ವಿಜಯಪುರ : ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಮಟ್ಟದ ಸಮಾವೇಶ ರಾಜ್ಯದಲ್ಲಿ ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿದೆ

ಸಂಪುಟ: 
11
ಸಂಚಿಕೆ: 
08
Sunday, 12 February 2017

ದೇಶ ಹಾಗೂ ರಾಜ್ಯದಲ್ಲಿ ದಲಿತರ ಮೇಲೆ ದೌರ್ಜನ್ಯ ಮಾರಣಾಂತಿಕ ಹಲ್ಲೆಗಳಂತಹ ಕೃತ್ಯಗಳು ನಿತ್ಯ ನಡೆಯುತ್ತಿದ್ದರು, ಕೇಂದ್ರ ರಾಜ್ಯ ಸರ್ಕಾರಗಳು ಮಾತ್ರ ದಲಿತರಿಗೆ ರಕ್ಷಣೆ ನೀಡುತ್ತಿಲ್ಲ ಎಂದು ದಲಿತ ಹಕ್ಕುಗಳ ಸಮಿತಿ ರಾಜ್ಯ ಸಂಚಾಲಕರಾದ ಗೋಪಾಲಕೃಷ್ಣ ಅರಳಹಳ್ಳಿ ಹೇಳಿದರು.

ನಗರದ ಡಾ. ಬಿ.ಆರ್. ಅಂಬೇಡ್ಕರ ಭವನದಲ್ಲಿ ದಲಿತ ಹಕ್ಕುಗಳ ಜಿಲ್ಲಾ ಸಮಿತಿ ಹಮ್ಮಿಕೊಂಡ ಜಿಲ್ಲಾ ಮಟ್ಟದ ಸಮಾವೇಶವನ್ನು ಡಾ. ಬಾಬಾ ಸಾಹೇಬ ಅಂಬೇಡ್ಕರವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ದಲಿತ ಹುಡುಗರು ಸರ್ವಣಿಯ ಹುಡಿಗಿಯರನ್ನು ಪ್ರೀತಿಮಾಡಿದ ತಕ್ಷಣ ಹುಡುಗರ ಕುಟುಂಬದವನ್ನು ಥಳಿಸಿ ಬಹಿಷ್ಕರಿಸುವುದು, ಹುಡುಗನ ಮೇಲೆ ಮಾರಣಾಂತಿಕ ಹಲ್ಲೆ ಮಾಡುವುದು ನಡೆಯುತ್ತಲೇ ಇದೆ. ಇವರಿಗೆ ಪ್ರೀತಿ ಪ್ರೇಮದ ಬೆಲೆಯೆ ತಿಳಿಯದಂತಾಗಿದೆ. ಇಂತಹ ಘಟನೆಗಳು ಮೇಲಿಂದ ಮೇಲೆ ಹೆಚ್ಚಾಗುತ್ತಿರುವುದು ದುರಂತ ಎಂದರು.

ಹಾಸನದಲ್ಲಿ ಒಬ್ಬ ದಲಿತ ಕೂಲಿ ಕೇಳಿದಕ್ಕಾಗಿ ಆತನನ್ನು ಗುಂಡಹಾರಿಸಿ ಕೊಲ್ಲಲಾಗಿದೆ ಇದು ಖಂಡನೀಯ. ದಲಿತರನ್ನು ಕೂಲಿಗೆ ಹಚ್ಚಿ ಅವರ ಮೇಲೆ ಚಾಕ್ರಿ ಮಾಡುವ ಸವರ್ಣಿಯರು ಕನಿಷ್ಠ ಪಕ್ಷ ಅವರಿಗೆ ಕೂಲಿಯಾದರು ನೀಡಬೇಕು. ಕೂಲಿ ಕೇಳಿದ್ದನ್ನೇ ನೆಪ ಮಾಡಿ ಅವರನ್ನು ಹತ್ಯಮಾಡುವುದು ಯಾವ ನ್ಯಾಯವೆಂದು ಪ್ರಶ್ನಿಸಿದರು. ಉಡುಪಿಯಲ್ಲಿ ಫಂಕ್ತಿಭೇಧ, ಮಡಿಸ್ನಾನದ ಕುರಿತು ನಮ್ಮ ಸಂಘಟನೆ ಈ ಹಿಂದೆ ಹೋರಾಟ ಹಮ್ಮಿಕೊಂಡಿತ್ತು. ಈಗಲೂ ದಲಿತರ ಮೇಲಿನ ದೌರ್ಜನ್ಯ ಸೇರಿದಂತೆ ಸಮಾಜಿಕ ಸಮಸ್ಯೆಗಳ ವಿರುದ್ಧ ನಮ್ಮ ಸಂಘಟನೆ ಹೋರಾಟ ಮಾಡುತ್ತದೆ ಎಂದು ಹೇಳಿದರು.

ಇತ್ತೀಚಿಗೆ ಹರಿಯಾಣದಲ್ಲಿಯೂ ದಲಿತರಿಬ್ಬರನ್ನು ಹತ್ಯೆಮಾಡಲಾಯಿತು ಅದರಂತೆ ಉತ್ತರ ಪ್ರದೇಶದಲ್ಲಿಯೂ ಕೂಡ ಪ್ರೇಮ ಪ್ರಕರಣದಲ್ಲಿ ದಲಿತನೊಬ್ಬನನ್ನು ಹತ್ಯಮಾಡಲಾಗಿದೆ. ರಾಜ್ಯ ಸೇರಿದಂತೆ ದೇಶದಲ್ಲಿಯೇ ಇಂತಹ ಕೃತ್ಯಗಳು ನಡೆಯುತ್ತಿದ್ದರು ಬಿಜೆಪಿ, ಕಾಂಗ್ರೆಸ್ ಸರ್ಕಾರಗಳು ದಲಿತರ ರಕ್ಷಣೆಗೆ ಮುಂದಾಗುತ್ತಿಲ್ಲ ಎಂದು ದೂರಿದರು.

ಅರಳು ಪ್ರಶಸ್ತಿ ಪುರಸ್ಕೃತ, ಪತ್ರಕರ್ತ ಪರಶುರಾಮ ಶಿವಶರಣ ಮಾತನಾಡಿ, ದಲಿತರು ಮನುಷ್ಯರಾಗಿದ್ದರೂ ಇತರೇ ಮನುಷ್ಯರು ದಲಿತರನ್ನು  ಮನುಷ್ಯರಂತೆ ಕಾಣುತ್ತಿಲ್ಲ. ದಲಿತರ ಮೇಲೆ ಇಂದಿಗೂ ಶೋಷಣೆ, ದೌರ್ಜನ್ಯ ನಡೆಸುತ್ತಲೇ ಬರುತ್ತಿದ್ದಾರೆ. ಇದರ ಕಡಿವಾಣಕ್ಕಾಗಿ ದಲಿತರು ಜಾಗೃತರಾಗಿ, ಜ್ಞಾನವಂತರಾಗಬೇಕು. ಈ ಜ್ಞಾನಕ್ಕೆ ಮೂಲ ದಾರಿ ಶಿಕ್ಷಣ. ಈ ನಿಟ್ಟಿನಲ್ಲಿ ದಲಿತರು ಶಿಕ್ಷಣವಂತರಾಗಿ, ಅಧ್ಯಯನ ಶೀಲರಾಗಿ, ತಮ್ಮ ಜ್ಞಾನಶಕ್ತಿಯಿಂದ ಶೋಷಣೆ ಮಾಡುವವರಲ್ಲಿ ಭಯ ಹುಟ್ಟಿಸಬೇಕು. ಇದಕ್ಕೆ ಜೀವಂತ ಉದಾಹರಣೆ ಬುದ್ದ, ಬಸವ, ಅಂಬೇಡ್ಕರ. ಈ ಮಹಾತ್ಮರು ತಮ್ಮ ಕೈಯಲ್ಲಿ ಯಾವುದೇ ಆಯುಧ ಹಿಡಿಯದೇ, ತಮ್ಮ ಜ್ಞಾನ ಹಾಗೂ ವಿದ್ವತ್ವದಿಂದ ಜಗತ್ತನೇ ಹೆದರಿಸಿದವರು. ಒಂದು ವೇಳೆ ಅವರೇನಾದರೂ ತಮ್ಮ ಕೈಯಲ್ಲಿ ಆಯುಧಗಳನ್ನು ಹಿಡಿದುಕೊಂಡಿದ್ದೇ ಆದರೆ ಜಗತ್ತು ಇಂದು ಹೀಗೆ ಇರುತ್ತಿರಲಿಲ್ಲ. ಜಗತ್ತೆ ರಣರಂಗವಾಗಿ ಮಾರ್ಪಡುತ್ತಿತ್ತು. ಅವರು ಸತ್ಯ,ಶಾಂತಿ, ಅಹಿಂಸೆಯನ್ನು ಭೋದಿಸಿ, ಮನುಕುಲಕ್ಕೆ ದಾರಿದೀಪವಾಗಿದ್ದಾರೆ. ಅವರಂತಹ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು. ದಲಿತರು ತಮ್ಮ ಜೀವನಮಟ್ಟವನ್ನು ಸುಧಾರಿಸಿಕೊಂಡು ಸಮಾಜದ ಮುಖ್ಯವಾಹಿನಿಯಲ್ಲಿ ಬದುಕಬೇಕು ಎಂದರು.

ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ ಮಾತನಾಡಿ, ನಮ್ಮ ದೇಶಕ್ಕೆ ಸ್ವಾತಂತ್ರ ಸಿಕ್ಕು 70 ವರ್ಷಗಳು ಆದವು. ಸಂವಿಧಾನ ಆಶಯದಂತೆ ದಲಿತರಿಗೆ ಇಲ್ಲಿಯವರೆಗೂ ಯಾವುದೇ ರೀತಿಯ ಹಕ್ಕುಗಳು ಸಿಕ್ಕಿಲ್ಲ. ಕನಿಷ್ಠ ವಾಸಿಸಲು ಮನೆಯಿಲ್ಲ, ದುಡಿದು ತಿನ್ನಲು ಜಮೀನುಗಳಿಲ್ಲ, ಅಭದ್ರತೆಯಲ್ಲಿಯೇ ದಲಿತರು ಜೀವನ ನಡೆಸುತ್ತಿದ್ದಾರೆ. ಸರ್ಕಾರ ದಲಿತರ ನೆರವಿಗೆ ಬಂದು ದಲಿತರಿಗೆ ಜಮೀನು ಒದಗಿಸಬೇಕು ಎಂದರು.

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಲಕ್ಕುಂಡಿ ಗ್ರಾಮದ ದಲಿತರ ಮನೆಗಳನ್ನು ಕೆಡವಿದ್ದು ಹಾಗೂ ಕೋಳೂರ ಗ್ರಾಮದ ದಲಿತರಿಗೆ ಬಹಿಷ್ಕಾರ ಹಾಕಿದ್ದು, ಕಡಕೋಳ ಗ್ರಾಮದ ದಲಿತರು, ಕೆರೆಯ ನೀರು ಮುಟ್ಟಿದರು ಎಂಬಕಾರಣಕ್ಕೆ ಬಹಿಷ್ಕಾರ ಇವೆಲ್ಲ ನೋಡಿದರೆ ದಲಿತರ ಮೇಲಿನ ದೌರ್ಜನ್ಯದ ನಿದರ್ಶನ ಕಂಡುಬರುತ್ತದೆ ಎಂದರು.

ರಾಜ್ಯ ಸಹ ಸಂಚಾಲಕರಾದ ಯು. ಬಸವರಾಜ, ವಕೀಲರಾದ ಮಲ್ಲಿಕಾರ್ಜುನ ಭೃಂಗಿಮಠ ಮಾತನಾಡಿ, ಶೋಷಿತರ ಧ್ವನಿಯಾದ ಬಾಬಾಸಾಹೇಬ ಅಂಬೇಡ್ಕರವರು ದೇಶದ ಮಹಾಪುರುಷರಾಗಿದ್ದಾರೆ. ಸಮಾಜದಲ್ಲಿ ಸಮಾನತೆ ತರಲು ತಮ್ಮ ಜೀವನ ಪೂರ್ತಿ ಹೋರಾಟ ನಡೆಸಿದ ಧೀಮಂತ ನಾಯಕ. ಅವರ ಆದರ್ಶವನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕೆಂದು ಹೇಳಿದರು.

ನಿವೃತ್ತ ಕೃಷಿ ಮಾರುಕಟ್ಟೆ ಅಧಿಕಾರಿ ಜಿ.ಎಸ್. ಇಂಗಳಗಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಅಣ್ಣರಾಯ ಈಳಗೇರ, ಜನವಾದಿ ಮಹಿಳಾ ಸಂಘದ ಸುರೇಖಾ ರಜಪೂತ, ಯಶವಂತ ರಣದೇವಿ, ರಾಜು ಜಾಧವ, ರಾಮಣ್ಣ ಶಿರೇಗೋಳ, ಸಿದ್ರಾಮ ಬಂಗಾರಿ, ಸುಮಿತ್ರ ಘೊಣಸಗಿ, ಈರಾಬಾಯಿ ಹಜೇರಿ, ಸಂತೋಷ ಕಾಂಬಳೆ, ಬಸಯ್ಯ ಗೋಳಸಂಗಿಮಠ, ಸುರೇಶ ಹಂಚನಾಳ, ಕಾಶಿನಾಥ ಧೇವಕುಳ್ಳೆ ಮುಂತಾದ ನೂರಾರು ದಲಿತರ ಹಕ್ಕುಗಳ ಸಮಿತಿಯ ಪದಾದಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮ ಮುನ್ನ ರಘುನಾಥ ಬಾಣಿಕೋಲ ಕ್ರಾಂತಿಗೀತೆ ಹಾಡಿದರು. ಸಂಗಪ್ಪ ಎಸ್. ನಾಲ್ಕಮಾನ ಸ್ವಾಗತಿಸಿದರು. ಅನೀಲ ಚಲವಾದಿ ನಿರೂಪಿಸಿದರು. ಚಿದಾನಂದ ಬೆಳೆನವರ ನಿರೂಪಿಸಿದರು.
ಕಾರ್ಯಕ್ರಮ ಮುನ್ನ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಆನಂತರ ಸಮಾವೇಶ ನಡೆಯಿತು.

: ಸಂಚಾಲಕ ಸಮಿತಿ ಕಮಿಟಿ :

ಜಿಲ್ಲಾ ಸಂಚಾಲಕರಾಗಿ ಎಸ್. ಎಸ್.ನಾಲ್ಕಮನ್ ಅವರನ್ನು ಆಯ್ಕೆಮಾಡಲಾಯಿತು. ಸಹ ಸಂಚಾಲಕರನ್ನಾಗಿ ಯಲಗೂರಪ್ಪ ಎಸ್. ಚಲವಾದಿ, ಯಶವಂತ ರಣದೇವಿ, ದಶರಥ ಐಹೊಳ್ಳಿ, ಮಳಸಿದ್ದ ನಾಯ್ಕೋಡಿ, ಚಿದಾನಂದ ಬೆಳ್ಳೆಣ್ಣನವರ, ಸತೀಶ ಗುಡಿಮನಿ, ಉಮೇಶ ಶಿವಶರಣ, ಸುರೇಶ ಬರಗಲ, ಸಾಯಬಣ್ಣ ದೊಡಮನಿ, ಶಾಂತಪ್ಪ ಮಾದರ, ಅನೀಲ ಚಲವಾದಿ, ನಿಂಗಪ್ಪ ಮಾದರ, ಚಂದ್ರಕಾಂತ ಬೆಳ್ಳೆನವರ, ಸುಮಿತ್ರಾ ಗೊಣಸಗಿ, ಎಲ್ಲವ್ವ ಕತ್ನಳ್ಳಿ, ಸಿದ್ದು ಚಲವಾದಿ, ಪರಶು ತಳಕೇರಿ, ಭೀಮಬಾಯಿ ಬಾಣಿ, ಶ್ರೀಶೈಲ ಮಾದರ ಮುಂತಾದವರನ್ನು ಆಯ್ಕೆಗೊಳಿಸಲಾಯಿತು.

: ನಿರ್ಣಯಗಳು :

 1. ದಲಿತರಿಗೆ ದಬ್ಬಾಳಿಕೆ ದೌರ್ಜನ್ಯ ನಡೆಯುತ್ತಿದ್ದು, ಬಹಿಷ್ಕಾರ, ನೀರು ಕುಡಿಯಲು ಬಹಿಷ್ಕಾರ, ಗುಡಿ ಗುಂಡಾರ ಹೋಗುವಲ್ಲಿ ಬಹಿಷ್ಕಾರಗೊಳಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು.
   
 2. ನಮ್ಮ ಕರ್ನಾಟಕ ರಾಜ್ಯದಲ್ಲಿ ಪರಿಸ್ಥಿತಿ ಭಿನ್ನವಾಗೇನು ಇಲ್ಲ. ರಾಜ್ಯದ 6.11 ಕೋಟಿ ಜನಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ ಶೆ.17.3 ರಷ್ಟು ಪರಿಶಿಷ್ಟ ಪಂಗಡ ಶೆ. 7.2 ರಷ್ಟು ಒಟ್ಟು 1.60 ಕೋಟಿ ಜನರಿದ್ದಾರೆ. ಇವರಲ್ಲಿ ಬಹುಸಂಖ್ಯಾತರಿಗೆ ಭೂಮಿಗಳಾಗಲಿ ಮನೆಗಳಾಗಲಿ ಇಲ್ಲ. ಇನ್ನಿತರ ಸೌಲಭ್ಯಗಳು ಸಿಕ್ಕಿಲ್ಲ. ಅವು ಎಲ್ಲರಿಗೂ ಸಿಗಬೇಕು.
   
 3. ಕೇಂದ್ರ ಹಾಗೂ ರಾಜ್ಯಗಳು ದಲಿತರಿಗಾಗಿಯೇ ಪ್ರತ್ಯೇಕ ಬಜೆಟ್ ಅನುಧಾನ ಕೊಡಬೇಕು. ಮೀಸಲಾತಿ ಜಾರಿಮಾಡಬೇಕು.
   
 4. ಈ ಸರ್ಕಾರದಲ್ಲಿ ಮೀಸಲಾತಿ 84 ಕೋಟಿ ರುಪಾಯಿ ಇರುತ್ತದೆ. ಆ ಹಣದಲ್ಲಿ ದಲಿತರಿಗೆ 5 ಎಕರೆ ಜಮೀನು ಕೊಡಲಿಕ್ಕೆ ಅರ್ಜಿಗಳು ಹಾಕಬೇಕು. ಹಾಕುವಂತೆ ತಿರ್ಮಾನ ಕೈಗೊಳ್ಳಲಾಯಿತು.
   
 5. ಫೆ. 17 ರಂದು ಇಡೀ ರಾಜ್ಯಾದ್ಯಾಂತ ಹೆದ್ದಾರಿಯನ್ನು 1 ಗಂಟೆಗೆ ರಸ್ತೆ ತಡೆದು ಪ್ರತಿಭಟಿಸಲಾಗುವುದು. 28ನೇ ತಾರಿಕಿಗೆ ರಾಜ್ಯಾದ್ಯಂತ ಎಲ್ಲ ತಾಲೂಕು ಕೇಂದ್ರಗಳಲ್ಲಿ ತಹಶೀಲ್ದಾರ ಕಚೇರಿ ಮುಂದೆ ಧರಣಿ ನಡೆಸಲಾಗುವುದು.
   
 6. ಎಪ್ರಿಲ್ ಕೊನೆ ತಿಂಗಳಲ್ಲಿ 10,000 ಜನರನ್ನು ಬೆಂಗಳೂರಿನಲ್ಲಿ ಸೇರಿಸಿ ದಲಿತರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಹೋರಾಟ ಕೈಗೊಳ್ಳಲು ತಿರ್ಮಾನಿಸಲಾಯಿತು.

ಸಂಗಪ್ಪ ಎಸ್. ನಾಲ್ಕಮಾನ