Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ಸಮಾಜವಾದಿ ಚಿಂತಕ ಎಸ್.ಎಚ್.ಪಟೇಲ್ ಇನ್ನಿಲ್ಲ

ಸಂಪುಟ: 
11
ಸಂಚಿಕೆ: 
2
Sunday, 1 January 2017

ಮಧ್ಯ ಕರ್ನಾಟಕ ಜಿಲ್ಲೆ ದಾವಣಗೆರೆಯಲ್ಲಿ ಹಲವು ದಶಕಗಳ ಕಾಲ ತಮ್ಮ ಪ್ರಚಂಡ ವಾಗ್ಮೀತನದಿಂದ ಸಮಾಜವಾದಿ ಚಿಂತನೆಗಳನ್ನು ಪ್ರತಿಪಾದಿಸುತ್ತಿದ್ದ ನಮ್ಮೆಲ್ಲರ ಪ್ರೀತಿಯ ಗುರುಗಳಾದ ಎಸ್.ಎಚ್.ಪಟೇಲ್(82) ಇನ್ನಿಲ್ಲ. ಡಿಸೆಂಬರ್ 28ರಂದು ಸಂಜೆ 4.20ರ ಸುಮಾರಿನಲ್ಲಿ ಆಗಲಿದ್ದಾರೆ. ಹಲವು ತಿಂಗಳ ಹಿಂದೆ ಪಾಶ್ರ್ವುವಾಯುವಿಗೆ ಅವರು ತುತ್ತಾಗಿದ್ದರು. ಇತ್ತೀಚಿಗಷ್ಟೇ ನಾನು ನಮ್ಮ ದಾವಣಗೆರೆಯ ಸಂಗಾತಿಗಳೊಂದಿಗೆ ಅವರ ಮನೆಗೆ ಭೇಟಿ ನೀಡಿದ್ದೆವು. ನಮ್ಮನ್ನು ನಿದ್ದೆಯ ಮಂಪರಿನಲ್ಲೆ ನೋಡಿ ಮುಗುಳ ನಕ್ಕು ಮತ್ತೆ ನಿದ್ದೆಗೆ ಜಾರಿದ್ದರು. ಇತ್ತೀಚಿನವರೆಗೂ ನಾವು ಕರೆಯುತ್ತಿದ್ದ ಎಲ್ಲಾ ಸಭೆಗಳಿಗೂ ಇತರೆ ಪ್ರಗತಿಪರ ಸಂಘಟನೆಗಳ ಸಭೆಗೂ ಭಾಗವಹಿಸುತ್ತಾ ಕ್ರಿಯಾಶೀಲವಾಗಿದ್ದ ಅವರನ್ನು ಅಂದು ಆ ಗಾಲಿ ಕುರ್ಚಿಯಲ್ಲಿ ನೋಡಿದಾಗ ನನಗರಿವಿಲ್ಲದಂತೆ ಕಣ್ಣೀರಿಳಿದ್ದಿತ್ತು.

ಅಣ್ಣ ಜೆ.ಎಚ್.ಪಟೇಲ್ ರಂತೆ ಸಮಾಜವಾದಿ ಚಿಂತನೆಗಳನ್ನು ಮೈಗೂಡಿಸಿಕೊಂಡಿದ್ದ ಪಟೇಲ್ ರು ತಮ್ಮ ಇಡೀ ಬದುಕನ್ನು ಶೈಕ್ಷಣಿಕ ಉನ್ನತಿಗಾಗಿ ಮುಡುಪಾಗಿಸಿ ಆ ಮೂಲಕ ಒಂದು ಪ್ರಗತಿಪರ ಸಮಾಜವನ್ನು ನಿರ್ಮಿಸುವ ಕಸಸ್ಸು ಕಂಡವರು. ಮುಂಬೈನ ಪರಿಸರದಲ್ಲಿ ಗಾಢವಾಗಿದ್ದ ಸಮಾಜವಾದಿ ಮತ್ತು ಎಡ ಚಿಂತನೆಯ ಮೂಸೆಯಲ್ಲಿ ತಮ್ಮ ಕಾನೂನು ಪದವಿ ಪಡೆದಿದ್ದ ಅವರು ಅಂದಿನ ಕಾಲದ ಪ್ರಖರ ಸಮಾಜವಾದಿ ಚಿಂತಕರಾದ ಮಧು ದಂಡವತೆ, ಜಾರ್ಜ್ ಫರ್ನಾಂಡೀಸ್, ಬಿ.ಟಿ.ರಣದಿವೆ, ಮಾತ್ರವಲ್ಲ ಆ ಕಾಲದ ಸಾಹಿತ್ಯ ದಿಗ್ಗಜರ ಜೊತೆ ಒಡನಾಡ ಹೊಂದಿದ್ದರು.

ದಾವಣಗೆರೆ ಆರ್.ಎಲ್ ಕಾನೂನು ಕಾಲೇಜಿಗೆ ಬಂದ ನಂತರ ಇಡೀ ಕಾಲೇಜನ ವಾತವಾರಣಕ್ಕೆ ಒಂದು ಪ್ರಗತಿಪರ ಸ್ಪರ್ಶ ನೀಡಿದ್ದರು. ಆ ಕಾಲೇಜಿಗೆ ದೇಶದ ಖ್ಯಾತ ನಾಮರುಗಳಾದ ಜ್ಯೋತಿಬಸು, ರಂಗನಾಥ ಮಿಶ್ರಾ, ಶಿವರಾಜ ಪಾಟೀಲ್, ಸೇರಿದಂತೆ ಹಲವು ದಿಗ್ಗಜರನ್ನು ಆಹ್ವಾನಿಸಿ ಉಪನ್ಯಾಸಗಳನ್ನು ಏರ್ಪಡಿಸಿದ್ದರು ಮತ್ತು ಇಡೀ ಕಾಲೇಜು ಲೈಬ್ರರಿ ತುಂಬೆಲ್ಲಾ ಜಗದ್ವಖ್ಯಾತ ಕಾನೂನು ತಜ್ಞರು, ರಾಜಕೀಯ ಚಿಂತಕರ ಗ್ರಂಥಗಳನ್ನು ಇರುವಂತೆ ವಿಶೇಷ ಆಸಕ್ತಿಯನ್ನು ಅವರು ವಹಿಸುತ್ತಿದ್ದರು. ನಾನು ವೈಯಕ್ತಿಕವಾಗಿ ಯಾವುದೇ ಸಂಗ್ರಹ ಯೋಗ್ಯ ಪುಸ್ತಕಗಳನ್ನು ಅವರ ಮುಂದಿಟ್ಟರೆ ಅವುಗಳನ್ನು 4-5 ಪ್ರತಿಗಳನ್ನು ಲೈಬ್ರರಿಗಾಗಿ ಅವರು ಪಡೆಯುತ್ತಿದ್ದರು.

ಅಣ್ಣ ಒಬ್ಬ ದೊಡ್ಡ ರಾಜಕೀಯ ನಾಯಕನಾಗಿದ್ದರೂ ಅವರ ನೆರಳಲ್ಲಿ ಯಾವೊಂದು ಅವಕಾಶಕ್ಕೆ ಹಾತೊರೆದವರಲ್ಲ. ಪಟೇಲರು. ಈ ಕಾರಣಕ್ಕೆ ಪಟೇಲ ಶಿಷ್ಯರ ಪಡೆಯೇ ನ್ಯಾಯಮೂರ್ತಿಗಳಾಗಿ, ರಾಜಕೀಯ ನಾಯಕರಾಗಿ ಸಾಮಾಜಿಕ ಕಾರ್ಯಕರ್ತರಾಗಿ ನೂರಾರು ಸಂಖ್ಯೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಓದುವುದು ಮತ್ತು ಪ್ರಖರ ಭಾಷಣ ಪಟೇಲರ ಎರಡು ಪ್ರಮುಖ ಜೀವನದ ಪ್ರಧಾನ ಕೆಲಸಗಳಾಗಿದ್ದವು. ಅವುಗಳನ್ನು ಹೊರತುಪಡೆಸಿದ ಪಟೇಲ್ ರನ್ನು ಊಹಿಸಿಕೊಳ್ಳುವುದು ಅಸಾಧ್ಯ. ತಮ್ಮ ವಿದ್ವತ್ ಪೂರ್ಣ ಓದು ಮತ್ತು ಭಾಷಣದ ಮೂಲಕ ಸದಾ ಸಮಾಜದಲ್ಲಿನ ಅನಿಷ್ಟಗಳ ವಿರುದ್ದ ಎಚ್ಚರಿಸುತ್ತಿದ್ದ ಮತ್ತು ಒಂದು ಸುಂದರ ಸಮಾನ ಸಾಮಾಜಿಕ ಅವಕಾಶಗಳಿರುವ ಸಮಾಜಕ್ಕಾಗಿ ನಮ್ಮನ್ನು ಹೋರಾಟಕ್ಕೆ ಪ್ರೇರೇಪಿಸುತ್ತಿದ್ದ ಮಾರ್ಗದರ್ಶಿ ಇನ್ನಿಲ್ಲ.

ಅಂತಹ ಒಂದು ಮೇರು ವ್ಯಕ್ತಿತ್ವದ ಕೆಳಗಡೆ ಅನೇಕರು ಶಿಷ್ಯರಾಗಿ ಸಮಾಜವನ್ನು ವಿಭಿನ್ನವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿದೆ. ಪ್ರೊ.ಎಸ್.ಎಚ್.ಪಟೇಲ್ ಭೌತಿಕವಾಗಿ ನಮ್ಮೊಂದಿಗಿಲ್ಲ, ಆದರೆ ಅವರ ಭೌದ್ದಿಕ ತಿಳುವಳಿಕೆ ಖಂಡಿತ ನಮ್ಮನ್ನು ಮುನ್ನಡೆಸಲಿದೆ.

ಪ್ರೀತಿಯ ಗುರುಗಳಿಗೆ
ಇದೋ ನಿಮ್ಮ ಪ್ರಿತೀಯ ಶಿಷ್ಯನ
ಕೊನೆಯ ನಮನ .....

ಕೆ.ಮಹಾಂತೇಶ್