ಆದಿವಾಸಿಗಳ ಎತ್ತಂಗಡಿ: ಮಂಗಳೂರಿನಲ್ಲಿ ಡಿವೈಎಫ್‍ಐ ಪ್ರತಿಭಟನೆ

ಸಂಪುಟ: 
11
ಸಂಚಿಕೆ: 
01
Sunday, 25 December 2016

ಕೊಡಗು ಜಿಲ್ಲೆಯ ದಿಡ್ಡಳ್ಳಿಯಲ್ಲಿ ಅರಣ್ಯ ಪ್ರದೇಶದಲ್ಲಿ 577 ಆದಿವಾಸಿ ಕುಟುಂಬಗಳನ್ನು ಒಕ್ಕಲೆಬ್ಬಿಸಿದುದರ ವಿರುದ್ಧ ಡಿವೈಎಫ್‍ಐ ದ.ಕ. ಜಿಲ್ಲಾ ಸಮಿತಿ ನೇತೃತ್ವದಲ್ಲಿ ಡಿಸೆಂಬರ್ 19ರಂದು ಮಂಗಳೂರಿನಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರಿನಲ್ಲಿ ಪ್ರತಿಭಟನೆ ನಡೆಯಿತು. ದೀರ್ಘ ಕಾಲದಿಂದ ಅರಣ್ಯದಲ್ಲೇ ವಾಸಿಸುತ್ತಿದ್ದ ಆದಿವಾಸಿಗಳನ್ನು ಅರಣ್ಯ ಹಕ್ಕು ಕಾಯಿದೆಯನ್ನು ಉಲ್ಲಂಘಿಸಿ - ಅರಣ್ಯ ಇಲಾಖೆ ಅಧಿಕಾರಿಗಳು ಎತ್ತಂಗಡಿ ಮಾಡಿದ್ದಾರೆ. ಬೀದಿಗೆ ಬಿದ್ದಿರುವ ಆದಿವಾಸಿಗಳ ರಕ್ಷಣೆಗೆ ರಾಜ್ಯ ಸರಕಾರ ಪುನರ್ವಸತಿ ಕ್ರಮ ಕೈಗೊಂಡಿಲ್ಲ. ಅತಿ ಶೀಘ್ರ ನಿರ್ವಸಿತರಿಗೆ ಪುನರ್ವಸತಿ ಮಾಡುವುದರೊಂದಿಗೆ, ತಾತ್ಕಾಲಿಕವಾಗಿ ನಿರಾಶ್ರಿತರ ಶಿಬಿರಗಳನ್ನು ತೆರೆಯಬೇಕೆಂದು ಪ್ರತಿಭಟನೆಯಲ್ಲಿ ಆಗ್ರಹಿಸಲಾಯಿತು.

ಪ್ರತಿಭಟನೆಯನ್ನುದ್ದೇಶಿಸಿ ಡಿವೈಎಫ್‍ಐ ರಾಜ್ಯ ಅಧ್ಯಕ್ಷ ಮುನೀರ್ ಕಾಟಿಪಳ್ಳ, ಜಿಲ್ಲಾ ಸಮಿತಿ ಅಧ್ಯಕ್ಷ ದಯಾನಂದ ಶೆಟ್ಟಿ, ಸಮುದಾಯ ಸಂಘಟನೆಯ ವಾಸುದೇವ ಉಚ್ಚಿಲ್ ಮಾತನಾಡಿದರು. ಜಿಲ್ಲಾ ಸಮಿತಿಯ ಸಂತೋಷ್ ಬಜಾಲ್, ಬಿ.ಕೆ.ಇಮ್ತಿಯಾಜ್ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ದಿಡ್ಡಳ್ಳಿ ಆದಿವಾಸಿಗಳನ್ನು  ಬೆಂಬಲಿಸಿ ಪ್ರತಿಭಟನೆ

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ದಿಡ್ಡಳ್ಳಿ ಗ್ರಾಮದ ಆದಿವಾಸಿಗಳನ್ನು ಒಕ್ಕಲೆಬ್ಬಿಸಿರುವ ಕ್ರಮ ಖಂಡಿಸಿ, ಪುನರ್ ವಸತಿಗೆ ಒತ್ತಾಯಿಸಿ ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಡಿಸೆಂಬರ್ 20 ರಂದು ಜನವಾದಿ ಮಹಿಳಾ ಸಂಘಟನೆ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಮುಖಂಡರಾದ ದೇವಿ, ಸುನೀತ, ಸುಶೀಲ, ಮಂಜುಳ, ಎನ್.ಎಲ್.ಭರತ್‍ರಾಜ್, ತಿಮ್ಮೇಗೌಡ, ಲಿಂಗರಾಜ್‍ಮೂರ್ತಿ ಉಪಸ್ಥಿತರಿದ್ದರು.