು. ಮುಂದಕ್ಕೂ ಈ ಐಕ್ಯತೆಯೊಂದಿಗೆ ಮುನ್ನಡೆಯುವ.

- ಮುನೀರ್ ಕಾಟಿಪಳ್ಳ

ಕರಾವಳಿ ಜಿಲ್ಲೆಗಳಲ್ಲಿ ಸೌಹಾರ್ದತೆಯನ್ನು ಮರು ಸ್ಥಾಪಿಸಲು ಹಮ್ಮಿಕೊಂಡ ಕರಾವಳಿ ಸೌಹಾರ್ದ ರ್ಯಾಲಿಗೆ ಹಲವಾರು ಅಡೆತಡೆಗಳು ಬಂದರೂ, ವಿಕೃತ ಮನಸ್ಸುಗಳು ತೊಂದರೆಗಳನ್ನು ನೀಡಿದರೂ ಎದೆಗುಂದದ ಸೌಹಾರ್ದಪ್ರಿಯ ಮನಸ್ಸುಗಳು ಛಲ ಬಿಡದೆ ನಿರಂತರವಾಗಿ ಶ್ರಮ ವಹಿಸಿದ ಫಲವಾಗಿ ರ್ಯಾಲಿ ಯಶಸ್ವಿ ಕಂಡಿತು.. ಸೌಹಾರ್ದ ಮನಸ್ಸುಗಳು ಒಂದಾದವು... ಯಾವತ್ತೂ ಭಯ, ಅಭದ್ರತೆ ಕಾಡುವ ಮಂಗಳೂರಿನಲ್ಲಿ ಸೌಹಾರ್ದತೆಯ ಬೆಳಕೊಂದು ಮೂಡಿದೆ...

- ಸುನೀಲ್ ಕುಮಾರ್ ಬಜಾಲ್