ಹಗೆ ತೀರಿಸುವ ಹೊಲಸು ರಾಜಕೀಯ ಪ್ರೇರಿತ

ಸಂಪುಟ: 
11
ಸಂಚಿಕೆ: 
01
Sunday, 25 December 2016

ಎನ್‍ಜಿಒಗಳ ಎಫ್‍ಸಿಆರ್‍ಎ ನೋಂದಣಿ ರದ್ದು :  ಪ್ರಧಾನ ಮಂತ್ರಿಗಳಿಗೆ ಸಂಸತ್ ಸದಸ್ಯರ ಪತ್ರ

ಸರ್ಕಾರೇತರ ಸಂಘಟನೆಗಳು, ಅಂದರೆ ಎನ್‍ಜಿಒಗಳು ವಿದೇಶಗಳಿಂದ ವಂತಿಗೆ ಪಡೆಯಬೇಕಾದರೆ ವಿದೇಶಿ ವಂತಿಗೆ ನಿಯಂತ್ರಣ ಕಾಯ್ದೆಯ (ಎಫ್‍ಸಿಆರ್‍ಎ)ಅಡಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಈ ರೀತಿ ನೋಂದಣಿ ಮಾಡಿಕೊಂಡು ವಿದೇಶಿ ವಂತಿಗೆಗಳನ್ನು ಪಡೆಯುತ್ತಿದ್ದ ಕೆಲವು ಎನ್‍ಜಿಒಗಳ ಪರವಾನಿಗೆಗಳನ್ನು ಈ ಬಾರಿ ನವೀಕರಿಸಿದ ಮರುದಿನವೇ ಅವುಗಳ ಎಫ್‍ಸಿಆರ್‍ಎ ನೋದಂಣಿಗಳನ್ನು ರದ್ದು ಮಾಡಲಾಗಿದೆ. ಈ ಬಗ್ಗೆ ದೇಶವ್ಯಾಪಿಯಾಗಿ ಪ್ರತಿಭಟನೆಗಳು ವ್ಯಕ್ತವಾಗಿವೆ. 

ಈ ರೀತಿ ರದ್ದು ಮಾಡಿರುವ ಪಟ್ಟಿಯಲ್ಲಿ ಗುಜರಾತಿನ 2002ರ ಹತ್ಯಾಕಾಂಡಗಳಲ್ಲಿ ನೊಂದವರಿಗೆ ನ್ಯಾಯ ಕೊಡಿಸಲು ಹೋರಾಡುತ್ತಿರುವ ತೀಸ್ತಾ ಸೆಟಲ್‍ವಾಡ್‍ರವರ ಸಂಘಟನೆ,  ಕೋಮುವಾದದ ವಿರುದ್ಧ ಸದಾ ದನಿಯೆತ್ತುವ ಸಬ್‍ರಂಗ್, ಸರಕಾರದ ಕ್ರಮಗಳ ವಿಮರ್ಶೆ ಮಾಡುವ ಲಾಯರ್ಸ್ ಕಲೆಕ್ಟಿವ್  ಮಂತಾದವುಗಳ ಹೆಸರು ಕಾಣಬರುತ್ತದೆ. ಸರಕಾರದ ಈ ಕ್ರಮವನ್ನು ಖಂಡಿಸಿ ವಿವಿಧ ಪಕ್ಷಗಳ ಸಂಸತ್ ಸದಸ್ಯರು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದು ಇದನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಈ ಸಂಘನಟೆಗಳ ಪರವಾನಿಗೆಗಳನ್ನು ನವೀಕರಿಸಲಾಯಿತು ಎಂದರೆ ಅವು ಎಫ್‍ಸಿಆರ್‍ಎ ನೋಂದಣಿಗೆ ಬೇಕಾದ ಶರತ್ತುಗಳನ್ನು ಪೂರೈಸಿವೆ ಎಂದೇ ಅರ್ಥ. ಆದ್ದರಿಂದ ಅವುಗಳ ನೋಂದಣಿಯನ್ನು ರದ್ದು  ಮಾಡಿರುವುದರ ಹಿಂದೆ ಹಗೆತೀರಿಸುವ ರಾಜಕೀಯದ, ಅವನ್ನು ಬಲಿ ಹಾಕುವ ಮತ್ತು ಅವು ಬಾಯಿ ಮುಚ್ಚಿಕೊಳ್ಳುವಂತೆ ಬೆದರಿಸುವ ಉದ್ದೇಶ ಇದೆ ಎಂದು ಈ ಸಂಸತ್ ಸದಸ್ಯರು ಪ್ರಧಾನ ಮಂತ್ರಿಗಳಿಗೆ ಹೇಳಿದ್ದಾರೆ. 

ತದ್ವಿರುದ್ಧವಾಗಿ, ವಿದೇಶಗಳಿಂದ ಹೇರಳವಾಗಿ ಧನ ಸಂಗ್ರಹಿಸಿ ಅವನ್ನು ದ್ವೇಷಪೂರ್ಣ ಅಜೆಂಡಾದ ಸಾಧನೆಗೆ ಬಳಸಿಕೊಳ್ಳುತ್ತಿರುವ ಆರೆಸ್ಸೆಸ್‍ಗೆ ಸೇರಿದ ಹಲವು ಸಂಘಟನೆಗಳಿವೆ. ಅವುಗಳ ಬಗ್ಗೆ ಸರಕಾರ ಏನೂ ತನಿಖೆ ನಡೆಸುತ್ತಿಲ್ಲ ಎಂಬುದನ್ನೂ ಪ್ರಧಾನ ಮಂತ್ರಿಗಳ ಗಮನಕ್ಕೆ ತಂದಿರುವ ಈ ಪತ್ರ ಈ ರೀತಿ ಸಂಘಟನೆಗಳನ್ನು ಆರಿಸಿ- ಆರಿಸಿ ಅವುಗಳ ಮೇಲೆ ಗುರಿಯಿಡುವುದು ಜುಗುಪ್ಸೆ ತರುವಂತದ್ದು ಮತ್ತು ಪ್ರಜಾಪ್ರಭುತ್ವ-ವಿರೋಧಿ ಕ್ರಮ ಎಂದು ಸ್ಪಷ್ಟಮಾತುಗಳಲ್ಲಿ ಹೇಳಿದೆ. 

ತೀಸ್ತಾ ಸೆಟಲ್‍ವಾಡ್ ನಡೆಸುತ್ತಿರುವ ಸಬ್‍ರಂಗ್ ಟ್ರಸ್ಟ್ ಮತ್ತಿತರ ಸಂಘಟನೆಗಳು, ಅನ್ಹದ್,ಲಾಯರ್ಸ್ ಕಲೆಕ್ಟಿವ್, ಗ್ರೀನ್‍ಪೀಸ್ ಇಂಡಿಯಾ, ನವಸರ್ಜನ್ ಟ್ರಸ್ಟ್, ಆರ್‍ಡಿಆರ್‍ಸಿ ಮುಂತಾದ ಸಂಘಟನೆಗಳ ನೋಂದಣಿಯನ್ನು ರದ್ದು ಮಾಡಿರುವುದನ್ನು ಹಿಂತೆಗೆದುಕೊಳ್ಳಬೇಕು ಮತ್ತು ಅವುಗಳ ಪರವಾನಿಗೆಗಳನ್ನು ಮತ್ತೆ ಊರ್ಜಿತಗೊಳಿಸಬೇಕು ಎಂದು  ಈ ಸಂಸತ್ ಸದಸ್ಯರು ಪ್ರಧಾನ ಮತ್ರಿಗಳಿಗೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ. 

ಸಿಪಿಐ(ಎಂ)ನ ಸೀತಾರಾಮ್ ಯೆಚೂರಿ ಮತ್ತು ಪಿ.ಕುಣಾಕರನ್, ಸಿಪಿಐನ ಡಿ.ರಾಜ, ಕಾಂಗ್ರೆಸ್‍ನ ಅಹಮದ್ ಪಟೇಲ್ ಮತ್ತು ರೇಣುಕಾ ಚೌಧುರಿ, ಆರ್‍ಜೆಡಿಯ ಪ್ರೇಮಚಂದ್ ಗುಪ್ತ, ಎನ್‍ಸಿಪಿಯ ಪ್ರಫುಲ್ಲ ಪಟೇಲ್ ಮತ್ತು ಸುಪ್ರಿಯಾ ಸುಳೆ, ಸಮಾಜವಾದಿ ಪಕ್ಷದ ನೀರಜ್ ಶೇಖರ್ ಮತ್ತಿತರರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ.