ಸಮತೆಯ ಅರಿವು ಸಾರಿದ ಜನನುಡಿ-2016 ಬಹುತ್ವದ ಸಂದೇಶ ಸಾರೋಣ ಬನ್ನಿ

ಸಂಪುಟ: 
11
ಸಂಚಿಕೆ: 
02
Sunday, 1 January 2017

ಜನನುಡಿ 2016 ಡಿಸೆಂಬರ್ 24-25ರಂದು ಎಂದಿನಂತೆ ಮಂಗಳೂರಿನ ನಂತೂರಿನ ಶಾಂತಿಕಿರಣದಲ್ಲಿ ಸಾವಿರಕ್ಕೂ ಹೆಚ್ಚಿನ ಜನ ಕಿಕ್ಕಿರಿದು ತುಂಬಿ ಭಾಗವಹಿಸಿ ಯಶಸ್ವಿಯಾಗಿ ನಡೆಯಿತು. ಅಲ್ಲಿ ನಡೆದ ಗೋಷ್ಟಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮತ್ತು ಅದರ ಒಳಗೆ-ಹೊರಗೆ ನಡೆದ ಚರ್ಚೆ-ಸಂವಾದಗಳನ್ನು ಸಂಕ್ಷಿಪ್ತವಾಗಿಯಾದರೂ ವರದಿ ಮಾಡುವುದು ಕಷ್ಟ. ಆದ್ದರಿಂದ ಅಲ್ಲಿ ಕೇಳಿ ಬಂದ ಗಮನಾರ್ಹ ಮಾತುಗಳನ್ನಷ್ಟೇ ಕೊಡಲಾಗಿದೆ. ಅದರ ಜತೆಗೆ ``ಜನನುಡಿ - 2016 ಏನು ವಿಶೇಷ?'' ಮತ್ತು ``ಜನನುಡಿ - ಏನಿದರ ಅರ್ಥ, ಮಹತ್ವ ?'' ಎಂಬ ಅನಿಸಿಕೆಗಳನ್ನು ಕೊಡಲಾಗಿದೆ.

ಜನನುಡಿ - 2016 ಏನು ವಿಶೇಷ ?

ಜನನುಡಿ-2016 ಯಶಸ್ವಿಯಾಗಿ ಮುಗಿದಿದೆ. ಈ ಬಾರಿ ಏನು ವಿಶೇಷ.  ಜನನುಡಿ-2016ರ ಕೆಲವು ವಿಶಿಷ್ಟತೆಗಳು ಇವು.

ಯುವಜನರ ಅತ್ಯಂತ ಉತ್ಸಾಹದಾಯಕ ಪಾಲುಗೊಳ್ಳುವಿಕೆ ಅವುಗಳಲ್ಲಿ ಮುಖ್ಯವಾದದ್ದು.. ಕಳೆದ ಬಾರಿಯೇ ಆರಂಭವಾಗಿದ್ದ ಈ ಟ್ರೆಂಡ್ ಈ ಬಾರಿ ಗಟ್ಟಿಯಾಗಿ ಮುಂದುವರೆದಿದೆ. "ಎಲ್ಲಿದ್ದಾರೆ ಯುವಜನರು? ಅವರೆಲ್ಲ ಬಲಪಂಥದ ಜೊತೆಗಿದ್ದಾರೆ. ಇಲ್ಲಿ ನಾವು ನಾವೇ ಸೇರೋದು, ನಾವು ನಾವೇ ಚರ್ಚಿಸೋದು" ಎಂಬ ಆತಂಕ, ಬೇಸರವನ್ನು ನಿವಾಳಿಸಿಬಿಡುವಂತೆ ಯುವ ಜನರು ದಂಡು ಕಟ್ಟಿ ಜನನುಡಿಗೆ ಬಂದುಬಿಟ್ಟರು. ಎರಡೂ ದಿನ ಗಮನವಿಟ್ಟು ಮಾತುಗಳನ್ನು ಕೇಳಿದರು. ಪರಸಪ್ಪರ ಕಲೆತರು, ಬೆರೆತರು. ಜನನುಡಿಗೆ ಉತ್ಸಾಹದಾಯಕವಾಗಿ ಪ್ರತಿಕ್ರಿಯಿಸಿದರು. ಹಾಡುಗಳಿಗೆ ಕುಣಿದರು.'' ಎಂಬ ಮಾತು ಅಕ್ಷರಶಃ ನಿಜ. ಯುವಜನರೇ ಅಲ್ಲದೆ ಹಲವು ಹೊಸ ಮುಖಗಳು ಕಂಡವು

ಪ್ರತಿ ಬಾರಿ ಜನನುಡಿಗೆ ಒಂದು ಘೋಷವಾಕ್ಯ ಇತ್ತು. ಆದರೂ ಅಂಬೇಡ್ಕರ್ 125ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ``ಸಮತೆ ಎಂಬುದು ಅರಿವು'' ಎಂಬ ಘೋಷವಾಕ್ಯ ಪ್ರತಿ ಗೋಷ್ಟಿಯಲ್ಲೂ ಪರಿಣಾಮಕಾರಿಯಾಗಿ ಧ್ವನಿಸಿ ಅತ್ಯಂತ ಅರ್ಥಪೂರ್ಣವಾಗಿದ್ದಿದು ಬಹುಶಃ ಈ ಬಾರಿಯೇ. 

``ಜಾತಿ ವಿನಾಶ ಮತ್ತು ನಾನು'' ಎಂಬ ಅಂತರ್ಜಾತೀಯ ಮದುವೆಯಾದವರ ಅನುಭವಗಳ ಬಗೆಗಿನ ಮಹಿಳಾಗೋಷ್ಠಿ ಪರಿಕಲ್ಪನೆಯಲ್ಲೂ ಅದು ಸಾಕಾರವಾದ ರೀತಿಯಲ್ಲೂ ಅತ್ಯಂತ ವಿಶಿಷ್ಟವಾಗಿತ್ತು.  ಇಂದು ರಾಜಕಾರಣದಲ್ಲಿ ಬಹುವಾಗಿ ಚಾಲ್ತಿಯಲ್ಲಿರುವ ಅಹಿಂದ ಪರಿಕಲ್ಪನೆ ಬಗ್ಗೆ ಹಮ್ಮಿಕೊಂಡಿದ್ದ ``ಮುಸ್ಲಿಂ-ದಲಿತ-ಹಿಂದುಳಿದವರ ಐಕ್ಯತೆ'' ಗೋಷ್ಟಿ, ಅದರಲ್ಲೂ `ಮುಸ್ಲಿಂ ರಾಜಕಾರಣ'ದ ಇಂದಿನ ಆಚರಣೆಗಳು ಮತ್ತು ಅದಕ್ಕೆ ಪರ್ಯಾಯದ ಬಗೆಗಿನ ರಹಮತ್ ತರಿಕರೆಯವರ ವಿಶ್ಲೇಷಣೆ ಮತ್ತು ಜಯಪ್ರಕಾಶ್ ಬಂಜಗೆರೆಯವರ ಅಧ್ಯಕ್ಷೀಯ ಮಾತುಗಳು ನೆನಪಿನಲ್ಲಿ ಉಳಿಯುವಂತಹವು ಆಗಿದ್ದವು.

ಜನನುಡಿ ಸಮಾವೇಶದ ಮೊದಲೂ, ಸಮಾವೇಶದ ಸಮಯದಲ್ಲೂ ನಂತರವೂ ಸಾಮಾಜಿಕ ಮಾಧ್ಯಮದಲ್ಲಿ ಅದಕ್ಕೆ ಪ್ರಚಾರ ಕಳೆದ ಬಾರಿ ಆರಂಭವಾಗಿದ್ದರೂ, ಈ ಬಾರಿ ತಾರಕ ಕ್ಕೆ ಮುಟ್ಟಿತ್ತು. ಸಮಾವೇಶಕ್ಕೆ ಬಾರದಿದ್ದವರಿಗೂ ಫೇಸ್ ಬುಕ್ಕಿನಲ್ಲಿ ಅದರ ಹೆಚ್ಚು ಕಮ್ಮಿ ಪೂರ್ಣ `ಲೈವ್ ಪ್ರಸಾರ' ಮತ್ತು ಅದರ ಮುಖ್ಯ ಅಂಶಗಳು ಲಭ್ಯವಿದ್ದವು. ಸಮಾವೇಶದ ಮೊದಲೂ ಆಹ್ವಾನ ಪತ್ರ ರಾಜ್ಯದ ಹಲವು ಕಡೆ ಬಿಡುಗಡೆ ಮಾಡುತ್ತಾ, ಪೋಸ್ಟರ್ ಸ್ಪರ್ಧೆಯಲ್ಲಿ ಬಂದ ಪೋಸ್ಟರುಗಳು, ಹಿಂದೆ ಬಂದ ಇಂದು ಬರುತ್ತಿರುವ ಪ್ರಮುಖರ ಹೇಳಿಕೆಗಳ ಪೋಸ್ಟರುಗಳ ಮೂಲಕ, ದಿನವಾರು `ಕೌಂಟ್ ಡೌನ್' ಮೂಲಕ ಪ್ರಚಾರ ಅತ್ಯಂತ ಪರಿಣಾಮಕಾರಿಯಾಗಿತ್ತು. ಎಲ್ಲಾ ಸಾಂಸ್ಕೃತಿಕ-ಸಾಮಾಜಿಕ-ರಾಜಕೀಯ ಚಳುವಳಿಗಳಿಗೆ ಇದು ಮಾದರಿಯಾಗುವಂತಿತ್ತು. ಜನನುಡಿಯ ಸಾಮಾಜಿಕ ಮಾಧ್ಯಮದ ಪ್ರಚಾರದಿಂದಲೂ ಮತ್ತು ಅದು ಹುಟ್ಟಿಸಿದ ಸಂಚಲನದಿಂದಲೂ ಮುಖ್ಯವಾಹಿನಿಯ ಪತ್ರಿಕೆಗಳೂ ಜನನುಡಿಯನ್ನು ವಿವರವಾಗಿ ಕವರ್ ಮಾಡಲೇಬೇಕಾದ ಒತ್ತಡ ಉಂಟು ಮಾಡಿದವು.

ತುಳುನಾಡಿನ ಜನಪರ ಸಾಂಸ್ಕೃತಿಕ ಪರಂಪರೆಗಳಾದ ಕೊರಗರ ಗಜಮೇಳ, ಡೊಳ್ಳು ಕುಣಿತ, ಕೊಳಲು ವಾದನ, ಸಾಹಸ ಕಲೆ;  ಕಂಗಿಲು ನೃತ್ಯ, ಕೊರಂಗಲ್ ನೃತ್ಯಗಳು; ಉತ್ತರ ಕರ್ನಾಟಕದ ತತ್ವಪದ ಗಾಯನಗಳನ್ನು ಮತ್ತು ಅಸಂಖ್ಯ ಹೋರಾಟದ ಹಾಡುಗಳನ್ನು ಪ್ರಸ್ತುತ ಪಡಿಸುವ ಮೂಲಕ ಸಾಂಸ್ಕೃತಿಕವಾಗಿಯೂ ಶ್ರೀಮಂತವಾಗಿ, ಅತ್ಯಂತ ಸಂಭ್ರಮದ ವಾತಾವರಣ ಉಂಟು ಮಾಡಿದ್ದೂ ವಿಶೇಷವಾಗಿತ್ತು. ಹಲವು ಪ್ರಸಕ್ತ ವಿಷಯಗಳಿಗೆ ನಿರ್ಣಯಗಳ ಮೂಲಕ ಸ್ಪಂದಿಸಿದ್ದೂ ವಿಶೇಷವಾಗಿತ್ತು.

- ವಸಂತರಾಜ ಎನ್.ಕೆ.

ಜನನುಡಿ - ಏನಿದರ ಅರ್ಥ, ಮಹತ್ವ ?

ಜನನುಡಿ 2016  ಎಲ್ಲರ ನಿರೀಕ್ಷೆಗಳನ್ನು ಮೀರಿ ಯಶಸ್ಸು ಕಂಡಿದೆ. ಆಳ್ವಾಸ್ ನುಡಿಸಿರಿಗೆ ಪ್ರತಿರೋಧವಾಗಿ ಹುಟ್ಟಿಕೊಂಡ ಜನನುಡಿ ನಾಲ್ಕನೇ ವರ್ಷಕ್ಕೆ ಹೊಸ ಎತ್ತರಕ್ಕೆ ಏರಿದೆ.  ಕರ್ನಾಟಕದ ಸಾಂಸ್ಕೃತಿಕ-ಸಾಮಾಜಿಕ-ರಾಜಕೀಯ ಸಂದರ್ಭದಲ್ಲಿ ಏನಿದರ ಅರ್ಥ? ಅದರ ಯಶಸ್ಸಿನ ಗುಟ್ಟೇನು? ಮುಂದಿನ ದಿನಗಳಲ್ಲಿ ಅದರ ಮಹತ್ವವೇನು?

ಜನನುಡಿ ವಾರ್ಷಿಕ ಸಾಂಸ್ಕೃತಿಕ ಜಾತ್ರೆಯೇ? ಹಾಗೆ ಆರಂಭವಾದರೂ ಅಷ್ಟೇ ಆಗಿ ಉಳಿದಿಲ್ಲ. ಪ್ರಮುಖವಾಗಿ ಇದೊಂದು ಕೋಮುವಾದಿ-ವಿರೋಧಿ ವೇದಿಕೆಯೇ? ಕರಾವಳಿ ಪ್ರದೇಶದ ಭೀಕರ ಕೋಮುವಾದಿ ಪರಿಸ್ಥಿತಿಗೆ ಪ್ರತಿರೋಧವಾಗಿ ಹುಟ್ಟಿ ಬೆಳೆದಿದ್ದು  ಹೌದು, ಆದರೆ ಬರಿಯ ಅಷ್ಟೇ ಅಲ್ಲ. ಅದು ಇತರ ಹಲವು ಸಾಮಾಜಿಕ-ಸಾಂಸ್ಕೃತಿಕ ಕಾಳಜಿಗಳನ್ನು ಇಟ್ಟುಕೊಂಡಿದೆ. ರಾಜಕೀಯ ಪ್ರಶ್ನೆಗಳಿಂದಲೂ ದೂರ ನಿಂತಿಲ್ಲ. ಈ ಬಾರಿಯ ಜನನುಡಿಯಲ್ಲಿ ಮೊದಲ ಬಾರಿಗೆ ಪಾಲ್ಗೊಂಡ ಕೆಲವರಿಗೆ (ಮಾಲಗತ್ತಿ, ಶಿವಾಜಿ ಗಣೇಶನ್) ಅದು ``ಬಂಡಾಯ ಸಾಹಿತ್ಯ ಸಂಘಟನೆಯ ಮರುಹುಟ್ಟು' ಆಗಿ ಕಂಡಿದೆ. ಪ್ರಮುಖವಾಗಿ ಪ್ರಗತಿಪರ ಸಾಹಿತಿಗಳನ್ನು ಒಂದು ವೇದಿಕೆಗೆ ತಂದರೂ, ಅದು ಒಂದು ಹೊಸ ಸಾಹಿತ್ಯಕ ಟ್ರೆಂಡನ್ನು ಹುಟ್ಟು ಹಾಕಿಲ್ಲ. ಸಾಹಿತಿಗಳ ಸಂಘಟನೆಯ ಸ್ವರೂಪವನ್ನೂ ಪಡೆದಿಲ್ಲ.  ಆ ರೀತಿಯಲ್ಲಿ `ಬಂಡಾಯ'ಕ್ಕಿಂತ ಭಿನ್ನವಾಗಿದೆ. ಇದೊಂದು ಎಡ-ಪ್ರಜಾಸತ್ತಾತ್ಮಕ ಸಾಂಸ್ಕೃತಿಕ ರಂಗವೇ? ನಿರ್ದಿಷ್ಟ ನಿಲುವುಗಳು, ಕಾರ್ಯಕ್ರಮ, ಸಂಘಟನಾ ಸ್ವರೂಪ ಪಡೆದುಕೊಳ್ಳದೆ ಅದು ಅಂತಹ ರಂಗವಾಗದು. ಹಾಗಾದರೆ ಏನಿದು?

ಜನನುಡಿ ಈ ಶತಮಾನದಲ್ಲಿ ದಕ್ಷಿಣ ಅಮೆರಿಕದ ಬ್ರೆಜಿಲಿನಲ್ಲಿ ಆರಂಭವಾಗಿ ವಿಶ್ವವ್ಯಾಪಿಯಾಗಿ ಹಬ್ಬಿದ `ಸೋಶಿಯಲ್ ಫೋರಂ' ಎಂಬ ವೇದಿಕೆಯನ್ನು ಹೆಚ್ಚು ಹೋಲುತ್ತದೆ. ಆದರೆ ಅದರಂತೆ ರಾಜಕಾರಣವನ್ನೂ, ರಾಜಕೀಯ ಪಕ್ಷ/ನಾಯಕರನ್ನೂ ಹೊರಗಿಡದೆ ಅದಕ್ಕಿಂತ ಭಿನ್ನವಾಗಿದೆ. ಇನ್ನೊಂದು ಪ್ರಗತಿಪರ ಸಂಘಟನೆಯಾಗದೆ ಹಲವು ಎಡ-ಪ್ರಜಾಸತ್ತಾತ್ಮಕ ಸಂಘಟನೆಗಳಿಗೆ, ಚಳುವಳಿಗಳಿಗೆ, ಶಕ್ತಿಗಳಿಗೆ, ವ್ಯಕ್ತಿಗಳಿಗೆ, ಭಿನ್ನ ಧ್ವನಿಗಳಿಗೆ ಪರಿಣಾಮಕಾರಿ ವೇದಿಕೆಯಾಗಿದ್ದು, ಹೆಚ್ಚೆಚ್ಚು ಇಂತಹವನ್ನು ಒಳಗೊಳ್ಳುತ್ತಾ ಅದೇ ಸಮಯದಲ್ಲಿ ತನ್ನದೇ ಸ್ಪಷ್ಟ ಧೋರಣೆಗಳನ್ನು ಸಹಮತದಿಂದ ರೂಪಿಸಿಕೊಳ್ಳುತ್ತಾ ಹೋಗಿದ್ದು ಬಹುಶಃ ಜನನುಡಿಯ ಯಶಸ್ಸಿಗೆ ಕಾರಣ.

ಕಳೆದ ಕೆಲವು ವರ್ಷಗಳಲ್ಲಿ  ಸಾಮಾಜಿಕ ಸಾಂಸ್ಕೃತಿಕ ಚಳುವಳಿಗಳು, ವೇದಿಕೆಗಳು ಹುಟ್ಟಿಕೊಂಡು ಹಲವು ಒಲವು/ನಿಲುವುಗಳ ಪ್ರಗತಿಪರರು, ಅಂಬೇಡ್ಕರವಾದಿಗಳು, ಎಡಪಂಥೀಯರು, ಸೆಕ್ಯುಲರ್ ಪ್ರಜಾಸತ್ತಾವಾದಿಗಳು ಅವುಗಳಲ್ಲಿ ಕೂಡಿ ಭಾಗವಹಿಸುತ್ತಿರುವುದು ಒಂದು ಆಶಾದಾಯಕ ಬೆಳವಣಿಗೆ. ಇಂತಹ ಹಲವು ವೇದಿಕೆಗಳಲ್ಲಿ ಜನನುಡಿ ಅತ್ಯಂತ ಹೆಚ್ಚಿನ ವ್ಯಾಪಕತೆ ಮತ್ತು ಒಳಗೊಳ್ಳುವಿಕೆಯನ್ನು ಸಾಧಿಸಿದೆ. ಹಲವು ಮಹತ್ವದ ಸಾಂಸ್ಕೃತಿಕ ಸಾಮಾಜಿಕ-ರಾಜಕೀಯ ಪ್ರಶ್ನೆಗಳಿಗೆ ಸ್ಪಂದಿಸುತ್ತಾ ಸರಿಯಾದ ನಿಲುವುಗಳನ್ನು ರೂಪಿಸಿಕೊಳ್ಳುತ್ತಿದೆ. ಆ ಮೂಲಕ ಇತರ ಇಂತಹ ವೇದಿಕೆಗಳೊಂದಿಗೆ ಕರ್ನಾಟಕದಲ್ಲಿ ಎಡ-ಪ್ರಜಾಸತ್ತಾತ್ಮಕ ಸಾಂಸ್ಕೃತಿಕ ರಂಗವೊಂದನ್ನು ವಿಕಾಸಗೊಳಿಸುವ ಹೆಚ್ಚಿನ ಸಾಧ್ಯೆತೆ ಹೊಂದಿದೆ.  ಇಂದಿನ ಸಂದರ್ಭದಲ್ಲಿ ವ್ಯವಸ್ಥೆಯಲ್ಲಿ ನಿರ್ಣಾಯಕ ಜನಪರ ಬದಲಾವಣೆ ತರಲು ಎಡ-ಪ್ರಜಾಸತ್ತಾತ್ಮಕ ರಂಗವನ್ನು ಕಟ್ಟುವ ಮಹಾಕಾಯಕಕ್ಕೆ ಅಗತ್ಯ ಸನ್ನಿವೇಶ ನಿರ್ಮಿಸಲು ಇಂತಹ ಸಾಂಸ್ಕೃತಿಕ ರಂಗವೊಂದು ಅಗತ್ಯವಿದೆ. ಇದು ಜನನುಡಿಯ ಮಹತ್ವ. 

- ವಸಂತರಾಜ ಎನ್.ಕೆ.

ಉದ್ಘಾಟನಾ ಸಮಾರಂಭದಲ್ಲಿ

ಗಾಂಧೀಜಿಯವರು 150 ವರ್ಷದ ಆಡಳಿತ ನಡೆಸಿದ್ದ ಬ್ರಿಟೀಷ್ ವಿರುದ್ಷ ಹೋರಾಟ ಮಾಡಿದರು. ಆದರೆ ಅಂಬೇಡ್ಕರ್ ಅವರು ಸಾವಿರಾರು ವರ್ಷದಿಂದ ಇದ್ದ ಶೋಷಣೆ-ಅಸಮಾನತೆ ವಿರುದ್ಧ ಹೋರಾಟ ಮಾಡಿದರು. ಗಾಂಧೀಜಿ ಗೆದ್ದರು. ಆದರೆ, ಅಂಬೇಡ್ಕರ್ ಹೋರಾಟ ಮುಗಿದಿಲ್ಲ. ಸಿಕ್ಕಿದ್ದು ರಾಜಕೀಯ ಸ್ವಾತಂತ್ರ್ಯ ಮಾತ್ರ. ಪೂರ್ಣ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಬೇಕಿದೆ. ಸಾಮಾಜಿಕವಾಗಿ ನಾವಿನ್ನೂ ಸ್ವತಂತ್ರರಾಗಿಲ್ಲ. ಸಾಮಾಜಿಕ ಸ್ವಾತಂತ್ರ್ಯ  ದೊರೆಯದ ಹೊರತು ಯಾವ ರಾಷ್ಟ್ರವೂ ಸಂಪೂರ್ಣ ಸ್ವಾತಂತ್ರ್ಯ ಪಡೆಯಲು ಸಾಧ್ಯವಿಲ್ಲ

ನಾನು ಮೊದಲೆಲ್ಲ ಅಂಬೇಡ್ಕರ್ ಹೆಸರೆತ್ತಲೂ ಭಯ ಪಡುತ್ತಿದ್ದೆ. ಅಂಬೇಡ್ಕರರ ಫೋಟೋವನ್ನೂ ಇಟ್ಟುಕೊಳ್ತಿರಲಿಲ್ಲ. ಈಗ ಹಾಗಿಲ್ಲ. ನಾನು ಅಂಬೇಡ್ಕರರ ಹೆಸರನ್ನು ಜೋರಾಗಿಯೇ ಹೇಳುತ್ತೇನೆ. ಯಾರೋ ನನ್ನನ್ನು `ನೀವು ಅಕ್ರಮ ಸಂತಾನ'ವಾ ಅಂತ ಕೇಳಿದರು. ನಾನು ಅಕ್ರಮ ಸಂತಾನ ಅಲ್ಲ, ಅಂಬೇಡ್ಕರ್ ಸಂತಾನ ಅಂತ ಉತ್ತರಿಸಿದೆ. ನಾನೀಗ `ಜೈ ಭೀಮ್' ಎಂದು ಧೈರ್ಯದಿಂದ ಘೋಷಣೆ ಕೂಗುತ್ತೇನೆ
ಅಂದು ಬರುತ್ತಿದ್ದ ಬಹಳಷ್ಟು ಕಾವ್ಯಗಳು ಈಶ್ವರನೇ ಸುಂದರ, ಈಶ್ವರನೇ ಅನಂತ ಎಂದು ಹೇಳುತ್ತಿದ್ದವು. ಅವುಗಳಿಗೆ ಸಾಮ್ರಾಜ್ಯವಾದದ ಮುಖವಾಡ ಇತ್ತು. ನಾವು ಅದನ್ನೇ ಓದಬೇಕಿತ್ತು. ತೇರೆ ಹೋಟ್, ತೇರೆ ಗಾಲ್ ಎನ್ನುವಂತಹ ಕವಿತೆಗಳೇ ಇದ್ದವು. ನಾವು ಓದಿದ್ದು ಏನು? ಆ ದಿನಗಳಲ್ಲಿ ನಾವು ಬೂಸಾ ಸಾಹಿತ್ಯವನ್ನೇ ಓದುತ್ತಿದ್ದೆವು. ಅದರಲ್ಲಿ ಮೇಲ್ವರ್ಗದ ಜನಗಳ ರಮ್ಯ ಕಲ್ಪನೆಗಳಲ್ಲದೆ ಗಟ್ಟಿಯಾದ ವಿಚಾರಗಳೇ ಇರುತ್ತಿರಲಿಲ್ಲ. ಅಲ್ಲಿ ನಮ್ಮ ನೋವುಗಳಿಗೆ, ವೇದನೆಗೆ, ಸಂಕಷ್ಟಗಳಿಗೆ ಜಾಗವೇ ಇರಲಿಲ್ಲ. ನಾವು ಅಷ್ಟು ವರ್ಷ ಸಾಹಿತ್ಯ ಓದಿದರೂ ನಮಗೆಲ್ಲೂ ಅಂಬೇಡ್ಕರ್ ಸಿಗಲೇ ಇಲ್ಲ. ಆದರೆ ನಾವು ಸುಮ್ಮನೆ ಕೂರಲಿಲ್ಲ. ನಾವು ನಮ್ಮ ಜನರ ಕಷ್ಟಗಳನ್ನು ಬರೆಯತೊಡಗಿದೆವು. ನಮ್ಮ ಜನರ ಬವಣೆಗಳನ್ನು ಬರೆಯತೊಡಗಿದೆವು. ಸಾವಿರಾರು ವರ್ಷಗಳ ಕಾಲ ಯಾವುದನ್ನು ಸಾಹಿತ್ಯಲೋಕದಿಂದ ದೂರ ಇಡಲಾಗಿತ್ತೋ ಅದನ್ನು ಬರೆದೆವು. ಹಾಗೆ ದಲಿತ ಸಾಹಿತ್ಯವು ಹುಟ್ಟಿಕೊಂಡಿತು. ನಾವೇ ಪ್ರಕಾಶಿಸಿದೆವು. ಸಾಹಿತ್ಯ ಸಮ್ಮೇಳನಗಳನ್ನೂ ಮಾಡಿದೆವು.

ಅವರು ಯಾವುದನ್ನು ಮುಖ್ಯ ವಾಹಿನಿ ಅನ್ನುತ್ತಾರೋ ಅದು ಮುಖ್ಯ ವಾಹಿನಿಯೇ? ಅವರು ದೇವರ ಬಗ್ಗೆ, ದೊರೆಗಳ ಬಗ್ಗೆ ಬರೆಯುತ್ತಾರೆ. ಅದು ಮುಖ್ಯವಾಹಿನಿಯ ಸಾಹಿತ್ಯ ಹೇಗಾಗುತ್ತದೆ? ಜನಸಾಮಾನ್ಯರು ದೇವರಿಗಿಂತ ದೊಡ್ಡವರು. ಜನರು ದೊರೆಗಳಿಗಿಂತ ದೊಡ್ಡವರು. ಅವರ ಹಾಡುಪಾಡುಗಳಿಗೆ ಹೆಚ್ಚಿನ ಮಹತ್ವ ಇರುವುದು. ಆದ್ದರಿಂದ ನಾನು ಬರೆಯುವುದು ಕೂಡ `ಜನನುಡಿ'ಯೇ.

"ತಮ್ಮನ್ನು ಮುಖ್ಯವಾಹಿನಿ ಎಂದು ಕರೆದುಕೊಳ್ಳುವವರು ಮಹಿಳೆಯರ ಬಗ್ಗೆ ಬರೆದಿಲ್ಲ, ಆದಿವಾಸಿಗಳ ಬಗ್ಗೆ ಬರೆದಿಲ್ಲ, ದೀನ ದಲಿತರ ಬಗ್ಗೆ ಬರೆದಿಲ್ಲ, ಅಲ್ಪಸಂಖ್ಯಾತರ ಬಗ್ಗೆ ಬರೆದಿಲ್ಲ. ಅವರು ಬರೆದಿದ್ದೆಲ್ಲ ದೇವರು ದೊರೆಗಳ ಬಗ್ಗೆಯಷ್ಟೆ. ಆ ಸಾಹಿತ್ಯ ಬೂಸಾ ಸಾಹಿತ್ಯ. ಅದೊಂದು ಅಪರಾಧ. ಅವರ ಸಾಹಿತ್ಯ ನಮ್ಮನ್ನು ತಟ್ಟುವುದು ಹೇಗೆ? ಅವರ ರಾಮಾಯಣದಲ್ಲಿ ಶಂಭೂಕನಿದ್ದಾನೆ. ಅವರ ಮಹಾಭಾರತದಲ್ಲಿ ಏಕಲವ್ಯನಿದ್ದಾನೆ. ಅವರ ಭಗವದ್ಗೀತೆಯಲ್ಲಿ ಚಾತುರ್ವರ್ಣದ ತಾರತಮ್ಯವನ್ನು ಎತ್ತಿಹಿಡಿಯ ಲಾಗಿದೆ. ಇಂಥ ಸಾಹಿತ್ಯಕೃತಿಗಳು ನಮಗೆ ಹೇಗೆ ತಾನೆ ಪ್ರಿಯಾಗುತ್ತವೆ? ಹೇಗೆ ತಾನೆ ಪೂಜನೀಯವಾಗುತ್ತವೆ?"

- ಶರಣಕುಮಾರ್ ಲಿಂಬಾಳೆ, ಖ್ಯಾತ ಮರಾಠಿ ಲೇಖಕ (ಉದ್ಘಾಟನಾ ಭಾಷಣದಲ್ಲಿ)

ಇಲ್ಲಿ ಬಂದಿರುವವರೆಲ್ಲರೂ ಅಸಮಾನತೆಯ ಕಾರಣ ತಿಳಿದುಕೊಂಡವರೇ. ಆದರೆ ಸಮಾಜದಲ್ಲಿ ಗೊತ್ತಿದ್ದೋ, ಗೊತ್ತಿಲ್ಲದೆಯೋ ಶೋಷಣೆಗೆ ಕಾರಣರಾಗುತ್ತಿದ್ದಾರೆ. ಒಳಗಾದ ಸಮಾಜದಲ್ಲಿ ಅರಿವನ್ನ ಬಿತ್ತುವ ಅರಿವು ಆಗಬೇಕಿದೆ. ಇದಕ್ಕಾಗಿ ಶಿಕ್ಷಣ ವ್ಯವಸ್ಥೆ ಬದಲಾಗಬೇಕಿದೆ. ಶ್ರೀಮಂತರಿಗೆ, ಬಡವರಿಗೆ ಬೇರೆಬೇರೆ ರೀತಿ ಶಿಕ್ಷಮ ಸಿಗುತ್ತಿದೆ. ಮೂಲ ಹಂತದಲ್ಲಿ ಸಮಾನತೆ ತರದಿದ್ದರೆ, ಪ್ರತಿ ಪ್ರಜೆಗೆ ಸಮಾನತೆಯ, ಗುಣಮಟ್ಟದ ಶಿಕ್ಷಣ ಕೊಡದಿದ್ದರೆ ಅಸಮಾನತೆ ನಿರಂತರ.  ಸಂವಿಧಾನದಲ್ಲಿಯೇ ಸಮಾನತೆಯ ಅಂಶಗಳಿವೆ. ನಮ್ಮಿಂದ ಆಯ್ಕೆಯಾದವರಿಗೆ ಇದನ್ನು ಪಾಲಿಸುವ ಎಚ್ಚರಿಕೆ ಕೊಡಬೇಕಿದೆ. ಸಂವಿಧಾನದ ಆಶಯಗಳಿಗೆ ಪೂರಕವಾಗಿ ನಡೆದುಕೊಳ್ಳಬೇಕು ಎಂದು ಅವರಿಗೆ ಹೇಳಬೇಕಿದೆ. ಸಂವಿಧಾನದ ಆಶಯಗಳಿಗೆ ಪೂರಕವಾಗಿಯೇ ನಮ್ಮ ಹೋರಾಟ ರೂಪಿಸಬೇಕಿದೆ.

- ಡಾ. ನಾಗಪ್ಪ ಗೌಡ, ನಿರ್ದೇಶಕ, ಮಂಗಳೂರು ವಿವಿ ಕಾಲೇಜಿನ ಅಂಬಿಗರ ಚೌಡಯ್ಯ ಅಧ್ಯಯನ ಪೀಠ

ಕರ್ನಾಟಕದ ಸಾಹಿತ್ಯಿಕ- ಸಾಂಸ್ಕøತಿಕ ಪರಿಸರದಲ್ಲಿ ಇಂದು ಆಗುತ್ತಿರುವ ಮುಖ್ಯ ಪಲ್ಲಟಗಳು ನಾವು ಇಲ್ಲಿ ಒಟ್ಟು ಸೇರಲು ಕಾರಣ. ಜನಸಮುದಾಯಗಳ ನಡುವೆ ಅಸಹನೆ ಹೆಚ್ಚಾಗುತ್ತಿರುವ ಸಮುದಾಯಗಳು ತಮ್ಮ ಐಡೆಂಟಿಟಿ ಪ್ರಜ್ಞೆಯನ್ನು ಅಸ್ತಿತ್ವದ ಪ್ರಶ್ನೆಯಾಗಿಸಿಕೊಳ್ಳುತ್ತಿರುವ ಕಾಲದಲ್ಲಿ ಸೌಹಾರ್ಧತೆಯ ಸೂಕ್ಷ್ಮ ನೇಯ್ಗೆ ಘಾಸಿಗೊಳ್ಳುತ್ತಿದೆ ಎಂಬ ಆತಂಕ ಮುಂದಿಡಲಾಗಿದ್ದು, ಪರಿಸ್ಥಿತಿ ಮತ್ತಷ್ಟು ಛಿದ್ರಗೊಂಡಿದೆ. ಆದರೆ ಛಿದ್ರಗೊಳಿಸುವ ಶಕ್ತಿಗಳನ್ನು ಅವು ಬೆಚ್ಚಿ ಬೀಳುವಷ್ಟು ಗಟ್ಟಿಯಾಗಿ ಅನ್ಯಾಯಕ್ಕೊಳಗಾದವರು ಪ್ರಶ್ನಿಸುತ್ತಿದ್ದಾರೆ. 

ಜನನುಡಿಗೆ ನಾವು ಕೇವಲ ಪ್ರತಿಕ್ರಿಯಯಾತ್ಮಕ ವಾಗುತ್ತಿದ್ದೇವೆಯೇ ಎಂಬ ಆತಂಕ ಇತ್ತು. ಆದರೆ ಎಲ್ಲ ಜನಪರ ಮನಸ್ಸುಗಳು, ಎಲ್ಲ ಸಂಘಟನೆಗಳು ಕೈಜೋಡಿಸಿ ಕಳೆದುಹೋದ, ಕಳೆದುಕೊಳ್ಳುತ್ತಲೇ ಇರುವ ತಮ್ಮ ಮೂಲಭೂತ ಹಕ್ಕುಗಳನ್ನು ಪಡೆದುಕೊಳ್ಳಲು ದನಿ ಎತ್ತಿ ಅಧಿಕಾರಶಾಹಿಯನ್ನು, ಸರ್ಕಾರಗಳನ್ನು ನೇರವಾಗಿ ಪ್ರಶ್ನಿಸಿ ಎಚ್ಚರಿಸತೊಡಗಿದೆ ಎಂಬುದು ಸಮಾವೇಶದ ಸಾರ್ಥಕತೆಯ ಭಾಗವಾಗಲಿದೆ.

- ಡಾ. ವಿಜಯಮ್ಮ, ಹಿರಿಯ ಲೇಖಕಿ

`ಎಸ್ಟೇಟ್ ಮಾಫಿಯಾಕ್ಕೆ ಮಣಿದಿರುವ ಸರ್ಕಾರ ಆದಿವಾಸಿಗಳನ್ನು ಒಕ್ಕಲೆಬ್ಬಿಸಿದೆ. ಈಗ ಅವರ ಪುನರ್ವಸತಿಯ ಭರವಸೆ ಸಿಕ್ಕಿದೆ. ಅದು ಈಡೇರದಿದ್ದರೆ ತೀವ್ರ ಸ್ವರೂಪದ ಹೋರಾಟ ಕೈಗೆತ್ತಿಕೊಳ್ಳುತ್ತೇವೆ'

- ಚೇತನ್, ಚಿತ್ರನಟ

ದಿಡ್ಡಳ್ಳಿ ಆದಿವಾಸಿ ಕುಟುಂಬಗಳಿಗೆ ಪೂರ್ಣ ಪ್ರಮಾಣದ ಪುನರ್ವಸತಿ ಕಲ್ಪಿಸಬೇಕು, ರಾಜ್ಯದ ಎಲ್ಲಾ ವಸತಿಹೀನರು ಮತ್ತು ಭೂರಹಿತರಿಗೆ ಜಮೀನು ನೀಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸುವ ನಿರ್ಣಯವನ್ನು ಚೇತನ್ ಅವರು ಮಂಡಿಸಿದರು.

ನುಡಿ, ಭಾಷೆ, ಸಾಹಿತ್ಯ ಯಾರ ಪರವಾಗಿರಬೇಕು. ಯಾರ ಜತೆಗಿರಬೇಕು. ಯಾವ ಜನರ ಜತೆಗೆ ವಿಚಾರ ವಿನಿಮಯ ಮಾಡಿಕೊಲ್ಳಬೇಕು ಎಂಬುದು ಮುಖ್ಯ ಪ್ರಶ್ನೆಯಾಗಿದ್ದ ಕಾಲದಲ್ಲಿ, ಇಂತಹ ಆಂತರಿಕ ಒತ್ತಾಯದ ಫಲವಾಗಿ ಜನನುಡಿ ರೂಪುಗೊಂಡಿತು. ಇದು ಯಾವುದೇ ಒಂದು ಗುಂಪಿನ ಬಲಾಬಲ ತೋರಿಸಲಿಲ್ಲಕ್ಕೆ, ಸಾವಿರಾರು ಜನರನ್ನ ಗುಡ್ಡೆ ಹಾಕ ಬ್ರೈನ್ ವಾಷ್ ಮಾಡಲು ಅಲ್ಲ.  ಪ್ರಶ್ನಿಸುವ ಸಮುದಾಯಗಳನ್ನು ಒಂದೆಡೆ ಸೇರುವುದು ಉದ್ದೇಶ.

- ಡಾ. ಎಚ್.ಎಸ್. ಅನುಪಮ, ಲೇಖಕಿ

ಸಮಾನತೆಯ ಆಶಯ ಮತ್ತು ಮೀಸಲಾತಿ

ಮೇಲ್ಜಾತಿಯವರಿಗೆ ಕೆಳಜಾತಿಯವರು ಬಂಡವಾಳ ಆಗಿರುವುದರಿಂದ ಅವರು ಜಾತಿವಿನಾಶವನ್ನು ತಿರಸ್ಕರಿಸುತ್ತಾರೆ. ನಮ್ಮ ತಳಸಮುದಾಯಗಳು ಅವರನ್ನು ಧಿಕ್ಕರಿಸುವ ನಿರ್ಧಾರ ಮಾಡಬೇಕು. ಆತ್ಮಗೌರವ ಘನತೆಯಿಂದ ನಡೆಯುವುದನ್ನು ರೂಢಿಸಿಕೊಳ್ಳಬೇಕು. ಎಮ್ಮೆನ್ಸಿ ಕಂಪನಿಗಳಿಗೆ ಸರ್ಕಾರ ನೀಡುತ್ತಿರುವ ಸೌಲಭ್ಯಗಳನ್ನು ನೋಡಿದರೆ ಅದು ಮೀಸಲಾತಿಗೆ, ದಲಿತರಿಗೆ ನೀಡುತ್ತಿರುವುದು ಏನೇನೂ ಅಲ್ಲ. ಮೇಲ್ವರ್ಗದವರಂತೆ ನಾವೂ ಇಂಗ್ಲಿಷ್ ಮಾತಾಡಬೇಕು, ಅವರಂತೆ ನಡೆನುಡಿಯಿರಬೇಕು ಅನ್ನುವ ಕೀಳರಿಮೆ ಕೆಳವರ್ಗಗಳಿಗೆ ಇದೆ. ಅದಕ್ಕೆ ಸರಿಯಾಗಿ ಮೇಲ್ವರ್ಗದವರು ಕೂಡ ದಲಿತರಿಗೆ ತಮ್ಮಂತೆ ಮಾತಾಡಲು ಬರುವುದಿಲ್ಲ, ತಿಳಿವಳಿಕೆ ಇಲ್ಲ ಅನ್ನುವಂಥ ಕೀಳರಿಮೆ ಹುಟ್ಟುಹಾಕುತ್ತಿದ್ದಾರೆ.

*

ಮೇಲ್ಜಾತಿಯವರು ಕೀಳುಜಾತಿಯವರನ್ನು ಬೌದ್ಧಿಕ ದಾಸ್ಯಕ್ಕೆ ಒಳಪಡಿಸಿದ್ದು, ಸತತವಾಗಿ ಮಾನಸಿಕವಾಗಿ ಭಯೋತ್ಪಾದನೆಯನ್ನು ನಿರಂತರವಾಗಿ ನಡೆಸುತ್ತ ಬಂದಿದ್ದಾರೆ. ಇತ್ತೀಚೆಗೆ ಕೇಂದ್ರ ಸರ್ಕಾರ ಡಿಮಾನೆಟೈಸೇಷನ್ ಮಾಡಿದಾಗಲೂ ಕೂಡ ಹೆಚ್ಚು ಸಂಕಷ್ಟ ಅನುಭವಿಸಿದ್ದು ಕೆಳ ಸಮುದಾಯಗಳೇ.
ಫ್ಯಾಸಿಸ್ಟರು ಸೋಷಿಯಲ್ ಮೀಡಿಯಾದಲ್ಲಿ ಮನುಸ್ಮೃತಿಯನ್ನ ಮತ್ತೆ ಮತ್ತೆ ಪುನರುತ್ಪಾದನೆ ಮಾಡ್ತಿದ್ದಾರೆ. ದಲಿತರನ್ನು ಅವಹೇಳನ ಮಾಡುವುದನ್ನೆ ಅವರು ಉದ್ಯೋಗ ಮಾಡಿಕೊಂಡಿದ್ದಾರೆ.

**

ಜಾತಿ ಇಲ್ಲ ಎಂದು ವಾದಿಸುವವರು ಮೂರ್ಖರು. ದ್ರೋಹಿಗಳು ಮಾತ್ರ ಇಂಥ ಮಾತುಗಳನ್ನಾಡುತ್ತಾರೆ. ಕಮ್ಯುನಿಸ್ಟರು ಕೂಡ ಇತ್ತೀಚಿನ ದಿನಗಳಲ್ಲಿ ಜಾತಿ ತಾರತಮ್ಯಕ್ಕೆ ಒತ್ತುಕೊಟ್ಟು ಮಾತಾಡ್ತಿರುವುದು ಆಶಾದಾಯಕ ವಿಚಾರ.

**

ಜಾತಿ ನಿರ್ಮೂಲನೆಯಾಗಬೇಕು ಅನ್ನುವುದು ಎಲ್ಲರ ಆಶಯವಾಗಿದೆ. ಆದರೆ ಅದು ಸಾಧ್ಯವಾಗುವುದಿಲ್ಲ ಅನ್ನುವುದು ವಾಸ್ತವ.
ಇಂದು ಜಾತಿ ವಿನಾಶ ಮತ್ತು ಮೀಸಲಾತಿಯನ್ನೇ ಮತ್ತೆಮತ್ತೆ ಚರ್ಚಿಸುವ ಬದಲು ಆತ್ಮಗೌರವ ಮತ್ತು ಘನತೆಯಿಂದ ನಡೆಯುವ ಮಾದರಿಯನ್ನು ರೂಪಿಸಿಕೊಳ್ಳುವ ಅಗತ್ಯವಿದೆ.

- ಸಿ.ಜಿ.ಲಕ್ಷ್ಮೀಪತಿ

ನಾವು ಮೀಸಲಾತಿ ಚರ್ಚೆಯನ್ನು 'ಸಾಮಾಜಿಕ ಸಮಾನತೆ' ವ್ಯಾಪ್ತಿಯ ಹೊರಗಿಟ್ಟು ಕೆವಲ ಅದನ್ನು "ಸಮಾನತೆ"ಯನ್ನು ಸಾಧಿಸುವ ಸಾಧನ ಎಂಬ ಸರಳ ವಿಶ್ಲೇಷಣೆಗೆ ಇಳಿದುಬಿಟ್ಟರೆ ಮತ್ತೊಂದು ಅರ್ಥದಲ್ಲಿ ನಾವೂ ಸಹ ಮೀಸಲಾತಿಯನ್ನು ವಿರೋಧಿಸುತ್ತಿರುವ ಗುಂಪಿನ ವಾದವನ್ನೆ ಬಳಸಿದಂತೆ ಆಗುತ್ತದೆ. ಏಕೆಂದರೆ ಆ ಗುಂಪು ಒಟ್ಟು ಮೀಸಲಾತಿ ಚರ್ಚೆಯನ್ನು ಉದ್ದೇಶಪೂರ್ವಕವಾಗಿ ಸಮುದಾಯಗಳ ಸಾಮಾಜಿಕ ಸಂಧರ್ಭದಿಂದ ಹೊರಗಿಟ್ಟು ಅದನ್ನು "ಆರ್ಥಿಕ ಮತ್ತು ಜೌದ್ಯೋಗಿಕ ಅವಕಾಶಗಳಲ್ಲಿ ಸಮಾನತೆ ಸೃಷ್ಟಿಸಲು ಬಯಸುತ್ತಿರುವ ಅಸಮಾನ ಸಾಧನ" ಎಂಬ ಸಂಕುಚಿತ ಅರ್ಥದಲ್ಲಿ ನೋಡುತ್ತಿದೆ. ಆದ್ದರಿಂದ ನಾವು ಇಂದು ಚರ್ಚಿಸುತ್ತಿರುವ ಮೀಸಲಾತಿಯ ಚರ್ಚೆ "ಸಾಮಾಜಿಕ ಸಮತೆ" ಬಯಸುವ ಚರ್ಚೆಯಾಗಿದೆ ಶತಮಾನಗಳ ಕಾಲ ಸಾಮಾಜಿಕ ಅಸಮಾನತೆಯನ್ನು ಅನುಭವಿಸುತ್ತಿರುವ ಸಮುದಾಯಗಳಿಗೆ "ಮನುಷ್ಯ ಸಹಜ ಸಾಮಾಜಿಕ ಘನತೆ" ತಂದುಕೊಡುವ ಉದ್ದೇಶ ಸಾಧನೆಗೆ ಆರ್ಥಿಕ ಮತ್ತು ಔದ್ಯೋಗಿಕ ಅವಕಾಶಗಳನ್ನು ಸಾಧನಗಳಂತೆ ಮೀಸಲಾತಿ ನೀತಿ ಪ್ರತಿಪಾದಿಸುತ್ತಿದೆ ಎಂಬ ವಿಷಯದಲ್ಲಿ ಅಂತ್ಯಂತ ಸ್ಪಷ್ಟವಾದ ದೃಷ್ಟಿಕೋನವೊಂದನ್ನು ರೂಪಿಸಿಕೊಳ್ಳಬೇಕಿದೆ.

- ಕಿರಣ್ ಗಾಜನೂರು

ಜಾತಿ ತಾರತಮ್ಯ ಸಮಾಜದಲ್ಲಿ ಹಾಸುಹೊಕ್ಕಾಗಿದೆ. ಶಾಲೆ ಕಾಲೇಜುಗಳಲ್ಲಿ ಪ್ರೀತಿ ಮಾಡುವಾಗ ಕೂಡ ಜಾತಿ ನೋಡುವ ಪರಿಪಾಠವಿದೆ. ಹಳ್ಳಿಜಾತ್ರೆಗಳಲ್ಲಿ ಒಂದೊಂದು ಜಾತಿಯ ಹೆಸರು ಹೇಳಿ ವೀಳ್ಯ ಕೊಡುತ್ತಾರೆ. ಇದು ಆಯಾ ಜಾತಿಯವರು ನಿರ್ದಿಷ್ಟ ಕೆಲಸಗಳನ್ನು ಮಾತ್ರ ಮಾಡಬೇಕು ಅನ್ನುವ ತಾರತಮ್ಯ ಧೋರಣೆ. ಈ ತಾರತಮ್ಯದಿಂದ ದಲಿತರನ್ನು ಹೊರತರಲೆಂದೇ ಮೀಸಲಾತಿ ಇರುವುದು. ಅಂಬೇಡ್ಕರ್'ಗೂ ಮುನ್ನವೇ ನಾಲ್ವಡಿ ಕೃಷ್ಣರಾಜ ವಡೆಯರ್ ಮೀಸಲಾತಿಯ ಪರಿಕಲ್ಪನೆಯನ್ನು ಕೊಟ್ಟಿದ್ದರು. 1890ರಲ್ಲಿ ಕುದ್ಮಲ್ ರಂಗರಾಯರು ಮಂಗಳೂರಿನಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ದಲಿತರ ಓದಿಗೆ ಅವಕಾಶ ಕಲ್ಪಿಸಿದ್ದರು.

ದಲಿತ ಮೀಸಲಾತಿಗೆ ತಾತ್ತ್ವಿಕತೆಯ ಕೊರತೆಯಿದೆ. ಇಂದು ಕೆಲವರು ಮೀಸಲಾತಿಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಮೀಸಲಾತಿಯನ್ನು ಬಳಸಿ ಮೇಲೆ ಬಂದವರು ಕೆಳಗಿರುವ ಜನರ ಬಗ್ಗೆ ಗಮನ ಕೊಡುತ್ತಿಲ್ಲ. ರಾಜಕೀಯ ವ್ಯಕ್ತಿಗಳು ದಲಿತರನ್ನು ಬಳಸಿಕೊಳ್ಳುತ್ತಿದ್ದಾರೆ. ಅದಕ್ಕೆ ಅವಕಾಶ ನೀಡಬಾರದು. ಮೀಸಲಾತಿ ಹಾಗೂ ಸಮಾನತೆ ಕೇವಲ ಪುಸ್ತಕಗಳಲ್ಲಿ ಬರುವ ವಿಚಾರಗಳಾಗಿ ಉಳಿಯಬಾರದು. ಈ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಚರ್ಚೆಗಳು ನಡೆಯುತ್ತಿರುವುದು ಸಮಾಧಾನದ ಸಂಗತಿಯಾಗಿದೆ.

- ಹುಲಿಕುಂಟೆ ಮೂರ್ತಿ

ಜನನುಡಿ 2016 ನಿರ್ಣಯಗಳು

 1. ರಾಜ್ಯದ ಎಲ್ಲಾ ವಸತಿಹೀನ, ಭೂಹೀನ ಜನವರ್ಗವನ್ನು ಗುರುತಿಸಿ ಕೂಡಲೇ ಅವರಿಗೆ ಭೂಮಿ ನೀಡುವ ಕ್ರಿಯಾ ಯೋಜನೆ ರೂಪಿಸಿ ಕಾಲಮಿತಿಯೊಳಗೆ ಜಾರಿ ಮಾಡುವಂತೆ ಈ ಸಭೆ ಸರ್ಕಾರವನ್ನು ಒತ್ತಾಯಿಸುತ್ತದೆ.
   
 2. ರಾಜ್ಯದ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸಮೀಕ್ಷಾ ವರದಿಯನ್ನು ಈ ಕೂಡಲೇ ಬಿಡುಗಡೆ ಮಾಡುವಂತೆ ಈ ಸಭೆ ಸರ್ಕಾರವನ್ನು ಒತ್ತಾಯಿಸುತ್ತದೆ.
   
 3. ಕಪ್ಪು ಹಣವನ್ನು ವಿದೇಶದಿಂದ ತರುತ್ತೇವೆಂದು ಹೇಳಿ, ತರಲಾಗದೇ ಹೋದವರು ಆ ಲೋಪ ಮುಚ್ಚಿಕೊಳ್ಳಲು ನೋಟು ಅಪಮೌಲ್ಯೀಕರಣ ಕ್ರಮಕೈಗೊಂಡು ಜನಸಾಮಾನ್ಯರು, ಬಡವರು ಬೀದಿಯಲ್ಲಿ ಸಮಯ ಕಳೆಯುವಂತೆ ಮಾಡಿರುವುದನ್ನು ಸಭೆ ಖಂಡಿಸುತ್ತದೆ.
   
 4. ಭಾರತದ ಮುಸ್ಲಿಮ್ ರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಹಿಂದುಳಿದಿರುವಿಕೆಯ ಬಗ್ಗೆ ಜಸ್ಟೀಸ್ ಸಾಚಾರ್ ಸಮಿತಿ ನೀಡಿದ ಸಮೀಕ್ಷಾ ವರದಿಯನ್ನು ಚರ್ಚೆಗೆತ್ತಿಕೊಳ್ಳಬೇಕು ಮತ್ತು ಜಾರಿ ಮಾಡಬೇಕೆಂದು ಸಭೆ ಒತ್ತಾಯಿಸುತ್ತದೆ.
   
 5. ಅಂತರ್ ಜಾತಿ ವಿವಾಹವಾದವರ ಮಕ್ಕಳಿಗೆ ಶೇ.1ರಷ್ಟು ಮೀಸಲಾತಿ ನೀಡಬೇಕೆಂಬ ಪ್ರೊ. ರವಿವರ್ಮ ಕುಮಾರ್ ಶಿಫಾರಸ್ಸುನ್ನು ರಾಜ್ಯ ಸರ್ಕಾರ ತಕ್ಷಣ ಜಾರಿಗೊಳಿಸಬೇಕೆಂದು ಸಭೆ ಸರ್ಕಾರವನ್ನು ಒತ್ತಾಯಿಸುತ್ತದೆ.

ಜಾತಿ ವಿನಾಶ ಮತ್ತು ನಾನು

ಜಾತಿ ವಿನಾಶ ಸಾಧ್ಯವಾದರೆ ಅದು ಹೆಣ್ಣಿಂದಲೇ ಅನ್ನುವ ಮಾತಿನಲ್ಲಿ ಮತ್ತೆ ಭರವಸೆ ಮೂಡುವಂತೆ, ಅಂತರ್ಜಾತೀಯ ವಿವಾಹ ಆದ ಮಹಿಳೆಯರಿಂದ ಅರ್ಥಪೂರ್ಣ ಗೋಷ್ಠಿ
ನಾನು ಜಾತಿಮೀರಿ ವಿವಾಹವಾಗಿ ಬದುಕುವಾಗ ಆಹಾರ, ಶುಚಿತ್ವ, ಭಾಷೆ, ಜನರನ್ನು ನಡೆಸಿಕೊಳ್ಳುವುದು, ಮುಂತಾದ ಕಂಪಟ್ರ್ಸ ಗಳನ್ನು ಮೊದಮೊದಲಿಗೆ ಬಿಡಲೊಪ್ಪದ ನಾನು ನಿದಾನವಾಗಿ ಬಿಡಲಾರಂಬಿಸಿದೆ. ನನ್ನ ಬಾಣಂತನ ಯಾವುದೇ ಕಟ್ಟುಪಾಡುಗಳಿಲ್ಲದೆ ನಮ್ಮಮ್ಮ ಮಾಡಿದರು. ಸಮಾನತೆಯ ಜೀವನ ಬಹಳ ಕಷ್ಠ ಆದರೆ ಸಮತೆಯ ಅರಿವಿನೊಂದಿಗೆ ಮಾಡುವ ಜೀವನ ಬಹಳ ಸುಂದರ              - ವಾಣಿ ಪೆರಿಯೋಡಿ

ಜಾತಿ ಅಸ್ಮಿತೆ, ಶಕ್ತಿ ಒಕ್ಕೂಟವಾಗಿ ಕೆಲಸ ಮಾಡುತ್ತಿದೆ. ಜಾತಿ ವಿನಾಶಕ್ಕಿಂತ ತಾರತಮ್ಯ ನಿವಾರಣಗೆಗೆ ಶ್ರಮಿಸಬೇಕು. ಜಾತಿಯನ್ನು ನಿರಾಕರಿಸಿದ ಮೇಲುಜಾತಿಯವರನ್ನು ಅನುಮಾನದಿಂದ ನೋಡುವ ದೃಷ್ಟಿ ಬದಲಾಗಬೇಕು. ಜಾತಿಗೂ ಮದುವೆಗೂ ಸಂಬಂಧವಿರಲು ಸಾಧ್ಯಾವಿಲ್ಲ. ಆದರೆ ವ್ಯವಸ್ಥೆ ಇದೇ ಸತ್ಯ ಎನ್ನುವಂತೆ ಮಾಡಿಬಿಟ್ಟಿದೆ. ಅಂಬೇಡ್ಕರರು ಮನುಸ್ಮೃತಿಯನ್ನು ಸುಟ್ಟ ದಿನವೇ ನಾವು 'ಜಾತಿ ವಿನಾಶ ಮತ್ತು ನಾನು' ಕುರಿತು ಮಾತಾಡ್ತಿರುವುದು ಒಂದು ಅರ್ಥಪೂರ್ಣ ಆಕಸ್ಮಿಕ!

~ ಡಾ.ಸಬಿತಾ ಬನ್ನಾಡಿ

ತುಳುನಾಡಿನ ಜನಪರ ಸಾಂಸ್ಕೃತಿಕ ಪರಂಪರೆಗಳು

ಹಿಂದೂಗಳ ಯಾವ ಸಂಸ್ಕೃತಿಯನ್ನ ವಿರೋಧಿಸಿ ಪ್ರತಿರೋಧದ ಕಲೆಗಳು ಹುಟ್ಟಿದವೊ ಅವುಗಳನ್ನ ಕಳೆದ 10 ವರ್ಷದಲ್ಲಿ ಬಲಪಂಥೀಯ ರಾಜಕಾರಣ ಸಂಪೂರ್ಣವಾಗಿ ಆಕ್ರಮಿಸಿದೆ. ವೈವಿದ್ಯತೆ ನಾಶವಾಗುತ್ತಿದೆ.

ಕರಾವಳಿಯ ಭೂತಗಳ ಹುಟ್ಟು-ಸಾವುಗಳ ಕಥನವೇ ಪಾಡ್ದನ. ಇವು ಕರಾವಳಿಯ ಮಣ್ಣಿನ ದಲಿತರ ಆತ್ಮಕಥನಗಳು. ದಲಿತರೇ ಸೃಷ್ಟಿಸಿಕೊಂಡ ಆತ್ಮಕಥನಗಳು ಪ್ರಭಾವಶಾಲಿಯಾಗಿ ಬರಲಿಲ್ಲ ಅನ್ನುವವರು ಪಾಡ್ದನಗಳನ್ನು ಗಮನಿಸಬೇಕು. ದಲಿತರ ಆತ್ಮಕಥನಗಳು ಅಷ್ಟಾಗಿ ಬರಲಿಲ್ಲ ಅನ್ನುವುದು ಸರಿಯಲ್ಲ. ಅವರು ಅದನ್ನು ಬರೆದುಕೊಂಡ ಕ್ರಮವೇ ಬೇರೆ. ಅವನ್ನು ಓದುವ ಕ್ರಮವನ್ನು ನಾವು ಕಲಿಯಲಿಲ್ಲ. ಈ ನಿಟ್ಟಿನಲ್ಲಿ ದಲಿತ ಹಾಗೂ ತಳಸಮುದಾಯಗಳ ಕೊಡುಗೆ ಎಷ್ಟು ಮಹತ್ವದ್ದು.

- ಪ್ರೊ. ಪುರುಷೋತ್ತಮ ಬಿಳಿಮಲೆ, ಜೆ.ಎನ್.ಯು. ವಿ.ವಿ. ಪ್ರಾಧ್ಯಾಪಕ,

ಕುಡ್ಲದ ಕೊರಲ್ ಕಲಾತಂಡದ ಬಾಲರಾಜ್ ಅವರ ಮಾರ್ಗದರ್ಶನದಲ್ಲಿ ಕಲಾವಿದರು ಕೊರಗರ ಗಜಮೇಳ, ಡೊಳ್ಳು ಕುಣಿತ, ಕೊಳಲು ವಾದನ, ಸಾಹಸ ಕಲೆ ಪ್ರದರ್ಶಿಸಿದರು.  ಮಂಗಳೂರಿನ ಫೇಸ್ ಟ್ರಸ್ಟ್ ತಂಡದ ಕಲಾವಿದರು ಕಂಗಿಲು ನೃತ್ಯ, ಕೊರಂಗಲ್ ನೃತ್ಯ ಪ್ರಸ್ತುತ ಪಡಿಸಿದರು.

ಮುಸ್ಲಿಂ-ದಲಿತ-ಹಿಂದುಳಿದ ವರ್ಗಗಳ ಐಕ್ಯತೆ

ಮುಸಲ್ಮಾನರು ರಾಜಕೀಯವಾಗಿ ಒಡೆದಮನೆ. ದಲಿತರಷ್ಠು ಸಹ ರಾಜಕೀಯ ಪ್ರಜ್ಞೆ ಇಲ್ಲ, ರಾಜಕೀಯವಾಗಿ ದಿಕ್ಕೆಟ್ಟ ಸಮುದಾಯ ಇದಾಗಿದೆ. ಶೈಕ್ಷಣಿಕವಾಗಿ ಹಿಂದಿಳುದಿರುವಿಕೆ ಬಹಳ ದೊಡ್ಡ ಶಾಪ. ಧಾರ್ಮಿಕ ಕಾರಣಕ್ಕೆ ಒಂದಾಗುವವರು ಸಾಚಾರ್ ವರದಿ ತರದ ಬದಲಾವಣ ಕಾರ್ಯಕ್ಕೆ ಒಂದಾಗುವುದಿಲ್ಲ. ಸಂಖ್ಯೆ, ಆಯುದ, ವಕ್ತಾರರಾಗಿ ನಿರ್ಜೀವವಾಗಿ ಕಾಣುತ್ತಿದ್ದಾರೆ. ಛಿದ್ರೀಕರಣ ಮತ್ತು ಧ್ರುವೀಕರಣದ ರಾಜಕೀಯ. ಮುಸ್ಲಿಂ ರಾಜಕೀಯ ಪಕ್ಷ ಆತ್ಮಹತ್ಯಾತ್ಮಕವಾದದ್ದಾಗಿದೆ. ಅಂತರ್ ಧರ್ಮೀಯ ಅಂತರ್-ಸಮುದಾಯ ಸಂಭಂದಗಳಿಲ್ಲದೆ ಭಾರತ ದಲ್ಲಿ ಮುಸ್ಲಿಮರಿಗೆ ಭವಿಷ್ಯವಿಲ್ಲ. ಚಳುವಳಿ ಗಳಲ್ಲಿ ಹೆಚ್ಚಿನ ಮಟ್ಟದಾಗಿ ಇರಬೇಕಾದವರು ಮುಸಲ್ಮಾನರು. ಸಮುದಾಯ ರಾಜಕಾರಣ ಚಳುವಳಿ ರಾಜಕಾರಣದ ಭಾಗವಾಗಿರಬೇಕು.ಮುಸಲ್ಮಾನರಿಗೆ ಆ ಸಮುದಾಯದ ಅಂಬೇಡ್ಕರ್ ಬೇಕಾಗಿದೆ. ಅಧಿಕಾರ ರಾಜಕಾರಣಿಗಳು ಮಾಡುವ ಸಾಂಸ್ಕೃತಿಕ ರಾಜಕಾರಣ ನಾವು ಚಳುವಳಿ, ಜನನುಡಿ ಪರ ಇರುವವರು ಮಾಡಬೇಕಿದೆ.      - ರಹಮತ್ ತರೀಕೆರೆ.

ಕರ್ನಾಟಕದ ಯಾವ ದಲಿತ ರಾಜಕಾರಣಿಗಳೂ 'ಮಾಸ್ ಲೀಡರ್' ಆಗಲು ಪ್ರಯತ್ನ ಪಡಲಿಲ್ಲ. ಪಕ್ಷಗಳ ಹಂಗಿನಲ್ಲಿದ್ದಾರೆ. ಬಸವಲಿಂಗಪ್ಪನವರಿಗೆ ಆ ತರದ ಎಲ್ಲಾ ಸೌಲಭ್ಯ ಮತ್ತು ಅವಕಾಶಗಳಿದ್ದರೂ ಅವರೂ ಆಗಲಿಲ್ಲ.

- ಶಿವಾಜಿಗಣೇಶ್

ಹಿಂದುಳಿದವರು ಜಾಣ ನಿದ್ದೆಮಾಡುತ್ತಿದ್ದಾರೆ. ಅಹಿಂದ ಇದು ಸಾಂದರ್ಭಿಕ ವಾದದ್ದು ಒಂಥರಾ ಓಯಾಸಿಸ್ ಇದ್ದಂತೆ. ಜಾತಿಯ ಲೀಡರ್ ಗಳು ತಮ್ಮ ಅಧಿಕಾರಕ್ಕಾಗಿ ಅವರನ್ನು ಸಾಕುತ್ತಿದ್ದಾರೆ. ಹಿಂದುಳಿದವರು ಹಿಂದುಗಳಾಗುತ್ತಿದ್ದಾರೆ. ಇದು ಆತಂಕದ ವಿಷಯ. ಪ್ರಬಲ ಜಾತಿಗಳು ಹಾವನೂರು ವರದಿಯನ್ನು ದಿಕ್ಕು ತಪ್ಪಿಸುತ್ಯಿವೆ. ಕರ್ನಾಟಕದಲ್ಲಿ ಇನ್ನೂ ಬಹು ಸಂಖ್ಯಾತರ ಪ್ರಾತಿನಿದ್ಯವಿಲ್ಲ. ಇವುಗಳಿಗೆ ಸಾಮಾಜಿಕ ಶಿಕ್ಷಣದ ಅವಶ್ಯಕತೆ ಇದೆ. ಜನಸಮುದಾಯಗಳ ವಸ್ತುಸ್ಥಿತಿ ಹೇಳಿದರೆ ದೇಶದ್ರೋಹಿ ಎನ್ನುವ ಪರಿಸ್ಥಿತಿ ಇದೆ. ರಾಜಕಾರಣದ ಪ್ರಾತಿನಿದ್ಯಕ್ಕೆ ಅಣಿಯಾಗಬೇಕು. ನಾವು ಸುಸ್ಥಿರಗೊಳ್ಳುವ ಕಡೆ ಚಲಿಸಬೇಕು. ಈಗಿನ ಎಷ್ಠೋ ಜನಕ್ಕೆ ಮೀಸಲಾತಿ ಬಗ್ಗೆ ಸರಿಯಾದ ತಿಳುವಳಿಕೆಯೇ ಇಲ್ಲ. ಅಹಿಂದದ ಸೈದಾಂತಿಕ ರಚನೆ ಯಾಗಬೇಕಿದೆ.

- ರಾಜಪ್ಪ ಧಳವಾಯಿ

ಸಾವಿರಾರು ಸಮುದಾಯಗಳಿರುವ ಭಾರತದಲ್ಲಿ ಐಕ್ಯತೆ ಕಷ್ಟಸಾಧ್ಯ. ಸಾಂಸ್ಕೃತಿಕ ಎಚ್ಚರ ಇಲ್ಲದಿದ್ದರೆ ಐಕ್ಯತೆ ಸಾಧ್ಯವೇ ಇಲ್ಲ. ಸಮಾಜದ ಬೆಳವಣಿಗೆ, ವಿಕಾಸ ಕ್ರಮದ ಸಮಗ್ರ ಅರಿವಿದ್ದರೆ ಮಾತ್ರ ಸಾ ಧ್ಯ. ಸಮಾನತೆ ಅರಿವಿದ್ದಂತೆ, ಐಕ್ಯತೆಯೂ ಅರಿವೇ ಆಗಿದೆ. ವಿಚಾರವಾದಿಗಳು ಹಾಗೂ ಪ್ರಗತಿಪರರು ಸೈನಿಕರಿಲ್ಲದ ಸೇನಾನಿಗಳಾಗಿದ್ದೇವೆ. ಅವರು ಹೇಳುವುದು ಜನರಿಗೆ ಗೊತ್ತಾಗುತ್ತಿಲ್ಲ. ಅವರು ಸಮುದಾಯದ ಜತೆಗಿಲ್ಲ, ಅರಿವು ಎಂಬುದು ಒಂದೇ ಸಾರಿ ಬರುವುದಿಲ್ಲ. ಹಿಂದುಳಿದ ಜಾತಿಗಳು ಇಂದಿಗೂ ಅಸ್ಫೃಷ್ಯತೆಯನ್ನು ಆಚರಿಸಿಕೊಂಡು ಬಂದಿದ್ದಾರೆ. ಅಸ್ಪಷ್ಯತೆಯು ಹಳ್ಳಿಗಳಲ್ಲಿ  ಜೀವಂತವಾಗಿದೆ. ಹಿಂದುಳಿದ ವರ್ಗದವರು ಮೇಲ್ವರ್ಗದವರಿಂದ ಆದಂತ ದಬ್ಬಾಳಿಕೆಯನ್ನು ಮರೆತಂತೆ ಕಾಣುತ್ತದೆ.  ಮುಸ್ಲಿಂರ ಮೇಲೆ ಹಲ್ಲೆಗಳಾಗುತ್ತಿದ್ದ ಸಂದರ್ಭದಲ್ಲಿ ಹಿಂದುಳಿದ ಹಾಗೂ ದಲಿತರು ಅವರ ಜೊತೆ ತಡೆಗೋಡೆಗಳಾಗಿ ನಿಲ್ಲಬೇಕಾಗಿತ್ತು. ಅವರನ್ನು ರಕ್ಷಿಸಲು ಮುಂದಾಗಬೇಕಿತ್ತು.

- ಬಂಜಗೆರೆ ಜಯಪ್ರಕಾಶ್

ತತ್ತ್ವಪದಗಳ ಗಾಯನ

ಭಾಷೆಗೆ ಮೈಲಿಗೆ ಇಲ್ಲ. ನುಡಿಗೆ ಮೈಲಿಗೆ ಇಲ್ಲ. ತತ್ವಪದಕಾರರೂ ಸಹ ಮೈಲಿಗೆ ಇಲ್ಲದ ಹಲವು ದರ್ಶನಗಳನ್ನ ಪ್ರತಿಪಾದಿಸಿದರು. ತತ್ತ್ವಪದಗಳು ವೈದಿಕಷಾಹಿಯ ವಿರುದ್ಧ ಪ್ರಬಲವಾದ ಅಸ್ತ್ರ. ಸಂಪ್ರದಾಯವಾದಿಗಳು ಈ ತತ್ತ್ವಪದಗಳ ಚಿಂತನೆಗಳು ಇಂದಿಗೂ ಸಲ್ಲುತ್ತವೆ.

ಮೀನಾಕ್ಷಿ ಬಾಳಿ, ಹೋರಾಟಗಾರ್ತಿ, ಚಿಂತಕಿ

ಮಹಿಳೆಯರು ಮತ್ತು ತಳಸಮುದಾಯಗಳ ಮೇಲೆ ನಡೆಸುವ ದೌರ್ಜನ್ಯವನ್ನು, ಸೂಕ್ಷ್ಮ ಹಿಂಸೆಗಳನ್ನು ತತ್ತ್ವಪದಕಾರರು ಕಟ್ಟಿಕೊಟ್ಟ ಬಗೆಯನ್ನು ನಿರೂಪಿಸುತ್ತಾ, ಅವರು ನಿರ್ವಚನೆಯೊಂದಿಗೆ ಬಸಮ್ಮ ಸ್ಥಾವರ ಮಠ ಅಕ್ಕಲಕೋಟಿ ತಂಡದೊಂದಿಗೆ ತತ್ತ್ವಪದಗಳ ಗಾಯನ ನಡೆಸಿಕೊಟ್ಟರು,

ಕವಿ ಗೋಷ್ಟಿ
``ಇಲ್ಲಿ ಬಣ್ಣಗಳೆಲ್ಲವ ಗುತ್ತಿಗೆ ಹಿಡಿದಿದ್ದಾರೆ,
ಮತ್ತೆ ತಮ್ಮ ತಮ್ಮ ಬಾವುಟಗಳಿಗೆ ಮೆತ್ತಿಕೊಂಡಿದ್ದಾರೆ,
ಸತ್ತ ಪ್ರಾಣಿಯೂ ಈಗ ದೈವವಾಗಿದೆ,
ಹೊಟ್ಟೆಗಿಲ್ಲದೇ ಜನ ಸತ್ತರೂ ದನ ಸಾಯಕೂಡದು,
ದನ ಸತ್ತರೂ ಜನ ತಿನ್ನಕೂಡದು''
                                      - ಸಚಿನ್ ಅಂಕೋಲ
ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ ಅದನ್ನೊಂದು ಸುದ್ದಿ ಮಾಡಿ ಮಾಧ್ಯಮದ ಮಂದಿ ಊರ ಸಾಹುಕಾರನ ಮಗಳ ಮದುವೆಗೆ ಸಾಲುಗಟ್ಟಿದ್ದಾರೆ..
ಡಾಕ್ಟ್ರು ದೇಶ ಸೇವೆ ಅಂತಾನ, ಮುಂಗಡ ಹಣ ಕೊಡದೆ ರೋಗಿ ನೋಡಲ್ಲ ಅಂತಾನ! ತಂಗಿ ಮದುವೆ ಎದಿಮ್ಯಾಲೆ ಬಂದು ಅವ್ವ ದವಾಖಾನೆ ಸೇರ್ಯಾಳ ...
ಇದಕ್ಕೆಲ್ಲಾ ಜವಾಬ್ದಾರಿ ಆಗಬೇಕಾದ ಮನೆ ಯಜಮಾನ ನಾನು ಪಕೀರ ಅಂತಾನ, ನಾನು ಸನ್ಯಾಸಿ ಅಂತಾನ .....

                          - ವೀರಪ್ಪ ತಾಳದವರ್

ಕವಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಬಹುತೇಕ ಕವಿಗಳು ವರ್ತಮಾನದ ಸ್ಥಿತಿಗತಿಗಳನ್ನೇ ವಿಶ್ಲೇಷಿಸಿದ್ದು ವಿಶೇಷ.

ವಾಸುದೇವ ನಾಡಿಗ್ ಅವರು ``ಕವಿತೆಯೊಂದರ ಮರಣೋತ್ತರ ಪರೀಕ್ಷೆ'' ಕವನವನ್ನು ಮುಗಿಸುವಾಗ ``ಇನ್ನು ಬರೆಯಲಾಗುತ್ತಿಲ್ಲ, ಸೋತ ಕವಿತೆಯೊಂದರ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ'' ಎನ್ನುತ್ತಾ ಕವಿತೆ ಬರೆಯಲಾಗದ, ಗೆದ್ದ ಕವಿತೆಗಳ ಪೊಳ್ಳುತನಗಳನ್ನು ವಿಶ್ಲೇಷಿಸಿದರು. ``ಕತ್ತರಿಸಿಟ್ಟ ಮರದ ಬೊಡ್ಡೆಯ ಮೇಲೆ ನಾಳಿನ ಭವಿಷ್ಯ ಬರೆಯಲು ನೂಕುನುಗ್ಗಲು'' ಎಂದರು.

ರಮೇಶ್ ಅರೋಲಿ ಅವರು ತಮ್ಮ ಕವನವನ್ನು ಹಾಡುತ್ತಾ ``ಮೇಕೆಗೆ ಮೇವಿಲ್ಲ, ಮೇಕಿಂಗ್ ಇಂಡಿಯಾ'' ಎಂದು ರಾಜಕೀಯ ವಿಡಂಬನಾತ್ಮಕ ಸ್ಥಿತಿಯನ್ನು ಹೇಳಿದರು.

ಹೇಮಲತಾ ಮೂರ್ತಿ ಅವರು ``ಅಂತರಂಗದ ಅಳಲಿಗೆ ಕಣ್ಣು ಕಿವಿ ಮುಚ್ಚಿ ಕುಳಿತ'' ಸ್ಥಿತಿಯನ್ನು ಬಿಂಬಿಸಿದರು.

ಪ್ರದೀಪ್ ಮಾಲ್ಗುಡಿ ಅವರು ``ಮಾದ್ಯಮ ಉದ್ಯಮ'' ಕವಿತೆಯಲ್ಲಿ ಮಾದ್ಯಮ ಕ್ಷೇತ್ರದ ಕೆಲವರ ನೈತಿಕತೆಯನ್ನು ಪ್ರಶ್ನಿಸುವಂತೆ ``ಕೊಟ್ಟದ್ದು ಯಾರೋ, ಆದರೆ ಪಡೆದಿದ್ದು ನಾನೇ, ಈಗ ಕೈಸೋತು ಬರೆಯಲಾಗುತ್ತಿಲ್ಲ'' ಎಂದರು.

ಯಂಶ ಬೆಂಗಿಲ ಅವರು ``ಅಪ್ಪ ಮತ್ತು ವಾಸು'' ಎಂಬ ಕವನದಲ್ಲಿ ಸಮಾಜದಲ್ಲಿನ ತಾರತಮ್ಯ-ಧ್ವೇಷವನ್ನು ತೆರೆದಿಡುತ್ತಾ ಕರಾವಳಿ ಸಾಗುತ್ತಿರುವ ದಿಕ್ಕಿನತ್ತ ಬೆಳಕು ಚೆಲ್ಲಿದರು.

ಡಾ. ಕಾವ್ಯಶ್ರೀ ಎಚ್. ಅವರು ``ಕ್ಷಮಿಸಿಬಿಡು ವೇಮುಲ ಸಹಿಸುವುದನ್ನು ಕಲಿಯುತ್ತಾ ಕಲಿಯುತ್ತಾ ನಾನು ಅಸಹನೆಯನ್ನು ಅಡವಿಟ್ಟಿದ್ದೇನೆ, ಬೀದಿಗಿಳಿಯಲಾರೆ'' ಎಂದರು.

ವೀರಪ್ಪ ತಾಳದವರ್ ಅವರು, ``ತಲೆ ಚಿಟ್....ಹಿಡಿದದ'' ಕವನ ವಾಚಿಸುತ್ತಾ, ``ನನಗಿಗ ತಲಿ ಚಿಟ್ ಹಿಡಿದದ! ದಿನಕ್ಕೊಂದು ಕಾಯ್ದೆ ಜಾರಿ ಕಂಡು ದೇಶ ಆಳೋರ್ದ ನೀತಿ ಕಂಡು ತಲಿ ಕೆಟ್ಟಂಗ ಆಗೆದ ನನಗಿಗ ನೋಡಿ ಎತ್ಲಾಗರ ಓಡಿ ಹೋಗುವಂಗ ಆಗೆದ'' ಎನ್ನುತ್ತಾ ಪ್ರಸ್ತುತ ಭಾರತದ ಪರಿಸ್ಥಿತಿ ತೆರೆದಿಟ್ಟರು.

ಡಾ. ಅರುಂಧತಿ ಅವರು ``ಅಂಬೇಡ್ಕರ್'' ಕವನವನ್ನು ಮಗುವಿನ ಕಣ್ಣುಗಳಲ್ಲಿ ನೋಡುತ್ತಾ, ``ಅಮ್ಮಾ ಅಲ್ಲಿ ಅಂಬೇಡ್ಕರ್ ಅನ್ನೋ ತಿಂಡಿ ಕೊಡ್ತಾರಾ'' ಎಂದಾಗ ತಾಯಿಯು ``ತಿಂಡಿಯಲ್ಲ ಮಗಳೇ, ಮುಟ್ಟಲಾಗದ ಅಕ್ಷರಗಳ ದಕ್ಕಿಸಿಕೊಟ್ಟ ಸಂಜೀವಿನಿ''ಯನ್ನ ಎಂದು ಮಾರ್ಮಿಕವಾಗಿ ಉತ್ತರಿಸಿದ್ದನ್ನು ವಾಚಿಸಿದರು.

ದೀಪಾ ಗಿರೀಶ್ ಅವರು, ``ಅವರು ನಿಮ್ಮನ್ನು ಒದ್ದ ಕಾಲಿಗೆ ಹುಟ್ಟಿದ ಕೂಸು ನಾನು'' ಎಂದು ಅಂಬೇಡ್ಕರ್ ಅವರನ್ನು ಸ್ಮರಿಸಿದರು.

ಚಾಂದಿನಿ ಅವರು ನಾನು ಅವಳಾಗಲು ಹೋದಾಗ ಆದ ಅನುಭವಗಳನ್ನು ಹಂಚಿಕೊಂಡರು.

ಸೈಫ್ ಜಾನ್ಸೆ ಕೊಟ್ಟೂರು, ``ಕಡಲ ಚೂರುಗಳು ಜೋಳಿಗೆಗೆ ತುಂಬಿ ಊರ ಹಬ್ಬಿದ್ದು, ನೀರಡಿಸಿದೆ ಕರಾವಳಿಗೆ'' ಎಂದರು.

ವಿಪ್ಲವಿ ರಾಯಚೂರು ಅವರು ``ಸ್ತ್ರೀಸಂಭೂತೆ'' ಕವನ ವಾಚಿಸುತ್ತಾ ``ನಿರುತ್ತರಳಾಗಿದ್ದೇನೆ ಅನೈತಿಕತೆಯ ಮಾರಣಹೋಮದಲ್ಲಿ'' ಎಂದರು.

ಚೀಮನಹಳ್ಳಿ ರಮೇಶ್ ಬಾಬು ಅವರು, ``ಅಪ್ಪನ ಹಣೆಯ ಕಿಂಡಿ'', ಕಾವ್ಯಶ್ರೀ ಎಚ್. ನಾಯ್ಕ್ ಅವರು, ``ನಿನ್ನ ಮೌನದ ಮಹಾಮನೆ'' ಎಂಬ ಕವನ ವಾಚಿಸಿದರು. ಮಂಜುಳಾ ಹುಲಿಕುಂಟೆ ಅವರು, ``ಯುದ್ಧದ ಬಗ್ಗೆ ನನಗೆ ಮೋಹವಿಲ್ಲ'' ಎನ್ನುತ್ತಾ ಅದರ ಭಯಾನಕತೆಯನ್ನು ತೆರೆದಿಟ್ಟರು.

ರಮೇಶ್ ಹಿರೇಜಂಬೂರು ಅವರು, ``ಕೋವಿಯೊಳಗಿನ ಸತ್ಯ'', ಅಸಂಗಿ ಗಿರಿಯಪ್ಪ ಅವರು, ``ಹೆಜ್ಜೆ ಮೂಡಿಸಿದ ಸದ್ದು'' ಕವನ ವಾಚಿಸಿದರು. ಗುರು ಸುಳ್ಯ, ದುರ್ಗೇಶ್ ಪೂಜಾರಿ, ರೂಪಶ್ರೀ ಕಲ್ಲಿಗನೂರು, ಚಾಂದ್ ಬಾಷಾ ಅವರೂ ಸಹ ಕವನ ವಾಚಿಸಿದರು.

 • ಅಂಬೇಡ್ಕರ್ ಗಾಂದೀಜಿಗೆ ತಿe hಚಿve ಟಿo homeಟಚಿಟಿಜ ಎಂದಿದ್ದರು, ಆದರೆ ಈಗ ನಮ್ಮಲ್ಲಿ ಸ್ವಾತಂತ್ರ ಇಲ್ಲ ಎನ್ನುವ ಪರಿಸ್ಥಿತಿ ಇದೆ. ಮಾದ್ಯಮಗಳು ಎಲ್ಲಿಯವರೆಗೂ ಬ್ರಾಹ್ಮಣ್ಯದ ಗೀಳಿನಿಂದ ಹೊರ ಬರುವುದಿಲ್ಲವೋ ಅಲ್ಲಿಯವರೆಗೂ ಬಹುಸಂಖ್ಯಾತರಿಗೆ ಅನ್ಯಾಯ ವಾಗುತ್ತದೆ. ಮತಾಂದರು ರಾಜಕಾರಣಿಗಳು ಮೂರ್ಖ ಹೇಳಿಕೆಗಳನ್ನು ನೀಡುತ್ತಿದ್ದಾರೆ ಮತ್ತು ನಂಬಿಸುತ್ತಿದ್ದರೆ. ಇದರಿಂದ ಎಚ್ಚರಗೊಂಡು ನಾವು ಪ್ರಜಾಪ್ರಭುತ್ವ ರಕ್ಷಿಸಬೇಕು.
   
 • ನಾನು ನೊಂದವರ ಅಂಗಾಲಿನ ಮುಳ್ಳ ತೆಗೆದು ದುಡಿದವರ ಬೆವರನ್ನು ಶಾಹಿಮಾಡಿ ಕವಿತೆ ಬರೆಯುವವ.
   
 • ನಾನು ಇವರ ಶಾಸ್ತ್ರಕ್ಕೆ ಹೊಗ್ಗುವವನಲ್ಲ, ಭವಿಷ್ಯಕ್ಕೆ ಬಗ್ಗುವವನಲ್ಲ, ಕರ್ಮಠ ನನ್ನ ಹಣೆಗೆ ಹೊಗ್ಗೊಲ್ಲ. ನಾನು ಕೆಸರಲ್ಲಿ ಅರಳಿದ ಕಮಲ.

- ಮೂಡ್ನಕೂಡು ಚಿನ್ನಸ್ವಾಮಿ,
ಕವಿಗೋಷ್ಟಿಯ ಅದ್ಯಕ್ಷೀಯ ಮಾತುಗಳಲ್ಲಿ

ಸಮಾರೋಪ

'ಭಾರತೀಯ ಜಾತಿವ್ಯವಸ್ಥೆಯ ಮೇಲೆ ಸರ್ಜಿಕಲ್ ದಾಳಿ ಮಾಡಿ...'

-  ಡಾ. ಅರವಿಂದ ಮಾಲಗತ್ತಿ

ನಾಲ್ಕು ವರ್ಷಗಳಲ್ಲಿ ಜನನುಡಿ ಸಾಧಿಸಿದ್ದೇನು ಎಂದು ಕೆಲವರು ಪ್ರಶ್ನಿಸುತ್ತಾರೆ. ಉತ್ತರ ಕಣ್ಣ ಮುಂದಿದೆ. ಇತ್ತೀಚೆಗೆ ಅಭೂತಪೂರ್ವ ಯಶಸ್ಸು ಕಂಡ ಉಡುಪಿ ಚಲೋ, ಮೊನ್ನೆ ಮೊನ್ನೆ ನಡೆದ ಮಡಿಕೇರಿ ಚಲೋ ಹೋರಾಟಗಳು ಜನನುಡಿಯ ವಿಸ್ತರಣೆಗಳಾಗಿವೆ ಎನ್ನುವುದನ್ನು ಮರೆಯಬಾರದು. ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾ ಬಂದ ಮುಸ್ಲಿಮ್ ಪ್ರಗತಿಪರರು ಸದ್ದಿಲ್ಲದೆ 'ಮುಸ್ಲಿಮ್ ಚಿಂತಕರ ಚಾವಡಿ' ಯನ್ನು ಕಟ್ಟಿ ಆ ಸಮುದಾಯಕ್ಕೆ ಸರಿಯಾದ ದಿಕ್ಕು ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದೇನು ಕಡಿಮೆ ಸಾಧನೆಯೇ?

~ ದಿನೇಶ್ ಅಮಿನ್ ಮಟ್ಟು

`ಜನರ ನುಡಿಯನ್ನು ಅರಿತರಷ್ಟೇ ಸಮತೆ ಎಂಬುದು ಸಾಧ್ಯ...'

-  ಜ್ಯೋತಿ ಚೇಳ್ಯಾರು