ಮಂಡ್ಯದಲ್ಲಿ ಮಹಿಳಾ ಕರ್ನಾಟಕ ಸಮಾವೇಶ ಸಮತೆಗಾಗಿ ಸಹಪಯಣ

ಸಂಪುಟ: 
11
ಸಂಚಿಕೆ: 
08
Sunday, 12 February 2017

“ಸಾಹಿತ್ಯ ಮತ್ತು ಚಳುವಳಿಗಳೆರೆಡೂ ಕೂಡ ಸತ್ಯ ಅನ್ವೇಷಣೆಯ ವಿಭಿನ್ನ ಮಾರ್ಗಗಳು. ಕನ್ನಡ ಸಾಹಿತ್ಯದಲ್ಲಿ ಪಂಪ, ಕುಮಾರವ್ಯಾಸ, ಮುದ್ದಣ್ಣ, ಜನ್ನ ಮೊದಲಾದವರಿಂದಲೇ ಚಳುವಳಿಯ ಪ್ರಜ್ಞೆ ಇದೆ. ಸಾಹಿತ್ಯದಲ್ಲಿರುವ ಅಂತಹ ಚಳುವಳಿಯ ಪ್ರಜ್ಞೆಯನ್ನು ಉದ್ದೇಶ ಪೂರ್ವಕವಾಗಿ ಮರೆಮಾಚಲಾಗುತ್ತಿದೆ. ಇದು ಚಳುವಳಿಗಳನ್ನು ಕಡೆಗಣಿಸುವ ಹುನ್ನಾರ” ಎಂದು ನಾಡೋಜ ಬರಗೂರು ರಾಮಚಂದ್ರಪ್ಪ ಹೇಳಿದರು.

`ಸಮತೆಗಾಗಿ ಸಹಪಯಣ’ ಮಹಿಳಾ ಕರ್ನಾಟಕ ಸಮಾವೇಶ-2017ನ್ನು ಮಂಡ್ಯದಲ್ಲಿ ಫೆ. 4 ರಂದು ಉದ್ಘಾಟಿಸಿ ಮಾತನಾಡಿದ ರಾಮಚಂದ್ರಪ್ಪರವರು `ಸಾಹಿತ್ಯ ಮತ್ತು ಚಳುವಳಿಗೆ ಸಂಬಂಧ ಇರಬೇಕಿಲ್ಲ’ ಎನ್ನುವುದೇ ಅಸಂಬದ್ದವಾದ ಮಾತು. ಸಾಹಿತಿಗಳೆಲ್ಲರೂ ಚಳುವಳಿಗಾರರಾಗಬೇಕಿಲ್ಲ. ಆದರೆ ಚಳುವಳಿಯ ಪ್ರಜ್ಞೆ, ಚಳುವಳಿಯ ಮನಸ್ಥಿತಿ ಇರಬೇಕು. ಅಂತಹ ಪರಂಪರೆ ಕನ್ನಡ ಸಾಹಿತ್ಯದಲ್ಲಿದೆ. ಹಾಗಾಗಿಯೇ ಇಂದಿಗೂ ಪಂಪನ `ಮನುಷ್ಯ ಜಾತಿ ತಾನೊಂದೇ ವಲಂ’ ಎಂಬ ಮಾತು ಘೋಷಣೆಯಾಗಿ ಬಳಕೆಯಾಗುತ್ತಿದೆ ಎಂದರು.

ಎಲ್ಲ ಚಳುವಳಿಗಳಂತೆ ಮಹಿಳಾ ಚಳುವಳಿಗಳು ಸ್ವಲ್ಪ ಶಕ್ತಿಗುಂದಿವೆ. ಆದರೆ ಆರೋಪಿಸಲಾಗುತ್ತಿರುವಂತೆ `ಚಳುವಳಿಗಳು ಸತ್ತಿಲ್ಲ’ ಎಂದ ಅವರು ಮಹಿಳಾ ಚಳುವಳಿಗಳು ಬದಲಾದ ಕಾಲಕ್ಕೆ ತಕ್ಕಂತೆ ಸ್ವರೂಪ ಬದಲಿಸಿಕೊಂಡಿವೆ. ಇನ್ನೂ ಬದಲಿಸಿಕೊಳ್ಳಬೇಕಿದೆ ಎಂದರು.

ಸಾಹಿತ್ಯ-ಕಲೆ-ಚಳುವಳಿಯ ಸಹಪಯಣದಲ್ಲಿ ಸಮಾಜದ ಭಾಷೆ, ಪರಿಭಾಷೆಗಳು ಬದಲಾಗಬೇಕು. ಭಾಷೆ ಬದಲಾದರೆ ಚಳುವಳಿಯ ಸ್ವರೂಪಗಳು ಬದಲಾಗುತ್ತವೆ ಎಂದರು.

ಸಾಹಿತ್ಯ ಮತ್ತು ಚಳುವಳಿಯನ್ನು, ಕಲೆ ಮತ್ತು ಚಳುವಳಿಯನ್ನು ಪ್ರತ್ಯೇಕಿಸುವ ಪ್ರಯತ್ನಗಳ ಬಗ್ಗೆ ಗಂಭೀರವಾಗಿ ಆಕ್ಷೇಪಿಸಿದ ಅವರು ಮಾರುಕಟ್ಟೆ ಕೇಂದ್ರಿತ ಆರ್ಥಿಕತೆಯು ಸಮಾಜದಲ್ಲಿ ಉಂಟು ಮಾಡುತ್ತಿರುವ ವಿಘಟನೆಯ ಬಗ್ಗೆ, ಸೃಷ್ಠಿಸುತ್ತಿರುವ ಕೂಗುಮಾರಿಗಳ ಬಗ್ಗೆ ಎಚ್ಚರ ವಹಿಸಬೇಕು ಎಂದರು.

ಚಳುವಳಿಗಳ ಬಗ್ಗೆ ನಿಕೃಷ್ಠವಾಗಿ ಮಾತನಾಡುತ್ತಿರುವುದೇ ಚಳುವಳಿಯ ಶಕ್ತಿಯ ಬಗ್ಗೆ ಆಳುವವರಿಗೆ ಇರುವ ಭಯವನ್ನು ತೋರಿಸುತ್ತದೆ. ಕ್ಯಾಶ್-ಲೆಸ್ ಸಮಾಜ ಮಾಡಲು ಹೊರಟಿರುವ ಸರ್ಕಾರ ಕ್ಯಾಷ್ಟ್ ಮತ್ತು ಕ್ಲಾಸ್ ಬಗ್ಗೆ ಮೌನ ವಹಿಸುತ್ತದೆ. ಇದನ್ನು ಮೀರಲು ಸಾಧ್ಯವಾಗುವುದು ಚಳುವಳಿಯಿಂದ ಪ್ರೇರಿತವಾದ ಸಾಹಿತ್ಯ ರಚನೆಯಾದಾಗ ಹಾಗೂ ಸಾಹಿತ್ಯದಿಂದ ಪ್ರೇರಿತ ಚಳುವಳಿ ಮೂಡಿದಾಗ ಎಂದರು.

ಸಮಾವೇಶದ ಆಶಯ ಭಾಷಣ ಮಾಡಿದ ಉಪನ್ಯಾಸಕಿ ಸವಿತ ಬನ್ನಾಡಿರವರು “ಹೆಣ್ಣಿ ಕೈಯಲ್ಲಿರುವ ಬೆಂಕಿ ಒಲೆ ಉರಿಸಿ ಅನ್ನ ಕೊಡುತ್ತದೆ. ಆದರೆ ಗಂಡಿನ ಕೈಸೇರಿದ ಬೆಂಕಿ ಮನೆ, ಊರು, ದೇಶ ಸುಡುತ್ತದೆ. ಆದ್ದರಿಂದ ಹೆಣ್ಣಿನಿಂದ ಈ ಸಮಾಜ, ದೇಶ ಜಗತ್ತು ರಕ್ಷಿಸುವ ಕಲೆಯನ್ನು ಕಲಿಯಬೇಕು” ಎಂದು ಮಾರ್ಮಿಕವಾಗಿ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್‍ರವರು ಜಗತ್ತಿನ ತಲ್ಲಣಗಳಿಗೆ ಉತ್ತರವಾಗಿ ಹೆಣ್ಣು ದೃಷ್ಟಿಕೋನ ಬೆಳೆಸಿಕೊಳ್ಳುವುದೊಂದೆ ಈಗಿರುವ ಮಾರ್ಗ ಎಂದರು.

“ಬಾಲ್ಯದಿಂದಲೇ ಸೌಂದರ್ಯ ಮತ್ತು ಸೇವೆ ಎಂಬ ಬಂಧನಗಳಲ್ಲಿ ಬಂಧಿಯಾಗುವ ಹೆಣ್ಣು ಅದನ್ನು ತೊಡೆಯುವತ್ತ ಹೆಜ್ಜೆ ಹಾಕಬೇಕು. ಹಾಗೆಯೇ ನಿಸರ್ಗ ಸಹಜವಾಗಿ ಮಾಡುವ ಪಾಲನೆ, ಪೋಷಣೆಯ ದೃಷ್ಟಿಕೋನವನ್ನೂ, ಮನೋಭಾವನ್ನೂ ಗಂಡಸರಲ್ಲಿ ಬೆಳೆಸಬೇಕು” ಎಂದು ಕರೆ ನೀಡಿದರು.

ಭಾರತದಲ್ಲಿ ಶೇಕಡ 60ರಷ್ಟು ಕುಟುಂಬಗಳು ಹೆಣ್ಣಿನ ನಿರ್ವಹಣೆಯಲ್ಲೇ ನಡೆಯುತ್ತಿದ್ದರೂ ಗಂಡು ಅಧಿಕಾರ, ಅಧೀನತೆ ಬಯಸುವ ನಾಚಿಕೆಗೇಡಿನ ಪರಿಸ್ಥಿತಿಯನ್ನು ಬದಲಾಯಿಸಲು ಹೆಣ್ಣಿಗೆ ಮಾತ್ರ ಸಾಧ್ಯ ಎಂದರು.

ಮುಖ್ಯ ಅತಿಥಿಯಾಗಿ ಕರ್ನಾಟಕ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳ ಮಾನಸರವರು ಮಾತನಾಡಿ “ಮಹಿಳೆಯರು ಆರ್ಥಿಕ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದರೂ, ಅವರ ಶ್ರಮಕ್ಕೆ ಬೆಲೆ ಕೊಡದೆ ಅವಳನ್ನು ದೇವತೆಯ ಸ್ಥಾನ ಕೊಟ್ಟು ಶೋಷಣೆ ಮಾಡುವ ಪ್ರವೃತ್ತಿಯನ್ನು” ಬಿಡಿಸಿಟ್ಟರು.

ಗರ್ಭದಿಂದಲೇ ಮಹಿಳೆಯನ್ನು ಸರಕನ್ನಾಗಿ ನೋಡುತ್ತಿರುವ ಮಾರುಕಟ್ಟೆ ಆಧಾರಿತ ಆರ್ಥಿಕತೆಯು ನಮ್ಮ ಶ್ರಮದ ಫಲವನ್ನು ಉಳ್ಳವರ ಮನೆಯ ಮುಂದಿನ ಚಿನ್ನದ ರಂಗೋಲಿಯಾಗಲು ಬಿಡಬಾರದೆಂದು ಹೇಳಿದರು.

ಚಿಂತನೆ ಮತ್ತು ಚಳುವಳಿಗಳನ್ನು ಒಟ್ಟಿಗೆ ಬೆಸೆಯುವ ನಿಟ್ಟಿನಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಮತ್ತು ಕನ್ನಡ ಪುಸ್ತಕ ಪ್ರಾಧಿಕಾರ ಸಹಯೋಗದಲ್ಲಿ ಮಂಡ್ಯದಲ್ಲಿ ನಡೆದ ಎರಡು ದಿನಗಳ ಸಮಾವೇಶದ ಮೊದಲ “ನುಡಿಯೊಡನಾಟ - ಮಹಿಳೆಯ ಭಿನ್ನ ಅನುಭವ ಲೋಕದೊಂದಿಗೆ” ಸಂವಾದ ಗೋಷ್ಠಿಯಲ್ಲಿ ಎಚ್.ಎಲ್. ಪುಷ್ಪ, ಮಾಳಮ್ಮ, ದೇವಿ ಮಳವಳ್ಳಿ, ಚಾಂದನಿ, ಅನುರಾಧಾ, ಇಸಾ ಬೇಗಂ ಮಾತನಾಡಿದರು.

ಎರಡನೇ “ನುಡಿಯ ನಡೆ - ಕಲೆಗಳಲ್ಲಿ ಹೆಣ್ಣು ತುಳಿದ ಪ್ರತಿರೋಧದ ಹಾದಿಗಳು” ಗೋಷ್ಠಿಯಲ್ಲಿ ಸಾಹಿತ್ಯ, ರತಿರಾವ್, ರೂಪಾ ಹಾಸನ, ಆರ್. ಚಲಪತಿ ರವರು ಮಾತನಾಡಿದರು.

ಮೂರನೇ “ಹೊಸ ನಡೆಯ ನುಡಿ - ಹಲವು ದಾರಿಗಳ ಹೊಸ ಸಾಧ್ಯತೆಗಳು” ಗೋಷ್ಠಿಯಲ್ಲಿ ಧರಣೀದೇವಿ ಮಾಲಗತ್ತಿ, ಮಾಧವಿ ಎಂ.ಕೆ., ಕಿರಣ ಗಾಜನೂರು ಮಾತನಾಡಿದರು.

ನಾಲ್ಕನೇ “ನುಡಿ ನಡೆಯ ಸಹಪಯಣ - ಮಹಿಳಾ ಸಾಹಿತ್ಯ, ಕಲೆ ಮತ್ತು ಚಳುವಳಿಗಳ ಒಡನಾಟದ ರೂಪುರೇಷೆ” ಗೋಷ್ಠಿಯಲ್ಲಿ ನೀಲಾ ಕೆ. ಶಾರದಾ ಗೋಪಾಲ, ಚೇತನಾ ತೀರ್ಥಹಳ್ಳಿ, ಮಲ್ಲಿಕಾ ಬಸವರಾಜ, ರಂಗನಾಥ ಕಂಠನಕುಂಟೆ, ರೂಪ.ಕೆ.ಮತ್ತಿಕೆರೆ, ಬಿ. ಪೀರ್ ಬಾಷಾ ಮಾತನಾಡಿದರು. ಸ್ಥಳೀಯ ಕಾಲೇಜುಗಳ ಮಹಿಳಾ ಅಧ್ಯಯನ, ಪತ್ರಿಕೋದ್ಯಮ ಮತ್ತು ಭಾಷಾ ಶಾಸ್ತ್ರ ವಿದ್ಯಾರ್ಥಿಗಳೂ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

“ವಿಭಜಿತ ಸಮಾಜದ ಸಂದರ್ಭದಲ್ಲಿ ಮಹಿಳಾ ಚಳುವಳಿ ಇಡಿಯಾಗಿ ಏಕರೂಪವಾದುದ್ದಲ್ಲ. ಏಕರೂಪಿ ಮಹಿಳೆ, ಏಕರೂಪಿ ಪುರುಷ ಪರಿಕಲ್ಪನೆ ವಿಭಜಿತ ಸಮಾಜದಲ್ಲಿ ಅಪ್ರಸ್ತುತವಾಗಿರುವ ಈ ಸಂದರ್ಭದಲ್ಲಿ ಹೊಸಚಿಂತನೆ, ಹೊಸಕ್ರಮಗಳನ್ನು ಅಘೋಷಿಸಬೇಕಾಗಿದೆ. ಪುರುಷ ಪ್ರಧಾನ ಸಾಮಾಜಿಕ ವ್ಯವಸ್ತೇಯ ದಮನದ ಹಿನ್ನೆಲೆಯಲ್ಲೇ ಇಡೀ ಮಹಿಳಾ ಸಮೂಹವೇ ಏಕರೂಪವಾಗಿ ಗ್ರಹಿಸುವ ಕ್ರಮ ಆರಂಭದಲ್ಲಿ ಸರಿಯಾದುದ್ದೇ ಆಗಿದ್ದರೂ ಈಗ ವರ್ಗ ವರ್ಣ, ಜಾತಿ ಮುಂತಾದ ವಿಭಾಗಳಾದಿಯಾಗಿ ವಿಭಜಿಸಲ್ಪಟ್ಟು ಅದರ ಆದಾರದಲ್ಲೇ ಅದರದ್ದೇ ಆದ ನಿರ್ದಿಷ್ಟ ಸಮಸ್ಯೆ ಇರುವಾಗ ಮಹಿಳೆಯನ್ನು ಏಕರೂಪಿಯಾಗಿ ಗ್ರಹಿಸದೆ ವರ್ಗ, ವರ್ಣ, ಜಾತಿ, ಭಾಷೆ ಮುಂತಾದ ಹಿನ್ನೆಲೆಯಲ್ಲಿ ಮಹಿಳಾ ಸಮೂಹವನ್ನೂ ಗ್ರಹಿಸುವ ಅಗತ್ಯ ಇದೆ. ಇಂತಹ ತಿಳುವಳಿಕೆಯ ಫಲವಾಗಿಯೇ ಇಂತಹ ಸಮಾವೇಶ ಇಲ್ಲಿ ಜರುಗುತ್ತಿದೆ.

ಭಾಷೆ ಮತ್ತು ಪರಿಭಾಷೆಯನ್ನು ಬದಲಾಯಿಸಬೇಕು. ಅದು ಚಳುವಳಿಯ ಸಕ್ತಿ. ಭಾಷೆ ಪರಿಭಾಷೆ ಎರಡೂ ರೂಪಗೊಂಡದ್ದು ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆಯ ಹಿನ್ನೆಲೆಯಲ್ಲಿ ನಮ್ಮ ಭಾಷೆ ಪರಿಭಾಷೆ ಬದಲಾದರೆ ಚಳುವಳಿ, ಸೃಜನಶೀಲ, ಚಿಂತನಶೀಲ ಚಳುವಳಿಯಾಗಿದೆ ಅಂತ ಅರ್ಥ. ಸುಪ್ರಸಿದ್ಧ ಸಮಾಜವಿಜ್ಞಾನಿ, ಭಾಷಾ ವಿಜ್ಞಾನಿ ಭಾಷಾಶಾಸ್ತ್ರಜ್ಞ ನೋಮ್ ಚೋಮ್‍ಸ್ಕಿರವರು “ಸಾಹಿತಿಗಳು ಬಹಳ ಮುಖ್ಯವಾಗಿ ಜನಗಳಿಗೆ ಸತ್ಯವನ್ನು ಮಧ್ಯವರ್ತಿಯಾಗಿ ಹೇಳಬೇಕು. ಅಷ್ಟೇಏಕೆ ಪ್ರತಿಯೊಬ್ಬ ಮರ್ಯಾದಸ್ಥ ಮನುಷ್ಯನ ಕೆಲಸವೂ ಕೂಡ ಇದೆ ಆಗಿದೆ ಎನ್ನುತ್ತಾರೆ.

.. .. .. ಚಳುವಳಿಗಳ ಮನಸ್ಥಿತಿ ಸಾಹಿತಿಯಾದವನಿಗೆ ಇರಲೇಬೇಕಾಗುತ್ತದೆ. ಅದೇರೀತಿ ಚಳುವಳಿಗಳಲ್ಲಿ ಭಾಗವಹಿಸುವ ಅಥವಾ ಸಂಬಂಧ ಇಟ್ಟುಕೊಂಡಿರುವವರನ್ನು ಗುಮಾನಿಯಿಂದ ನೋಡುವ ಪ್ರವೃತ್ತಿಯನ್ನು ಬಿಡಬೇಕು.

.. .. ವಿವಿಧ ವರ್ಗವಲಯಗಳಿಗೆ ಸೇರಿದ ಮಹಿಳೆಯರನ್ನು ಗ್ರಹಿಸುವ, ಸಮಾನ ಆಸಕ್ತಿಗಾಗಿ ಒಗ್ಗೂಡಿಸುವ ಜೊತೆಗೆ ಎಲ್ಲ ಪ್ರಗತಿಪರರು ಒಂದಾಗಿ ಹೋಗುವುದು ಹೇಗೆ ಎಂಬುದು ಇವತ್ತಿನ ಸವಾಲಾಗಿದೆ. ಸ್ತ್ರೀ ಸಂವೇದನೆ,ಎಂಬುದು ಲಿಂಗಾಧಾರಿತವಲ್ಲ. ಲಿಂಗಾಧಾರಿತ ನೆಲೆಯನ್ನು ಮೀರಿದ್ದು.”

- ಬರಗೂರು ರಾಮಚಂದ್ರಪ್ಪ

“ನುಡಿಯೊಳಗಾಗಿ ನಡೆದವರ ಖಂಡಿಸುವ ದಿಟ್ಟತೆಯಲ್ಲಿ ತಮ್ಮ ಪಥ ಕಂಡುಕೊಡ ಶರಣೆಯರದ್ದು ಸಹಪಯಣದ ದಾರಿಯೇ ಹೊರತು ಯುದ್ಧದ ದಾರಿಯಲ್ಲ. ನುಡಿ-ನಡೆ ಒಂದಾಗಿರುವುದೇ ಇಲ್ಲಿ ಸೇರಿರುವ ನಮ್ಮೆಲ್ಲರ ಆಶಯ.

ಆದರೆ, ಯಾವಾಗಲೂ ಯುದ್ಧದ ಮಾತಿಗಿಂತ ಸಹಪಯಣದ ಮಾತು ಅಧಿಕಾರಸ್ಥರನ್ನು ಬೆಚ್ಚಿ ಬೀಳಿಸುತ್ತದೆ. ಅದರಲ್ಲೂ ದಮನಿತರು, ಮಹಿಳೆಯರು, ಸಂಘಟನೆಯ ಮಾತಾಡಿದರೆ. ಆ ಸಂಘಟನೆಗಳನ್ನು ಹಲವು ಚೂರುಗಳಾಗಿ ವಿಘಟಿಸಲು ಕಣ್ಣಿಗೆ ಕಾಣದ ಹಲವು ಮೊನೆಗಳು ಒಗ್ಗಟ್ಟಾಗಿ ಗುರಿಯಿಡುತ್ತವೆ. ಇದರಲ್ಲಿ ಮಾಯಾರೂಪಿಗಳು, ಕಾಮರೂಪಿಗಳು ಚಿತ್ತಾಕರ್ಷಕವಾಗಿ ನಮ್ಮ ಮುಂದೆ ಸುಳಿದಾಡತೊಡಗುತ್ತವೆ.

ಇಂತಹವುಗಳ ನಿಜ ಬಣ್ಣ ಬಯಲು ಮಾಡುತ್ತಾರೆ ಎಂಬ ಕಾರಣಕ್ಕಾಗಿಯೇ “ಬುದ್ಧಿಜೀವಿ”ಗಳ ಮೇಲೆ ದಾಳಿ ಮಾಡಲಾಗುತ್ತದೆ. ಅಷ್ಟೇ ಅಲ್ಲ ಈ ಕಣ್ಕಟ್ಟುಗಳನ್ನು ಎಲ್ಲರೂ ಅಪ್ಪಿಕೊಂಡು ಮುದ್ದಾಡುತ್ತಿರುವಾಗ ನಿಮ್ಮದೇನು ಸಮಸ್ಯೆ ಎಂಬ ಪ್ರಶ್ನೆಯನ್ನು ಮುಂದಿಡಲಾಗುತ್ತಿದೆ. ಇದು ಹಲವರಿಗೆ ‘ಸರಿ’ಯಾದ ಪ್ರಶ್ನೆಯಾಗಿಯೇ ಗೋಚರಿಸುತ್ತಿದೆ. ಈ ರಂಗುರಂಗಿನ ಕಣ್ಕಟ್ಟುಗಳಿಗೆ ಸಾಮಾಜಿಕ ರಚನೆಯನ್ನು ಬದಲಾಯಿಸಿಕೊಂಡು ಬಿಟ್ಟಿದ್ದೇವೆ.

ಹೆಣ್ಣಿನ ಅಸಮಾನ ಸ್ಥಿತಿಗಳ ಒಳಸುಳಿಗಳನು ಗಂಭೀರವಾಗಿ ಬರೆದ ಸಾಹಿತ್ಯಗಳಾಗಲಿ ಕಲೆಗಳಾಗಲಿ, ಚಳುವಳಿಗಳಾಗಲಿ,ಇಂದು ಪ್ರಜ್ಜಾಪೂರ್ವಕ ಉಪೇಕ್ಸೆಗೆ ತುತ್ತಾಗುತ್ತಿವೆ.”

- ಸಬಿತಾ ಬನ್ನಾಡಿ

“ದಮನ, ಲೂಟಿ, ಶೋಷಣೆ ವ್ಯಾಪಕವಾಗಿದ್ದು ಜಗತ್ತಿನ ನಡೆ ಬಹಳ ವಿಕಾರವಾಗಿದೆ. ಯಾವುದನ್ನು ಸುಖ ಎಂದು ನಂಬಿದ್ದೇವೆಯೊ ಅದು ಭ್ರಾಂತಿಯಾಗಿದೆ. ಗಳಿಕೆ ಎಂದು ತಿಳಿದಿರುವುದು ಕಳ್ಳತನವಾಗಿದೆ. ಪ್ರತಿಯೊಬ್ಬರಿಗೂ ಹೆಣ್ಣು ನೋಟವನ್ನು ಕಲಿಸಬೇಕು. ಈ ಸಮಾವೇಶಕ್ಕೆ ಕೊಟ್ಟಿರುವ ಹೆಸರು ಬಹಳ ಉತ್ತಮವಾದುದಾಗಿದೆ. ಇದರಲ್ಲೇ ಹೆಣ್ಣಿನ ನೋಟ ಇದೆ. ಸಮತೆಗಾಗಿ ಸಹಪಯಣದಲ್ಲಿ ಸಹ ಪಯಣವೆಂಬುದನ್ನು ಹೆಣ್ಣು ಮಾತ್ರವೇ ಗುರುತಿಸಬಲ್ಲಳು. ಸಹ ಜೀವನದ ಮಾತನ್ನು ಹೆಣ್ಣಿನಿಂದಲೇ ಕಲಿಯಬೇಕು.

ಗಂಡು ತನ್ನಿಡಿ ಜೀವನವನ್ನು , ಹೆಣ್ಣಿನ ಮೇಲೆ ಅಧಿಕಾರ ಹೇರಲು ಮತ್ತು ತನ್ನ ಅಧಿಕಾರ ರಚನೆಯ ಬಿರುಕನ್ನು ಶೋಧಿಸಲು ವ್ಯಯಿಸುತ್ತಿದ್ದಾನೆ. ಕಾನೂನು , ಸಮಾಜ, ಆಡಳಿತಕ್ಕೆ ಹಲವು ಮುಖಗಳಿರಬಹುದು. ಆದರೆ ನಿಸರ್ಗಕ್ಕೆ ಇರುವುದು ಒಂದೇ ಸತ್ಯ. ಒಳತು-ಕೆಡುಕನ್ನು ನಿರ್ಧಾರ ಮಾಡುವರು ಯಾರು ಎಂಬ ಬಿಕ್ಕಟ್ಟಿನ ಸ್ತಿತಿಯಲ್ಲಿ ನಾವು ಇಂದು ಇದ್ದೇವೆ.

ಸಾವಿರ ವರ್ಷಗಳಿಂದ ಮಹಿಳೆಯನ್ನು ಮಕ್ಕಳು ಹೆರುವಿದಕ್ಕಾಗಿ ಸೀಮಿತಗೊಳಿಸಲಾಗಿತ್ತು. ಇನ್ನು ಮುಂದಿನ ಸಾವಿರ ವರ್ಷಗಳ ಕಾಲ ಕಾಮದ ವಸ್ತುವಾಗಿ ಕಟ್ಟಿ ಹಾಕುತ್ತಿದ್ದಾರೆ. ಝೀರೋ ಸೈಜಿ ಗಾಗಿ ವ್ಯಾಯಾಮ ಮಾಡಿಸಲಾಗುತ್ತದೆ.”

- ಬಂಜಗೆರೆ ಜಯಪ್ರಕಾಶ