ಜನವರಿ 17: ರೋಹಿತ್ ವೆಮುಲ ನೆನಪಿನಲ್ಲಿ ‘ದಲಿತ ಹಕ್ಕುಗಳ ದಿನಾಚರಣೆ’

ಸಂಪುಟ: 
11
ಸಂಚಿಕೆ: 
01
Sunday, 25 December 2016

ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೆಮುಲ ಆತ್ಮಹತ್ಯೆಯ ಘಟನೆ ಸಂಭವಿಸಿ ಈ ಜನವರಿ 17ಕ್ಕೆ ಒಂದು ವರ್ಷವಾಗುತ್ತದೆ. ದೇಶಾದ್ಯಂತ ಪ್ರತಿಭಟನೆಗಳು ನಡೆದರೂ ಆತನ ಸಾವಿಗೆ ಕಾರಣರಾದವರು ಇನ್ನೂ ಯಾವುದೇ ಶಿಕ್ಷೆಯಿಲ್ಲದೆ ಅಡ್ಡಾಡಿಕೊಂಡು ಇದ್ದಾರೆ, ಪ್ರಮುಖ ಆಪಾದಿತ ವಿವಿಯ ಉಪಕುಲಪತಿ ಪೀಠದ ಸೌಲಭ್ಯಗಳನ್ನೆಲ್ಲ ಅನುಭವಿಸಿಕಕೊಂಡು ಆರಾಮವಾಗಿದ್ದಾರೆ. ಯಾವುದೇ ಕ್ರಮಗಳನ್ನು ಕೈಗೊಳ್ಳುವ ಬದಲು ಮಾನವ ಸಂಪನ್ಮೂಲ ಮಂತ್ರಾಲಯ ರೋಹಿತ್‍ನ ಜಾತಿಯ ಬಗ್ಗೆ ಮಾಹಿತಿಗಳನ್ನು ಅಗೆದು ತೆಗೆಯುವ ಕಾನೂನುಬಾಹಿರ, ಅಸಂವಿಧಾನಿಕ ಪ್ರಯತ್ನ ನಡೆಸಿದೆ ಎಂದು ಖೇದ ವ್ಯಕ್ತಪಡಿಸಿರುವ ದಲಿತ ಶೋಷಣ ಮುಕ್ತಿ ಮಂಚ್ ಮತ್ತಿತರ ಒಟ್ಟು ಏಳು ಸಂಘಟನೆಗಳು ರೋಹಿತ್ ವೆಮುಲಾ ಮೊದಲ ಮರಣ ವಾರ್ಷಿಕದಂದು ‘ದಲಿತ ಹಕ್ಕುಗಳ ದಿನಾಚರಣೆ’ ನಡೆಸಲು ಕರೆ ನೀಡಿವೆ.

ರೋಹಿತ್ ಸಾವಿಗೆ ಕಾರಣರಾದವರನ್ನು ತಕ್ಷಣವೇ ಬಂಧಿಸಿ ಆತನ ಕುಟುಂಬಕಕ್ಕೆ ನ್ಯಾಯ ಒದಗಿಸಬೇಕು, ಎಲ್ಲ ಶೈಕ್ಷಣಿಕ ಸಂಸ್ಥೆಗಳಲ್ಲಿ ಸಾಮಾಜಿಕವಾಗಿ ಹಿಂದುಳಿದ ವಿÀಭಾಗಗಳ ವಿದ್ಯಾರ್ಥಿಗಳಿಗೆ ರಕ್ಷಣೆ ಕೊಡಲು ರೋಹಿತ್ ಕಾಯ್ದೆ ತರಬೇಕು ಎಂದು ಈ ಸಂಘಟನೆಗಳು ಆಗ್ರಹಿಸಿವೆ. ಜನವರಿ 17ರಂದು ರಾಜ್ಯ ಮತ್ತು ಜಿಲ್ಲಾ ಮಟ್ಟಗಳಲ್ಲಿ ರೋಹಿತ್ ವೆಮುಲಾ ಸ್ಮರಣ  ಸಭೆಗಳನ್ನು ನಡೆಸಬೇಕು ಎಂದು ಎಲ್ಲ ಪ್ರಜಾಪ್ರಭುತ್ವವಾದಿ ಮತ್ತು ದಲಿತ ಸಂಘಟನೆಗಳಿಗೆ ಮನವಿ ಮಾಡಿಕೊಂಡಿರುವ ಜಂಟಿ ಮನವಿಗೆ ಭಾರತ ರಿಪಬ್ಲಿಕನ್ ಪಕ್ಷದ ಪ್ರಕಾಶ ಅಂಬೇಡ್ಕರ್, ದಲಿತ ಶೋಷಣ ಮುಕ್ತಿ ಮಂಚ್‍ನ ವಿ.ಶ್ರೀನಿವಾಸ ರಾವ್, ಭಾರತೀಯ ಮಜ್ದೂರ್ ಯೂನಿಯನ್‍ನ ವಿ.ಎಸ್‍ನಿರ್ಮಲ್, ಅಖಿಲ ಭಾರತ ಕೃಷಿ ಕಾರ್ಮಿಕರ ಸಂಘದ ತಿರುನಾವಕ್ಕರಸು, ದಲಿತ ಹಕ್ಕುಗಳ ರಾಷ್ಟ್ರೀಯ ಒಕ್ಕೂಟದ ಜಿ.ಮಲ್ಲೇಶ್, ರಾಷ್ಟ್ರೀಯ ದಲಿತ ಮಾನವ ಅಧಿಕಾರ್ ಆಂದೋಲನ್‍ದ ಪೌಲ್ ದಿವಾಕರ್ ಹಾಗೂ ಅಖಿಲ ಭಾರತ ದಲಿತ ಹಕ್ಕುಗಳ ಒಕ್ಕೂಟದ ಕೆ. ಆನಂದ ರಾವ್ ಸಹಿ ಹಾಕಿದ್ದಾರೆ.

-------------------------------------------------------------------------------------------------------------------------------------------------------------------

 

ಡಿಸೆಂಬರ್ 15ರಂದು ದಿಲ್ಲಿಯಲ್ಲಿ ಅರಣ್ಯ ಹಕ್ಕುಗಳ ಕಾಯ್ದೆ ಅಂಗೀಕಾರದ ಹತ್ತನೇ ವಾರ್ಷಿಕೋತ್ಸವದ ಆಚರಣೆ ನಡೆಸಲಾಯಿತು. ಬೃಂದಾ ಕಾರಟ್, ಹನ್ನನ್ ಮೊಲ್ಲ, ಜಿತೇಂದ್ರ ಚೌಧುರಿ ಮುಂತಾದ ವಿವಿಧ ಸಂಘಟನೆಗಳ ಮುಖಂಡರು ಮಾತಾಡಿದರು. ಎಡಪಕ್ಷಗಳು ಮತ್ತಿತರ ಸಂಘಟನೆಗಳ ಹಲವು ವರ್ಷಗಳ ಹೋರಾಟಸ ಫಲವಾಗಿ ಬಂದ ಈ ಕಾನೂನನ್ನು ದುರ್ಬಲಗೊಳಿಸಲು ಪ್ರಸಕ್ತ ಸರಕಾರ ಪ್ರಯತ್ನಿಸುತ್ತಿದೆ ಎಂಬ ಸಂಗತಿಯತ್ತ ಈ ಸಭೆ ಗಮನ ಸೆಳೆಯಿತು.