ಕನಿಷ್ಟ ಕೂಲಿ ಮತ್ತು ಜೇಷ್ಠತಾ ಆಧಾರದಲ್ಲಿ ನೇಮಕಾತಿಗಾಗಿ ಅಂಗನವಾಡಿ ನೌಕರರ ಪ್ರತಿಭಟನೆ

ಸಂಪುಟ: 
11
ಸಂಚಿಕೆ: 
01
Sunday, 25 December 2016

ಕಳೆದ 41 ವರ್ಷಗಳಿಂದ ಅಂಗನವಾಡಿ ನೌಕರರು ಗೌರವ ಧನದ ಆಧಾರದಲ್ಲಿ ದುಡಿಯುತ್ತಿದ್ದಾರೆ. ಇವರನ್ನು ಸ್ವಯಂ ಸೇವಕರೆಂದೂ ಸರಕಾರ 4 ಗಂಟೆಯಿಂದ 6 ಗಂಟೆಗೆ ಕೆಲಸದ ಅವಧಿಯನ್ನು ಹೆಚ್ಚಿಸಿದೆ. ಆದರೆ ಇವರಿಗೆ ವೇತನ ಮಾತ್ರ ರೂ.3000-6000 ಮಾತ್ರವಾಗಿದೆ. ಕರ್ನಾಟಕ ಬಿಟ್ಟು ಉಳಿದ ಹಲವು ರಾಜ್ಯಗಳಲ್ಲಿ ಅಂಗನವಾಡಿ ನೌಕರರು ಹಾಗೂ ಸಹಾಯಕರಿಗೆ ರಾಜ್ಯಕ್ಕಿಂತ 2-3 ಪಟ್ಟು ಹೆಚ್ಚಿನ ವೇತನವನ್ನು ನೀಡಲಾಗುತ್ತಿದೆ. ಆದರೆ ಕರ್ನಾಟಕ ರಾಜ್ಯದಲ್ಲಿ ಮಾತ್ರ ಕಡಿಮೆ ವೇತನದಲ್ಲಿ ದುಡಿಮೆ ಮಾಡುವ ಪರಿಸ್ಥಿತಿ ಅಂಗನವಾಡಿ ನೌಕರರಾಗಿದ್ದಾಗಿದೆ.

ಕನಿಷ್ಠ ಕೂಲಿ ವ್ಯಾಪ್ತಿಗೆ ಅಂಗನವಾಡಿ ನೌಕರರನ್ನು ಪರಿಗಣಿಸಬೇಕು ಮತ್ತು ಸೇವಾ ಜೇಷ್ಠತೆ ಆಧಾರದಲ್ಲಿ ಮೇಲ್ವಿಚಾರಕಿಯರ ಹುದ್ದೆಗಳಿಗೆ ನೇಮಕಾತಿ ಮತ್ತು ಸೇವಾ ನಿಯಾಮವಳಿಗೆ ಒತ್ತಾಯಿಸಿ ದೇಶದ ಎಲ್ಲಡೆ ಪ್ರತಿಭಟನೆ ನಡೆಸಬೇಕೆಂದು ಸಿಐಟಿಯು ಸಂಯೋಜಿತ ಅಖಿಲ ಭಾರತ ಅಂಗನವಾಡಿ ನೌಕರರ ಸಂಘಟನೆಯು ಕರೆ ನೀಡಿದ ಭಾಗವಾಗಿ ರಾಜ್ಯದಲ್ಲಿಯೂ ಡಿಸೆಂಬರ್ 20ರಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘಟನೆಯು ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆಗಳನ್ನು ಹಮ್ಮಿಕೊಂಡಿತು.

1957ರಲ್ಲಿಯೇ ಐಎಲ್‍ಓ ಬದುಕುಳಿಯುವ ಕೂಲಿಯನ್ನು ನೀಡಬೇಕೆಂದು ನಿರ್ದೇಶಿಸಿದೆ. ಭಾರತದ ಸಂವಿಧಾನವು `ಪ್ರತಿಯೊಬ್ಬ ಮನುಷ್ಯನಿಗೆ ಘನತೆಯ ಬದುಕನ್ನು ನಿರ್ದೇಶಿಸಿದೆ' 2012ರಲ್ಲಿ ಸ್ಕೀಂ ವರ್ಕರ್ಸರನ್ನು ಕೆಲಸಗಾರರೆಂದು ಗುರುತಿಸಿ ಅವರಿಗೆ ಕನಿಷ್ಠ ಕೂಲಿಯನ್ನು ಕೊಡಬೇಕೆಂದು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿದೆ. ಇತ್ತೀಚೆಗೆ ಮಾನ್ಯ ಸರ್ವೋಚ್ಛ ನ್ಯಾಯಾಲಯವು ಗುತ್ತಿಗೆ ನೌಕರರಿಗೆ ಸಂಬಂಧಿಸಿದಂತೆ “ಸಮಾನ ಕೆಲಸಕ್ಕೆ ಸಮಾನ ವೇತನ” ಕೊಡಬೇಕೆಂದು ಐತಿಹಾಸಿಕ ಮತ್ತು ಮಹತ್ವದ ತೀರ್ಫು ಕೊಟ್ಟಿದೆ.

ಇವೆಲ್ಲವೂ ದುಡಿಮೆಗೆ ತಕ್ಕ ಕೂಲಿಯ ಆದೇಶವೇ ಆಗಿದೆ. ಅಂಗನವಾಡಿ ನೌಕರರು ಯೋಜನೇತರ ಮತ್ತು ಇಲಾಖೆಯೇತರ ಕೆಲಸಗಳನ್ನು ಮಾಡಿಸಲಾಗುತ್ತಿದೆ. ಇವೆಲ್ಲದರ ಬಗ್ಗೆ ತಮ್ಮ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕೆಂದು ಅಂಗನವಾಡಿ ನೌಕರರು ಪ್ರತಿಭಟನೆಗೆ ಮುಂದಾದರು. ಈಗಾಗಲೇ ಗುಲ್ಬರ್ಗಾ, ರಾಯಚೂರು, ಗದಗ, ಉತ್ತರಕನ್ನಡ ಮತ್ತು ಕೋಲಾರ ಜಿಲ್ಲೆಗಳಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಅಂಗನವಾಡಿ ನೌಕರರನ್ನು ಕೆಲಸದಿಂದ ಏಕಮುಖವಾಗಿ ತೆಗೆಯಲಾಗಿದೆ. ಅಸಂಘಟಿತ, ಗುತ್ತಿಗೆ ನೌಕರರು, ದಿನಗೂಲಿ ನೌಕರರಿಗೂ ಕೆಲಸದ ಭದ್ರತೆಯ ಭಾಗವಾಗಿ ಕಾರ್ಮಿಕ ಕಾನೂನುಗಳು ಮತ್ತು ಸೇವಾ ನಿಯಮವಳಿಗಳಿದ್ದರೂ, ಉಲ್ಲಂಘನೆಯಾಗುತ್ತಿರುವುದನ್ನು ಪ್ರತಿಭಟನಾಕಾರರು ಖಂಡಿಸಿದರು.

ನವಂಬರ್ 22-23, 2016ರಂದು ಇನ್ನೂ ಹಲವು ಬೇಡಿಕೆಗಳಿಗೆ ಸಂಬಂಧಿಸಿದಂತೆ ಇಲಾಖಾ ನಿರ್ದೇಶಕರಿಗೆ ಹಾಗೂ ಕಾರ್ಯದರ್ಶಿಗಳಿಗೆ ನಿರ್ದಿಷ್ಠ ಬದಲಾವಣೆಗಳು ಹಾಗೂ ಆದೇಶಗಳು ಜಾರಿಯಾಗಬೇಕೆಂದು ಮನವಿ ಸಲ್ಲಿಸಲಾಗಿದ್ದರೂ ಸರ್ಕಾರ ಯಾವುದೇ ಕ್ರಮಕೈಗೊಳ್ಳದಿರುವುದರಿಂದ ದೇಶವ್ಯಾಪಿ ನೌಕರರು ಪ್ರತಿಭಟನೆಗೆ ಮುಂದಾದರು. ರಾಜ್ಯದ 127 ತಾಲ್ಲೂಕುಗಳಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚಿನ ಅಂಗನವಾಡಿ ನೌಕರರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ತಾಲ್ಲೂಕು ಕೇಂದ್ರಗಳ ಮೂಲಕ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸಿದ್ದಾರೆ.