`ಅಂಗವಿಕಲರ ಮಾನವ ಸರಪಳಿ’

ಸಂಪುಟ: 
10
ಸಂಚಿಕೆ: 
52
Sunday, 18 December 2016

ದೇಶದಾದ್ಯಂತ ನಡೆದ ಅಂಗವಿಕಲರ ಹೋರಾಟದ ಫಲವಾಗಿ ಕೇಂದ್ರ ಸರ್ಕಾರ ನೂತನ “ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯಿದೆ”ಯನ್ನು ಅಂತಿಮಗೊಳಿಸಿ ರಾಜ್ಯಸಭೆಯ ಅಜೆಂಡದಲ್ಲಿ ಸೇರಿಸಿದೆ. ಅಂಗವಿಕಲರ ಹೋರಾಟಕ್ಕೆ ಸಂದ ಮೊದಲ ಜಯ ಇದು. ಆದರೆ ಅದೇ ಸಮಯದಲ್ಲಿ ರಾಜ್ಯಸಭೆ ಮುಂದೆ ಅದನ್ನು ಇನ್ನೂ ಮಂಡಿಸಲಾಗಲಿಲ್ಲ.

ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಸಂಸತ್ತಿನ ಎರಡು ಸದನದಲ್ಲಿ ಮಂಡಿಸಿ ಅಂಗೀಕರಿಸಿ ಕೂಡಲೆ ಜಾರಿ ಮಾಡಬೇಕೆಂದು ಒತ್ತಾಯಿಸಲು ಅಂಗವಿಕಲರ ದಿನಾಚರಣೆಯ ದಿನವಾದ ಡಿಸೆಂಬರ್ 03ರಂದು ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದ ಬಳಿ ಒಂದು ಅಂಗವಿಕಲ ವ್ಯಕ್ತಿಗಳ ಸಮುದಾಯದ ಮಾನವ ಸರಪಳಿ ರಚಿಸಿ ಒತ್ತಾಯಿಸಿದರು.

ಅದೇ ಸಮಯದಲ್ಲಿ ಈಗ ರಾಜ್ಯಸಭೆ ಮುಂದೆ ಮುಂಡಿಸಲಾಗುವ ಕಾಯಿದೆಯಲ್ಲಿ ಕೆಲವು ಮುಖ್ಯ ಕೊರತೆಗಳಿವೆ, ಉದ್ಯೋಗ ಮತ್ತು ಶಿಕ್ಷಣ ಮೀಸಲಾತಿ ಪ್ರಸ್ತಾವವನ್ನು ಶೇ.5% ರಿಂದ ಶೇ.4%ಕ್ಕೆ ಇಳಿಸಲಾಗಿದೆ.  ಉದ್ಯೋಗಕ್ಕೆ ಸಂಬಂಧಿಸಿದಂತೆ ಸರ್ವೊಚ್ಛ ನ್ಯಾಯಾಲಯ ನೀಡಿದ ತೀರ್ಪನ್ನು ಸದರಿ ಕಾಯಿದೆಯಲ್ಲಿ ಅಳವಡಿಸಲಿಲ್ಲ. ಕೊರತೆಗಳನ್ನು ನೀಗಿಸಿ, ಕಾಯಿದೆಯನ್ನು ಮತಷ್ಟು ಬಳಪಡಿಸಬೇಕೆಂದು ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ನೇತೃತ್ವದಲ್ಲಿ  ಈ ಮಾನವ ಸರಪಳಿಯನ್ನು ಹಮ್ಮಿಕೊಳ್ಳಲಾಗಿತ್ತು.

ಕರ್ನಾಟಕದಲ್ಲಿ ರಾಜ್ಯ ಸರ್ಕಾರ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಆಶ್ವಾಸನೆಯಂತೆ ಶೇ.40% ಅಂಗವಿಕಲತೆಯುಳ್ಳವರಿಗೆ ತಿಂಗಳ ಮಾಶಾಸನ ರೂ.3,000/- ಮತ್ತು ಶೇ.75%ಕಿಂತ ಹೆಚ್ಚು ಅಂಗವಿಕಲತೆಯುಳ್ಳವರಿಗೆ ರೂ.5,000/-ಕ್ಕೆ ಏರಿಸಬೇಕೆಂದು ಒತ್ತಾಯಿಸಲಾಯಿತು.

ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ಅಧ್ಯಕ್ಷರಾದ ಜಿ.ಎನ್.ನಾಗರಾಜ್ ಮತ್ತು ಆಶಾ ಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ಜಯಶ್ರೀ ರಮೇಶ್, ಅಂಗವಿಕಲರನ್ನು ಮತ್ತು ಪಾಲಕರನ್ನು ಉದ್ದೇಶಿಸಿ ಮಾತನಾಡಿದರು. ಸೃಷ್ಠಿ ಸ್ಪೆಷಲ್ ಅಕ್ಯಾಡೆಮಿ ಮೊದಲಾದ ಸಂಸ್ಥೆಗಳು ಈ ಮಾನವ ಸರಪಳಿಯಲ್ಲಿ ಭಾಗವಹಿಸಿದರು.