Error message

  • Deprecated function: Methods with the same name as their class will not be constructors in a future version of PHP; views_display has a deprecated constructor in require_once() (line 3097 of /home/janashakthi/public_html/includes/bootstrap.inc).
  • Deprecated function: Methods with the same name as their class will not be constructors in a future version of PHP; views_many_to_one_helper has a deprecated constructor in require_once() (line 113 of /home/janashakthi/public_html/sites/all/modules/ctools/ctools.module).

ರಶ್ಯನ್ ಕ್ರಾಂತಿಯ ನೈತಿಕ ಆಕ್ರೋಶ, ಕ್ರಾಂತಿಕಾರಿ ವರ್ಗಪ್ರಜ್ಞೆ ಮತ್ತು ಸಂಘಟನಾ ಶ್ರದ್ಧೆ ಇಂದು ಬೇಕಾಗಿದೆ: ರಾಜೇಂದ್ರ ಚೆನ್ನಿ

ಸಂಪುಟ: 
11
ಸಂಚಿಕೆ: 
01
Sunday, 25 December 2016

 

`ವಿಶ್ವದಲ್ಲಿ ಬಂಡವಾಳಶಾಹಿಶಾಹಿಯ ಬಿಕ್ಕಟ್ಟುಗಳು ಉಲ್ಬಣಗೊಳ್ಳುತ್ತಲೇ ಇದೆ. ಗ್ರೀಸ್ ನಲ್ಲಿ ಮಧ್ಯಮ ವರ್ಗದ ಮಹಿಳೆಯೊಬ್ಬಳು ಭಿಕ್ಷೆ ಬೇಡುತ್ತಿರುವಂತಹ ದೃಶ್ಯಗಳು ನಮ್ಮ ಮುಂದೆ ಇದೆ. ಜನ ಸಮುದಾಯ ಇತಿಹಾಸದಲ್ಲಿ ಎಂದೂ ನೋಡದ ಬಿಕ್ಕಟ್ಟನ್ನು ನೋಡುವ ಪರಿಸ್ಥಿತಿ ಬಂದಿದೆ' ಎಂದು ಪ್ರೋ. ರಾಜೇಂದ್ರ ಚೆನ್ನಿರವರು ಹೇಳಿದರು. ಅವರು ಡಿಸೆಂಬರ್ 18ರಂದು ಬೆಂಗಳೂರಿನ ಸಚಿವಾಲಯ ಸಭಾಂಗಣದಲ್ಲಿ ನಡೆದ `ಸಮಾಜವಾದಿ ಕ್ರಾಂತಿ ಒಂದು ತಾತ್ವ್ವಿಕ ಮೀಮಾಂಸೆ' ಎಂಬ ವಿಚಾರ ಸಂಕಿರಣವನ್ನು ಉದ್ಘಾಟಿಸುವ ಮೂಲಕ ಮಾತನಾಡಿದರು.

ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ರಾಜೇಂದ್ರ ಚೆನ್ನಿರವರು ಮುಂದುವರೆದು ಮಾತನಾಡಿ `ಬಂಡವಾಳವು ಉದಾರೀಕರಣ ಮತ್ತು ಮುಕ್ತ ಮಾರುಕಟ್ಟೆಗೆ ಹಾತೊರೆಯುತ್ತದೆ. ಜಾಗತೀಕರಣದಿಂದಾಗಿ ಮಾನವ ಕುಲ ಉದ್ಧಾರವಾಗುತ್ತಿದೆ ಎಂಬು ಬಿಂಬಿಸಲಾಗುತ್ತಿದೆ. ಆದರೆ ವಾಸ್ರವ ಪರಿಸ್ಥಿತಿ ಆ ರೀತಿಯಲ್ಲಿಲ್ಲ ಎಂದುರು.

‘ಹೆಣದ ಬಟ್ಟೆ’ಯ ತಂದೆ-ಮಗರಂತಹ ಪರಿಸ್ಥಿತಿ

`ಆಗಿರುವುದು ಸಾವು, ಕೇಳುವುದು ಹೆಣಕ್ಕೆ ಬಟ್ಟೆ, ಆದರೆ ಅದಕ್ಕೆ ಬಂದ ಹಣದಿಂದ ಹೆಂಡ ಕುಡಿದು ವಿಜಯೋತ್ಸವದ ರೀತಿಯಲ್ಲಿ ಕುಣಿದಾಡುವುದು’ ಎಂಬ ಪ್ರೇಮಚಂದರ ಕತೆ ‘ಹೆಣದ ಬಟ್ಟೆ’ಯಲ್ಲಿ ಬರುವ ತಂದೆ-ಮಗರಂತೆ ಇದೆ ನಮ್ಮ ಜನರ ಪರಿಸ್ಥಿತಿ ಎಂದರು ರಾಜೇಂದ್ರ ಚೆನ್ನಿ. ಅಂತರಾಷ್ಟ್ರೀಯ ಬಂಡವಾಳವು ಸಮಾಜವಾದ ಅಪ್ರಸ್ತುತ, ಬೇಕಿಲ್ಲ ಎಂದು ಹೇಳುವುದು ಮಾತ್ರ ಅಲ್ಲ. ಬದಲಾಗಿ ಅದಕ್ಕೆ ಪೂರಕವಾಗಿ ಸಮಾಜವಾದಿ ಕ್ರಾಂತಿಯ ದೌರ್ಬಲ್ಯಗಳನ್ನು ವಿವರಿಸುವುದು. ದುಡಿಯುವ ವರ್ಗವೇ ಇಲ್ಲ, ವರ್ಗ ಸಮಾಜವೇ ಇಲ್ಲ, ಜನತೆಯಲ್ಲಿ ವರ್ಗ ಕಲ್ಪನೆ ಇಲ್ಲವಾಗಿದೆ ಎಂದು ಪ್ರಚುರಪಡಿಸಲಾಗುತ್ತಿದೆ. ಈ ಬಗ್ಗೆ ಹಲವು ಪುಸ್ತಕಗಳು ಬಂದಿವೆ.

ಬಂಡವಾಳಶಾಹಿ ಸಿದ್ಧಾಂತ ಜಾರಿಗೆ ಬಂದಾಗಿನಿಂದಲೂ ಬಿಕ್ಕಟ್ಟಿನ ಸ್ವರೂಪದಿಂದಲೇ ಕೂಡಿದ್ದು, ಶೋಷಣೆ ಮತ್ತು ದಬ್ಬಾಳಿಕೆಯು ಅದರ ಮೂಲ ಸಿದ್ಧಾಂತವಾಗಿದೆ. ಕಾಲಕ್ಕೆ ತಕ್ಕ ಹಾಗೇ ತನ್ನ ಭೌತಿಕ ಸ್ವರೂಪವನ್ನು ಬದಲಿಸಿಕೊಳ್ಳುತ್ತಾ, ಶೋಷಣೆಯನ್ನು ಮುಂದುವರೆಸುತ್ತಲೇ ಇರುತ್ತದೆ. ಸಮಾಜವಾದಿ ಕ್ರಾಂತಿ ಮುಂಚಿತವಾಗಿ ಇದ್ದಂತಹ ವ್ಯಾಪಕ ಅಸಮಾನತೆಯ ವಿರುದ್ಧ ರಷ್ಯಾದ ಜನತೆಯಲ್ಲಿ ಆಕ್ರೋಶ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಯಿತು. ಆ ಪರಿಣಾಮವಾಗಿ ಅಕ್ಟೋಬರ್ ಕ್ರಾಂತಿ ಸಂಭವಿಸಿತು. ಜಗತ್ತಿನಲ್ಲಿ ಶತಮಾನಗಳ ಕಾಲ ತತ್ವಜ್ಞಾನಿಗಳು ಜಗತ್ತನ್ನು ಅರ್ಥೈಸಿದರು, ಆದರೆ ಕಾರ್ಲ್ ಮಾಕ್ರ್ಸ್‍ರವರು ಜಗತ್ತಿನ ಇತಿಹಾಸ ಬದಲಿಸಬಹುದೆಂದರು. ರಷ್ಯಾದಲ್ಲಿ ಸಮಾಜವಾದಿ ಕ್ರಾಂತಿ ಮೂಲಕ ಅದು ಕಾರ್ಯರೂಪಕ್ಕೆ ಬಂದಿತು.

ಇಂಗ್ಲೆಂಡಿನಲ್ಲಿ ಬಂಡವಾಳಶಾಹಿ ವ್ಯವಸ್ಥೆ ಪ್ರಾರಂಭದ ದಿನಗಳಲ್ಲೇ ಅದರ ವಿಮರ್ಶೆ ಟೀಕೆಗಳೂ ಪ್ರಾರಂಭವಾಯಿತು. ವಿಲಿಯಂ ಬ್ಲೇಕ್ ಇತ್ಯಾದಿ ಕವಿಗಳು ಲೇಖಕರು ತಮ್ಮ ಬರವಣಿಗೆಗಳಲ್ಲಿ ಇದನ್ನು ಮಾಡಿದರು. ಯಾವುದೇ ವ್ಯವಸ್ಥೆಯ ವಿರುದ್ಧ ವಿರೋಧಗಳು ಏಳುತ್ತಲೇ ಇರುತ್ತದೆ. ಜಗತ್ತಿನಲ್ಲಿ ಮನೂಷ್ಯನನ್ನು ರೂಪಿಸುತ್ತಿರುವುದು ದುಡಿಮೆ ಹೊರತು ದೇವರು, ಧರ್ಮ ಅಲ್ಲ. ಜಗತ್ತಿಗೆ ಬೇಕಿರುವುದು ಶ್ರಮ ಜೀವನಕ್ಕೆ ಆಸ್ಪದ ಕೊಡುವ ಸಮಾಜವಾದ ಹೊರತು ಶೋಷಣೆಯ ಸಮಾಜದ ಬಂಡವಾಳಶಾಹಿ ಸಿದ್ಧಂತವಲ್ಲ.

ನಮ್ಮ ಇಂದಿನ ಪರಿಸ್ಥಿತಿ ಬಗ್ಗೆ ನೈತಿಕವಾಗಿ ನಮ್ಮಲ್ಲಿ ಆಕ್ರೋಶ ಹುಟ್ಟಬೇಕು. ದುಡಿಮೆಗಾರರಿಗೆ ದುಡಿಯುವ ವರ್ಗ ಪ್ರಜ್ಞೆ ಇರುವುದಿಲ್ಲ. ಸಮಾಜವನ್ನು ಬದಲಾಯಿಸಲು ಆಗುತ್ತದೆ ಎಂಬ ಪ್ರಜ್ಞೆಯನ್ನು ದುಡಿಯುವ ವರ್ಗದಲ್ಲಿ ತರಬೇಕಿದೆ. ಅದಕ್ಕೆ ಸಂಘಟನೆಯ ಅಗತ್ಯವಿದೆ. ನೈತಿಕ ಆಕ್ರೋಶ, ಕ್ರಾಂತಿಕಾರಿ ವರ್ಗಪ್ರಜ್ಞೆ ಮತ್ತು ಸಂಘಟನಾ ಶ್ರದ್ಧೆ ರಶ್ಯನ್ ಕ್ರಾಂತಿಯನ್ನು ಸಾಧ್ಯ ಮಾಡಿತು. ಅದನ್ನು ಇಂದು ಭಾರತದಲ್ಲಿ ಸಾಧ್ಯ ಮಾಡುವುದೇ ಅದನ್ನು ಸ್ಮರಿಸುವ ಉತ್ತಮ ವಿಧಾನ ಎಂದರು ರಾಜೇಂದ್ರ ಚೆನ್ನಿ.

ಈ ವಿಚಾರ ಸಂಕಿರಣದಲ್ಲಿ “ಅಕ್ಟೋಬರ್ ಕ್ರಾಂತಿಯ ಚಿರಂತನ ಮಹತ್ವ’ ಎಂಬ ಪುಸ್ತಕವನ್ನು ಡಾ. |ಕೆ.ಮರುಳಸಿದ್ಧಪ್ಪರವರು ಬಿಡುಗಡೆಗೊಳಿಸಿದರು.

ಫ್ರೆಂಚ್ ಮತ್ತು ರಶ್ಯನ್ ಮಹಾಕ್ರಾಂತಿಯ ಹಿಂದಿನ ತಾತ್ವಿಕತೆಗಳು

ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕಾ. ಜಿ.ಎನ್.ನಾಗರಾಜ್‍ರವರು ‘ಸಮಾಜವಾದಿ ಕ್ರಾಂತಿ ಒಂದು ತಾತ್ವಿಕ ಮೀಮಾಂಸೆ’ ವಿಚಾರ ಮಂಡನೆಯನ್ನು ಮಾಡಿದರು. ಅವರು ಫ್ರೆಂಚ್ ಮತ್ತು ರಶ್ಯನ್ ಮಹಾಕ್ರಾಂತಿಗಳ ನಡುವಿನ ಸಂಬಂಧ ವಿವರಿಸಿ ಅವುಗಳ ಹಿಂದಿದ್ದ ತಾತ್ವಿಕತೆಗಳ ಸಂಬಂಧಗಳನ್ನು ವಿವರಿಸಿದರು.  ``ಶತಮಾನಗಳ ಕಾಲ ಹಲವು ತತ್ವಶಾಸ್ತ್ರಗಳು ಆಗಾಗೇ ಬಂದಿದೆ. ಅವು ಧರ್ಮಾಧಾರಿತವಾಗಿದ್ದವು. ವಿಜ್ಞಾನ ಆಧಾರಿತ ತತ್ವಶಾಸ್ತ್ರವು ಎಲ್ಲಾ ಜ್ಞಾನವೂ ಪಂಚೇಂದ್ರೀಯಗಳಿಂದ ಬರುತ್ತದೆ ಎನ್ನುತ್ತದೆ. ಅನುಭವದಿಂದ ಬರುತ್ತದೆ ಎಂದು ವಿವರಿಸುತ್ತದೆ. ಮೊಟ್ಟ ಮೊದಲ ಬಾರಿಗೆ ಫ್ರೆಂಚ್ ನಲ್ಲಿ ಅಲ್ಲಿನ ತತ್ವಜ್ಞಾನಿಗಳು ಅದನ್ನು ಬೆಳೆಸಿದರು. ಹೊಸ ಪರಿಕಲ್ಪನೆಗಳನ್ನು ನೀಡಿದರು.

ತತ್ವಶಾಸ್ತ್ರ ಎಂದರೆ, ಅದು ಕೇವಲ ವಿಶ್ವವಿದ್ಯಾಲಯಗಳ, ಪ್ರೊಫೆಸರ್‍ಗಳು, ಪಂಡಿತರಿಗೆ ಸೀಮಿತವಾದ ವಿಚಾರ ಎಂದು ತಿಳಿದುಕೊಳ್ಳುತ್ತಾರೆ. ಅದು ಸರಿಯಾದುದ್ದಲ್ಲ, ಬದಲಾಗಿ ಪ್ರತಿ ಮನುಷ್ಯನಿಗೂ ಅದು ಅವಶ್ಯಕವಾದದು. ಫ್ರಾನ್ಸ್ ಕ್ರಾಂತಿಯ ಮೊದಲು ತತ್ವ ಸಿದ್ಧಾಂತ ಎಂಬುದು ದೇವರು ಹಾಗೂ ಪೋಪ್‍ಗಳ ಹಿಡಿತದಲ್ಲಿತ್ತು. ಈ ಸಂದರ್ಭದಲ್ಲಿಯೇ ಈ ವ್ಯವಸ್ಥೆ ವಿರುದ್ಧ ಫ್ರೆಂಚ್‍ನಲ್ಲಿ ಮೊಟ್ಟ ಮೊದಲ ಬಾರಿಗೆ ಹಲವು ತತ್ವಶಾಸ್ತ್ರಜ್ಞರು ನೀತಿಗಳನ್ನು ರೂಪಿಸಿದರು. ಜನರ ಮಧ್ಯೆ ಅದನ್ನು ಕೊಂಡೊಯ್ಯಲು ಮುಂದಾದರು. ಜ್ಞಾನವನ್ನು ಹರಡಲು ಪ್ರಾರಂಬಿಸಿದರು. ಜನತೆ ಮಧ್ಯೆ ಅವು ಗಟ್ಟಿಯಾಗಿ ನೆಲೆ ನಿಂತಾಗ ಫ್ರೆಂಚ್ ಕ್ರಾಂತಿ ಸಂಭವಿಸಿತು.

ಪ್ರಪಂಚವನ್ನು ಬದಲಾಯಿಸುವುದಕ್ಕೆ ಮೊದಲು ಅದನ್ನು ನಾವು ತಿಳಿದುಕೊಳ್ಳಬೇಕಿದೆ. ಪ್ರಕೃತಿಯ ನಿಯಮಗಳನ್ನು ಅರ್ಥ ಮಾಡಿಕೊಳ್ಳಬೇಕು, ಪ್ರಕೃತಿಯ ಜೊತೆಗಿನ ಒಡನಾಟದಿಂದ ಉತ್ತಮ ಬದುಕು ಪಡೆಯಲು ಮಾನವ ಮುಂದಾಗುತ್ತಾನೆ ಎಂಬುದು ಫ್ರೆಂಚ್ ಕ್ರಾಂತಿಯ ಹಿಂದಿನ ತಾತ್ವಿಕತೆಯ ಇಂದಿನ ಸಾರವಾಗಿತ್ತು. ಅದೇ ರೀತಿ ಸಮಾಜ ಬದಲಾಯಿಸಬೇಕಾದರೆ ಸಮಾಜದ ನಿಯಮಗಳನ್ನು ತಿಳಿದುಕೊಳ್ಳುವುದು ಅಗತ್ಯ. ಚಾರಿತ್ರಿಕವಾಗಿ ಸಮಾಜ ಬದಲಾವಣೆಗಳನ್ನು ಅಧ್ಯಯನ ಮಾಡಿ ಅದರ ನಿಯಮಗಳನ್ನು ಕಂಡು ಹಿಡಿಯಬೇಕು. ಬಂಡವಾಳಶಾಹಿ ವ್ಯವಸ್ಥೆ ಬದಲಾಯಿಸಬೇಕಾದರೆ ಪ್ರಸ್ತುತ ಬಂಡವಾಳದ ಬಗೆಗಿನ ಹೆಚ್ಚಿನ ಅಧ್ಯಯನವನ್ನು ಮಾಡಬೇಕು ಎಂದು ಫ್ರೆಂಚ್ ಕ್ರಾಂತಿಯ ಹಿಂದಿದ್ದ ವೈಜ್ಞಾನಿಕ ತಾತ್ವಿಕತೆಯನ್ನು ಕಾರ್ಲ್ ಮಾರ್ಕ್ಸ್ ರವರು ಮುಂದುವರೆಸಿದರು. ಅಂತಹ ಅಧ್ಯಯನದ ಮೂಲಕ ಸಮಾಜವಾದಿ ಸಮಾಜ ಕಟ್ಟುವ ಅನಿವಾರ್ಯತೆಯನ್ನು ಪ್ರಸ್ತುತ ಪಡಿಸಿದರು.

ತತ್ವವು ಜನ ಮಾನಸದೊಳಗೆ ಇಳಿದಾಗ ಬದಲಾವಣೆ ಸಂಭವಿಸುತ್ತದೆ. ರಷ್ಯಾದಲ್ಲಿ ಸಮಾಜವಾದಿ ಕ್ರಾಂತಿ ಸಂಭವಿಸಿದ್ದು ಇದೇ ಮಾದರಿಯಲ್ಲಿ. ಲೆನಿನ್ ರಶ್ಯಾ ಸಮಾಜವನ್ನು ಅಧ್ಯಯನ ಮಾಡಿ ಅದು ಜನಮಾನಸದಲ್ಲಿ ಇಳಿಯುವಂತೆ ಮಾಡಿದರು. ಜನಮಾನಸದಲ್ಲಿ ಹಿಂದೆ ಇದ್ದ ಹಳೆಯ ತಾತ್ವಿಕತೆಯ ವಿರುದ್ಧ ಹೋರಾಡಿ ತೊಡೆದು ಹಾಕಲಾಯಿತು.  ಪ್ರಸ್ತುತ ಭಾರತದಲ್ಲೂ ಸಮಾಜದ ಗಂಭೀರ ಅಧ್ಯಯನದ ಅಗತ್ಯವಿದೆ. ಅದೇ ರೀತಿ ಜನಮಾನಸವನ್ನು ಹಿಡಿತದಲ್ಲಿಟ್ಟಿರುವ ತಾತ್ವಿಕತೆಯ ವಿರುದ್ಧ ಹೊಸ ತಾತ್ವಿಕತೆ ಸ್ಥಾಪಿಸಬೇಕಾಗಿದೆ. ಇಂತಹ ತಾತ್ವಿಕ ಸಂಘರ್ಷ ಭಾರತದಲ್ಲು ನಡೆಯುತ್ತಾ ಬಂದಿದೆ. ಸಾಂಖ್ಯ ತತ್ವವು ವೇದಾಂತ ತತ್ವವನ್ನು ಎದುರಿಸಲು ಇರುವ ತತ್ವವಾಗಿದೆ. ಅದರಲ್ಲಿ 24 ಅಂಗ ತತ್ವಗಳು ಇವೆ. ಇದೂ ಜ್ಞಾನದ ಮೂಲ ಪಂಚೇಂದ್ರೀಯಗಳು ಎಂದು ಪ್ರತಿಪಾದಿಸಿವೆ. ವೇದಾಂತ ತತ್ವದ ವಿರುದ್ಧ ಚಳುವಳಿ ಹೂಡಿದ ವಚನ ಚಳುವಳಿ ಮುಂತಾದವು ಸಾಂಖ್ಯ ತತ್ವದಿಂದ ಪ್ರಭಾವಿತವಾಗಿವೆ.  ಭಾರತದ ಪ್ರಸ್ತುತ ಸ್ಥಿತಿಯ ಅಧ್ಯಯನದ ಜತೆಗೆ  ನಾವು ನಮ್ಮ ನೆಲದಲ್ಲೇ ಹುಟ್ಟಿದ ಇಂತಹ ತಾತ್ವಿಕತೆಯ ಜತೆಗೆ ಆಧುನಿಕ ವೈಜ್ಞಾನಿಕ ತಾತ್ವಿಕತೆಯನ್ನೂ ಜನತೆಯ ಮಧ್ಯೆ ಹಬ್ಬಿಸಬೇಕಾಗಿದೆ. ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಪ್ರೊ.ಕೆ.ಮರುಳಸಿದ್ಧಪ್ಪರವರು ಮಾತನಾಡಿ ``ಬಂಡವಾಳಶಾಹಿಯು ತನ್ನ ವಿಜೃಂಭಣೆಯಲ್ಲಿ ತೊಡಗಿದೆ. ಜನತೆಯ ಮೂಲ ವಿಷಯಗಳು ಚಲಾವಣೆಯಿಂದ ಹಿಂದೆ ಸರೆದಿದೆ. ಹೊಸದಾಗಿ ಚಲಾವಣೆಗೆ ಬಂದಿರುವ ಮುಕ್ತ ಮಾರುಕಟ್ಟೆಯಿಂದಾಗಿ ಶಿಕ್ಷಣ ಮತ್ತು ಆರೋಗ್ಯದಲ್ಲಿನ ಅಸಮಾನತೆಯನ್ನು ಹೆಚ್ಚಿಸುತ್ತಿದೆ. ದೇಶದಲ್ಲಿ ಶೇ.50ರಷ್ಟು ಕಪ್ಪುಹಣ ದೇವಾಲಯ, ಚರ್ಚ್, ಮಸೀದಿ, ಮಠಗಳು ಸೇರಿದಂತೆ ಧಾರ್ಮಿಕ ಕೇಂದ್ರಗಳಲ್ಲಿದೆ. ಕಪ್ಪುಹಣವನ್ನು ಹೊಂದಿರುವವರು ಅದರ ರಕ್ಷಣೆಗಾಗಿ ಮಾತ್ರ ದೇವಾಲಯಗಳನ್ನು ನಿರ್ಮಿಸುತ್ತಾರೆ.” ಎಂದು ಇಂದಿನ ಕ್ರೂರ ವಾಸ್ತವದ ಕಡೆಗೆ ಗಮನ ಸೆಳೆದರು. ಸಾವಿರಾರು ವರ್ಷಗಳ ಅಸಮಾನತೆ, ಬಡತನ, ಕ್ರೌರ್ಯಗಳ ಚರಿತ್ರೆಯಲ್ಲಿ  ಸೋವಿಯೆಟ್ ಸಮಾಜ ಕೆಲವು ದಶಕಗಳಿದ್ದ ಸುಂದರ ಸ್ವಪ್ನವಿದ್ದಂತೆ. ಅಂತಹ ಸುಂದರ ಸ್ವಪ್ನ ನೆನಪಿಸಿಕೊಳ್ಳುವುದು 

ಕಾರ್ಯಕ್ರಮದ ಸ್ವಾಗತ ಜೋಮಿ ಜಾರ್ಜ್, ವಂದನಾರ್ಪಣೆ ಪಿ.ಮುನಿರಾಜು ಮತ್ತು ನಿರೂಪಣೆಯನ್ನು ಎನ್.ಪ್ರತಾಪ್ ಸಿಂಹ ರವರು ನೆರವೇರಿಸಿದರು.