ಕ್ಯೂಬಾದಲ್ಲಿ ಉಚಿತ ಶಿಕ್ಷಣ, ಆರೋಗ್ಯ

ಸಂಪುಟ: 
10
ಸಂಚಿಕೆ: 
52
Sunday, 18 December 2016

ಓದು, ವಿಚಾರ ಮಾಡು ಮತ್ತು ಪ್ರಶ್ನಿಸು ಎಂಬುದು ಕ್ಯಾಸ್ಟ್ರೋ ಅವರ ಸಂದೇಶವಾಗಿತ್ತು. ನಾಯಕರು ಹೇಳುವ ಮಾತುಗಳನ್ನು ಕುರುಡಾಗಿ ನಂಬಬಾರದು. ಪ್ರತಿಯೊಂದು ವಿಷಯವನ್ನು ಪರಾಮರ್ಶಿಸಿ ಜನರು ತೀರ್ಮಾನ ತೆಗೆದುಕೊಳ್ಳಬೇಕು ಎಂದು ಫಿಡೆಲ್ ಕ್ಯಾಸ್ಟ್ರೋ ಬಯಸಿದ್ದರು. ವಿಶ್ವದ ಸಣ್ಣ ದೇಶಗಳಲ್ಲೊಂದಾದ ಕ್ಯೂಬಾದಲ್ಲಿ ಎಲ್ಲರಿಗೂ ಉಚಿತ ಆರೋಗ್ಯ ಮತ್ತು ಉಚಿತ ಶಿಕ್ಷಣ ನೀಡಲಾಗುತ್ತಿದೆ. ಆದರೆ ಭಾರತದಲ್ಲಿ ಅಸ್ಪøಶ್ಯತೆಯನ್ನು ಇಂದಿಗೂ ನಿವಾರಣೆ ಮಾಡಲಾಗಿಲ್ಲ ಎಂದು ಸಿಪಿಎಂ ರಾಜ್ಯ ಮಂಡಳಿ ಸದಸ್ಯ ಜಿ.ಎನ್.ನಾಗರಾಜ್ ತಿಳಿಸಿದ್ದಾರೆ.

ತುಮಕೂರಿನ ಗಾಂಧಿನಗರಲ್ಲಿ ಡಿಸೆಂಬರ್ 04ರಂದು ಸಿಐಟಿಯು, ಎಸ್‍ಎಫ್‍ಐ ಮತ್ತು ಡಿವೈಎಫ್‍ಐ ವತಿಯಿಂದ ಕ್ಯೂಬಾ ಮಾಜಿ ಅ ಧ್ಯಕ್ಷ ಫಿಡೆಲ್ ಕ್ಯಾಸ್ಟ್ರೋ ಅವರಿಗೆ ಶ್ರದ್ಧಾಂಜಲಿ ಸಭೆ ಹಮ್ಮಿಕೊಳ್ಳಲಾಗಿತ್ತು.

ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಸಿಪಿಎಂ ರಾಜ್ಯ ಮಂಡಳಿ ಸದಸ್ಯ ಜಿ.ಎನ್.ನಾಗರಾಜ್, ಫಿಡೆಲ್ ಕ್ಯಾಸ್ಟ್ರೋ ಕ್ಯೂಬಾದ ಅಧಿಕಾರ ವಹಿಸಿಕೊಂಡ ಒಂದು ವಾರದಲ್ಲೇ ಬಂಡವಾಳಗಾರರು ಅಕ್ರಮವಾಗಿ ಹೊಂದಿದ್ದ ಎಲ್ಲರ ಆಸ್ತಿಯನ್ನು ಸರ್ಕಾರದ ವಶಕ್ಕೆ ಪಡೆದುಕೊಂಡರು. ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದವರಿಗೆ ಅರ್ಧ ಬಾಡಿಗೆ ನೀಡುವಂತೆ ಆದೇಶಿಸಿದರು. ಅರ್ಧದಷ್ಟು ವಿದ್ಯುತ್ ಶುಲ್ಕವನ್ನು ಕಡಿತ ಮಾಡಲಾಯಿತು. ಇದರಿಂದ ಎಲ್ಲ ಜನರ ಕೈಯಲ್ಲಿ ಹಣ ಉಳಿತಾಯವಾಯಿತು. ತಮಗೆ ಬೇಕಾದ ವಸ್ತುಗಳನ್ನು ಕೊಳ್ಳಲು ಅನುಕೂಲವಾಯಿತು. ಹೀಗಾಗಿ ಸಾಕಷ್ಟು ಬದಲಾವಣೆಯಾಯಿತು ಎಂದು ಹೇಳಿದರು.

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್.ರೇವಣ್ಣ ಮಾತನಾಡಿ, ಫಿಡಲ್ ಕ್ಯಾಸ್ಟ್ರೋ ತತ್ವ ಸಿದ್ದಾಂತಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ಸಣ್ಣ ರಾಷ್ಟ್ರವೊಂದರ ಅಧ್ಯಕ್ಷರಾಗಿದ್ದರೂ ವಿಶ್ವದ ಗಮನ ಸೆಳೆದರು. ಲೆನಿನ್‍ನಂತಹ ಮಹಾನ್ ನಾಯಕರು ಕೂಡ ವಿಶ್ವದಲ್ಲಿ ಶಾಂತಿ ನೆಲಸಬೇಕೆಂದು ಬಯಸಿದರು. ಮಹಾತ್ಮ ಗಾಂಧಿಗಿಂತಲೂ ಲೆನಿನ್ ಶಾಂತಿ ಇರಬೇಕೆಂದು ಪ್ರತಿಪಾದಿಸಿದವರಲ್ಲಿ ಪ್ರಮುರಾಗಿದ್ದಾರೆ ಎಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿದರು.

ಸಭೆಯಲ್ಲಿ ಕಟ್ಟಡ ಕಾರ್ಮಿಕ ಸಂಘ ಅ ಧ್ಯಕ್ಷ ಬಿ.ಉಮೇಶ್, ಸಮುದಾಯ ಕಾರ್ಯದರ್ಶಿ ಕೆ.ಈ.ಸಿದ್ದಯ್ಯ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಎನ್.ಕೆ.ಸುಬ್ರಹ್ಮಣ್ಯ, ಷಣ್ಮುಖಪ್ಪ, ಡಿವೈಎಫ್‍ಐ ಎಸ್.ರಾಘವೇಂದ್ರ ಉಪಸ್ಥಿತರಿದ್ದರು. ಸಮುದಾಯದ ಸದಸ್ಯ ಲಕ್ಷ್ಮಣ್ ಕ್ರಾಂತಿಗೀತೆ ಹಾಡಿ, ಸ್ವಾಗತಿಸಿದರು. ರಾಮಚಂದ್ರು ವಂದಿಸಿ, ಎಸ್‍ಎಫ್‍ಐ ಕಾರ್ಯದರ್ಶಿ ಈ.ಶಿವಣ್ಣ ನಿರೂಪಿಸಿದರು.

ವರದಿ:  ಎಸ್.ರಾಘವೇಂದ್ರ