ತೊಗರಿ: ರೂ.7,500 ಬೆಲೆ ನಿಗದಿಗೆ ಒತ್ತಾಯ

ಸಂಪುಟ: 
11
ಸಂಚಿಕೆ: 
2
Sunday, 1 January 2017

ಪ್ರತಿ ಕ್ವಿಂಟಲ್ ತೊಗರಿಗೆ ರೂ.7,500 ಬೆಂಬಲ ಬೆಲೆ ನಿದಿಪಡಿಸಬೇಕು ಎಂಬುದು ಸೇರಿದಂತೆ ಹಲವು ನಿರ್ಣಯಗಳನ್ನು ಡಿಸೆಂಬರ್ 27ರಂದು ಕಲಬುರ್ಗಿ ಜಿಲ್ಲೆಯ ಡಾ||ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಮಂಗಳವಾರ ನಡೆದ ರಾಜ್ಯ ಮಟ್ಟದ ತೊಗರಿ ಬೆಳೆಗಾರರ ಸಮಾವೇಶದಲ್ಲಿ ಕೈಗೊಳ್ಳಲಾಯಿತು.

ಡಾ||ಎಂ.ಎಸ್.ಸ್ವಾಮಿನಾಥನ್ ವರದಿ ಶಿಫಾರಸಿನಂತೆ ಕ್ವಿಂಟಲ್ ತೊಗರಿಗೆ ರೂ.7,500 ಬೆಲೆ ನಿಗದಿಪಡಿಸುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ತೀರ್ಮಾನಿಸಲಾಯಿತು. ಆರ್ಥಿಕ ಸಲಹೆಗಾರ ಡಾ||ಅರವಿಂದ ಸುಬ್ರಮಣಿಯನ್ ಅವರ ಶಿಫಾರಸಿನ ಬಹುಭಾಗ ತಿರಸ್ಕರಿಸಬೇಕು. ತಂತ್ರಜ್ಞಾನ, ಸಂಶೋಧನೆಯ ಕುರಿತ ವಿವರಗಳನ್ನು ಗ್ರಾಮ ಪಂಚಾಯತಿ ಮಟ್ಟದಲ್ಲಿ ರೈತರಿಗೆ ನೀಡಬೇಕು. ಕೆಎಂಎಫ್ ಮಾದರಿಯಲ್ಲಿ ರೈತರನ್ನು ಒಳಗೊಂಡಂತೆ ತೊಗರಿ ಮಂಡಳಿಯನ್ನು ಪುನರ್ ರಚಿಸಬೇಕು ಎಂಬ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಹೆಚ್.ಕೆ.ಸಿ.ಸಿ.ಐ. ನ ಸಂತೋಷ್ ಲಂಗಾರ್ ರವರು ಮಾತನಾಡಿ `ಕರ್ನಾಟಕ ಹಾಲು ಮಹಾಮಂಡಲ(ಕೆಎಂಎಫ್) ಮಾದರಿಯಲ್ಲಿ ತೊಗರಿ ಮಂಡಳಿಯನ್ನು ಬಲಪಡಿಸಿದಾಗ ಮಾತ್ರ ರೈತರಿಗೆ ಅನುಕೂಲವಾಗುತ್ತದೆ' ಎಂದು ಹೇಳಿದರು.

ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‍ಎಸ್)ದ ರಾಜ್ಯಾಧ್ಯಕ್ಷರಾದ ಮಾರುತಿ ಮಾನ್ಪಡೆ ಮಾತನಾಡಿ, `ತೊಗರಿಗೆ ಬೆಂಬಲ ಬೆಲೆ ನಿಗದಿಪಡಿಸುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ಜನವರಿ ಮೊದಲ ವಾರದಲ್ಲಿ ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ರಸ್ತೆ ತಡೆ ನಡೆಸಲಾಗುವುದು. ಜನವರಿ 15ರ ನಂತರ ಎಪಿಎಂಸಿ ಬಂದ್ ಮಾಡಲಾಗುವುದು. ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಜನವರಿ 26ರ ಬಳಿಕ ನವದೆಹಲಿಯಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು' ಎಂದು ಹೇಳಿದರು. ಅಖಿಲ ಭಾರತ ಕಿಸಾನ್ ಸಭಾದ ಜಂಟಿ ಕಾರ್ಯದರ್ಶಿ ವಿಜು ಕೃಷ್ಣನ್ ಸಮಾವೇಶವನ್ನು ಉದ್ಘಾಟಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಭೀಮಸೀ ಕಲಾದಗಿ, ರಾಯಚೂರು ಕೃಷಿ ವಿಶ್ವಿವಿದ್ಯಾಲಯದ ಪ್ರಾಧ್ಯಾಪಕ ಲೋಕೇಶ್, ಕೆಪಿಆರ್‍ಎಸ್ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಎಂ.ಎಸ್.ಸಾಗರ್, ಶಾಂತಪ್ಪಾ ಪಾಟೀಲ, ಸತೀಶ ಕಾಂತಾ ಚಿತ್ತಾಪುರ, ಮಂಜುನಾಥ್ ಗೌಡ್ರು ಉಪಸ್ಥಿತರಿದ್ದರು.