ಕಾ. ಎಸ್.ಎಚ್. ಕಪ್ಪಣ್ಣವರ ಲಾಲ್ ಸಲಾಂ!

ಸಂಪುಟ: 
10
ಸಂಚಿಕೆ: 
52
Sunday, 18 December 2016

ಸ್ವಾತಂತ್ರ್ಯ ಚಳುವಳಿ, ಹೈದರಾಬಾದ್ ವಿಮೋಚನಾ ಚಳುವಳಿ, ಕರ್ನಾಟಕ ಏಕೀಕರಣ ಚಳುವಳಿ, ನರಗುಂದ ರೈತ ಬಂಡಾಯದಲ್ಲಿ ಭಾಗವಹಿಸಿದ್ದ ಕಾ. ಕಪ್ಪಣ್ಣವರ ತಮ್ಮ 91 ವರ್ಷದ ತುಂಬು ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವಿಭಜಿತ ಕಮ್ಯುನಿಸ್ಟ್ ಪಕ್ಷ ಸೇರಿ, ಆ ಮೇಲೆ ತಮ್ಮ ಕೊನೆಯುಸಿರವರೆಗೂ ಸಿಪಿಐ(ಎಂ) ಸದಸ್ಯರಾಗಿದ್ದ  ಅವರಿಗೆ ನಮ್ಮ ಲಾಲ್ ಸಲಾಂ!

ಕಾಮ್ರೇಡ್ ಎಸ್.ಎಚ್.ಕಪ್ಪಣ್ಣವರ ಇವರು ತಾಯಿಯ ತವರೂರಾದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಆಲೂರು ಗ್ರಾಮದಲ್ಲಿ 10-07-1925 ರಲ್ಲಿ ಜನಿಸಿದರು. ಇವರ ತಂದೆ ಹೊನಗೌಡ ಪಾಟೀಲ ಬೋರಗಲ್ಲದವರಿದ್ದು, ಅವರು ಪೊಲೀಸ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಪೊಲೀಸ ನೌಕರಿ ತ್ಯಜಿಸಿ ಸವದತ್ತಿ ಯಲ್ಲಮ್ಮಾ ಪುರಸಭೆಯಲ್ಲಿ ನಾಕಾ ಇನ್ಸಪೆಕ್ಟರ ರಾಗಿ ಸೇವೆ ಸಲ್ಲಿಸುತ್ತಿದ್ದರು. ಆಗ ಎಸ್.ಎಚ್.ಕಪ್ಪಣ್ಣವರ ಅವರು ಒಂದು ವರ್ಷದ ಕೂಸು ಇರುವಾಗ ಸವದತ್ತಿಯ ಕಪ್ಪಣ್ಣವರ ಮನೆತನದ ಇಬ್ಬರು ಸಹೋದರಿಯರಾದ ಶಿವಮ್ಮ ಮತ್ತು ಸಾವಮ್ಮ ಎಂಬುವರು ಇವರನ್ನು ಸಾಕಿ ಸಲುಹಿ ವಿದ್ಯಾಭ್ಯಾಸ ಮಾಡಿಸಿ ಪ್ರಥಮ ವರ್ಷದ ಇಂಟರ ಮಿಡಿಯೆಟ್ ಓದುವಾಗಲೇ ಮದುವೆಮಾಡಿಸಿ ತಮ್ಮ ಆಸ್ತಿಯನ್ನು ಎಸ್.ಎಚ್.ಕಪ್ಪಣ್ಣವರ ಇವರಿಗೆ ಬಕ್ಷೀಸಮಾಡಿದ್ದರು. 

ಇವರ ಪ್ರಾಥಮಿಕ ಶಿಕ್ಷಣ ಸರಕಾರಿ ಕನ್ನಡ ಗಂಡುಮಕ್ಕಳ ಶಾಲೆ ಮತ್ತು ಎ.ವ್ಹಿ.ಸ್ಕೂಲ ಸವದತ್ತಿಯಲ್ಲಿ ಮುಗಿಯುತ್ತದೆ. ನಂತರ ಧಾರವಾಡದ ಆರ್.ಎಲ್.ಎಸ್. ಹೈಸ್ಕೂಲಿನಲ್ಲಿ ಮ್ಯಾಟ್ರಿಕ್ ಮುಗಿಸಿದ ನಂತರ ಬೆಳಗಾವಿ ಲಿಂಗರಾಜ ಕಾಲೇಜಿನಲ್ಲಿ ಪ್ರಥಮ ವರ್ಷದ ಇಂಟರ ಮಿಡಿಯೇಟ್ ಸಾಯನ್ಸ ವರೆಗೆ ವಿದ್ಯಾಭ್ಯಾಸ. ಕಾಲೇಜು ದಿನಗಳಲ್ಲಿ ಸಹಪಾಠಿ ಹಾಗೂ ಕಮ್ಯೂನಿಸ್ಟ್ ಸೋಶಿಯಾಲಿಸ್ಟ್ ಪಕ್ಷದ ಪ್ರಮುಖ ಕಾರ್ಯಕರ್ತ ಧೂರೀಣರಾದ ನಾಥ ಪೈ, ಕೃಷ್ಣಾ ಮೆಣಸೆ, ಎನ್.ಕೆ. ಉಪಾಧ್ಯಾಯರೊಂದಿಗೆ ಒಡನಾಟ. ಅವರು ನೀಡುವ ಪಕ್ಷದ ಪುಸ್ತಕಗಳ ಓದಿನಿಂದ ಕಮ್ಯೂನಿಷ್ಟ ಸಿದ್ಧಾಂತಕ್ಕೆ ತಲೆಬಾಗಿ ಭಾರತ ಕಮ್ಯೂನಿಸ್ಟ್ ಪಕ್ಷದ ಸಕ್ರೀಯ ಕಾರ್ಯಕರ್ತರಾದರು. ಪ್ರಾಥಮಿಕ ಶಿಕ್ಷಣ 7ನೇ ತರಗತಿ ಓದುವಾಗಲೇ ಸ್ವಾತಂತ್ರ್ಯ ಚಳುವಳಿಯ ಪ್ರಭಾವಕ್ಕೆ ಒಳಗಾಗಿ ಶಾಲೆಗೆ ಖಾದಿಟೋಪಿ ಹಾಕಿಕೊಂಡಿದ್ದಕ್ಕೆ ತರಗತಿಯಲ್ಲಿ ಶಿಕ್ಷಕ ರಿಂದ ದಂಡಿಸಲ್ಪಟ್ಟಿದ್ದರು. ವಿದ್ಯಾರ್ಥಿದೆಸೆಯಲ್ಲಿಯೇ ಖಾದಿ ನೇಯ್ಗೆ ಹಾಗೂ ಹೆಗಲಮೇಲೆ ಖಾದಿ ವಸ್ತು ಮಾರಾಟಮಾಡುತ್ತಿದ್ದರಂತೆ (ಚಳುವಳಿಯ ಭಾಗವಾಗಿ). 1942 ರಲ್ಲಿ ಸವದತ್ತಿಯ ಕೋಟೆಯ ಒಳಗಡೆ ಇರುವ ಶಿರಸಂಗಿ ಲಿಂಗರಾಜರ ಅರಮನೆಯನ್ನು ಚಳುವಳಿಗಾರರು ಬೆಂಕಿಗೆ ಆಹುತಿ ಮಾಡಿದ್ದರಂತೆ.

ಹೈದರಾಬಾದನಲ್ಲಿ ರಜಾಕಾರರ ಹಾವಳಿ ಎದ್ದಾಗ ತಮ್ಮ ಹಲವಾರು ಸ್ನೇಹಿತರೊಂದಿಗೆ ಹೈದರಾಬಾದಗೆ ಟಿಕೇಟರಹಿತರಾಗಿ ರೈಲ್ವೆಯಲ್ಲಿ ಪ್ರಯಾಣ ಮಾಡಿ, ಸರದಾರ ವಲ್ಲಭ ಭಾಯಿ ಪಟೇಲರ ಸ್ವತಂತ್ರ ಸಂಸ್ಥಾನಗಳ ವಿಲೀನಕರ ಆಂದೋಲನದಲ್ಲಿ ಭಾಗವಹಿಸಿ ತಮಗೆ ಜವಾಬ್ದಾರಿ ವಹಿಸಿದ್ದ 8-10 ಹಳ್ಳಿಗಳನ್ನು ನಿಜಾಮರ ಆಡಳಿತದಿಂದ ಬಿಡುಗಡೆಯ ಕಾರ್ಯದಲ್ಲಿ ಪಾತ್ರ ವಹಿಸಿದರು. ನೇತಾಜಿ ಸುಭಾಷ ಚಂದ್ರ ಭೋಸರ ಇಮಡಿಯನ್ ನ್ಯಾಶನಲ್ ತಯಾರಿಸುವ ತರಬೇತಿಯನ್ನು ಅಲ್ಲಿ ಪಡೆದರು.

ಸೇಂದಿಗಿಡವನ್ನು ಕಡೆಯುವುದು, ಸೇಂದಿಗೆ ಬದಲಾಗಿ ನೀರಾದ ಮಾರಾಟ ಮಾಡುತ್ತಿದ್ದರು. ಇವರು ಇಂಟರ ಮೀಡಿಯೆಟ್ ಓದುವಾಗ ಹೈದರಾಬಾದ ವಿಮೋಚನಾ ಚಳುವಳಿಯ ಹೋರಾಟದಲ್ಲಿ ಭಾಗವಹಿಸಿ ಕೊಪ್ಪಳ ಹತ್ತಿರದ ಕೆಲವೊಂದು ಹಳ್ಳಿಗಳನ್ನು ಅಳವಂಡಿ ಶಿವಮೂರ್ತಿಸ್ವಾಮಿಗಳ ನೇತೃತ್ವದಲ್ಲಿ ರಜಾಕಾರರಿಂದ ವಿಮೋಚನೆಗೊಳಿಸಿದ ಪ್ರಕ್ರಿಯೆಯಲ್ಲಿ ಭಾಗ ವಹಿಸಿದ್ದರು. 

ಚಿಕ್ಕಮಠದಲ್ಲಿ ಖಾದಿ ಕೇಂದ್ರದ ಸ್ಥಾಪನೆ ಮಾಡಿ ಸ್ವಾತಂತ್ರ್ಯ ಚಳುವಳಿಯ ಒಂದು ಭಾಗವಾದ ಖಾದಿ ಗ್ರಾಮೋದ್ಯೋಗ ಸಂಘದ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಅಂದಿನಿಂದ ಸದಾ ಖಾದಿ ದೋತರ ನೆಹರೂ ಜುಬ್ಬಾ ಹಾಗೂ ಗಾಂಧಿ ಟೋಪಿಗಳೇ ಇವರ ದಿನ ನಿತ್ಯದ ತೊಡುಗೆಗಳಾದವು. ಖಾದಿ ಹುಟ್ಟುವಳಿ ಮತ್ತು ಮಾರಾಟ, ಸೇಂದಿ ನಿಷೇಧ ಮಾಡಿ ನೀರಾ ಉತ್ಪತ್ತಿ ಮತ್ತು ಮಾರಾಟ ಮಾಡುವುದು, ಮೇದಾರ ಸೊಸಾಯಿಟಿ ಸ್ಥಾಪಿಸಿ, ಬಿದಿರು ಮತ್ತು ಬಿದರಿನ ವಸ್ತುಗಳನ್ನು ತಯಾರಿಸಿ ಅಗ್ಗದ ದರದಲ್ಲಿ ಮಾರಾಟ ಮಾಡಿಸುತ್ತಿದ್ದರು. 

ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುವ ಪಿಂಚಣಿಗೆ ಇವರು ಎಂದೂ ಆಸೆ ಪಟ್ಟವರಲ್ಲ. ಸ್ನೇಹಿತರಾದ ಶಂಕರರಾವ ಪದಕಿ ಪಿಂಚಣಿ ದೊರಕಿಸಕಿಕೊಡುತ್ತೇನೆ ಎಂದಾಗ ಅದನ್ನು ನಯವಾಗಿ ನಿರಾಕರಿಸಿದ ಕೆಲವೇ ಮಹನೀಯರಲ್ಲಿ ಇವರೂ ಒಬ್ಬರು.

ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಹಂಪಿಯ ಕರ್ನಾಟಕ ಏಕೀಕರಣ ಪರಿಷತ್ತಿನಲ್ಲಿ ಭಾಗವಹಿಸಿದ್ದರು.  ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಪಗಾವಿ ಮತ್ತು ಸವದತ್ತಿ ತಾಲೂಕಿನ ಸತ್ತಿಗೇರಿಯಲ್ಲಿ ಹಾವೇರಿಯ ಸಿದ್ದಪ್ಪನವರ ನೇತೃತ್ವದಲ್ಲಿ ಸಭೆಯನ್ನು ನಡೆಸಿದ್ದರು.  ಈ ಸಭೆಯಲ್ಲಿ ಕಾಮ್ರೇಡ್ ಕಕ್ಕಿಲಾಯ ಹಾಗೂ ಎನ್.ಕೆ.ಉಪಾಧ್ಯಾಯರು ಭಾಗವಹಿಸಿದ್ದರೆಂದು ಸ್ಮರಿಸಿ ಕೊಳ್ಳುತ್ತಿದ್ದರು.

ಸವದತ್ತಿ ಯಲ್ಲಮ್ಮಾ ಪುರಸಭೆಯಲ್ಲಿ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿ ಪೂರ್ಣ ಅವಧಿಯನ್ನು ಪೂರೈಸಿದ್ದರು. ಅಲ್ಲದೆ ಆ ಸಂದರ್ಭದಲ್ಲಿ ಜನಪರ ಕೆಲಸಗಳನ್ನು ಮಾಡಿದ್ದರು. ಸವದತ್ತಿ ನಗರಕ್ಕೆ ಮೊದಲಬಾರಿಗೆ 12 ಲಕ್ಷ ವೆಚ್ಚದಲ್ಲಿ ಕುಡಿಯುವ ಶುದ್ಧ ನೀರಿನ ಘಟಕದ ಸ್ಥಾಪಿಸಿದ್ದರು. ಪೌರ ಕಾರ್ಮಿಕರ ವಾಸಕ್ಕೆ ಮನೆಗಳನ್ನು ನಿರ್ಮಾಣಮಾಡಿ ವಿತರಿಸಿದ್ದರು. ಪುರಸಭೆಯ ಶತಮಾನೋತ್ಸವ ಆಚರಣೆ ಮಾಡಿ ನಾಗರಿಕರ ಪ್ರಶಂಸೆಗೆ ಪಾತ್ರರಾಗಿದ್ದರು. ಯಲ್ಲಮ್ಮಾ ಟ್ರಸ್ಟಿನ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಸವದತ್ತಿಯ ಪಿ.ಎಲ್.ಡಿ.(ಪ್ರಾಯಮರಿ ಲ್ಯಾಂಡ್ ಡೆವಲೆಪ್‍ಮೆಂಟ) ಬ್ಯಾಂಕಿನ ಸಂಸ್ಥಾಪಕರಲ್ಲದೆ 25 ವರ್ಷಗಳ ವರೆಗೆ ಉಪಾಧ್ಯಕ್ಷರಾಗಿ ಸೇವೆಸಲ್ಲಿಸಿದರು. ನೀರಾವರಿ ಬಾವಿಗಳ ಯೋಜನೆ ಪ್ರಾರಂಭಿಸಿ ರೈತರಿಗೆ ಅನುಕೂಲಮಾಡಿಕೊಟ್ಟಿದ್ದರು.  

1980 ರಲ್ಲಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ "ಮಲಪ್ರಭಾ ರೈತ ಹೋರಾಟ ಸಮನ್ವಯ ಸಮಿತಿ"ಯ ಸಂಚಾಲಕರಾಗಿ ನೀರಾವರಿಯ ಅಭಿವೃದ್ಧಿ ಕರ (ಬೆಟರಮೆಂಟ ಲೇವ್ಹಿ) ನೀರಿನ ಕರ (ವಾಟರ ಟ್ಯಾಕ್ಸ) ವಿರೋಧಿಸಿ ನರಗುಂದ ರೈತ ಬಂಡಾಯವೆಂದೇ ಖ್ಯಾತವಾದ ಪ್ರಮುಖ ಚಳುವಳಿ ಯಲ್ಲಿ ಪಾಲ್ಗೊಂಡಿದ್ದರು. ಕರ್ನಾಟಕ ಪ್ರಾಂತ ರೈತ ಸಂಘದ ಬೆಳಗಾವಿ ಜಿಲ್ಲಾ ಅಧ್ಯಕ್ಷರಾಗಿ, ರಾಜ್ಯ ಸಮಿತಿಯ ಸದಸ್ಯರಾಗಿ, ರೈತಪರ ಚಳುವಳಿಯಲ್ಲಿ ಭಾಗವಹಿಸಿದ್ದರು. ಸವದತ್ತಿ ಪಟ್ಟಣ ಹಾಗೂ ತಾಲೂಕಿನ ನಿವೇಶನ ರಹಿತ ಜನರಪರವಾಗಿ ಅವರ ಬೇಡಿಕೆಗಳಿಗಾಗಿ ಹೋರಾಟ ಮಾಡಿದರು. ಜಿಲ್ಲೆಯ ಹಾಗೂ ತಾಲೂಕಿನ ಕಾರ್ಮಿಕರ, ಕೃಷಿ ಕಾರ್ಮಿಕರ ಬೇಡಿಕೆಗಳಿಗಾಗಿ ಹೋರಾಟ ಮಾಡಿದ್ದಾರೆ.

ಅವಿಭಜಿತ ಕಮ್ಯುನಿಸ್ಟ ಪಕ್ಷದ ಕಾರ್ಡಹೋಲ್ಡರ್ ಸದಸ್ಯರಾಗಿದ್ದರು. ನಂತರದಲ್ಲಿ ಮಾಕ್ರ್ಸವಾದಿ ಕಮ್ಯುನಿಸ್ಟ ಪಕ್ಷದ ಸದಸ್ಯತ್ವ ಪಡೆದು ಪಕ್ಷದ ಧಾರವಾಡ ಜಿಲ್ಲಾ ಸಮಿತಿ (ಧಾರವಾಡ, ಬೆಳಗಾವಿ, ವಿಜಯಪುರ, ಚಿತ್ರದುರ್ಗ) ಸದಸ್ಯರಾಗಿ ಆ ಮೇಲೆ ಬೆಳಗಾವಿ ಜಿಲ್ಲಾ ಸಂಘಟನಾ ಸಮಿತಿ ಸದಸ್ಯರಾಗಿದ್ದರು.  ಕೊನೆ ಉಸಿರು ಇರುವವರೆಗೂ ಮಾಕ್ರ್ಸವಾದಿ ಕಮ್ಯುನಿಸ್ಟ ಪಕ್ಷದ ಸದಸ್ಯರಾಗಿ ಸ್ಥಳೀಯ ಶಾಖೆಗೆ ಮಾರ್ಗದರ್ಶಕರಾಗಿದ್ದರು. ತಮ್ಮ 93ನೇ ವಯಸ್ಸಿನಲ್ಲಿ ವಯೋ ಸಹಜ ಸ್ಥಿತಿಯಿಂದ ನಿಧನರಾಗಿ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮೃತರ ಅಂತ್ಯಯಾತ್ರೆಯಲ್ಲಿ ಸುಮಾರು 2500 ರಷ್ಟು ಜನ ಭಾಗವಹಿಸಿದ್ದರು.  ಪಕ್ಷದ ರಾಜ್ಯ ಸಮಿತಿಯಿಂದ ಕಾಮ್ರೇಡ್ ನಿತ್ಯಾನಂದಸ್ವಾಮಿಗಳು ಭಾಗವಹಿಸಿದ್ದರು. ಪಕ್ಷದ ಜಿಲ್ಲಾ ಸಮಿತಿ ವತಿಯಿಂದ ಕಾ. ವ್ಹಿ.ಪಿ.ಕುಲಕರ್ಣಿ, ಜೈಬು ಜೈನೇಖಾನ, ಎಲ್.ಎಸ್.ನಾಯಕ, ನಾಗಪ್ಪ ಸಂಗೊಳ್ಳಿ, ದಾದಾ ಬೆಣ್ಣಿ, ಎಫ್.ಎಮ್.ನದಾಫ, ಜಿ.ವ್ಹಿ.ಕುಲಕರ್ಣಿಯವರು, ಪಕ್ಷದ ಸ್ಥಳೀಯ ಶಾಖೆಯ ಕಾರ್ಯದರ್ಶಿ ಶ್ರೀಕಾಂತ ಹಟ್ಟಿಹೊಳಿ, ಈರಣ್ಣ ಟೋಪಕರವರು, ಧಾರವಾಡದ ಜಿಲ್ಲಾ ಸಮಿತಿ ಬಿ.ಎಸ್.ಸೊಪ್ಪಿನ, ಮಹೇಶ ಪತ್ತಾರ, ಲಿಂಗರಾಜ ಅಂಗಡಿ, ಪಕ್ಷದ ಕಾರ್ಯಕರ್ತರು, ಅಕ್ಷರ ದಾಸೋಹ ಕಾರ್ಯಕರ್ತರು ಹಾಗೂ ಕಾರ್ಮಿಕ ಸಂಗಾತಿಗಳು ಪಕ್ಷದ ಧ್ವಜವನ್ನು ಅರ್ಧಕ್ಕೆ ಇಳಿಸಿ,  ಪಕ್ಷದ ಧ್ವಜವನ್ನು ಮೃತರ ಮೇಲೆ ಹೊದಿಸಿ, ಕಾ. ಕಪ್ಪಣ್ಣವರ ಅಮರರಾಗಿ ಎಂಬ ಘೋಷಣ ಯೊಂದಿಗೆ ಅಂತ್ಯಯಾತ್ರೆಯು ನಗರದ ಪ್ರಮುಖ ಬೀದಿಗಳಲ್ಲಿ ಹಾಯ್ದು ಅಂತ್ಯಕ್ರಿಯೆ ಬೆಡಸೂರ ಮಠದ ಸ್ಮಶಾನದಲ್ಲಿ ಅಂತ್ಯಕ್ರಿಯೆ ಜರುಗಿತು.

ಎಲ್.ಎಸ್.ನಾಯಕ, ಸವದತ್ತಿ.