ಆರ್‍ಬಿಐನ ತಿಕ್ಕಲು ಆದೇಶ: ಅನಾಣ್ಯೀಕರಣದ ಅಧ್ವಾನವನ್ನು ಮುಚ್ಚಿಕೊಳ್ಳಲು ಜನಗಳ ಮೇಲೆಯೇ ಗೂಬೆ ಕೂರಿಸುವ ಪ್ರಯತ್ನ-ಸಿಪಿಐ(ಎಂ) ಪೊಲಿಟ್‍ಬ್ಯುರೊ

ಸಂಪುಟ: 
11
ಸಂಚಿಕೆ: 
01
Sunday, 25 December 2016

ಹಳೆಯ ನೋಟುಗಳನ್ನು ಕೊಡಲು ಡಿಸೆಂಬರ್ 30ರ ವರೆಗೂ ಸಮಯ ಇದೆ, ಜನ ಆತುರ ಪಡಬೇಕಾಗಿಲ್ಲ ಎಂದ ಸರಕಾರ ಮತ್ತು ರಿಝರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‍ಬಿಐ)  ಡಿಸೆಂಬರ್ 19ರಂದು 5000ರೂ.ಗಿಂತ ಹೆಚ್ಚು ಹಳೆಯ ನೋಟುಗಳನ್ನು ಡಿಪಾಸಿಟ್ ಮಾಡಲು ಮತ್ತಷ್ಟು ಮಿತಿಗಳನ್ನು ಹೇರಿತು. ಆರ್‍ಬಿಐನ ಈ ಕ್ರಮ ತಿಕ್ಕಲುತನದ್ದಾಗಿದ್ದು ಜನ-ವಿರೋಧಿಯಾಗಿದೆ ಎಂದಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ ಈ ಆದೇಶವನ್ನು ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿತು.

ನಿಜ ಹೇಳಬೇಕೆಂದರೆ, ಚಲಾವಣೆಯಿಂದ ಹಿಂತೆಗೆದುಕೊಂಡ ಸುಮಾರಾಗಿ ಎಲ್ಲ ಹಣವೂ ಬ್ಯಾಂಕಿಂಗ್ ವ್ಯವಸ್ಥೆಗೆ ಹಿಂದೆ ಬಂದಿದ್ದು ಕಪ್ಪುಹಣ ನಿರ್ಮೂಲನದ ದಾವೆ ಸುಳ್ಳು ಎಂಬುದು ಬಯಲಾಗಿರುವುದರಿಂದಾಗಿ ಇಂತಹ ಆದೇಶಗಳು ಬರುತ್ತಿವೆ ಎಂದಿರುವ ಪೊಲಿಟ್‍ಬ್ಯುರೊ ಈಗ ಹಾಕಿರುವ ಮಿತಿಗಳನ್ನೆಲ್ಲ ತೆಗೆದು ಪರ್ಯಾಯ ವ್ಯವಸ್ಥೆ ಆಗುವ ವರೆಗೆ ಹಳೆಯ ನೋಟುಗಳ ಚಲಾವಣೆಗೆ ಅವಕಾಶ ಕೊಡಬೇಕು ಎಂದು ಮತ್ತೆ ಆಗ್ರಹಿಸಿದೆ.

ಅನಾಣ್ಯೀಕರಣದಿಂದ ಜನಸಾಮಾನ್ಯರ ಮೇಲೆ, ಅದರಲ್ಲೂ ರೈತರ ಮೇಲೆ ವಿಪರೀತ ಸಂಕಟಗಳನ್ನು ಹೇರಿರುವಾಗ ಅವುಗಳಿಗೆ ಪರಿಹಾರ ಒದಗಿಸುವ ಬದಲು ಕೇಂದ್ರ ಸರಕಾರ ಇಂತಹ ಮಿತಿಗಳನ್ನು ಮತ್ತೆ-ಮತ್ತೆ ಹಾಕಿ ಅವರ ಪರಿಸ್ಥಿತಿಯನ್ನು ಇನ್ನಷ್ಟು ಶೋಚನೀಯಗೊಳಿಸುತ್ತಿದೆ, ಹಳೆಯ ನೋಟುಗಳನ್ನು ಕೊಡಲು ಸಾಕಷ್ಟು ಸಮಯ ಇದೆ, ಆತುರ ಬೇಡ ಎಂದ ಸರಕಾರ, ಈ ಮೊದಲೇ ಏಕೆ ಕೊಟ್ಟಿಲ್ಲ ಎಂದು ಈ ಆದೇಶದಮೂಲಕ ಪೀಡಿಸ ಹೊರಟಿತ್ತು.

ಅನಾಣ್ಯೀಕರಣದ ಜಾರಿಯಲ್ಲಿ ಮಾಡಿಕೊಂಡಿರುವ ಎಡವಟ್ಟುಗಳು ಮತ್ತು ಕಪ್ಪುಹಣ ಮತ್ತು ಭ್ರಷ್ಟಾಚಾರದ ನಿರ್ಮೂಲನೆಯ ಹೆಸರಲ್ಲಿ ಆಗಿರುವ ಅಧ್ವಾನವನ್ನು ಮುಚ್ಚಿಕೊಳ್ಳಲು ಸಾಮಾನ್ಯ ಜನಗಳು ದೊಡ್ಡ ಪ್ರಮಾಣದಲ್ಲಿ ಕಪ್ಪುಹಣವನ್ನು ಬಿಳಿಮಾಡುತ್ತಿದ್ದಾರೆ ಎಂಬಂತೆ ಬಿಂಬಿಸಲು ಪ್ರಯತ್ನಿಸುತ್ತಿದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಖೇದ ವ್ಯಕ್ತಪಡಿಸಿದೆ. ಆರ್ ಬಿಐನ ಇತ್ತೀಚಿನ ಈ ಆದೇಶಕ್ಕೆ ದೇಶವ್ಯಾಪಿ ವಿರೋಧ ವ್ಯಕ್ತಪಟ್ಟಮೇಲೆ ಈ ಆದೇಶವನ್ನು ಮರುದಿನವೇ ಕೊನೆಗೂ ‘ಮಾರ್ಪಡಿಸ’ಲಾಯಿತು ಎಂಬುದು ಅನಾಣ್ಯೀಕರಣ ಎಂಬ ಅಧ್ವಾನದ ಬಗ್ಗೆ ಸಿಪಿಐ(ಎಂ)ನ ಅಭಿಪ್ರಾಯವನ್ನು ಸಮರ್ಥಿಸುತ್ತದೆ.