ಎರಡೂವರೆ ವರ್ಷಗಳಾದರೂ ಮಹಿಳಾ ಮೀಸಲಾತಿ ಮಸೂದೆ ಪಾಸಾಗಿಲ್ಲ ಏಕೆ? ಇನ್ನಷ್ಟು ವಿಳಂಬವಿಲ್ಲದೆ ಪಾಸು ಮಾಡಲು ಮಹಿಳಾ ಸಂಘಟನೆಗಳ ಆಗ್ರಹ

ಸಂಪುಟ: 
11
ಸಂಚಿಕೆ: 
08
Sunday, 12 February 2017

ದೇಶದ ಮಹಿಳಾ ಸಂಘಟನೆಗಳು ಕಳೆದ ಎರಡು ದಶಕಗಳಿಂದ ಸತತವಾಗಿ  ಹೋರಾಟ ನಡೆಸುತ್ತಿದ್ದರೂ, ಇನ್ನೂ ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಇನ್ನೂ ಮಸೂದೆಯ ಮಟ್ಟದಲ್ಲೇ ಉಳಿದಿದೆ, ಎನ್‍ಡಿಎ ಸರಕಾರ ಇನ್ನೂ ಅದನ್ನು ಸಂಸತ್ತಿನ ಅಜೆಂಡಾಕ್ಕೆ ತರಲು  ಹಿಂದೆ-ಮುಂದೆ ನೋಡುತ್ತಿದೆ ಎಂದು  ಅಖಿಲ ಭಾರತ ಜನವಾದಿ ಮಹಿಳಾ ಸಂಘ(ಎಐಡಿಡಬ್ಯುಎ) ಮತ್ತು ಭಾರತೀಯ ಮಹಿಳೆಯರ ರಾಷ್ಟ್ರೀಯ ಒಕ್ಕೂಟ(ಎನ್‍ಎಫ್‍ಐಡಬ್ಲ್ಯು) ತೀವ್ರ ನಿರಾಸೆಯನ್ನು ವ್ಯಕ್ತಪಡಿಸಿವೆ.

ದೀರ್ಘಕಾಲದ ಹೋರಾಟದ ಒತ್ತಡದಿಂದಾಗಿ ಈಗಿನ ಆಳುವ ಪಕ್ಷ ಕೂಡ  ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಈ ಬಗ್ಗೆ ಭರವಸೆ ಕೊಟ್ಟಿತ್ತು. ಈ ಭರವಸೆ ಈಡೇರುವುದು ಎಂದು ದೇಶದ ಜನತೆ , ವಿಶೇಷವಾಗಿ ಮಹಿಳೆಯರು ಎರಡೂವರೆ ವರ್ಷ ಕಾದಿದ್ದಾರೆ. ರಾಷ್ಟ್ರೀಯ ಮಹಿಳಾ ಸಂಘಟನೆಗಳು ಮತ್ತೆ-ಮತ್ತೆ ಲೋಕಸಭಾಧ್ಯಕ್ಷರನ್ನು, ಸಂಬಂಧಪಟ್ಟ ಮಂತ್ರಿಗಳನ್ನು ಭೇಟಿಯಾಗಿದ್ದಾರೆ. ಆದರೂ, ಅಗತ್ಯ ಬಹುಮತ ಇದ್ದರೂ ಸರಕಾರ ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲವಾಗಿದೆ.

ಅದು ಮಹಿಳೆಯರ ಸಬಲೀಕರಣದ ಬಗ್ಗೆ ಬಹಳವಾಗಿ ಮಾತಾಡುತ್ತಿದೆ, ಆದರೆ ನಿರ್ಣಯ ಕೈಗೊಳ್ಳುವ ಉನ್ನತ ಸಂಸ್ಥೆಗಳಲ್ಲಿ ಮಹಿಳೆಯರ ರಾಜಕೀಯ ಭಾಗವಹಿಸುವಿಕೆಯನ್ನು ಹೆಚ್ಚಿಸುವಲ್ಲಿ ಮಾತ್ರ ನಿಷ್ಕ್ರಿಯವಾಗಿದೆ. ಈ ಗೋಸುಂಬೆ ನಿಲುವು ಈ ಸರಕಾರ ಅನುಸರಿಸುತ್ತಿರುವ ಧೋರಣೆಗಳಿಗೆ ಅನುರೂಪವೇ ಆಗಿರುವಂತೆ ಕಾಣುತ್ತಿದೆ.  ಏಕೆಂದರೆ ‘ಅಚ್ಚೇ ದಿನ್’ ರಾಗ ಹಾಡುತ್ತಿದ್ದರೂ, ಪ್ರತಿಯೊಂದು ಹಂತದಲ್ಲೂ  ಮಹಿಳೆಯರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಮೊಟಕು ಮಾಡಲಾಗುತ್ತಿದೆ ಎಂದು ಈ ಎರಡು ಸಂಘಟನೆಗಳು ಪತ್ರಿಕಾ ಹೇಳಿಕೆಯೊಂದರಲ್ಲಿ ಅಭಿಪ್ರಾಯ ಪಟ್ಟಿವೆ.

ಈ ಕೇಂದ್ರ ಸರಕಾರದ ಹಿಂಜರಿಕೆಯ, ವಿಳಂಬದ ತಂತ್ರಗಳಿಗೆ ತಮ್ಮ ಎರಡು ಸಂಘಟನೆಗಳು ಮತ್ತು ಪ್ರಜಾಪ್ರಭುತ್ವವಾದಿ ಗುಂಪುಗಳು ಬಲಿ ಬೀಳುವುದಿಲ್ಲ ಎಂದು ಎಚ್ಚರಿಸಿರುವ ಈ ಹೇಳಿಕೆ ತಮ್ಮ ಸಂಘಟನೆಗಳು ಸಂಸತ್ತಿನ ಒಳಗೂ, ಹೊರಗೂ ಎಲ್ಲ ವಿಚಾರವಂತ ವಿಭಾಗಗಳನ್ನು ಅಣಿನೆರೆಸಿ ಈ ಸರಕಾರ ಇನ್ನಷ್ಟು ವಿಳಂಬ ಮಾಡದೆ ಸರಕಾರ ಈ ಮಸೂದೆಯನ್ನು ಮಂಡಿಸಿ ಅಂಗೀಕಾರ ಗೊಳ್ಳುವಂತೆ ಮಾಡಲು ಒತ್ತಡ ತರಲು ದೃಢನಿರ್ಧಾರ ಮಾಡಿವೆ ಎಂದು ಎಐಡಿಡಬ್ಲ್ಯುಎ ಅಧ್ಯಕ್ಷರಾದ ಮಾಲಿನಿ ಭಟ್ಟಾಚಾರ್ಯ, ಪ್ರಧಾನ ಕಾರ್ಯದರ್ಶಿ ಮರಿಯಮ್ ಧವಳೆ, ಎನ್‍ಎಫ್‍ಐಡಬ್ಲ್ಯು ಅ ಧ್ಯಕ್ಷರಾದ ಅರುಣಾ ರಾಯ್ ಹಾಗೂ ಪ್ರಧಾನ ಕಾರ್ಯದೆರ್ಶಿ ಅನ್ನೀ ರಾಜಾ ಹೇಳಿದ್ದಾರೆ.

ನಾಗಾಲ್ಯಾಂಡಿನಲ್ಲಿ ಪ್ರತಿರೋಧ-ಸರಕಾರ ಸಂವಾದ ನಡೆಸಬೇಕೆಂದು ಆಗ್ರಹ

ನಾಗಾಲ್ಯಾಂಡಿನಲ್ಲೂ 16 ವರ್ಷಗಳ ದೀರ್ಘ ಅಂತರಾಳದ ನಂತರ ನಡೆಯುತ್ತಿರುವ 33 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆಯಲಿರುವ ಚುನಾವಣೆಗಳಲ್ಲಿ 33ಶೇ. ಮೀಸಲಾತಿಯನ್ನು ಜಾರಿಗೊಳಿಸುವುದಕ್ಕೆ ಕೆಲವು ಬುಡಕಟ್ಟು ಗುಂಪುಗಳು ಪ್ರತಿರೋಧ ಒಡ್ಡುತ್ತಿರುವುದು ದುರದೃಷ್ಟಕರ ಎಂದು ಎಐಡಿಡಬ್ಲ್ಯುಎ ಹೇಳಿದೆ.

ನಾಮಪತ್ರ ಸಲ್ಲಿಸಿದ ಮಹಿಳೆಯರು ತಮ್ಮ ನಾಮಪತ್ರಗಳನ್ನು ಹಿಂತೆಗೆದುಕೊಳ್ಳುವಂತೆ ಮಾಡಲಾಗಿದೆ ಮತ್ತು ಚುನಾವಣೆಯನ್ನು ಬಹಿಷ್ಕರಿಸುವ ಕರೆ ನೀಡಲಾಗಿದೆ. ಬುಡಕಟ್ಟುಗಳ ಪಾರಂಪರಿಕ ಕಾನೂನುಗಳನ್ನು ಕಾಪಾಡಿಕೊಳ್ಳುವ ಹೆಸರಿನಲ್ಲಿ ಇವನ್ನು ಮಾಡಲಾಗುತ್ತಿದೆ. ಹಿಂಸಾಚಾರದ ಹಿನ್ನೆಲೆಯಲ್ಲಿ ಪೊಲಿಸ್ ಗೋಲೀಬಾರಿನಲ್ಲಿ ಇಬ್ಬರು ಸತ್ತಿದ್ದಾರೆ.

ಈ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಎಐಡಿಡಬ್ಲ್ಯುಎ, ಲಿಂಗಸಮಾನತೆಯ ವಿಚಾರವನ್ನು ಪಾರಂಪರಿಕ ಕಾನೂನುಗಳ ಎದುರು ನಿಲ್ಲಿಸಲಾಗಿರುವುದು ಖೇದಕರ ಸಂಗತಿ ಎಂದಿದೆ. ಸಂವಿಧಾನದ ಮಹಿಳಾ ಮೀಸಲಾತಿ ಅಂಶವನ್ನು ಪ್ರತಿರೋಧಿಸಿ ಮಹಿಳೆಯರ ಹಕ್ಕನ್ನು ನಿರಾಕರಿಸಿರುವುದು ದೂಷಣೀಯ ಸಂಗತಿ ಮತ್ತು ಅದೇ ರೀತಿಯಲ್ಲಿ ಪರಿಸ್ಥಿತಿಯನ್ನು ಎದುರಿಸಲು ಸರಕಾರ ಅನುಸರಿಸಿರುವ ಪೋಲೀಸ್ ಕ್ರಮ ಕೂಡ ಖಂಡನೀಯ ಎಂದಿರುವ ಎಐಡಿಡಬ್ಲ್ಯುಎ ಮಹಿಳಾ ಹಕ್ಕುಗಳಿಗಾಗಿ ಹೋರಾಡುತ್ತಿರುವ ನಾಗಾಲ್ಯಾಂಡಿನ ಮಹಿಳೆಯರಿಗೆ ಮತ್ತು ಅವರ ಸಂಘಟನೆಗಳಿಗೆ ಬೆಂಬಲ ವ್ಯಕ್ತಪಡಿಸಿದೆ ಹಾಗೂ ರಾಜ್ಯ ಸರಕಾರ ಮಹಿಳಾ ಮೀಸಲಾತಿಯನ್ನು ವಿರೋಧಿಸುವವರೊಂದಿಗೆ ಸಂವಾದ ಆರಂಭಿಸಬೇಕೆಂದು ಆಗ್ರಹಿಸಿದೆ.