`ನೀಟ್'ಗಿಲ್ಲ ಕನ್ನಡದಲ್ಲಿ ಅವಕಾಶ, ರಾಜ್ಯ-ಕೇಂದ್ರ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ

ಸಂಪುಟ: 
11`
ಸಂಚಿಕೆ: 
2
Sunday, 1 January 2017

ಮುಂದಿನ ವರ್ಷ ವೈದ್ಯ ಮತ್ತು ದಂತವೈದ್ಯ ಕೋರ್ಸ್ ದಾಖಲಾತಿಗೆ ನಡೆಯುವ ನೀಟ್ ಪರೀಕ್ಷೆಯಲ್ಲಿ ಕನ್ನಡ ಭಾಷೆಗೆ ಅವಕಾಶ ನೀಡದಿರುವುದನ್ನು ಖಂಡಿಸಿ ಹಾಗೂ ಸಂವಿಧಾನಿಕ ಭಾಷೆಯಲ್ಲಿ ಬರೆಯಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್‍ಎಫ್‍ಐ) ಡಿಸೆಂಬರ್ 28ರಂದು ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದ ಬಳಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಎಸ್.ಎಫ್.ಐ. ರಾಜ್ಯ ಕಾರ್ಯದರ್ಶಿ ಗುರುರಾಜ್ ದೇಸಾಯಿ ಮಾತನಾಡಿ “ರಾಜ್ಯ ಸರಕಾರ ಮತ್ತು ರಾಜ್ಯದ ಸಂಸದರ ನಿರ್ಲಕ್ಷ್ಯದಿಂದಾಗಿ ನೀಟ್ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯುವುದು ತಪ್ಪಿದಂತಾಗಿದೆ. ಇವರ ಕನ್ನಡ ವಿರೋಧಿ ನೀತಿಯನ್ನು ಖಂಡಿಸುತ್ತೇವೆ. ಮೇ ತಿಂಗಳಲ್ಲಿ ಎಲ್ಲಾ ರಾಜ್ಯಗಳ ಆರೋಗ್ಯ ಸಚಿವರ ಮತ್ತು ಸಂಸದರ ಜೊತೆಯಲ್ಲಿ ಮಾತುಕತೆ ನಡೆಸಿರುವುದಾಗಿ ಕೇಂದ್ರ ಸರಕಾರ ಹೇಳುತ್ತಿದೆ. ಆ ಮಾತುಕತೆಗೆ ರಾಜ್ಯ ಸರಕಾರ ಯಾಕೆ ಆರೋಗ್ಯ ಸಚಿವರನ್ನು ಕಳುಹಿಸಿರಲಿಲ್ಲ ಎಂಬ ಪ್ರಶ್ನೆಗೆ ಉತ್ತರ ಕೊಡಬೇಕಿದೆ.

ರಾಜ್ಯದ ಸಂಸದರೂ ಆ ಸಭೆಯಲ್ಲಿ ಭಾಗಿಯಾಗಿದ್ದು ಯಾಕೆ ಬಾಯಿ ಬಿಡಲಿಲ್ಲ? ಕರ್ನಾಟಕವನ್ನು ಪ್ರತಿನಿಧಿಸಿ ಶ್ರೀ ಅನಂತ್ ಕುಮಾರ್ ಮತ್ತು ಶ್ರೀ ಸದಾನಂದಗೌಡ ರವರು ಕೇಂದ್ರ ಸಚಿವರಾಗಿದ್ದಾರೆ. ಇವರಾದರೂ ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯಲು ಒತ್ತಡವನ್ನು ಹೇರಬಹುದಿತ್ತು. ವೈಧ್ಯಕೀಯ ಶಿಕ್ಷಣ ಇಲಾಖೆಯು ತನ್ನ ಜವಾಬ್ದಾರಿಯನ್ನು ಮರೆತಿದೆ. ಇಲಾಖೆಯ ಕಾರ್ಯದರ್ಶಿಯವರು ಕನ್ನಡ ವಿರೋಧಿ ನೀತಿಯನ್ನು ಅನುಸರಿಸಿದ್ದಾರೆ ಎಂದು ಟೀಕಿಸಿದರು.

ರಾಜ್ಯ ಮುಖಂಡರಾದ ಎಸ್.ವೆಂಕಟೇಶ್‍ರವರು ಮಾತನಾಡಿ ``ರಾಜ್ಯ ಸರಕಾರ ಮತ್ತು ರಾಜ್ಯದ ಸಂಸದರು ಮಾಡಿದ ತಪ್ಪಿಗೆ ಪೋಷಕರು ಮತ್ತು ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಕೂಡಲೇ ಸರಕಾರ ಮದ್ಯ ಪ್ರವೇಶಿಸಿ ಕನ್ನಡದಲ್ಲಿ ನೀಟ್ ಪರೀಕ್ಷೆ ಬರೆಯಲು ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದರು. ಬರುವ ವರ್ಷದಿಂದ ಸಿಇಟಿ ಪರೀಕ್ಷೆಯನ್ನು ಕನ್ನಡದಲ್ಲಿ ನಡೆಸುವುದಾಗಿ ರಾಜ್ಯ ಸರಕಾರ ಹೇಳಿರುವುದು ಸ್ವಾಗತಾರ್ಹ ಬೆಳವಣಿಗೆ. ಆದರೆ ವಿಜ್ಞಾನ ವಿಭಾಗದ ಪಠ್ಯಕ್ರಮಗಳನ್ನು ಕನ್ನಡಕ್ಕೆ ತರುವ ಯೋಜನೆ ಇನ್ನೂ ನೆನೆಗುದಿಗೆ ಬಿದ್ದಿದೆ. ಈಗಾಗಲೇ ಹಂಪಿ ವಿಶ್ವವಿಧ್ಯಾಲಯ ಕನ್ನಡಕ್ಕೆ ಅನುವಾದಿಸಿ 2012ರಲ್ಲಿಯೇ ರಾಜ್ಯ ಸರಕಾರಕ್ಕೆ ಸಲ್ಲಿಕೆ ಮಾಡಿದೆ. ಆದರೆ ರಾಜ್ಯ ಸರಕಾರ ಈ ಕುರಿತು ಇನ್ನು ಚಿಂತನೆ ನಡೆಸಿಲ್ಲ.

ಕೂಡಲೇ ಶಿಕ್ಷಣ ತಜ್ಞರ, ಪ್ರಾಂಶುಪಾಲರ, ವಿಷಯವಾರು ಉಪನ್ಯಾಸಕರ, ವಿದ್ಯಾರ್ಥಿ-ಪೋಷಕರ ಸಂಘಟನೆಗಳ ಸಭೆ ಕರೆದು ಕನ್ನಡ ಪಠ್ಯಕ್ರಮದ ಸಾಧಕ ಮತ್ತು ಬಾದಕಗಳ ಕುರಿತು ಚರ್ಚಿಸಬೇಕು ಎಂದರು.

ಪೋಷಕರ ಸಂಘಟನೆಯ ಮುಖಂಡರಾದ ಡಿ.ಚಂದ್ರಶೇಖರ್ ಮಾತನಾಡಿ “ಆರೋಗ್ಯ ಸಚಿವಾಲಯದ ಅಧಿಕೃತ ಮಾಹಿತಿ ಪ್ರಕಾರ ಅಸ್ಸಾಮಿ, ಬಂಗಾಳಿ, ಗುಜರಾತಿ, ತಮಿಳು, ಮರಾಠಿ, ತೆಲುಗು ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿದೆ. ಬದಲಾವಣೆ ತರುವುದಾಗಿ ಹೇಳುವ ಮೋದಿಯವರು ಕನ್ನಡ ಸೇರಿದಂತೆ ಇತರೆ ಅನೇಕ ಭಾಷೆಗಳನ್ನು ಸಂವಿಧಾನ ರಾಷ್ಟ್ರೀಯ ಭಾಷೆಗಳೆಂದು ಒಪ್ಪಿಕೊಂಡಿರುವುದು ನೆನಪಿಗೆ ಬಾರಲಿಲ್ಲವೆ? ಉನ್ನತ ಶಿಕ್ಷಣದ ಬಗ್ಗೆ ಕಳಕಳಿ ಇದೆ ಎಂದು ಡೋಂಗಿ ಮಾತಗಳನ್ನಾಡುವ ಪ್ರಧಾನಿಯವರು ಕನ್ನಡ ಸೇರಿದಂತೆ ಇತರೆ ಸಂವಿಧಾನಿಕ ಭಾಷೆಗಳಿಗೆ ಅವಮಾನ ಮಾಡಿರುವುದನ್ನು ಖಂಡಿಸಿದರು.

ಪ್ರತಿಭಟನೆ ನಂತರದಲ್ಲಿ ಸಹಾಯಕ ಆಯುಕ್ತರಾದ ಜಿ.ವಿ. ನಾಗರಾಜ್ ರವರನ್ನು ಭೇಟಿ ಮಾಡಿ ರಾಷ್ಟ್ರಪತಿಗಳಿಗೆ ಮನವಿಪತ್ರವನ್ನು ರವಾನಿಸಬೇಕೆಂದು ಪತ್ರವನ್ನು ಸಲ್ಲಿಸಿದರು. ಪ್ರತಿಭಟನೆಯಲ್ಲಿ ಎಸ್.ಎಫ್.ಐ ರಾಜ್ಯ ಉಪಾಧ್ಯಕ್ಷ ಬಸವರಾಜ್ ಪೂಜಾರ, ಮುಖಂಡರಾದ ಚಿಕ್ಕರಾಜು ಎಸ್, ವೇಗಾನಂದ್, ನರೇಂದ್ರ.ಬಿ, ಸಿ.ಅಮರೇಶ್, ಪೋಷಕರ ಸಂಘಟನೆಯ ಮುಖಂಡರಾದ ಶ್ರೀನಿವಾಸ್, ನರಸಿಂಹಮೂರ್ತಿ, ಗಂಗರಾಜು, ವೇಣುಗೋಪಾಲ್, ಸೇರಿದಂತೆ ಅನೇಕರಿದ್ದರು.

ಎಸ್.ಎಫ್‍ಐ ನೇತೃತ್ವದಲ್ಲಿ ಹಾವೇರಿ ಜಿಲ್ಲೆಯಲ್ಲಿ ಡಿಸೆಂಬರ್ 27ರಂದು ಸರ್ಕಾರಿ ಪಿ.ಯು. ಬಾಲಕರ ಕಾಲೇಜಿನಿಂದ ಮೆರವಣಿಗೆ ಹೊರಟು ಜಿ.ಎಚ್.ಪಟೇಲ್ ಸರ್ಕಲ್‍ನಲ್ಲಿ ಪ್ರತಿಭಟನೆ ನಡೆಸಿದರು. ಜಿಲ್ಲಾಧ್ಯಕ್ಷರಾದ ರೇಣುಕಾ ಕಹಾರ, ತಾಲ್ಲೂಕು ಕಾರ್ಯದರ್ಶಿ ಪ್ರದೀಪ ಅಕ್ಕಿವಳ್ಳಿ ಮಾತನಾಡಿದರು.

ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ಸೇರಿದಂತೆ ವಿವಿದೆಡೆ ಪ್ರತಿಭಟನೆಗಳು ನಡೆದಿದೆ.

ಪ್ರತಿಭಟನೆಯಲ್ಲಿ ತಾಲ್ಲೂಕು ಉಪಾಧ್ಯಕ್ಷ ವಿನಾಯಕ ಯಲಗಚ್ಚಿ, ಪುನೀತ್, ಬಸವರಾಜ ಮಡಿವಾಳರ ಖಲೀಮ, ರಸ್ಸುಲ್ ಬಿ, ಮಂಜುನಾಥ ಪಿ, ನಾಗರಾಜ, ಬಸವರಾಜ, ಸಮಿವುಲ್ಲಾ, ಸಂತೋಷ ಶ್ರೀನಿವಾಸ, ಮೈಲಾರಪ್ಪ, ಈರಪ್ಪ, ದೀಲಿಪ್, ಶಿವರಾಜ್, ಮನೋಜ್, ಅನಂತರಾಜ್, ಅಭಿಷೇಕ, ಮಾಲತೇಶ, ನೀಲಪ್ಪ ನೂರಾರು ಜನ ವಿಧ್ಯಾರ್ಥಿಗಳು ಭಾಗವಹಿಸಿದರು.

ಕೊಪ್ಪಳ ಜಿಲ್ಲೆಯ ಗಂಗಾವತಿ ಡಿಸೆಂಬರ್ 26ರಂದು ಎಸ್‍ಎಫ್‍ಐ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಜ್ಯ ಕಾರ್ಯದರ್ಶಿ ಗುರುರಾಜ ದೇಸಾಯಿ, ಜಿಲ್ಲಾಧ್ಯಕ್ಷರಾದ ಅಮರೇಶ್ ಕಡಗದ್, ಮುಖಂಡರಾದ ದುರಗೇಶ್ ಡಗ್ಗಿ, ಮಂಜುನಾಥ್ ಡಗ್ಗಿ, ನಾಗರಾಜ್ ಉತನೂರ್, ನಾಗರಾಜ್ ಪೂಜಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.