ಬದುಕಿನ ಮೇಲೆ ಪ್ರಹಾರ ಮಾಡುತ್ತಿರುವ ಅನಾಣ್ಯೀಕರಣ ಜನವರಿ 3 ರಂದು ದೇಶವ್ಯಾಪಿ ಪ್ರತಿಭಟನೆ: ಸಿಐಟಿಯು ಕರೆ

ಸಂಪುಟ: 
11
ಸಂಚಿಕೆ: 
01
Sunday, 25 December 2016

ಜನವರಿ 3ರಂದು ದೇಶದ ದುಡಿಯುವ ಜನತೆ ಕೇಂದ್ರದ ಬಿಜೆಪಿ ನೇತೃತ್ವದ ಸರಕಾರ  ಅನಾಣ್ಯೀಕರಣ ಎಂದು ಹರಿಯ ಬಿಟ್ಟಿರುವ ಕ್ರಮಗಳ ವಿರುದ್ಧ ತಮ್ಮ ಪ್ರತಿಭಟನೆಯ ದನಿ ಎತ್ತಬೇಕು ಎಂದು ಡಿಸೆಂಬರ್ 19-20ರಂದು ಸಭೆ ಸೇರಿದ ಸಿಐಟಿಯು ಕಾರ್ಯದರ್ಶಿ ಮಂಡಳಿ ಕರೆ ನೀಡಿದೆ. ಸರಕಾರದ ಕ್ರಮಗಳು ಕಾರ್ಮಿಕರ ಮೇಲೆ, ಅದರಲ್ಲೂ ಅಸಂಘಟಿತ ವಲಯದ ಕಾರ್ಮಿಕರು, ರೈತರು, ಸಣ್ಣ ವ್ಯಾಪಾರ ನಡೆಸುತ್ತಿರುವವರು, ಬೀದಿ ಬದಿ ವ್ಯಾಪಾರಿಗಳು ಮತ್ತು ಮತ್ತಿತರರ ಮೇಲೆ ವಿಪರೀತ ಸಂಕಟಗಳನ್ನು ಹೇರಿವೆ. ಕೂಡಲೇ ಸರಕಾರ ಈ ಸಂಕಟಗಳಿಂದ ಪರಿಹಾರ ಒದಗಿಸಲು ನಗದಿನ ಲಭ್ಯತೆಯನ್ನು ಹೆಚ್ಚಿಸಬೇಕು ಮತ್ತು ಎಲ್ಲ ಕಾರ್ಮಿಕರಿಗೆ ಸಂಬಳ ಸಿಗುವಂತೆ ಮಾಡಬೇಕು ಎಂದು ಸಿಐಟಿಯು ಆಗ್ರಹಿಸಿದೆ.

ದೇಶಾದ್ಯಂತ ಸಾವಿರಾರು ಸಣ್ಣ ಮತ್ತು ಮಧ್ಯಮ ಗಾತ್ರದ ಘಟಕಗಳು ಮುಚ್ಚಿವೆ, ವ್ಯವಹಾರಗಳು ನಿಂತು ಹೋಗಿವೆ. ಲಕ್ಷಾಂತರ ಕಾಟ್ರಾಕ್ಟ್, ಕ್ಯಾಶುವಲ್ ಕಾರ್ಮಿಕರು, ನಿಗದಿತ ಅವಧಿಯ ನೌಕರರು, ಟ್ರೈನೀಗಳು, ಅಪ್ರೆಂಟಿಸ್‍ಗಳು ಮುಂತಾದವರನ್ನು ಸಂಬಳ ಕೊಡದೇ ವಜಾ ಮಾಡಲಾಗಿದೆ. ಕಟ್ಟಡ ಕೆಲಸ, ಇಟ್ಟಿಗೆ ಗೂಡುಗಳು ಮತ್ತು ಪ್ಲಾಂಟೇಶನ್‍ಗಳಲ್ಲಿ ಕೆಲಸಮಾಡುತ್ತಿದ್ದ ವಲಸೆ ಕಾರ್ಮಿಕರು ಕೆಲಸ ಸಿಗದ್ದರಿಂದಾಗಿ ತಮ್ಮ ಊರುಗಳಿಗೆ ಮರಳಬೇಕಾಗಿ ಬಂದಿದೆ. ಸಾರಿಗೆ, ವಾಹನಗಳಿಗೆ ಪೂರಕವಾದ ಉತ್ಪಾದನೆ, ಪವರ್‍ಲೂಮ್ ಮುಂತಾದವುಗಳನ್ನು ಈ ಕ್ರಮಗಳು ಗಂಭೀರವಾಗಿ ತಟ್ಟಿವೆ. ಕಾರ್ಮಿಕರಿಗೆ ಸಂಬಳ ಕೊಟ್ಟಿಲ್ಲ. ಹಲವು ಕಡೆಗಳಲ್ಲಿ ಮಾಲಕರು ಹಳೆಯ ನೋಟುಗಳ ವಿನಿಮಯದ ವೆಚ್ಚಗಳನ್ನು ಹಂಚಿಕೊಳ್ಳುವಂತೆ ಕಾರ್ಮಿಕರನ್ನು ಬಲವಂತ ಮಾಡುತ್ತಿದ್ದಾರೆ ಎಂದು ಸಿಐಟಿಯು ಕಾರ್ಯದರ್ಶಿ ಮಂಡಳಿ ಹೇಳಿದೆ.

ಇದು ಕಪ್ಪು ಹಣವನ್ನು ದಮನ ಮಾಡುವ ಕ್ರಮ ಎಂದಿದ್ದ ಸರಕಾರ ಈಗ ‘ನಗದುರಹಿತ ಆರ್ಥಿಕ’ದ ಮಾತಾಡಲಾರಂಭಿಸಿದೆ. 35% ಹಳ್ಳಿಗಳಲ್ಲಿ ಬ್ಯಾಂಕ್ ಸೌಲಭ್ಯಗಳೇ ಇಲ್ಲದಿರುವಾಗ, 6ಲಕ್ಷ ಹಳ್ಳಿಗಳ ಪೈಕಿ ಕೇವಲ 9000 ಹಳ್ಳಿಗಳನ್ನು ಅಂತರ್ಜಾಲ ತಲುಪಿರುವಾಗ ‘ನಗದುರಹಿತ’ದ ಬಗ್ಗೆ ಮಾತಾಡುವುದು ಹಾಸ್ಯಾಸ್ಪದ ಎಂದಿರುವ ಸಿಐಟಿಯು ಬಹುಪಾಲು ಅಸಂಘಟಿತ ವಲಯದ ಕಾರ್ಮಿಕರು ಮತ್ತು ದಿನಗೂಲಿಗಳು ಸರಿಯಾದ ಬ್ಯಾಂಕ್ ಖಾತೆಗಳನ್ನು ಹೊಂದಿಲ್ಲದಿರುವಾಗ ಬ್ಯಾಂಕುಗಳ ಮೂಲಕ ಸಂಬಳ ಪಾವತಿ ಕಡ್ಡಾಯ ಮಾಡುತ್ತಿರುವುದು ಮಾಲಕರ ಸಬಲೀಕರಣವಾಗುತ್ತದೆ ಎಂದು ಹೇಳಿದೆ. ಇದನ್ನು ವಸತಿ ಪ್ರದೆಶಗಳ ಬಳಿ ಬ್ಯಾಂಕು ಶಾಖೆಗಳನ್ನು ತೆರೆದು ಎಲ್ಲ ಕಾರ್ಮಿಕರು ಖಾತೆಗಳನ್ನು ಹೊಂದಿದಾಗಲಷ್ಟೇ, ಅದೂ ಕಾರ್ಮಿಕರ ಒಪ್ಪಿಗೆಯೊಂದಿಗೆ ಮಾತ್ರ ಇದು ಸಾಧ್ಯ ಎಂದು ಸಿಐಟಿಯು ಹೇಳಿದೆ.

ಪ್ರತಿದಿನ ಸರಕಾರ ಬ್ಯಾಂಕುಗಳಿಂದ ಹಣ ಹಿಂತೆಗೆದುಕೊಳ್ಳುವುದರ ಮೇಲೆ ಹೊಸ-ಹೊಸ ಮಿತಿಗಳನ್ನು ಹಾಕುತ್ತಿದೆ. ಇದು ಜನಗಳಿಂದ ಹಣವನ್ನು ಸೆಳೆದುಕೊಂಡು ಕಾರ್ಪೊರೇಟ್‍ಗಳಿಗೆ ಮತ್ತು ದೊಡ್ಡ ಬಂಡವಳಿಗರಿಗೆ ಅಗ್ಗದಲ್ಲಿ ಹಣಕಾಸು ಒದಗಿಸುವ ಆಶಯವನ್ನು ಮಾತ್ರ ಹೊಂದಿರುವಂತಿದೆ ಎಂದು ಅಭಿಪ್ರಾಯ ಪಟ್ಟಿರುವ ಸಿಐಟಿಯು ದೇಶಾದ್ಯಂತ ದೊಡ್ಡ ಸಂಖ್ಯೆಯಲ್ಲಿ ಈ ಪ್ರತಿಭಟನೆಗಳಲ್ಲಿ ಭಾಗವಹಿಸಬೇಕು ಎಂದು ಕಾರ್ಮಿಕರಿಗೆ ಕರೆ ನೀಡಿದೆ.