ಸಾವಿನ ವ್ಯಾಪಾರಿ ಸಂಘ ಪರಿವಾರ, ಪಿಣರಾಯಿ ಅಲ್ಲ

ಸಂಪುಟ: 
11
ಸಂಚಿಕೆ: 
11
Sunday, 5 March 2017

ಫೆ. 25ರಂದು ಮಂಗಳೂರು ಸೌಹಾರ್ದ ರ್ಯಾಲಿಯಲ್ಲಿ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಕಾ. ಜಿ.ವಿ. ಶ್ರೀರಾಮರೆಡ್ಡಿ ಅವರ ಭಾಷಣದ ಪೂರ್ಣ ಪಠ್ಯ

ವೇದಿಕೆ ಮೇಲಿರುವ ಎಲ್ಲಾ ಸಿಪಿಐ(ಎಂ) ಪಕ್ಷದ ಮುಖಂಡರೇ,

ಒಂದು ವಾರದ ಕಾಲ ಸಂಘಪರಿವಾರದ ಬೆದರಿಕೆಗಳು, ದಾಳಿಗಳು ಎಲ್ಲವನ್ನು ಎದುರಿಸಿ ಹರತಾಳಕ್ಕೆ ಕರೆಕೊಟ್ಟರು ಕೂಡಾ, ಬಂದ್‍ಗೆ ಕರೆ ಕೊಟ್ಟರು ಕೂಡ, ಎದೆಗುಂದದೆ ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಒಂದಾಗಿ ನಿಂತು ಈ ಸೌಹಾರ್ದ ರ್ಯಾಲಿಯನ್ನು ಅತ್ಯಂತ ಯಶಸ್ವಿಗೊಳಿಸುವುದರ ಮುಖಾಂತರ ಸಂಘ ಪರಿವಾರದ ಶಕ್ತಿಗಳಿಗೆ ಒಂದು ಸವಾಲನ್ನು ಹಾಕಿದ್ದಾರೆ. ಅವರಿಗೆ ನಾನು ಸಿಪಿಐ(ಎಂ) ಪಕ್ಷದ ರಾಜ್ಯ ಸಮಿತಿ ಪರವಾಗಿ ಮೊಟ್ಟ ಮೊದಲಿಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ.

ಬಂಧುಗಳೇ! ದೇಶದ ರಾಜಕೀಯ ಪರಿಸ್ಥಿತಿ ಹಿನ್ನೆಲೆಯಲ್ಲಿ ಕೋಮುವಾದಿ ಶಕ್ತಿಗಳು ಯಾವ ರೀತಿಯಲ್ಲಿ ಆಕ್ರಮಣಕಾರಿಯಾಗಿ ಹೋಗ್ತಾ ಇವೆ, ಯಾವ ರೀತಿಯಲ್ಲಿ ದೇಶದ ಐಕ್ಯತೆಯನ್ನು ಒಡೆಯತಕ್ಕಂತ ಕೆಲಸ ಮಾಡುತ್ತಿವೆ ಅಂತ, ಕಾಂ. ಪಿಣರಾಯಿ ವಿಜಯನ ಕೇರಳ ಮುಖ್ಯಮಂತ್ರಿ ಮತ್ತು ಸಿಪಿಐ(ಎಂ) ಪಾಲಿಟ್‍ಬ್ಯೂರೋ ಸದಸ್ಯರು ಸ್ಪಷ್ಟವಾಗಿ ನಿಮ್ಮ ಮುಂದೆ ಹೇಳಿದ್ದಾರೆ. ಅದೇ ರೀತಿಯಲ್ಲಿ ಕರ್ನಾಟಕ ರಾಜ್ಯದಲ್ಲೂ ಕೂಡಾ ಕೋಮುವಾದಿ ಶಕ್ತಿಗಳು ಆಕ್ರಮಣಕಾರಿಯಾಗಿ ಹೋಗ್ತಾ ಇವೆ. ಈ ಸಭೆಯನ್ನು ಮಾಡದಂತೆ ಮಾಡಲಿಕ್ಕೆ ಎಲ್ಲಾ ರೀತಿಯಾದಂತಹ ಪ್ರಯತ್ನವನ್ನು ಮಾಡಿದ್ದಾರೆ. ನಿನ್ನೆ ಬಿಜೆಪಿಯ ಸಂಘ ಪರಿವಾರದವರು ಇಲ್ಲಿ ದೊಡ್ಡ ಪ್ರತಿಭಟನೆಯನ್ನ ಮಾಡುತ್ತೀವಿ, ಲಕ್ಷಗಟ್ಟಲೆ ಜನಗಳನ್ನು ಸೇರಿಸುತ್ತೀವಿ ಅಂತ ಹೇಳಿ ಕಡೆಗೆ ಇಲ್ಲೇ ಪಕ್ಕದಲೇ 2000 ಜನ ಸೇರಿಸಿ ಒಂದು ರ್ಯಾಲಿ ಮಾಡಿದರು. ಇದನ್ನು ಬೆದರಿಕೆ ಹಾಕಲಿಕ್ಕೆ ಅಲ್ಲಿ ಭಾಷಣ ಮಾಡಿದ ಮುಖಂಡರು ಹೇಳಿದರು. ಪಿಣರಾಯಿ ವಿಜಯನ ಸಾವಿನ ವ್ಯಾಪಾರಿ ಅಂತ ಹೇಳಿ. ನಾನು ಅವರನ್ನ ಕೇಳ್ತಾ ಇದ್ದೀನಿ ಈ ದೇಶದ ನಿಜವಾದ ಸಾವಿನ ವ್ಯಾಪಾರಿಗಳ್ಯಾರು? ಭಾರತ, ಪಾಕಿಸ್ತಾನ ಇಬ್ಬಾಗ ಆದಾಗ ನಡೆದಂತಹ ಲಕ್ಷ ಲಕ್ಷ ಜನರ ಮಾರಣಹೋಮ ನಡೆಸಿದ್ಯಾರು? ರಾಷ್ಟ್ರಪಿತ ಮಹಾತ್ಮಗಾಂಧಿಯವರನ್ನು ಕೊಲೆ ಮಾಡಿದ್ದು ಯಾರು? ಅಲ್ಲಿಂದ ಪ್ರಾರಂಭವಾಗಿ 2002 ರ ವರೆಗೂ ಕೂಡ ಭಾರತ ದೇಶದಲ್ಲಿ ನಡೆದಂತಹ ಮನುಷ್ಯರ ಮಾರಣ ಹೋಮಕ್ಕೆ ಕಾರಣರಾದಂತಹ ಸಂಘಪರಿವಾರದವರೇ ಸಾವಿನ ವ್ಯಾಪಾರಿಗಳು.

ಒಂದು ವಾರದಿಂದ ಏನು ಪ್ರಚಾರ ಮಾಡಿದ್ದೀರಿ? ನೀವು ಹಿಂದೂಗಳನ್ನು ಸಾಯಿಸುತ್ತಿದೆ ಪಿಣರಾಯಿ ವಿಜಯನ್ ಸರ್ಕಾರ. ಸಿಪಿಐ(ಎಂ) ಪಕ್ಷ ಹಿಂದುಗಳನ್ನ ಕೊಲೆ ಮಾಡುತ್ತಿದೆ. ಅವರನ್ನ ಮಂಗಳೂರಿಗೆ ಕಾಲಿಡಲಿಕ್ಕೆ ಬಿಡುವುದಿಲ್ಲವೆಂದು ಶಪಥ ಮಾಡಿದರು ಸಂಘ ಪರಿವಾರದ ನಾಯಕರು. ಕಾಲಿಟ್ಟರು ಬೆಳಿಗ್ಗೆ ಪಿಣರಾಯಿ ವಿಜಯನ್, ಕಾಲಿಟ್ಟಿದ್ದಾರೆ ದಕ್ಷಿಣ ಕನ್ನಡ ಜಿಲ್ಲೆಗೆ, ನಿಮ್ಮಗೆ ಸವಾಲು  ಹಾಕುತ್ತಿದ್ದೇವು, ಖಂಡಿತ ಪಿಣರಾಯಿ ವಿಜಯನ್ ಬರುತ್ತಾರೆ ಅಂತ ಹೇಳಿ. ಹಿಂದೂಗಳನ್ನು ಸಾಯಿಸಿದ್ದು ನಾವಲ್ಲ, ಈಗಾಗಲೇ ಪಿಣರಾಯಿ ವಿಜಯನ್ ಕೆಲವು ಹೆಸರುಗಳನ್ನು ಪ್ರಸ್ತಾಪ ಮಾಡಿದ್ದಾರೆ. ಕೇರಳದಲ್ಲಿ ಕಳೆದ ಚುನಾವಣೆಯಿಂದ ಈಚೆಗೆ ಸಿಪಿಐ(ಎಂ) ಪಕ್ಷದ ಏಳು ಜನರನ್ನ ಕೊಲೆ ಮಾಡಿದ್ದು ಆರೆಸ್ಸೆಸ್‍ನವರು, ಅವರೆಲ್ಲ ಹಿಂದೂಗಳೇ. ಆರೆಸ್ಸೆಸ್‍ನವರು ಸಾಯಿಸಿದವರು, ಅವರೆಲ್ಲ ಹಿಂದುಗಳಲ್ವ? ಇದೇ ದಕ್ಷಿಣ ಕನ್ನಡ ಕರಾವಳಿ ಪ್ರದೇಶದಲ್ಲಿ 13 ಜನ ಹಿಂದುಗಳನ್ನು, ನಿಮ್ಮ ಬಿಜೆಪಿ ಕಾರ್ಯಕರ್ತರನ್ನೇ ಕೊಲೆ ಮಾಡಿದ್ದಿರೀ ನೀವು ಹಿಂದುಗಳಾ? ನೀವು ಕೊಲೆ ಮಾಡಿದವರು ಹಿಂದುಗಳಲ್ವ? ನಿಮ್ಮಗೆ ಇವತ್ತು ಸಿಪಿಐ(ಎಂ) ಪಕ್ಷದ ಬಗ್ಗೆ ಹೆದರಿಕೆ ಬಂದಿದೆ ನಿಮಗೆ. ಹೆದರಿಕೆ ಬಂದು ದಾಳಿಯನ್ನು ಶುರುಮಾಡಿದ್ರಿ, ನಾವು ನಿಮಗೆ ಎಚ್ಚರಿಕೆಯನ್ನು ಕೊಡುತ್ತಿದ್ದೇವೆ, ನಾವು ಹೆದರುವವರಲ್ಲ. ಈ ದೇಶದ ವಾರಸುದಾರರು ಎಂದು ಹೇಳುವ ನೀವು ಮತ್ತು ನಿಮ್ಮ ಸಂಸ್ಕೃತಿ ಎಂತಾದ್ದು? ನಿಮ್ಮ ವರ್ಣಶ್ರಮ ವ್ಯವಸ್ಥೆಯನ್ನು ವಿರೋಧ ಮಾಡಿ ಸವಾಲು ಹಾಕಿದಂತವರನ್ನ ತಾತ್ವಿಕವಾಗಿ ಎದುರಿಸಲಾರದೆ ನಿಮ್ಮ ಕೊಲೆಗಡುಕ ರಾಜಕಾರಣವನ್ನ ಈ ದೇಶದ ಉದ್ದಗಲಕ್ಕೂ ಹರಡಿದವರು ನೀವು.

ಬಂಧುಗಳೇ, 5 ಸಾವಿರ ವರ್ಷಗಳಿಂದ ಭಾರತ ದೇಶ ಯಾವ ಮಹಾನ್ ಸಂಸ್ಕೃತಿಯನ್ನು ಸೃಷ್ಠಿ ಮಾಡಿತ್ತೋ, ಇಡೀ ಜಗತ್ತಿಗೆ ಮಾದರಿಯಾದಂತಹ ಒಂದು ಸಂಸ್ಕೃತಿ, ನಾಗರೀಕತೆಯನ್ನ ಬೆಳೆಸಿದಂತ ದೇಶ ಇದು. ಹಲವಾರು ನಾಗರೀಕತೆಗಳನ್ನು, ಹಲವಾರು ಸಂಸ್ಕೃತಿಗಳನ್ನು ಬೆಳೆಸಿದಂತ ದೇಶ ಇದು. ಐದು ಸಾವಿರ ವರ್ಷಗಳಿಂದ ಭಾರತ ದೇಶದ ಜನ ಯಾವ ಭವ್ಯ ಸಂಸ್ಕೃತಿಯನ್ನ ಬೆಳೆಸಿದ್ದರೋ, ಅದನ್ನ ಸರ್ವನಾಶ ಮಾಡಲಿಕ್ಕೆ ಹೊರಟವಂತವರು ನೀವು. ಎಲ್ಲವನ್ನು ನಾಶ ಮಾಡಲಿಕ್ಕೆ ಹೊರಟಿದ್ದೀರಿ. ಎಲ್ಲವನ್ನೂ ಸರ್ವನಾಶ ಮಾಡಲಿಕ್ಕೆ ಹೊರಟೀದ್ದೀರಿ, ಬಹುಸಂಸ್ಕೃತಿಯನ್ನು, ಬಹುನಾಗರೀಕತೆಯನ್ನು,  ಬಹುಭಾಷಾಭಿಮಾನವನ್ನ, ಕಾರ್ಮಿಕ ಐಕ್ಯತೆಯನ್ನು ನಾಶ ಮಾಡಲಿಕ್ಕೆ ಹೊರಟಿದ್ದೀರಿ. ಎಲ್ಲ ಧರ್ಮಗಳು ಹುಟ್ಟಿ ಬೆಳೆದಂತಹ ದೇಶ, ಆ ದೇಶದ ಧಾರ್ಮಿಕ ಐಕ್ಯತೆಯನ್ನ ಒಡಿಲಿಕ್ಕೆ ನೀವು ಪ್ರಯತ್ನ ಮಾಡುತ್ತಿದ್ದೀರಿ. ಐದು ಸಾವಿರ ವರ್ಷಗಳಿಂದ ನಾವು ಏನನ್ನೂ ರಕ್ಷಣೆ ಮಾಡಿಕೊಂಡು ಬಂದಿದ್ದೇವೋ ಅದೆಲ್ಲವನ್ನೂ ನಾಶಮಾಡಲಿಕ್ಕೆ ಹೊರಟಿರುವಂತದು ರಾಷ್ಟ್ರೀಯ ಸರ್ವನಾಶಕ ಸಂಘ, ಆರೆಸ್ಸೆಸ್, ಈ ದೇಶದ ಸರ್ವಸ್ವವನ್ನು ನಾಶ ಮಾಡಲಿಕ್ಕೆ ಹೊರಟಿದೆ. ಸಿಪಿಐ(ಎಂ) ಪಕ್ಷ ನಿಮಗೆ ಸವಾಲಾಕಿ ಹೇಳ್ತಾ ಇದ್ದೀವಿ, ಯಾವ ಕಾರಣಕ್ಕೂ ನಾವು ಈ ನಾಶ ಮಾಡೋ ಸಂಸ್ಕೃತಿನ ಬಿಡೋದಿಲ್ಲ. ನಿಮ್ಮನ ಎದುರಿಸ್ತೀವಿ ಅಂತ ಎಚ್ಚರಿಕೆಯನ್ನು ಕೊಡುತ್ತಿದ್ದೀವಿ.

ಬಂಧುಗಳೇ, ನಿಮ್ಮನ್ನ ಎದುರಿಸುವವರನ್ನು ಕೊಲೆ ಮಾಡುವುದು ನಿಮ್ಮ ಸಂಸ್ಕೃತಿ. ಕೈಲಾಗದ ರಣಹೇಡಿಗಳು ನೀವು. ಶಂಭುಕನನ್ನು ಎದುರಿಸಲಾರದೆ ತಲೆ ಕಡಿದಿದ್ದೀರಿ ನೀವು ರಾಮಾಯಣದಲ್ಲಿ. ಏಕಲವ್ಯನಿಗೆ ಹೆದರಿ ಹೆಬ್ಬೆಟ್ಟು ಕತ್ತರಿಸಿದಂತಹ ಸಂಸ್ಕೃತಿ ನಿಮ್ಮದು. ಅದೇ ರೀತಿಯಲ್ಲೇನೆ ಕರ್ಣನ ಕರ್ಣಕುಂಡಲವನ್ನು ಕಿತ್ತುಕೊಂಡು ಮೋಸದಿಂದ ಕೊಂದಂತಹ ಸಂಸ್ಕೃತಿ ನಿಮ್ಮದು. ಸಿಪಿಐ(ಎಂ) ಪಕ್ಷವನ್ನ ಎದುರಿಸಲಿಕ್ಕೆ ತೊಕ್ಕೊಟ್ಟಿನಲ್ಲಿ ನಮ್ಮ ಆಫೀಸಿಗೆ ಬೆಂಕಿ ಹಾಕತೀರಿ ನೀವು, ಬೆದರಿಸಿದರೆ, ಬೆಂಕಿ ಹಾಕಿದರೆ ನಮ್ಮ ಕಾರ್ಯಕ್ರಮ ನಿಲ್ಲುತ್ತೇ ಅಂದುಕೊಂಡ್ರ? ನೀವು ಬಂಟಿಂಗ್ಸ್‍ನ ಹರಿದು ಹಾಕಿದ್ದೀರಿ, ಬ್ಯಾನರ್ಸ್‍ಗಳನ ಹರಿದು ಹಾಕೀದ್ದೀರಿ ಕಟೌಟ್‍ನ್ ಹರಿದು ಹಾಕಿದ್ದೀರಿ. ಸಿಪಿಐ(ಎಂ) ಪಕ್ಷದ ಹೆದರಿಕೆ ಬಂದಿದೆ ನಿಮಗೆ. ನಿಮಗೆ ಧೈರ್ಯ ಇದ್ದರೆ, ತಾತ್ವಿಕವಾಗಿ ನಮ್ಮ ಜೊತೆ ಸಂವಾದಕ್ಕೆ ಬನ್ನಿ, ನಿಮ್ಮ ಕೋಪ ತೋರಿಸುವುದು ಬ್ಯಾನರು, ಪ್ಲೇಕ್ಸ್‍ಗಳ ಮೇಲಲ್ಲ. ಕಳ್ಳರ ರೀತಿಯಲ್ಲಿ ಮಧ್ಯರಾತ್ರಿಯಲ್ಲಿ ಹೋಗಿ ಆಫೀಸಿಗೆ ಹೋಗಿ ಬೆಂಕಿ ಹಾಕುವುದು ನಿಮ್ಮ ಶೌರ್ಯ ಅಲ್ಲ, ನಿಮ್ಮ ಹೇಡಿತನ. ನಾವು ಸವಾಲಾಕುತ್ತ ಇದ್ದೀವಿ - ಬನ್ನಿ ಚರ್ಚೆಗೆ. ತಾತ್ವಿಕವಾಗಿ ಸಿಪಿಐ(ಎಂ) ಪಕ್ಷವನ್ನ ಎದುರಿಸಿ. ಕಳ್ಳರ ರೀತಿಯಲ್ಲಿ, ಗೂಂಡಾಗಳ ರೀತಿಯಲ್ಲಿ, ಸಮಾಜಘಾತುಕ ಶಕ್ತಿಗಳ ರೀತಿಯಲ್ಲಿ ದಬ್ಬಾಳಿಕೆ ಮಾಡುವುದಲ್ಲ, ಹೆದರಿಸುವುದಲ್ಲ, ಸಿಪಿಐ(ಎಂ) ಪಕ್ಷದ ಕಮ್ಯೂನಿಸ್ಟರ ಇತಿಹಾಸ ನಿಮಗೆ ಗೊತ್ತಿಲ್ಲ. ನಿಮ್ಮ ಪೂರ್ವಜ ಇದ ಹಿಟ್ಲರ್‍ಗೆ ಗೋರಿ ಕಟ್ಟಿಸಿದ್ದು ಕಮ್ಯೂನಿಸ್ಟ್ ಪಕ್ಷ. ನೆನಪಿರಬೇಕು ಆರೆಸ್ಸೆಸ್ ನವರಿಗೆ ಮುಸಲೋನಿಗೆ ಸಮಾಧಿ ಕಟ್ಟಿಸಿದ್ದು ಕಮ್ಯೂನಿಸ್ಟ್ ಪಕ್ಷ. ಭಾರತ ದೇಶದಲ್ಲಿ ನಿಮಗೆ ಗೋರಿ ತೋಡೋರು ಸಿಪಿಐ(ಎಂ) ಪಕ್ಷ ಮತ್ತು ಕಮ್ಯೂನಿಸ್ಟರು.

ನಿಮ್ಮ ಕೈಯಲ್ಲಿ ಸಿಪಿಐ(ಎಂ) ಪಕ್ಷವನ್ನ ತಾತ್ವಿಕವಾಗಿ, ರಾಜಕೀಯವಾಗಿ ಎದುರಿಸುವ ಶಕ್ತಿ ಇಲ್ಲದೆ ದಾಳಿ, ದಬ್ಬಾಳಿಕೆಗೆ ಇಳಿತೀರಿ. ತಾತ್ವಿಕವಾಗಿ ಒಂದು ಸಿದ್ದಾಂತವನ್ನು ಎದುರಿಸಲಿಕ್ಕೆ ಶಕ್ತಿ ಇಲ್ಲದವರು. ಬುದ್ಧಿ ಶಕ್ತಿ ಇರದ ದೀವಾಳಿಕೋರರು, ಶಾರೀರಿಕ ಶಕ್ತಿಯನ್ನು ಉಪಯೋಗಿಸುತ್ತಾರೆ. ಅದನ್ನೆ ಫ್ಯಾಸಿಸಂ ಅಂತ ಕರಿಯೋದು. ತನ್ನ ಅಭಿಪ್ರಾಯಕ್ಕೆ ವಿರೋಧ ಇದಂತವರನ್ನು ಕೊಲೆ ಮಾಡುವವರು. ಚರ್ಚೆ ಮಾಡಲಿಕ್ಕೆ,  ಸಂವಾದದಿಂದ ಚರ್ಚೆಯಿಂದ ಪರಿಹಾರ ಮಾಡಲಿಕ್ಕೆ ತಯಾರಿಲ್ಲ. ದಬ್ಬಾಳಿಕೆಯಿಂದ ಎದುರಿಸಲಿಕ್ಕೆ ಹೊರಟಿದ್ದೀರಿ. ದಕ್ಷಿಣ ಕನ್ನಡ ಜಿಲ್ಲೆ ಕರಾವಳಿಯಲ್ಲಿ ಸತತವಾಗಿ ಐದು ವರ್ಷಗಳಿಂದ ನಿಮ್ಮ ಕೋಮುವಾದಿ ಆರೆಸ್ಸ್‍ಸ ಸಂಘ ಪರಿವಾರ ವಿರುದ್ಧ ನೇರವಾದ ಸಂಘರ್ಷಕ್ಕೆ ನಾವು ಇಳಿದಿದ್ದೀವಿ. ಅದರ ಒಂದು ಭಾಗವೇ ಈ ಸೌಹಾರ್ದ ರ್ಯಾಲಿ.

ದಕ್ಷಿಣ ಕನ್ನಡ ಜಿಲ್ಲೆ ಕರಾವಳಿಯಲ್ಲಿ ಸೌಹಾರ್ದತೆ ನೆಲೆಸಬೇಕೆಂದು ನಾವು ಕೇಳ್ತಾ ಇದ್ದೀವಿ. ನಿಮಗೆ ನಿಜವಾಗಲೂ ಸೌಹಾರ್ಧತೆಯ ಬಗ್ಗೆ ಗೌರವವಿದ್ದರೆ, ನೀವಿದಕ್ಕೆ ಬೆಂಬಲ ಕೊಡಬೇಕಾಗಿತ್ತು. ನಮ್ಮನ್ನ ವಿರೋಧಮಾಡಿದ್ದೀರಿ ಅಂತ ಹೇಳಿದ್ರ ನಿಮಗೆ ಸೌಹಾರ್ದ ಬೇಕಾಗಿಲ್ಲ. ಸೌಹಾರ್ದ ಬೇಕು, ಆ ಸೌಹಾರ್ದತೆಯನ್ನೆ ಕಾಪಾಡಲಿಕ್ಕೆ, ಐಕ್ಯತೆಯನ್ನ ಕಾಪಾಡಲಿಕ್ಕೆ, ಶಾಂತಿಯನ್ನು ರಕ್ಷಣೆ ಮಾಡಲಿಕ್ಕೆ ಎಂತಹ ತ್ಯಾಗಕ್ಕೂ ಕೂಡ ಸಿಪಿಐ(ಎಂ) ಸಿದ್ಧವಾಗಿದೆ. ಈ ರ್ಯಾಲಿಯನ್ನ ಸೌಹಾರ್ಧ ರ್ಯಾಲಿಯನ್ನ, ನೀವು ಎಷ್ಟೇ ಬೆದರಿಕೆಗಳನ್ನು ಹಾಕಿದರೂ ನಮ್ಮ ಕಾರ್ಯಕರ್ತರು ನಿಮ್ಮನ್ನು ಎದುರಿಸಿ ಇದನ್ನು ಯಶಸ್ವಿಗೊಳಿಸಿದ್ದಾರೆ. ನಿಮಗೆ ಅರ್ಥವಾಗಿದೆ ಸಿಪಿಐ(ಎಂ) ನಿಮ್ಮ ಗೊಡ್ಡು ಬೆದರಿಕೆಗಳಿಗೆ ಹೆದುರೋದಿಲ್ಲ.

ನೀವು ತಿಳಿದುಕೊಂಡಿರಬಹುದು ಕಮ್ಯೂನಿಸ್ಟರು ಕೇವಲ ಕೂಲಿಗೋಸ್ಕರ ಹೋರಾಟ ಮಾಡ್ತಾರೆ ಅಂತ. ಕೂಲಿ ಮಾಡುವ ಶ್ರಮಶಕ್ತಿಗಳೇ ಇಲ್ಲದೇ ಇದಿದ್ರೇ ಈ ದೇಶದ ಸಂಪತ್ತು ಬೆಳೆಯುತ್ತಿರಲಿಲ್ಲ. ಆ ದುಡಿಯುವ ಜನ ಕಮ್ಯೂನಿಸ್ಟ್ ಪಕ್ಷದ ಜೊತೆ ಇದ್ದಾರೆ. ಧರ್ಮ, ಜಾತಿಗಳ ಹೆಸರಿನಲ್ಲಿ ಅವರ ಐಕ್ಯತೆಯನ್ನ ಒಡೆಯಲಿಕ್ಕೆ ಹೋಗಿದ್ದೀರಿ. ಇಡೀ ಕರ್ನಾಟಕ ರಾಜ್ಯದಲ್ಲಿ ಇವತ್ತು ಚುನಾವಣೆ ಹತ್ತಿರ ಬರುತ್ತಿದೆ. ಹೈದರಾಬಾದ್ ಕರ್ನಾಟಕಕ್ಕೆ ಹೋಗಿದ್ದೀರಿ, ಅಲುಗುಮಾಲೆ ಹೆಸರಿನಲ್ಲಿ ಎಸ್.ಟಿ. ಗಳನ್ನ ಸಂಘಟನೆ ಮಾಡಲಿಕ್ಕೆ ಹೊರಟಿದ್ದೀರಿ. ಬಾಂಬೆ ಕರ್ನಾಟಕದಲ್ಲಿ ಕುರುಬರನ್ನು ಸಂಘಟನೆ ಮಾಡಲಿಕ್ಕೆ ಸಂಗೊಳ್ಳಿ ರಾಯಣ್ಣನ ಹೆಸರನ್ನ ಹೇಳುತ್ತೀರಿ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದುರ್ಗಾ ಪರಮೇಶ್ವರಿ ಮಾಲೆಯನ್ನ ಹಾಕಲಿಕ್ಕೆ ಹೊರಟಿದ್ದೀರಿ. ಚಿಕ್ಕಮಂಗಳೂರಿನಲ್ಲೂ ದತ್ತ ಮಾಲೆ ಅಂತ ಹೇಳುತ್ತಿರಿರೀ ಎಲ್ಲಾ ಮಾಲೆಗಳು ನಿಮ್ಮ ರಾಜಕೀಯ ತಂತ್ರಗಾರಿಕೆಗೆ, ಮತರಾಜಕಾರಣಕ್ಕೊಸ್ಕರ. ಜಾತಿ ಜಾತಿಗಳ ಮಧ್ಯೆ, ಧರ್ಮ ಧರ್ಮಗಳ ಮಧ್ಯೆ ಸಂಘರ್ಷಗಳನ್ನು ಉಂಟುಮಾಡಲಿಕ್ಕೆ ಹೊರಟಿದ್ದೀರಿ.

ಕರ್ನಾಟಕ ರಾಜ್ಯದಲ್ಲಿ ನಿಮ್ಮ ಆಟವನ್ನು ಆಡಲಿಕ್ಕೆ ಸಿಪಿಐ(ಎಂ) ಬಿಡೋದಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀವು ನಡೆಸಿದಂತಹ ಕೊಲೆಗಳೆಷ್ಟು, 13 ಜನ ಹಿಂದುಗಳನ್ನ ಕೊಲೆ ಮಾಡಿದ್ದೀರಿ. ಪಟ್ಟಿ ಇದೆ. 13 ಜನ ವಿನಾಯಕ ಬಾಳಿಗದಿಂದ ಹಿಡಿದು ಪ್ರತಾಪ ಪೂಜಾರಿವರೆಗೂ 13 ಜನರನ್ನು ಕೊಲೆ ಮಾಡಿದ್ದು ನೀವು. ಬಿಜೆಪಿ, ಆರೆಸ್ಸೆಸ್ ಸಂಘಪರಿವಾರದವರು ಯಾಕೆ ಕೊಲೆ ಮಾಡಿದ್ದೀರಿ ಹೇಳ್ರಿ. ದಕ್ಷಿಣ ಕನ್ನಡ ಜಿಲ್ಲೆಯನ್ನು ಕೋಮುವಾದಿ ಶಕ್ತಿಗಳು ತಮ್ಮ ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡಿವೆ. ಅದರ ವಿರುದ್ಧ ಸಿಪಿಐ(ಎಂ) ಪಕ್ಷ ಸಂಘರ್ಷ ನಡೀತಾ ಇದೆ ಇವತ್ತು. ಸೌಹಾರ್ಧತೆಗಾಗಿ ಸಂಘರ್ಷವನ್ನು ನಡೆಸುತ್ತಿದ್ದೇವೆ ನಾವಿವತ್ತು.

ಬಂಧುಗಳೇ, ಕರ್ನಾಟಕ ರಾಜ್ಯದಲ್ಲಿ ಒಂದು ವರ್ಷ ಇದೆ ಚುನಾವಣೆ. ಆ ಚುನಾವಣಾ ರಾಜಕಾರಣಕೊಸ್ಕರ ಕೋಮುಗಲಭೆಗಳನ್ನು ಸೃಷ್ಟಿ ಮಾಡಲಿಕ್ಕೆ ಹೊರಟಿದ್ದಾರೆ. ನಾವು ಎಚ್ಚರಿಕೆಯಿಂದ ಇರಬೇಕು. ನಾನು ಕರ್ನಾಟಕ ರಾಜ್ಯದ ಎಲ್ಲಾ ಜಾತ್ಯಾತೀತ ಪಕ್ಷಗಳಲ್ಲಿ ವಿನಂತಿ ಮಾಡ್ತಾ ಇದ್ದೀನಿ. ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿದೆ ಕರ್ನಾಟಕ. ಭಾರತ ದೇಶವು ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿದೆ. ಒಂದು ಕಡೆ ಅಲ್ಪಸಂಖ್ಯಾತರ ಮೇಲೆ ದಾಳಿ, ಇನ್ನೊಂದು ಕಡೆ ದಲಿತರ ಮೇಲೆ ದಾಳಿ, ಮಹಿಳೆಯರ ಮೇಲೆ ದಾಳಿ, ಭೌತಿಕ ಚಿಂತನೆಗಳ ಮೇಲೆ ದಾಳಿ, ವಿಶ್ವವಿದ್ಯಾನಿಲಯಗಳ ಮೇಲೆ ದಾಳಿ. ಕಡೆಗೆ ಬೌದ್ಧಿಕ ಚಿಂತನೆಯಲ್ಲಿ ನಿಮ್ಮಗೆ ವಿರುದ್ಧವಾಗಿರುವವರ ಕೊಲೆಗಳನ್ನು ಮಾಡಲಿಕ್ಕೆ ಹೊರಟಿದ್ದೀರಿ. ಗೋವಿಂದ, ಪನ್ಸಾರೆ, ದಾಬೋಲ್ಕರ್, ಡಾ| ಕಲಬುರ್ಗಿಯಿಂದ ಹಿಡಿದು ಎಲ್ಲರನ್ನು ಕೂಡ. ವಿಶ್ವವಿದ್ಯಾನಿಲಯಗಳ ಮೇಲೆ ದಾಳಿ ಮಾಡುತ್ತಿದ್ದೀರಿ. ನಾವು ಏನು ತಿನ್ನಬೇಕು-ಏನು ತಿನ್ನಬಾರದು; ಏನು ಮಾತನಾಡಬೇಕು - ಏನು ಮಾತನಾಡಬಾರದು; ಯಾವ ರೀತಿ ಬಟ್ಟೆ ಹಾಕಬೇಕು - ಯಾವ ರೀತಿ ಬಟ್ಟೆ ಹಾಕಬಾರದು; ನಾವು ಯಾರನ್ನು ಮದುವೆ ಆಗಬೇಕು - ನಾವು ಯಾರನ್ನು ಮದುವೆಯಾಗಬಾರದು - ಎಂದು ನೀವು ನಿರ್ದೇಶನ ಮಾಡುವ ಸ್ಥಿತಿಗೆ ಬಂದಿದೆ.

ನಿನ್ನೆ ನನಗೆ ಒಬ್ಬರು ಪತ್ರಕರ್ತರು ಪ್ರಶ್ನೆ ಕೇಳ್ತಾರೆ, ಪಿಣರಾಯಿ ವಿಜಯನ್ ಬರಲಿಕ್ಕೆ ವಿರೋಧವಿಲ್ಲ, ಅವರು ಸೌಹಾರ್ದತೆ ಬಗ್ಗೆ ಮಾತನಾಡಬಾರದು ಅಂತ ಹೇಳಿ. ಏನು ಅದರರ್ಥ? ಒಂದು ರಾಜ್ಯದ ಮುಖ್ಯಮಂತ್ರಿ ಏನು ಮಾತನಾಡಬಾರದು - ಏನು ಮಾತನಾಡಬೇಕೆನ್ನುವುದನ್ನ ಯಾರು ತೀರ್ಮಾನ ಮಾಡುವುದು? ಈ ಫ್ಯಾಸಿಸ್ಟ್ ಮನೋಭಾವವನ್ನು ಸಿಪಿಐ(ಎಂ) ಪಕ್ಷ ಖಂಡಿತವಾಗಿಯೂ ಸಹಿಸಲಿಕ್ಕೆ ಸಾಧ್ಯವಿಲ್ಲ. ದಕ್ಷಿಣ ಕನ್ನಡ ಜಿಲ್ಲೆ ಜನರಲ್ಲಿ ವಿನಂತಿ ಮಾಡ್ತಿದೀನಿ. ಕರ್ನಾಟಕ ರಾಜ್ಯದಲ್ಲಿ ಸಿಪಿಐ(ಎಂ) ಪಕ್ಷ ಬಹಳ ದೊಡ್ಡ ಪಕ್ಷ ಅಂತ ನಾವೇನ್ ಹೇಳ್ತಿಲ್ಲ. ಆದರೆ ಒಂದು ಸ್ವಷ್ಟ ಮಾಡ್ತಾ ಇದ್ದೇವೆ. ಇವತ್ತು ಎಲ್ಲಾ ಕರ್ನಾಟಕ ರಾಜ್ಯದ ದೊಡ್ಡ ಸಣ್ಣ ರಾಜಕೀಯ ಪಕ್ಷಗಳು ಕೋಮುವಾದಿ ಶಕ್ತಿಗಳ ವಿರುದ್ಧ ಬಾಯಿ ಬಿಚ್ಚಲಿಕ್ಕೆ ತಯಾರಿಲ್ಲ. ಆದರೆ ಸಿಪಿಐ(ಎಂ) ಪಕ್ಷ ಮಾತ್ರವೇ ಕರ್ನಾಟಕ ರಾಜ್ಯದಲ್ಲಿ ಇವತ್ತು ನಿರಂತರವಾಗಿ ಕೋಮುವಾದಿ ಶಕ್ತಿಗಳಿಗೆ ಸವಾಲಾಕಿ ಹೋರಾಟ ಮಾಡ್ತಿದ್ದೀವಿ. ಇದೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಕೋಮುವಾದಿ ಶಕ್ತಿಗಳ ವಿರುದ್ಧ ದಾಳಿಯನ್ನ ನಡೆಸುತ್ತಿರುವುದು ನಾವು.

ಹಾಗಾಗಿ ಕೋಮುವಾದಿ ಶಕ್ತಿಗಳ ವಿರುದ್ಧ ಸಿಪಿಐ(ಎಂ) ಪಕ್ಷ ನಡೆಸುತ್ತಿರುವಂತಹ ಈ ಹೋರಾಟಕ್ಕೆ ಕರ್ನಾಟಕ ರಾಜ್ಯದ ಎಲ್ಲಾ ಪ್ರಗತಿಪರ ಶಕ್ತಿಗಳು, ಬರಹಗಾರರು, ಪ್ರಜಾಪ್ರಭುತ್ವ ಶಕ್ತಿಗಳು ಈ ಬೆಂಬಲ ಕೊಡಬೇಕು. ಅದೇ ರೀತಿಯಲ್ಲಿ ಕರಾವಳಿ ಪ್ರದೇಶದ ಜನ ಇವತ್ತು ನೀವು ತೋರಿಸಿ ಕೊಟ್ಟಿದ್ದೀರಿ. ನಿಮ್ಮ ಪರವಾಗಿ ನಾವು ಇದ್ದೀವಿ ಅಂತ ತೋರಿಸಿಕೊಟ್ಟಿದ್ದೀರಿ. ಬಂದ್‍ಗೆ ಕರೆ ಕೊಟ್ಟರೂ ಜನ ಹೆದರಲಿಲ್ಲ. ಕೆಲವರು ಪಾಪ ಕಲ್ಲು ಹೊಡೆಯುತ್ತಾರಂತ ಭಯ ಬಿದ್ದು ಅಂಗಡಿ ಬಾಗಿಲು ಮುಚ್ಚಿದ್ದಾರೆ ಅಷ್ಟೇ. ಅದ್ದರಿಂದ ಬಂಧುಗಳೇ, ಈ ಸೌಹಾರ್ದ ರ್ಯಾಲಿ ನಡೀತಿರುವಂತಹ ಸಂದರ್ಭದಲ್ಲಿ ನಮ್ಮ ಈ ಹೋರಾಟಕ್ಕೆ ಕರ್ನಾಟಕ ರಾಜ್ಯದ ಉದ್ದಗಲಕ್ಕೂ ಬರಹಗಾರರು, ಮೇಧಾವಿಗಳು, ಬುದ್ದೀಜೀವಿಗಳು, ಸ್ವಾಮಿಗಳು, ಸಂಘಟನೆಗಳು, ಸ್ನೇಹಿತರು ಈ ರ್ಯಾಲಿಗೆ ಬೆಂಬಲ ಕೊಟ್ಟಿದ್ದಾರೆ. ಅವರೆಲ್ಲರಿಗೂ ಕೂಡ ನಾನು ಸಿಪಿಐ(ಎಂ) ಪಕ್ಷದ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಬಂಧುಗಳೇ. ಅದೇ ರೀತಿ ಕರಾವಳಿ ಪ್ರದೇಶದ ಜನ, ದಕ್ಷಿಣ ಕನ್ನಡದ ಜಿಲ್ಲೆಯ ಜನ ಈ ಸೌಹಾರ್ಧ ರ್ಯಾಲಿಯ ಯಶಸ್ವಿಗಾಗಿ ನಮಗೆ ಎಲ್ಲಾ ರೀತಿಯಾದಂತಹ ಸಹಕಾರವನ್ನು ಕೊಟ್ಟಿದ್ದಾರೆ. ಅವರಿಗೂ ಕೂಡ ನಾನು ಧನ್ಯವಾದಗಳನ್ನ ಅರ್ಪಿಸುತ್ತಾ ಇದೀನಿ. ಆದರೆ ಇಂತಹ ಒಂದು ಕಠಿಣ ಪರಿಸ್ಥಿತಿಯನ್ನ ಎದುರಿಸಿ ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಸಮಿತಿಯ ಮುಖಂಡತ್ವ ಮತ್ತು ಎಲ್ಲಾ ಪಕ್ಷದ ಸದಸ್ಯರು ಒಬ್ಬ ವ್ಯಕ್ತಿಯಾಗಿ ನಿಂತು ಕೋಮುವಾದಿಗಳ ಸವಾಲಿನ ದಬ್ಬಾಳಿಕೆಯನ್ನು ಎದುರಿಸಿ ಯಶಸ್ವಿ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಸಿಪಿಐ(ಎಂ) ಪಕ್ಷದ ಎಲ್ಲಾ ಮುಖಂಡರಿಗೂ ನಾನು ರಾಜ್ಯ ಸಮಿತಿಯ ಪರವಾಗಿ ಧನ್ಯವಾದಗಳನ್ನ ಅರ್ಪಿಸುತ್ತೇನೆ. ಹಾಗೆನೇ ಇದನ್ನ ಯಶಸ್ವಿ ಮಾಡಲಿಕ್ಕೆ ಜಿಲ್ಲಾ ಆಡಳಿತ ಮತ್ತು ವಿಶೇóಷವಾಗಿ ಪೊಲೀಸರು ನಮಗೆ ಸಹಕಾರ ಕೊಟ್ಟಿದೆ. ಅವರಿಗೂ ಕೂಡ ಧನ್ಯವಾದಗಳನ್ನು ಅರ್ಪಿಸಿ ನನ್ನ ಮಾತುಗಳನ್ನು ಮುಗಿಸುತ್ತೇನೆ.

ಒಕ್ಕೂಟ ವ್ಯವಸ್ಥೆ ಹಾಗೂ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವ ರಾಷ್ಟ್ರೀಯ ಪಕ್ಷವೊಂದು ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ಈ ರೀತಿ ವಿರೋಧ ವ್ಯಕ್ತಪಡಿಸುತ್ತಿರುವುದು ಅವರ ಬೌಧ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಶಾಂತಿ ಕದಡುವ ಏಕಮಾತ್ರ ಗುರಿ ಬಿಜೆಪಿಯದ್ದು. ಜವಾಬ್ದಾರಿಯುತ ಸಂಸದ, ಶಾಸಕರು ಪಿಣರಾಯಿ ವಿಜಯನ್ ಅವರ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದು ಎನ್.ಡಿ.ಎ. ಸರ್ಕಾರದ ಅಜೆಂಡಾದ ಭಾಗ. ಇದನ್ನು ತಡೆಯಲು ರಾಜ್ಯ ಸರ್ಕಾರ ಮುಂದಾಗಬೇಕು.

- ಕೆ. ಅಮರನಾಥ ಶೆಟ್ಟಿ, ಮಹಮ್ಮದ್ ಕುಂಞ,
ಅಕ್ಷಿತ್ ಸುವರ್ಣ, ಹೈದರ್ ಪರ್ತಿಪಾಡಿ (ಜೆ.ಡಿ.ಎಸ್ ದ.ಕ. ಜಿಲ್ಲಾ ಘಟಕ)

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ, ವಿ.ಎಚ್.ಪಿ., ಭಜರಂಗದಳ ಕರೆ ನೀಡಿರುವ ಹರತಾಳವು ಕೋಮುಗಲಭೆ ಸೃಷ್ಟಿಸುವ ಹುನ್ನಾರವಾಗಿದೆ. ಪ್ರಜಾಪ್ರಭುತ್ವ  ವ್ಯವಸ್ಥೆಯಲ್ಲಿ ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ. ಕೇರಳದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ ನಡೆಯುತ್ತಿದೆ ಎಂದು ಹೇಳಿಕೆ ನೀಡುತ್ತಾ ಇಡೀ ಸಮಾಜವನ್ನು ತಪ್ಪುದಾರಿಗೆ ಎಳೆಯುತ್ತಿರುವುದು ಖಂಡನೀಯ. ಕೇರಳದಲ್ಲಿ ಬಿಜೆಪಿ ಸರ್ಕಾರ ರಚಿಸಲು ಸಾಧ್ಯವಾಗದ ಕಾರಣ ಈ ರೀತಿಯ ಅಪಪ್ರಚಾರ ಮಾಡಲಾಗುತ್ತಿದೆ. ಪೊಲೀಸರು ಕಾನೂನು ಕೈಗೆತ್ತಿಕೊಳ್ಳುವವರ ಹಾಗೂ ಸಮಾಜದ ಶಾಂತಿ, ಸಾಮರಸ್ಯ ಕದಡುತ್ತಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು.

- ಪಿ.ಬಿ. ಡೆಸಾ, ಉಪಾಧ್ಯಕ್ಷ, ಪಿ.ಯು.ಸಿ.ಎಲ್.