8ನೇ ಭಾರತ-ವಿಯೇಟ್ನಾಮ್ ಜನಮೈತ್ರಿ ಉತ್ಸವ ‘ಆನೆಗಳನ್ನು ಮಣಿಸಿದ ಮಿಡತೆಗಳ’ ನಾಡಿನಲ್ಲಿ

ಸಂಪುಟ: 
10
ಸಂಚಿಕೆ: 
52
date: 
Sunday, 18 December 2016

ಎರಡೂ ತಂಡಗಳ ಸಂಗೀತ-ನೃತ್ಯಗಳಿಗೆ ಸಭಿಕರ ಉತ್ಸಾಹಪೂರ್ಣ ಸ್ಪಂದನೆ ಬರಿಯ ಔಪಚಾರಿಕವಾಗಿ ಕಾಣಲಿಲ್ಲ. ಸಂಗೀತ-ನೃತ್ಯಗಳಿಗೆ ದೇಶ-ಭಾಷೆಗಳ ಗಡಿಗಳಿಲ್ಲ. ಇವೇ ಜನಮೈತ್ರಿ ಸಾಧಿಸಲು ಉತ್ತಮ ಸಾಧನಗಳು ಎನ್ನುವಂತಿತ್ತು.

1970-80 ದಶಕದಲ್ಲಿ ವಿಯೇಟ್ನಾಮ್ ಹೋರಾಟದ ಬಗ್ಗೆ ಒಂದು ಸ್ಫೂರ್ತಿದಾಯಕವಾದ ಪುಸ್ತಕ ಬಂದಿತ್ತು. ಅದರ ಹೆಸರು “ಆನೆಗಳನ್ನು ಮಣಿಸಿದ ಮಿಡತೆಗಳು’. ಕಳೆದ ವಾರ “ಆನೆಗಳನ್ನು ಮಣಿಸಿದ ಮಿಡತೆಗಳ’ ನಾಡಿಗೆ ಹೋಗುವ ಅವಕಾಶ ಸಿಕ್ಕಿತು. ಡಿಸೆಂಬರ್ 2ರಿಂದ 9ರವರೆಗೆ ವಿಯೇಟ್ನಾಮಿನಲ್ಲಿ ನಡೆದ 8ನೇ ಭಾರತ-ವಿಯೇಟ್ನಾಮ್ ಜನಮೈತ್ರಿ ಉತ್ಸವದಲ್ಲಿ ಸಿಪಿಐ(ಎಂ) ಪ್ರತಿನಿಧಿಯಾಗಿ ಭಾರತದ ತಂಡದ ಭಾಗವಾಗಿ ಒಂದು ವಾರ ಕಾಲ ವಿಯೇಟ್ನಾಮ್ ದರ್ಶನದ ಅವಕಾಶ ಸಿಕ್ಕಿತು. ಈ ಉತ್ಸವವನ್ನು ಅಖಿಲ ಭಾರತ ಶಾಂತಿ ಮತ್ತು ಸೌಹಾರ್ದತಾ ಸಂಘಟನೆ (ಎ.ಐ.ಪಿ.ಎಸ್.ಒ.) ಮತ್ತು ಭಾರತ-ವಿಯೇಟ್ನಾಮ್ ಮೈತ್ರಿ ಸಂಘಟನೆ ಹಮ್ಮಿಕೊಂಡಿದ್ದವು. ಈ ಉತ್ಸವ ಒಂದು ವರ್ಷ ಭಾರತದಲ್ಲಿ, ಮುಂದಿನ ವರ್ಷ ವಿಯೇಟ್ನಾಮಿನಲ್ಲಿ ನಡೆಯುತ್ತವೆ.

ಹಲವು ಸಮಾರಂಭಗಳು, ವಿಯೇಟ್ನಾಮಿನ ಹಲವು ಸಂಘಟನೆಗಳ ಜತೆ ಭೇಟಿಗಳು, ನೋಡಬೇಕಾದ ಸ್ಥಳಗಳ ಭೇಟಿ - ಒಂದು ವಾರದ ವಿಯೇಟ್ನಾಮ್ ದರ್ಶನದ ಕಾರ್ಯಕ್ರಮ ಪ್ಯಾಕಾಗಿತ್ತು. ಡಿಸೆಂಬರ್ 1ರ ಬೆಳಿಗ್ಗೆ ಬ್ಯಾಂಕಾಕ್ ಮೂಲಕ ಹನೊಯ್ ಗೆ ಸುಮಾರು 6 ಗಂಟೆಗಳ ವಿಮಾನ ಪಯಣ.

‘ಸೌಹಾರ್ದತೆ-ಸಹಕಾರ-ಅಭಿವೃದ್ಧಿ’

ಹನೊಯ್ ನಲ್ಲಿ ಮೊದಲ ದಿನ ಭಾರತ-ವಿಯೇಟ್ನಾಮ್ ಮೈತ್ರಿ ಸಂಘಟನೆ ಮತ್ತು ವಿಯೇಟ್ನಾಮ್ ಮೈತ್ರಿ ಸಂಘಟನೆಗಳ ಒಕ್ಕೂಟದ ರಾಷ್ಟ್ರಮಟ್ಟದ ಹಾಗೂ ಹನೊಯ್ ನಗರದ ಪ್ರತಿನಿಧಿಗಳ ಜತೆ ಭೇಟಿ ಇತ್ತು. ಭಾರತದ ತಂಡವನ್ನು ವಿಯೇಟ್ನಾಮಿಗೆ ಸ್ವಾಗತಿಸುವ ಔತಣಕೂಟವೂ ಇತ್ತು. ವಿಯೇಟ್ನಾಮ್ ಮೈತ್ರಿ ಸಂಘಟನೆಗಳ ಒಕ್ಕೂಟದ ರಾಷ್ಟ್ರೀಯ ನಾಯಕರೊಬ್ಬರು ಮಾತನಾಡಿ, ಭಾರತ-ವಿಯೇಟ್ನಾಮ್ ಮೈತ್ರಿ ಸಂಘಟನೆ ಮತ್ತು ವಿಯೇಟ್ನಾಮ್ ಮೈತಿ ್ರಸಂಘಟನೆಗಳ ಒಕ್ಕೂಟದ ಚರಿತ್ರೆ, ಕೆಲಸಗಳ ಬಗ್ಗೆ ವಿವರಿಸಿದರು. ಪ್ರಸಕ್ತ 8 ನೇ ಜನಮೈತ್ರಿ ಉತ್ಸವದ ಕಾರ್ಯಕ್ರಮಗಳ ವಿವರಗಳನ್ನು ಕೊಟ್ಟರು. ದೀರ್ಘಕಾಲದ ಭಾರತ-ವಿಯೇಟ್ನಾಮ್ ಮೈತ್ರಿ ಸೌಹಾರ್ದ ಸಂಬಂಧಗಳನ್ನು ನೆನಪಿಸಿದರು. ಭಾರತ ತಂಡದ ನಾಯಕತ್ವವನ್ನು ವಹಿಸಿದ್ದ ಎ.ಐ.ಪಿ.ಎಸ್.ಒ. ಪ್ರಧಾನ ಕಾರ್ಯದರ್ಶಿ (ಹಾಗೂ ಸಿಪಿಐ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ, ಅಂತರ್ರಾಷ್ಟ್ರೀಯ ವಿಭಾಗದ ಮುಖ್ಯಸ್ಥ) ಕಾ. ಪಲ್ಲಬ್ ಸೇನ್ ಗುಪ್ತಾ ಮತ್ತು ಎ.ಐ.ಪಿ.ಎಸ್.ಒ. ಉಪಾಧ್ಯಕ್ಷ ಹಾಗೂ ಪಾಂಡಿಚೇರಿ ಕಾಂಗ್ರೆಸ್ ಶಾಸಕ ಕಣ್ಣನ್ ಲಕ್ಷ್ಮಿನಾರಾಯಣನ್ ಭಾರತದ ತಂಡದ ಪರವಾಗಿ ಮಾತನಾಡಿದರು. ವಿಯೇಟ್ನಾಂ ಸಾಂಸ್ಕೃತಿಕ ತಂಡ ಸಂಗೀತ-ನೃತ್ಯಗಳ ರಸದೌತಣ ಬಡಿಸಿತು. ಹಲವು ವಿಯೇಟ್ನಾಂಗೆ ವಿಶಿಷ್ಟವಾದ (ಅದರಲ್ಲೂ ಬಿದಿರಿನ) ಸಂಗೀತ ವಾದ್ಯಗಳ ಬಳಕೆ ವಿಶೇಷವಾಗಿತ್ತು.

ಡಿಸೆಂಬರ್ 3ರಂದು. ವಿಯೇಟ್ನಾಮಿನ ವಿಜ್ಞಾನ-ತಂತ್ರಜ್ಞಾನ ಮಂತ್ರಿ ಹಾಗೂ ಕಮ್ಯುನಿಸ್ಟ್  ಪಕ್ಷದ ಕೇಂದ್ರ ಸಮಿತಿ ಸದಸ್ಯ ಉತ್ಸವದ ಬಹಿರಂಗ ಉದ್ಘಾಟನೆ ಮಾಡಿದರು. ವರ್ಣರಂಜಿತ ಉತ್ಸವದ ಬಹಿರಂಗ ಉದ್ಘಾಟನೆ ಹನೋಯ್ ನಲ್ಲಿರುವ ಜಲಸಂಪನ್ಮೂಲ ವಿಶ್ವವಿದ್ಯಾಲಯದ ವಿಶಾಲ ಸಭಾಂಗಣದಲ್ಲಿ ನಡೆಯಿತು. ಅವರು ವಿಯೇಟ್ನಾಂ ಗೆ  ಭಾರತದ ದೀರ್ಘ ಕಾಲದ ಅದರಲ್ಲೂ ಅಮೆರಿಕದ ವಿರುದ್ಧ ಯುದ್ಧದಲ್ಲಿ ಸೌಹಾರ್ದ ಬೆಂಬಲವನ್ನು ಸ್ಮರಿಸಿದ ಅವರು, ವಿಯೇಟ್ನಾಮ್ ಫ್ರೆಂಚರಿಂದ ವಿಮೋಚನೆಯಾದ ಮೇಲೆ ಭೇಟಿ ನೀಡಿದ ಮೊದಲ ವಿದೇಶಿ ಗಣ್ಯರಲ್ಲಿ ಪ್ರಧಾನಿ ನೆಹರೂ ಒಬ್ಬರಾಗಿದ್ದರು. ಅದೇ ರೀತಿ ವಿಯೇಟ್ನಾಮ್ ಸರಕಾರವನ್ನು ಮಾನ್ಯ ಮಾಡಿದ ಮೊದಲ ದೇಶಗಳಲ್ಲಿ ಭಾರತ ಒಂದಾಗಿತ್ತು ಎಂದರು. 2017 ಬಹಳ ಮಹತ್ವಪೂರ್ಣ ವರ್ಷ ಎಂದ ಅವರು, ಇದು ಭಾರತ-ವಿಯೇಟ್ನಾಂ ಪೂರ್ಣ ರಾಯಭಾರ ಸಂಬಂಧ (ಜನವರಿ 7, 1972) ಸ್ಥಾಪಿಸಿದ್ದರ 45 ನೇ ವಾರ್ಷಿಕೋತ್ಸವ; ವ್ಯೂಹಾತ್ಮಕ ಸಹಭಾಗಿತ್ವ ಒಪ್ಪಂದದ (ಜುಲೈ 6, 2007) 10ನೇ ವಾರ್ಷಿಕ; ಮತ್ತು ಭಾರತ--ವಿಯೇಟ್ನಾಂ ಮೈತ್ರಿ ಸಂಘ ಸ್ಥಾಪನೆಯ (ನವೆಂಬರ್ 11, 1982) 35ನೇ ವಾರ್ಷಿಕ. ಇದನ್ನು ಸಂಭ್ರಮದಿಂದ ಆಚರಿಸಲಾಗುವುದು. ಉತ್ಸವದ ಥೀಮ್ “ಸೌಹಾರ್ದತೆ, ಸಹಕಾರ, ಅಭಿವೃದ್ಧಿ” ಬಗ್ಗೆ ಪ್ರಸ್ತಾಪಿಸುತ್ತಾ, ಈ ವರೆಗಿನ ಸೌಹಾರ್ದತೆ ಯನ್ನು ಹಲವು ಕ್ಷೇತ್ರಗಳಲ್ಲಿ ಸಹಕಾರ ಮತ್ತು ಅಭಿವೃದ್ಧಿಯತ್ತ ಒಯ್ಯಬೇಕಾಗಿದೆ ಎಂದರು. ಭಾರತದ ತಂಡವಾಗಿ ಮಾತನಾಡಿದ ಕಣ್ಣನ್ ಲಕ್ಷ್ಮಿನಾರಾಯಣನ್ ವಿಯೇಟ್ನಾಂ ನ 30 ವರ್ಷಗಳ ದೀರ್ಘಕಾಲದ ವಿಮೋಚನಾ ಹೋರಾಟ ಮತ್ತು ಆ ಮೇಲಿನ ದೇಶವನ್ನು ಪುನಃ ಕಟ್ಟಿ ಬೆಳೆಸುವ ಮಹಾನ್ ಕಾಯಕದ ಬಗ್ಗೆ ಮೆಚ್ಚುಗೆಯ ಮಾತು ಹೇಳಿದರು. ಸೌಹಾರ್ದತೆ ಯನ್ನು ಹಲವು ಕ್ಷೇತ್ರಗಳಲ್ಲಿ ಸಹಕಾರ ಮತ್ತು ಅಭಿವೃದ್ಧಿಯತ್ತ ಒಯ್ಯುವ ಪ್ರಕ್ರಿಯೆಯಲ್ಲಿ ಭಾರತ-ವಿಯೇಟ್ನಾಮ್ ಪೂರ್ಣವಾಗಿ ತೊಡಗಿಸಿಕೊಳ್ಳುವುದು ಎಂದರು. ಅಮೆರಿಕ ಹೂಡಿದ ಯುದ್ಧದಿಂದ (ಏಜೆಂಟ್ ಆರೇಂಜ್, ನಾಪಾಮ್ ಬಾಂಬ್ ಮುಂತಾದ ಕಾನೂನು-ಬಾಹಿರ ರಾಸಾಯನಿಕ ಅಸ್ತ್ರಗಳ ಬಳಕೆ ಸೇರಿದಂತೆ) ವಿಯೇಟ್ನಾಮ್ ಗೆ  ಆದ ನಷ್ಟ-ಸಂಕಷ್ಟಗಳಿಗೆ ಪರಿಹಾರ ಕೇಳುವ ವಿಯೇಟ್ನಾಮಿನ ಅಂತರ್ರಾಷ್ಟ್ರೀಯ ಪ್ರಯತ್ನಗಳಿಗೆ ಬೆಂಬಲ ಕೊಡುವುದಾಗಿ ಹೇಳಿದ್ದು ಗಮನಾರ್ಹವಾಗಿತ್ತು.

ಶಾರ್ಪ್ ಶೂಟರ್ ಹಾಡುಗಾರ್ತಿ!

ಈ ಎರಡು ಭಾಷಣಗಳ ನಂತರ ಸುಮಾರು ಎರಡು ಗಂಟೆಗಳ ಕಾಲ ಭಾರತ ಮತ್ತು ವಿಯೇಟ್ನಾಮ್ ಸಾಂಸ್ಕøತಿಕ ತಂಡಗಳಿಂದ ಪ್ರಸ್ತುತಪಡಿಸಲಾದ ಸಂಗೀತ-ನೃತ್ಯ ಕಾರ್ಯಕ್ರಮಗಳು ಸುಮಾರು ಒಂದು ಸಾವಿರ ಸಾಮಥ್ರ್ಯದ ಸಭಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದವು. ಭಾರತೀಯ ಹಾಡುಗಾರ್ತಿ (ಹೈದರಾಬಾದಿನ ಮಧುಶ್ರೀ) ವಿಯೇಟ್ನಾಮಿ ಹಾಡು ಹಾಡಿದ್ದು, ವಿಯೇಟ್ನಾಮಿ ಹಾಡುಗಾರ್ತಿ ಹಿಂದಿ ಹಾಡು ಹಾಡಿದ್ದು, ‘ಹೊ ಹೊ ಹೊ ಚಿ ಮಿನ್’ ಹಾಡು ಪ್ರೇಕ್ಷಕರ ಹೆಚ್ಚಿನ ಗಮನ ಸೆಳೆದ ಕಾರ್ಯಕ್ರಮಗಳಾಗಿದ್ದವು. ಅದೇ ರೀತಿ ಭಾರತೀಯ ತಂಡ ಪ್ರಸ್ತುತ ಪಡಿಸಿದ ‘ಜೈ ಹೋ’ ಗೀತ-ನೃತ್ಯದೊಂದಿಗೆ ವಿಯೇಟ್ನಾಮಿ ನೃತ್ಯ-ಹಾಡಿನ ತಂಡ ಒಂದುಗೂಡಿ ಎರಡು ದೇಶಗಳ ಧ್ವಜಗಳು ಹಾರಾಡಿ, ಎರಡೂ ದೇಶಗಳಿಗೆ ‘ಜೈ ಹೋ’ ಆಗಿದ್ದು ಇನ್ನೊಂದು ಗಮನ ಸೆಳೆದ ಐಟಂ. ಇವಲ್ಲದೆ ವಿಯೇಟ್ನಾಮಿ ತಂಡ ಪ್ರಸ್ತುತ ಪಡಿಸಿದ ಹಲವು ಸಂಗೀತ-ನೃತ್ಯ ಕಾರ್ಯಕ್ರಮಗಳು ಅತ್ಯಂತ ಕಲಾತ್ಮಕವಾಗಿಯೂ ಅರ್ಥಪೂರ್ಣವಾಗಿಯೂ ಇದ್ದವು. ಸಮೂಹ ನೃತ್ಯಗಳ ಕೊರಿಯೊಗ್ರಫಿ, ಸಂಗೀತ, ವರ್ಣ ಸಂಯೋಜನೆ, ಲಯಬದ್ಧ ನಡೆಗಳು ಉತ್ಸವಕ್ಕೆ ರಂಗೇರಿಸಿದವು. ಭಾರತದ ತಂಡ ಭರತ ನಾಟ್ಯ, ಗದ್ದರ್ ಶೈಲಿಯಲ್ಲಿ ಪ್ರಸ್ತುತ ಪಡಿಸಿದ ‘ವೀರ ತೆಲಂಗಾಣ’ ಕಥನ, ಬಾಲಿವುಡ್ ಶೈಲಿಯ ನೃತ್ಯಗಳನ್ನು ಪ್ರಸ್ತುತಪಡಿಸಿತು. ಆದರೆ ವಿಯೇಟ್ನಾಮಿ ತಂಡದ ಹಾಡುಗಾರಿಕೆ-ನೃತ್ಯಗಳ ಗುಣಮಟ್ಟ, ಗಟ್ಟಿ ಥೀಮ್ ಗಳು, ವೈವಿಧ್ಯತೆಗೆ ಹೋಲಿಸಿದರೆ, ಭಾರತದ ತಂಡದ ಐಟಂಗಳು ದೇಶದ ಸಾಂಸ್ಕøತಿಕ ವೈವಿಧ್ಯತೆಯನ್ನಾಗಲಿ ಶ್ರೀಮಂತಿಕೆಯನ್ನಾಗಲಿ ಸೃಜನಶೀಲತೆಯನ್ನಾಗಲಿ ಪ್ರತಿನಿಧಿಸಲಿಲ್ಲ ಎಂದು ಅನಿವಾರ್ಯವಾಗಿ ಒಪ್ಪಿಕೊಳ್ಳಲೇಬೇಕು. ವಿಯೇಟ್ನಾಮಿ ತಂಡದ ನೃತ್ಯ-ಸಂಗೀತ ಪ್ರಸ್ತುತಿಯ ಗುಣಮಟ್ಟ ನೊಡಿದರೆ ಇದೊಂದು ಪೂರ್ಣಕಾಲೀನ ‘ಪ್ರೊಫೆಶನಲ್ ತಂಡ’ದ್ದು ಅನಿಸುತ್ತಿತ್ತು. ಆದರೆ ಈ ಬಗ್ಗೆ ವಿಚಾರಿಸಿದಾಗ ತಿಳಿದು ಬಂದದ್ದು ನಮ್ಮನ್ನು ದಂಗಬಡಿಸಿತು. ವಿಯೇಟ್ನಾಮಿ ಪ್ರಸ್ತುತಿಯನ್ನು ಹನೊಯ್ ಪೊಲಿಸ್ ಅಕಾಢೆಮಿಯ ಸಾಂಸ್ಕೃತಿಕ ತಂಡಕ್ಕೆ ವಹಿಸಲಾಗಿತ್ತು. ಅಂದರೆ ಅವರು ನಿಜಜೀವನದಲ್ಲಿ ಪೊಲೀಸರು !  ತಂಡದ ಅತ್ಯಂತ ಜನಪ್ರಿಯ ಹಾಡುಗಾರ್ತಿ ಪರಿಣತ ಶಾರ್ಪ್ ಶೂಟರ್ ಅಂತೆ!  ಎರಡೂ ತಂಡಗಳ ಸಂಗೀತ-ನೃತ್ಯಗಳಿಗೆ ಸಭಿಕರ ಉತ್ಸಾಹಪೂರ್ಣ ಸ್ಪಂದನೆ ಬರಿಯ ಔಪಚಾರಿಕವಾಗಿ ಕಾಣಲಿಲ್ಲ. ಸಂಗೀತ-ನೃತ್ಯಗಳಿಗೆ ದೇಶ-ಭಾಷೆಗಳ ಗಡಿಗಳಿಲ್ಲ. ಇವೇ ಜನಮೈತ್ರಿ ಸಾಧಿಸಲು ಉತ್ತಮ ಸಾಧನಗಳು ಎನ್ನುವಂತಿತ್ತು.

ಹೊ ಚಿ ಮಿನ್ ಮನೆಯಲ್ಲಿ

ಹನೊಯ್ ನಲ್ಲಿ ಹೊ ಚಿ ಮಿನ್ ದೇಹ ಇಟ್ಟಿರುವ ಮುಸೋಲಿಯಂ ಮತ್ತು ಮನೆಗೆ ಭೇಟಿ ಸಂಘಟಿಸಲಾಗಿತ್ತು. ಅಗತ್ಯ ನಿರ್ವಹಣಾ ಕಾರ್ಯಕ್ರಮಗಳಿಗಾಗಿ ಮುಸೋಲಿಯಂ ಮುಚ್ಚಿತ್ತು. ಅದೇ ಸಂಕೀರ್ಣದಲ್ಲಿದ್ದ ಅಧ್ಯಕ್ಷೀಯ ಅರಮನೆ, ಹೊ ಚಿ ಮಿನ್ ವಾಸವಾಗಿದ್ದ ಮನೆಗಳಿಗೆ ಭೇಟಿ ಕೊಡುವ ಅವಕಾಶ ಇತ್ತು. ಉತ್ತರ ವಿಯೇಟ್ನಾಮ್ ಫ್ರೆಂಚರಿಂದ 1954ರಲ್ಲಿ ಸ್ವಾತಂತ್ರ್ಯ ಪಡೆದು ಹೊ ಚಿ ಮಿನ್ ಅ ಧ್ಯಕ್ಷರಾಗಿ ಚುನಾಯಿತರಾದರು. ಅವರು ಹಿಂದೆ ಫ್ರೆಂಚ್ ವಸಾಹತುಶಾಹಿ ದಮನದ ಪ್ರತೀಕವಾಗಿದ್ದ ಫ್ರೆಂಚ್ ಗವರ್ನರ್ ಅರಮನೆಯಲ್ಲಿ ಅಧ್ಯಕ್ಷರಾಗಿ ವಾಸಿಸಲು ನಿರಾಕರಿಸಿದರಂತೆ. ಅವರು ಗವರ್ನರ್ ಅರಮನೆಯ ಇಲೆಕ್ಟ್ರಿಶಿಯನ್ ಕ್ವಾರ್ಟರ್ ಒಂದರಲ್ಲಿ ವಾಸವಾಗಿದ್ದರು. ಅದನ್ನು ಒಂದು ಬೆಡ್ ರೂಂ, ಚಿಕ್ಕ ಹಾಲ್, ಅಡುಗೆ ಕೋಣೆ ಇರುವ ಅತ್ಯಂತ ಸರಳ ಮನೆ. ಅಧ್ಯಕ್ಷೀಯ ಅರಮನೆಯನ್ನು ವಿದೇಶಿ ಗಣ್ಯರ ಭೇಟಿ ಸಮಯದಲ್ಲಿ ಸರಕಾರಿ ಕಚೇರಿಯಾಗಿ ಬಳಸುತ್ತಿದ್ದರಂತೆ. ಈ ಮನೆ ಬೇಸಗೆಯಲ್ಲಿ ಅತ್ಯಂತ ಬಿಸಿಯಾಗಿದ್ದು ಪಾಲಿಟ್ ಬ್ಯುರೊ ಒತ್ತಾಯ ಮಾಡಿ ಒಂದು ಪ್ರತ್ಯೇಕ ಮನೆ ಕಟ್ಟಲಾಯಿತು. ಅದೂ ಭೇಟಿಗೆ ತೆರೆದಿಡಲಾಗಿದೆ. ಅದು ಹೊ ಚಿ ಮಿನ್ ದಶಕಗಳ ಕಾಲ ಭೂಗತರಾಗಿ ಕಳೆದ ಪರ್ವತ ಪ್ರದೇಶದ ಮಾದರಿಯ ಮರದ ಅತ್ಯಂತ ಸರಳ ‘ಅಟ್ಟಣಿಗೆ ಮನೆ’. ಕೆಳಗೆ ಪೊಲಿಟ್ ಬ್ಯುರೊ ಸಭೆಗೆ ಒಂದು ಟೇಬಲ್ ಹಾಗೂ ಕುರ್ಚಿಗಳಿರುವ ತೆರೆದ ಭಾಗ. ಅಟ್ಟಣಿಗೆಯಲ್ಲಿ ಒಂದು ಬೆಡ್ ರೂಂ, ಚಿಕ್ಕ ಹಾಲ್, ಅಡುಗೆ ಕೋಣೆಗಳು. ಇದಲ್ಲದೆ ಹೊ ಚಿ ಮಿನ್ ಅವರಿಗೆ ಕೊನೆಯ ವರ್ಷಗಳಲ್ಲಿ ಒಂದು ಬಂಕರ್ ಮನೆ ಕಟ್ಟಲಾಯಿತು. ಆಗ ಹನೊಯ್ ಮೇಲೆ ಅಮೆರಿಕನ್ ಬಾಂಬ್ ದಾಳಿ ಹೆಚ್ಚಿದ್ದರಿಂದ ಹೊ ನಿರಾಕರಿಸಿದರೂ ಅವರನ್ನು ಈ ಬಂಕರ್ ಮನೆಗೆ ವರ್ಗಾಯಿಸಲಾಯಿತು. ಆದರೆ ಅಲ್ಲಿಗೆ ಹೋದ ಕೆಲವೇ ತಿಂಗಳುಗಳಲ್ಲಿ ಆರೋಗ್ಯ ಬಿಗಡಾಯಿಸಿ ಅವರು ನಿಧನಹೊಂದಿದರು. ಅವರ ಕೊನೆಯ ದಿನದ ಹಾಗೂ ನಿಧನದ ನಂತರದ ಒಂದು ಬಹಳ ಭಾವನಾತ್ಮಕವಾದ ಕಿರು ಡಾಕ್ಯುಮೆಂಟರಿ ಫಿಲಂ ತೋರಿಸಲಾಯಿತು.

ಹೊ ಚಿ ಮಿನ್ ವಸತಿ ಸಂಕೀರ್ಣದ ಗೈಡ್ ಆಗಿದ್ದ ಮಹಿಳೆ ಬಹಳ ಭಾವನಾತ್ಮಕವಾಗಿ ಮನ ಮುಟ್ಟುವಂತೆ ಹೊ ಚಿ ಮಿನ್ ಬಗ್ಗೆ ಹೇಳುತ್ತಿದ್ದಳು. ಗೈಡ್ ಕೆಲಸ ಅವಳಿಗೆ ಬರಿಯ ಒಂದು ಉದ್ಯೋಗವಾಗಿರಲಿಲ್ಲ ಅಂತ ಅನಿಸುತ್ತಿತ್ತು. ಹೊ ಚಿ ಮಿನ್ ದೇಹವನ್ನು ಏಕೆ ಇಡಲಾಯಿತು? ಇದು ವ್ಯಕ್ತಿಪೂಜೆಯಲ್ಲವೇ? ಎಂಬ ನಮ್ಮ ಮನಸ್ಸಿನಲ್ಲಿ ಇದ್ದ ಪ್ರಶ್ನೆಯನ್ನು ಕೇಳುವ ಮೊದಲೇ ಅವಳು ಅದಕ್ಕೆ ಉತ್ತರಿಸಿದಳು. ಇಡೀ ವಿಯೇಟ್ನಾಮಿನ ಸ್ವಾತಂತ್ರ್ಯ ಹೋರಾಟದ ಜನಪ್ರಿಯ ನಾಯಕರಾಗಿದ್ದ ಹಾಗೂ ಜನರ ನಡುವೆಯೇ ಇರುತ್ತಿದ್ದ ಹೊ ಚಿ ಮಿನ್ ಅವರನ್ನು ದಕ್ಷಿಣ ವಿಯೇಟ್ನಾಂ ಜನತೆಗೆ 1954ರ ದೇಶವಿಭಜನೆ ನಂತರ ಪ್ರತ್ಯಕ್ಷ ನೋಡುವ ಅವಕಾಶ ಸಿಕ್ಕಿರಲಿಲ್ಲ. ಆದ್ದರಿಂದ ವಿಯೇಟ್ನಾಂ ಏಕೀಕರಣದ ನಂತರ ದಕ್ಷಿಣ ವಿಯೇಟ್ನಾಂ ಜನತೆಗೆ ತಮ್ಮ ನೆಚ್ಚಿನ ನಾಯಕನನ್ನು ನೋಡಲು ಅವಕಾಶ ಸಿಗಬೇಕೆಂದು ಅವರ ದೇಹವನ್ನು ಇಡಲು ನಿರ್ಧರಿಸಲಾಯಿತಂತೆ.

ಬಿರ್ಲಾ ಅನಾಥಾಲಯದಲ್ಲಿ

ಹನೊಯ್ ನಲ್ಲಿ ಬಿರ್ಲಾ ಅನಾಥಾಲಯಕ್ಕೂ ಭೇಟಿ ಏರ್ಪಡಿಸಲಾಗಿತ್ತು. ಫ್ರೆಂಚ್, ಜಪಾನೀ ಮತ್ತು ಅಮೆರಿಕನ್ ವಸಾಹತುಶಾಹಿ-ಸಾಮ್ರಾಜ್ಯಶಾಹಿಯ ವಿರುದ್ಧ ಸುಮಾರು 30 ವರ್ಷಗಳ ಸತತ ವಿಮೋಚನಾ ಹೋರಾಟದಲ್ಲಿ ಹುತಾತ್ಮರಾದವರ ಮತ್ತು ದಾಳಿಗಳಲ್ಲಿ ಸತ್ತವರ ಮಕ್ಕಳು ಹೀಗೆ ಲಕ್ಷಾಂತರ ಅನಾಥ ಮಕ್ಕಳ ಸಮಸ್ಯೆಯನ್ನು ವಿಯೇಟ್ನಾಂ ಎದುರಿಸಬೇಕಾಯಿತು. ಈ ಸಮಸ್ಯೆ ನಿವಾರಣೆಯ ಪ್ರಯತ್ನದಲ್ಲಿ ದೊಡ್ಡ ಪ್ರಮಾಣದಲ್ಲಿ ವಿಶ್ವವ್ಯಾಪಿ ಸೌಹಾರ್ದ ಚಳುವಳಿ  ಕೈ ಜೋಡಿಸಿತು. ಇದರ ಭಾಗವಾಗಿ ಹಲವು ಅನಾಥಾಲಯಗಳನ್ನು ಸ್ಥಾಪಿಸಲಾಯಿತು. ಇಂದಿಗೂ ಹಲವು ಇತರ ಸಾಮಾಜಿಕ ಕಾರಣಗಳಿಂದಾಗಿ ಅನಾಥ ಮಕ್ಕಳ ಸಮಸ್ಯೆ ಕಡಿಮೆ ಪ್ರಮಾಣದಲ್ಲಾದರೂ ಮುಂದುವರೆದಿದೆ. ಜಿ ಡಿ ಬಿರ್ಲಾ ನೆರವಿನಲ್ಲಿ 1980ರ ದಶಕದಲ್ಲಿ ಆರಂಭಿಸಿದ ಅನಾಥಾಲಯದ ಮಕ್ಕಳು ಮತ್ತು ಸಿಬ್ಬಂದಿ ಭೇಟಿ ಮಾಡುವ ಅವಕಾಶ ಸಿಕ್ಕಿತು. ಅನಾಥಾಲಯವನ್ನು 30 ಮಕ್ಕಳಿರುವ ಎರಡು ‘ತಾಯಂದಿರಿರುವ’ ‘ಮನೆ’ಗಳಾಗಿ ಸಂಘಟಿಸಲಾಗಿದೆ. ಇಲ್ಲಿ 2-18 ವರ್ಷದ ಅನಾಥ ಮಕ್ಕಳ ವಸತಿಗೆ ಅವಕಾಶ ಇದ್ದು, ಅವರು ತಮ್ಮ ಕಾಲ ಮೇಲೆ ನಿಂತುಕೊಳ್ಳುವವರೆಗೆ ನೋಡಿಕೊಳ್ಳಲಾಗುತ್ತದೆ.

ಹನೊಯ್ ಜನತಾ ಸಮಿತಿ (ಪೀಪಲ್ಸ್ ಕಮಿಟಿ - ಇಲ್ಲಿನ ಸ್ಥಳೀಯ ಸರಕಾರದಂತೆ)ಯ ಉಪಾಧ್ಯಕ್ಷ ಮತ್ತು ಜನಮೈತ್ರಿ ಸಂಘದ ಹಿರಿಯ ಕಾರ್ಯಕರ್ತರ ಭೇಟಿ ಮತ್ತು ಔತಣಕೂಟವನ್ನೂ ಏರ್ಪಡಿಸಲಾಗಿತ್ತು. ಇಲ್ಲೂ ವಿಯೇಟ್ನಾಮಿ ತಂಡದ ಸಾಂಸ್ಕøತಿಕ ಕಾರ್ಯಕ್ರಮಗಳು ಇದ್ದವು. ನಾವು (ಕರ್ನಾಟಕದ ತಂಡ) ಇಳಿದುಕೊಂಡ ಹೊಟೆಲಿಗೆ ಸ್ವಲ್ಪ ದೂರದಲ್ಲೇ ಕ್ಯೂಬಾ ರಾಯಭಾರ ಕಚೇರಿ ಇದ್ದು ಅಲ್ಲಿ ಪ್ರವೇಶದ್ವಾರದಲ್ಲೇ ಹೂಗುಚ್ಛಗಳ ರಾಶಿ ಬಿದ್ದಿತ್ತು. ಕುತೂಹಲದಿಂದ ಒಳಗೆ ಹೋದೆವು. ಕಚೇರಿಯ ತುಂಬಾ ಫಿಡೆಲ್ ಫೋಟೊಗಳು ಹೂಗುಚ್ಛಗಳು ಇದ್ದವು. ಸ್ವತಃ ರಾಯಭಾರಿ ನಮ್ಮನ್ನು ಸ್ವಾಗತಿಸಿದ. ನಾವು ಕಮ್ಯುನಿಸ್ಟ್ ಪಕ್ಷದ ಪ್ರತಿನಿಧಿಗಳು ಎಂದಾಗ ಅವನಿಗೆ ಇನ್ನಷ್ಟು ಸಂತೋಷ ಆಯಿತು. ಶ್ರದ್ಧಾಂಜಲಿ ರಿಜಿಸ್ಟರಿನಲ್ಲಿ ಬರೆದು ಸಹಿ ಹಾಕುವಂತೆ ಕೋರಿದ. ನಾವು ಅದನ್ನು ಸಂತೋಷದಿಂದ ಮಾಡಿದೆವು.

ಈ ಎರಡು ದಿನಗಳಲ್ಲಿ ಭಾರತದ ಇಡೀ ತಂಡ ಪರಿಚಯವಾಗಿತ್ತು. ಭಾರತದ ತಂಡದಲ್ಲಿ 34 ಜನ ಇದ್ದು ದೆಹಲಿಯಿಂದ 6, ತೆಲಂಗಾಣದಿಂದ 18, ಕರ್ನಾಟಕದಿಂದ 8, ಪಾಂಡಿಚೇರಿ ಮತ್ತು  ಉತ್ತರಾಖಂಡ ತಲಾ 1 ಜನ ಇದ್ದರು. ಸಾಂಸ್ಕøತಿಕ ತಂಡದ 13 ಜನ ಇದ್ದರೆ, ಉಳಿದವರು  ಎ.ಐ.ಪಿ.ಎಸ್.ಒ. ಪದಾಧಿಕಾರಿಗಳು, ಲೇಖಕಕರು, ಉದ್ಯಮಿಗಳು, ರಾಜಕೀಯ ಪಕ್ಷಗಳ ನಾಯಕರು ಇದ್ದರು. ಏಳು ರಾಜಕೀಯ ಪಕ್ಷಗಳ (ಸಿಪಿಐ, ಸಿಪಿಐ(ಎಂ), ಫಾರ್ವರ್ಡ್ ಬ್ಲಾಕ್, ಕಾಂಗ್ರೆಸ್, ಟಿ.ಡಿ.ಪಿ, ಟಿ.ಆರ್.ಎಸ್., ಲೋಕಸತ್ತಾ) ಪ್ರತಿನಿಧಿಗಳು. ತಂಡದಲ್ಲಿ ಸಿಪಿಐ(ಎಂ)ನ್ನು ತೆಲಂಗಾಣ ರಾಜ್ಯ ಸಮಿತಿ ಸದಸ್ಯ ಕಾಂ. ರಘುಪಾಲ ಮತ್ತು ನಾನು ಪ್ರತಿನಿಧಿಸಿದ್ದೆವು. ಕರ್ನಾಟಕದಿಂದ ಡಾ. ಸಿದ್ಧನಗೌಡ ಪಾಟಿಲ್, ಪಿ ವಿ ಲೋಕೇಶ್, ಜಿ.ಆರ್.ಶಿವಶಂಕರ್ ತಂಡದಲ್ಲಿದ್ದರು.

ಭಾರತದ ಅಕ್ಕಿ ಋಣ

ಎರಡು ದಿನಗಳನ್ನು ಹನೊಯ್ ನಲ್ಲಿ ಕಳೆದ ಮೇಲೆ ಮುಂದಿನ ಭೇಟಿ ಕಾನ್ ತೋ ನಗರಕ್ಕೆ. ಇದು ದಕ್ಷಿಣದ ತುದಿಯಲ್ಲಿದ್ದು ಹನೊಯ್ ನಿಂದ ಸುಮಾರು 2 ಸಾವಿರ ಕಿ.ಮಿ. ದೂರದಲ್ಲಿತ್ತು. 36 ಗಂಟೆಗಳ ರೈಲು ಪ್ರಯಾಣವಂತೆ. ಆದ್ದರಿಂದ ವಿಮಾನ ಪ್ರಯಾಣ ಏರ್ಪಡಿಸಿದ್ದರು. ಕಾನ್ ತೋ ನಮ್ಮ ಗೋವಾದಂತೆ ಪ್ರವಾಸಿ ತಾಣವಾಗಿ ಪ್ರಸಿದ್ಧವಾಗಿದೆ. ಅಲ್ಲಿ ಉತ್ಸವದ ಎರಡನೇ ಬಹಿರಂಗ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕ್ಯಾನ್ ತೋ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಲಾಗಿತ್ತು. ಇಲ್ಲೂ ದೊಡ್ಡ ಸಭಾಂಗಣ ತುಂಬಿ ತುಳುಕುತ್ತಿತ್ತು. ವಿಶ್ವವಿದ್ಯಾಲಯದಲ್ಲಿ ಕುಲಪತಿಗಳು ಉದ್ಘಾಟನೆ ಮಾಡಿದರು. ಭಾರತ ತಂಡದ ಪರವಾಗಿ ಇಲ್ಲಿ ಡಿ ಸುಧಾಕರ (ತೆಲಂಗಾಣ ಸಿಪಿಐ ಕಾರ್ಯದರ್ಶಿ ಮತ್ತು ಎ.ಐ.ಪಿ.ಎಸ್.ಒ. ಪದಾಧಿಕಾರಿ) ಮಾತನಾಡಿದರು. ಎರಡು ಭಾಷಣಗಳ ನಂತರ ಎರಡೂ ತಂಡಗಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿದವು. ಭಾರತದ ತಂಡ ಹನೊಯ್ ನಲ್ಲಿ ಪ್ರದರ್ಶಿಸಿದ್ದೇ ಆಗಿತ್ತು. ಆದರೆ ವಿಯೇಟ್ನಾಮಿ ತಂಡದ ಸಂಗೀತ-ನೃತ್ಯ ಪ್ರಸ್ತುತಿಗಳು ಪೂರ್ಣವಾಗಿ ಬೇರೆಯೇ ಆಗಿದ್ದವು. ಇಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳ ಜವಾಬ್ದಾರಿಯನ್ನು ವಿ.ವಿ. ವಿದ್ಯಾರ್ಥಿಗಳಿಗೆ ವಹಿಸಲಾಗಿತ್ತಂತೆ. ಅವರ ಸಂಗೀತ-ನೃತ್ಯ ಐಟಂಗಳ ಗುಣಮಟ್ಟ, ವೈವಿಧ್ಯತೆ, ಅರ್ಥಪೂರ್ಣತೆ ಗಳಲ್ಲಿ ಹನೊಯ್ ನಷ್ಟೇ ‘ಪ್ರೊಫೆಷನಲ್’ ಆಗಿತ್ತು ಅಥವಾ ಅವರನ್ನೂ ಮೀರಿಸಿತ್ತು ಎಂದೂ ಹೇಳಬಹುದು. ಅವರ ಥೀಮ್ ಗಳೂ ಇನ್ನಷ್ಟು ಭಿನ್ನವಾಗಿಯೂ ವೈವಿಧ್ಯಮಯವೂ ಆಗಿದ್ದವು. ವಿಯೇಟ್ನಾಮಿನ ಸಾಂಸ್ಕøತಿಕ ಬದುಕಿನಲ್ಲಿ ರೇಷ್ಮೆಯ ಪಾತ್ರ, ಪರಿಸರ ಸಮಸ್ಯೆ, ಗೆರಿಲ್ಲಾ ಸಮರ ಮತ್ತು ಜನತೆ, ಯುದ್ಧ ಮತ್ತು ಶಾಂತಿ - ಮುಂತಾದ ವಿಶಿಷ್ಟ ಥೀಮ್ ಗಳು ಇದ್ದವು. ಬಾರತದ ನೃತ್ಯ ತಂಡ ಇಲ್ಲೊಂದು ಸ್ವಯಂ-ಸ್ಫೂರ್ತ ಪ್ರಯೋಗ ಮಾಡಿತು. ಬಾಲಿವುಡ್ ಡ್ಯಾನ್ಸ್ ನಂಬರುಗಳಿಗೆ ಸಭಿಕರನ್ನು ಆಹ್ವಾನಿಸಿದರು. ಆಗ ಹಲವರು ಯುವಕ-ಯುವತಿಯರು (ಕೆಲವು ಮುದುಕ-ಮುದುಕಿಯರೂ!) ಉತ್ಸಾಹದಿಂದ ವೇದಿಕೆ ತುಂಬಾ ತುಂಬಿ ಹೆಜ್ಜೆ ಹಾಕಿದ್ದು ಸಹ, ಹಿಂದೆ ಹೇಳಿದಂತೆ ಸಂಗೀತ-ನೃತ್ಯಗಳಿಗೆ ದೇಶ-ಭಾಷೆಗಳ ಗಡಿಗಳಿಲ್ಲ ಎಂಬುದನ್ನು ಸಮರ್ಥಿಸುವಂತಿತ್ತು.

ಕ್ಯಾನ್ ತೊ ಬಳಿ ಇರುವ ವಿಶಿಷ್ಟ ಪ್ರಸಿದ್ಧ ‘ತೇಲುವ ಮಾರುಕಟ್ಟೆ’ (ಹಳ್ಳಿಯ ಸಂತೆಯಂತೆ, ಆದರೆ ಮಾರಾಟ ಮಾಡುವವರೂ, ಕೊಳ್ಳುವವರೂ ದೋಣಿಯಲ್ಲಿ ಬರುತ್ತಾರೆ), ವಿಯೇಟ್ನಾಮಿ ಪಗೋಡಾ, ಮಾದರಿ ಹಳ್ಳಿ ಗೂ ಭೇಟಿ ಏರ್ಪಡಿಸಲಾಗಿತ್ತು. ಕ್ಯಾನ್ ತೊ ಜನತಾ ಸಮಿತಿ (ಪೀಪಲ್ಸ್ ಕಮಿಟಿ)ಯ ಉಪಾಧ್ಯಕ್ಷ ಮತ್ತು ಜನಮೈತ್ರಿ ಸಂಘದ ಹಿರಿಯ ಕಾರ್ಯಕರ್ತರ ಭೇಟಿ ಮತ್ತು ಔತಣಕೂಟವನ್ನೂ ಇಲ್ಲೂ ಏರ್ಪಡಿಸಲಾಗಿತ್ತು.

ಕ್ಯಾನ್ ತೊ ಬಳಿ ಇರುವ ಕೂ ಲಾಂಗ್ ಅಕ್ಕಿ ಸಂಶೋಧನಾ ಸಂಸ್ಥೆಯಲ್ಲಿ ಬಾರತ-ವಿಯೇಟ್ನಾಮ್ ಮೈತ್ರಿ ಗಟ್ಟಿಗೊಳಿಸುವ ಬಗ್ಗೆ ಸಂವಾದದ ಕಾರ್ಯಕ್ರಮ ಇತ್ತು. ಕೂ ಲಾಂಗ್ ಅಕ್ಕಿ ಸಂಶೋಧನಾ ಸಂಸ್ಥೆಯೇ ಇಂತಹ ಮೈತ್ರಿಯ ಉತ್ತಮ ಉದಾಹರಣೆ ಎಂದು ಹೇಳಲಾಯಿತು. ಭಾರತದ ನೆರವಿನಿಂದ ಆರಂಭಿಸಲಾದ ಈ ಸಂಸ್ಥೆಯ 240 ರಲ್ಲಿ 40 ವಿಜ್ಞಾನಿಗಳು ಸ್ನಾತಕೋತ್ತರ ಮತ್ತು ಪಿ.ಎಚ್.ಡಿ.ಯನ್ನು ಭಾರತದಲ್ಲಿ ಮುಗಿಸಿದವರು. ಅಕ್ಕಿ ಆಮದುದಾರನಾಗಿದ್ದ ವಿಯೇಟ್ನಾಂ ಇಂದು ಎರಡನೇ ಅತಿ ದೊಡ್ಡ ಅಕ್ಕಿ ರಫ್ತುದಾರ ಆಗುವಲ್ಲಿ ಭಾರತದ ‘ಅಕ್ಕಿ ಋಣ’ವನ್ನು ಸ್ಮರಿಸಲಾಯಿತು. ಇಂತಹುದೇ ಸಹಕಾರವನ್ನು ಹೊಸ ಐಟಿ-ಬಿಟಿ ತಂತ್ರಜ್ಞಾನಗಳಲ್ಲಿ ಸಾಧಿಸಬೇಕು. ಇನ್ನೂ ಹೆಚ್ಚಿನ ವ್ಯಾಪಾರ, ಎರಡು ದೇಶಗಳ ನಡುವೆ ಅವಳಿ-ರಾಜ್ಯ ಅವಳಿ-ನಗರ ವ್ಯವಸ್ಥೆ - ಮುಂತಾದ ಐಡಿಯಾಗಳು ಸಂವಾದದಲ್ಲಿ ಹೊಮ್ಮಿದವು.

ಎರಡು ಟೀ ಶರ್ಟುಗಳು ಮತ್ತು ‘ಆನೆಗಳನ್ನು ಮಣಿಸಿದ ಮಿಡತೆಗಳು’ ಎಂಬ ರೂಪಕ ಒಂದು ವಾರದ ಭೇಟಿಯಲ್ಲಿ ನಾ ಕಂಡ ವಿಯೇಟ್ನಾಮಿನ ಸಾರವನ್ನು ಸಮರ್ಥವಾಗಿ ಹೇಳುತ್ತವೆ.

ಕೂ ಚಿ ಸುರಂಗದಲ್ಲಿ

ಎರಡು ದಿನಗಳ ಕ್ಯಾನ್ ತೊ ಭೇಟಿಯ ನಂತರ ಸುಮಾರು 300 ಕಿಮಿ. ದೂರ ಇರುವ ಹೊ ಚಿ ಮಿನ್ (ಹಿಂದಿನ ದಕ್ಷಿಣ ವಿಯೇಟ್ನಾಂ ರಾಜಧಾನಿ - ಸೈಗಾನ್) ನಗರಕ್ಕೆ ಸುಮಾರು 4 ಗಂಟೆಗಳಲ್ಲಿ ತಲುಪಿದೆವು. ಹೊ ಚಿ ಮಿನ್ ನಗರ ವಿಯೇಟ್ನಾಮಿನ ಅತಿ ದೊಡ್ಡ (ಸುಮಾರು 1 ಕೋಟಿ ಜನಸಂಖ್ಯೆ ಇರುವ) ನಗರ. ದೇಶದ ಕಾಲುಭಾಗ ಜಿಡಿಪಿ ಉತ್ಪಾದಿಸುವ ಶೇ. 44 ಹೂಡಿಕೆ ಆಕರ್ಷಿಸುವ ಪ್ರದೇಶ. ನಮ್ಮ ಮುಂಬಯಿಯಂತೆ ದೇಶದ ಕಮರ್ಶಿಯಲ್ ರಾಜಧಾನಿ. ಹೊ ಚಿ ಮಿನ್ ನಗರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಇರಲಿಲ್ಲ. ಪ್ರಸಿದ್ಧ ಯುದ್ಧ-ಸ್ಮಾರಕ ಕೂ ಚಿ ಸುರಂಗಗಳಿಗೆ ಭೇಟಿ ಮತ್ತು ಜನಮೈತ್ರಿ ಸಂಘದ ಕಾರ್ಯಕರ್ತರ ಜತೆ ಭೇಟಿ ಮತ್ತು ಔತಣಕೂಟ ಮಾತ್ರ ಇತ್ತು. ಹೊ ಚಿ ಮಿನ್ ನಗರ ಕಮ್ಯುನಿಸ್ಟ್ ಪಕ್ಷದ ಉಪ ಕಾರ್ಯದರ್ಶಿ(ಮಹಿಳೆ) ಜತೆ ತಂಡದ ರಾಜಕೀಯ ಪ್ರತಿನಿಧಿಗಳ ಸಂವಾದ ಏರ್ಪಡಿಸಲಾಗಿತ್ತು. ಒಂದು ಪ್ರಶ್ನೆಗೆ ಆಕೆ ನಗರ ಕಮ್ಯುನಿಸ್ಟ್ ಪಕ್ಷದ 2 ಲಕ್ಷ ಸದಸ್ಯರಲ್ಲಿ ಶೇ.40 ಮಹಿಳೆಯರು. 9 ಕೋಟಿ ಜನಸಂಖ್ಯೆಯ ವಿಯೇಟ್ನಾಮಿನಲ್ಲಿ 40 ಲಕ್ಷ ಕಮ್ಯುನಿಸ್ಟ್ ಪಕ್ಷದ ಸದಸ್ಯರು ಇದ್ದಾರೆ ಎಂದರು.

ಹೊ ಚಿ ಮಿನ್ ನಗರದ ಹತ್ತಿರ ಇರುವ ಕೂ ಚಿ ಸುರಂಗಗಳಿಗೆ ಏರ್ಪಡಿಸಿದ್ದ ಭೇಟಿ ವಿಯೇಟ್ನಾಂ ಚರಿತ್ರೆಗೆ ನಮ್ಮನ್ನು ಒಯ್ದಿತು. ಇದು ಅಮೆರಿಕದ ವಿರುದ್ಧ ಗೆರಿಲ್ಲಾ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದೆ. 1954ರಲ್ಲಿ ಫ್ರೆಂಚರ ಜತೆ ಒಪ್ಪಂದದ ಪ್ರಕಾರ ಉತ್ತರ ವಿಯೇಟ್ನಾಂ ಸ್ವತಂತ್ರವಾಯಿತು. ದಕ್ಷಿಣ ವಿಯೇಟ್ನಾಂನಲ್ಲಿ ವರ್ಷದೊಳಗೆ ಜನಮತಸಂಗ್ರಹ ನಡೆಸಬೇಕಾಗಿತ್ತು. ಆದರೆ ದಕ್ಷಿಣ ವಿಯೇಟ್ನಾಂನ ಕೈಗೊಂಬೆ ಸರಕಾರ ಅದನ್ನು ಈಡೇರಿಸಲಿಲ್ಲ ಮಾತ್ರವಲ್ಲ, ಅದರ ಮೇಲೆ ಅಮೆರಿಕದ ಹಿಡಿತ ಹೆಚ್ಚುತ್ತಾ ಹೋಯಿತು. ಶಾಂತಿಯುತ ವಿಧಾನಗಳು ಮುರಿದು ಬಿದ್ದಾಗ ದಕ್ಷಿಣ ವಿಯೇಟ್ನಾಂನಲ್ಲಿ ಗೆರಿಲ್ಲಾ ಯುದ್ಧ ಆರಂಭವಾಯಿತು. ಈ ಯುದ್ಧದ ಪ್ರಮುಖ ನೆಲೆ ಮಿಲಿಟರಿ ಕೇಂದ್ರ ಕೂ ಚಿ ಸುರಂಗ ಪ್ರದೇಶ ಆಗಿತ್ತು. ಅಮೆರಿಕದ ವಿರುದ್ಧ ಗೆರಿಲ್ಲಾ ಯುದ್ಧದ (1955-75) 20 ವರ್ಷಗಳ ಕಾಲ 20 ಸಾವಿರಕ್ಕೂ ಹೆಚ್ಚು ಗೆರಿಲ್ಲಾ ಯೋಧರು ಇಲ್ಲಿ ವಾಸಿಸುತ್ತಿದ್ದರು. 5 ಮಾಳಿಗೆಗಳ ಕಟ್ಟಡದಂತೆ, ನೆಲದ ಕೆಳಗೆ 5 ಹಂತಗಳಲ್ಲಿ ಯೋದರ ವಾಸಸ್ಥಳ, ಶಸ್ತ್ರ ತಯಾರಿಕಾ ವರ್ಕಶಾಪ್, ಆಸ್ಪತ್ರೆ, ಅಡುಗೆ ಮನೆ, ಇತ್ಯಾದಿಗಳು ಇರುವ ವ್ಯವಸ್ಥೆಯನ್ನು ನೆಲದಡಿ ಮಾಡಲಾಗಿತ್ತು. ಈ ಎಲ್ಲಾ ಸ್ಥಳಗಳಿಗೆ ತೆವಳಿಕೊಂಡೇ ಹೋಗಬೇಕಾದ ಸುಮಾರು 200 ಕಿ.ಮಿ. ಉದ್ದದ ಸುರಂಗ ಮಾರ್ಗಗಳನ್ನು ನಿರ್ಮಿಸಲಾಗಿತ್ತು. ಇಷ್ಟು ದೂರದ ಆಳದ ಭೂಗತ ವ್ಯವಸ್ಥೆಯನ್ನು ಬರಿಯ ಹಾರೆ-ಪಿಕ್ಕಾಸು ಮತ್ತು ಕೈಗಳೀಂದಲೇ ಮಾಡಬೇಕಾಗಿತ್ತು. ಈ ಭೂಗತ ವ್ಯವಸ್ಥೆಗೆ ಗಾಳಿ ಬರುವಂತೆ, ವೈರಿಗಳ ಮೇಲೆ ಗುಂಡಿನ ದಾಳಿ ಮಾಡಲು ಗುಪ್ತ ಕಿಂಡಿಗಳಿದ್ದವು. ಅದೇ ರೀತಿ ವೈರಿ ಸೈನಿಕ ಬಂದರೆ ಅವರನ್ನು ಖೆಡ್ಡಾ ಮಾಡುವ ವ್ಯವಸ್ಥೆಯೂ ಇತ್ತು. ಈ ನೆಲೆಗೆ ಇತರ ಪ್ರದೇಶಗಳಿಂದ ಸಂಪರ್ಕ ಮತ್ತು ಆಹಾರ-ಶಸ್ತ್ರ ಪೂರೈಕೆಗೆ ಗುಪ್ತ ದಾರಿಗಳನ್ನು ಮಾಡಲಾಗಿತ್ತು. ಈಗ ಕೂ ಚಿ ಸುರಂಗ ಒಂದು ಪ್ರಸಿದ್ಧ ಯುದ್ಧ-ಸ್ಮಾರಕ ಪಾರ್ಕ್. ಮೊದಲ ಹಂತದಲ್ಲಿರುವ ಕೆಲವು ಸುರಂಗ ಮತ್ತಿತರ ಮಿಲಿಟರಿ ವ್ಯವಸ್ಥೆಗಳನ್ನು ಎತ್ತರ-ಅಗಲ ಮಾಡಿ ಪ್ರವಾಸಿಗಳು (ಅಮೆರಿಕನ್ ಸಹ) ಹೋಗುವಂತೆ ಮಾಡಲಾಗಿದೆ. ಇದರ ಭಾಗವಾಗಿ ಕೆಲವು ಸುರಂಗ ಮಾರ್ಗಗಳು, ಒಂದು ಭೂಗತ ಮಿಲಿಟರಿ ಆಸ್ಪತ್ರೆ, ಭೂಗತ ಮಿಲಿಟರಿ ಮುಖ್ಯ ಕಚೇರಿಗಳ ನೇರ ಅನುಭವ ಪಡೆಯುವುದು ಸಾಧ್ಯವಾಯಿತು. ಇಲ್ಲೂ ನಮ್ಮ ಗೈಡ್ ಬಹಳ ಭಾವನಾತ್ಮಕವಾಗಿ ಮನಮುಟ್ಟುವಂತೆ ಈ ಸುರಂಗಗಳಲ್ಲಿ ವಾಸಿಸಿ ಎರಡು ದಶಕಗಳ ಕಾಲ ಅದಮ್ಯ ಸ್ಫೂರ್ತಿಯಿಂದ ಹೋರಾಡಿದ, ಮಡಿದ, ಅಂಗವಿಕಲರಾದ ಕತೆಯನ್ನು ಕಣ್ಣಿಗೆ ಕಟ್ಟುವಂತೆ ಹೇಳುತ್ತಿದ್ದ- ಚಾರ್ಟ್, ಮ್ಯಾಪ್, ಮಾಡೆಲ್ ಗಳು, ಫೋಟೋಗಳ ಮೂಲಕ. 

ಹೊ ಚಿ ಮಿನ್ ನಗರದಲ್ಲೇ ಇದ್ದ ಯುದ್ಧ ಸ್ಮಾರಕ ಮ್ಯೂಸಿಯಂಗೂ ನಾವು ಭೇಟಿ ನೀಡಿದೆವು. ಇಲ್ಲಿ ಪ್ರಮುಖವಾಗಿ ಫೋಟೋಗಳ ಮೂಲಕ ವಿಯೇಟ್ನಾಮಿನ 30 ವರ್ಷಗಳ ವಿಮೋಚನಾ ಯುದ್ಧದ ಚಿತ್ರಣ ನೀಡಲಾಗಿದೆ.  ಫ್ರೆಂಚ್, ಜಪಾಮಿ, ಅಮೆರಿಕನ್ ಸಾಮ್ರಾಜ್ಯಶಾಹಿಯ ಬಲಿಷ್ಟ ಸೈನ್ಯಗಳ ವಿರುದ್ಧ ಹೋರಾಟದಲ್ಲಿ ಯುದ್ಧದ ಕ್ರೌರ್ಯ, ಜನರ ಬವಣೆ ಎಲ್ಲವನ್ನೂ ಫೋಟೋಗಳ ಮೂಲಕ ಕೊಡಲಾಗಿದೆ. ವಿಯೇಟ್ನಾಮ್ ಹೋರಾಟಗಾರರು, ಜನತೆಯ ಮಾಡಿದ ಚಿತ್ರಹಿಂಸೆಯಲ್ಲಿ ಬಳಸಿದ (ಒಂದು ಗಿಲಟಿನ್ ಸೇರಿದಂತೆ) ಕೆಲವು ಉಪಕರಣಗಳ ಮಾದರಿಗಳನ್ನು ಇಡಲಾಗಿದೆ. ಆಗ ಮತ್ತು ಈಗಲೂ ಅಮೆರಿಕದ ರಾಸಾಯನಿಕ ಯುದ್ಧದ (ನಾಪಾಮ್, ಏಜೆಂಟ್ ಆರೇಂಜ್) ಪರಿಣಾಮಗಳ ಬಗ್ಗೆ ವಿಶೇಷ ಗ್ಯಾಲರಿ ಇದೆ. ಪ್ರತಿಯೊಂದು ಯುದ್ಧ ಸ್ಮಾರಕವೂ ಶಾಂತಿಪರವಾಗಿರಬೇಕು, ಯುದ್ಧವನ್ನು ವೈಭವೀಕರಿಸಬಾರದು ಎಂಬ ನೀತಿಯಂತೆ, ಮಕ್ಕಳು ಶಾಂತಿ ಬಗ್ಗೆ ಬಿಡಿಸಿದ ಚಿತ್ರಗಳ, ವಿಯೇಟ್ನಾಂ ಯುದ್ಧ-ವಿರೋಧಿ ಚಳುವಳಿಗಳ ವಿಶೇಷ ಗ್ಯಾಲರಿಗಳೂ ಇವೆ.

ಹೊ ಚಿ ಮಿನ್ ನಗರದಲ್ಲಿ ಕೊನೆ ದಿನ ಅಡ್ಡಾಡುತ್ತಿದ್ದಾಗ ಎರಡು ಟೀ ಶರ್ಟುಗಳು ನನ್ನ ಕಣ್ಣಿಗೆ ಬಿದ್ದವು.  ಒಂದು ಟೀ ಶರ್ಟ್ ಹೇಳುತ್ತಿತ್ತು - ಈ ಭೂಮಿಯ ಮೇಲೆ ಅಮೆರಿಕದ ಸೈನ್ಯ ಅಜೇಯವಾಗಿತ್ತು, ವಿಯೇಟ್ನಾಮ್ ಮಾತ್ರ ಅದನ್ನು ಸೋಲಿಸಿತ್ತು ಅಂತಾರೆ. ಇದು ಪೂರ್ಣ ನಿಜವಲ್ಲ. ಭೂಮಿಯ ಮೇಲೆ ಅಮೆರಿಕದ ಸೈನ್ಯ ಅಜೇಯವೇ ಆಗಿತ್ತು, ವಿಯೇಟ್ನಾಮ್ ಅಮೆರಿಕದ ಸೈನ್ಯವನ್ನು ಸೋಲಿಸಿದ್ದು ಭೂಮಿಯ ಕೆಳಗೆ - ಕೂ ಚಿ ಯಂತಹ ಭೂಗತ ನೆಲೆಗಳ ಮೂಲಕ. ಇನ್ನೊಂದು ಟೀ ಶರ್ಟು ಹೇಳುತ್ತಿತ್ತು - ಇದು ಸ್ವಾತಂತ್ರ್ಯಕ್ಕಾಗಿ 10 ಸಾವಿರ ದಿನ-ರಾತ್ರಿ ಮೂರು ಸಾಮ್ರಾಜ್ಯಶಾಹಿ ಶಕ್ತಿಗಳೊಂದಿಗೆ ಇಡೀ ದೇಶದಲ್ಲಿ ನಡೆದ ಸಶಶ್ತ್ರ ಹೋರಾಟ ಮಾಡಿ ಗೆದ್ದ ನಾಡು.

ಈ ಎರಡು ಟೀ ಶರ್ಟುಗಳು ಮತ್ತು ‘ಆನೆಗಳನ್ನು ಮಣಿಸಿದ ಮಿಡತೆಗಳು’ ಎಂಬ ರೂಪಕ ಒಂದು ವಾರದ ಭೇಟಿಯಲ್ಲಿ ನಾ ಕಂಡ ವಿಯೇಟ್ನಾಮಿನ ಸಾರವನ್ನು ಸಮರ್ಥವಾಗಿ ಹೇಳುತ್ತವೆ.

ವಸಂತರಾಜ ಎನ್.ಕೆ.