ಮಧ್ಯಮಮಾರ್ಗ ಎಂದರೇನು?

ಸಂಪುಟ: 
11
ಸಂಚಿಕೆ: 
08
date: 
Sunday, 12 February 2017

ಎಡ-ಬಲಗಳ ನಡುವೆ ಸಂವಾದ, ಸಂಧಾನ, ಸಮನ್ವಯ ಸಾಧಿಸಿ ಎಡಬಲಗಳು ಎರಡೂ ಅಲ್ಲದ ತಾತ್ವಿಕತೆಗಳಿಗಾಗಿ ಪ್ರಯತ್ನಿಸುವವರು ಉಳಿದಂತೆ ಎಷ್ಟೇ ಮುತ್ಸದ್ದಿಗಳಾಗಿಬಹುದಾದರೂ, ಸಮಾಜದ ಸಂಘಟನೆ ಮತ್ತು ನಿಯಂತ್ರಣದ ಬಗೆಗಿನ ರಾಜಕೀಯ ಅರಿವಿನ ವಿಷಯದಲ್ಲಿ ನಿರಕ್ಷರಕುಕ್ಷಿಗಳು. ಅವರು ಬಯಸುವ ಸಂವಾದ ಗೊತ್ತಿದ್ದೋ ಗೊತ್ತಿಲ್ಲದೆಯೋ ಬಂಡವಾಳವಾದದ ಸಮರ್ಥನೆಯಾಗಿ, ಎಡಪಂಥದ ಅಸಹನೆಯಾಗಿ, ಮುಗ್ಧ ಜನರನ್ನು ದಾರಿ ತಪ್ಪಿಸುವ ಮೂಢ ಪ್ರಯತ್ನವಾಗಿ, ಹೇಗಾದರೂ ಸರಿ ಲಾಭವಾಗಲಿ ಎಂದು ಬಯಸುವ ದುರಾಸೆಯ ಸಮಯಸಾಧಕ ಪ್ರಯತ್ನವಾಗಿ ಅಥವಾ, ಜೊತೆಗೆ ಬಂಡವಾಳವಾದದ ವ್ಯವಸ್ಥಿತ ಜಾಲದ ಫಲಾನುಭವಿಯಾಗಿ ಇಲ್ಲವೆ ಬಲಿಪಶುವಾಗಿಯೂ ಇರಬಹುದು.

ಭಾರತದಲ್ಲಿ, ನಿರ್ದಿಷ್ಟವಾಗಿ ಕರ್ನಾಟಕದಲ್ಲಿ ಖಾಸಗಿಯಾಗಿ ಸಂಘಟಿಸುವ ಸಾಹಿತ್ಯೋತ್ಸವಗಳಲ್ಲಿ ಎಡ-ಬಲಗಳ ನಡುವೆ ಸಂಘರ್ಷದ ಬದಲು ಸಂವಾದ ನಡೆಸುವ ಮೂಲಕ ಎರಡೂ ಅಲ್ಲದ ಮಧ್ಯಮ ಮಾರ್ಗವೊಂದನ್ನು ಕಂಡುಕೊಳ್ಳುವ ಅಗತ್ಯದ ಬಗ್ಗೆ ಕೂಗೆದ್ದಿದೆ. ಈ ಸಂದರ್ಭದಲ್ಲೇ ಎಡ ಯಾವುದು? ಬಲ ಎಂದರೇನು? ಇವುಗಳ ಉಗಮ, ಚಾರಿತ್ರಿಕ ಹಿನ್ನೆಲೆ, ಸಾಮಾಜಿಕ ಸಂದರ್ಭ ಮತ್ತು ಸಂಬಂಧಿಸಿದ ರಾಜಕೀಯ ದೃಷ್ಟಿಕೋನಗಳ ಬಗ್ಗೆ ಚರ್ಚೆ ನಡೆಯುತ್ತಿದೆ.

ಹಿಂದೂ ನಂಬಿಕೆಯಂತೆ ಈಶ್ವರನ ಎಡಭಾಗ ಹೆಣ್ಣು, ಬಲಭಾಗ ಗಂಡು. ಮಲಗುವುದು ಎಡಮಗ್ಗುಲಿಗೆ ನಿದ್ರೆಯಿಂದ ಏಳುವಾಗ ಬಲಮಗ್ಗುಲಿಗೆ. ಊಟಕ್ಕೆ ಬಲಗೈ, ಶೌಚಕ್ಕೆ ಎಡಗೈ. ಒಳ್ಳೆಯದನ್ನು ಬಹಿರಂಗವಾಗಿ ಆಚರಿಸುವ ವಿಧಿಗಳು ‘ಬಲಾಚಾರ’ವೆನಿಸದಿದ್ದರೂ ತೊಂದರೆ ಕೊಡಲೆಂದು ಗುಪ್ತವಾಗಿ ಆಚರಿಸುವ ವಿಧಿ ವಿಧಾನಗಳು ವಾಮಾಚಾರ. ಲೈಂಗಿಕ ಸುಖದ ನಿರಾಕರಣೆಯ ಅಧ್ಯಾತ್ಮವನ್ನು ಬಲಮಾರ್ಗವೆಂದು ಕರೆಯದಿದ್ದರೂ ಅದನ್ನು ಪುರಸ್ಕರಿಸಿ ಆರಾಧಿಸುವ ಅಧ್ಯಾತ್ಮ ಸಾಧನೆ ವಾಮಮಾರ್ಗ. ಪೂಜೆಗೆ, ಪುರಸ್ಕಾರಕ್ಕೆ, ದಾನಕ್ಕೆ ಬಲಗೈ ಮುಂದು. ತಿರಸ್ಕಾರಕ್ಕೆ ಎಡಗೈ. ದಲಿತರಲ್ಲೇ ‘ಒಂದು ಸ್ತರದ ದಲಿತರು’ ಬಲಗೈ. ‘ಇನ್ನೊಂದು ಸ್ತರದ ದಲಿತರು’ ಎಡಗೈ.

ಆದರೆ ನಮಸ್ಕಾರಕ್ಕೆ, ದಾನ ಸ್ವೀಕಾರಕ್ಕೆ, ಉದ್ಘಾಟನೆಯ ದೀಪ ಬೆಳಗಿಸಲು ಎರಡೂ ಕೈ.

ಚಾರಿತ್ರಿಕವಾಗಿ ರಾಜಕೀಯ ಪರಿಭಾಷೆಯಾಗಿ ಎಡ-ಬಲಗಳ ನಿರ್ವಚನೆ ಬಳಕೆಗೆ ಬಂದಿದ್ದು ಸಹ ಕೈಗಳ ಮೂಲಕವೇ. 1789 ರ ಫ್ರೆಂಚ್ ಕ್ರಾಂತಿಯ ನಂತರ ಫ್ರಾನ್ಸ್ ಶಾಸನ ಸಭೆಯಲ್ಲಿ ಸಭಾಧ್ಯಕ್ಷರ ಎಡಪಕ್ಕ ಕುಳಿತ ರಾಜಪ್ರಭುತ್ವ ವಿರೋಧಿಗಳು ಎಡ ಪಕ್ಷವಾದರು. ಬಲ ಪಕ್ಕ ಕುಳಿತ ರಾಜಪ್ರಭುತ್ವ-ಪರವಾಗಿರುವವರು ಬಲ ಪಕ್ಷವಾದರು.  ಆದರೆ ಎಡ-ಬಲಗಳು ಪ್ರಗತಿಪರ-ಸಾಂಪ್ರದಾಯಿಕ, ಜನಪರ-ಜನವಿರೋಧಿ, ಕಾರ್ಮಿಕರ ಪರ-ಬಂಡವಳಿಗರ ಪರ ಎಂದೆಲ್ಲಾ ರಾಜಕೀಯ ದೃಷ್ಟಿಕೋನ ಮತ್ತು ವಿರುದ್ಧ ತಾತ್ವಿಕತೆಗಳ ಸ್ಪಷ್ಟ ಆಯಾಮವನ್ನು ಪಡೆದುಕೊಂಡಿದ್ದು ಜಾಗತಿಕ ರಾಜಕಾರಣಕ್ಕೆ ಮಾಕ್ರ್ಸ್‍ವಾದದ ಪ್ರವೇಶ ಆದಮೇಲೆ.

ಮಧ್ಯಮಮಾರ್ಗ ಯಾರ ಪರವಾಗಿರುತ್ತದೆ?

21ನೇ ಶತಮಾನದಲ್ಲಿ ಎಡಪಂಥ ಎಂದರೆ ನಿರ್ದಿಷ್ಟವಾಗಿ ಮಾಕ್ರ್ಸ್‍ವಾದವೇ. ಎಡಪಂಥೀಯರು ಎಂದರೆ ಕಮ್ಯೂನಿಸ್ಟರು ಎಂಬುದು ಎಲ್ಲರಿಗೂ ಗೊತ್ತು. ಎಡಪಂಥದ ವಿರೋಧವೆಂದರೆ ಮಾಕ್ರ್ಸ್‍ವಾದದ ವಿರೋಧ. ಕಮ್ಯುನಿಸ್ಟರ ವಿರೋಧ. ಸಮಾಜವಾದದ ತಾತ್ವಿಕತೆಯ ವಿರೋಧ. ದುಡಿಯುವವರ ಪರವಾದ ರಾಜಕೀಯದ ವಿರೋಧ. ವಿರೋಧಿಸುವವರು ಯಾರು? ಒಂದೇ ಮಾತಿನಲ್ಲಿ ಹೇಳುವುದಾದರೆ ಬಂಡವಳಿಗರು. ಅವರ ಪರವಾದ ರಾಜಕೀಯ ತಾತ್ವಿಕತೆ. ಇಬ್ಬರ ನಡುವೆ ಸಂಘರ್ಷ ಬೇಡ, ಸಂವಾದ ಬೇಕು ಎಂದರೆ ಏನರ್ಥ? ಇವೆರಡರ ನಡುವಿನ ಸಂವಾದದಲ್ಲಿ ಇವೆರಡೂ ಅಲ್ಲದ ಮೂರನೆಯ ತಾತ್ವಿಕತೆ ಹುಟ್ಟಬಹುದೆ? ಇವೆರಡರ ನಡುವೆ ಸಮನ್ವಯ ಸಾಧ್ಯವಾಗಬಹುದೆ? ಅಥವಾ ಇವೆರಡೂ ಅಲ್ಲದ, ಇವೆರರ ನಡುವೆ ಮಧ್ಯಮಮಾರ್ಗ ಎಂಬುದಿದೆಯೆ? ಇದ್ದರೆ ಅಂಥ ಮಧ್ಯಮಮಾರ್ಗ ಯಾರ ಪರವಾಗಿರುತ್ತದೆ?

ಬಂಡವಳಿಗರು ತಮ್ಮ ಹಿತಾಸಕ್ತಿಯನ್ನು ರಕ್ಷಿಸುವ, ಸರಿಯೆಂದು ನಂಬುವ, ಅದನ್ನು ಉಳಿಸಿಕೊಳ್ಳಲು ಎಂಥ ಹಿಂಸೆಗಾದರೂ ಹೇಸದ ತಾತ್ವಿಕತೆಯಾದ ಬಂಡವಾಳವಾದ ತಾತ್ವಿಕವಾಗಿ ಏಕಾಕೃತಿ ಹೌದು. ಆದರೆ ಅದು ಒಂದೇ ಅಲ್ಲ ಮತ್ತು ಅದಕ್ಕೆ ಒಂದೇ ಹೆಸರಿಲ್ಲ. ಸಾಮಾಜಿಕ ಶ್ರಮಶಕ್ತಿಯ ಮೇಲಿನ ಹಿಡಿತ, ಸರಕು ಮತ್ತು ಸೇವೆಗಳ ಉತ್ಪಾದನಾ ಸಂಬಂಧಗಳ ಕಾನೂನಾತ್ಮಕ ನಿಯಂತ್ರಣ ಮತ್ತು ಪ್ರಭುತ್ವದ ಶಕ್ತಿಯನ್ನು ಬೆರಳೆಣಿಕೆಯ ಶ್ರೀಮಂತರು ತಮ್ಮ ಕೈಲಿರಿಸಿಕೊಂಡು ದುಡಿಯುವ ಜನರು ಮತ್ತು ಜನಸಮುದಾಯದ ಹೇರುವ ಬೂಜ್ರ್ವಾ ಸರ್ವಾಧಿಕಾರವೇ ಬಂಡವಾಳವಾದ. ಅದಕ್ಕೆ ‘ಮುಕ್ತ ಸಮಾಜ’, ‘ಅಪ್ಪಟ ಪ್ರಜಾತಂತ್ರ ಮುಂತಾದ ಮೋಸದ ಹೆಸರು ಬೇರೆ. ಎಲ್ಲ ಬಗೆಯ ಜೀವನಾಗತ್ಯ ವಸ್ತುಗಳ ಉತ್ಪಾದನೆಗೆ ಮೂಲಾಧಾರವಾದ ಭೂಮಿ ಮತ್ತು ಭೂಪ್ರದೇಶಗಳ ಮೇಲಿನ ಸ್ವಾಮ್ಯಕ್ಕಾಗಿ ಬಂಡವಳಿಗರ ವಿವಿಧ ಬಣಗಳು ಲಕ್ಷಾಂತರ ಬಡ ಸೈನಿಕರ ರಕ್ತ ಹರಿಸುವ ಸಂಘಟಿತ ಪೈಪೋಟಿಯೇ ಯುದ್ಧ.

ಒಂದು ಭೂಪ್ರದೇಶದ ದುಡಿಯುವ ಜನರನ್ನು ವಂಚಿಸಿ ದೋಚಿದ ಶ್ರಮದ ಮೌಲ್ಯವನ್ನು ಮತ್ತೊಂದು ಭೂಪ್ರದೇಶದ ಬಂಡವಳಿಗರು ದೋಚಿದ ಶ್ರಮದ ಮೌಲ್ಯದೊಂದಿಗೆ ವಿನಿಮಯ ಮಾಡಿಕೊಂಡು ಬಂಡವಳಿಗರ ಸಂಪತ್ತನ್ನು ಹೆಚ್ಚಿಸಿಕೊಳ್ಳಲು, ಲಾಭವಾದರೆ ಬಂಡವಳಿಗರಿಗೆ. ನಷ್ಟವಾದರೆ ದುಡಿಯುವ ಜನರಿಗೆ ಎಂಬ ಸೂತ್ರವನ್ನು ಆಧರಿಸಿಮಾಡುವ ನಡೆಸುವ ವಹಿವಾಟುಗಳೇ ವ್ಯಾಪಾರ. ಅದು ಅನಿರ್ಬಂಧಿತವಾಗಿರಬೇಕು, ಆದ್ದರಿಂದ ಮುಕ್ತ ವ್ಯಾಪಾರ. ಈ ಸಂಬಂಧ ಬಂಡವಳಿಗರ ನಡುವೆ ಏರ್ಪಡುವ ಒಪ್ಪಂದಗಳು ದೇಶ ದೇಶಗಳ ನಡುವಿನ ವ್ಯಾಪಾರ ಒಪ್ಪಂದಗಳು. ಇದಕ್ಕೆ ಏನೇನು ಹೆಸರಿಟ್ಟರೂ, ಯಾವ ರೂಪ ತಾಳಿದರೂ ಬಂಡವಾಳವಾದದ ಸಾರ ಸರ್ವಸ್ವ ಒಂದೇ. ದುಡಿಯು ಜನರ ಮೇಲಿನ ಶ್ರೀಮಂತರ ಸರ್ವಾಧಿಕಾರ.

ಬಂಡವಾಳವಾದದ ತೊಡೆಯಮೇಲೆ ಕುಳಿತು ಸಮಾಜವಾದಕ್ಕಾಗಿ ಕೈ ಚಾಚುವ ಮಗು

ಇದಕ್ಕೆ ಪ್ರತಿಯಾಗಿ, ಬೆರಳೆಣಿಕೆಯ ಶ್ರೀಮಂತರು, ದುಡಿಯುವ ಜನರ ಮೇಲೆ, ಮತ್ತು ಜನಸಮುದಾಯದ ಮೇಲೆ ನಡೆಸುವ ಬೂಜ್ರ್ವಾ ಸರ್ವಾಧಿಕಾರವನ್ನು ಕೊನೆಗೊಳಿಸಿ ದುಡಿಯುವ ಜನರ ಸರ್ವಾಧಿಕಾರವನ್ನು ಸ್ಥಾಪಿಸುವುದೊಂದೇ ಜನಸಮುದಾಯದ ಬಿಡುಗಡೆಗೆ, ನಿಜವಾದ ಪ್ರಜಾಪ್ರಭುತ್ವದ ಸ್ಥಾಪನೆಗೆ ಇರುವ ಏಕೈಕ ದಾರಿ.

ಇದನ್ನುಳಿದು ಬೇರೆ ಪರ್ಯಾಯಗಳಿವೆಯೆಂದು ನಂಬುವ, ಪ್ರಚಾರ ಮಾಡುವ ಎಲ್ಲ ತಾತ್ವಿಕತೆಗಳೂ ಬಂಡವಾಳವಾದದ ತೊಡೆಯಮೇಲೆ ಕುಳಿತು ಸಮಾಜವಾದಕ್ಕಾಗಿ ಕೈ ಚಾಚುವ ಮಗುವಿನಂತೆ ಮುಗ್ಧ ಅಥವಾ ಅಜ್ಞ. ಬಂಡವಾಳವಾದವನ್ನು ಧಿಕ್ಕರಿಸುವ, ಅಥವಾ ಅದರೊಂದಿಗೆ ಸಮನ್ವಯ ಸಾಧಿಸಿ ಶೋಷಣೆ, ಅನ್ಯಾಯ, ಹಿಂಸೆಗಳಿಂದ ಮುಕ್ತವಾದ ಹೊಸ ಸಮಾಜವನ್ನು ಕಟ್ಟಬೇಕೆಂದು ಕನಸು ಕಾಣುವ ಗಾಂಧಿವಾದ, ಲೋಹಿಯಾವಾದ, ಅಂಬೇಡ್ಕರ್‍ವಾದ, ಸರ್ವೋದಯ, ಕಲ್ಯಾಣರಾಜ್ಯ, ಸಂತ ಸಮಾಜವಾದ, ಸರಳಜೀವನವಾದ... ಒಟ್ಟಿನಲ್ಲಿ ದುಡಿಯುವ ಜನರ ಸರ್ವಾಧಿಕಾರ ಒಂದನ್ನು ಬಿಟ್ಟು ಏನೆಲ್ಲವನ್ನೂ ಗುರಿಯಾಗಿರಿಸಿಕೊಂಡು ಮಾಡುವ ಸಾಂಸ್ಕøತಿಕ, ಸಾಮಾಜಿಕ ಮತ್ತು ಬೌದ್ಧಿಕ ಪ್ರಯತ್ನಗಳು ಪ್ರಗತಿಶೀಲವೆಂದು, ಜನಪರವೆಂದು, ಪ್ರಜಾತಾಂತ್ರಿಕವೆಂದು, ತೋರಬಹುದೇ ಹೊರತು ಸಾಮಾಜಿಕ ಶ್ರಮಶಕ್ತಿಯ ಹಿಡಿತದಲ್ಲಾಗಲಿ ಸರಕು-ಸೇವೆಗಳ ಉತ್ಪಾದನಾ ಸಂಬಂಧಗಳಲ್ಲಾಗಲಿ, ಪ್ರಭುತ್ವ ಶಕ್ತಿಯ ನಿಯಂತ್ರಣದಲ್ಲಾಗಲಿ ಬದಲಾವಣೆ ತರುವುದರಲ್ಲಿ ಸಫಲವಾಗುವುದಿಲ್ಲ. ಅಂಥ ಬದಲಾವಣೆಯತ್ತ ಒಂದು ಹೆಜ್ಜೆ ಮುಂದಿಟ್ಟರೂ ಪ್ರಭುತ್ವಶಕ್ತಿ ಅಂಥ ಪ್ರಯತ್ನಗಳನ್ನು ನಿರ್ದಯವಾಗಿ ಬಗ್ಗು ಬಡಿಯುತ್ತದೆ. ಶಾಂತಿ, ಸಹನೆ, ಪ್ರೇಮ, ಹೃದಯಪರಿವರ್ತನೆ ಮುಂತಾದ ಯಾವ ಮಾನವೀಯ ಮನವಿಗಳಿಗೂ ಸೊಪ್ಪುಹಾಕುವುದಿಲ್ಲ.

TINA ಮತ್ತು TAMA

ಎಡ-ಬಲಗಳ ನಡುವೆ ಸಂವಾದ, ಸಂಧಾನ, ಸಮನ್ವಯ ಸಾಧಿಸಿ ಎಡಬಲಗಳು ಎರಡೂ ಅಲ್ಲದ ತಾತ್ವಿಕತೆಗಳಿಗಾಗಿ ಪ್ರಯತ್ನಿಸುವವರು ಉಳಿದಂತೆ ಎಷ್ಟೇ ಮುತ್ಸದ್ದಿಗಳಾಗಿಬಹುದಾದರೂ, ಸಮಾಜದ ಸಂಘಟನೆ ಮತ್ತು ನಿಯಂತ್ರಣದ ಬಗೆಗಿನ ರಾಜಕೀಯ ಅರಿವಿನ ವಿಷಯದಲ್ಲಿ ನಿರಕ್ಷರಕುಕ್ಷಿಗಳಗಿರಬಹುದು. ಅವರು ಬಯಸುವ ಸಂವಾದ ಗೊತ್ತಿದ್ದೋ ಗೊತ್ತಿಲ್ಲದೆಯೋ ಬಂಡವಾಳವಾದದ ಸಮರ್ಥನೆಯಾಗಿ, ಎಡಪಂಥದ ಅಸಹನೆಯಾಗಿ, ಮುಗ್ಧ ಜನರನ್ನು ದಾರಿ ತಪ್ಪಿಸುವ ಮೂಢ ಪ್ರಯತ್ನವಾಗಿ, ಹೇಗಾದರೂ ಸರಿ ಲಾಭವಾಗಲಿ ಎಂದು ಬಯಸುವ ದುರಾಸೆಯ ಸಮಯಸಾಧಕ ಪ್ರಯತ್ನವಾಗಿ ಅಥವಾ, ಜೊತೆಗೆ ಬಂಡವಾಳವಾದದ ವ್ಯವಸ್ಥಿತ ಜಾಲದ ಫಲಾನುಭವಿಯಾಗಿ ಇಲ್ಲವೆ ಬಲಿಪಶುವಾಗಿಯೂ ಇರಬಹುದು.       

ಜಾಗತೀಕರಣದ ರಾಜಕೀಯದ ಮೂಲಕ ಸಾಮ್ರಾಜ್ಯವಾದ ಹುಟ್ಟುಹಾಕಿದ ಹೊಸ ಹೊಸ ತಾತ್ವಿಕ ಘೋಷಣೆಗಳಲ್ಲಿ ಟೀನಾ (TINA - ದೆರ್ ಈಸ್ ನೋ ಅಲ್ಟರ್ನೆಟಿವ್), ಅಂದರೆ ‘ಬಂಡವಾಳವಾದಕ್ಕೆ ಬೇರೆ ಪರ್ಯಾಯವಿಲ್ಲ’; ಮತ್ತು ‘ಕಾರ್ಮಿಕವರ್ಗ ಗತಿಸಿದೆ, ಆದ್ದರಿಂದ ವರ್ಗಹೋರಾಟವನ್ನು ಪ್ರತಿಪಾದಿಸುವ ಮಾಕ್ರ್ಸ್‍ವಾದ ತನ್ನ ಪ್ರಸ್ತುತತೆಯನ್ನು ಕಳೆದುಕೊಂಡಿದೆ’ ಎಂಬುವು ಬಹು ಮುಖ್ಯವಾದವುಗಳು. ‘ಜಾಗತಿಕ ವ್ಯಾಪಾರ ಸಂಘಟನೆ’ (ಡಬ್ಳುಯು ಟಿಒ), ‘ಜಾಗತಿಕ ಆರ್ಥಿಕ ವೇದಿಕೆ’ (ವಲ್ರ್ಡ್ ಇಕನಾಮಿಕ್ ಫೋರಂ) ಸಂಘಟನೆಗಳಿಗೆ ಪರ್ಯಾಯವೆಂದು ಹುಟ್ಟಿದ ‘ಜಾಗತಿಕ ಸಮಾಜ ವೇದಿಕೆ’ (ವಲ್ರ್ಡ್ ಸೋಶಿಯಲ್ ಫೋರಂ) ಮತ್ತು ‘ನಾವು 99%’ ಎಂಬ ವಾರಾಂತ್ಯದ ಚಳುವಳಿಗಳು ‘ಸಮಾಜವಾದ ಸತ್ತಿದೆ, ಬಂಡವಾಳವಾದ ಸೋತಿದೆ’ ಹೀಗಾಗಿ ಬಂಡವಾಳವಾದ, ಸಮಾಜವಾದ ಎರಡೂ ಅಲ್ಲದ ‘ಟಾಮಾ’ ಪರ್ಯಾಯಗಳು (TAMA - ದೇರ್ ಆರ್ ಮೆನಿ ಆಲ್ಟರ್‍ನೆಟಿವ್ಸ್) ಸಾಧ್ಯವಿವೆ ಎಂದು ಪ್ರತಿಪಾದಿಸಿದವು.

ಸೋವಿಯತ್ ನೇತೃತ್ವದಲ್ಲಿ ಸಂಘಟಿತವಾದ ಸಮಾಜವಾದೀ ರಾಜಕೀಯವನ್ನು ಸಮಾಜವಾದೀ ಆಶಯಗಳಿಂದಲೇ ಹಿಮ್ಮೆಟ್ಟಿಸಲು ಜಾಗತಿಕ ಬಂಡವಾಳವಾದ ಕಂಡುಕೊಂಡ ‘ಕಲ್ಯಾಣ ರಾಜ್ಯಾಧಿಕಾರ’ (‘ವೆಲ್‍ಫೇರ್ ಸ್ಟೇಟ್’) ಮಧ್ಯಮಮಾರ್ಗದ ಹಳೆಯ ಮಾದರಿ. ಇದು ಯೂರೋಪ್‍ನ ಸಣ್ಣ ಸಣ್ಣ ಬಂಡವಾಳಶಾಹಿ ದೇಶಗಳಲ್ಲಿ ರಾಜಕೀಯವಾಗಿ ಅನುಷ್ಠಾನಗೊಂಡು 21ನೇ ಶತಮಾನದ ಹೊಸ ಸಮಾಜವನ್ನು ಕಟ್ಟಬೇಕೆಂದು ಬಯಸುವ ಮಧ್ಯಮವರ್ಗೀಯ ಜನರ ಆದರ್ಶವಾಗಿದೆ. ಭಾರತದಲ್ಲಿ ಬ್ರಿಟಿಷರು ಭಾರತವನ್ನು ಬಿಟ್ಟುಹೋದಮೇಲೆ ಚಾಲ್ತಿಯಲ್ಲಿದ್ದ ಬಂಡವಾಳವಾದದ ಚೌಕಟ್ಟಿನೊಳಗೇ ಗಾಂಧೀಜಿ, ವೈಜ್ಞಾನಿಕ ಸಮಾಜವಾದಕ್ಕೆ ಪರ್ಯಾಯವಾಗಿ ತಮ್ಮ ಹಿಂದ್ ಸ್ವರಾಜ್ ಮೂಲಕ ಪ್ರತಿಪಾದಿಸಿದ ‘ಸಂತ ಸಮಾಜವಾದ’, ಮತ್ತು ‘ಕಾಲ್ಪನಿಕ ಸಮಾಜವಾದ’ಗಳ ತಾತ್ವಿಕತೆಗಳು ಮಧ್ಯಮಮಾರ್ಗದ ಇತರ ಮಾದರಿಗಳು. 1847 ರಲ್ಲಿ ಮಾಕ್ರ್ಸ್ ಮತ್ತು ಎಂಗೆಲ್ಸ್ ಪ್ರಕಟಿಸಿದ ಕಮ್ಯುನಿಸ್ಟ್ ಪ್ರಣಾಳಿಕೆಯಲ್ಲಿ ಸಮಾಜವಾದದ ಈ ಹುಸಿ ಮಾದರಿಗಳು ಪ್ರಸ್ತಾಪಗೊಂಡಿವೆ.

ಮಧ್ಯಮ ಮಾರ್ಗಿಗಳು ಯಾರು?

ಬಂಡವಾಳವಾದದ ಕೆಡಕುಗಳನ್ನು ದೂರವಿಟ್ಟು ಸಮಾಜವಾದದ ಲಾಭಗಳನ್ನು ಮಾತ್ರ ಹೆಕ್ಕಿಕೊಂಡು ಈ ಎರಡೂ ಅಲ್ಲದ ಹೊಸ ರಾಜಕೀಯ ತಾತ್ವಿಕತೆಯನ್ನು ಆಧರಿಸಿದ ಸಮ ಸಮಾಜವನ್ನು ಕಟ್ಟಬಾರದೇಕೆ? ಎಂಬುದು ಮಧ್ಯಮಮಾರ್ಗಿಗಳ ಇತ್ತೀಚಿನ ಆಶಯ. ಇವರಲ್ಲಿ - ನೈಸರ್ಗಿಕ ಸಂಪತ್ತನ್ನು ಮುಂದಿನ ಜನಾಂಗಕ್ಕಾಗಿ ಉಳಿಸಲು ಹಿತ-ಮಿತವಾಗಿ ಬಳಸಬೇಕೆಂದು ಬಯಸುವ ಪರಿಸರವಾದಿಗಳು, ಈ ಪ್ರಪಂಚದ ಇಂದಿನ ವಿಷಮತೆ- ಕಷ್ಟಗಳಿಗೆ ಮನುಷ್ಯರ ಸ್ವಾರ್ಥ ಮತ್ತು ಅತಿ ಆಸೆಯೇ ಕಾರಣವೆಂದು, ದುರಾಸೆಯಿಂದ ದೂರ ಸರಿದು ನಿಸ್ವಾರ್ಥತೆಯನ್ನು ಮೈಗೂಡಿಸಿಕೊಂಡರೆ ಎಲ್ಲರೂ ನೆಮ್ಮದಿಯಿಂದ ಬದುಕಬಹುದಾದ ಜೀವನ ಸಾಧ್ಯವೆಂದು ಪ್ರತಿಪಾದಿಸುವ ನೈತಿಕವಾದಿಗಳು, ಶ್ರೀಮಂತರ ಭೋಗಲಾಲಸೆಯಿಂದಾಗಿ ಬಡವರು ಕಷ್ಟಪಡುತ್ತಿದ್ದಾರೆಂದು, ಉಳ್ಳವರು ಭೋಗವನ್ನು ತ್ಯಜಿಸಿ ಜೀವನದಲ್ಲಿ ಸರಳತೆಯನ್ನು ಅಳವಡಿಸಿಕೊಂಡರೆ ಬಡತನ ಮುಂತಾದ ಕಷ್ಟ-ಕಾರ್ಪಣ್ಯಗಳು ಮಾಯವಾಗಿ ಎಲ್ಲರೂ ಸುಖವಾಗಿ ಜೀವಿಸಬಹುದೆಂದು ಪ್ರತಿಪಾದಿಸುವ  ಸರಳ ಜೀವನವಾದಿಗಳು, - ಇದ್ದಾರೆ.  ದೇಹಸುಖ ಮತ್ತು ಭೌತಿಕ ಸಂಪತ್ತಿನ ಮೇಲಿರುವ ಮಮಕಾರವೇ ನಮ್ಮೆಲ್ಲರ ಕಷ್ಟಗಳಿಗೆ ಕಾರಣವಾಗಿದ್ದು, ಎಲ್ಲರೂ ವ್ಯಕ್ತಿಗತವಾಗಿ ಆಧ್ಯಾತ್ಮಿಕ ದೃಷ್ಟಿಕೋನವನ್ನು ಬೆಳೆಸಿಕೊಂಡರೆ ಕಷ್ಟ ಎಂಬುದೇ ಇರುವುದಿಲ್ಲ. ಆದ್ದರಿಂದ ಆತ್ಮ ಅಮರ, ದೇಹ ನಶ್ವರ ಎಂಬ ಅಧ್ಯಾತ್ಮದೃಷ್ಟಿಯನ್ನು ಮೈಗೂಡಿಸಿಕೊಂಡು ಮೂರು ದಿನದ ಈ ನಶ್ವರ ಪ್ರಪಂಚದಲ್ಲಿ ಹೇಗೋ ಕಾಲತಳ್ಳಬೇಕೆಂದು ಉಪದೇಶಿಸುವ ಅಧ್ಯಾತ್ಮವಾದಿಗಳು, ಪೂರ್ವಜನ್ಮದ ನಮ್ಮ ನಮ್ಮ ಕರ್ಮಾನುಸಾರ ನಮ್ಮ ಕಷ್ಟ-ಸುಖಗಳು ಒದಗುತ್ತವೆಯೇ ಹೊರತು ಸಿರಿತನ-ಬಡತನಗಳಿಗೆ ಯಾರೂ ಹೊಣೆಯಲ್ಲ. ಸೃಷ್ಟಿಯ ನಿಯಾಮಕನಾದ ಭಗವಂತನಿಗೆ ಶರಣಾಗಿ ಶಾಂತಿ-ಸಹನೆ ಮತ್ತು ಪ್ರೇಮದಿಂದ ಬದುಕುವುದೊಂದೇ ನಮಗಿರುವ ಏಕೈಕ ಮಾರ್ಗ ಎಂದು ನಂಬುವ ಧಾರ್ಮಿಕ ಜನರೂ ಮಧ್ಯಮ ಮಾರ್ಗಿಗಳೇ. ಪ್ರಪಂಚ ಹೇಗಿದೆಯೋ ಹಾಗೆ ಒಪ್ಪಿಕೊಂಡು, ಎದುರಾದ ಕಷ್ಟಗಳನ್ನು ಸವಾಲುಗಳಂತೆ ಸ್ವೀಕರಿಸಿ ಸಂಘರ್ಷವಿಲ್ಲದೆ ಬದುಕುವ ಕಲೆಯನ್ನು ಮೈಗೂಡಿಸಿಕೊಳ್ಳಬೇಕೆಂದು ಸಲಹೆಕೊಡುವ ಅಸ್ತಿತ್ವವಾದಿಗಳು, ಯಾರು ಎಷ್ಟೇ ಪ್ರಯತ್ನಿಸಲಿ ಈ ಪ್ರಪಂಚ ಇದ್ದಂತೆಯೇ ಇರುತ್ತದೆ, ಇದನ್ನು ಬದಲಾಯಿಸುವುದು ಯಾರಿಗೂ, ಎಂದಿಗೂ ಸಾಧ್ಯವಿಲ್ಲ. ಆದ್ದರಿಂದ ಇರುವ ಸೌಲಭ್ಯಗಳನ್ನು ಬಳಸಿಕೊಂಡು ಇದ್ದುದರಲ್ಲಿ ಸುಖವಾಗಿ ಬದುಕುವುದೇ ಜಾಣತನವೆಂದು ತಿಳಿಹೇಳುವ ಅರಾಜಕತಾವಾದಿಗಳೂ ಮಧ್ಯಮಮಾರ್ಗಿಗಳಲ್ಲಿ ಸೇರಿದ್ದಾರೆ.

ಇವರೆಲ್ಲರೂ ಒಟ್ಟಾರೆಯಾಗಿ ಸಮಾಜವಾದದ ತಾತ್ವಿಕತೆಯನ್ನು ತಿರಸ್ಕರಿಸುತ್ತಾರೆ. ಅದರ ರಾಜಕೀಯ ಅನುಷ್ಠಾನವನ್ನು ದ್ವೇಷಿಸುತ್ತಾರೆ. ಲಲಿತಕಲೆಗಳು, ಸಾಹಿತ್ಯ ಮತ್ತು ಸಿನಿಮಾ ಮುಂತಾದ ಸಾಂಸ್ಕøತಿಕ ಮತ್ತು ಸೃಜನಶೀಲ ಅಭಿವ್ಯಕ್ತಿ ಮಾಧ್ಯಮಗಳಲ್ಲಿ ಈ ಜನರ ದೃಷ್ಟಿಕೋನ-ಪ್ರತಿಪಾದನೆಗಳಿಗೆ ಹೇರಳ ಅವಕಾಶ ದೊರೆಯುವುದರಿಂದ ಅವೇ ವಾಸ್ತವವಾದ, ಸರಿಯಾದ, ಸತ್ಯವಾದ ಮತ್ತು ನಂಬಲರ್ಹವಾದ ನಾಗರಿಕತೆಯ ಪರಂಪರೆಯೆಂದು, ಚರಿತ್ರೆಯೆಂದು ಜನಜನಿತವಾಗಿವೆ. ಇವುಗಳ ಮಧ್ಯೆ ಇರುವ ಭಿನ್ನಾಭಿಪ್ರಾಯಗಳು, ನಡೆಯುವ ತಿಕ್ಕಾಟಗಳು ಬೌದ್ಧಿಕ, ತಾತ್ವಿಕ ಭಿನ್ನಾಭಿಪ್ರಾಯಗಳೆಂದು, ವಾದ-ಸಂವಾದಗಳೆಂದು ಒಪ್ಪಿತವಾಗುತ್ತವೆ. ಇವಕ್ಕೆ ಅವಕಾಶ ಮಾಡಿಕೊಡುವ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯನ್ನು ಪ್ರಜಾಪ್ರಭುತ್ವವೆಂದು ಸ್ವೀಕರಿಸಲಾಗುತ್ತದೆ.  ಮತ್ತು ಇವನ್ನು ಬಿಡಿ ಬಿಡಿಯಾಗಿ ಇಲ್ಲವೆ ಒಟ್ಟಾರೆಯಾಗಿ ಪ್ರಶ್ನಿಸುವವರನ್ನು ಎಡಪಂಥೀಯರೆಂದು, ವಾಮಮಾರ್ಗಿಗಳೆಂದು ತಿರಸ್ಕರಿಸಲಾಗುತ್ತದೆ. ತೀವ್ರ ಸಂದರ್ಭಗಳಲ್ಲಿ ದ್ವೇಷಿಸಲಾಗುತ್ತದೆ. ಕೊಲ್ಲಲಾಗುತ್ತದೆ.

ಎಡಪಂಥದ ಕುರುಡು ವಿರೋಧಿಗಳು

ಇಂಥ ಪ್ರಜಾಪ್ರಭುತ್ವದಲ್ಲಿನ ಪುರೋಹಿತರು, ಸಮಾಜ ಸುಧಾರಕರು, ಸಮಾಜ ಸೇವಕರು ಆಪ್ತ ಸಮಾಲೋಚಕರು, ಶಾಂತಿದೂತರು, ಸಾಹಿತಿ, ಕಲಾವಿದರು, ಲೋಕಾಭಿಪ್ರಾಯ ರೂಪಿಸುವ ಬೌದ್ಧಿಕ ದಿಗ್ಗಜರು ಎಡಪಂಥೀಯರನ್ನು ವಿರೋಧಿಸುವಂಥ ಆಲೋಚನೆಗಳ ಪ್ರಸಾರ-ಪ್ರಚಾರದಲ್ಲಿ ಮುಖ್ಯ ಪಾತ್ರ ವಹಿಸುತ್ತಾರೆ. ಉಳಿದ ಎಲ್ಲ ವಿಷಯಗಳಿಗೆ ಸಂಬಂಧಿಸಿದಂತೆ ತರ್ಕಬದ್ಧವಾಗಿ, ವಸ್ತುನಿಷ್ಠವಾಗಿ ಯೋಚಿಸಿ, ಸತ್ಯನಿಷ್ಠ-ಅನುಭವನಿಷ್ಠ-ನಿರಪೇಕ್ಷ ನಿಲುವನ್ನು ತಾಳಬಲ್ಲ ಈ ಜನರು ಮತ್ತು ವೈಜ್ಞಾನಿಕರೂ ಸಹ ತಾವು ಬದುಕುವ ಸಮಾಜದ ಅಡಿಗಲ್ಲು ಯಾವುದು? ಆ ಸಮಾಜ ಹೇಗೆ ಸಂಘಟಿತವಾಗಿದೆ? ಅದನ್ನು ರಾಜಕೀಯವಾಗಿ ಯಾರು ನಿರ್ಧರಿಸುತ್ತಾರೆ, ನಿಯಂತ್ರಿಸುತ್ತಾರೆ? ಅವರ ತಾತ್ವಿಕತೆಯು ಜನರ ಸ್ವಾತಂತ್ರ್ಯ, ಬದುಕಿನ ಮಟ್ಟ, ಅವರ ನ್ಯಾಯ-ನೆಮ್ಮದಿ-ಸುಖದ ಪರಿಕಲ್ಪನೆಯನ್ನು ಹೇಗೆ ತಳಮಟ್ಟದಿಂದ ಪ್ರಭಾವಿಸುತ್ತದೆ? ಎಂಬ ಪ್ರಶ್ನೆಗಳಿಗೆ ಬೆನ್ನುತಿರುಗಿಸಿ ಅವರ ಕಲ್ಪನೆಯ ಎಡಪಂಥವನ್ನು ಸಮಾಜವಾದದೊಂದಿಗೆ ಸಮೀಕರಿಸಿ ಕುರುಡಾಗಿ ತಿರಸ್ಕರಿಸುತ್ತಾರೆ. ಅವರ ಪ್ರಕಾರ ಎಡಪಂಥೀಯರ ಸಮಾಜದಲ್ಲಿ ಧಾರ್ಮಿಕತೆಯಿಲ್ಲ. ಮಾನವೀಯ ಮೌಲ್ಯಗಳಿಗೆ ಬೆಲೆಯಿಲ್ಲ. ಜನರ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗುತ್ತದೆ. ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕಲಾಗುತ್ತದೆ. ತಾವು ನಂಬುವ ಪ್ರಜಾಪ್ರಭುತ್ವದ ಬದಲು ಸರ್ವಾಧಿಕಾರವಿರುತ್ತದೆ ಎಂದು ನಂಬುತ್ತಾರೆ. ಪ್ರಚಾರ ಮಾಡುತ್ತಾರೆ. ಉಳಿದಂತೆ ಅವರಿಗೆ ಸಾಧ್ಯವಿರುವ ವಸ್ತುನಿಷ್ಠತೆ ತರ್ಕಬದ್ಧ ಆಲೋಚನೆ, ನಿರಪೇಕ್ಷತೆಗಳು ನಿಷ್ಪ್ರಯೋಜಕವಾಗುತ್ತವೆ. ದುರಂತವೆಂದರೆ ಈ ಜನರು ಸಮಾಜವಾದವನ್ನು ನಂಬಿಕೆಯ ಮಟ್ಟಕ್ಕಿಳಿಸಿ ತಿರಸ್ಕರಿಸುವಾಗಲೂ, ದ್ವೇಷಿಸುವಾಗಲೂ ಅವರು ಜನಸಾಮಾನ್ಯರ ಕಣ್ಣಿಗೆ ವಸ್ತುನಿಷ್ಠ, ಸತ್ಯನಿಷ್ಠ, ಪ್ರಾಮಾಣಿಕ ಚಿಂತಕರಾಗಿರಾಗಿಯೇ ಕಾಣಿಸುತ್ತಾರೆ. ಇಂಥವರು ಸಾಹಿತ್ಯೋತ್ಸವದಂಥ ಸಾಂಸ್ಕøತಿಕ ವೇದಿಕೆಗಳಲ್ಲಿ ಪ್ರಾರಂಭಿಸಿರುವ ಎಡ-ಬಲಗಳ ನಡುವಿನ ಸಂವಾದ-ಸಂಧಾನ-ಸಮನ್ವಯಗಳ ಪ್ರಯತ್ನಗಳು ನಮ್ಮ ಸಮಾಜದ ಪ್ರಜ್ಞಾವಂತರು ನಡೆಸುತ್ತಿರುವ ಸಕಾಲಿಕ ಮತ್ತು ಪ್ರಾಮಾಣಿಕ ಆಶಯಗಳಿಂದ ಪ್ರೇರಿತವಾಗಿರಬಹುದು. ಆದರೆ ರಾಜಕೀಯ ಪ್ರಜ್ಞೆಯ ಅಭಾವದಲ್ಲಿ ನಡೆಸುವ ಇಂಥ ಪ್ರಯತ್ನಗಳು ಯುವಜನರನ್ನು ದಾರಿಗೆಡಿಸುವ ಅಪಾಯವಿರುವುದರಿಂದ ಎಚ್ಚರವನ್ನು ಕಾಯ್ದುಕೊಳ್ಳುವುದು ಅತ್ಯಗತ್ಯ.

ಸನಾತನವಾದಿಗಳು ಜಾಗತಿಕ ಬಂಡವಾಳ ಮತ್ತು ಸಾಮ್ರಾಜ್ಯಶಾಹಿಗಳ ಜೊತೆ ಕೈಗೂಡಿಸಿ ದುಡಿಯುವ ಜನರ ಮೇಲೆ ನಿರಂತರವಾಗಿ ದಾಳಿ ಮಾಡುತ್ತಿರುವ ಈ ಕಾಲಘಟ್ಟದಲ್ಲಿ ಸಾಹಿತ್ಯದ ಚರ್ಚೆಗಳಲ್ಲಿ ಶಕ್ತಿಯನ್ನು ವ್ಯಯಿಸದೆ, ದುಡಿಯುವ ಜನರ ಜನಸಾಮಾನ್ಯರ ಮೇಲಿನ ಶ್ರೀಮಂತರ ಸರ್ವಾಧಿಕಾರವನ್ನು ಹಿಮ್ಮೆಟ್ಟಿಸಿ ದುಡಿಯುವ ಜನರ ಸರ್ವಾಧಿಕಾರವನ್ನು ಸ್ಥಾಪಿಸುವ ಪ್ರಯತ್ನಗಳನ್ನು ತೀವ್ರಗೊಳಿಸುವ ಕಡೆ ಗಮನ ಹರಿಸಬೇಕಾದ ಅಗತ್ಯ ಎಂದಿಗಿಂತಲೂ ಹೆಚ್ಚಾಗಿದೆ.

ಬೌದ್ಧ ಮಧ್ಯಮ, ಝೆನ್

ಮನುಷ್ಯರು ಹುಟ್ಟುವುದಕ್ಕಿಂತ ಮುಂಚಿನ ಸ್ಥಿತಿ, ಮನುಷ್ಯರು ಸತ್ತಮೇಲಿನ ಸ್ಥಿತಿ ಹೇಗಿರುತ್ತವೆ ಎಂಬುದು ಯಾರಿಗೂ ತಿಳಿಯದು. ಇವುಗಳ ಬಗೆಗೆ ಯಾರಿಗಾದರೂ ಆಸಕ್ತಿ ಕೆರಳುವಂಥ, ಮಕ್ಕಳಿಗೆ, ಮುಗ್ಧಮನಸ್ಸಿನ ಜನರಿಗೆ ಬೆರಗು ಹುಟ್ಟಿಸುವಂಥ ಕತೆಗಳು ಹೇರಳವಾಗಿವೆ. ಆದರೆ ವೈಜ್ಞಾನಿಕವಾಗಿ, ವೈಚಾರಿಕವಾಗಿ ನಮಗೆ ಎಟುಕುವ ಸ್ಥಿತಿ ‘ವ್ಯಕ್ತ ಮಧ್ಯ’ ಎಂದು ಕರೆಯುವ ಬದುಕು. ಇದನ್ನು ಹಸನಾಗಿಟ್ಟುಕೊಂಡು ಸಾಮುದಾಯಿಕವಾಗಿ ಸುಖ, ಸಂತೋಷ, ನೆಮ್ಮದಿಗಳಿಂದ ಬದುಕುವುದು ಹೇಗೆ? ಎಂಬುದು ಗೌತಮ ಬುದ್ಧ ತನ್ನ ಬದುಕು-ಉಪದೇಶಗಳ ಮೂಲಕ ಮುನ್ನೆಲೆಗೆ ತಂದ ಜೀವನದೃಷ್ಟಿ. ಇದು ಮಾನವೀಯತೆ, ವೈಚಾರಿಕತೆ ಮತ್ತು ಸಾಮಾಜಿಕ ಕಳಕಳಿಯನ್ನು ಉಳ್ಳ ಎಲ್ಲ ಮನುಷ್ಯರ ಕಾಳಜಿ. ಬುದ್ಧ ತನ್ನ ಕಾಲದ ರಾಜಕೀಯ ಮತ್ತು ಸಾಮಾಜಿಕ ಅತಿರೇಕಗಳ ಹಿನ್ನೆಲೆಯಲ್ಲಿ ಭಾವನೆ-ಬದುಕುವ ರೀತಿ ಮತ್ತು ಸಂಬಂಧಗಳ ವಿಷಯದಲ್ಲಿ ಮಧ್ಯಮಮಾರ್ಗವನ್ನು ಆದರ್ಶಬದುಕಿನ ರೀತಿಯೆಂದು ಉಪದೇಶಿಸಿದ. ಇದು ಸುಭದ್ರ ಬದುಕಿನ ಅತಿರೇಕಗಳ ನಡುವಿನ ಆದರ್ಶ ಸ್ಥಿತಿಯೇ ಹೊರತು ಅಸ್ತಿತ್ವಕ್ಕಾಗಿ ಪರಿತಪಿಸುವ ಹಸಿದ ಜನರ ಹೋರಾಟಗಳ ನಡುವಿನ ಮಧ್ಯಮಮಾರ್ಗವಲ್ಲ. ಅಸ್ತಿತ್ವಕ್ಕಾಗಿ ನಡೆಸುವ ಹೋರಾಟದಲ್ಲಿ ಅತಿರೇಕ ಎಂಬುದಿಲ್ಲ. ಜೀವ-ಮರಣಗಳ ನಡುವೆ ಜೀವಿಸುವ ಇಲ್ಲವೆ ಸಾಯುವ ಆಯ್ಕೆಗಳ ನಡುವೆ ನಿರಂತರ ಹೋರಾಟವಿದೆಯೇ ಹೊರತು ಯಾವ ಮಧ್ಯಮಮಾರ್ಗವೂ ಇಲ್ಲ.

ಬೌದ್ಧಮತದ ಜಪಾನೀ ಅವತರಣಿಕೆಯಾದ ಝೆನ್ ಮೂಲದ ಕತೆಗಳಲ್ಲಿ ಭೂತವನ್ನು ಮರೆತು ಭವಿಷ್ಯದ ಚಿಂತೆಯಿಲ್ಲದೆ ಸದ್ಯದ ಬದುಕನ್ನು ಬದುಕುವುದೇ ಸಾರ್ಥಕ ಬದುಕೆಂಬ ಧ್ವನಿಯಿದೆ. ಹೊಟ್ಟೆ ಬಟ್ಟೆಗೆ ಪರದಾಡಬೇಕಾದ ಚಿಂತೆಯಿಲ್ಲದೆ, ಹಣ, ಆಸ್ತಿ ಮಾಡಿಟ್ಟುಕೊಂಡ  ಮಧ್ಯಮವರ್ಗೀಯರಿಗೆ ಅನುಭಾವ ಸಾಹಿತ್ಯದಂತೆ ತುಂಬಾ ಆಪ್ಯಾಯಮಾನವಾದ ಸಾಹಿತ್ಯ ಇದು. ಆದರೆ ದುಡಿಯುವ ಜನರಿಗೆ ಭೂತದ ಹಂಗಿಲ್ಲದೆ, ಭವಿಷ್ಯದ ಚಿಂತೆಯಿಲ್ಲದೆ ಬದುಕುವುದು ಎಂದರೇನು? ಹಾಗೆಯೇ ಎಷ್ಟು ಲಾಭ ಮಾಡಿಕೊಂಡರೂ ಇನ್ನೂ ಮಾಡಬೇಕೆಂದು ತಮ್ಮ ವ್ಯಾಪಾರ-ಉದ್ಯಮಗಳನ್ನು ನಿರಂತರವಾಗಿ ವಿಸ್ತರಿಸುತ್ತಾ ಹೋಗುವ ಬಂಡವಳಿಗರಿಗೆ ಭೂತದ ಹಂಗಿಲ್ಲದೆ, ಭವಿಷ್ಯದ ಚಿಂತೆಯಿಲ್ಲದೆ ಬದುಕುವುದು ಸಾಧ್ಯವೆ? ಸಾಧ್ಯವಿಲ್ಲ ಎಂದಾದರೆ ಮಧ್ಯಮವರ್ಗೀಯರಿಗೆ ಝೆನ್ ಗುರು ಹೇಳುವುದು ಇಷ್ಟೆ: ಚರಿತ್ರೆಯ ಕಡೆ ನೋಡಬೇಡ. ಕಟ್ಟಬೇಕಾದ ಹೊಸ ಸಮಾಜದ ಬಗ್ಗೆ ತಲೆಕೆಡಿಸಿಕೊಳ್ಳಬೇಡ. ದುಡಿಯುವ ಜನರ ಮೇಲಿನ ಶ್ರೀಮಂತರ ಸರ್ವಾಧಿಕಾರದ ಪ್ರಭುತ್ವ ್ಯಶಕ್ತಿಯು ಮಧ್ಯಮವರ್ಗಿಯ ಜನರಿಗೆ ದಯಪಾಲಿಸುವ ಬಿಡುವಿನ ವೇಳೆಯನ್ನು ಸಾಹಿತ್ಯ-ಸಂಗೀತ-ಸಂಸ್ಕøತಿ ಚಿಂತನೆಗಳಲ್ಲಿ ಮುಳುಗಿ ಜೀವನ ಸಾರ್ಥಕವಾಯಿತೆಂದು ನಂಬುವುದೇ ಮಧ್ಯಮಮಾರ್ಗ.

ಪ್ರೊ. ವಿ.ಎನ್.ಲಕ್ಷ್ಮೀನಾರಾಯಣ