ಕಾರ್ಮಿಕ ಸಚಿವರೊಂದಿಗೆ ಫಲಪ್ರದ ಮಾತುಕತೆ: ಅರ್ನಿಧಿಷ್ಟ ಹೋರಾಟ ಅಂತ್ಯ

ಸಂಪುಟ: 
11
ಸಂಚಿಕೆ: 
07
Sunday, 5 February 2017

ಹೋರಾಟದ ಸ್ಥಳಕ್ಕೆ ಮೊದಲನೇ ದಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶ್ರೀಮತಿ ಉಮಾಶ್ರೀಯವರು ಹಾಗೂ ಎರಡನೇ ದಿನ ಕಾರ್ಮಿಕ ಸಚಿವರಾದ ಶ್ರೀ ಸಂತೋಷ ಲಾಡ್ ಅವರು ಬಂದು ಹೋರಾಟ ಹಿಂಪಡೆಯಲು ಕೋರಿದ್ದಾಗ್ಯೂ ಸಿಐಟಿಯು ನಾಯಕತ್ವ ಅದನ್ನು ವಿನಯಪೂರ್ವಕವಾಗಿ ನಿರಾಕರಿಸಿ ಮಾನ್ಯಸಚಿವರು ಮುಖ್ಯಮಂತ್ರಿಗಳೊಂದಿಗೆ ಕಾರ್ಮಿಕರ ಬೇಡಿಕೆಗಳ ಕುರಿತು ಮಾತುಕತೆ ನಡೆಸಬೇಕೆಂದು ಆಗ್ರಹಿಸಲಾಯಿತು. ಮತ್ತು ಹೋರಾಟವನ್ನು ಮುಂದುವರೆಸಲಾಯಿತು. ಈ ಬಗ್ಗೆ ಕಾರ್ಮಿಕ ಸಚಿವರು ಪ್ರಯತ್ನಿಸಿದರಾದರೂ ಮುಖ್ಯಮಂತ್ರಿಗಳು ಅನಾರೋಗ್ಯದ ನಿಮಿತ್ತ ಮೂರನೇ ದಿನ ಸಾಧ್ಯವಾಗಲಿಲ್ಲ. ಆದಾಗ್ಯೂ ಬಜೆಟ್ ಪೂರ್ವ ಮುನ್ನ ಅವರೊಂದಿಗೆ ಮಾತುಕತೆಗೆ ದಿನಾಂಕ ನಿಗದಿಪಡಿಸುವ ಭರವಸೆ ನೀಡಿ ಸಿಐಟಿಯು ರಾಜ್ಯ ನಿಯೋಗವನ್ನು ಮನೆಗೆ ಆಹ್ವಾನಿಸಿದರು. ಸಿಐಟಿಯು ರಾಜ್ಯ ಅಧ್ಯಕ್ಷರಾದ ಎಸ್. ವರಲಕ್ಷ್ಮೀ, ಉಪಾಧ್ಯಕ್ಷರಾದ ವಿಜೆಕೆ ನಾಯರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷೀ ಸುಂದರಂ, ರಾಜ್ಯ ಕಾರ್ಯದರ್ಶಿಗಳಾದ ಕೆ.ಎನ್. ಉಮೇಶ್, ಕೆ. ಮಹಾಂತೇಶ ಅವರನ್ನೊಳಗೊಂಡ ನಿಯೋಗ ಸಚಿವರೊಂದಿಗೆ ಸುಧೀರ್ಘ ಮಾತುಕತೆ ನಡೆಸಿತು. ಅಲ್ಲದೇ ಈ ಕೆಳಕಂಡ ಪ್ರಮುಖ ಬೇಡಿಕೆಗಳ ಬಗ್ಗೆ ನಿರ್ಧಿಷ್ಟ ಭರವಸೆಯನ್ನು ಪಡೆಯುವಲ್ಲಿ ಯಶಸ್ವಿಯಾಯಿತು.

 1. ಫೆಬ್ರವರಿ 24 ರೊಳಗಾಗಿ  ಕನಿಷ್ಟ ವೇತನ ಸಲಹಾ ಮಂಡಳಿ ಶಿಫಾರಸ್ಸಿನ ಅನ್ವಯ 10 ಸಾವಿರಕ್ಕಿಂತ ಹೆಚ್ಚಿನ ಕನಿಷ್ಟ ವೇತನ ಕರಡು ಅಧಿಸೂಚನೆಯನ್ನು ಹೊರಡಿಸುವ ಸ್ಪಷ್ಟ ಭರವಸೆಯನ್ನು ಸಚಿವರು ನೀಡಿದರು. ಆದರೂ ಕನಿಷ್ಟ ವೇತನ 18 ಸಾವಿರ ಇರಬೇಕು ಎನ್ನುವ ಬೇಡಿಕೆಯನ್ನು ಸಿಐಟಿಯು ಪ್ರತಿಪಾದಿಸಿತು.
   
 2. ಯೋಜನಾ (ಸ್ಕೀಂ) ನೌಕರರ ವೇತನವನ್ನು ಮುಂಬರುವ ಬಜೆಟ್‍ನಲ್ಲಿ ಏರಿಸುವ ಬಗ್ಗೆ ಸರಕಾರ ಚಿಂತನೆ ಎಂಬ ಅಂಶವನ್ನು ಸಚಿವರು ಸಿಐಟಿಯು ಗಮನಕ್ಕೆ ತಂದರು. ಆದರೆ ಸ್ಕೀಂ ನೌಕರರನ್ನು ಕನಿಷ್ಟ ವೇತನ ಶಡೂಲ್‍ಗೆ ತಂದು ಅವರ ಕನಿಷ್ಟ ವೇತನವನ್ನು ಕೇರಳದ ರೀತಿಯಲ್ಲಿ ಕನಿಷ್ಟ 10 ಸಾವಿರಕ್ಕಾದರೂ ಹೆಚ್ಚಸಲು ಕ್ರಮವಹಿಸಬೇಕು. ಇಲ್ಲದಿದ್ದಲ್ಲಿ ಸಿಐಟಿಯು ನೇತೃತ್ವದಲ್ಲಿ ಈ ವಿಭಾಗದ ನೌಕರರು ಬೀದಿಗಿಳಿಯಬೇಕಾಗುತ್ತದೆ ಎನ್ನುವುದನ್ನು ನಿಯೋಗ ಸ್ಫಷ್ಟಪಡಿಸಿತು.
   
 3. ಗ್ರಾಮ ಪಂಚಾಯ್ತಿ ನೌಕರರ ಬಾಕಿ ಸಂಬಳ ಬಿಡುಗಡೆ ಅಗತ್ಯವಿರುವ ಅನುದಾನ ಬಿಡುಗಡೆಗೆ ಅಗತ್ಯ ಕ್ರಮವಹಿಸುವ ಮತು ಅದಕ್ಕಾಗಿ ಹಣ ಬಿಡುಗಡೆ ಮಾಡುವ ಸ್ಪಷ್ಟ ಭರವಸೆ ಗ್ರಾಮೀಣಾಭಿವೃದ್ದಿ ಇಲಾಖೆಯಿಂದ ಬಂತು. ಈ ಸಂಬಂಧ ಫೆಬ್ರವರಿ 8 ರಂದು ಸಭೆ ನಿಗದಿಯಾಗಿದೆ.
   
 4. ಅಸಂಘಟಿತ ವಿಭಾಗದ ಹಮಾಲಿ, ಆಟೋ, ಮನೆಕೆಲಸ ಹಾಗೂ ಬೀದಿಬದಿ ವ್ಯಾಪಾರಿಗಳಿಗೆ ಪ. ಬಂಗಾಳ ಮಾದರಿಯಲ್ಲಿ ಭವಿಷ್ಯನಿಧಿ ಜಾರಿಗಳಿಗೊಳಿಸಲು ಮತ್ತು ಈ ಸಂಬಂಧ ಶಿಫಾರಸ್ಸು  ಮಾಡಲು ನಿರ್ಧರಿಸಲಾಗಿದೆ.
   
 5. ಅದೇ ರೀತಿ ಕಟ್ಟಡ ಕಾರ್ಮಿಕರಿಗೆ ಮತ್ತು ರೇಗಾ(ಉದ್ಯೋಗ ಖಾತ್ರಿ) ಕಾರ್ಮಿಕರಿಗೂ ಕಲ್ಯಾಣ ಮಂಡಳಿಯಿಂದ ಭವಿಷ್ಯನಿಧಿ ಮತ್ತು ಪಿಂಚಣಿ  ಹಾಗೂ ವಸತಿ ಯೋಜನೆ ಜಾರಿಗೊಳಿಸುವ ಭರವಸೆ ಸಿಕ್ಕಿದೆ.
   
 6. ಕಾರ್ಮಿಕ ಸಂಘಗಳ ಮಾನ್ಯತೆ ಸಂಬಂಧ ಶಾಸನ ರೂಪಿಸಲು, ಸ್ಥಾಯಿ ಸಮಿತಿ ಕಾನೂನಿಗೆ ತಿದ್ದುಪಡಿ ತಂದು ನಿವೃತ್ತಿ ವಯಸ್ಸನ್ನು 58 ರಿಂದ 60 ವರ್ಷಕ್ಕೆ ಹೆಚ್ಚಿಸಲು ಅಗತ್ಯ ಕ್ರಮವಹಿಸುವ ಭರವಸೆ ಸಿಕ್ಕಿದೆ.
   
 7. 2017 ರ ಮೇ ತಿಂಗಳಲ್ಲಿ ಕಾರ್ಮಿಕ ವರ್ಗದ ಸಮಸ್ಯೆಗಳ ಚರ್ಚೆಗಾಗಿ ಅಖಿಲ ಭಾರತ ಕಾರ್ಮೀಕ ಸಮ್ಮೇಳನದಂತೆ ತ್ರೀಪಕ್ಷಿಯ  ‘ಕರ್ನಾಟಕ ಕಾರ್ಮಿಕ ಸಮ್ಮೇಳವನ್ನು’ ನಡೆಸಲು ಕ್ರಮವಹಿಸಲು ಭರವಸೆ ಸಿಕ್ಕಿದೆ.
   
 8. ರಾಜ್ಯದಲ್ಲಿರುವ ತ್ರಿಪಕ್ಷೀಯ ಸಮಿತಿಗಳಲ್ಲಿ ಸಿಐಟಿಯು ಸೇರಿದಂತೆ ಕೇಂದ್ರ ಕಾರ್ಮಿಕ ಸಂಘಗಳಿಗೆ ಪ್ರಾತಿನಿಧ್ಯ ನೀಡಲು ಅಗತ್ಯ ಕ್ರಮದ ಭರವಸೆ ಸಿಕ್ಕಿದೆ.

ಇದಲ್ಲದೆ ಅಂಗನವಾಡಿ, ಅಕ್ಷರ ದಾಸೋಹ ಹಾಗೂ ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಳ ಕುರಿತಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಳಾಖೆ ಪ್ರಧಾನ ಕಾರ್ಯದರ್ಶಿ ಜೊತೆ ಸಿಐಟಿಯು ರಾಜ್ಯ ಅಧ್ಯಕ್ಷರಾದ ಎಸ್. ವರಲಕ್ಷ್ಮೀ, ರಾಜ್ಯ ಕಾರ್ಯದರ್ಶಿಗಳಾದ ಸುನಂದಾ ಮತ್ತು ಮಾಲೀನಿ ಮೇಸ್ತಾ ಭೇಟಿ ಮಾಡಿ ವೇತನ ಹೆಚ್ಚಳ ಕುರಿತು ಕೆಲವು ಸ್ಪಷ್ಟ ಭರವಸೆಯನ್ನು ಪಡೆದರು.

ಇದಾದ ನಂತರ ಸಭೆ ನಡೆಸಿ ಸಚಿವರು ಮತ್ತು ವಿವಿಧ ಇಲಾಖೆಗಳಲ್ಲಿ ಈ ಹೋರಾಟದಿಂದಾಗಿರುವ ಫಲಿತಗಳನ್ನು ಚರ್ಚಿಸಿದ ಸಿಐಟಿಯು ರಾಜ್ಯ ಪದಾಧಿಕಾರಿಗಳ ಸಭೆಯು ಹೋರಾಟವನ್ನು ಹಿಂಪಡೆಯುವ ನಿರ್ಧಾರ ಕೈಗೊಂಡಿತು. ಮತ್ತು ಅಂತಿಮವಾಗಿ ಪ್ರೀಡಂ ಪಾರ್ಕನಲ್ಲಿ ನರೆದಿದ್ದ ಕಾರ್ಮಿಕ ಸಮೂಹಕ್ಕೆ ಅದನ್ನು ಮನವರಿಕೆ ಮಾಡಿತು. ಮತ್ತು ಈ ಹೋರಾಟದಲ್ಲಿ ಭಾಗವಹಿಸಿದ ಎಲ್ಲಾ ವಿಭಾಗಗಳ ಕಾರ್ಮಿಕರಿಗೆ, ಸಹಕರಿಸಿದ ಸರಕಾರಕ್ಕೆ ಮತ್ತು ಎಲ್ಲಾರಿಗೂ ಅಭಿನಂದನೆ ಸಲ್ಲಿಸಿ ಘೋಷಣೆಗಳೊಂದಿಗೆ ಸಭೆ ಮುಕ್ತಾಯಗೊಳಿಸಿತು. ನಂತರ ಕೇಂದ್ರ ಬಜೆಟ್‍ನ್ನು ವಿರೋಧಿಸಿ ಮೋದಿ ಪ್ರತಿಕೃತಿ ದಹನಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಮಹಾಂತೇಶ ಕೆ.