“ಪ್ರಧಾನಿಗಳ ಬಳಿ ಉತ್ತರವಿಲ್ಲ, ಇರುವುದು ಒಣ ಮಾತುಗಾರಿಕೆ ಮಾತ್ರ”

ಸಂಪುಟ: 
11
ಸಂಚಿಕೆ: 
08
date: 
Sunday, 12 February 2017

ಇದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿಯವರು ಫೆಬ್ರುವರಿ 8ರಂದು ಪ್ರಧಾನ ಮಂತ್ರಿಗಳು ರಾಜ್ಯಸಭೆಯಲ್ಲಿ ಮಾತನಾಡಿದ ವೈಖರಿಯ ಬಗ್ಗೆ ಮಾಡಿರುವ ಟಿಪ್ಪಣಿ.  

ಅವರ ಬಳಿ ಉತ್ತರವಿಲ್ಲ. ಅವರು ಸಹ-ಸಂಸದರನ್ನು ಅವಮಾನ, ಕುಹಕ ಮತ್ತು ಬೈಗುಳಗಳ ಮೂಲಕ ಹೊಡೆದೋಡಿಸುತ್ತಾರೆ. ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆಯ ಠರಾವಿನ ಮೇಲೆ ನಡೆದ ಶ್ರೀಮಂತ ಚರ್ಚೆಗೆ ಉತ್ತರವಾಗಬೇಕಿದ್ದ ಭಾಷಣವನ್ನು ಒಂದು ಬೀದಿ ಬದಿಯ ಪ್ರಹಸನದ ಮಟ್ಟಕ್ಕೆ ಇಳಿಸಿದ್ದಾರೆ. ನಾವು ಸದನದಲ್ಲಿ ಎತ್ತಿದ ಗಂಭೀರ ಪ್ರಶ್ನೆಗಳಿಗೆ ಮೋದಿಯವರ ಬಳಿಯಿರುವ ಒಂದೇ ಉತ್ತರವೆಂದರೆ ಹಿರಿಯ ಪ್ರತಿಪಕ್ಷಗಳ ಮುಖಂಡರಿಗೆ, ಒಬ್ಬ ಗೌರವಾನ್ವಿತ ಮಾಜಿ ಪ್ರಧಾನಿಗಳಿಗೂ ವೈಯಕ್ತಿಕ ಅವಮಾನಗಳು ಮಾತ್ರ ಎಂದು ಅವರು ಖೇದ ವ್ಯಕ್ತಡಿಸಿದ್ದಾರೆ.

ಇದೊಂದು ಸ್ವಾತಂತ್ರ್ಯದ ನಂತರ ನಾವು ಕಂಡಿರುವ ಅತ್ಯಂತ ನಿರ್ದಯ, ನಿರ್ಲಕ್ಷ್ಯದ ಸರಕಾರ, ನೋಟುರದ್ಧತಿಯಿಂದಾಗಿ ಲಕ್ಷಾಂತರ ಜನಗಳ ಜೀವನಾಧಾರ ಧ್ವಂಸಗೊಂಡಿದ್ದಲ್ಲದೆ, ಬ್ಯಾಂಕುಗಳ ಮುಂದಿನ ಸಾಲುಗಳಲ್ಲಿ ಕಾಯುತ್ತ ನೂರಕ್ಕೂ ಹೆಚ್ಚು ಮಂದಿ ಸತ್ತಿದ್ದಾರೆ. ಆದರೂ ಸತ್ತವರ ಬಗ್ಗೆ ಸಂತಾಪ  ನಿರ್ಣಯವಿರಲಿ, ಈ ಸಾವುಗಳ ಪ್ರಸ್ತಾಪವೂ ಮೋದಿಯವರಿಂದ ಬಂದಿಲ್ಲ.

ಮೋದಿಯವರ ಕಣ್ಗಾವಲಿನಲ್ಲಿ ರೈತರ ಆತ್ಮಹತ್ಯೆಗಳು ಹಲವು ಪಟ್ಟು ಏರಿವೆ. ಭಾರತೀಯ ಆರ್ಥಿಕ ವ್ಯವಸ್ಥೆ ಮುಳುಗುತ್ತಿದೆ, ನೋಟುಹರಣದ ತುಘ್ಲಕ್ ಫರ್ಮಾನುಗಳಿಂದಾಗಿ ತಳ ಕಚ್ಚುತ್ತಿದೆ. ಭಾರತೀಯರ ಸಂಕಟಗಳಿಗೆ ಯಾವುದೇ ಕ್ರಿಯಾಯೋಜನೆಯಿಲ್ಲದೆ, ಪ್ರಧಾನ ಮಂತ್ರಿಗಳ ಸ್ಥಾನ  ಅಂತಿರಲಿ, ಒಬ್ಬ ಸಂಸದನ ಸ್ಥಾನಕ್ಕೂ ತಕ್ಕುದಲ್ಲದ ಅಗ್ಗದ ಹಾವಭಾವಗಳ ಮಟ್ಟಕ್ಕೆ ಮೋದಿಯವರು ಇಳಿದಿದ್ದಾರೆ.

ಚರ್ಚೆಯಲ್ಲಿ ಎತ್ತಿದ ಒಂದೇ ಒಂದು ಅಂಶಕ್ಕೆ ಉತ್ತರ ನೀಡದೆ ಮೋದಿ ಸಂಸತ್ತಿಗೆ, ಜನತೆಗೆ ತಮ್ಮ  ಹೊಣೆಗಾರಿಕೆಯನ್ನು ಧ್ವಂಸ ಮಾಡಿದ್ದಾರೆ. ಫ್ಯಾಸಿಸ್ಟ್ ಮಾದರಿಯ ಒಣ ಮಾತುಗಾರಿಕೆ ಜವಾಬುದಾರಿಕೆಯ ಸ್ಥಾನ ಪಡೆಯಲಾರದು ಎಂದ ಯೆಚೂರಿಯವರು ಒರಟುತನ ದುರ್ಬಲ ವ್ಯಕ್ತಿಯ ಶಕ್ತಿಯ ಸೋಗು  ಎಂದು ನೆನಪಿಸುತ್ತ ಮೋದಿ ಸಂಸದೀಯ ಪ್ರಜಾಪ್ರಭುತ್ವವನ್ನು  ಹೊಲಸು ಮಟ್ಟಗಳ ಸಮೀಪಕ್ಕೆ ಇಳಿಸಿದ್ದಾರೆ ಎಂದಿದ್ದಾರೆ.

ಮೋದಿ ಮತ್ತು ಅವರ ಸರಕಾರದ ಟೊಳ್ಳುತನ, ಅಹಂಕಾರ ಪ್ರತಿದಿನ ಅದರ ವಂಚನೆಯ, ಕಾಲಹರಣದ ಮತ್ತು ಛಿದ್ರಕಾರಿ ಅಜೆಂಡಾವನ್ನು ತೋರಿಸುತ್ತಿದೆ. ನಾವು ಈ ಸರಕಾರದ ಕುಟಿಲ ಅಜೆಂಡಾವನ್ನು ಸಂಸತ್ತಿನ ಒಳಗೂ, ಹೊರಗೂ ಬಯಲಿಗೆಳೆಯುವುದನ್ನು ಮುಂದುವರೆಸುತ್ತೇವೆ ಎಂದು ಯೆಚೂರಿ ಹೇಳಿದ್ದಾರೆ.