‘ಮಾರ್ಕ್ಸ್ ವಾದದ ಮರು ಅಧ್ಯಯನ ಬೇಕು’

ಸಂಪುಟ: 
11
ಸಂಚಿಕೆ: 
01
Sunday, 25 December 2016

ಸಮಕಾಲೀನ ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ನೆಲೆಯಲ್ಲಿ ಜನ ಸಮುದಾಯವನ್ನು ಒಗ್ಗೂಡಿಸಬೇಕಾದರೆ ಮಾರ್ಕ್ಸ್ ವಾದವನ್ನು ಮರು ಅಧ್ಯಯನಕ್ಕೆ ಒಳಪಡಿಸಬೇಕಾದ ಅಗತ್ಯವಿದೆ ಎಂದು ಹಿರಿಯ ಚಿಂತಕ ಪ್ರೊ. ಬಿ.ಗಂಗಾಧರ ಮೂರ್ತಿರವರು ಅಭಿಪ್ರಾಯಪಟ್ಟರು.

ಡಿಸೆಂಬರ್ 18ರಂದು ನಡೆದ ಸಮಾಜವಾದಿ ಕ್ರಾಂತಿ ಒಂದು ತಾತ್ವಿಕ ಮೀಮಾಂಸೆ ಕಾರ್ಯಕ್ರಮದಲ್ಲಿ ಮಧ್ಯಾಹ್ನದ ನಂತರ ಪ್ರಾರಂಭವಾದ ಮುಕ್ತ ಸಂವಾದ ಕಾರ್ಯಕ್ರಮದಲ್ಲಿ ಸಭಿಕರಿಂದ ಎದ್ದು ಬಂದ ಪ್ರಶ್ನೆಗಳಿಗೆ ವೇದಿಕೆ ಮೇಲಿದ್ದ ಗಣ್ಯರು ಉತ್ತರಗಳನ್ನು ನೀಡಿದರು. ಪ್ರೊ. ಬಿ.ಗಂಗಾ ಧರ ಮೂರ್ತಿರವರು ಮುಂದುವರೆದು ಮಾತನಾಡಿ ಇಂದಿನ ಜಾಗತೀಕರಣದ ಯುಗದಲ್ಲೂ ಕೃಷಿ ಹಾಗೂ ಕಾರ್ಮಿಕ ಕ್ಷೇತ್ರದಲ್ಲಿ ಶೋಷಣೆಗೊಳಗಾಗುತ್ತಿರುವುದು ದಲಿತ ಸಮುದಾಯವಾಗಿದೆ. ಈ ಶೋಷಣೆಗೆ ದೇಶದ ಜಾತಿ ವ್ಯವಸ್ಥೆಯು ಪ್ರಮುಖ ಕಾರಣವಾಗಿದೆ. ಮಾರ್ಕ್ಸ್ ಮತ್ತು ಲೆನಿನ್‍ರವರು ಪುಸ್ತಕದ ಜೊತೆಗೆ ಗಾಂಧೀಜಿರವರ ಹಿಂದ್ ಸ್ವರಾಜ್ ಮತ್ತು ಡಾ||ಬಿ.ಆರ್.ಅಂಬೇಡ್ಕರ್‍ರವರ `ಜಾತಿ ವಿನಾಶ' ಪುಸ್ತಕವನ್ನು ಮರು ವಿಶ್ಲೇಷಣೆಗೆ ಒಳಪಡಿಸಿಕೊಳ್ಳಬೇಕಾಗಿದೆ ಎಂದರು.

ಮತ್ತೊಂದು ಪ್ರಶ್ನೆಗೆ ಸಿಪಿಐ ರಾಷ್ಟ್ರೀಯ ಮಂಡಳಿ ಸದಸ್ಯರಾದ ಡಾ||ಸಿದ್ಧನಗೌಡ ಪಾಟೀಲ್‍ರವರು ಉತ್ತರಿಸುತ್ತಾ, ``ಕಮ್ಯೂನಿಸ್ಟ್ ಪಕ್ಷಗಳು ಇಂದು ಹಲವು ಗುಂಪುಗಳಾಗಿ ಕೆಲಸ ಮಾಡುತ್ತಿವೆ ಈ ಹಿಂದೆ ಇದ್ದಂತಹ ದೊಡ್ಡ ಭಿನ್ನಾಭಿಪ್ರಾಯಗಳು ಈಗ ಸರಿಪಡಿಸಿಕೊಂಡು ಒಂದೇ ವೇದಿಕೆ ಅಡಿಯಲ್ಲಿ ಹಲವು ಬಾರಿ ಜಂಟಿ ಚಳುವಳಿಯನ್ನು ನಡೆಸಲಾಗುತ್ತಿದೆ. ಇದು ಮತ್ತಷ್ಟು ಮತ್ತಷ್ಟು ಹೆಚಾಗಿ ಎಡಪಕ್ಷಗಳು ಒಂದಾಗಬೇಕು. ಇದಕ್ಕೆ ಪೂರ್ವಭಾವಿಯಾಗಿ  ಸಿಪಿಐ, ಸಿಪಿಐ(ಎಂ) ಒಗ್ಗೂಡಬೇಕು ಎಂದರು.

ಸಭಿಕರಿಂದ ಬಂದ ಇನ್ನೊಂದು ಪ್ರಶ್ನೆಗೆ ಉತ್ತರಿಸುತ್ತಾ ಪ್ರಸ್ತುತ ಜಾಲ್ತಿಯಲ್ಲಿರುವ ಎಡ ಅಥವಾ ಬಲ ವಾದಗಳ ಬದಲಾಗಿ ಮಧ್ಯಮ ವಾದದ ಪ್ರಶ್ನೆಯೂ ಎದ್ದು ಬಂದಿದೆ. ಇದು ತಾತ್ಕಾಲಿಕವಾದ ವಾದವಷ್ಟೇ. ಅಂತಿಮವಾಗಿ ಇದು ಬಲ ವಾದದ ಗುಣಗಳನ್ನೇ ಮೈಗೂಡಿಸಿಕೊಳ್ಳುತ್ತದೆ. ಈಗೀನ ಸಂದರ್ಭದಲ್ಲಿ ವ್ಯಾಪಕಗೊಳ್ಳುತ್ತಿರುವ ಬಲ ವಾದಕ್ಕೆ ವಿರುದ್ಧ ಎಡವಾದವೂ ಅಷ್ಟೇ ಪ್ರಮಾಣದಲ್ಲಿ ಬೆಳೆಯುತ್ತಿರುವ ಸಂದರ್ಭದಲ್ಲಿ ಎಡವಾದವನ್ನು ಮೂಲೆಗುಂಪಾಗಿಸಲು ಎಡವೂ ಬ್ಯಾಡ, ಬಲವೂ ಬ್ಯಾಡ ಮಧ್ಯಮ ವಾದ ಸಾಕು ಎಂದು ಚಾಲ್ತಿಗೆ ತರಲಾಗಿದೆ ಎಂದು ವಿವರಿಸಿದರು.

ವೇದಿಕೆ ಮೇಲಿದ್ದ ಪ್ರೋ.ರಾಜೇಂದ್ರ ಚೆನ್ನಿ, ಡಾ||ಎನ್.ಗಾಯತ್ರಿ, ಬಿ.ರವಿ, ಕೆ.ಪ್ರಕಾಶ್, ಮತ್ತಿತರರು ಪ್ರಶ್ನೆಗಳಿಗೆ ಉತ್ತರಗಳನ್ನು ನೀಡುವ ಮೂಲಕ ಮುಕ್ತ ಸಂವಾದವನ್ನು ಅರ್ಥಪೂರ್ಣಗೊಳಿಸಿದರು. ಸಭಿಕರಿಂದಲೂ ಸಾಕಷ್ಟು ಪ್ರಶ್ನೆಗಳು ಎದ್ದು ಬಂದಿತು. ಕಾರ್ಯಕ್ರಮದ ಸಂಯೋಜನೆಯನ್ನು ಎಸ್.ಕೆ.ಗೀತಾ ಮತ್ತು ಸ್ವಾಗತವನ್ನು ಬಿ.ಎನ್.ಮಂಜುನಾಥ್ ನೆರವೇರಿಸಿದರು. ಕಾರ್ಯಕ್ರಮ್ರದ ಪ್ರಾರಂಭದಲ್ಲಿ ಅಶೋಕ್ ಮತ್ತು ಮಂಜುರವರು ಅಫ್ರಿಕನ್ ಜಂಬೆ ಮಾದರಿಯ ಸಂಗೀತವನ್ನು ಪ್ರಸ್ತುತಪಡಿಸಿದರು.