ಕೋಲಾರದಲ್ಲಿ ಅಪ್ರತಿಮ ಕ್ರಾಂತಿಕಾರಿ ಫಿಡೆಲ್ ಕ್ಯಾಸ್ಟ್ರೋಗೆ ಶ್ರದ್ಧಾಂಜಲಿ

ಸಂಪುಟ: 
10
ಸಂಚಿಕೆ: 
52
Sunday, 18 December 2016

ಕ್ಯೂಬಾ ದೇಶದ ಜನತೆಯ ನೇತಾರ ಸಮಾಜವಾದಿ ಕ್ರಾಂತಿಕಾರಿ ಸಂಗಾತಿ ಫಿಡೆಲ್ ಕ್ಯಾಸ್ಟ್ರೋರವರಿಗೆ ಡಿಸೆಂಬರ್ 04 ರಂದು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನಲ್ಲಿ ಸಿಪಿಐ(ಎಂ) ತಾಲೂಕು ಸಮಿತಿಯಿಂದ ಶ್ರದ್ಧಾಂಜಲಿ ಸಭೆ ನಡೆಯಿತು.

ಶ್ರದ್ಧಾಂಜಲಿ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಬಂಗಾರಪೇಟೆ ತಾಲೂಕು ಸಮಿತಿಯ ಕಾರ್ಯದರ್ಶಿ ಕಾ||ಜಿ.ಅರ್ಜುನನ್ ರವರು ಮಾತಾಡುತ್ತಾ ಫಿಡೆಲ್ ಕ್ಯಾಸ್ಟೋರವರು ಕ್ರಾಂತಿಕಾರಿ ಹೋರಾಟದ ಮೂಲಕ ಕ್ಯೂಬಾ ದೇಶದಲ್ಲಿ ಸಮಾಜವಾದವನ್ನು ಸ್ಥಾಪಿಸಿದರು. ಸಾಮ್ರಾಜ್ಯಶಾಹಿಗೆ ಒಂದು ಸವಾಲಾಗಿ ಜೀವನದುದ್ದಕ್ಕೂ ಸೆಟೆದು ನಿಂತವರು. ಆರಂಭದಲ್ಲಿ ಗೆರಿಲ್ಲ ಯುದ್ಧ ತಂತ್ರದ ಮೂಲಕ ಸಶಸ್ತ್ರ ಹೋರಾಟವನ್ನು ಆರಂಭಿಸಿದ ಅವರು ನಂತರ ಕಾರ್ಮಿಕರನ್ನು, ರೈತರನ್ನು, ಜನಸಾಮಾನ್ಯರನ್ನು ಒಗ್ಗೂಡಿಸಿ ಬಂಡವಾಳಶಾಹಿ ಸರ್ವಾಧಿಕಾರಿ ಸರ್ಕಾರಕ್ಕೆ ವಿರುದ್ಧವಾಗಿ ಕ್ರಾಂತಿ ನಡೆಸಿದ ಪ್ರಪಂಚದ ಹೆಸರಾತ ಜನನಾಯಕ ಫಿಡೆಲ್ ಕ್ಯಾಸ್ಟ್ರೋ. ದೇಶದಲ್ಲಿ ಜನತೆಗಾಗಿ ಹೋರಾಡುತ್ತಿರುವ ಮಾಕ್ರ್ಸ್‍ವಾದಿ ಕಮ್ಯೂನಿಸ್ಟ್ ಪಕ್ಷಕ್ಕೆ ಒಂದು ಬಲವಾದ ಶಕ್ತಿಯಾಗುತ್ತಿದೆ ಎಂದು ಶ್ರದ್ದಾಂಜಲಿ ಅರ್ಪಿಸಿದರು.

ಜಿಲ್ಲಾ ಸಮಿತಿ ಸದಸ್ಯ ಸಂಗಾತಿ ಕಾಂ||ಅಚ್ಯುತರವರು ಮಾತಾಡುತ್ತಾ ಮಹಾನ್ ಮಾಕ್ರ್ಸ್‍ವಾದಿ ಚಿಂತಕ ಫಿಡೆಲ್ ಕ್ಯಾಸ್ಟೋರವರು ಸಣ್ಣ ವಯಸ್ಸಿನಲ್ಲೇ ಭ್ರಷ್ಟಾಚಾರದ ವಿರುದ್ಧ, ಬಡತನದ ವಿರುದ್ಧ, ಅನಾರೋಗ್ಯದ ವಿರುದ್ಧ ಹೋರಾಡಲು ಜನತೆಯನ್ನು ಎಚ್ಚರಗೊಳಿಸಿದರು. ಅಪಾರ ಜನತೆಯ ವಿಶ್ವಾಸವನ್ನು ಗಳಿಸಿ ಆ ದೇಶದ ಪರಿಸ್ಥಿತಿಗೆ ಅನುಗುಣವಾಗಿ ಮಾಕ್ರ್ಸ್‍ವಾದವನ್ನು ಅಳವಡಿಸಿಕೊಂಡು ಸಾಮಾನ್ಯ ಜನತೆಯ ದನಿಗೆ ದನಿಯಾಗಿ ಸಮಾಜವಾದಿ ಸಮಾಜ ನಿರ್ಮಾಣ ಮಾಡುತ್ತಾ ಕ್ರಾಂತಿಯ ಆಶಯವನ್ನು ಕಡೆಯವರೆಗೂ ಕಾಪಾಡಿಕೊಂಡು ಬಂದರು. ನಮ್ಮ ಪ್ರದೇಶದಲ್ಲಿ ಪಕ್ಷವನ್ನು, ಸಂಘಟನೆಗಳನ್ನು ಐಕ್ಯತೆಯಿಂದ ಬಲಿಷ್ಠವಾಗಿ ಕಟ್ಟುವುದೇ ನಾವು ಅವರಿಗೆ ಅರ್ಪಿಸುವ ಕ್ರಾಂತಿಕಾರಿ ಶ್ರದ್ಧಾಂಜಲಿಯಾಗುತ್ತದೆ ಎಂದರು.

ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾಗಿರುವ ಕಾಂ||ವಿ.ತಂಗರಾಜ್, ಕಾಂ||ವಿ.ಶ್ರೀನಿವಾಸನ್, ಕಾಂ||ಎ.ಆರ್. ಬಾಬು ಮಾತನಾಡಿದರು.

-----------

20ನೇ ಶತಮಾನದ ಮಹಾನ್ ಕ್ರಾಂತಿಕಾರಿ ಫಿಡಲ್ ಕ್ಯಾಸ್ಟ್ರೋರವರಿಗೆ ಮೈಸೂರಿನಲ್ಲಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯನ್ನು ಉದ್ದೇಶಿಸಿ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಹಾಗೂ ಮಾಜಿ ಶಾಸಕರಾದ ಕಾಂ||ಜಿ.ವಿ.ಶ್ರೀರಾಮರೆಡ್ಡಿರವರು ಮಾತನಾಡಿದರು. ಡಿಸೆಂಬರ್ 07ರಂದು ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆಯನ್ನು ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಕಾಂ||ಕೆ.ಬಸವರಾಜು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಿಪಿಐ ಮುಖಂಡರಾದ ಕಾಂ||ರಾಜು, ಎಸ್‍ಯುಸಿಐ(ಸಿ) ಜಿಲ್ಲಾ ಕಾರ್ಯದರ್ಶಿ ಕಾಂ||ರವಿ ಉಪಸ್ಥಿತರಿದ್ದರು. ಎಡಪಕ್ಷದ ಸಂಗಾತಿಗಳು ಶ್ರದ್ಧಾಂಜಲಿಯಲ್ಲಿ ಭಾಗವಹಿಸಿ ತಮ್ಮ ನಮನವನ್ನು ಸಲ್ಲಿಸಿದರು.