ಖಾಸಗಿ ಇಂಜಿನಿಯರಿಂಗ್, ಮೆಡಿಕಲ್ ಕೋಚಿಂಗ್ ಕೇಂದ್ರಗಳ ನಿಯಂತ್ರಣಕ್ಕೆ ಸುಪ್ರಿಂ ಕೋರ್ಟ್ ನಿರ್ದೇಶನ

ಸಂಪುಟ: 
11
ಸಂಚಿಕೆ: 
08
Sunday, 12 February 2017

ಖಾಸಗಿ ಇಂಜಿನಿಯರಿಂಗ್, ಮೆಡಿಕಲ್ ಕೋಚಿಂಗ್ ಕೇಂದ್ರಗಳ ನಿಯಂತ್ರಣದ ಬಗ್ಗೆ ಎಸ್‍ಎಫ್‍ಐನ ಪಿಐಎಲ್: ಕಟ್ಟುನಿಟ್ಟಾದ ಮಿತಿಗಳನ್ನು ಹಾಕಲು ಸುಪ್ರಿಂ ಕೋರ್ಟ್ ನಿರ್ದೇಶನ

ಕೇಂದ್ರ ಸರಕಾರ ಖಾಸಗಿ ಇಂಜಿನಿಯರಿಂಗ್ ಮತ್ತು ಮೆಡಿಕಲ್ ಪ್ರವೇಶದ ಕೋಚಿಂಗ್ ಕೇಂದ್ರಗಳ ಮೇಲೆ ಕಟ್ಟುನಿಟ್ಟಾದ ಹತೋಟಿಗಳನ್ನು ಹಾಕಬೇಕು ಎಂದು ದೇಶದ ಸರ್ವೋಚ್ಚ ನ್ಯಾಯಾಲಯ ನಿರ್ದೇಶನ ನೀಡಿದೆ. ಪ್ರವೇಶಕ್ಕೆ ಪ್ರವೇಶ ಪರೀಕ್ಷೆಗಳನ್ನೇ ಏಕೈಕ ಮಾನದಂಡವಾಗಿ ಪರಿಗಣಿಸುವುದು ದೋಷಪೂರ್ಣ ಕ್ರಮ ಎಂದೂ ಅದು ಅಭಿಪ್ರಾಯ ಪಟ್ಟಿದೆ.

2014ರಲ್ಲಿ ಎಸ್‍ಎಫ್‍ಐ ನಾಯಿಕೊಡೆಗಳಂತೆ ಹರಡುತ್ತಿರುವ ‘ಮಾನ್ಯತೆ ಪಡೆಯದ’ ಖಾಸಗಿ ಕೋಚಿಂಗ್ ಸಂಸ್ಥೆಗಳು ಶಿಕ್ಷಣದ ಹಕ್ಕು ಕಾಯ್ದೆಯ ಮಾರ್ಗದರ್ಶಕ ನಿಯಮಗಳ ಉಲ್ಲಂಘನೆ ಎಂದು ಸಾರ್ವಜನಿಕ ಹಿತಾಸಕ್ತಿ ಅಪೀಲು (ಪಿಐಎಲ್) ಸಲ್ಲಿಸಿತ್ತು. ಇದಕ್ಕೆ ಸ್ಪಂದಿಸುತ್ತ ಸುಪ್ರಿಂಕೋರ್ಟ್ ಈ ನಿರ್ದೇಶನ ನೀಡಿದೆ.

ಬಹಳಷ್ಟು ವಿದ್ಯಾರ್ಥಿಗಳು ಇಂತಹ ಕೇಂದ್ರಗಳನ್ನು ಅವಲಂಬಿಸಿರುವುದರಿಂದ ಇವನ್ನು ಸಂಪೂರ್ಣವಾಗಿ ನಿಷೇಧಿಸುವುದು ಕಾರ್ಯಸಾಧ್ಯವಲ್ಲ. ಆದರೆ ಇವು ಶೋಷಣೆಯ ಕೇಂದ್ರಗಳಾಗದಂತೆ ನೋಡಿಕೊಳ್ಳುವುದು ಸರಕಾರದ ಹೊಣೆಗಾರಿಕೆ ಎಂದಿರುವ ಸರ್ವೋಚ್ಚ ನ್ಯಾಯಾಲಯ ಇದರ ಮೇಲೆ ಹತೋಟಿಯಿಡುವ ಒಂದು ರಚನೆಯನ್ನು ರೂಪಿಸಬೇಕು ಎಂದು ಆದೇಶಿಸಿದೆ. ಶಿಕ್ಷಣದ ಪಕ್ಕಾ ವ್ಯಾಪಾರೀಕರಣ ಸಲ್ಲದು, ಹನ್ನೆರಡನೇ ತರಗತಿಯ ಗ್ರೇಡ್‍ಗಳನ್ನೂ ಪ್ರವೇಶ ಮುಂತಾದವುಗಳಿಗೆ ಪರಿಗಣಿಸಬೇಕು ಎಂದು ಅದು ಅಭಿಪ್ರಾಯ ಪಟ್ಟಿದೆ.

ಈ ಕೋಚಿಂಗ್ ಸಂಸ್ಥೆಗಳು ವರ್ಷಕ್ಕೆ 40ಸಾವಿರ ಕೋಟಿ ರೂ.ಗಳಷ್ಟು ಗಳಿಕೆ ಮಾಡುತ್ತಿವೆ. ಇದರಿಂದಾಗಿ  ಹಲವಾರು ಪಾಲಕರು ಸಾಲಶೂಲದಲ್ಲಿ ಸಿಲುಕಿಕೊಂಡಿದ್ದಾರೆ. ಇಂತಹ ಕೋಚಿಂಗ್ ಪಡೆಯಲಾರದವರು ಮಾನಸಿಕ ವೇದನೆ ಅನುಭವಿಸುವಂತಾಗಿದೆ. ಆದ್ದರಿಂದ ಕೇಂದ್ರ ಸರಕಾರ ಇಂತಹ ಸಂಸ್ಥೆಗಳ ಮೇಲೆ ಹತೋಟಿಗಳನ್ನು ತರುವಂತೆ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಎಸ್‍ಎಫ್‍ಐ ಕೋರಿತ್ತು. ದೀಪಕ್ ಪ್ರಕಾಶ್ ಎಸ್‍ಎಫ್‍ಐ ಪರವಾಗಿ ವಾದಿಸಿದ್ದರು.