ಶೇ.50 ರಷ್ಟು ಮಹಿಳಾ ಮೀಸಲಾತಿಗಾಗಿ ಪ್ರಚಾರ ಜಾಥಾ

ಸಂಪುಟ: 
10
ಸಂಚಿಕೆ: 
52
Sunday, 18 December 2016

ಮಹಿಳಾ ಸಮಾನತೆಯ ಹೋರಾಟದ ಮುಂಚೂಣಿಯಲ್ಲಿರುವ ಅಖಿಲ ಭಾರತ ಜನವಾದಿ ಮಹಿಳಾ ಸಂಘನೆಯ 11ನೇ ರಾಷ್ಟ್ರೀಯ ಸಮ್ಮೇಳನ ವಿಶ್ವ ಮಾನವ ಹಕ್ಕುಗಳ ದಿನ ಡಿಸೆಂಬರ್ 10-14ರಲ್ಲಿ ಮಧ್ಯಪ್ರದೇಶದ ಭೂಪಾಲ್ ನಲ್ಲಿ ನಡೆದಿದೆ. ಸಂವಿಧಾನದತ್ತ ಹಕ್ಕುಗಳನ್ನು ರಕ್ಷಿಸಲು ಪಣತೊಟ್ಟ ಸಮ್ಮೇಳನದ ಪೂರ್ವಭಾವಿಯಾಗಿ 'ಶಾಸನ ಸಭೆಗಳಲ್ಲಿ 50% ಮೀಸಲಾತಿಗೆ ನಮ್ಮ ಹಕ್ಕು ನಾವು ಅದನ್ನು ಪಡೆದೇ ಪಡೆಯುತ್ತೇವೆ' ಘೋಷಣೆಯಡಿಯಲ್ಲಿ ಕೇರಳದಿಂದ ಭೂಪಾಲ್ ವರೆಗೆ ರಿಲೇ ಜಾಥಾ ನಡೆದಿದೆ. ತಮಿಳುನಾಡಿನ ಹೊಸೂರಿನಿಂದ ಡಿಸೆಂಬರ್ 3ರಂದು ಕರ್ನಾಟಕಕ್ಕೆ ಪ್ರವೇಶಿಸಿತು.

ಜಾಥವನ್ನು ಜನವಾದಿ ಮಹಿಳಾ ಸಂಘಟನೆ ಹಾಗೂ ಆಟೋರಿಕ್ಷಾ ಡ್ರೈವರ್ಸ್ ಯೂನಿಯನ್ಸ್, ಆನೇಕಲ್ ತಾಲ್ಲೂಕು ಸಮಿತಿ ವತಿಯಿಂದ ಅತ್ತಿಬೆಲೆ ಗಡಿಯಲ್ಲಿ ಸ್ವಾಗತ ಮಾಡುವ ಮುಖಾಂತರ ಬರಮಾಡಿಕೊಳ್ಳಲಾಯಿತು.

ಆನೇಕಲ್‍ನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಬಹಿರಂಗ ಸಭೆ ನಡೆಸಿ, ಆನೇಕಲ್ ತಾಲ್ಲೂಕು ಸಂಚಾಲಕರಾದ ಅರ್ಚನ ಮಾತನಾಡಿ `ಶಾಸನ ಸಭೆಗಳಲ್ಲಿ ಶೇ.50% ರಷ್ಟು ಮೀಸಲಾತಿ ನೀಡಬೇಕು ಆಗ ಮಾತ್ರ ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಭ್ರಷ್ಠಚಾರವನ್ನು ತಡೆಗಟ್ಟಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.

ಕಾರ್ಯಕ್ರಮದ ನೇತೃತ್ವವವನ್ನು ಸಂಚಾಲಕರಾದ ಅರ್ಚನ, ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರಾದ ಬಾಲರಾಜ್, ಸಿಐಟಿಯುನ ಚಂದ್ರಶೇಖರ್, ಸುರೇಶ್, ಜಾವೀದ್ ಅಹಮ್ಮದ್ ವಹಿಸಿದರು. ಸಭೆಯಲ್ಲಿ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳು ಭಾಗವಹಿಸಿದರು.

ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ ಸಭೆ ನಡೆದು ಅಂದು ಸಂಜೆ 5 ಘಂಟೆಗೆ ನಗರದ ಪುರಭವನದ ಎದುರು ಸಮಾರೋಪಗೊಂಡಿತು. ಅಲ್ಲಿಂದ ಮುಂದಕ್ಕೆ ಚಿಕ್ಕಬಳ್ಳಾಪುರದಲ್ಲಿ ಸಭೆಯನ್ನು ನಡೆಸಿ, ಆಂಧ್ರಪ್ರದೇಶದ ಅನಂತಪುರಕ್ಕೆ ತೆರಳಿತು.

ಜಾಥಾವು ಅನೇಕಲ್ ಅತ್ತಿಬೆಲೆ ಶಾಂತಿನಗರ, ಟೌನ್‍ಹಾಲ್ ಭಾಗದಲ್ಲಿ ಸಭೆಯನ್ನು ನಡೆಸಿತು. ರಾಜ್ಯ ಮುಖಂಡರಾದ ಕೆ.ಎಸ್.ಲಕ್ಷ್ಮೀ, ಕೆ.ಎಸ್.ಶಾರದಾ, ಸುನಂದ, ಶ್ರೀಮತಿ, ಗೌರಮ್ಮ, ಕೆ.ಎಸ್.ವಿಮಲಾ, ಮತ್ತಿತರ ಮುಖಂಡರು ಜಾಥಾದೊಟ್ಟಿಗೆ ಭಾಗವಹಿಸಿದ್ದರು.