ಪುನಃ ಮಿಲಿಟರೀಕರಣದತ್ತ ಜಾರುತ್ತಿರುವ ಜಪಾನ್

ಸಂಪುಟ: 
11
ಸಂಚಿಕೆ: 
01
date: 
Sunday, 25 December 2016
Image: 

ಜಪಾನಿನ ಪ್ರಧಾನಿ ಶಿನ್ಝೋ ಅಬೆ ಅವರ ಪಕ್ಷ ಎಲ್.ಡಿ.ಪಿ. (ಲಿಬರಲ್ ಡೆಮೊಕ್ರಾಟಿಕ್ ಪಕ್ಷ) ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ಸಂಸತ್ತಿನ ಮೇಲ್ಮನೆಯಲ್ಲೂ ಬಹುಮತ ಪಡೆದಿದೆ. ಇದರಿಂದಾಗಿ ಆಳುವ ಪಕ್ಷ ಎಲ್.ಡಿ.ಪಿ.ಗೆ ಸಂಸತ್ತಿನ ಎರಡೂ ಸದನಗಳಲ್ಲಿ ದೊಡ್ಡ ಬಹುಮತ ಇದ್ದು ಕೆಲವು ವಿವಾದಿತ ಸಂವಿಧಾನ ತಿದ್ದುಪಡಿಗಳು ಮತ್ತು ಪ್ರಮುಖ ವಿಷಯಗಳ ಬಗ್ಗೆ ಕಾನೂನುಗಳನ್ನು ತರಲು ಅನುಕೂಲವಾಗಲಿದೆ. 

‘ಅಬೆನೊಮಿಕ್ಸ್’ ಎಂದು ಕರೆಯಲಾಗುವ ಹಲವು ಆರ್ಥಿಕ ಕ್ರಮಗಳನ್ನು ಪ್ರಧಾನಿ ಅಬೆ ಅವರು ಕೈಗೊಂಡಿದ್ದರೂ, ಜಪಾನಿನ ಆರ್ಥಿಕತೆಯನ್ನು ಸ್ಥಗಿತತೆಯಿಂದ ನಿವಾರಿಸಲಾಗಿಲ್ಲ. ಇದಕ್ಕಾಗಿ ಮಾರಾಟ ತೆರಿಗೆಯನ್ನು ಶೇ. 4 ರಿಂದ ಶೇ. 8ಕ್ಕೆ ಏರಿಸುವ, ಕಾರ್ಪೊರೆಟ್ ತೆರಿಗೆ ಕಡಿಮೆ ಮಾಡುವುದೇ ಮುಂತಾದ ಕೆಲವು ಕಹಿ ಕ್ರಮಗಳನ್ನು ಕೈಗೊಳ್ಳಲಿದ್ದಾರೆ. ಅವರು ವಿವಾದಿತ ಟ್ರಾನ್ಸ್ ಪೆಸಿಫಿಕ್ ಪಾರ್ಟ್‍ನರ್‍ಶಿಪ್ (ಟಿ.ಪಿ.ಪಿ.) ಕ್ಕೂ ಜಪಾನನ್ನು ಸೇರಿಸಬೇಕೆಂದಿದ್ದಾರೆ. ಜಪಾನ್ ಯಾವುದೇ ಯುದ್ಧದಲ್ಲಿ ಭಾಗಿಯಾಗುವುದನ್ನು ಮತ್ತು ಅದರ ಸೈನ್ಯವನ್ನು ದೇಶದ ಹೊರಗೆ ಯುದ್ಧದಲ್ಲಿ ಅಣಿ ನೆರೆಸುವುದನ್ನು ನಿಷೇಧಿಸುವ ಶಾಂತಿಪ್ರಿಯ ಸಂವಿಧಾನದ ಕಲಮನ್ನು ಬದಲಾಯಿಸುವುದು, ಹಾಗೂ ಅಣು ರಿಯಾಕ್ಟರುಗಳನ್ನು ಪುನರಾರಂಭಿಸುವುದು ಅವರು ಮಾಡಹೊರಟಿರುವ ಅತ್ಯಂತ ವಿವಾದಿತ ಕ್ರಮಗಳು. ಫುಕುಶಿಮಾ ಅಣು ರಿಯಾಕ್ಟರಿನಲ್ಲಿ ಅಫಘಾತದ ನಂತರ ಎಲ್ಲಾ ಅಣು ರಿಯಾಕ್ಟರುಗಳನ್ನು ಮುಚ್ಚಲಾಗಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಇವೆರಡೂ ಕ್ರಮಗಳಿಗೆ ಸಂಸತ್ತಿನಲ್ಲೂ ಜನತೆಯಲ್ಲೂ ತೀವ್ರವಾದ ವಿರೋಧ ಇದೆ.

ಉಗ್ರ ರಾಷ್ಟ್ರೀಯತೆ ಬಡಿದೆಬ್ಬಿಸುವ ಹುನ್ನಾರ

ಅಬೆ ಇತ್ತೀಚೆಗೆ ನಡೆಸಿದ ಸಂಪುಟ ಪುನಾರಚನೆ ಸರಕಾರ ಬಲಪಂಥದತ್ತ ಜಾರುತ್ತಿದೆ ಎಂಬುದನ್ನು ಸ್ಪಷ್ಟ ಪಡಿಸಿದೆ. ರಕ್ಷಣಾ ಮಂತ್ರಿಯಾಗಿ ಟೊಮೊಮಿ ಇನಾದಾ ಅವರ ನೇಮಕ ಇದಕ್ಕೆ ಪುರಾವೆ. ಎರಡನೇ ಮಹಾಯುದ್ಧದಲ್ಲಿ ಜಪಾನಿ ಘೋರ ಯುದ್ಧ-ಅಪರಾಧಗಳನ್ನು ಸಮರ್ಥಿಸಿಕೊಳ್ಳುವ ನಿಪ್ಪನ್ ಕೈಗಿ ಎಂಬ ಬಲಪಂಥೀಯ ಸಂಸ್ಥೆಯ ಸಕ್ರಿಯ ಸದಸ್ಯೆ. ಈಕೆ ಎರಡನೇ ಮಹಾಯುದ್ಧದಲ್ಲಿ ಸತ್ತ ಜಪಾನಿನ ಸೈನಿಕರ ವಿವಾದಿತ ಯಾಸುಕಿನಿ ಸ್ಮಾರಕಕ್ಕೆ ಯಾವಾಗಲೂ ಭೇಟಿ ನೀಡುತ್ತಾರೆ.  ಜಪಾನಿ ಸೈನ್ಯ ಸಾವಿರಾರು ಚೀನಿ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಮತ್ತು 3 ಲಕ್ಷ ಚೀನಿಯರ ಮಾರಣಹೋಮ ನಡೆಸಿದ ‘ನಾನ್‍ಕಿಂಗ್ ನರಮೇಧ’ ಎಂದೇ ಕುಖ್ಯಾತವಾಗಿರುವ ಪ್ರಕರಣ ನಡೆದೇ ಇಲ್ಲ ಎಂದು ಈಕೆ ವಾದಿಸುತ್ತಾರೆ.

ಜಪಾನಿನ ಸಂವಿಧಾನದ ಕಲಮು 9 ಯುದ್ಧ ಹೂಡುವುದನ್ನು ಮತ್ತು ಯುದ್ಧ ಹೂಡಲು ಸೈನ್ಯ ಇರಿಸಿಕೊಳ್ಳುವುದನ್ನು ನಿಷೇಧಿಸುತ್ತದೆ. ಜಪಾನಿನ ಸಂವಿಧಾನವನ್ನು ಎರಡನೇ ಮಹಾಯುದ್ಧದಲ್ಲಿ ಜಪಾನ್ ಶರಣಾಗತವಾದಾಗ ಗೆದ್ದ ಅಮೆರಿಕ ಬರೆದಿತ್ತು ಎಂದು ಅಮೆರಿಕದ ಉಪಾಧ್ಯಕ್ಷ ಜೊ ಬಿಡೆನ್ ಇತ್ತೀಚೆಗೆ ಹೇಳಿದ್ದರು. ಅಮೆರಿಕದ ಚುನಾಯಿತ ಅಧ್ಯಕ್ಷ ಟ್ರಂಪ್ ಜಪಾನಿ ರಕ್ಷಣಾ ಖರ್ಚಿನ ದೊಡ್ಡ ಪಾಲನ್ನು ಅಮೆರಿಕ ವಹಿಸುವುದನ್ನು ಮುಂದುವರೆಯುವುದು ಸಾಧ್ಯವಿಲ್ಲ. ಜಪಾನ್ ಅದನ್ನು ತಾನೇ ನಿಭಾಯಿಸಬೇಕು. ಚೀನಾ, ಉತ್ತರ ಕೊರಿಯಾದಂತಹ ದೇಶಗಳ ಬೆದರಿಕೆ ಎದುರಿಸಲು ಅಣ್ವಸ್ತ್ರಗಳನ್ನು ಹೊಂದುವ ಆಯ್ಕೆ ಜಪಾನಿಗಿರಬೇಕು ಎಂದು ಹೇಳಿಕೆ ನೀಡಿದ್ದರು. ಈ ಎರಡು ಹೇಳಿಕೆಗಳನ್ನು ಬಳಸಿ, ಎರಡನೇ ಮಹಾಯುದ್ಧದ ಮೊದಲು ಜಪಾನಿಗಿದ್ದ ‘ಮಿಲಿಟರಿ ಮಹಾಶಕ್ತಿಯ ಸ್ಥಾನದ ಗತವೈಭವ’ ಪುನಃ ಸ್ಥಾಪಿಸುವ ಉಗ್ರ ರಾಷ್ಟ್ರೀಯವಾದಿ ಅಲೆ ಎಬ್ಬಿಸಿ, ಕಲಮು 9 ತಿದ್ದುಪಡಿ ಮಾಡಲು ಸಾಮೂಹಿಕ ಸಹಮತ ಸೃಷ್ಟಿಸಲು ಅಬೆ ಸರಕಾರ ಪ್ರಯತ್ನಿಸುತ್ತಿದೆ.

ಎರಡನೇ ಮಹಾಯುದ್ಧ ನಂತರದ ಸನ್ನಿವೇಶದಲ್ಲಿ ಜಪಾನಿನ ಮಿಲಿಟರಿ ಆಕಾಂಕ್ಷೆಗಳನ್ನು ಸಂವಿಧಾನಾತ್ಮಕವಾಗಿ ಹತ್ತಿಕ್ಕಿದ ಅಮೆರಿಕ ಈಗ ತನ್ನ ಜೂನಿಯರ್ ಮಿಲಿಟರಿ ಸಹಚರ ಆಗುವಂತೆ ಪ್ರೇರೇಪಿಸುತ್ತಿದೆ. ಈಗ ಚೀನಾದ ವಿರುದ್ಧ ಈ ಪ್ರದೇಶದಲ್ಲಿ ಒಂದು ಮಿಲಿಟರಿ ಕೂಟಕ್ಕೆ ಜಪಾನನ್ನು ಸೆಳೆಯುವುದು ಅದಕ್ಕೆ ಬೇಕಾಗಿದೆ. ಜಪಾನಿನಲ್ಲಿ ಮಿಲಿಟರಿ ನೆಲೆಗಳನ್ನು ಹೊಂದಿರುವ ಅಮೆರಿಕಕ್ಕೆ ತನ್ನ ವ್ಯೂಹದಲ್ಲಿ ಜಪಾನನ್ನು ಸೇರಿಸಿಕೊಳ್ಳುವುದು ಬೇಕಾಗಿದೆ. ‘ಚೀನಾದ ಆಕ್ರಾಮಕತೆ ವಿರುದ್ಧ ರಕ್ಷಣೆ’ಯ ಹೆಸರಲ್ಲಿ, ಚಾರಿತ್ರಿಕವಾಗಿ ಈ ಪ್ರದೇಶದಲ್ಲಿ ಜಪಾನೇ ಅತ್ಯಂತ ಆಕ್ರಾಮಕ ಯುದ್ಧಕೋರ ಶಕ್ತಿಯಾಗಿತ್ತು ಎಂಬುದನ್ನು ಮರೆಸಲು ಯತ್ನಿಸುತ್ತಿದೆ. ಇದೇ ಜಪಾನಿ ಆಳುವ ವರ್ಗಗಳಿಗೂ ಬೇಕಾಗಿರುವುದು. ಅದಕ್ಕಾಗಿ ಜಗತ್ತಿನಲ್ಲಿ ಮೊದಲ ಮತ್ತು ಏಕಮಾತ್ರ ಅಣ್ವಸ್ತ್ರ ಬಳಕೆ ಮಾಡಿ ಲಕ್ಷಾಂತರ ಅಮಾಯಕ ಜಪಾನೀಯರ  ನರಮೇಧ ಮಾಡಿದ ಅಮೆರಿಕದ ಅಪರಾಧ ಕೃತ್ಯಗಳಿಗೆ ಅದು ಕ್ಷಮೆ ಕೇಳಬೇಕು ಮತ್ತು ಪರಿಹಾರ ಕೊಡಬೇಕು ಎಂಬ ಹಕ್ಕೊತ್ತಾಯಗಳನ್ನು ಬಿಡಲು ತಯಾರಿದೆ. ಆದರೆ ಜಪಾನ್ ಸೇರಿದಂತೆ ಈ ಇಡೀ ಪ್ರದೇಶದ ಜನತೆ ಇದನ್ನು ಮರೆತು ಬಿಡಲು ತಯಾರಿಲ್ಲ. ಆದ್ದರಿಂದ ಅಮೆರಿಕ-ಜಪಾನಿ ಆಳುವ ವರ್ಗಗಳು ಈ ಕಸರತ್ತು ನಡೆಸಿವೆ. ಜಪಾನೀ ಸರಕಾರ ಮತ್ತು ಸಂಸತ್ತು ಹೆಚ್ಚೆಚ್ಚು ಬಲಪಂಥದತ್ತ ವಾಲುತ್ತಿರುವುದು ಇದಕ್ಕೆ ಅನುವು ಮಾಡಿಕೊಡಲಿದೆ.

ಶಾಂತಿಪ್ರಿಯ ದೊರೆಯ ಪ್ರತಿರೋಧ

ಅಬೆ ಸರಕಾರದ ಈ ನಡೆಗೆ ಜಪಾನಿನಲ್ಲಿ ತೀವ್ರ ಪ್ರತಿರೋಧ ವ್ಯಕ್ತವಾಗಿದೆ. ಜಪಾನಿನ ದೊರೆ ಅಕಿಹಿಟೊ ಸಹ ಅಗಸ್ಟ್ ನಲ್ಲಿ ಜನತೆಯನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಜಪಾನನ್ನು ಪುನಃ ಮಿಲಿಟರೀಕರಣಗೊಳಿಸುವ ಮತ್ತು ಇತರ ಸಂವಿಧಾನಾತ್ಮಕ ಬದಲಾವಣೆಗಳನ್ನು ಪರೋಕ್ಷವಾಗಿ ವಿರೋಧಿಸಿದ್ದಾರೆ. ಜಪಾನಿನಲ್ಲಿ ದೊರೆ ಪ್ರಭುತ್ವದ ಮುಖ್ಯಸ್ಥನಾದರೂ ಜನತೆಯನ್ನು ಉದ್ದೇಶಿಸಿ ಭಾಷಣ ಮಾಡುವ ಸಂಪ್ರದಾಯ ಇಲ್ಲ. ಕಳೆದ ಬಾರಿ ದೊರೆ ಜನತೆಯನ್ನು ಉದ್ದೇಶಿಸಿ ಮಾತನಾಡಿದ್ದು (ಅಕಿಹಿಟೊ ತಂದೆ ಹಿರೊಹಿಟೊ) 70 ವರ್ಷಗಳ ಹಿಂದೆ - 1945 ಅಗಸ್ಟ್ ನಲ್ಲಿ ಜಪಾನಿನ ಶರಣಾಗತಿ ಘೋಷಿಸಿದಾಗ. ಹಿಂದಿನ ದೊರೆ ಹಿರೊಹಿಟೊ ಜಪಾನಿನ ಕ್ರೂರ ಮಿಲಿಟರೀಕರಣದ ಪ್ರತೀಕವಾಗಿದ್ದರೂ, ಈಗಿನ ದೊರೆ ಅಕಿಹಿಟೊ ಎರಡನೇ ಮಹಾಯುದ್ಧದಲ್ಲಿ ಜಪಾನಿನ ಭೀಕರ ಮಿಲಿಟರಿ ಅಪರಾಧಗಳ ಬಗ್ಗೆ ವಿಷಾದಪಡುವ ಜಪಾನಿಗಳ ಬಹುಸಂಖ್ಯಾತ ಜನರ ಧೋರಣೆ ಹೊಂದಿದವರು. ಜಪಾನಿ ಸಂವಿಧಾನದ ಪ್ರಕಾರ ಈಗ ಬರಿಯ ಅಲಂಕಾರಿಕ ಮುಖ್ಯಸ್ಥ.

ಎರಡನೇ ಮಹಾಯುದ್ಧದ ನಂತರ ಜಪಾನನ್ನು ಅತಿಕ್ರಮಣ ಮಾಡಿ 7 ವರ್ಷ ಆಳಿದಾಗ, ತಮ್ಮ ಆಳ್ಚಿಕೆಗೆ ಜನರ ಸಹಮತ ಒದಗಿಸಲು ತಾವು ಬರೆದ ಸಂವಿಧಾನದಲ್ಲಿ ಈ ವ್ಯವಸ್ಥೆಯನ್ನು ತಂದಿದ್ದರು. ಹಿಂದಿನ ದೊರೆ ಸಾರ್ವಭೌಮನಾಗಿದ್ದು ಪೂರ್ಣ ರಾಜಕೀಯ ಅಧಿಕಾರ ಹೊಂದಿದ್ದ. ಈಗಿನ ಜಪಾನಿ ಸರಕಾರ ಅದನ್ನು ಪುನಃ ತರುವ ಹಾದಿಯಲ್ಲಿ, ದೊರೆ ಚುನಾಯಿತ ಸರಕಾರದ ಸಲಹೆಗಳನ್ನು ಮನ್ನಿಸಲೇಬೇಕು ಎಂಬ ಸಂವಿಧಾನದ ಕಲಮನ್ನು ತೊಡೆಯಲು ಪ್ರಯತ್ನಿಸುತ್ತಿದೆ. ಇದನ್ನೂ ಈಗಿನ ದೊರೆ ಅಕಿಹಿಟೊ ವಿರೋಧಿಸುತ್ತಿದ್ದಾರೆ. ದೊರೆ ಅಕಿಹಿಟೊಗೆ 82 ವರ್ಷವಾಗಿದ್ದು, ಕ್ಯಾನ್ಸರ್ ನಿಂದ ಚೇತರಿಸಿಕೊಳ್ಳುತ್ತಿದ್ದು ತಾವು ದೊರೆ ಪಟ್ಟ ಬಿಟ್ಟು ಕೊಟ್ಟು ನಿವೃತ್ತರಾಗಲು ಬಯಸಿದ್ದಾರೆ. ಒಂದು ಸಮೀಕ್ಷೆ ಪ್ರಕಾರ ಶೇ. 85 ಜಪಾನಿಯರು ದೊರೆ ನಿವೃತ್ತರಾಗಬಯಸಿದರೆ ಅದಕ್ಕೆ ಅನುವು ಮಾಡಿಕೊಡುವುದರ ಪರವಾಗಿದ್ದಾರೆ. ಆದರೆ ಅಬೆ ಸರಕಾರ ಸಂವಿಧಾನದಲ್ಲಿ ಇದಕ್ಕೆ ಅವಕಾಶ ಇಲ್ಲ ಎಂಬ ನೆಪ ಹೇಳಿ ನಿರಾಕರಿಸುತ್ತಿದೆ. ಮುಂದೆ ದೊರೆಯಾಗಲಿರುವ ಅಕಿಹಿಟೊ ಮಗ ನರುಹಿಟೊ ಜಪಾನಿನ ಈಗಿನ ಸಂವಿಧಾನವನ್ನು ಬದಲಾಯಿಸಿ ದೇಶವನ್ನು ‘ಮಿಲಿಟರಿ ಸಾಮ್ರಾಜ್ಯ’ ವಾಗಿ ಬದಲಾಯಿಸುವುದನ್ನು ಇನ್ನಷ್ಟು ಬಲವಾಗಿ ವಿರೋಧಿಸುತ್ತಿರುವುದು ಇದಕ್ಕೆ ಕಾರಣವಿರಬಹುದು.
 

 

: ಶರತ್ ಚಂದ್ರ