ಮಧ್ಯಪ್ರದೇಶದ ಆಡಳಿತ ಮುಖ್ಯಮಂತ್ರಿಗಳ ಕೈಯಲ್ಲಿದೆಯೋ ಅಥವ ಆರೆಸ್ಸೆಸ್‍ನವರ ಕೈಯಲ್ಲೋ -ಸಿಪಿಐ(ಎಂ) ಪ್ರಶ್ನೆ

ಸಂಪುಟ: 
10
ಸಂಚಿಕೆ: 
52
Sunday, 18 December 2016

ಡಿಸೆಂಬರ್ 10 ರಂದು ಭೋಪಾಲಕ್ಕೆ ಬಂದಿದ್ದ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‍ರನ್ನು ನಗರದಲ್ಲಿರುವ ಕೇರಳೀಯರು ಸನ್ಮಾನಿಸಲು ಒಂದು  ಸಮಾರಂಭಕ್ಕೆ ಆಹ್ವಾನಿಸಿದ್ದರು. ಆದರೆ ಅಲ್ಲಿಗೆ ಹೊರಟ ಮುಖ್ಯಮಂತ್ರಿಗಳನ್ನು ಅಲ್ಲಿಯ ಪೋಲಿಸ್ ಅಧಿಕಾರಿಗಳು ತಡೆದರು, ಅಲ್ಲಿಗೆ  ಹೋಗಬೇಡಿ, ಆರೆಸ್ಸೆಸ್‍ನ ಕೆಲವರು ಅಲ್ಲಿ ಪ್ರತಿಭಟನೆ ನಡೆಸಲಿದ್ದಾರೆ, ನಿಮಗೆ ರಕ್ಷಣೆ ಕೊಡಲು ನಮಗೆ ಸಾಧ್ಯವಿಲ್ಲ ಎಂದರಂತೆ. ಇದರಿಂದ ಕುಪಿತರಾದ ವಿಜಯನ್ ಸಮಾರಂಭಕ್ಕೆ ಹೋಗದೆ ಹಿಂದಿರುಗಿದರು.

ಬೇರೆ ರಾಜ್ಯದ ಮುಖ್ಯಮಂತ್ರಿಗಳು ಬಂದಾಗ, ತಮ್ಮ ರಾಜ್ಯದಿಂದ ಬಂದು ನೆಲೆಸಿದವರನ್ನು ಭೇಟಿ ಮಾಡುವ ಸಾಮಾನ್ಯ ಸಮಾರಂಭಕ್ಕೂ ಹೋಗಬೇಡಿ ಎನ್ನುವುದು ಆ ರಾಜ್ಯದ ಕಾನೂನು ವ್ಯವಸ್ಥೆ ಆ ರಾಜ್ಯದ ಪೋಲೀಸರ ಕೈಯಲ್ಲಿಲ್ಲ, ಕೆಲವು ಕಿಡಿಗೇಡಿಗಳ ಕೈಯಲ್ಲಿದೆ ಎಂಬುದನ್ನು ತೋರಿಸುತ್ತದೆ ಎಂದು ಸಿಪಿಐ(ಎಂ) ಮಧ್ಯಪ್ರದೇಶ ರಾಜ್ಯಸಮಿತಿ ಬಲವಾಗಿ ಖಂಡಿಸಿದೆ.

ಆ ನಂತರ ರಾಜ್ಯ ಮುಖ್ಯಮಂತ್ರಿಗಳು ಈ ಬಗ್ಗೆ ವಿಷಾದ ವ್ಯಕ್ತಪಡಿಸುತ್ತ ಕ್ಷಮೆ ಕೇಳಿರುವುದಾಗಿ ವರದಿಯಾಗಿದೆ. ಅಂದರೆ ಮಧ್ಯಪ್ರದೇಶದ ಆಡಳಿತ ಅಲ್ಲಿಯ ಮುಖ್ಯಮಂತ್ರಿಗಳ ಕೈಯಲ್ಲಿದೆಯೋ ಅಥವ ಆರೆಸ್ಸೆಸ್‍ನವರ ಕೈಯಲ್ಲೋ ಎಂದು ಸಿಪಿಐ(ಎಂ) ರಾಜ್ಯ ಸಮಿತಿ ಕೇಳಿದೆ.

ಪೊಲಿಟ್‍ಬ್ಯುರೊ ಖಂಡನೆ

ಮಧ್ಯಪ್ರದೇಶ ಪೋಲಿಸ್ ಮತ್ತು ಆಡಳಿತದ ಈ ವರ್ತನೆಯನ್ನು ಸಿಪಿಐ(ಎಂ) ಪೊಲಿಟ್‍ಬ್ಯುರೊ ಬಲವಾಗಿ ಖಂಡಿಸಿದೆ.

ಈ ಘಟನೆ ಮಧ್ಯಪ್ರದೇಶ ಸರಕಾರ ಆರೆಸ್ಸೆಸ್ ಫರ್ಮಾನುಗಳಂತೆ ಕೆಲಸ ಮಾಡುತ್ತಿದೆ ಎಂಬುದನ್ನು ತೋರಿಸುತ್ತದಲ್ಲದೆ, ತನ್ನ ರಾಜಧಾನಿಯಲ್ಲೇ ಬೇರೊಂದು ರಾಜ್ಯದ ಮುಖ್ಯಮಂತ್ರಿಗಳಿಗೆ ರಕ್ಷಣೆ ಕೊಡಲಾರದ ಅಲ್ಲಿನ ಕಾನೂನು ವ್ಯವಸ್ಥೆಯ ಬಗ್ಗಯೂ ಸಾಕಷ್ಟು ಹೇಳುತ್ತದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಟಿಪ್ಪಣಿ ಮಾಡಿದೆ.