ಕಾರ್ಮಿಕರ ಲಕ್ಷಾಂತರ ಕೋಟಿ ಅನುದಾನ ಕಡಿತ

Friday, 20 January 2017

ದಕ್ಷಿಣ ಕನ್ನಡ, ಜ.20: ಮಹಿಳೆಯರನ್ನು ಮಾತೆ, ದೇವತೆ ಎಂದೇಳುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಕ್ಷರ ದಾಸೋಹ ಯೋಜನೆಗೆ ಅನುದಾನ ಕಡಿತಗೊಳಿಸಿದೆ. ನೌಕರರಿಗೆ ಕನಿಷ್ಠ ಕೂಲಿ ನೀಡದೆ ಬಿಟ್ಟಿಯಾಗಿ ದುಡಿಸಿಕೊಳ್ಳುತ್ತಾ, ಮಹಿಳಾ ದ್ರೋಹಿಯಾಗಿ ವರ್ತಿಸುತ್ತಿದೆ, ಕಾರ್ಮಿಕರ ಬೇಡಿಕೆ ಈಡೇರದಿದ್ದರೆ ಜನವರಿ 31 ರಂದು ವಿಧಾನಸಭಾ ಚಲೋ ನಡೆಸಲಾಗುವುದು ಎಂದು ಸಿಐಟಿಯು ತಾಲೂಕು ಅಧ್ಯಕ್ಷ ನ್ಯಾಯವಾದಿ ಶಿವಕುಮಾರ್ ಎಸ್.ಎಂ ಎಚ್ಚರಿಕೆ ನೀಡಿದರು.

ಅವರು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ(ಸಿಐಟಿಯು) ನೇತೃತ್ವದಲ್ಲಿ ಅಖಿಲ ಪ್ರತಿಭಟನಾ ದಿನದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾ.ಪಂ ಕಛೇರಿ ಎದುರು ನಡೆದ ಧರಣಿಯನ್ನು ಉದ್ದೇಶಿಸಿ ಮಾತನಾಡಿದರು.

ಕೇಂದ್ರ ಸರ್ಕಾರ ಅಕ್ಷರ ದಾಸೋಹ ಸೇರಿದಂತೆ ಅಂಗನವಾಡಿ, ಆಶಾ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಸರ್ವ ಶಿಕ್ಷ ಅಭಿಯಾನ, ಉದ್ಯೋಗ ಖಾತರಿ ಯೋಜನೆಗಳಿಗೆ 3 ಲಕ್ಷ ಕೋಟಿ ಅನುದಾನ ಕಡಿತಗೊಳಿಸುವ ಮೂಲಕ ಜನತೆಯ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ದೂರಿದ ಅವರು ಇದು ಕೇಂದ್ರ ಸರ್ಕಾರದ ಕ್ಯಾಸ್ ಲೆಸ್ ಅಭಿಯಾನ ಎಂದು ಛೇಡಿಸಿದರು.

ಸಿಐಟಿಯು ತಾಲೂಕು ಕಾರ್ಯದರ್ಶಿ ವಸಂತ ನಡ ಮಾತನಾಡಿ ಶಿಕ್ಷಣ, ಆರೋಗ್ಯ, ಅಪೌಷ್ಠಿಕತೆ, ಗ್ರಾಮೀಣಾಭಿವೃದ್ಧಿ ಯೋಜನೆಗಳಿಗೆ ಅನುದಾನ ನೀಡದೆ ದೇಶದ ಅಭಿವೃದ್ಧಿ ಅರ್ಥಹೀನ. ಸಾವಿರಾರು ಮಕ್ಕಳಿಗೆ ಅನ್ನ ಬಡಿಸುವ ಕೈಗಳು ತಮ್ಮ ಮಕ್ಕಳ ಅನ್ನಕ್ಕಾಗಿ ಪರದಾಡುವ ಸ್ಥಿತಿಗೆ ನಮ್ಮನಾಳುವ ಸರ್ಕಾರಗಳು ನೇರ ಹೊಣೆ. ಅಭಿವೃದ್ಧಿ ಹೊಂದುತ್ತಿರುವ ನಮ್ಮ ದೇಶದಲ್ಲಿ ಮಾಸಿಕ ಒಂದು ಸಾವಿರ ರೂಪಾಯಿಗಳನ್ನು ನೀಡಿ ಗೌರವಧನದ ಹೆಸರಿನಲ್ಲಿ ದುಡಿಸುತ್ತಿರುವುದು ನಾಚಿಕೆಗೇಡು ಎಂದು ಆರೋಪಿಸಿದರು.

ಸಭೆಯನ್ನು ಉದ್ದೇಶಿಸಿ ಜನವಾದಿ ಮಹಿಳಾ ಸಂಘಟನೆಯ ನಾಯಕಿ ನ್ಯಾಯವಾದಿ ಸುಕನ್ಯಾ ಹೆಚ್, ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ ಲಲಿತಾ ಮದ್ದಡ್ಕ ಮಾತನಾಡಿದರು.

ಪ್ರತಿಭಟನಾಕಾರಿಂದ ಮನವಿ ಸ್ವೀಕರಿಸಿ ಮಾತನಾಡಿದ ತಾ.ಪಂ.ಅಧ್ಯಕ್ಷೆ ದಿವ್ಯಜ್ಯೋತಿ ನಿಮ್ಮ ಬೇಡಿಕೆಗಳ ಬಗ್ಗೆ ಸಹಾನುಭೂತಿ ಇದೆ. ಈ ಬಗ್ಗೆ ನಮ್ಮ ಪ್ರಯತ್ನಗಳನ್ನು ನಾವು ಮಾಡುವ ಮೂಲಕ ಸಹಕಾರ ನೀಡುತ್ತೇವೆ ಎಂದರು. ಈ ಸಂದರ್ಭದಲ್ಲಿ ಅಕ್ಷರ ದಾಸೋಹ ಯೋಜನೆಯ ಉಪ ನಿರ್ದೇಶಕ ಲಕ್ಷ್ಮಣ ಶೆಟ್ಟಿ , ತಾ.ಪಂ.ಮೆನೆಜರ್ ಗಣೇಶ್ ಪೂಜಾರಿ ಉಪಸ್ಥಿತರಿದ್ದರು.

ಪ್ರತಿಭಟನೆಯ ನೇತೃತ್ವವನ್ನು ಅಕ್ಷರ ದಾಸೋಹ ನೌಕರರ ಸಂಘದ ಮುಖಂಡರಾದ ಸುಮಿತ್ರಾ, ವನಿತಾ ಕುವೆಟ್ಟು , ನಯನಾ ಶೆಟ್ಟಿ ಬೆಳ್ತಂಗಡಿ, ಲೀಲಾ ಮಾವೀನಕಟ್ಟೆ, ಸರಸ್ವತಿ ಬಜಿರೆ ಸಿಐಟಿಯು ಮುಖಂಡರುಗಳಾದ ರೋಹಿಣಿ ಪೆರಾಡಿ, ಜಯರಾಂ ಮಯ್ಯ, ಲೋಕೇಶ್ ಕುದ್ಯಾಡಿ , ಕರ್ನಾಟಕ ಪ್ರಾಂತ ಕೃಷಿಕೂಲಿ ಕಾರ್ಮಿಕ ಸಂಘದ ಅನಿಲ್ ಎಂ ವಹಿಸಿದ್ದರು.

 

 

ವರದಿ : ಸುಕನ್ಯಾ ಹೆಬ್ಬಾರ್