ಗಂಗಾವತಿ ಹಾಗೂ ಚಿತ್ತವಾಡ್ಗಿಗೆ ಸಿಪಿಐ(ಎಂ) ನಿಯೋಗ

ಸಂಪುಟ: 
11
ಸಂಚಿಕೆ: 
2
Sunday, 1 January 2017

ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಡಿಸೆಂಬರ್ 12 ಮತ್ತು 13ರಂದು ಎರಡು ಕೋಮುಗಳ ನಡುವೆ ನಡೆದ ಗಲಭೆಯಿಂದಾಗಿ ಜನತೆಯಲ್ಲಿ ಆತಂಕ ಮನೆ ಮಾಡಿದೆ. ಹನುಮ ಜಯಂತಿ ಹಾಗೂ ಈದ್ ಮಿಲಾದ್ ಹಬ್ಬಗಳು ಒಂದೇ ದಿನ ಬಂದ ಪರಿಣಾಮವಾಗಿ ಆಚರಣೆ ವಿಚಾರವಾಗಿ ನಡೆದ ಗಲಭೆಯಲ್ಲಿ ಕೋಮುವಾದಿಗಳು ಗಲಭೆ ಹಬ್ಬಿಸಿದರು.

ಗಂಗಾವತಿಯಲ್ಲಿ ಮುಸ್ಲಿಂ ಪ್ರದೇಶದಲ್ಲಿ ಗಣಪತಿ ಹಬ್ಬ ಆಚರಿಸುವ ಮೂಲಕ ಪ್ರಾರಂಭವಾದ ಸಂಚಿನ ಪರಿಣಾಮವಾಗಿ ಡಿ.11ರಂದು ಬ್ಯಾನರ್ ಹಾಗೂ ಬಂಟಿಂಗ್ಸ್ ಕಟ್ಟುವ ವಿಚಾರದಲ್ಲಿ ಹಿಂದೂ ಹಾಗೂ ಮುಸ್ಲಿಂ ಕೋಮುಗಳ ನಡುವೆ ಗಲಭೆ ನಡೆದು ಪಿಎಫ್‍ಐ ಕಾರ್ಯಕರ್ತರು ಕಲ್ಲು ತೂರಿದ್ದಾರೆ. ಪರಿಣಾಮ ಬಿಗುವಿನ ವಾತಾವರಣ ನಿರ್ಮಾಣವಾಯಿತು.

ಸ್ಥಳೀಯ ದರ್ಗಾದ ಮೌಲ್ವಿಯನ್ನು ತೆಗೆದಿದ್ದ ಪರಿಣಾಮವಾಗಿ ಶಾಸಕ ಇಕ್ಬಾಲ್ ಅನ್ಸಾರಿ ಹಾಗೂ ಬಿಜೆಪಿಯು ಒಂದಾಗಿ ಎರಡು ಕೋಮುಗಳ ಪರವಾಗಿ ನಿಂತು ಗಲಭೆಗೆ ಅವಕಾಶ ನೀಡಿದ್ದಾರೆ. ಬಾವುಟ ಕಟ್ಟುವ ವಿಚಾರವಾಗಿ ಖಾಸಗಿ ಮನೆಯ ಸ್ಥಳೀಯ ಹಿಂದೂ ಮಹಿಳೆಯಿಂದ ಸಾಕಷ್ಟು ವಿರೋಧ ವ್ಯಕ್ತವಾದ್ದರಿಂದ ಪಿಎಫ್‍ಐ ಕಾರ್ಯಕರ್ತರು ಹಲ್ಲೆಗೆ ಮುಂದಾದರು.

ಡಿ.13ರಂದು ಮೂರು ದಿನಗಳ ಕಾಲ ಕಫ್ರ್ಯೂ ಜಾರಿ ಯಾಗಿದ್ದರೂ ಸಹ ಎರಡು ಕೋಮುಗಳ ಜನತೆ ಗಲಭೆಗೆ ಮುಂದಾಗಿದ್ದಾರೆ. ಮುಸ್ಲಿಂ ಗುಂಪು `ಹಮಾರ ಶೇರ್' ಎಂದು ಕೂಗಾಡಿದ್ದಾರೆ. ಮುಸ್ಲಿಂ ಕೋಮಿನ ಪರವಾಗಿ ಶಾಸಕ ಇಕ್ಬಾಲ್ ಅನ್ಸಾರಿ ಹಾಗೂ ಬಿಜೆಪಿ ಲೋಕಸಭಾ ಸದಸ್ಯ ಕರಡಿ ಸಂಗಣ್ಣರವರು ಹಿಂದು ಕೋಮಿನ ಪರವಾಗಿ ನಿಂತು ಕಾರ್ಯಾಚರಣೆ ಇಳಿದು ಧರಣಿಯಲ್ಲಿ ಭಾಗವಹಿಸಿದ್ದಾರೆ.

144 ಸೆಕ್ಷನ್ ಜಾರಿಯಲ್ಲಿದ್ದರೂ, ಸುಮಾರು 3000ದಷ್ಟು ಹನುಮ ಮಾಲಾಧಾರಿಗಳು ದೊಣ್ಣೆ, ಮಚ್ಚು, ರಾಡು, ಕತ್ತಿ ಮಂತಾದ ಮಾರಕಾಸ್ತ್ರಗಳನ್ನು ಪ್ರದರ್ಶಿಸಿದ್ದಾರೆ. ಬಂದೋಬಸ್ತ್ ಕರ್ತವ್ಯದಲ್ಲಿದ್ದ ಎಸ್.ಪಿ./ಡಿ.ಸಿ. ರವರು ಇದ್ದರೂ ಯಾವುದೇ ಕಾನೂನು ಕ್ರಮ ತೆಗೆದುಕೊಂಡಿಲ್ಲ.

ಈ ಘಟನೆಯು ಎರಡು ಕೋಮುಗಳ ವ್ಯವಸ್ಥಿತ ಸಂಚಾಗಿದ್ದೂ ಒಂದೊಕ್ಕೊಂದು ಪೂರಕವಾಗಿ ಗಲಭೆ ನಡೆಸಲು ಮುಂದಾಗಿವೆ. 2 ಲಕ್ಷ ಜನತೆ ಇರುವ ಪ್ರದೇಶದಲ್ಲಿ 5 ಸಾವಿರಕ್ಕೂ ಹೆಚ್ಚಿನ ಕೋಮುವಾದಿಗಳು ಗಲಾಟೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರದ ಪ್ರತಿನಿಧಿಗಳಾಗಿ, ಉಸ್ತುವಾರಿ ಸಚಿವರಾದ ಬಸವರಾಜ ರಾಯರೆಡ್ಡಿ ಭೇಟಿ ನೀಡಲಿಲ್ಲ. ಡಿ.15ರಂದು ಸಿಪಿಐ(ಎಂ) ಪಕ್ಷದ ಪ್ರತಿನಿಧಿಗಳ ನಿಯೋಗ ಮಾತ್ರ ಭೇಟಿ ನೀಡಿದೆ ಮತ್ತು ಜನತೆಯೊಂದಿಗೆ ಇರುತ್ತೇವೆ ಎಂದು ಭರವಸೆ ನೀಡಿದರು.

ಸಿಪಿಐ(ಎಂ) ಪಕ್ಷ ಭೇಟಿಯ ಪರಿಣಾಮವಾಗಿ ಜನತೆಯಲ್ಲಿ ವಿಶ್ವಾಸ ಮೂಡಿದೆ ಮತ್ತು ನಂತರದಲ್ಲಿ ಮಧ್ಯರಾತ್ರಿ ಕೋಮುಗಲಭೆಗೆ ಮುಂದಾದ ಕೆಲವರನ್ನು ಬಂಧಿಸಲಾಗಿದೆ. ಇಲ್ಲಿಯೂ ಕೋಮುಗಲಭೆಗೆ ಪ್ರಚೋದಿಸಿದ ಎರಡು ಕೋಮಿನ ಮುಖಂಡರನ್ನು ಬಂಧಿಸುವ ಬದಲು ಅಮಾಯಕರನ್ನು ಬಂಧಿಸುವ ಬಗ್ಗೆ ಸ್ಥಳೀಯ ಎಸ್.ಪಿ. ಜೊತೆಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ.

ಬಳ್ಳಾರಿಯಲ್ಲಿಯೂ ಸಹ ಬಿಜೆಪಿ ಹಾಗೂ ಆರ್‍ಎಸ್‍ಎಸ್ ನವರು ಸುತ್ತಲಿನ ಎಸ್.ಟಿ. ಜನಾಂಗವನ್ನು ಸೆಳೆಯಲು ವ್ಯವಸ್ಥಿತವಾದ ಸಂಚು ರೂಪಿಸಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಚಿತ್ತವಾಡ್ಗಿಯಲ್ಲಿ ಹನುಮ ಜಯಂತಿ ಹೆಸರಿನಲ್ಲಿ ವಿವಿದೆಡೆಗಳಿಂದ ಮಾಲಾಧಾರಿಗಳನ್ನು ಕರೆಸಿ ಗಲಭೆಗೆ ಸಂಚು ರೂಪಿಸಿದರು. ಇಲ್ಲಿಯೂ ಸಹ ಗಲಭೆ ನಡೆದು ಇಬ್ಬರೂ ಮುಸ್ಲಿಂ ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ. 2 ದಿನಗಳ ಗಂಭೀರ ವಾತಾವರಣ ಉಂಟಾಗಿ ಜನತೆಯಲ್ಲಿ ಆತಂಕದ ಮನೆ ಮಾಡಿದೆ. ಇಲ್ಲಿಯೂ ಸಹ ಸಿಪಿಐ(ಎಂ) ನಿಯೋಗ ಭೇಟಿ ನೀಡಿ ಜನತೆಯಲ್ಲಿ ಸಾಂತ್ವನ ತಿಳಿಸಿ, ನಿಮ್ಮೊಂದಿಗೆ ಇರುತ್ತೇವೆಂದು ಭರವಸೆ ನೀಡಿದರು.

ಮುಂಬರುವ ವಿಧಾನಸಭಾ ಚುನಾವಣೆ ದೃಷ್ಠಿಯಲ್ಲಿ ಇಟ್ಟುಕೊಂಡು, ಜನತೆಯ ಸಮಸ್ಯೆಗಳಿಗೆ ಕಾರಣರಾಗಿರುವ ಕೇಂದ್ರ-ರಾಜ್ಯ ಸರ್ಕಾರದ ನೀತಿಗಳಿಂದ ಜನತೆಯಲ್ಲಿ ಆಕ್ರೋಶ ಏಳದಂತೆ ಕೋಮು ಗಲಭೆಗಳನ್ನು ನಡೆಸುವ ಮೂಲಕ ಬಿಜೆಪಿಯು ವ್ಯವಸ್ಥಿತವಾಗಿ ಕೆಲಸ ಮಾಡಿದೆ ಮತ್ತು ಕಾಂಗ್ರೆಸ್ ಪಕ್ಷವು ಸಹ ಕೋಮುವಾದಿಗಳ ಅಟ್ಟಹಾಸವನ್ನು ಹಿಮ್ಮೆಟ್ಟಿಸುವ ಬದಲಾಗಿ ಕೋಮುವಾದಿಗಳೊಂದಿಗೆ ಕೈಜೋಡಿಸುತ್ತಿದ್ದಾರೆ.

ಸಿಪಿಐ(ಎಂ) ನಿಯೋಗದಲ್ಲಿ ರಾಜ್ಯ ಕಾರ್ಯದರ್ಶಿಗಳಾದ ಜಿ.ವಿ.ಶ್ರೀರಾಮರೆಡ್ಡಿ, ರಾಜ್ಯ ಸಮಿತಿ ಸದಸ್ಯರಾದ ಆರ್.ಎಸ್.ಬಸವರಾಜು, ಶೇಕ್ಷಖಾದ್ರಿ, ನಾಗರಾಜ್ ಉಪಸ್ಥಿತರಿದ್ದರು.