ಸಿಗರನಹಳ್ಳಿಯಲ್ಲಿ ಡಿ.ಹೆಚ್.ಎಸ್. ಘಟಕ ಉದ್ಘಾಟನೆ

ಸಂಪುಟ: 
10
ಸಂಚಿಕೆ: 
52
Sunday, 18 December 2016

ಸಿಗರನಹಳ್ಳಿಯಲ್ಲಿ ದೇವಸ್ಥಾನ ಪ್ರವೇಶ ಮತ್ತು ಸಮುದಾಯ ಭವನ ಪ್ರವೇಶವನ್ನು ನಿರಾಕರಿಸುವ ಮೂಲಕ ಪಟ್ಟಭದ್ರ ಹಿತಾಸಕ್ತಿಗಳು ನೇರವಾಗಿ ಸಂವಿಧಾನಾತ್ಮಕ ಹಕ್ಕುಗಳನ್ನು ನಿರಾಕರಿಸಿದ್ದ ಕಾರಣಕ್ಕೆ ಹೋರಾಟ-ಚಳುವಳಿ ಹುಟ್ಟಿಕೊಂಡದ್ದು ಎಂದು ಹಿರಿಯ ದಲಿತ ಮುಖಂಡರು ಮತ್ತು ಪ್ರಗತಿಪರ ಚಿಂತಕರಾದ ಡಾ.ವಿ.ಲಕ್ಷ್ಮಿನಾರಾಯಣರವರು ಹೇಳಿದರು.

ಅವರು ಡಿಸೆಂಬರ್ 11ರಂದು ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಸಿಗರನಹಳ್ಳಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್‍ರವರ 125ನೇ ಜನ್ಮ ವರ್ಷಾಚರಣೆ ಮತ್ತು ದಲಿತ ಹಕ್ಕುಗಳ ಸಮಿತಿ (ಡಿಎಚ್‍ಎಸ್)ನ ಘಟಕ ಉಧ್ಘಾಟಿಸಿ ಮಾತನಾಡುತ್ತಿದ್ದರು.

ಮುಂದುವರೆದು ಮಾತನಾಡಿದ ಅವರು ಭಾರತದಲ್ಲಿ ಆರ್ಥಿಕ ಅಸಮಾನತೆ ಮತ್ತು ಜಾತಿಯ ಅಸಮಾನತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಬಡವ ಮತ್ತು ಶ್ರೀಮಂತರ ನಡುವಿನ ಅಂತರ ಹೆಚ್ಚಾಗುತ್ತಿದೆ. ಭೂಮಾಲಕ ಶಕ್ತಿಗಳಿಂದ ದಲಿತರ ಮೇಲಿನ ದೌರ್ಜನ್ಯವನ್ನು ಹೆಚ್ಚಿಸುತ್ತಿವೆ. ಇದು ಸಂವಿಧಾನದ ಆಶಯಗಳಿಗೆ ಅಪಾಯವನ್ನು ತಂದೊಡ್ಡುತ್ತಿದೆ. ಜಾತಿ ವಿನಾಶ ಕೇವಲ ದಲಿತರಿಂದ ಮಾತ್ರ ಸಾಧ್ಯವಿಲ್ಲ, ಮೇಲ್ಜಾತಿ ಪ್ರಗತಿಪರರು ಮನುಷ್ಯ ಪ್ರೇಮಿಗಳು ಕೈಜೋಡಿಸಬೇಕು. ಈ ಹೋರಾಟ ಅಂತಿಮವಾಗಿ ವರ್ಗ ಹೋರಾಟವಾಗಿ ಮಾರ್ಪಟ್ಟಾಗ ಮಾತ್ರ ಜಾತಿ ವ್ಯವಸ್ಥೆ ನಾಶವಾಗಲು ಸಾಧ್ಯ. ದೇಶದಲ್ಲಿ ಕಮ್ಯೂನಿಸ್ಟರು ಅಂಬೇಡ್ಕರವರ ಗೌರವವನ್ನು ಹೆಚ್ಚಿಸುವಂತಹ ಮತ್ತು ಅವರ ಆಶಯಗಳನ್ನು ಈಡೇರಿಸುವಂತೆ ದಲಿತರ ಮಧ್ಯೆ ಕೆಲಸ ಮಾಡುತ್ತಿದ್ದಾರೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಾಜಿ ಶಾಸಕರು ಮತ್ತು ಸಿಪಿಐಎಂನ ರಾಜ್ಯ ಕಾರ್ಯದರ್ಶಿಗಳಾದ ಜಿ.ವಿ.ಶ್ರೀರಾಮರೆಡ್ಡಿಯವರು ಮಾತನಾಡುತ್ತಾ ``ಸಂವಿಧಾನವನ್ನು ದೇಶಕ್ಕೆ ಅರ್ಪಣೆ ಮಾಡಿದ ಅಂಬೇಡ್ಕರವರು ಅಂದೇ ದೇಶವನ್ನುದ್ದೇಶಿಸಿ ಒಂದು ಮಾತನಾಡಿದ್ದರು, ನಮಗೆ ರಾಜಕೀಯ ಸಮಾನತೆ ಸಿಕ್ಕಿದೆ ಆದರೆ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆ ಇನ್ನೂ ಜೀವಂತವಾಗಿದೆ ಎಂದಿದ್ದರು. ಆ ಮಾತು ಇಂದಿಗೂ ಜೀವಂತವಾಗಿದೆ.

ಗ್ರಾಮೀಣ ಭಾರತದಲ್ಲಿನ ಕೃಷಿ ಭೂಮಿ ಕೆಲವೇ ಕೆಲವರ ಕೈಯಲ್ಲಿ ಶೇಖರಣೆಯಾಗಿದ್ದು ದಲಿತರನ್ನು ಭೂಮಿಯಿಂದ ವಂಚಿತರನ್ನಾಗಿ ಮಾಡಲಾಗಿದೆ. ರಾಜ್ಯದಲ್ಲಿ ಲಕ್ಷಾಂತರ ಬಡ ದಲಿತರು ಬಗರ್‍ಹುಕುಂ ಸಾಗುವಳಿ ಸಕ್ರಮಕ್ಕೆ ಸರ್ಕಾರದ ಮುಂದೆ ಅರ್ಜಿಗಳನ್ನು ಸಲ್ಲಿಸಿ ಹೋರಾಟಗಳನ್ನು ನಡೆಸುತ್ತಿದ್ದರೂ ಅವರಿಗೆ ಭೂಮಿಯನ್ನು ಮಂಜೂರು ಮಾಡಿಕೊಡುವ ಬದಲಿಗೆ ಅವರಿಂದ ಭೂಮಿಯನ್ನು ಕಿತ್ತುಕೊಳ್ಳುವ ನೀತಿಗಳನ್ನೇ ಜಾರಿಗೆ ತರುತ್ತಿದೆ. ದಲಿತರ ಬದುಕು ಹಸನಾಗದೆ ಸ್ವಾಭಿಮಾನದಿಂದ ಬದುಕಲು ಸಾಧ್ಯವಾಗುವುದಿಲ್ಲ. ಇಂದು ಸಂವಿಧಾನದ ಆಶಯಗಳಿಗೆ ವಿರುದ್ದವಾಗಿ ಶಿಕ್ಷಣ, ಆರೋಗ್ಯ, ಉದ್ಯೋಗ ಮುಂತಾದ ಮೂಲಭೂತ ವಿಷಯಗಳು ಉಳ್ಳವರ ಸ್ವತ್ತಾಗಿ ಪರಿಣಮಿಸಿವೆ ಇವೆಲ್ಲವುಗಳ ವಿರುದ್ದ ಪ್ರಬಲ ಜನ ಚಳುವಳಿಯನ್ನು ಕಟ್ಟಿದರೆ ಮಾತ್ರ ಬದಲಾವಣೆಯನ್ನು ತರಲು ಸಾಧ್ಯ ಆ ನಿಟ್ಟಿನಲ್ಲಿ ಸಿಗರನಹಳ್ಳಿ ದಲಿತರ ಹೋರಾಟ ಅಭಿನಂದನಾರ್ಹ ಎಂದರು.

ಮತ್ತೋರ್ವ ಅತಿಥಿಗಳಾಗಿ ಭಾಗವಹಿಸಿದ್ದ ದಲಿತ ಹಕ್ಕುಗಳ ಸಮಿತಿಯ ರಾಜ್ಯ ಸಂಚಾಲಕರಾದ ಗೋಪಾಲಕೃಷ್ಣ ಅರಳಹಳ್ಳಿಯವರು ಮಾತನಾಡಿ ಜಾತಿ ಅಸ್ಪøಷ್ಯತೆ ವಿರುದ್ದ ದಲಿತ ಹಕ್ಕುಗಳ ಸಮಿತಿ ನಿರಂತರವಾಗಿ ಚಳುವಳಿಯನ್ನು ನಡೆಸಿಕೊಂಡು ಬಂದಿದ್ದು ಇಂದಿನ ಸವಾಲುಗಳನ್ನು ದಿಟ್ಟವಾಗಿ ಎದುರಿಸಬೇಕಾದರೆ ಎಲ್ಲಾ ದಲಿತ ಮತ್ತು ಜನಪರ ಸಂಘಟನೆಗಳು ಒಟ್ಟಿಗೆ ಸೇರಿ ದಲಿತರನ್ನು ಸಂಘಟಿಸಿ ಚಳುವಳಿಯನ್ನು ನಡೆಸಿ ಒಂದೆಡೆ ದಲಿತರ ಹಕ್ಕುಗಳ ರಕ್ಷಣೆ ಮತ್ತು ಒಟ್ಟಾರೆ ಜಾತಿ ವಿನಾಶದ ಹೋರಾಟಗಳನ್ನು ನಡೆಸಬೇಕಾದ ಅನಿವಾರ್ಯತೆ ಇದೆ ಎಂದರು.

ಸಮಾರಂಭದಲ್ಲಿ ಹಿರಿಯ ದಲಿತ ಮುಖಂಡರಾದ ನಾರಾಯಣದಾಸ್, ಎಚ್.ಕೆ.ಸಂದೇಶ್, ರಾಜಶೇಖರ್, ಅಂಬುಗಮಲ್ಲೇಶ್, ರತಿರಾವ್, ಎಚ್.ಆರ್.ನವೀನ್‍ಕುಮಾರ್ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮದ ಮೊದಲಿಗೆ ಪ್ರಾಸ್ಥಾವಿಕವಾಗಿ ಸಿಪಿಐ(ಎಂ)ನ ಜಿಲ್ಲಾ ಕಾರ್ಯದರ್ಶಿ ಧರ್ಮೇಶ್ ಮಾತನಾಡಿದರು. ವಿಜಯ್‍ಕುಮಾರ್ ಸಿಗರನಹಳ್ಳಿ ಸ್ವಾಗತಿಸಿದರು. ಲೋಕೆಶ್ ವಂದಿಸಿದರು. ಇಡೀ ಕಾರ್ಯಕ್ರಮವನ್ನು ದಲಿತ ಹಕ್ಕುಗಳ ಸಮಿತಿಯ ಜಿಲ್ಲಾ ಸಂಚಾಲಕರಾದ ಎಂ.ಜಿ.ಪೃಥ್ವಿ ನಿರೂಪಿಸಿದರು. ಕಾರ್ಯಕ್ರಮದ ಮೊದಲಿಗೆ ದಲಿತ ಹಕ್ಕುಗಳ ಸಮಿತಿ ಕರ್ನಾಟಕ ಸಿಗರನಹಳ್ಳಿ ಗ್ರಾಮಘಟಕದ ನಾಮಪಲಕವನ್ನು ಅನಾವರಣ ಮಾಡಲಾಯಿತು.