ಅನಾಣ್ಯೀಕರಣ ಮತ್ತು ನಗದು ರಹಿತ ಆರ್ಥಿಕತೆ

ಸಂಪುಟ: 
10
ಸಂಚಿಕೆ: 
52
date: 
Sunday, 18 December 2016

ಅನಾಣ್ಯೀಕರಣದಿಂದ ಉಂಟಾಗಿರುವ ಸಮಸ್ಯೆಗಳನ್ನು ಡಿಜಿಟೈಸೇಶನಿಂದ ಪರಿಹರಿಸಲು ಸಾಧ್ಯವಿಲ್ಲ. ಡಿಜಿಟೈಸೇಶನ್ ಅನ್ನುವುದು ದೀರ್ಘಾವಧಿ ಕ್ರಮ. ಅನಾಣ್ಯೀಕರಣದ ಸಮಸ್ಯೆ ತಕ್ಷಣದ್ದು. ಈ ಭಿನ್ನತೆಯನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನಗದು ರಹಿತ ಆರ್ಥಿಕತೆ ಅನ್ನುವುದು ಬೃಹತ್ ಸಾಮಾಜಿಕ ಬದಲಾವಣೆಯನ್ನು ಬಯಸುವ ಒಂದು ಸಂಗತಿ. ಅದನ್ನು ಒಂದು ದಿನದಲ್ಲಿ ಅಥವಾ ಒಂದು ತಿಂಗಳಲ್ಲಿ/ಒಂದು ವರ್ಷದಲ್ಲಿ ಸಾಧಿಸಿಕೊಳ್ಳುವುದು ಸಾಧ್ಯವಿಲ್ಲ. ಅದೊಂದು ಸಾವಕಾಶವಾಗಿ, ವಿಕಾಸಾತ್ಮಕವಾಗಿ ನಡೆಯುವ ಒಂದು ಪ್ರಕ್ರಿಯೆ.

ಕಳೆದ ತಿಂಗಳು ನವೆಂಬರ್ 8 (2016) ರಿಂದ ದೇಶದಲ್ಲಿ ಅನಾಣ್ಯೀಕರಣ ಕ್ರಮದ ಬಗ್ಗೆ, ಅದರಿಂದ ಉಂಟಾಗಿರುವ ಮಾರಾಟ-ಖರೀದಿ ಸಮಸ್ಯೆಗಳ ಬಗ್ಗೆ, ಇದರಿಂದ ಉಂಟಾದ ಜನರ ಸಂಕಷ್ಟದ ಬಗ್ಗೆ, ನಗದಿನ ಕೊರತೆಯ ಬಗ್ಗೆ, ಬ್ಯಾಂಕುಗಳ ಮುಂದೆ ತಮ್ಮ ಹಣಕ್ಕಾಗಿ, ತಮ್ಮಲ್ಲಿರುವ ಹಣವನ್ನು ಠೇವಣಿ ಇಡುವುದಕ್ಕಾಗಿ ಸರದಿ ನಿಂತಿರುವ ಜನರ ಬಗ್ಗೆ, ಹೀಗೆ ಸರದಿ ನಿಂತವರಲ್ಲಿ ಕೆಲವರು ಪ್ರಾಣ ಕಳೆದುಕೊಂಡಿದ್ದರ ಬಗ್ಗೆ ತೀವ್ರ ವಾದಗಳು, ಪ್ರತಿವಾದಗಳು, ಚರ್ಚೆಗಳು ನಡೆಯುತ್ತಿವೆ. ಈ ಚರ್ಚೆಯು ಸಂಸತ್ತಿನೊಳಗೆ, ಮಾಧ್ಯಮಗಳಲ್ಲಿ, ಬೀದಿ ಬೀದಿಗಳಲ್ಲಿ ನಡೆಯುತ್ತಿದೆ. ದೇಶದಲ್ಲಿ ಉಂಟಾಗಿರುವ ನಗದಿನ ಕೊರತೆಯ ಬಗ್ಗೆ ಮಾತನಾಡುತ್ತಾ ರಿಸರ್ವ ಬ್ಯಾಂಕಿನ ಗೌರ್ವನರ್ ಉರ್ಜಿತ್ ಪಟೇಲ್ ಅವರು ‘ಜನರು ಡಿಜಿಟೈಸ್ ಆಗಬೇಕು’ ಎಂದು ಕರೆ ನೀಡಿದ್ದಾರೆ. ಮಧ್ಯಯುಗದಲ್ಲಿ ಫ್ರಾನ್ಸ್ ದೇಶದ ಒಬ್ಬ ರಾಣಿಯು ಜನರು ಅನಾವೃಷ್ಟಿಯಿಂದ ರೊಟ್ಟಿಗಾಗಿ ಹಾಹಾಕಾರ ಪಡುತ್ತಿದ್ದಾರೆ ಅಂದಾಗ ‘ಜನರು ಕೇಕ್ ತಿನ್ನಲಿ’ ಎಂದು ಕರೆ ನೀಡಿದ್ದು ಇಲ್ಲಿ ಜ್ಞಾಪಕಕ್ಕೆ ಬರುತ್ತದೆ.

ನೀತಿ ಆಯೋಗವು ಡಿಜಿಟಲ್ ವ್ಯವಹಾರಗಳಿಗೆ ಉತ್ತೇಜಿಸುವ ಉದ್ದೇಶದಿಂದ ಲಾಟರಿ ಬಹುಮಾನವನ್ನು ಇಡುತ್ತಿದೆ. ಸರ್ಕಾರವು ಮಾಡಿದ ಅನಾಣ್ಯೀಕರಣವು ಕಪ್ಪುಹಣವನ್ನು ತಡೆಯುವುದಕ್ಕಾಗಿಯೋ ಅಥವಾ ನಗದು ರಹಿತ ಆರ್ಥಿಕತೆಯನ್ನು ರೂಪಿಸುವುದಕ್ಕಾಗಿಯೋ ಎಂಬುದು ತಿಳಿಯುತ್ತಿಲ್ಲ. ನಮ್ಮ ಅರ್ಥಮಂತ್ರಿಗಳು, ಆಳುವ ಪಕ್ಷದ ವಕ್ತಾರರು, ಆಯ್ದ ಆರ್ಥಶಾಸ್ತ್ರಜ್ಞರು, ಬ್ಯಾಂಕುಗಳ ಅಧಿಕಾರಿಗಳು -- ಹೀಗೆ ಅನೇಕರು ಇದು ಕೇವಲ ತಾತ್ಕಾಲಿಕ ತೊಂದರೆ ಮಾತ್ರ; ಮುಂದೆ ಭವಿಷ್ಯದಲ್ಲಿ ಇದರಿಂದ ಒಳ್ಳೆಯದಾಗುತ್ತದೆ ಎಂದು ಅನಾಣ್ಯೀಕರಣದ ಬಗ್ಗೆ ಸಮಜಾಯಿಷಿ ನೀಡುತ್ತಿದ್ದಾರೆ. ಇದು ನಿಜವಿರಲೂಬಹುದು. ಆದರೆ ತತ್ಕಾಲದಲ್ಲಿ ಅಂತಹ ಕ್ರಮದಿಂದ ಬಡವರು, ಗ್ರಾಮೀಣರು, ದುಡಿಮೆಗಾರರು ಮಾತ್ರ ಏಕೆ ಕಷ್ಟ ಪಡಬೇಕು? ಅನಾಣ್ಯೀಕರಣದಿಂದ ಮಧ್ಯಮ ವರ್ಗಕ್ಕಾಗಲಿ, ಉಳ್ಳವರಿಗಾಗಲಿ, ಉದ್ದಿಮೆ ದಾರರಿಗಾಗಲಿ ತೊಂದರೆಯಾಗಿಲ್ಲ. ಇದು ಒಂದು ರೀತಿಯಲ್ಲಿ ಉದ್ದೇಶಪೂರ್ವಕವಾಗಿ ಅಸಮಾನತೆಯನ್ನು ಸೃಷ್ಟಿದಂತಾಗಲಿಲ್ಲವೇ? ಇದನ್ನು ತಡೆಯು ವುದಕ್ಕಾಗುತ್ತಿರಲಿಲ್ಲವೇ?

‘ನಗದು ರಹಿತ ಆರ್ಥಿಕತೆ’ಯ ವ್ಯಸನ

‘ನಗದು ರಹಿತ ಆರ್ಥಿಕತೆ’ ಅನ್ನುವುದನ್ನು ಇಂದು ಆಳುವ ವರ್ಗವು ವ್ಯಸನದಂತೆ ಹಚ್ಚಿಕೊಂಡಿದೆ. ಅಲ್ಲಿ ಇಲ್ಲಿ ಬಡವರು, ತರಕಾರಿ ಮಾರುವವರು, ಕೂಲಿಕಾರರು ಎಟಿಎಮ್/ಡೆಬಿಟ್ ಕಾರ್ಡ್‍ಗಳನ್ನು ಬಳಸುತ್ತಿರುವ ಉದಾಹರಣೆಗಳನ್ನು ತೆಗೆದುಕೊಂಡು ದೇಶ ಹೇಗೆ ಡಿಜಿಟೈಸ್ ಆಗುತ್ತಿದೆ, ಜನರು ಹೇಗೆ ನಮ್ಮ ಕ್ರಮವನ್ನು ಸ್ವಾಗತಿಸುತ್ತಿದ್ದಾರೆ, ದೇಶದಲ್ಲಿ ಸೂರ್ಯ ಹೇಗೆ ಹೊಳೆಯುತ್ತಿದ್ದಾನೆ ಎಂದು ಮಂತ್ರಿ-ಮಹೋದಯರು ತಮ್ಮ ಅನಾಣ್ಯೀಕರಣ ಕ್ರಮವನ್ನು ಕೊಂಡಾಡಿ ಕೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ಅನಾಣ್ಯೀಕರಣದ ಉದ್ದೇಶ ಕಪ್ಪುಹಣವನ್ನು ಮಟ್ಟ ಹಾಕುವುದಾಗಿತ್ತೊ ಅಥವಾ ದೇಶವನ್ನು ಡಿಜಿಟೈಸ್ ಮಾಡುವುದಾಗಿತ್ತೋ ಎಂಬ ಪ್ರಶ್ನೆ ನಮ್ಮ ಮುಂದೆ ಬಂದು ನಿಲ್ಲುತ್ತದೆ. ನಗದು ರಹಿತ ಆರ್ಥಿಕತೆ ಅನ್ನುವ ಉದ್ದೇಶವು ಅನಾಣ್ಯೀಕರಣದ ನಂತರ ಸರ್ಕಾರಕ್ಕೆ ಹೊಳೆದ ಜ್ಞಾನೋದಯದಂತೆ ಕಾಣುತ್ತದೆ.

ನಗದು ರಹಿತ ಆರ್ಥಿಕತೆ ಅನ್ನುವುದು ಬೃಹತ್ ಸಾಮಾಜಿಕ ಬದಲಾವಣೆಯನ್ನು ಬಯಸುವ ಒಂದು ಸಂಗತಿ. ಅದನ್ನು ಒಂದು ದಿನದಲ್ಲಿ ಅಥವಾ ಒಂದು ತಿಂಗಳಲ್ಲಿ/ಒಂದು ವರ್ಷದಲ್ಲಿ ಸಾಧಿಸಿಕೊಳ್ಳುವುದು ಸಾಧ್ಯವಿಲ್ಲ. ಅದೊಂದು ಸಾವಕಾಶವಾಗಿ, ವಿಕಾಸಾತ್ಮಕವಾಗಿ ನಡೆಯುವ ಒಂದು ಪ್ರಕ್ರಿಯೆ. ನಮ್ಮದು ನೂರು ಕೋಟಿ ಜನಸಂಖ್ಯೆಯನ್ನು ಮೀರಿದ  ಮತ್ತು ಜಗತ್ತಿನಲ್ಲಿ ಬೃಹತ್ ಮಾರುಕಟ್ಟೆಯನ್ನು ಹೊಂದಿರುವ ಆರ್ಥಿಕತೆ. ಒಟ್ಟು ಜನಸಂಖ್ಯೆಯಲ್ಲಿ ಅರ್ಧದಷ್ಟು ಜನರು ಅನಕ್ಷರಸ್ಥರು (ಇಂಗ್ಲೀಷ್), ಗ್ರಾಮೀಣವಾಸಿಗಳು, ದಿನಗೂಲಿ ದುಡಿಮೆಗಾರರು. ಸರಿಸುಮಾರು 50-60 ಕೋಟಿ ಜನರು ಒಂದು ದಿನದಲ್ಲಿ ಅಥವಾ ಒಂದು ತಿಂಗಳಲ್ಲಿ ಅಥವಾ 50 ದಿನಗಳಲ್ಲಿ ನಗದು ರಹಿತ ಆರ್ಥಿಕತೆಗೆ ಪರಿವರ್ತಿತವಾಗುವುದು ಸಾಧ್ಯವಿಲ್ಲ.

ಅಥವಾ ಇದನ್ನು ಮತ್ತೊಂದು ರೀತಿಯಲ್ಲಿ ಹೀಗೆ ಹೇಳಬಹುದು. ಜನರೆಲ್ಲರೂ ನಗದು ರಹಿತ ಆರ್ಥಿಕತೆಗೆ ಏಕೆ ಪಕ್ಕಾಗಬೇಕು? ಈ ಕ್ರಮದ ಮೂಲಕ (ಸರ್ಕಾರವು ಜಾರಿಗೊಳಿಸುತ್ತಿರುವ ಸ್ಮಾರ್ಟ್ ಸಿಟಿ ಯೋಜನೆಯನ್ನು ಇಲ್ಲಿ ನೆನಪಿಸಿಕೊಳ್ಳಬಹುದು) ಸರ್ಕಾರವು ಯಾರ, ಯಾವ ವರ್ಗದ ಹಿತಾಸಕ್ತಿಗಳನ್ನು ಕಾಯುವುದಕ್ಕೆ ಪ್ರಯತ್ನಿಸುತ್ತಿದೆ? ನಮ್ಮ ದೇಶದಲ್ಲಿ ಅರ್ಧಕ್ಕಿಂತ ಹೆಚ್ಚು ಆರ್ಥಿಕ ಚಟುವಟಿಕೆಗಳು ಅಸಂಘಟಿತ ವಲಯದಲ್ಲಿ ನಡೆಯುತ್ತವೆ. ಸರಿಸುಮಾರು 60 ರಿಂದ 70 ಕೋಟಿ ಜನರು ಈ ಅಸಂಘಟಿತ ವಲಯವನ್ನೇ ಅವಲಂಬಿಸಿಕೊಂಡಿದ್ದಾರೆ. ಇಲ್ಲಿ ಬಂಡವಾಳ ಅನ್ನುವುದು ಹೆಸರಿಗೆ ಮಾತ್ರ ಅನ್ನುವಂತಿದೆ. ಬೆಳಿಗ್ಗೆ ಎದ್ದು ನೂರು ರೂಪಾಯಿ ಸಾಲ ಪಡೆದುಕೊಂಡು ಸಗಟು ಮಾರುಕಟ್ಟೆಯಲ್ಲಿ ಮಾಲು ಖರೀದಿಸಿ ತಳ್ಳುವ ಗಾಡಿಯಲ್ಲಿ ವ್ಯಾಪಾರ ಮಾಡುತ್ತಾ ಸಂಜೆಯ ವೇಳೆಗೆ ನಾಲ್ಕು ಕಾಸು ದುಡಿದು ಅದರಲ್ಲಿ ಬೆಳಿಗ್ಗೆ ತಂದ ಸಾಲ, ಅದರ ಬಡ್ಡಿ ಹಿಂತಿರುಗಿಸಿ ಉಳಿದದ್ದನ್ನು ಮನೆಗೆ ಕೊಂಡೊಯ್ಯವ ಕೋಟ್ಯಾಂತರ ದುಡಿಮೆಗಾರರು ನಮ್ಮಲ್ಲಿ ಇದ್ದಾರೆ. ನಗದು ರಹಿತ ಆರ್ಥಿಕತೆ ಯಾರಿಗಾಗಿ ಎಂಬ ಪ್ರಶ್ನೆ ದುತ್ತನೆ ನಮ್ಮೆದುರು ನಿಲ್ಲುತ್ತದೆ. ಬೂಟು ಪಾಲಿಶ್ ಮಾಡುವವರೂ, ಪರಕೆ, ಮಣಿಸರ ಮಾರುವವರು ಡಿಜಿಟೈಸ್  ಆಗುವುದು ಸಾಧ್ಯವೇ? ಅವರೂ ಡಿಜಿಟೈಸ್ ಆಗಬೇಕೆ? ಅವರ ದಿನದ ದುಡಿಮೆಯು ನೂರು-ನೂರೈವತ್ತು ಮೀರುವುದಿಲ್ಲ. ಅದು ಅವರ ಆ ದಿನದ ಖರ್ಚಿಗೆ ಸರಿ ಹೋಗುತ್ತದೆ. ಬ್ಯಾಂಕು ಖಾತೆಗೆ ಜಮೆ ಮಾಡಲು ಅವರಲ್ಲಿ ಉಳಿಯುತ್ತದೆ ಏನು?  

ಹಕ್ಕಿನಿಂದ ಹಂಗಿಗೆ ಪರಿವರ್ತನೆ

ಕಷ್ಟಪಟ್ಟು, ಬೆವರು ಹರಿಸಿ, ಪ್ರ್ರಾಮಾಣೀಕತೆಯಿಂದ ದುಡಿದು ಸಂಪಾದಿಸಿದ್ದ ತಮ್ಮ ಹಣಕ್ಕಾಗಿ ಬ್ಯಾಂಕುಗಳ ಮುಂದೆ ಜನರು ಹಣಕ್ಕಾಗಿ ಅಂಗಲಾಚಬೇಕಾದ ಪರಿಸ್ಥಿತಿಯು ಬಂದಿದೆ. ಅನಾಣ್ಯೀಕರಣವು ಜನರ ಹಕ್ಕುಗಳನ್ನು ಹಂಗಿನ ಸಂಗತಿಯನ್ನಾಗಿ ಪರಿವರ್ತಿಸುತ್ತಿರುವಂತೆ ಕಾಣುತ್ತದೆ. ಹಣ ಅನ್ನುವುದು ಕೇವಲ ಸರ್ಕಾರದ ಭರವಸೆಯ ಮೇಲೆ ನಿಂತಿರುವ ಒಂದು ವ್ಯವಸ್ಥೆ. ಅದರ ಮೇಲಿನ ವಿಶ್ವಾಸಕ್ಕೆ ಇಂದು ದಕ್ಕೆ ಬಂದಿದೆ. ಇದಕ್ಕಿಂತ ಹೆಚ್ಚಾಗಿ ಜನರು ಹಕ್ಕಿನಿಂದ ಪಡೆಯಬೇಕಾದ ತಮ್ಮ ಹಣವನ್ನು ಬ್ಯಾಂಕುಗಳ ಮುಂದೆ ಸರದಿ ಸಾಲು ನಿಂತುಕೊಂಡು ಅಲ್ಲಿ ದೊರೆತಷ್ಟು ನಗದನ್ನು ಪಡೆದುಕೊಳ್ಳುವ ಹಂಗಿನ ಸ್ಥಿತಿಯು ನಿರ್ಮಾಣವಾಗಿದೆ. ಎಟಿಎಮ್‍ಗಳಲ್ಲಿ ಜನರು ಕಣ್ಣು ಬಿಟ್ಟು ತೆರೆಯುವಷ್ಟರಲ್ಲಿ ನಗದು ಖಾಲಿಯಾಗುತ್ತಿದೆ.  ಬ್ಯಾಂಕುಗಳಲ್ಲಿ ಅವರು ಕೊಟ್ಟಷ್ಟು ಹಣ ಪಡೆದುಕೊಳ್ಳಬೇಕು. ಜೋಬಿನಲ್ಲಿರುವ ಎರಡು ಸಾವಿರ ರೂಪಾಯಿಯ ನೋಟನ್ನು ಸ್ವೀಕರಿಸಿ ನಮಗೆ ಚಿಲ್ಲರೆ ನೀಡಲು ವ್ಯಾಪಾರಿಗಳು, ಅಂಗಡಿ ಮಾಲೀಕರು ಸಿದ್ಧವಿಲ್ಲ. ಅವರ ವ್ಯಾಪಾರವು ಅರ್ಧದಷ್ಟು ಬಿದ್ದು ಹೋಗಿದೆ. ದುಡ್ಡಿರುವವರು ದುಡ್ಡಿಲ್ಲದವರಾಗಿದ್ದಾರೆ. 

ಗ್ರಾಮೀಣವಾಸಿಗಳ ಪಡಿಪಾಟಲು

ಅನಾಣ್ಯೀಕರಣದ ಬಗೆಗಿನ ಪತ್ರಿಕಾ ವರದಿಗಳು ಹೇಳುವಂತೆ ಇದರಿಂದ ಹೆಚ್ಚು ಹಾನಿಗೆ ಒಳಗಾಗಿರುವವರೆಂದರೆ ಗ್ರಾಮೀಣವಾಸಿಗಳು. ಅನಾವೃಷ್ಟಿಯಿಂದ ಕೃಷಿಯು ಈಗಾಗಲೆ ನೆಲಕಚ್ಚಿದೆ. ಅನಾಣ್ಯೀಕರಣವು ಅದರ ಮೇಲೆ ಗದಾ ಪ್ರಹಾರನ್ನೇ ಮಾಡಿದೆ. ಇಲ್ಲಿನ ಭೂರಹಿತ ಕೂಲಿಕಾರರ ಬಾಳು ಮೂರಾಬಟ್ಟೆಯಾಗಿದೆ. ಹಣ ಪಡೆಯುವುದಕ್ಕಾಗಿ ಕೂಲಿಕಾರರು ವಾರಕ್ಕೆ ಒಂದು ದಿನ, ಎರಡು ದಿನ ಕೂಲಿಯನ್ನು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ರಾಜ್ಯದಲ್ಲಿ ಸುಮಾರು 30 ಸಾವಿರ ಹಳ್ಳಿಗಳಿವೆ. ಈ ಹಳ್ಳಿಗಳಲ್ಲಿ ಎಷ್ಟು ಎಟಿಎಮ್‍ಗಳಿವೆ, ಎಷ್ಟು ಬ್ಯಾಂಕು ಶಾಖೆÉಗಳಿವೆ? ಇಲ್ಲಿರುವ ಕೂಲಿಕಾರರಿಗೆ ಯಾರು ಮೊಬೈಲಿನಲ್ಲಿ ವ್ಯವಹಾರ ಮಾಡಲು ಇಂಗ್ಲೀಷ್ ಭಾಷೆಯನ್ನು ಹೇಳಿಕೊಡುತ್ತಾರೆ-ಕಲಿಸಿ ಕೊಡುತ್ತಾರೆ? ಇಂದಿಗೂ ಬ್ಯಾಂಕಿಗೆ ಹೋದರೆ ಅನೇಕರು ಹಣ ವಾಪಸ್ಸು ಪಡೆಯುವ ಫಾರಮನ್ನು ತುಂಬಿ ಕೊಡುವಂತೆ ದಂಬಾಲು ಬೀಳುತ್ತಾರೆ. ಅದಕ್ಕಾಗಿ ಅವರು ಗಂಟೆಗಟ್ಟಲೆ ಕಾಯಬೇಕಾಗುತ್ತದೆ. ಡಿಜಿಟೈಸೇಶನ್ ಅನ್ನುವುದು ಭಾಷೆಯ ಪ್ರಶ್ನೆಯೂ ಆಗಿದೆ. ಬ್ಯಾಂಕಿನ, ಎಟಿಎಮ್‍ನ, ಡಿಜಿಟೈಸ್ ವ್ಯವಹಾರದ ದಾಖಲೆಗಳನ್ನು ಭದ್ರವಾಗಿಟ್ಟುಕೊಳ್ಳುವುದು ವಸತಿರಹಿತರಿಗೆ ಸಾಧ್ಯವೇ? ಇವೆಲ್ಲ ಉರ್ಜಿತ್ ಪಟೇಲ್ ಅವರಿಗಾಗಲಿ ಅಥವಾ ಅರವಿಂದ ಪಾಣಿಗಾರಿಯ ಅವರಿಗಾಗಲಿ ಅರ್ಥವಾಗುವುದು ಸಾಧ್ಯವಿಲ್ಲ. ಇವರೆಲ್ಲ ಅನಾಣ್ಯೀಕರಣವನ್ನು ನಿರ್ವಹಿಸುತ್ತಿರುವ ರೀತಿಯನ್ನು ನೋಡಿದರೆ ಅವರಿಗೆ ಭಾಷೆಯು ಒಂದು ಪ್ರಶ್ನೆಯೇ ಅಲ್ಲ. ಮಾತೆತ್ತಿದರೆ ಸಹಕಾರೀ ಒಕ್ಕೂಟದ ಬಗ್ಗೆ ಸರ್ಕಾರವು ಮಾತನಾಡುತ್ತದೆ. ಆದರೆ ಅದು ಭಾಷೆಗೆ ಸಂಬಂಧಿಸಿದಂತೆ ಕೇಂದ್ರೀಕೃತ ನೀತಿಯನ್ನು ಅನುಸರಿಸುತ್ತಿರುವಂತೆ ಕಾಣುತ್ತಿದೆ. ದೇಶ ಭಾಷೆಗಳಿಗೆ ಇಂದು ಬಂದಿರುವಷ್ಟು ಅಪಾಯ ಮತ್ತಾವಾಗಲೂ ಬಂದಿರಲಿಲ್ಲವೆಂದು ಕಾಣುತ್ತದೆ.

ನಗದು ರಹಿತ ಆರ್ಥಿಕತೆಗೆ ದೇಶವನ್ನು ಪರಿವರ್ತಿಸುವ ಕ್ರಮವು ದಿಡೀರನೆ ನಡೆಯುವುದು ಸಾಧ್ಯವಿಲ್ಲ. ಅದಕ್ಕೆ ಸಾಕಷ್ಟು ಸಮಯ ಬೇಕು. ಅದಕ್ಕೆ ಸಾಕಷ್ಟು ಸಿದ್ದತೆ ಬೇಕಾಗುತ್ತದೆ. ಇದಾವುದೂ ಇಲ್ಲದೆ ದಿಢೀರನೆ ಜನರು ಡಿಜಿಟೈಸಾಗಬೇಕು ಅಂದರೆ ಅದು ಸಾಧ್ಯವಾಗುವುದಿಲ್ಲ.  ಉರ್ಜಿತ್ ಪಟೇಲ್ ಅವರಿಗೆ ಅನಾಣ್ಯೀಕರಣದಿಂದ, ತಮ್ಮ ಸಂಸ್ಥೆಯ ಬಹುಮುಖಿ ವೈಫಲ್ಯದಿಂದ ಉಂಟಾದ ಸಮಸ್ಯೆಗಳ ನಂತರ ಜನರು ಡಿಸಿಟೈಸಾಗಬೇಕು ಎಂಬ ಮಂತ್ರ ಹೊಳೆದಿರಲು ಸಾಕು!

ಅನಾಣ್ಯೀಕರಣದ ಸಮಸ್ಯೆಗಳಿಗೆ ಡಿಜಿಟೈಸೇಶನ್ ಪರಿಹಾರ ಅಲ್ಲ

ಅನಾಣ್ಯೀಕರಣದಿಂದ ಉಂಟಾಗಿರುವ ಸಮಸ್ಯೆಗಳನ್ನು ಡಿಜಿಟೈಸೇಶನಿಂದ ಪರಿಹರಿಸಲು ಸಾಧ್ಯವಿಲ್ಲ. ಡಿಜಿಟೈಸೇಶನ್ ಅನ್ನುವುದು ದೀರ್ಘಾವಧಿ ಕ್ರಮ. ಅನಾಣ್ಯೀಕರಣದ ಸಮಸ್ಯೆ ತಕ್ಷಣದ್ದು. ಈ ಭಿನ್ನತೆಯನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಆರ್ಥಿಕತೆಯು ನಗದು ರಹಿತವಾಗಬೇಕು. ಜನರು ಡಿಜಿಟೈಸಾಗಬೇಕು. ಇವೆಲ್ಲ ಸರಿ.  ಆದರೆ ಅದಕ್ಕೆ ಸಮಯ ಬೇಕು. ಅನಾಣ್ಯೀಕರಣದಿಂದ ಉಂಟಾಗಬಹುದಾದ ಸಮಸ್ಯೆಗಳನ್ನು ಸರ್ಕಾರ, ರಿಸರ್ವ ಬ್ಯಾಂಕು, ಆಡಳಿತ ವ್ಯವಸ್ಥೆ ಊಹಿಸಿರಲಿಲ್ಲ ಎಂಬುದು ಅವು ಇಂದು ತೆಗೆದುಕೊಳ್ಳುತ್ತಿರುವ ಕ್ರಮಗಳಿಂದ ಮನದಟ್ಟಾಗುತ್ತದೆ. ಸರ್ಕಾರವು ಕಪ್ಪು ಹಣದ ಬಗ್ಗೆ, ನಕಲಿ ನೋಟುಗಳ ಹಾವಳಿ ಬಗ್ಗೆ ಮಾತನಾಡುವುದಕ್ಕಿಂತ ಇಂದು ಹೆಚ್ಚಾಗಿ ಡಿಜಿಟೈಸೇಶನ್ ಬಗ್ಗೆ, ನಗದು ರಹಿತ ವ್ಯವಹಾರದ ಬಗ್ಗೆ, ಎಟಿಎಮ್, ಡೆಬಿಟ್‍ಕಾರ್ಡ್‍ಗಳ, ಮೊಬೈಲ್ ಬ್ಯಾಂಕಿಂಕ್ ಬಳಕೆ ಬಗ್ಗೆ ಮಾತನಾಡುತ್ತಿದೆ. ಅನಾಣ್ಯೀಕರಣದ ವೈಫಲ್ಯಕ್ಕೆ ಇದಕ್ಕಿಂತ ಬೇರೆ ನಿದರ್ಶನ ಬೇಕೆ? ಅನಾಣ್ಯೀಕರಣ ಮತ್ತು ಅದರ ಉದ್ದೇಶ ಬೇರೆ ಹಾಗೂ ನಗದು ರಹಿತ ಆರ್ಥಿಕತೆ ಮತ್ತು ಅದರ ಉದ್ದೇಶ ಬೇರೆ. ಅವೆರಡನ್ನು ಒಂದು ಮಾಡಿ ನೋಡುವ ಸರ್ಕಾರದ ಕ್ರಮವೇ ತಪ್ಪು. ನಗದು ರಹಿತ ಆರ್ಥಿಕತೆಗೆ ಜನರು ಸಿದ್ಧವಾಗಿಲ್ಲ ಅನ್ನುವುದು ಒಂದು. ಮತ್ತೊಂದು ಅದಕ್ಕೆ ಅಗತ್ಯವಾದ ತಂತ್ರಜ್ಞಾನ ಮತ್ತು ಯಂತ್ರಗಳು ಲಭ್ಯವಿಲ್ಲ. ಅದನ್ನು ಈಗ ತಂತ್ರಜ್ಞರು ಯೋಚಿಸುತ್ತಿದ್ದಾರೆ.

ವರಮಾನ ತೆರಿಗೆ ಇಲಾಖೆ ಮತ್ತು ಎನ್‍ಪೋರ್ಸ್‍ಮೆಂಟ್ ಡೈರೆಕ್ಟೊರೇಟ್ ಮುಂತಾದವು ನಡೆಸುತ್ತಿರುವ ಧಾಳಿಯಲ್ಲಿ ದೊರೆಯುತ್ತಿರುವ ಕೋಟ್ಯಾಂತರ ರೂಪಾಯಿ ಹೊಸ ನೋಟುಗಳನ್ನು ನೋಡಿದರೆ ಕಪ್ಪು ಆರ್ಥಿಕತೆ ಅನ್ನುವುದು ಹಳೆ ನೋಟುಗಳಿಂದ ಹೊಸ ನೊಟುಗಳಿಗೆ ಬದಲಾಗಿರುವುದು ಸ್ಪಷ್ಟವಾಗುತ್ತದೆ. ಕಪ್ಪುಹಣ ಮರೆಯಾಗಿಲ್ಲ. ಅದು ಇಂದು ಪಿಂಕ್ ಬಣ್ಣಕ್ಕೆ ತಿರುಗಿದೆ. ಕೋಟ್ಯಾಂತರ ರೂಪಾಯಿ ಮೌಲ್ಯದ ಹೊಸ ನೋಟುಗಳನ್ನು ಕೂಡಿಡುವುದು ಸಾಧ್ಯವಾಗಿದೆ ಅನ್ನುವುದು ಅನಾಣ್ಯೀಕರಣದ ವೈಫಲ್ಯಕ್ಕೆ ಅಥವಾ ಅದನ್ನು ಅನುಷ್ಟಾನಕ್ಕೆ ತೆಗೆದುಕೊಂಡ ಕ್ರಮಗಳ ಲೋಪಕ್ಕೆ ನಿದರ್ಶನವಾಗಿದೆ. ಅನಾಣ್ಯೀಕರಣ ಕ್ರಮವನ್ನು ದೇಶದಲ್ಲಿ ಯಾರೊಬ್ಬರೂ ವಿರೋಧಿಸಿಲ್ಲ. ಆದರೆ ಅದರ ಅನುಷ್ಟಾನದ ಬಗೆಗಿನ ಸರ್ಕಾರದ, ಆಡಳಿತ ಯಂತ್ರದ ಸಿದ್ಧತೆಯಲ್ಲಿನ ಲೋಪವನ್ನು ಟೀಕಿಸಲಾಗುತ್ತಿದೆ. ವಿರೋಧಿಸುವುದು ಬೇರೆ: ಟೀಕೆ ಮಾಡುವುದು ಬೇರೆ ಅನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಟೀಕೆಯನ್ನು ವಿರೋಧ ಎಂದು ತಿಳಿಯುವುದು ರಾಜಕೀಯ ಪ್ರೌಡಿಮೆಯಲ್ಲಿನ ಕೊರತೆಯನ್ನು ತೋರಿಸುತ್ತದೆ.

ಪಾಪ್ಯುಲೇಶನ್ ಡಿವಿಡೆಂಡ್ ನಿಂದ ಡಿಸಾಸ್ಟರ್ ಕಡೆಗೆ

ನಗದು ರಹಿತ ಆರ್ಥಿಕತೆಯು ಉಂಟು ಮಾಡಬಹುದಾದ ನಿರುದ್ಯೋಗದ ಬಗ್ಗೆಯೂ ನಾವು ಯೋಚಿಸಬೇಕು. ನಮ್ಮ ದೇಶದಲ್ಲಿ ಲಕ್ಷಾಂತರ ಜನರ ಬದುಕನ್ನು ಅದು ಕಿತ್ತುಕೊಳ್ಳುವ ಸಾಧ್ಯತೆಯಿದೆ. ಪಾಪ್ಯುಲೇಶನ್ ಡಿವಿಡೆಂಡ್ ಬಗ್ಗೆ ಇಂದು ನಾವು ಮಾತನಾಡುತ್ತಿದ್ದೇವೆ. ನಮ್ಮ ಜನಸಂಖ್ಯೆಯಲ್ಲಿ 15 ರಿಂದ 59 ವರ್ಷ ವಯೋಮಾನದ ದುಡಿಯುವ ವರ್ಗದ ಪ್ರಮಾಣ ಶೇ 65. ಈ ವರ್ಗಕ್ಕೆ ಉದ್ಯೋಗಗಳನ್ನು ನೀಡದಿದ್ದರೆ ಪಾಪ್ಯುಲೇಶನ್ ಡಿವಿಡೆಂಡ್ ಡಿಸಾಸ್ಟರ್ ಆಗಬಹುದು. ನಗದು ರಹಿತ ಆರ್ಥಿಕತೆ ಅನ್ನುವುದು ಡಿವಿಡೆಂಡನ್ನು ಡಿಸಾಸ್ಟರ್ ಮಾಡುವ ಬಗ್ಗೆ ತಜ್ಞರು ಮಾತನಾಡುತ್ತಿದ್ದಾರೆ. ನಗದು ರಹಿತ ಆರ್ಥಿಕತೆಯು ದೀರ್ಘಾವಧಿಯಲ್ಲಿ ಉಂಟು ಮಾಡಬಹುದಾದ ಅನಾಹುತಗಳ ಬಗ್ಗೆ ಅನಾಣ್ಯೀಕರಣವನ್ನು ಹೊಗಳುವ ಜನರು ಊಹಿಸಿದಂತೆ ಕಾಣುತ್ತಿಲ್ಲ.

ಒಟ್ಟಾರೆ ಇಲ್ಲದ ಸಮಸ್ಯೆಯನ್ನು ನಾವಾಗೆ ಎದುರಾಕಿಕೊಂಡಿರುವುದು ಸ್ಪಷ್ಟ. ಅನಾಣ್ಯೀಕರಣದಿಂದ ಉಂಟಾದ ಸಮಸ್ಯೆಗಳಿಂದ ಮಹತ್ವಾಕಾಂಕ್ಷೆಯ ಜಿಎಸ್‍ಟಿ(ಗೂಡ್ಸ್ ಆಂಡ್ ಸರ್ವಿಸ್ ಟ್ಯಾಕ್ಸ್) ವ್ಯವಸ್ಥೆಯು ಜಾರಿಗೆ ಬರುವುದು ಕಷ್ಟವಾಗುತ್ತ್ತದೆ. ಇಂದು ರಾಜ್ಯಗಳು ಎರಡು ಬಗೆಯ ಕಷ್ಟಗಳನ್ನು ಎದುರಿಸಬೇಕಾಗಿದೆ. ಮೊದಲನೆಯದಾಗಿ ಅನಾಣ್ಯೀಕರಣದಿಂದ ಅವುಗಳ ಎಸ್‍ಡಿಪಿಯು(ರಾಜ್ಯ ವರಮಾನ) ಕುಸಿಯಬಹುದು. ಅದರ ನಷ್ಟವನ್ನು ಕಟ್ಟಿಕೊಡುವವರು ಯಾರು? ಜಿಎಸ್‍ಟಿ ಮತ್ತು ಅನಾಣ್ಯೀಕರಣಗಳಿಂದ ರಾಜ್ಯಗಳಲ್ಲಿ ಉಂಟಾಗಬಹುದಾದ ವರಮಾನದ ಕುಸಿತ ಮತ್ತು ಅನಾಣ್ಯೀಕರಣದಿಂದ ಉಂಟಾಗಬಹುದಾದ ತೆರಿಗೆ ಸಂಗ್ರಹದಲ್ಲಿನ ಕುಸಿತ -  ಎರಡನ್ನು ನಿರ್ವಹಿಸುವುದರ ಬಗ್ಗೆ ನಾವು ಚಿಂತಿಸುವ ಅಗತ್ಯವಿದೆ. ಅನಾಣ್ಯೀಕರಣದಿಣದ ಸ್ವರ್ಗವೇ ಇಲ್ಲಿಗೆ ಬಂದು ಬೀಳುತ್ತದೆ ಎಂಬ ಭ್ರಮೆಯನ್ನು ಉಂಟು ಮಾಡಲಾಗಿದೆ. ವಾಸ್ತವವಾಗಿ ಅದರಿಂದ ಇಲ್ಲಿ ನರಕ ಸೃಷ್ಟಿಯಾಗಿದೆ.

ಅನಾಣ್ಯೀಕರಣ ಜಾರಿಗೆ ಬಂದು ಇಂದಿಗೆ (13.12.2016) 34 ದಿನಗಳಾಗಿವೆ. ಅದಕ್ಕೆ 50 ದಿನಗಳಾವುದು ದೂರವಿಲ್ಲ(29.12.2016). ಆದರೆ ಸಮಸ್ಯೆಯ ತೀವ್ರತೆಯು ಕಡಿಮೆಯಾಗುವ ಸೂಚನೆಗಳು ಕಾಣುತ್ತಿಲ್ಲ.  ನಾಟಕೀಯತೆ, ರೆಟರಿಕ್, ಉನ್ಮಾದ, ಉದ್ವೇಗ ಇವೆಲ್ಲ ಬದುಕಿನಲ್ಲಿ ಚಂದ. ಆದರೆ ರಾಜಕಾರಣದಲ್ಲಿ ಅವು ಅಪಾಯಕರವಾಗುವ ಸಾಧ್ಯತೆಯ ಬಗ್ಗೆ ನಾವು ಜಾಗೃತರಾಗಿರಬೇಕು.