ಪರಿಸರದ ನೆಪದಲ್ಲಿ ಜನತೆಯ ಎತ್ತಂಗಡಿ ಬೇಡ!

ಸಂಪುಟ: 
11
ಸಂಚಿಕೆ: 
02
Sunday, 1 January 2017

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದಲ್ಲಿ ಅರಣ್ಯ ಸಂಬಂಧಿಸಿದ ಕಾಯ್ದೆಗಳ ಹೇರಿಕೆಯಿಂದ ಜನರನ್ನು ಹೆದರಿಸಿ ಹೊರಗಟ್ಟುವ, ಕೃಷಿಯನ್ನು ನಂಬಿರುವ ಜೋಯಿಡಾ ಜನತೆಯನ್ನು ವಸತಿ ವಂಚಿತರನ್ನಾಗಿ ಮಾಡಲು ಜೋಯಿಡಾವನ್ನು ಪರಿಸರ ಸೂಕ್ಷ್ಮ ವಲಯ ಎಂದು ಆದೇಶ ಹೊರಡಿಸಿರುವುದನ್ನು ಖಂಡಿಸಿ ಡಿಸೆಂಬರ್ 27 ರಂದು ಬೃಹತ್ ಪ್ರತಿಭಟನೆ ನಡೆಯಿತು.

ಪ್ರಾಣಿಗಳಿಗೆ ತೊಂದರೆಯಾಗುತ್ತದೆ ಎಂಬ ನೆಪದಲ್ಲಿ ಸಂಜೆಯಿಂದ ಮುಂಜಾನೆವರೆಗೆ ರಸ್ತೆ ಬಂದ್ ಮಾಡಿ ನಾಗರಿಕರನ್ನು ತೊಂದರೆಗೆ ದೂಡಿದ್ದಾರೆ. ಪರಿಸರ ವಲಯವೆಂದು ಗುರುತು ಮಾಡಲು ಮುಖ್ಯ ಕಾರಣ ವನ್ಯಜೀವಿ ಕಾಯ್ದೆ, ಡಾ|| ಕಸ್ತೂರಿ ರಂಗನ್ ವರದಿ, ವಿಶ್ವ ಪರಂಪರಾ ತಾಣದಲ್ಲಿ ಗುರುತಿಸಿರುವುದು ಹಾಗೂ ಕಾಳಿ ಹುಲಿ ಯೋಜನೆಯ ರಾಷ್ಟ್ರೀಯ ಉದ್ಯಾನವನದ ವಿವಿಧ ಅರಣ್ಯ ಸಂಬಂಧಿ ಕಾಯ್ದೆಗಳಿಂದಾಗಿದೆ.

ಜನರ ಸಂರಕ್ಷಣೆಗೆ ಯಾವುದೇ ಯೋಜನೆ ತರದೆ ಅರಣ್ಯವಾಸಿಗಳ ಶೋಷಿಸುವ ಮತ್ತು ರೈತಾಪಿ ದುಡಿಯುವ ಜನರ ಬದುಕನ್ನು ಬಿಕರಿ ಮಾಡುವ ಸರ್ಕಾರದ ಧೋರಣೆ ವಿರುದ್ಧ ಜನತೆ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಸಿಪಿಐ(ಎಂ) ಒಳಗೊಂಡು ಎಲ್ಲಾ ಪಕ್ಷಗಳ ಜಂಟಿ ಹೋರಾಟ ನಡೆಯಿತು. ಸಿಪಿಐ(ಎಂ) ಪಕ್ಷದ ಪರವಾಗಿ ಜಿಲ್ಲಾ ಸಮಿತಿ ಸದಸ್ಯರಾದ ಪ್ರೇಮಾನಂದ ವೆಳಿಪ್ ಮತ್ತು ಜಿಲ್ಲಾ ಕಾರ್ಯದರ್ಶಿ ಯಮುನಾ ಗಾಂವ್ಕರ್ ಮಾತನಾಡಿದರು. ಕೆಪಿಆರ್‍ಎಸ್ ಮುಖಂಡರಾದ ರಾಜೇಶ ಗಾವಡಾ, ಡಿವೈಎಫ್‍ಐ ಜಿಲ್ಲಾ ಕಾರ್ಯದರ್ಶಿ ಡಿ.ಸ್ಯಾಮ್‍ಸನ್, ಎಸ್‍ಎಫ್‍ಐ ಜಿಲ್ಲಾ ಸಂಚಾಲಕ ಗಣೇಶ್ ಹಾಗೂ ರೈತ ಯುವಜನ ಸಂಘಟನೆಯ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

ವರದಿ : ಯಮುನಾ ಗಾಂವ್ಕರ್