`ಸ್ಟೂಡೆಂಟ್' ಸಾಮಾಜಿಕ ಉದ್ದೇಶದ ರಾಜಕೀಯ ಸಿನೆಮಾದ ಮಾದರಿ

ಸಂಪುಟ: 
01
ಸಂಚಿಕೆ: 
11
date: 
Sunday, 25 December 2016

`ಸ್ಟೂಡೆಂಟ್' ಕಝಕಸ್ತಾನದ ಪ್ರಮುಖ ಚಿತ್ರ ನಿರ್ದೇಶಕನಾದ ದರಷಾನ್ ಒಮಿರ್ಬಾಯೇವ್ ದಾಸ್ತೊವೆಸ್ಕಿಯ `ಅಪರಾಧ ಮತ್ತು ಶಿಕ್ಷೆ' ಕಾದಂಬರಿಯ ಚೌಕಟ್ಟನ್ನು ಬಳಸಿಕೊಂಡು ನಿರ್ಮಿಸಿದ ಗಂಭೀರ ಚಿತ್ರ. 2006 ರ ತನ್ನ ಕಿರುಚಿತ್ರ `ಅಬೌಟ್ ಲೌವ್' ಗಾಗಿ ಚೆಕಾಫ್ನ ಕತೆ, ಮತ್ತು `ಶೂಗ' ಚಿತ್ರಕ್ಕಾಗಿ ತಾಲ್ಸ್ತಾಯ್ನ ಪ್ರಸಿದ್ಧ ಕೃತಿ `ಆನ್ನ ಕರೆನಿನ, ಕಾದಂಬರಿ ಗಳನ್ನು ಆಧರಿಸಿದ ದರಷಾನ್ ಆಧುನಿಕ ರಷ್ಯಾದ ಸಮಕಾಲೀನ ಸಮಾಜವನ್ನು ತನ್ನ ಕಥಾವಸ್ತುವಾಗಿ ಆರಿಸಿಕೊಳ್ಳುತ್ತಾನೆ. ರಷ್ಯನ್ ಸಾಹಿತ್ಯದ ಮೇರು ಲೇಖಕರ ಸಾಹಿತ್ಯದ ಮರುಸೃಷ್ಟಿ ಅಥವಾ ಚರ್ಚೆ ಅವನ ಉದ್ದೇಶವಲ್ಲ. ಪ್ರಸ್ತುತ ಸಮಾಜದ ವಿಷಮತೆಗಳನ್ನು ಆ ಕೃತಿಗಳ ಮುಖೇನ ಅನ್ವೇಷಿಸಬಹುದಾದ  ರಾಜಕೀಯ ದೃಷ್ಟಿಕೋನ ಅವನ ಚಿತ್ರಗಳ ಕೇಂದ್ರಬಿಂದು.

ತಾಲ್ಸ್ತಾಯ್ ಮತ್ತು ದಾಸ್ತೊವೆಸ್ಕಿ ರಾಜಶಾಹಿ ಮತ್ತು ಬಂಡವಾಳಶಾಹಿಯ ಸಾಮಾಜಿಕ ಕ್ರೌರ್ಯ ಮತ್ತು ಸಿರಿವಂತಿಕೆಯ ಅನೈತಿಕ ನೆಲೆಗಟ್ಟನ್ನು ಪ್ರಶ್ನಿಸುವ ಮೂಲಕ ಧಾರ್ಮಿಕ ಮತ್ತು ನೈತಿಕ ನೆಲೆಯ ಮಾನವೀಯ ಸಮಾಜದ ನಿರ್ಮಾಣಕ್ಕಾಗಿ ಹಂಬಲಿಸುತ್ತಾರೆ. ಆದರೆ  ವರ್ಗಹಿತಾಸಕ್ತಿಗಳ  ನಿರಂತರ ಘರ್ಷಣೆಗೆ ಕಾರಣವಾದ  ತಾರತಮ್ಯಯುಕ್ತ ರಾಜಕೀಯ, ಇಡೀ ಸಮಾಜವನ್ನು, ಅದರ ಧಾರ್ಮಿಕ ಮತ್ತು ನೈತಿಕ ಮೌಲ್ಯಗಳ ನೆಲೆಗಟ್ಟನ್ನೇ ನಿಯಂತ್ರಿಸುತ್ತದೆ ಎಂಬುದನ್ನು ಅವರು ಲಕ್ಷಿಸುವುದಿಲ್ಲ. ಮಾತ್ರವಲ್ಲ ಬಡತನ-ಸಿರಿತನಗಳ ಸಾಮಾಜಿಕತೆಯನ್ನು  ಬದಲಿಸಲು ವೈಜ್ಞಾನಿಕ ಸಮಾಜವಾದೀ ರಾಜಕೀಯ ಅನಿವಾರ್ಯವೆಂಬುದನ್ನೂ ಬಂಡವಾಳಶಾಹಿಗೆ ಸಮಾಜವಾದವೇ ಏಕೈಕ ಪರ್ಯಾಯವೆಂಬುದನ್ನೂ ಈ ಇಬ್ಬರು ಮಹಾನ್ ಲೇಖಕರು ಅವರ ಕಾಲಘಟ್ಟದಲ್ಲಿ ಕಾಣಲಾರದವರಾಗಿದ್ದರು.

`ಅಪರಾಧ ಮತ್ತು ಶಿಕ್ಷೆ'

`ಅಪರಾಧ ಮತ್ತು ಶಿಕ್ಷೆ' ಕಾದಂಬರಿಯ ಪ್ರಧಾನ ಪಾತ್ರ, ಬಡ ವಿದ್ಯಾರ್ಥಿ, ರಾಸ್ಕೋಲ್ನಿಕೋವ್, ಬಡವರನ್ನು ಸಿರಿವಂತರ ಕ್ರೌರ್ಯದಿಂದ ಬಿಡುಗಡೆಗೊಳಿಸುವ ತನ್ನ ಕನಸನ್ನು, ತನ್ನ ತೀವ್ರಗಾಮಿ ಆಲೋಚನೆಗಳನ್ನು ಸಾಕಾರಗೊಳಿಸುವ ಮೊದಲ ಪರೀಕ್ಷಾರ್ಥ ಕ್ರಿಯೆಯಾಗಿ ಲೇವಾದೇವಿಗಾರ್ತಿಯಾದ ವೃದ್ಧೆಯನ್ನು ಕೊಲೆಮಾಡುತ್ತಾನೆ. ಅಲ್ಲಿಗೆ ಅನಿರೀಕ್ಷಿತವಾಗಿ ಪ್ರವೇಶಿಸುವ ಮತ್ತೊಬ್ಬ ಹೆಂಗಸು-ವೃದ್ಧೆಯ ತಂಗಿಯನ್ನು, ಅಕಾರಣವಾಗಿ, ಅನಿವಾರ್ಯವಾಗಿ ಸಾಯಿಸುತ್ತಾನೆ. ಪೋಲೀಸರಿಗೆ ಪತ್ತೆಯಾಗದಂತೆ ತನ್ನಲ್ಲೇ ಕಾಪಾಡಿಕೊಳ್ಳಬೇಕಾದ ಆ ಕ್ರಿಯೆಯಿಂದಾಗಿ ಅವನು ನಿರಂತರವಾಗಿ ಅನುಭವಿಸುವ ತೀವ್ರ ತಳಮಳ, ನೈತಿಕ ಸರಿ-ತಪ್ಪುಗಳ ತಾಕಲಾಟ, ಪಾಪಪ್ರಜ್ಞೆಗಳಿಂದಾಗಿ ಅವನ ಕ್ರಾಂತಿಕಾರಕತೆ ಅಪರಾಧ ಪ್ರಜ್ಞೆಯಾಗಿ ಪರಿವರ್ತಿತನೆಗೊಂಡು ಅವನು ಸುಪ್ತ ರೀತಿಗಳಲ್ಲಿ ಶಿಕ್ಷೆಗಾಗಿ ಹಂಬಲಿಸುವಂತೆ ಮಾಡುತ್ತವೆ. ದೂರದ ಊರಿನಲ್ಲಿ ತನ್ನನ್ನೇ ನಂಬಿಕೊಂಡಿರುವ ತಾಯಿ ಮತ್ತು ತಂಗಿಗೆ ಅವನ ಬಗೆಗಿರುವ ಗಾಢ ಮಮತೆ ಅವನ ನೈತಿಕ ಪ್ರಜ್ಞೆಯನ್ನು ಗಾಢಗೊಳಿಸುತ್ತವೆ. ತಾನು ಪ್ರೀತಿಸುವ ಹುಡುಗಿಯ ಒತ್ತಾಸೆ, ಅಪರಾಧವನ್ನು ಬಯಲಿಗೆಳೆಯಲು ನಿಯೋಜಿತನಾದ ಪತ್ತೆ ದಾರ ಮಾನಸಿಕವಾಗಿ ಹಾಕುವ ಒತ್ತಡಗಳು ರಾಸ್ಖೋಲ್ನಿಕೋವ್ ಕೊನೆಗೂ ತಪ್ಪೊಪ್ಪಿಕೊಂಡು ಜೈಲಿಗೆ ಹೋಗುವಂತಾಗುತ್ತದೆ. ಬಡವರ ಪ್ರತಿನಿಧಿಯಾಗಿ ಸಿರಿವಂತರ ವಿರುದ್ಧದ ಅವನ ಹೋರಾಟ ಸಿರಿತನದ ಕ್ರೌರ್ಯದಿಂದ ಬಡತನವನ್ನು ಪಾರುಮಾಡುವ ಬದಲು ತನ್ನ ಪಾಪಪ್ರಜ್ಞೆಯಿಂದ ತಾನೇ ಬಿಡುಗಡೆ ಪಡೆಯಲು ನಡೆಸುವ ವ್ಯಕ್ತಿಗತ ಸಂಘರ್ಷವಾಗಿ ಮುಗಿಯುತ್ತದೆ.

ಅತ್ಯಂತ ಸಂವೇದನಾಶೀಲನಾದ ರಾಸ್ಖೋಲ್ನಿಕೋವ್, ಮಾನವೀಯ ಸಂವೇದನೆಯ ಎಲ್ಲ ಮನುಷ್ಯರ ಪ್ರತಿನಿಧಿಯೆಂಬಂತೆ, ಅವನ ವ್ಯಕ್ತಿಗತ ನೈತಿಕ ಹೋರಾಟವೇ ಮನುಕುಲದ ಬಿಡುಗಡೆಯ ಹೋರಾಟವೆಂಬಂತೆ ದಾಸ್ತೋವೆಸ್ಕಿ ಕಾದಂಬರಿಯನ್ನು ಹೆಣೆದಿದ್ದಾರೆ. ಎಲ್ಲ ದೇಶ-ಕಾಲಗಳ ಮಧ್ಯಮವರ್ಗಗಳ ಸಂವೇದನಾಶೀಲ ಜನರ ಅಮೂರ್ತ ಮಾನವೀಯತೆಯ ಕನಸಿಗೆ ಅತ್ಯಂತ ಹತ್ತಿರವಾದ ಈ ಕಾದಂಬರಿಯ `ಧಾರ್ಮಿಕ ಸಮಾಜವಾದೀ' ಕನಸು ಸಹಜವಾಗೇ ಸಾಹಿತ್ಯಪ್ರಿಯರನ್ನು ಆಕರ್ಷಿಸುತ್ತದೆ.

ಸಾಹಿತ್ಯ, ಸಿನೆಮಾ ಮುಂತಾದ ಕಲಾಪ್ರಕಾರಗಳಲ್ಲಿ ಬಡತನ ಮತ್ತು ತತ್ಸಂಬಂಧಿತ ನರಳಿಕೆಗಳ ಚಿತ್ರಣಕ್ಕೆ ಮಹತ್ವದ ಸ್ಥಾನವಿದೆ. ಇದನ್ನು ಬಡತನ-ನರಳಿಕೆಗಳ ಕಲಾತ್ಮಕತೆ ಎನ್ನಬಹುದು. ಹಾಗೆಯೇ ಬೌದ್ಧಿಕ ಮತ್ತು ತಾತ್ವಿಕ ಚರ್ಚೆ, ವಿವಾದ, ವಾಗ್ವಾದ ಮತ್ತು ಚಿಂತನೆಗಳಲ್ಲೂ ಬಡತನ-ಸಿರಿತನಗಳ ವಿಷಮತೆ ಮತ್ತು ಕ್ರೌರ್ಯಗಳ ಮೂಲದ ಬಗ್ಗೆ, ಪರಿಹಾರ, ಬಿಡುಗಡೆಗಳ ಬಗ್ಗೆ ವ್ಯಾಪಕ ಅವಕಾಶವಿದೆ. ಇವೆಲ್ಲವೂ ಸಾಹಿತ್ಯ, ಸಿನೆಮಾ ಮತ್ತು ಇತರ ಕಲಾಪ್ರಕಾರಗಳ ಒಳಗೆ ಮತ್ತು ಆಚೆಯೂ ರೋಚಕವಾದ, ಮಹತ್ವದ ಸ್ಥಾನವನ್ನು ಪಡೆದುಕೊಂಡಿವೆ. ಇದನ್ನು ಬಡತನ-ನರಳಿಕೆಗಳ ಬೌದ್ಧಿಕ-ತಾತ್ವಿಕ ಸೌಂದರ್ಯವೆನ್ನಬಹುದು. ಭೂಪ್ರದೇಶದ ಸ್ವಾಮ್ಯಕ್ಕಾಗಿ ನಡೆಯುವ ಆಕ್ರಮಣ, ಸಾಹಸಯಾನಗಳು, ವ್ಯಾಪಾರ, ಯುದ್ಧಗಳು ಮತ್ತು ಅವನ್ನು ಪ್ರತಿರೋಧಿಸುವ ದಂಗೆ, ಹೋರಾಟ ಮತ್ತು ಕ್ರಾಂತಿಗಳು ಸಹ ಕಥಾನಕಗಳಾಗಿ ಆಕರ್ಷಕವಾಗಿ, ಸೌಂದರ್ಯಾತ್ಮಕವಾಗಿ ಕಾಣಿಸುತ್ತವೆ. ಆದರೆ ನೈಜ, ಭೌತಿಕ ನೆಲೆಗಳಲ್ಲಿ ಹಿಂಸಾತ್ಮಕವಾಗಿಯೂ, ಅಮಾನವೀಯವಾಗಿಯೂ,  ಮನುಷ್ಯರ ಕೊಳಕು ಮುಖಗಳಾಗಿಯೂ ಕಾಣಿಸುತ್ತವೆ.

ಆದರೆ ಮೇಲುವರ್ಗದ ಹಿತಾಸಕ್ತಿಗಳನ್ನು ಸಮರ್ಥಿಸುವಾಗ ಆಕ್ರಮಣ, ಯುದ್ಧ, ವ್ಯಾಪಾರಗಳ ಕಥಾನಕಗಳು ಸೌಂದರ್ಯಾತ್ಮಕವಾಗಿಯೂ, ಅವಗಳನ್ನು ಪ್ರತಿರೋಧಿಸುವ ಕೆಳವರ್ಗಗಳ ದಂಗೆ, ಹೋರಾಟ ಮತ್ತು ಕ್ರಾಂತಿಗಳ ಕಥಾನಕಗಳು ಭೀಭತ್ಸವಾಗಿಯೂ ಕಾಣಿಸುತ್ತವೆ. ಹೀಗಾಗಿ ಸಾಹಿತ್ಯ-ಸಿನೆಮಾ ಮುಂತಾದ ಕಲಾಪ್ರಕಾರಗಳು ಮಧ್ಯಮವರ್ಗಗಳು ಬಹುವಾಗಿ ಇಷ್ಟಪಡುವ ಬಡತನ-ನರಳಿಕೆಗಳ ಬೌದ್ಧಿಕತೆ-ತಾತ್ವಿಕತೆಗಳನ್ನು, ಭಾವನಾತ್ಮಕತೆಗೆ ಒತ್ತುಕೊಡುವ ರೀತಿಯಲ್ಲಿ ಸೌಂದರ್ಯಾತ್ಮವಾಗಿ ಚಿತ್ರಿಸುತ್ತವೆಯೇ ಹೊರತು ಅಪ್ರಿಯವಾದ ಅವುಗಳ ರಾಜಕೀಯ ಮುಖಗಳನ್ನು ಚಿತ್ರಿಸಲು ಬಯಸುವುದಿಲ್ಲ. ದಾಸ್ತೋವೆಸ್ಕಿಯ ಅತ್ಯಂತ ಪರಿಣಾಮಕಾರೀ ಕಾದಂಬರಿ `ಅಪರಾಧ ಮತ್ತು ಶಿಕ್ಷೆ' ಗಿರುವ ಮಿತಿಯೂ ಇಂಥದ್ದೆ.

ಸೋವಿಯತ್ ಒಕ್ಕೂಟದ ಪತನವಾದಮೇಲೆ ಜಾಗತಿಕವಾಗಿ ಮೇಲುಗೈ ಪಡೆದ ಬಂಡವಾಳಶಾಹಿ-ಸಾಮ್ರಾಜ್ಯಶಾಹಿಗಳು ವಿಶ್ವದೆಲ್ಲೆಡೆ ಜಾರಿಗೆ ತಂದ ನವ ಉದಾರವಾದೀ ಆರ್ಥಿಕತೆ ಮತ್ತು ರಾಜಕೀಯಗಳು ವಿಶ್ವದ ಉಳಿದ ದೇಶಗಳಂತೆ ಕಝಕಸ್ತಾನದ ಸಮಾಜವನ್ನೂ ಧ್ರುವೀಕರಣಗೊಳಿಸಿದವು. ಸದಾ ಬಡತನ, ಜೀವನಾಗತ್ಯ ಸೌಲಭ್ಯಗಳ ಅಭಾವದಲ್ಲಿ ನರಳುವ ಜನಸಾಮಾನ್ಯರು ಒಂದುಕಡೆ, ಸಹಜೀವಿಗಳ ನರಳಿಕೆಗಳಿಗೆ ಕುರುಡಾಗಿ ಐಷಾರಾಮ ಜೀವನದಲ್ಲಿ ಮುಳುಗಿದ ಮೇಲುವರ್ಗದ ಜನ ಮತ್ತೊಂದು ಕಡೆ. ಈ ಪ್ರಾದೇಶಿಕ ಹಿನ್ನೆಲೆಯಲ್ಲಿ ದರಷಾನ್ ಒಮಿರ್ಬಾಯೇವ್ ಚಿತ್ರಿಸಿರುವ `ಸ್ಟೂಡೆಂಟ್ `ದಾಸ್ತೋವೆಸ್ಕಿಯ ಕಾದಂಬರಿಯ ಕಥಾಚೌಕಟ್ಟನ್ನು ಮಾತ್ರ ಬಳಸಿಕೊಂಡು ಸಮಕಾಲೀನ ಜಗತ್ತಿನ ಬಡತನ-ನರಳಿಕೆಗಳ ರಾಜಕೀಯದತ್ತ ನೋಡುಗರ ಗಮನ ಹರಿಯುವಂತೆ ಮಾಡುತ್ತದೆ.

ಮೇಲು ನೋಟಕ್ಕೆ `ಸ್ಟೂಡೆಂಟ್' ಕಝಕಸ್ತಾನದ ಸಮಾಜಕ್ಕ್ಕೆ ಮಾತ್ರ ನಿರ್ದಿಷ್ಟವಾಗಿ, ದಾಸ್ತೊವೆಸ್ಕಿಯ ಕಾದಂಬರಿಯ ಮೂಲಕ ರಷ್ಯನ್ ಸಮಾಜದ ಚಿತ್ರಣಕ್ಕೆ ಸೀಮಿತವಾಗಿರುವಂತೆ ಕಂಡರೂ ಸಿನಿಮಾ ಭಾಷೆಗಿರುವ ಸಾರ್ವಕಾಲಿಕತೆ ಮತ್ತು ಸಾರ್ವದೇಶೀಯತೆ, ಜಾಗತೀಕರಣಗೊಂಡಿರುವ ಬಂಡವಾಳಶಾಹೀ ರಾಜಕೀಯವನ್ನು ಅದರ ಎಲ್ಲ ಆಧುನಿಕ ರೂಕ್ಷತೆಯೊಂದಿಗೆ ಜಗತ್ತಿನ ಎಲ್ಲ ದೇಶ-ಭಾಷೆಗಳ ನೋಡುಗರಿಗೆ ಮುಟ್ಟುವಲ್ಲಿ ಮಹತ್ವದ ಪಾತ್ರ ವಹಿಸಿವೆ.

`ಸ್ಟೂಡೆಂಟ್' ಕಥಾಹಂದರ

ಸದಾ ಮಂಕುಹಿಡಿದ ಆವರಣಗಳಲ್ಲಿ, ಅಂತರ್ಮುಖಿಯಾಗಿ, ಸಂತೋಷರಹಿತ ಮುಖ ಹೊತ್ತು, ಬಹುತೇಕವಾಗಿ ಒಂಟಿಯಾಗಿ ಓಡಾಡುವ, ವ್ಯವಹರಿಸುವ ತತ್ವಶಾಸ್ತ್ರದ ಅನಾಮಧೇಯ ವಿದ್ಯಾರ್ಥಿಯ ದೃಷ್ಟಿಗೆ ಬೀಳುವ ಬಿಡಿ ಬಿಡಿ ಘಟನೆಗಳಾಗಿ ಇಡೀ ಸಿನಿಮಾ ಚಿತ್ರಿತವಾಗಿದೆ. ಸಿನಿಮಾ ಷೂಟಿಂಗ್ ಸಂದರ್ಭದಲ್ಲಿ ಒಬ್ಬ ಬಡ ಮನುಷ್ಯನೊಬ್ಬ ಶ್ರೀಮಂತ ಮಹಿಳೆಯ ಬಟ್ಟೆಯ ಮೇಲೆ ಪಾನೀಯ ಚೆಲ್ಲಿದನೆಂಬ ಕಾರಣಕ್ಕಾಗಿ ಆಕೆಯ ಅಂಗರಕ್ಷಕ ಗೂಂಡಾಗಳು ಹಿಡಿದು ಬಡಿಯುವುದನ್ನು ಅನಾಮಧೇಯನಾದ ವಿದ್ಯಾರ್ಥಿ ಮೂಕನಾಗಿ ನೋಡುತ್ತಾನೆ.

ಸುಖವನ್ನು ಗುಂಪಿನಲ್ಲಿ ಪಡೆಯಲಾಗುವುದಿಲ್ಲ, ಅದನ್ನು ವ್ಯಕ್ತಿಗತವಾಗೇ ಪಡೆದುಕೊಳ್ಳಬೇಕು. ಪ್ರಾಣಿ ಪ್ರಪಂಚಕ್ಕೆ ಅನ್ವಯವಾಗುವ ಡಾರ್ವಿನ್ನನ ಬಲಿಷ್ಠರಿಗೆ ಮಾತ್ರ ಬದುಕುವ ಹಕ್ಕು ಎಂಬ ವಿವರಣೆಯನ್ನು ಮನುಷ್ಯ ಸಮಾಜಕ್ಕೆ ಅನ್ವಯಿಸುವ ಬಂಡವಾಳವಾದದಲ್ಲಿ ಬಲಿಷ್ಠರೇ ಸಾಮಾಜಿಕ ನ್ಯಾಯವನ್ನು ನಿರ್ಧರಿಸುತ್ತಾರೆ ಎಂದು ತರಗತಿಯಲ್ಲಿ ಪಾಠ ಮಾಡುವ ಶಿಕ್ಷಕನನ್ನು, ಹಾಗಿದ್ದರೆ ಬಲಿಷ್ಠರಾದ ಬಲ್ಲಿದರನ್ನು ಕೊಲ್ಲುವುದೂ ಸಹ ತಪ್ಪಲ್ಲ ಅಲ್ಲವೇ ಎಂದು ವಿದ್ಯಾರ್ಥಿಯೊಬ್ಬ ಪ್ರಶ್ನಿಸುತ್ತಾನೆ. ವಿದ್ಯಾರ್ಥಿಯು ಈ ಆಲೋಚನೆಯನ್ನು ಕೃತಿಗಿಳಿಸಲು ನಿರ್ಧರಿಸುತ್ತಾನೆ. ತನ್ನ ಸಾಮಥ್ರ್ಯವನ್ನು ಪರೀಕ್ಷಿಸಲು ಮುಂದಾಗುತ್ತಾನೆ.
ಅಂಗಡಿಯವನಿಗೆ ಕೊಡಲು ಹಣವಿಲ್ಲದೆ ಪಿಂಚಿಣಿದಾರ ಹೆಂಗಸು ಅಸಹಾಯಕಳಾಗಿದ್ದಾಳೆ.

ಬಡತನದಿಂದ ನರಳುವ ಕವಿಯೊಬ್ಬನ ಪರಿಚಯವಾಗಿ ಅವನು ಸ್ಟೂಡೆಂಟನ್ನು ತನ್ನ ಮನೆಗೆ ಕರೆದೊಯ್ಯುತ್ತಾನೆ. ಈಗ ವಿಶ್ವದಾದ್ಯಂತ ಪರಿಚಿತವಾಗಿರುವ, ಆಬಾಲವೃದ್ಧರಾದಿಯಾಗಿ ಎಲ್ಲರಿಗೂ ಪ್ರಿಯ ಮನರಂಜನೆಯಾಗಿರುವ ಟಿವಿ ಕಾರ್ಯಕ್ರಮಗಳಾದ ಪ್ರಾಣಿಪ್ರಪಂಚದಲ್ಲಿ ಬಲಿಷ್ಠ ಪ್ರಾಣಿಗಳು ದುರ್ಬಲ ಪ್ರಾಣಿಗಳನ್ನು ಅಟ್ಟಿಸಿಕೊಂಡು ಹೋಗಿ ಕೊಲ್ಲುವ ದೃಶ್ಯಾವಳಿಗಳು ಎದುರಿನ ಟಿವಿಯಲ್ಲಿ ಕಾಣಿಸುತ್ತವೆ.

ಸ್ವತಹ ಬಾಡಿಗೆ ಕೊಡಲು ಹಣವಿಲ್ಲದ ವಿದ್ಯಾರ್ಥಿ ತನ್ನ ಜೇಬಿನಲ್ಲಿದ್ದ ಹಣವನ್ನು ಕಡುಬಡವನಾದ ಕವಿಯ ಮನೆಯ ಮೇಜಿನ ಮೇಲಿಟ್ಟು ಹೊರಬರುತ್ತಾನೆ. ಗತಿಸಿದ ತನ್ನ ತಂದೆಯ ಹಳೆಯ ವಾಚನ್ನು ಮಾರಿ ಒಂದು ಪಿಸ್ತೂಲನ್ನು ಕೊಳ್ಳುತ್ತಾನೆ.

ಅಂಗಡಿಯಲ್ಲಿ ಒಂಟಿಯಾಗಿ ಕುಳಿತ ಮಾಲೀಕನನ್ನು ಬ್ರೆಡ್ ಕೊಳ್ಳುವ ನೆಪದಲ್ಲಿ ಸಮೀಪಿಸುವ ವಿದ್ಯಾರ್ಥಿಯು ಪಿಸ್ತೂಲಿನಿಂದ ಹೊಡೆದು ಸಾಯಿಸಿ, ಗಲ್ಲಾಪೆಟ್ಟಿಗೆಯಿಂದ ಹಣವನ್ನು ತೆಗೆದುಕೊಳ್ಳುತ್ತಾನೆ. ಅವನ ಉದ್ದೇಶ ದರೋಡೆ ಮಾಡುವುದಲ್ಲ. ಹೇಡಿಯಂತೆ ಮೂಕವಾಗಿ ಯೋಚಿಸುವ ಬದಲು ತನ್ನ ಯೋಚನೆಯನ್ನು ಕಾರ್ಯಗತಗೊಳಿಸುವ ಸಾಮಥ್ರ್ಯ ತನಗಿದೆಯೆ ಎಂದು ಪರೀಕ್ಷಿಸುವುದು. ಹೊರಬರುವಾಗ ಅಕಸ್ಮಾತ್ ಎದುರಾಗುವ ಯುವತಿ-ಗಿರಾಕಿಯನ್ನೂ ತನ್ನ ಕೃತ್ಯಕ್ಕೆ ಸಾಕ್ಷಿಯಾಬಾರದೆನ್ನುವ ಕಾರಣಕ್ಕಾಗಿ ಗುಂಡಿಕ್ಕಿ ಸಾಯಿಸಿ, ಅವಳ ಕಾರಿನ ಮೇಲೆ ಬ್ರೆಡ್ಡಿನ ಪೊಟ್ಟಣವನ್ನು ಬಿಟ್ಟು ಹೋಗುತ್ತಾನೆ.

ಸಾಮಾಜಿಕ ಅಸಮಾನತೆಯ ಬಗ್ಗೆ ಮಾತನಾಡುವ ಸಹಪಾಠಿಗೆ ಮಾತನಾಡುವುದಷ್ಟೆ ಅಲ್ಲ ಎಂದು ಹೇಳಿ ಹೊರಬರುತ್ತಾನೆ. ಸೇತುವೆಯ ಕೆಳಗೆ ಕಾರನ್ನು ನೀರಿನಿಂದಾಚೆಗೆ ಎಳೆಯಲಾರದೆ ಕಷ್ಟ ಪಡುವ ಬಡಕಲು ಕತ್ತೆಯನ್ನು ಕಾರಿನ ಮಾಲೀಕ ಗಾಲ್ಫ್ ದಾಂಡಿನಿಂದ ಹೊಡೆದು ಸಾಯಿಸುವುದನ್ನು ಸೇತುವೆಯ ಮೇಲೆ ನಿಂತು ನೋಡುತ್ತಾನೆ. ಯುವತಿಯ ಚೀಲವನ್ನು ಆಕೆಯ ಕೈಯಿಂದ ಕಿತ್ತುಕೊಂಡು ಓಡುವ ಯುವಕರನ್ನು ಬೆನ್ನಟ್ಟಿ ಅವರಿಂದ ಹೊಡೆತ ತಿಂದರೂ ಬಿಡದೆ ಚೀಲವನ್ನು ಮರಳಿ ಪಡೆದು ಯುವತಿಗೆ ಒಪ್ಪಿಸುತ್ತಾನೆ.

ಸಿನಿಮಾ ಷೂಟಿಂಗ್ ಒಂದರ ಸಿಬ್ಬಂದಿಯಲ್ಲಿ ವಿದ್ಯಾರ್ಥಿಯೂ ಸೇರಿದ್ದಾನೆ. ಸ್ಥಳದಲ್ಲಿ ನಿರ್ದೇಶಕನನ್ನು ಒಬ್ಬ ಯುವ ಪತ್ರಕರ್ತೆ ದು ಯುವಜನರ ಪತ್ರಿಕೆಗಾಗಿ ಸಂದರ್ಶಿಸುತ್ತಾಳೆ. ಚಿತ್ರ ನಿರ್ದೇಶಕ ದರಷಾ?ನ್ ಒಮಿರ್ಬಾಯೇವ್. ನಿಮ್ಮ ಇತ್ತೀಚಿನ ಚಿತ್ರದ ಚಿತ್ರಕತೆ ಯಾಕೆ ಬರಡಾಗಿದೆ? ಎಂದು ಆಕೆ ಕೇಳುತ್ತಾಳೆ. ಚಿತ್ರ ಇರುವುದು ಬೇಜಾರು ಕಳೆಯಲು ಎಂದು ನಿರ್ದೇಶಕ ಉತ್ತರಿಸುತ್ತಾನೆ. ತಾನು ಕೊಲೆಮಾಡಿದ ವ್ಯಕ್ತಿಗಳ ಸ್ಥಳಕ್ಕೆ ಭೇಟಿಕೊಟ್ಟಾಗ ಅದೇ ಸ್ಥಳದಲ್ಲಿ ಅಂಗಡಿಯನ್ನು ಪ್ರಾರಂಭಿಸಲು ತಯಾರಿ ನಡೆಸುವ ವ್ಯಕ್ತಿಗಳಿಗೆ ಕೊಲೆಯಾದ ಅಂಗಡಿಯವನ ಬಗ್ಗೆ ಯಾವ ಮಾಹಿತಿಯಾಗಲಿ, ಆಸಕ್ತಿಯಾಗಲಿ, ಭಾವನೆಗಳಾಗಲಿ ಇಲ್ಲದಿರುವುದನ್ನು ವಿದ್ಯಾರ್ಥಿಯು ಗಮನಿಸುತ್ತಾನೆ.

ಕನಸಿನಲ್ಲಿ ತನ್ನ ತಾಯಿ-ತಂಗಿಯನ್ನು ನೋಡುವ ವಿದ್ಯಾರ್ಥಿ, ತನ್ನನ್ನು ನೋಡಲೆಂದು ಊರಿನಿಂದ ಬಂದ ತನ್ನ ಪ್ರೀತಿಪಾತ್ರ ತಾಯಿ-ತಂಗಿ ತನ್ನ ರೂಮಿನಲ್ಲಿ ಕುಳಿತು ಮಾತನಾಡುತ್ತಿದ್ದರೆ ವಿದ್ಯಾರ್ಥಿಯು ಹಾಸಿಗೆಯ ಮೇಲೆ ಮಂಕಾಗಿ ಮಲಗಿರುತ್ತಾನೆ. ಯುವತಿಯೊಂದಿಗೆ ತಾನು ಕೊಲೆ ಮಾಡಿದ ಸಂಗತಿಯನ್ನು ಹೇಳುತ್ತಾನೆ. ಮುಚ್ಚಿದ ಬಾಗಿಲಿನ ಹಿಂದೆ ನಿಂತ ಪುಟ್ಟ ಹುಡುಗಿ ಬಾಗಿಲಿಗೆ ಕಿವಿಕೊಟ್ಟು ಕೇಳಿಸಿಕೊಳ್ಳತ್ತಾಳೆ. ಸಿರಿವಂತರು ತಮ್ಮ ಸುಖಕ್ಕಾಗಿ ಎಷ್ಟು ಜನ ಬಡವರು ಸತ್ತರೂ ಲೆಕ್ಕಿಸುವುದಿಲ್ಲ. ಅವರಿಗೆ ಭಾವನೆಗಳಿಲ್ಲ. ಬಡವರಿಗೆ ಭಾವನೆಗಳಿವೆ. ಆದರೆ ಅವರು ಭಾವೋದ್ವೇಗಕ್ಕೆ ಸಿಕ್ಕಿ ತಪ್ಪೊಪ್ಪಿಕೊಂಡುಬಿಡುತ್ತಾರೆ. ಅದೇ ಅವರ ದೌರ್ಬಲ್ಯ ಎಂದು ವಿದ್ಯಾರ್ಥಿಯು ಪೋಲೀಸರಿಗೆ ಶರಣಾಗಿ ಜೈಲು ಸೇರುತ್ತಾನೆ.

`ಸ್ಟೂಡೆಂಟ್' ಅರ್ಥಪೂರ್ಣತೆ

ದಾಸ್ತೋವೆಸ್ಕಿಯ ಕಾದಂಬರಿಯಲ್ಲಿರುವ ಕಥಾನಾಯಕನ ಅಪರಾಧ, ನೈತಿಕ ತಾಕಲಾಟದ ಮೂಲಕ ಅವನನ್ನು ಪಶ್ಚಾತ್ತಾಪಕ್ಕೆ ಕೊಂಡೊಯ್ಯುತ್ತದೆ. ಆದರೆ `ಸ್ಟೂಡೆಂಟ್' ಸಿನೆಮಾದ ಕಥಾನಾಯಕನ ಅಪರಾಧ ಹಾಗಾಗದೆ ಅವನು ಪ್ರತಿನಿಧಿಸುವ ಬಡವರ ಭಾವನೆಗಳತ್ತ ಬೊಟ್ಟು ಮಾಡುತ್ತದೆ. ಬಡವರು ತಮ್ಮ ಭಾವನೆಗಳ ಮಾನವೀಯ ಗುಣದಿಂದಾಗಿಯೇ ದುರ್ಬಲರಾಗಿ ಸಿರಿವಂತರ ನಿರ್ಭಾವದ ಅಮಾನವೀಯತೆಯ ಮುಂದೆ ಸೋಲುತ್ತಾರೆ ಎಂಬ ದುರಂತ ಸ್ಟೂಡೆಂಟ್ ಸಿನೆಮಾ ಹೊಳೆಸುವ ಬಹಳ ಅರ್ಥಪೂರ್ಣವಾದ ಅಂಶ. `ಮಾನವೀಯತೆ, ದಯಾಪರತೆ, ಸಹೋದರತೆ, ಪ್ರಜಾತಾಂತ್ರಿಕತೆ ಮುಂತಾದ ಜನಪರ ಗುಣಗಳು ಮನೆಮಾಡಿರುವುದು ಬಂಡವಳಿಗರಲ್ಲೇ, ಸಮಾಜವಾದಿಗಳಲ್ಲಿ ಅಲ್ಲ' ಎಂಬ ಜನಜನಿತ ತಪ್ಪುಗ್ರಹಿಕೆಯನ್ನು ಸಿನೆಮಾ ಬಯಲು ಮಾಡುತ್ತದೆ.

ಎಡಪಂಥೀಯರು, ಸಮಾಜವಾದಿಗಳು, ಪ್ರಗತಿಪರರು ನಿಜವಾದ ಅರ್ಥದಲ್ಲಿ ಮಾನವೀಯತೆ ಮತ್ತು ಪ್ರಜಾತಾಂತ್ರಿಕತೆಯಲ್ಲಿ ನಂಬಿಕೆ ಇಡುವುದರಿಂದಲೇ ಸಹಕಾರ, ಸಹಜೀವನ, ಸಂಪತ್ತಿನ ನ್ಯಾಯವಾದ ಹಂಚಿಕೆಯ ಮೂಲಕ ಕೂಡಿಬಾಳುವ ಸಾಮಾಜಿಕ ಜೀವನವನ್ನು, ಅದನ್ನು ಸಾಧ್ಯಮಾಡುವ ಸಮಾಜವಾದೀ ರಾಜಕೀಯ ದೃಷ್ಟಿಕೋನವನ್ನು ಅವರು ಪ್ರತಿಪಾದಿಸುತ್ತಾರೆ. ಪ್ರಾಣಿ ಸಹಜ ಪ್ರವೃತ್ತಿಗಳಾದ ಸ್ಪರ್ಧೆ, ಮೇಲಾಟ, ಕ್ರೌರ್ಯಗಳನ್ನು `ಮನುಷ್ಯರ ನಿಸರ್ಗದತ್ತ ಸಹಜ ಗುಣಗಳೆಂದು ನಂಬುವ ಬಂಡವಾಳಶಾಹಿಗಳು ಸ್ವಾರ್ಥ, ಸಹಜೀವಿಗಳ ಸುಖ-ನೆಮ್ಮದಿಗಳ ಬಗ್ಗೆ ತಿರಸ್ಕಾರ ಮತ್ತು ನಿರ್ಭಾವದ, ಅಮಾನವೀಯವಾದ ಸಾಮಾಜಿಕ ವ್ಯವಸ್ಥೆಯನ್ನೇ ಪ್ರಜಾತಂತ್ರವೆಂದು, ವ್ಯಕ್ತಿ ಸ್ವಾತಂತ್ರ್ಯವೆಂದು ಗಟ್ಟಿಯಾಗಿ ಪ್ರತಿಪಾದಿಸುತ್ತಾರೆ.

2012 ರಲ್ಲಿ ತಯಾರಾಗಿ ಕಾನ್ ಚಿತ್ರೋತ್ಸವದಲ್ಲಿ ಪ್ರದರ್ಶಿತಗೊಂಡ `ಸ್ಟೂಡೆಂಟ್' ಸಿನೆಮಾ `ಮಿನಿಮಲ್' ವಿಧಾನದ ಚಿತ್ರಣ, ಮಾತು, ದೃಶ್ಯಗಳ ಮೂಲಕ ನೈಜ ಮಾನವೀಯ ಸಮಾಜದ ರಾಜಕೀಯ ದೃಷ್ಟಿಕೋನವನ್ನು, ಮಂಕುಹಿಡಿದಂತೆ ತೋರುವ ಪಾತ್ರ, ಆವರಣ ಮತ್ತು ಘಟನೆಗಳನ್ನು ಸಿನಿಮಾ ತಯಾರಿಕೆಯ ಚೌಕಟ್ಟಿನೊಳಗಿಂದ ಮೂಡುವ ಚೌಕಟ್ಟಿನ ಮೂಲಕ ನೈಜ ಸಿನೆಮಾ ಸೌಂದರ್ಯಾತ್ಮಕತೆಯನ್ನು ಸಾಧಿಸುತ್ತದೆ. ಸಿನೆಮಾದ ಆಂತರ್ಯವಿರುವುದೇ ಅದು ಮಾತುಗಳಲ್ಲಿ ಹೇಳುವುದಕ್ಕಿಂತ ಮಾತಿಲ್ಲದೆ ಹೇಳುವ ದೃಶ್ಯವಿನ್ಯಾಸಗಳಲ್ಲಿ. ಬಾಯಿ ಬಿಟ್ಟು ಹೇಳದಿರುವ ಮಾತುಗಳಲ್ಲಿ, ವಿವರಗಳಿಗೆ ಹೋಗದೆ ಕೇವಲ ಸೂಚನೆಗಳಲ್ಲಿ ಮುಕ್ತಾಯವಾಗುವ ತುಣುಕು ದೃಶ್ಯಗಳಲ್ಲಿ ನಿಜವಾದ ಸಿನೆಮಾ ಮೈದಾಳುತ್ತದೆ.

ಸಿನಿಮಾದ ಸಾಮಾಜಿಕ ಉದ್ದೇಶಗಳ ಬಗ್ಗೆ  ಯಾರೋ ಒಬ್ಬ ನಿರ್ದೇಶಕನ ಬಾಯಲ್ಲಿ ಹೇಳಿಸುವ ಬದಲು ದರಷಾನ್ ಒಮಿರ್ಬಾಯೇವ್ ತನ್ನ ಸಿನೆಮಾದಲ್ಲಿ ತಾನೇ ಪಾತ್ರವೂ ಆಗಿ, ಸಂದರ್ಶಕಿಯ ಪ್ರಶ್ನೆಗೆ `ಸಿನೆಮಾ ಕಾಲ ಕಳೆಯಲು' ಎಂದು ಉತ್ತರಿಸುವ ಮೂಲಕ ಸ್ವವ್ಯಂಗ್ಯವನ್ನು ಬಳಸುತ್ತಾನೆ. ಅದನ್ನು ತಿರುವುಮುರುವು ಮಾಡಿ ಮಂಡಿಸುವ ಸಿನಿಮಾಕ್ಕೆ ಗಂಭೀರ ಉದ್ದೇಶವಿದೆ ಎಂದು ಕೃತಿರೂಪದಲ್ಲಿ ಮಂಡಿಸುವ `ಸ್ಟೂಡೆಂಟ್' ನೈಜ ಸ್ವರೂಪದ ಕಲಾತ್ಮಕವಾದ ಗಟ್ಟಿ ಸಿನೆಮಾ.