ಇಎಸ್‍ಐ ಆಸ್ಪತ್ರೆ ಶೀಘ್ರ ನಿರ್ಮಾಣಕ್ಕೆ ಕಾರ್ಮಿಕರ ಒತ್ತಾಯ

ಸಂಪುಟ: 
11
ಸಂಚಿಕೆ: 
01
Sunday, 25 December 2016

ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ನೂರಾರು ಕೈಗಾರಿಕೆಗಳಲ್ಲಿ 30 ಸಾವಿರಕ್ಕೂ ಹೆಚ್ಚಿ ಕಾರ್ಮಿಕರು ದುಡಿಯುತ್ತಿದ್ದು ಕಾರ್ಮಿಕರ ಆರೋಗ್ಯದ ರಕ್ಷಣೆಗಾಗಿ ಇಎಸ್‍ಐ ಆಸ್ಪತ್ರೆ ನಿರ್ಮಿಸಬೇಕೆಂದು ಡಿಸೆಂಬರ್ 19ರಂದು ಸಿಐಟಿಯು ನೇತೃತ್ವದಲ್ಲಿ ತಾಲ್ಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಸುಮಾರು 1 ಲಕ್ಷ 50 ಸಾವಿರ ಜನ ಈ ಕಾರ್ಮಿಕರನ್ನು ಅವಲಂಬಿಸಿ ಜೀವನ ನಡೆಸುತ್ತಿದ್ದಾರೆ. ಸರ್ಕಾರಗಳು ಕಾರ್ಮಿಕರಿಗೆ ವೈದ್ಯಕೀಯ ಸೌಲಭ್ಯ ಒದಗಿಸಲು ಸಂಬಳದಿಂದ ಪ್ರತಿ ತಿಂಗಳು ಹಣ ಕಡಿತ ಮಾಡುತ್ತವೆ. ಆದ್ದರಿಂದ ಸುಸಜ್ರ್ಜಿತ ಆಸ್ಪತ್ರೆಗಳನ್ನು ಸ್ಥಾಪಿಸಿ ಕಾರ್ಮಿಕರಿಗೆ ವೈದ್ಯಕೀಯ ಸೌಲಭ್ಯ ಒದಗಿಸುವುದು ಸರ್ಕಾರದ ಮತ್ತು ನೌಕರರ ರಾಜ್ಯ ವಿಮಾ ನಿಗಮದ ಕಾನೂನು ಬದ್ಧ ಜವಾಬ್ದಾರಿಯಾಗಿರುತ್ತದೆ.

ದೊಡ್ಡಬಳ್ಳಾಪುರದ ಕೈಗಾರಿಕಾ ಪ್ರದೇಶದ ಅರಹಳ್ಳಿ ಗುಡ್ಡದಹಳ್ಳಿ, ಅಪೇರಲ್ ಪಾರ್ಕ್(ಕೆ.ಐ.ಡಿ.ಬಿ), ಎರಡನೇ ಹಂತದಲ್ಲಿ ಸುಸಜ್ಜಿತ ಇ.ಎಸ್.ಐ ಆಸ್ಪತ್ರೆ ನಿರ್ಮಾಣಕ್ಕೆ ಹಣ ಮಂಜೂರಾಗಿದ್ದು 3 ವರ್ಷಗಳ ಹಿಂದೆ ಆಗತಾನೆ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರು ಸೇರಿದಂತೆ ಕೇಂದ್ರ-ರಾಜ್ಯ ಸರ್ಕಾರದ ವತಿಯಿಂದ ಆಸ್ಪತ್ರೆ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿದರು. 2 ವರ್ಷಗಳಲ್ಲಿ ಆಸ್ಪತ್ರೆ ಪ್ರಾರಂಭಿಸುವುದಾಗಿ ಘೋಷಣೆ ಮಾಡಿದರು. ಆದರೆ ಇನ್ನೂ ನಿರ್ಮಾಣದ ಕಾಮಾಗಾರಿ ಪ್ರಾರಂಭಿಸಿಲ್ಲ.

ಸಂಬಂಧ ಪಟ್ಟ ಕಾರ್ಮಿಕ ಸಚಿವರಾಗಲೀ, ಕ್ಷೇತ್ರದ ಶಾಸಕರು ಆಸ್ಪತ್ರೆ ನಿರ್ಮಾಣದ ಬಗ್ಗೆ ಅಗತ್ಯ ಕಾಳಜಿ ವಹಿಸುತ್ತಿಲ್ಲ ಎಂದು ಕಾರ್ಮಿಕರು ದೂರಿದರು. ಅಲ್ಲದೇ ಅಸಂಘಟಿತ ಕಾರ್ಮಿಕರಿಗೂ ಇಎಸ್‍ಐ ಸೌಲಭ್ಯ ಜಾರಿಗೊಳಿಸಬೇಕೆಂದು ಆಗ್ರಹಿಸಲಾಯಿತು. ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಅಧ್ಯಕ್ಷರಾದ ಎನ್.ಪ್ರತಾಪ್‍ಸಿಂಹ, ತಾಲ್ಲೂಕು ಅಧ್ಯಕ್ಷರಾದ ರೇಣುಕಾರಾಧ್ಯ, ಪ್ರಧಾನ ಕಾರ್ಯದರ್ಶಿ ಪಿ.ಎ.ವೆಂಕಟೇಶ್, ಖಜಾಂಚಿ ಎಲ್.ಆರ್.ನಳೀನಾಕ್ಷಿ ಮತ್ತು ರೈತ ಮುಖಂಡರಾದ ಆರ್.ಚಂದ್ರತೇಜಸ್ವಿರವರು ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದರು.